ಪದ್ಯ ೩೯: ದ್ರೋಣನು ಹೇಗೆ ಮಹಾಧನಪತಿಯಾದನು?

ಕಂಡು ಬೆರಗಾದುದು ಕುಮಾರರ
ತಂಡ ತನತನಗೈದಿ ಭೀಷ್ಮನ
ಕಂಡಲೆದುರ್ದೀ ಮುನಿಯನೀಗಲೆ ಸಂತವಿಡಿಯೆಂದು
ಚಂಡ ಭುಜಬಲನವರ ಕಾಣಿಸಿ
ಕೊಂಡು ಕೊಟ್ಟನು ಭೀಷ್ಮನವರಿಗ
ಖಂಡ ವಿಭವವನತುಳ ಧನಪತಿಯಾದನಾ ದ್ರೋಣ (ಆದಿ ಪರ್ವ, ೬ ಸಂಧಿ, ೩೯ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ಈ ಚಾತುರ್ಯವನ್ನು ಕಂಡು ಬೆರಗಾದ ಕೌರವ ಪಾಂಡವರು ಭೀಶ್ಮನ ಬಳಿಗೆ ಬಂದು ದ್ರೋಣನನ್ನು ಸ್ವಾಗತಿಸಿ, ಅವನನ್ನು ಇಲ್ಲೇ ಇರುವಂತೆ ಮಾಡಿರೆಂದು ಬಹಳವಾಗಿ ಬೇಡಿಕೊಂಡರು. ಭೀಷ್ಮನು ದ್ರೋಣನನ್ನು ಕಂಡು ಅವನಿಗೆ ಅಪಾರವಾದ ಹಣವನ್ನೂ, ಸ್ಥಾನವನ್ನೂ ಕೊಟ್ಟನು. ದ್ರೋಣನು ಮಹಾಧನಪತಿಯಾದನು.

ಅರ್ಥ:
ಕಂಡು: ನೋಡು; ಬೆರಗು: ಆಶ್ಚರ್ಯ; ಕುಮಾರ: ಪುತ್ರ; ತಂಡ: ಗುಂಪು; ಐದು: ಬಂದು ಸೇರು; ಮುನಿ: ಋಷಿ; ಸಂತವಿಡು: ಸಮಾಧಾನಮಾಡು; ಚಂಡ: ಶೂರ, ಪರಾಕ್ರಮಿ; ಭುಜಬಲ: ಶೂರ; ಕಾಣಿಸು: ಭೇಟಿಯಾಗು; ಕೊಡು: ನೀಡು; ಅಖಂಡ: ಎಲ್ಲಾ; ವಿಭವ: ಸಿರಿ, ಸಂಪತ್ತು; ಅತುಳ: ಬಹಳ; ಧನಪತಿ: ಸಿರಿವಂತ;

ಪದವಿಂಗಡಣೆ:
ಕಂಡು +ಬೆರಗಾದುದು +ಕುಮಾರರ
ತಂಡ +ತನತನಗ್+ಐದಿ +ಭೀಷ್ಮನ
ಕಂಡಲೆದುರ್ದ್+ಈ+ ಮುನಿಯನ್+ಈಗಲೆ +ಸಂತವಿಡಿಯೆಂದು
ಚಂಡ +ಭುಜಬಲನ್+ಅವರ +ಕಾಣಿಸಿ
ಕೊಂಡು +ಕೊಟ್ಟನು+ ಭೀಷ್ಮನವರಿಗ್
ಅಖಂಡ +ವಿಭವವನ್+ಅತುಳ +ಧನಪತಿಯಾದನಾ +ದ್ರೋಣ

ಅಚ್ಚರಿ:
(೧) ತಂಡ, ಕಂಡ, ಚಂಡ, ಅಖಂಡ; ಕಂಡು, ಕೊಂಡು – ಪ್ರಾಸ ಪದಗಳು
(೨) ಭೀಷ್ಮನನ್ನು ಚಂಡಭುಜಬಲ ಎಂದು ಕರೆದಿರುವುದು

ಪದ್ಯ ೧೯: ಕೃಪ ಕೃಪೆಯರ ಜನನವು ಹೇಗಾಯಿತು?

ಅದು ಶರಸ್ತಂಬದಲಿ ನೆಲೆಯಾ
ದುದು ಮುನಿಚ್ಯುತವೀರ್ಯ ಮುನಿಸುತ
ರುದಿಸಿದರು ಶಂತನುಮಹೀಪತಿ ಕಂಡು ಕೃಪೆಯಿಂದ
ಸದನದಲಿ ತನಿಥುನವನು ಸಲ
ಹಿದನು ಕೃಪಕೃಪೆಯೆಂಬ ಹೆಸರಾ
ದುದು ಮಹಾಬಲನಾದನಾತನ ಕರೆಸಿದನು ಭೀಷ್ಮ (ಆದಿ ಪರ್ವ, ೬ ಸಂಧಿ, ೧೯ ಪದ್ಯ)

ತಾತ್ಪರ್ಯ:
ಆ ವೀರ್ಯವು ಹುಲ್ಲಿನ ಪೊದೆಯಲ್ಲಿ ನಿಂತು ಅದರಿಮ್ದ ಒಮ್ದು ಗಂಡುಮಗುವೂ ಒಂದು ಹೆಣ್ಣುಮಗುವೂ ಹುಟ್ಟಿದವು. ಶಂತನುವು ಆ ಮಕ್ಕಳನ್ನು ಕಂಡು ಕೃಪೆಯಿಂದ ತನ್ನ ಮನೆಗೆ ತಂದು ಬೆಳೆಸಿದನು. ಗಂಡುಮಗುವಿಗೆ ಕೃಪನೆಂದೂ, ಹೆಣ್ಣುಮಗುವಿಗೆ ಕೃಪೆಯೆಂದು ನಾಮಕರಣ ಮಾಡಿದನು. ಕರ್ಪನು ಮಹಾಬಲಶಾಲಿಯಾದನು, ಭೀಷ್ಮನು ಕೃಪನನ್ನು ಹಸ್ತಿನಾಪುರಕ್ಕೆ ಕರೆಸಿದನು.

ಅರ್ಥ:
ಶರಸ್ತಂಬ: ಜೊಂಡುಹುಲ್ಲು; ನೆಲೆ: ಸ್ಥಾಪಿತವಾಗು; ಮುನಿ: ಋಷಿ; ಚ್ಯುತ: ಜಾರಿದ, ಬಿದ್ದ; ವೀರ್ಯ: ಶಕ್ತಿ, ತೇಜಸ್ಸು; ಮುನಿ: ಋಶಿ; ಸುತ: ಮಗ; ಉದಿಸು: ಹುಟ್ಟು; ಮಹೀಪತಿ: ರಾಜ; ಕಂಡು: ನೋಡು; ಕೃಪೆ: ಕರುಣೆ; ಸದನ: ಮನೆ; ಮಿಥುನ: ಜೋಡಿ; ಸಲಹು: ಕಾಪಾದು; ಹೆಸರು: ನಾಮ; ಮಹಾಬಲ: ಶಕ್ತಿ; ಕರೆಸು: ಬರೆಮಾಡು;

ಪದವಿಂಗಡಣೆ:
ಅದು +ಶರಸ್ತಂಬದಲಿ +ನೆಲೆಯಾ
ದುದು +ಮುನಿ+ಚ್ಯುತ+ವೀರ್ಯ +ಮುನಿ+ಸುತರ್
ಉದಿಸಿದರು +ಶಂತನು+ಮಹೀಪತಿ+ ಕಂಡು +ಕೃಪೆಯಿಂದ
ಸದನದಲಿ +ತನ್ಮಿಥುನವನು +ಸಲ
ಹಿದನು +ಕೃಪ+ಕೃಪೆಯೆಂಬ +ಹೆಸರಾ
ದುದು +ಮಹಾಬಲನಾದನ್+ಆತನ +ಕರೆಸಿದನು +ಭೀಷ್ಮ

ಅಚ್ಚರಿ:
(೧) ಮುನಿ ಪದದ ಬಳಕೆ – ಮುನಿಚ್ಯುತವೀರ್ಯ ಮುನಿಸುತರುದಿಸಿದರು

ಪದ್ಯ ೧೭: ಮಾದ್ರಿಯು ನೋವಿನಿಂದ ಏನು ನುಡಿದಳು?

ಅಕಟ ಪಾಂಡು ಮಹೀಶ ವಿಷಕ
ನ್ನಿಕೆಯನೆನ್ನನು ಮುಟ್ಟಿದೈ ಬೇ
ಡಕಟ ಕೆಡಿಸದಿರೆನ್ನೆನೇ ತಾನರಿಯನೇ ಹದನ
ಪ್ರಕಟ ಕುರುಕುಲ ತಿಲಕರೀ ಬಾ
ಲಕರನಾರಿಗೆ ಕೊಟ್ಟೆ ತನ್ನೊಡ
ನಕಟ ಮುನಿದೈ ಮಾತಾನಾಡೆಂದೊರಲಿದಳು ಮಾದ್ರಿ (ಆದಿ ಪರ್ವ, ೫ ಸಂಧಿ, ೧೭ ಪದ್ಯ)

ತಾತ್ಪರ್ಯ:
ಅಯ್ಯೋ, ಪಾಂಡುಮಹಾರಾಜನೇ, ವಿಷಕನ್ಯೆಯಾದ ನನ್ನನ್ನು ಮುಟ್ಟಿದೆ, ನಿನಗೆ ಗೊತ್ತಿರಲಿಲ್ಲವೇ? ಬೇಡ, ಕೆಡಿಸಬೇಡೆಂದು ಹೇಳಲಿಲ್ಲವೇ? ಕುರುಕುಲವಂಶ ತಿಲಕರಾದ ಈ ಮಕ್ಕಳನ್ನು ಯಾರಿಗೆ ಕೊಟ್ಟುಹೋದೆ? ಅಯ್ಯೋ ನನ್ನ ಮೇಲೆ ಸಿಟ್ಟಾದೆಯಾ? ಮಾತನಾಡು ಎಂದು ಮಾದ್ರಿಯು ಅರಚಿದಳು.

ಅರ್ಥ:
ಅಕಟ: ಅಯ್ಯೋ; ಮಹೀಶ: ರಾಜ; ವಿಷ: ಗರಳ, ನಂಜು; ಕನ್ನಿಕೆ: ಹೆಣ್ಣು; ಮುಟ್ಟು: ತಾಗು; ಬೇಡ: ತ್ಯಜಿಸು; ಕೆಡಿಸು: ಹಾಳುಮಾಡು; ಅರಿ: ತಿಳಿ; ಹದ: ಸ್ಥಿತಿ; ಪ್ರಕಟ: ಸ್ಪಷ್ಟವಾದುದು, ನಿಚ್ಚಳವಾದುದು; ತಿಲಕ: ಶ್ರೇಷ್ಠ; ಬಾಲಕ: ಮಕ್ಕಳು; ಕೊಡು: ನೀಡು; ಮುನಿ: ಕೋಪ; ಮಾತು: ವಾಣಿ; ಒರಲು: ಅರಚು, ಕೂಗಿಕೊಳ್ಳು;

ಪದವಿಂಗಡಣೆ:
ಅಕಟ+ ಪಾಂಡು +ಮಹೀಶ +ವಿಷ+ಕ
ನ್ನಿಕೆಯನ್+ಎನ್ನನು +ಮುಟ್ಟಿದೈ +ಬೇಡ್
ಅಕಟ +ಕೆಡಿಸದಿರ್+ಎನ್ನ್+ಏನೇ +ತಾನರಿಯನೇ +ಹದನ
ಪ್ರಕಟ+ ಕುರುಕುಲ +ತಿಲಕರ್+ಈ+ ಬಾ
ಲಕರನ್+ಆರಿಗೆ +ಕೊಟ್ಟೆ +ತನ್ನೊಡನ್
ಅಕಟ +ಮುನಿದೈ +ಮಾತಾನಾಡೆಂದ್+ಒರಲಿದಳು +ಮಾದ್ರಿ

ಅಚ್ಚರಿ:
(೧) ಅಕಟ – ೧, ೩, ೬ ಸಾಲಿನ ಮೊದಲ ಪದ
(೨) ಅಕಟ, ಪ್ರಕಟ – ಪ್ರಾಸ ಪದಗಳು

ಪದ್ಯ ೭೦: ಮುನಿಗಳು ಮಕ್ಕಳನ್ನು ಹೇಗೆ ಸಂಭೋದಿಸಿದರು?

ಈತನೇ ಧರ್ಮಜನು ಯೆರಡನೆ
ಯಾತ ಭೀಮನು ಬಳಿಕ ಮೂರನೆ
ಯಾತನರ್ಜುನ ನಕುಲನೈದನೆಯಾತ ಸಹದೇವ
ಈತಗಳು ಕೌಂತೇಯ ಮಾದ್ರೇ
ಯಾತಿಶಯ ಪರಿಭೇದ ರಹಿತ
ಖ್ಯಾತರೆಂದರು ಪರಮಮುನಿಗಳು ಪಾಂಡುನಂದನರ (ಆದಿ ಪರ್ವ, ೪ ಸಂಧಿ, ೭೦ ಪದ್ಯ)

ತಾತ್ಪರ್ಯ:
ಮೊದಲನೆಯವನು ಧರ್ಮಜ, ಎರಡನೆಯವನು ಭೀಮ, ಮೂರನೆಯವನು ಅರ್ಜುನ, ನಕುಲನು ನಾಲ್ಕನೆಯವನು, ಐದನೆಯವಉ ಸಹದೇವ. ಕುಂತಿಯ ಮಕ್ಕಳು ಮಾದ್ರಿಯ ಮಕ್ಕಳೆಂಬ ಭೇದವು ಇವರಲ್ಲಿಲ್ಲ. ಇವರು ಪಾಂಡವರು, ಎಂದು ಅಲ್ಲಿದ್ದ ಋಷಿಗಳೆಲ್ಲರೂ ಸಂತೋಷದಿಂದ ಹೇಳಿದರು.

ಅರ್ಥ:
ಅತಿಶಯ: ಹೆಚ್ಚು; ಭೇದ: ಅಂತರ; ರಹಿತ: ಇಲ್ಲದ; ಖ್ಯಾತ: ಪ್ರಸಿದ್ಧಿ; ಪರಮ: ಶ್ರೇಷ್ಠ; ಮುನಿ: ಋಷಿ; ನಂದನ: ಮಕ್ಕಳು;

ಪದವಿಂಗಡಣೆ:
ಈತನೇ+ ಧರ್ಮಜನು +ಎರಡನೆ
ಯಾತ +ಭೀಮನು +ಬಳಿಕ +ಮೂರನೆ
ಯಾತನ್+ಅರ್ಜುನ +ನಕುಲನ್+ಐದನೆಯಾತ +ಸಹದೇವ
ಈತಗಳು +ಕೌಂತೇಯ +ಮಾದ್ರೇಯ
ಅತಿಶಯ +ಪರಿಭೇದ +ರಹಿತ
ಖ್ಯಾತರೆಂದರು +ಪರಮ+ಮುನಿಗಳು +ಪಾಂಡು+ನಂದನರ

ಅಚ್ಚರಿ:
(೧) ಈತ, ಖ್ಯಾತ, ಆತ – ಪ್ರಾಸ ಪದಗಳು

ಪದ್ಯ ೩೩: ಶಲ್ಯನು ಧರ್ಮಜನಿಗೆ ಏನುತ್ತರವ ನೀಡಿದನು?

ನಿನಗೆ ಮಾತುಳರಾವು ಮಾಣಲಿ
ಮುನಿಯೆಮಗೆ ಮೊರೆಯಲ್ಲ ದುಶ್ಯಾ
ಸನ ಜಯದ್ರಥರಲ್ಲಲಾ ಸಂಬಂಧಿಗಳು ನಿನಗೆ
ಜನಪ ಧರ್ಮದ ಹಿಂದೆ ಬಂದುದು
ನಿನಗೆ ಸಾಕದನಾಡಲೇತಕೆ
ಮನದ ಗರ್ವದ ಗಾಢವೈಸೆನುತೆಚ್ಚನಾ ಶಲ್ಯ (ಶಲ್ಯ ಪರ್ವ, ೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ನಿನಗೆ ನಾವು ಸೋದರ ಮಾವಂದಿರಲ್ಲವೇ? ನಮ್ಮ ಮೇಲೆ ಸಿಟ್ಟಾಗು, ತಪ್ಪಲ್ಲ, ಆದರೆ ದುಶ್ಯಾಸನ ಜಯದ್ರಥರು ನಿನಗೆ ಸದ್ಯದ ಬಂಧುಗಳಲ್ಲವೇ? ನಿನಗೆ ಧರ್ಮ ನಿಷ್ಠೆಯ ಹಿಂದೆ ಮನಸ್ಸಿನ ಮಹಾಗರ್ವ ಬಂದಿದೆ. ಅದನ್ನಾಡಿ ಏನು ಪ್ರಯೋಜನ ಎಂದು ಶಲ್ಯನು ಬಾಣ ಪ್ರಯೋಗ ಮಾಡಿದನು.

ಅರ್ಥ:
ಮಾತುಳ: ಮಾವ; ಮಾಣು: ನಿಲ್ಲಿಸು, ಸುಮ್ಮನಿರು; ಮುನಿ: ಸಿಟ್ಟಾಗು, ಕೋಪಗೊಳ್ಳು; ಮೊರೆ: ಪ್ರಾರ್ಥನೆ; ಆಶ್ರಯ; ಸಂಬಂಧಿ: ಬಂಧು; ಜನಪ: ರಾಜ; ಸಾಕು: ನಿಲ್ಲು, ತಡೆ; ಮನ: ಮನಸ್ಸು; ಗರ್ವ: ಅಹಂಕಾರ; ಗಾಢ: ಹೆಚ್ಚಳ, ಅತಿಶಯ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ನಿನಗೆ +ಮಾತುಳರ್+ಆವು+ ಮಾಣಲಿ
ಮುನಿ+ಎಮಗೆ +ಮೊರೆಯಲ್ಲ +ದುಶ್ಯಾ
ಸನ +ಜಯದ್ರಥರಲ್ಲಲಾ+ ಸಂಬಂಧಿಗಳು +ನಿನಗೆ
ಜನಪ +ಧರ್ಮದ +ಹಿಂದೆ +ಬಂದುದು
ನಿನಗೆ +ಸಾಕ್+ಅದನ್+ಆಡಲೇತಕೆ
ಮನದ +ಗರ್ವದ +ಗಾಢವೈಸೆನುತ್+ಎಚ್ಚನಾ +ಶಲ್ಯ

ಅಚ್ಚರಿ:
(೧) ಮ ಕಾರದ ಸಾಲು ಪದ – ಮಾತುಳರಾವು ಮಾಣಲಿ ಮುನಿಯೆಮಗೆ ಮೊರೆಯಲ್ಲ

ಪದ್ಯ ೫೧: ದ್ರೋಣನು ಅರ್ಜುನನನ್ನು ಏನೆಂದು ಕರೆದನು?

ಕಂದನಶ್ವತ್ಥಾಮ ಹುಸಿಯೆನ
ಗಿಂದು ಬೇಹ ಕುಮಾರ ನೀ ನಿ
ನ್ನಿಂದ ತನ್ನಯ ಕೀರ್ತಿ ಮೆರೆವುದು ಮೂರುಲೋಕದಲಿ
ತಂದೆ ನಿನಗಾ ಮುನಿಯಲಾಪೆನೆ
ಸಂದುದಾಡಿದ ಭಾಷೆ ನೀ ಹೋ
ಗೆಂದು ಗುಣದಲಿ ಬೀಳುಕೊಟ್ಟನು ದ್ರೋಣನರ್ಜುನನ (ದ್ರೋಣ ಪರ್ವ, ೯ ಸಂಧಿ, ೫೧ ಪದ್ಯ)

ತಾತ್ಪರ್ಯ:
ದ್ರೋಣನು ಉತ್ತರಿಸುತ್ತಾ, ಅರ್ಜುನಾ, ಅಶ್ವತ್ಥಾಮನು ನನ್ನ ಮಗನೆಂಬುದು ಸುಳ್ಳು, ನನಗೆ ಬೇಕಾದ ಪ್ರೀತಿಯ ಮಗನು ನೀನೇ. ನಿನ್ನಿಂದ ನನ್ನ ಕೀರ್ತಿ ಮೂರು ಲೋಕಗಳಲ್ಲೂ ಹರಡುತ್ತದೆ. ಅಪ್ಪಾ, ನಿನ್ನ ಮೇಲೆ ನನಗೆ ಕೋಪವೇ? ನೀನು ಮಾಡಿದ ಪ್ರತಿಜ್ಞೆ ನಡೆದ ಹಾಗೇ, ನೀನಿನ್ನ ತೆರಳು ಎಂದು ಅರ್ಜುನನು ದ್ರೋಣನನ್ನು ಬೀಳುಕೊಟ್ಟನು.

ಅರ್ಥ:
ಕಂದ: ಮಗ; ಹುಸಿ: ಸುಳ್ಳು; ಬೇಹು: ಬೇಕಾದ; ಕುಮಾರ: ಮಗ; ಕೀರ್ತಿ: ಯಶಸ್ಸು; ಮೆರೆ: ಹೊಳೆ; ಲೋಕ: ಜಗತ್ತು; ತಂದೆ: ಅಪ್ಪಾ; ಮುನಿ: ಕೋಪ; ಸಂದು: ಅವಕಾಶ, ಸಂದರ್ಭ, ಪಡೆ; ಆಡು: ಮಾತಾದು; ಭಾಷೆ: ನುಡಿ; ಹೋಗು: ತೆರಳು; ಗುಣ: ನಡತೆ, ಸ್ವಭಾವ; ಬೀಳುಕೊಡು: ತೆರಳು;

ಪದವಿಂಗಡಣೆ:
ಕಂದನ್+ಅಶ್ವತ್ಥಾಮ +ಹುಸಿ+ಎನಗ್
ಇಂದು +ಬೇಹ +ಕುಮಾರ +ನೀ +ನಿ
ನ್ನಿಂದ +ತನ್ನಯ +ಕೀರ್ತಿ +ಮೆರೆವುದು +ಮೂರು+ಲೋಕದಲಿ
ತಂದೆ +ನಿನಗಾ +ಮುನಿಯಲಾಪೆನೆ
ಸಂದುದ್+ಆಡಿದ +ಭಾಷೆ +ನೀ +ಹೋ
ಗೆಂದು +ಗುಣದಲಿ+ ಬೀಳುಕೊಟ್ಟನು +ದ್ರೋಣನ್+ಅರ್ಜುನನ

ಅಚ್ಚರಿ:
(೧) ಅರ್ಜುನನನ್ನು ಹೊಗಳಿದ ಪರಿ – ನಿನ್ನಿಂದ ತನ್ನಯ ಕೀರ್ತಿ ಮೆರೆವುದು ಮೂರುಲೋಕದಲಿ

ಪದ್ಯ ೪೯: ದುಶ್ಯಾಸನನನ್ನು ಅಭಿಮನ್ಯುವೇಕೆ ಕೊಲ್ಲಲಿಲ್ಲ?

ಇವನ ಕೊಂದರೆ ತಂದೆ ಮಿಗೆ ಮೆ
ಚ್ಚುವನೊ ಮುನಿವನೊ ತನ್ನ ನುಡಿ ಸಂ
ಭವಿಸದೆಂಬನೊ ಭೀಮಸೇನನ ಭಾಷೆಗಂಜುವೆನು
ಇವನ ತಾನೇ ಕೊಲಲಿ ನಮಗಿ
ನ್ನಿವನ ತೊಡಕೇ ಬೇಡ ಕದನದೊ
ಳಿವನ ಭಂಗಿಸಿ ಬಿಡುವೆನೆಂದನು ತನ್ನ ಮನದೊಳಗೆ (ದ್ರೋಣ ಪರ್ವ, ೫ ಸಂಧಿ, ೪೯ ಪದ್ಯ)

ತಾತ್ಪರ್ಯ:
ಅಭಿಮನ್ಯುವು ಮನಸ್ಸಿನಲ್ಲಿಯೇ ಆಲೋಚಿಸಿದನು, ಇವನನ್ನು ನಾನು ಕೊಂದರೆ ನನ್ನ ಹಿರಿಯ ತಂದೆಯಾದ ಭೀಮಸೇನನ ಮಾತಿಗೆ ಚ್ಯುತಿಬರುತ್ತದೆ, ನಾನು ದುಶ್ಯಾಸನನನ್ನು ಕೊಂದರೆ ಭೀಮಸೇನನು ಮೆಚ್ಚುಅನೋ ಅಥವ ತನ್ನ ಪ್ರತಿಜ್ಞೆ ತಪ್ಪಿತೆಂದು ಕೋಪಗೊಳ್ಳುವನೋ, ಭೀಮಸೇನನ ಪ್ರತಿಜ್ಞೆಗೆ ನಾನು ಹೆದರುತ್ತೇನೆ, ಇವನನ್ನು ಸಾಯಿಸುವ ತೊಂದರೆಯೇ ಬೇಡವೆಂದು ಮನಸ್ಸಿನಲ್ಲಿಯೇ ನಿರ್ಧರಿಸಿ ದುಶ್ಯಾಸನನನ್ನು ಸೋಲಿಸಿ ಕೈಬಿಡುತ್ತೇನೆಂದು ಕೊಂಡನು.

ಅರ್ಥ:
ಕೊಲ್ಲು: ಸಾಯಿಸು; ತಂದೆ: ಪಿತ; ಮಿಗೆ: ಮತ್ತು; ಮೆಚ್ಚು: ಹೊಗಳು, ಪ್ರಶಂಶಿಸು; ಮುನಿ: ಕೋಪಗೊಳ್ಳು; ನುಡಿ: ಮಾತು; ಸಂಭವಿಸು: ಹುಟ್ಟು; ಭಾಷೆ: ನುಡಿ, ಮಾತು, ಪ್ರಮಾಣ; ಅಂಜು: ಹೆದರು; ತೊಡಕು: ತೊಂದರೆ; ಬೇಡ: ತ್ಯಜಿಸು; ಕದನ: ಯುದ್ಧ; ಭಂಗ:ಅವಮಾನ, ನಾಶ; ಮನ: ಮನಸ್ಸು;

ಪದವಿಂಗಡಣೆ:
ಇವನ+ ಕೊಂದರೆ +ತಂದೆ +ಮಿಗೆ +ಮೆ
ಚ್ಚುವನೊ +ಮುನಿವನೊ +ತನ್ನ+ನುಡಿ +ಸಂ
ಭವಿಸದ್+ಎಂಬನೊ +ಭೀಮಸೇನನ +ಭಾಷೆಗ್+ಅಂಜುವೆನು
ಇವನ+ ತಾನೇ +ಕೊಲಲಿ+ ನಮಗಿನ್
ಇವನ +ತೊಡಕೇ +ಬೇಡ +ಕದನದೊಳ್
ಇವನ +ಭಂಗಿಸಿ +ಬಿಡುವೆನೆಂದನು+ ತನ್ನ+ ಮನದೊಳಗೆ

ಅಚ್ಚರಿ:
(೧) ಇವನ – ಪದದ ಬಳಕೆ ೪ ಸಾಲುಗಳಲ್ಲಿ ಮೊದಲ ಪದ

ಪದ್ಯ ೩೩: ಭೀಷ್ಮರು ಏನೆಂದು ಹೇಳಿ ಬೀಳ್ಕೊಟ್ಟರು?

ಕಾವುದೀತನ ಕರುಣ ಮುನಿದರೆ
ಸಾವೆನೀತನ ಕಯ್ಯ ಬಾಯಲಿ
ನೀವು ತಾವ್ ನೆರೆ ಮತ್ತೆ ಕೆಲಬರು ಮುನಿದಡಂಜುವೆನು
ನಾವು ಬೆಸಸಿದ ಮಾಡಿ ಸಾಕಿ
ನ್ನಾವಭಯ ನಿಮಗಿಲ್ಲ ಚಿತ್ತದ
ಭಾವಶುದ್ಧಿಯಲೆಮ್ಮ ನಂಬಿರಿ ಹೋಗಿ ನೀವೆಂದ (ಭೀಷ್ಮ ಪರ್ವ, ೭ ಸಂಧಿ, ೩೩ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಕರುಣೆ ಕಾಪಾಡುತ್ತದೆ, ಇವನು ಸಿಟ್ಟುಗೊಂಡರೆ ನಾನು ಸಾಯುತ್ತೇನೆ, ನೀನಾಗಲಿ ಇತರರಾಗಲೀ ನನ್ನ ಮೇಲೆ ಸಿಟ್ಟಾಗಿ ಏನನ್ನೂ ಮಾಡಲಾರಿರಿ, ಕೊಲ್ಲುವೆನೆನಂದು ನೀವಾಡುವ ಮಾತು ಕೇಳಿ ಹೆದರಿಕೆಯಾಗುತ್ತದೆ, ನಾನು ಹೇಳಿದುದನ್ನು ಮಾಡಿರಿ, ನಿಮಗೆ ಪುಣ್ಯ ಪಾಪಗಳ ಭಯವೇ ಇಲ್ಲ. ಭಾವ ಶುದ್ಧಿಯಿಂದ ನನ್ನ ಮಾತನ್ನು ನಂಬಿ, ನಾ ಹೇಳಿದಂತೆ ಮಾಡಿರಿ ಎಂದು ಭೀಷ್ಮರು ಹೇಳಿದರು.

ಅರ್ಥ:
ಕಾವುದು: ರಕ್ಷಿಸು; ಕರುಣ: ದಯೆ; ಮುನಿ: ಕೋಪ; ಸಾವು: ಮರಣ; ನೆರೆ: ಜೊತೆ; ಕೆಲವು: ಸ್ವಲ್ಪ; ಅಂಜು: ಕೋಪ; ಬೆಸಸು: ಹೇಳು, ಆಜ್ಞಾಪಿಸು; ಸಾಕು: ನಿಲ್ಲಿಸು; ಅಭಯ: ರಕ್ಷಣೆ; ಚಿತ್ತ: ಮನಸ್ಸು; ಭಾವ: ಭಾವನೆ, ಚಿತ್ತವೃತ್ತಿ; ಶುದ್ಧಿ: ನಿರ್ಮಲ; ನಂಬು: ವಿಶ್ವಾಸ, ಭರವಸೆ; ಹೋಗು: ತೆರಳು;

ಪದವಿಂಗಡಣೆ:
ಕಾವುದ್+ಈತನ+ ಕರುಣ+ ಮುನಿದರೆ
ಸಾವೆನ್+ಈತನ +ಕಯ್ಯ +ಬಾಯಲಿ
ನೀವು +ತಾವ್ +ನೆರೆ +ಮತ್ತೆ +ಕೆಲಬರು+ ಮುನಿದಡ್+ಅಂಜುವೆನು
ನಾವು +ಬೆಸಸಿದ +ಮಾಡಿ +ಸಾಕಿನ್ನಾವ್
ಅಭಯ +ನಿಮಗಿಲ್ಲ+ ಚಿತ್ತದ
ಭಾವಶುದ್ಧಿಯಲ್+ಎಮ್ಮ +ನಂಬಿರಿ+ ಹೋಗಿ +ನೀವೆಂದ

ಅಚ್ಚರಿ:
(೧) ರಕ್ಷಣೆ ಸಾವು ಬರುವುದೆಂದು – ಕಾವುದೀತನ ಕರುಣ ಮುನಿದರೆ ಸಾವೆನೀತನ ಕಯ್ಯ ಬಾಯಲಿ

ಪದ್ಯ ೨೫: ಭೀಷ್ಮರು ಯಾವ ಉಪಾಯವನ್ನು ಹೇಳಿದರು?

ಕೊಂದೆನಗಣಿತ ರಾಯರನು ತಾ
ಮಂದಿಯನು ನಿನಗಾನು ಮುನಿಯೆನು
ಬಂದು ಪಾರ್ಥನ ರಥವ ತಡೆದರೆ ನೀವು ಧೃತಿಗೆಡದೆ
ಇಂದಿನುದಯದಲಾ ಶಿಖಂಡಿಯ
ತಂದು ನಿಲಿಸಿದಡೆನ್ನ ತನುವನು
ಹಿಂದುಗಳೆಯದೆ ನಿಮಗೆ ತೆರುವೆನು ಮಗನೆ ಕೇಳೆಂದ (ಭೀಷ್ಮ ಪರ್ವ, ೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ಲೆಕ್ಕವಿಲ್ಲದಷ್ಟು ರಾಜರನ್ನು ನಾನು ಇಷ್ಟು ದಿನದ ಯುದ್ಧದಲ್ಲಿ ಸಂಹರಿಸಿದ್ದೇನೆ, ನಿನ್ನ ಮೇಲೆ ನನಗೆ ಕೋಪವಿಲ್ಲ, ಬೆಲಗ್ಗೆ ನಾನು ಬಂದು ಅರ್ಜುನನ ರಥವನ್ನು ತಡೆದಾಗ ಧೈರ್ಯವನ್ನು ಕಳೆದುಕೊಳ್ಳದೆ ನನ್ನೆದುರು ಶಿಖಂಡಿಯನ್ನು ತಂದು ನಿಲ್ಲಿಸಿದರೆ, ನಾನು ಹಿಂದೆಸರಿಯದೆ ಈ ದೇಹವನ್ನು ನಿಮಗೆ ಕೊಡುತ್ತೇನೆ ಎಂದು ಹೇಳಿದನು.

ಅರ್ಥ:
ಕೊಂದು: ಸಾವು; ಅಗಣಿತ: ಲೆಕ್ಕವಿಲ್ಲದಷ್ಟು; ಮಂದಿ: ಜನರು; ಮುನಿ: ಕೋಪಗೊಳ್ಳು; ಬಂದು: ಆಗಮಿಸು; ರಥ: ಬಂಡಿ; ತಡೆ: ನಿಲ್ಲಿಸು; ಧೃತಿ: ಧೈರ್ಯ; ಉದಯ: ಹುಟ್ಟು; ಶಿಖಂಡಿ: ನಪುಂಸಕ; ನಿಲಿಸು: ನಿಲ್ಲಿಸು; ತನು: ದೇಹ; ಹಿಂದುಗಳೆಯದೆ: ಹಿಂದಕ್ಕೆ ಹೋಗದೆ; ತೆರುವೆ: ಕೊಡುವೆ; ಮಗ: ಪುತ್ರ; ಕೇಳು: ಆಲಿಸು;

ಪದವಿಂಗಡಣೆ:
ಕೊಂದೆನ್+ಅಗಣಿತ+ ರಾಯರನು +ತಾ
ಮಂದಿಯನು +ನಿನಗಾನು +ಮುನಿಯೆನು
ಬಂದು +ಪಾರ್ಥನ +ರಥವ +ತಡೆದರೆ+ ನೀವು +ಧೃತಿಗೆಡದೆ
ಇಂದಿನ್+ಉದಯದಲ್+ಆ+ ಶಿಖಂಡಿಯ
ತಂದು +ನಿಲಿಸಿದಡ್+ಎನ್ನ +ತನುವನು
ಹಿಂದುಗಳೆಯದೆ +ನಿಮಗೆ +ತೆರುವೆನು +ಮಗನೆ +ಕೇಳೆಂದ

ಅಚ್ಚರಿ:
(೧) ಭೀಷ್ಮರು ತಮ್ಮ ಸಾವನ್ನು ಆಹ್ವಾನಿಸುವ ಪರಿ – ಶಿಖಂಡಿಯ ತಂದು ನಿಲಿಸಿದಡೆನ್ನ ತನುವನು
ಹಿಂದುಗಳೆಯದೆ ನಿಮಗೆ ತೆರುವೆನು

ಪದ್ಯ ೩೯: ಯುಧಿಷ್ಠಿರನು ಭೀಮನಿಗೆ ಏನು ಹೇಳಿದನು?

ಇವನ ನಾವೋಲೈಸಿ ಕೈಯೊಡ
ನಿವಗೆ ಮುನಿದೊಡೆಯೇನನೆಂಬುದು
ಭುವನಜನವುಭ್ರಮಿಸದಿರು ಸೈರಣೆಗೆ ಮನಮಾಡು
ಎವಗೆ ನೋವಿನ ಹೊತ್ತು ದುಷ್ಕೃತ
ವಿವರಣದ ಫಲವಿದಕೆ ಲೋಗರ
ನವಗಡಿಸಿದೊಡೆ ಹಾನಿಯೆಮಗೆನೆ ಭೀಮ ನಿಂತೆಂದ (ವಿರಾಟ ಪರ್ವ, ೧೦ ಸಂಧಿ, ೩೯ ಪದ್ಯ)

ತಾತ್ಪರ್ಯ:
ಇಷ್ಟುದಿನ ಇವನ ಆಶ್ರಿತನಾಗಿದ್ದು, ಈಗ ಇವನಿಗೆ ತೊಂದರೆ ಮಾಡಿದರೆ ಓಕದ ಜನರು ಏನೆನ್ನುತ್ತಾರೆ? ದುಡುಕಬೇಡ ಸೈರಿಸು, ನಮ್ಮ ಪಾಪದ ಫಲವಾಗಿ ನಮಗೆ ನೋವನ್ನನುಭವಿಸುವ ಹೊತ್ತು ಬಂದಿದೆ. ಇದಕ್ಕಾಗಿ ಜನರನ್ನು ಹಿಂಸಿಸಿದರೆ ಹಾನಿಯಾಗುವುದು ನಮಗೆ ಅಲ್ಲವೇ? ಎಂದು ಅಣ್ಣನು ಹೇಳಲು ಭೀಮನು ಹೀಗೆಂದನು.

ಅರ್ಥ:
ಓಲೈಸು: ಉಪಚರಿಸು; ಕೈಯೊಡನೆ: ತತ್ಕ್ಷಣ; ಮುನಿ: ಕೋಪಗೊಳ್ಳು; ಭುವನ: ಭೂಮಿ; ಜನ: ಮನುಷ್ಯ; ಭ್ರಮೆ: ಹುಚ್ಚು, ಉನ್ಮಾದ; ಸೈರಣೆ: ತಾಳ್ಮೆ, ಸಹನೆ; ಮನ: ಮನಸ್ಸು; ನೋವು: ಬೇನೆ; ಹೊತ್ತು: ಸಮಯ; ದುಷ್ಕೃತ: ಕೆಟ್ಟ ಕೆಲಸ; ವಿವರಣ: ವರ್ಣಿಸು; ಫಲ: ಪ್ರಯೋಜನ; ಲೋಗ: ಜನರು; ಅವಗಡಿಸು: ಕಡೆಗಣಿಸು, ಸೋಲಿಸು; ಹಾನಿ: ನಾಶ;

ಪದವಿಂಗಡಣೆ:
ಇವನ +ನಾವ್+ಓಲೈಸಿ+ಕೈಯೊಡನ್
ಇವಗೆ +ಮುನಿದೊಡೆ+ಏನನೆಂಬುದು
ಭುವನ+ಜನವು+ಭ್ರಮಿಸದಿರು+ ಸೈರಣೆಗೆ+ ಮನಮಾಡು
ಎವಗೆ+ ನೋವಿನ+ ಹೊತ್ತು +ದುಷ್ಕೃತ
ವಿವರಣದ+ ಫಲವಿದಕೆ +ಲೋಗರನ್
ಅವಗಡಿಸಿದೊಡೆ +ಹಾನಿ+ಎಮಗೆನೆ+ ಭೀಮ +ನಿಂತೆಂದ

ಅಚ್ಚರಿ:
(೧) ತಾಳ್ಮೆಯಿಂದಿರು ಎಂದು ಹೇಳಲು – ಭ್ರಮಿಸದಿರು ಸೈರಣೆಗೆ ಮನಮಾಡು