ಪದ್ಯ ೩೯: ದ್ರೋಣನು ಹೇಗೆ ಮಹಾಧನಪತಿಯಾದನು?

ಕಂಡು ಬೆರಗಾದುದು ಕುಮಾರರ
ತಂಡ ತನತನಗೈದಿ ಭೀಷ್ಮನ
ಕಂಡಲೆದುರ್ದೀ ಮುನಿಯನೀಗಲೆ ಸಂತವಿಡಿಯೆಂದು
ಚಂಡ ಭುಜಬಲನವರ ಕಾಣಿಸಿ
ಕೊಂಡು ಕೊಟ್ಟನು ಭೀಷ್ಮನವರಿಗ
ಖಂಡ ವಿಭವವನತುಳ ಧನಪತಿಯಾದನಾ ದ್ರೋಣ (ಆದಿ ಪರ್ವ, ೬ ಸಂಧಿ, ೩೯ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ಈ ಚಾತುರ್ಯವನ್ನು ಕಂಡು ಬೆರಗಾದ ಕೌರವ ಪಾಂಡವರು ಭೀಶ್ಮನ ಬಳಿಗೆ ಬಂದು ದ್ರೋಣನನ್ನು ಸ್ವಾಗತಿಸಿ, ಅವನನ್ನು ಇಲ್ಲೇ ಇರುವಂತೆ ಮಾಡಿರೆಂದು ಬಹಳವಾಗಿ ಬೇಡಿಕೊಂಡರು. ಭೀಷ್ಮನು ದ್ರೋಣನನ್ನು ಕಂಡು ಅವನಿಗೆ ಅಪಾರವಾದ ಹಣವನ್ನೂ, ಸ್ಥಾನವನ್ನೂ ಕೊಟ್ಟನು. ದ್ರೋಣನು ಮಹಾಧನಪತಿಯಾದನು.

ಅರ್ಥ:
ಕಂಡು: ನೋಡು; ಬೆರಗು: ಆಶ್ಚರ್ಯ; ಕುಮಾರ: ಪುತ್ರ; ತಂಡ: ಗುಂಪು; ಐದು: ಬಂದು ಸೇರು; ಮುನಿ: ಋಷಿ; ಸಂತವಿಡು: ಸಮಾಧಾನಮಾಡು; ಚಂಡ: ಶೂರ, ಪರಾಕ್ರಮಿ; ಭುಜಬಲ: ಶೂರ; ಕಾಣಿಸು: ಭೇಟಿಯಾಗು; ಕೊಡು: ನೀಡು; ಅಖಂಡ: ಎಲ್ಲಾ; ವಿಭವ: ಸಿರಿ, ಸಂಪತ್ತು; ಅತುಳ: ಬಹಳ; ಧನಪತಿ: ಸಿರಿವಂತ;

ಪದವಿಂಗಡಣೆ:
ಕಂಡು +ಬೆರಗಾದುದು +ಕುಮಾರರ
ತಂಡ +ತನತನಗ್+ಐದಿ +ಭೀಷ್ಮನ
ಕಂಡಲೆದುರ್ದ್+ಈ+ ಮುನಿಯನ್+ಈಗಲೆ +ಸಂತವಿಡಿಯೆಂದು
ಚಂಡ +ಭುಜಬಲನ್+ಅವರ +ಕಾಣಿಸಿ
ಕೊಂಡು +ಕೊಟ್ಟನು+ ಭೀಷ್ಮನವರಿಗ್
ಅಖಂಡ +ವಿಭವವನ್+ಅತುಳ +ಧನಪತಿಯಾದನಾ +ದ್ರೋಣ

ಅಚ್ಚರಿ:
(೧) ತಂಡ, ಕಂಡ, ಚಂಡ, ಅಖಂಡ; ಕಂಡು, ಕೊಂಡು – ಪ್ರಾಸ ಪದಗಳು
(೨) ಭೀಷ್ಮನನ್ನು ಚಂಡಭುಜಬಲ ಎಂದು ಕರೆದಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ