ಪದ್ಯ ೧೦: ಮಕ್ಕಳಿಗೆ ಯಾವ ಹೆಸರನ್ನಿಡಲಾಯಿತು?

ಜಾತಕರ್ಮಾದಿಯನು ಪಾರ್ಥಿವ
ಜಾತಿವಿಧಿವಿಹಿತದಲಿ ಗಂಗಾ
ಜಾತ ಮಾಡಿಸಿ ತುಷ್ಟಿ ಪದಿಸಿದ ನಿಖಿಳ ಯಾಚಕರ
ಈತನೇ ಧೃತರಾಷ್ಟ್ರನೆರಡನೆ
ಯಾತ ಪಾಂಡು ವಿಲಾಸಿನೀಸಂ
ಭೂತನೀತನು ವಿದುರನೆಂದಾಯ್ತವರಿಗಭಿದಾನ (ಆದಿ ಪರ್ವ, ೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ಭೀಷ್ಮನು ಕ್ಷತ್ರಿಯಜಾತಿಗೆ ಅನುಗುಣವಾಗುವ ವಿಧಿಯಂತೆ ಜಾತಕರ್ಮವನ್ನು ನಡೆಸಿದನು. ಯಾಚಕರನ್ನು ತೃಪ್ತಿಪಡಿಸಿದನು. ಅಂಬಿಕೆಯ ಮಗನಿಗೆ ಧೃತರಾಷ್ಟ್ರನೆಂದೂ, ಅಂಬಾಲಿಕೆಯ ಮಗನಿಗೆ ಪಾಂಡುವೆಂದೂ, ವಿಲಾಸಿನಿಯ ಮಗನಿಗೆ ವಿದುರನೆಂದೂ ಹೆಸರನ್ನಿಟ್ಟರು.

ಅರ್ಥ:
ಜಾತಕರ್ಮ: ಹುಟ್ಟಿದ ಮಗುವಿಗೆ ಮಾಡುವ ಒಂದು ಸಂಸ್ಕಾರ; ಆದಿ: ಮೊದಲಾದ; ಪಾರ್ಥಿವ: ಭೌತಿಕವಾದುದು; ಪಾರ್ಥಿವಜಾತಿ: ಕ್ಷತ್ರಿಯ; ವಿಧಿ: ನಿಯಮ; ವಿಹಿತ: ಯೋಗ್ಯವಾದುದು; ಜಾತ: ಹುಟ್ಟಿದ; ಗಂಗಾಜಾತ: ಭೀಷ್ಮ; ತುಷ್ಟಿ: ಸಂತಸ; ನಿಖಿಳ: ಎಲ್ಲಾ; ಯಾಚಕ: ಬೇಡು; ವಿಲಾಸಿನಿ: ಸಖಿ; ಅಭಿದಾನ: ಹೆಸರು;

ಪದವಿಂಗಡಣೆ:
ಜಾತಕರ್ಮಾದಿಯನು +ಪಾರ್ಥಿವ
ಜಾತಿ+ವಿಧಿ+ವಿಹಿತದಲಿ +ಗಂಗಾ
ಜಾತ +ಮಾಡಿಸಿ +ತುಷ್ಟಿ +ಪಡಿಸಿದ +ನಿಖಿಳ +ಯಾಚಕರ
ಈತನೇ +ಧೃತರಾಷ್ಟ್ರನ್+ಎರಡನೆ
ಯಾತ+ ಪಾಂಡು +ವಿಲಾಸಿನೀ+ಸಂ
ಭೂತನ್+ಈತನು +ವಿದುರನೆಂದಾಯ್ತ್+ಅವರಿಗ್+ಅಭಿದಾನ

ಅಚ್ಚರಿ:
(೧) ಭೀಷ್ಮನನ್ನು ಗಂಗಾಜಾತ; ಕ್ಷತ್ರಿಯರನ್ನು ಪಾರ್ಥಿವಜಾತಿ ಎಂದು ಕರೆದಿರುವುದು

ಪದ್ಯ ೯: ಅರಮನೆಯಲ್ಲಿ ಸಂಭ್ರಮದ ವಾತಾವರಣವು ಏಕಾಯಿತು?

ತುಂಬಿದುದು ನವಮಾಸ ಜನಿಸಿದ
ನಂಬಿಕೆಯ ಬಸುರಿನಲಿ ಸೂನುಗ
ತಾಂಬಕನು ಮಗನಾದನಂಬಾಲಿಕೆಗೆ ಪಾಂಡುಮಯ
ಚುಂಬಿಸಿತು ಪರಿತೋಷ ನವ ಪುಳ
ಕಾಂಬುಗಳು ಜನಜನಿತವದನೇ
ನೆಮ್ಬೆನುತ್ಸವವನು ಕುಮಾರೋದ್ಭವದ ವಿಭವದಲಿ (ಆದಿ ಪರ್ವ, ೩ ಸಂಧಿ, ೯ ಪದ್ಯ)

ತಾತ್ಪರ್ಯ:
ಅಂಬಿಕೆ, ಅಂಬಾಲಿಕೆ ಮತ್ತು ವಿಲಾಸಿನಿಯರಿಗೆ ನವಮಾಸಗಳು ತುಂಬಿದವು. ಅಮ್ಬಿಕೆಗೆ ಒಬ್ಬ ಕುರುಡನೂ, ಅಂಬಾಲಿಕೆಗೆ ಬಿಳಿಮೈಯುಳ್ಳವನೂ ಆದ ಮಕ್ಕಳು ಹುಟ್ಟಿದರು. ಈ ಮಕ್ಕಳು ಹುಟ್ಟಿದುದರಿಂದ ಅಪರಿಮಿತ ಸಂತೋಷವೂ, ಆನಂದಾಶ್ರುಗಳೂ ರಾಜ ಪರಿವಾರಕ್ಕೆ ಉಂಟಾಯಿತು. ಮಹಾವೈಭವದಿಂದ ಉತ್ಸವವಾಯಿತು. ಜನಸಾಮಾನ್ಯರೂ ಸಂಭ್ರಮಿಸಿದರು.

ಅರ್ಥ:
ತುಂಬು: ಪೂರ್ಣಗೊಳ್ಳು; ನವ: ಒಂಬತ್ತು; ಮಾಸ: ತಿಂಗಳು; ಜನಿಸು: ಹುಟ್ಟು; ಬಸುರು: ಹೊಟ್ಟೆ; ಸೂನು: ಮಗ; ಅಂಬಕ: ಕಣ್ಣು; ಮಗ: ಪುತ್ರ; ಪಾಂಡು: ಬಿಳಿಯ ಬಣ್ಣ, ಧವಳವರ್ಣ; ಚುಂಬಿಸು: ಮುತ್ತಿಡು, ಸೇರು; ಪರಿತೋಷ: ಸಂತಸ; ನವ: ಹೊಸ; ಪುಳಕ: ಮೈನವಿರೇಳುವಿಕೆ, ರೋಮಾಂಚನ; ಅಂಬು: ನೀರು; ಜನಜನಿತ: ಜನರಲ್ಲಿ ಹಬ್ಬಿರುವ ವಿಷಯ; ಉತ್ಸವ: ಸಂಭ್ರಮ; ಉದ್ಭವ: ಹುಟ್ಟು; ವಿಭವ: ಸಿರಿ, ಸಂಪತ್ತು; ಗತ: ಕಳೆದ, ಇಲ್ಲದ;

ಪದವಿಂಗಡಣೆ:
ತುಂಬಿದುದು+ ನವಮಾಸ +ಜನಿಸಿದನ್
ಅಂಬಿಕೆಯ +ಬಸುರಿನಲಿ +ಸೂನು
ಗತ+ಅಂಬಕನು+ ಮಗನಾದನ್+ಅಂಬಾಲಿಕೆಗೆ +ಪಾಂಡುಮಯ
ಚುಂಬಿಸಿತು +ಪರಿತೋಷ +ನವ +ಪುಳ
ಕಾಂಬುಗಳು +ಜನಜನಿತವ್+ಅದನೇ
ನೆಂಬೆನ್+ಉತ್ಸವವನು +ಕುಮಾರ್+ಉದ್ಭವದ+ ವಿಭವದಲಿ

ಅಚ್ಚರಿ:
(೧) ಕುರುಡ ಎಂದು ಹೇಳಲು – ಗತಾಂಬಕ ಪದದ ಪ್ರಯೋಗ

ಪದ್ಯ ೮: ವ್ಯಾಸರು ಹುಟ್ಟುವ ಮಕ್ಕಳ ಬಗ್ಗೆ ಏನು ಹೇಳಿದರು?

ಬಂದು ಮುನಿಪತಿ ತಾಯ್ಗೆ ಕೈಮುಗಿ
ದೆಂದನಂಬಿಯಲ್ಲಿ ಜನಿಸುವ
ನಂದನನು ಜಾತ್ಯಂಧನಂಬಾಲಿಕೆಗೆ ಪಾಂಡುಮಯ
ಬಂದ ಬಳಿಕಿನ ಚಪಲೆಗತಿಬಲ
ನೆಂದು ಹೇಳಿದು ತನಗೆ ನೇಮವೆ
ಯೆಂದು ತನ್ನಾಶ್ರಮಕೆ ಸರಿದನು ಬಾದರಾಯಣನು (ಆದಿ ಪರ್ವ, ೩ ಸಂಧಿ, ೮ ಪದ್ಯ)

ತಾತ್ಪರ್ಯ:
ಮುನಿಶ್ರೇಷ್ಠನಾದ ಬಾದರಾಯಣನು ತಾಯಿಗೆ ಕೈಮುಗಿದು ಅಂಬಿಕೆಯಲ್ಲಿ ಜನಿಸುವ ಮಗನು ಹುಟ್ಟುಕುರುಡನಾಗುವನು, ಅಂಬಾಲಿಕೆಯ ಮಗನ ಮೈ ಬಿಳುಪಾಗಿರುತ್ತದೆ, ಆಮೇಲೆ ಬಂದ ಚಪಲೆಗೆ ಹುಟ್ಟುವ ಮಗನು ಮಹಾಬಲಶಾಲಿಯಾಗುವನು ಎಂದನು. ಬಳಿಕ ತನಗೆ ಅಪ್ಪಣೆಯೇ ಎಂದು ಹೇಳಿ ತನ್ನ ಆಶ್ರಮಕ್ಕೆ ಹೊರಟುಹೋದನು.

ಅರ್ಥ:
ಮುನಿಪ: ಋಷಿ; ತಾಯಿ: ಮಾತೆ; ಕೈಮುಗಿ: ನಮಸ್ಕರಿಸು, ಎರಗು; ಜನಿಸು: ಹುಟ್ಟು; ಅಂಧ: ಕುರುಡ; ಪಾಂಡು: ಬಿಳಿಯ ಬಣ್ಣ, ಧವಳವರ್ಣ; ಮಯ: ತುಂಬಿದ; ಬಳಿಕ: ನಂತರ; ಚಪಲೆ: ಚಂಚಲೆ; ಬಲ: ಶಕ್ತಿ; ಹೇಳು: ತಿಳಿಸು; ನೇಮ: ಅಪ್ಪಣೆ; ಆಶ್ರಮ: ಕುಟೀರ; ಸರಿ: ಹೊರಡು;

ಪದವಿಂಗಡಣೆ:
ಬಂದು +ಮುನಿಪತಿ +ತಾಯ್ಗೆ +ಕೈಮುಗಿದ್
ಎಂದನ್+ಅಂಬಿಯಲ್ಲಿ+ ಜನಿಸುವ
ನಂದನನು +ಜಾತ್ಯಂಧನ್+ಅಂಬಾಲಿಕೆಗೆ +ಪಾಂಡುಮಯ
ಬಂದ +ಬಳಿಕಿನ+ ಚಪಲೆಗ್+ಅತಿಬಲನ್
ಎಂದು +ಹೇಳಿದು +ತನಗೆ +ನೇಮವೆ
ಎಂದು +ತನ್ನಾಶ್ರಮಕೆ +ಸರಿದನು +ಬಾದರಾಯಣನು

ಅಚ್ಚರಿ:
(೧) ಬಂದು, ಎಂದು – ಪ್ರಾಸ ಪದ

ಪದ್ಯ ೩: ಯೋಜನಗಂಧಿಯು ಯಾರನ್ನು ಕರೆದಳು?

ಮರುಗಿ ಯೋಜನಗಂಧಿ ಚಿಂತೆಯ
ಸೆರೆಗೆ ಸಿಲುಕಿದಳೊಂದು ರಾತ್ರಿಯೊ
ಳರಿದು ನೆನೆದಳು ಪೂರ್ವಸೂಚಿತ ಪುತ್ರ ಭಾಷಿತವ
ಮುರಿದ ಭರತಾನ್ವಯದ ಬೆಸುಗೆಯ
ತೆರನು ತೋರಿತೆ ಪುಣ್ಯವೆನುತೆ
ಚ್ಚರಿತು ನುಡಿದಳು ಮಗನೆ ವೇದವ್ಯಾಸ ಬಹುದೆಂದು (ಆದಿ ಪರ್ವ, ೩ ಸಂಧಿ, ೩ ಪದ್ಯ)

ತಾತ್ಪರ್ಯ:
ಯೋಜನಗಂಧಿಯು ಚಿಂತೆಯ ಬಂದಿಯಾಗಿ ದುಃಖಿಸಿದಳು, ಒಂದಾನೊಂದು ರಾತ್ರಿ ತನ್ನ ಮಗ ವೇದವ್ಯಾಸರು ಕೊಟ್ಟ ಭಾಷೆಯು ನೆನಪಿಗೆ ಬಂತು. ಮುರಿಯುವ ಹಂತದಲ್ಲಿದ್ದ ಭರತವಮ್ಶವನ್ನು ಬೆಸೆಯುವ ಮಾರ್ಗವು ನನಗೆ ತಿಳಿಯಿತು. ಇದು ನನ್ನ ಪುಣ್ಯವೆಂದು ಯೊಚಿಸಿ ಮಗನೇ ವೇದವ್ಯಾಸ ಬಾ ಎಂದಳು.

ಅರ್ಥ:
ಮರುಗು: ತಳಮಳ, ಸಂಕಟ; ಚಿಂತೆ: ಯೋಚನೆ; ಸೆರೆ: ಬಂಧನ; ಸಿಲುಕು: ಸೆರೆಯಾದ ವಸ್ತು, ಬಂಧನಕ್ಕೊಳಗಾದುದು; ರಾತ್ರಿ: ಇರುಳು; ಅರಿ: ತಿಳಿ; ನೆನೆ: ಜ್ಞಾಪಿಸು; ಪೂರ್ವ: ಹಿಂದೆ; ಸೂಚಿತ: ತಿಳಿಸಿದ; ಪುತ್ರ: ಮಗ; ಭಾಷಿತ: ನುಡಿ; ಮುರಿ: ಸೀಳು; ಅನ್ವಯ: ಕುಲ; ಬೆಸುಗೆ: ಒಂದಾಗು; ಪುಣ್ಯ: ಸದಾಚಾರ; ಎಚ್ಚರ: ಗಮನ; ನುಡಿ: ಮಾತು; ಮಗ: ಸುತ; ಬಹುದು: ಬರಬೇಕು, ಆಗಮಿಸು;

ಪದವಿಂಗಡಣೆ:
ಮರುಗಿ +ಯೋಜನಗಂಧಿ +ಚಿಂತೆಯ
ಸೆರೆಗೆ +ಸಿಲುಕಿದಳ್+ಒಂದು +ರಾತ್ರಿಯೊಳ್
ಅರಿದು +ನೆನೆದಳು +ಪೂರ್ವಸೂಚಿತ +ಪುತ್ರ+ ಭಾಷಿತವ
ಮುರಿದ +ಭರತ+ಅನ್ವಯದ +ಬೆಸುಗೆಯ
ತೆರನು +ತೋರಿತೆ +ಪುಣ್ಯವೆನುತ್
ಎಚ್ಚರಿತು +ನುಡಿದಳು +ಮಗನೆ +ವೇದವ್ಯಾಸ +ಬಹುದೆಂದು

ಅಚ್ಚರಿ:
(೧) ರೂಪಕದ ಪ್ರಯೋಗ – ಯೋಜನಗಂಧಿ ಚಿಂತೆಯ ಸೆರೆಗೆ ಸಿಲುಕಿದಳ್

ನುಡಿಮುತ್ತುಗಳು: ಆದಿ ಪರ್ವ ೩ ಸಂಧಿ

  • ಯೋಜನಗಂಧಿ ಚಿಂತೆಯ ಸೆರೆಗೆ ಸಿಲುಕಿದಳ್ – ಪದ್ಯ ೩
  • ಹರಿಣಪಕ್ಷದ ನಳಿನರಿಪುವಿನವೊಲ್ – ಪದ್ಯ ೧೧
  • ಹೆತ್ತವರಿಗೋಲೈಸುವರಿಗೆ ಮಹೋತ್ತಮರಿಗುಳಿದಖಿಳ ಲೋಕದಚಿತ್ತಕಹುದೆನೆ ನಡೆವ ಗುಣ – ಪದ್ಯ ೧೩
  • ತಾವರೆಯ ಮಿತ್ರನ ಕರಗಿ ಕರುವಿನೊಳೆರೆದರೆಂದೆನೆ ಥಳಥಳಿಸಿ ತೊಳಗುವ ತನುಚ್ಛವಿಯ – ಪದ್ಯ ೨೦
  • ಪುಳಕಜಲದಲಿ ನಾದಿ – ಪದ್ಯ ೨೧
  • ಸಕಲಲೋಕದ ತಾಯಲಾ ಜಾಹ್ನವಿ ತರಂಗದಿ ನೋಯಲೀಯದೆ ಮುಳುಗಲೀಯದೆ ಚಾಚಿದಳು ತಡಿಗೆ – ಪದ್ಯ ೨೨
  • ತರಣಿಬಿಂಬದ ಮರಿಯೊ ಕೌಸ್ತುಭವರಮಣಿಯ ಖಂಡದ ಕಣಿಯೊ – ಪದ್ಯ ೨೪
  • ತೃಣವಲಾ ತ್ರೈಲೋಕ್ಯ ರಾಜ್ಯವಗಣಿಸುವೆನೆ – ಪದ್ಯ ೨೫