ಪದ್ಯ ೩೦: ದ್ರೋಣನು ತನ್ನ ಪರಿಚಯವನ್ನು ದ್ವಾರಪಾಲಕನಿಗೆ ಹೇಗೆ ಮಾಡಿದನು?

ಬಂದನೀತನು ದ್ರುಪದ ರಾಯನ
ಮಂದಿರಕೆಯಾ ಬಾಗಿಲವನೊಡ
ನೆಂದನೆಲವೋ ನಾವು ನಿಮ್ಮರಸಂಗೆ ಪೂರ್ವದಲಿ
ಸಂದ ಮಿತ್ರರು ದ್ರೋಣಮುನಿಪತಿ
ಯೆಂದು ನಮ್ಮಭಿದಾನ ನೀ ಹೇ
ಳೆಂದು ಕಳುಹಲು ಬಂದು ಬಿನ್ನಹ ಮಾಡಿದನು ಹದನ (ಆದಿ ಪರ್ವ, ೬ ಸಂಧಿ, ೩೦ ಪದ್ಯ)

ತಾತ್ಪರ್ಯ:
ದ್ರೋಣನು ದ್ರುಪದರಾಜನ ಅರಮನೆಗೆ ಬಮ್ದು, ಬಾಗಿಲು ಕಾಯುತ್ತಿದ್ದವನಿಗೆ ಎಲವೋ, ನಾವು ನಿಮ್ಮ ರಾಜನಿಗೆ ಪೂರ್ವ ಕಾಲದ ಸ್ನೇಹಿತರು ಅವನ ಆಪ್ತ ಮಿತ್ರರು. ದ್ರೋಣನೆನ್ನುವುದು ನನ್ನ ಹೆಸರು, ನಿಮ್ಮ ರಾಜನಿಗೆ ಹೇಳು ಎನ್ನಲು, ದೂತನು ಬಂದು ದ್ರುಪದನಿಗೆ ದ್ರೋಣನ ಮಾತುಗಳನ್ನು ತಿಳಿಸಿದನು.

ಅರ್ಥ:
ಬಂದು: ಆಗಮಿಸು; ರಾಯ: ರಾಜ; ಮಂದಿರ: ಆಲಯ; ಬಾಗಿಲು: ಕದ; ಅರಸ: ರಾಜ; ಪೂರ್ವ: ಹಿಂದೆ; ಮಿತ್ರ: ಸ್ನೇಹಿತ; ಮುನಿ: ಋಷಿ; ಅಭಿದಾನ: ಹೆಸರು; ಹೇಳು: ತಿಳಿಸು; ಕಳುಹು: ತೆರಳು; ಬಿನ್ನಹ: ಕೋರಿಕೆ; ಹದ: ಸ್ಥಿತಿ;

ಪದವಿಂಗಡಣೆ:
ಬಂದನ್+ಈತನು +ದ್ರುಪದ +ರಾಯನ
ಮಂದಿರಕೆ+ಆ+ ಬಾಗಿಲವನೊಡನ್
ಎಂದನ್+ಎಲವೋ +ನಾವು +ನಿಮ್ಮರಸಂಗೆ +ಪೂರ್ವದಲಿ
ಸಂದ +ಮಿತ್ರರು+ ದ್ರೋಣ+ಮುನಿಪತಿ
ಎಂದು +ನಮ್ಮಭಿದಾನ +ನೀ +ಹೇ
ಳೆಂದು +ಕಳುಹಲು+ ಬಂದು+ ಬಿನ್ನಹ +ಮಾಡಿದನು +ಹದನ

ಅಚ್ಚರಿ:
(೧) ರಾಯ, ಅರಸ – ಸಮಾನಾರ್ಥಕ ಪದ

ಪದ್ಯ ೪೧: ಗಾಂಧಾರಿಯ ಮತ್ಸರ ಭಾವವು ಹೇಗೆ ತೋರಿತು?

ಕೇಳಿದಳು ಗಾಂಧಾರಿ ಕುಂತಿಗೆ
ಬಾಲಕೇಳಿ ವಿನೋದವೇ ಕೈ
ಮೇಲವಿಸಿತೇ ಮುನ್ನ ಹಾ ತಪ್ಪೇನು ತಪ್ಪೇನು
ಕಾಳುಮಾಡಿದನೆನಗೆ ಮುನಿಪತಿ
ಠೌಳಿಕಾರನಲಾ ಸುಡೀ ಗ
ರ್ಭಾಳಿಗಲನೆಂದಬಲೆ ಹೊಸೆದಳು ಬಸುರನೊಡೆಮುರಿದು (ಆದಿ ಪರ್ವ, ೪ ಸಂಧಿ, ೪೧ ಪದ್ಯ)

ತಾತ್ಪರ್ಯ:
ಕುಂತಿಗೆ ಮಗನಾದನೆಂಬ ಸುದ್ದಿಯನ್ನು ಗಾಂಧಾರಿಯು ಕೇಳಿದಳು. ನನಗಿಂತ ಮೊದಲೇ ಮಗುವನ್ನಾಡಿಸುವ ಸಂತೋಷವು ಕುಂತಿಗೆ ದೊರಕಿತೇ, ಇದರಲ್ಲಿ ತಪ್ಪೇನು, ತಪ್ಪೇನು, ಆ ಮುನಿ ವೇದವ್ಯಾಸನು ಮೋಸಗಾರ, ನನ್ನನ್ನು ಕೇದಿಸಿದ. ಈ ನೂರು ಗರ್ಭಗಳನ್ನು ಸುಡಬೇಕೆಂದು ತನ್ನ ಹೊಟ್ಟೆಯನ್ನು ಹಿಸುಕಿಕೊಂಡಳು.

ಅರ್ಥ:
ಕೇಳು: ಆಲಿಸು; ಬಾಲ: ಮಗು; ಕೇಳಿ: ವಿನೋದ, ಕ್ರೀಡೆ; ವಿನೋದ: ಸಂತೋಷ, ಹಿಗ್ಗು; ಕೈ: ಹಸ್ತ; ಮೇಳ: ಸೇರುವಿಕೆ; ಮುನ್ನ: ಮೊದಲು; ತಪ್ಪು: ಸರಿಯಲ್ಲದ್ದು; ಕಾಳು: ಕೆಟ್ಟದ್ದು; ಮುನಿ: ಋಷಿ; ಠೌಳಿ: ಮೋಸ, ವಂಚನೆ; ಸುಡು: ದಹಿಸು; ಗರ್ಭ: ಹೊಟ್ಟೆ; ಅಬಲೆ: ಹೆಣ್ಣು; ಹೊಸೆ: ಕಿವುಚು, ಕದಡು; ಬಸುರು: ಹೊಟ್ಟೆ; ಮುರಿ: ಸೀಳು;

ಪದವಿಂಗಡಣೆ:
ಕೇಳಿದಳು +ಗಾಂಧಾರಿ +ಕುಂತಿಗೆ
ಬಾಲಕೇಳಿ +ವಿನೋದವೇ +ಕೈ
ಮೇಳವಿಸಿತೇ +ಮುನ್ನ+ ಹಾ +ತಪ್ಪೇನು +ತಪ್ಪೇನು
ಕಾಳುಮಾಡಿದನ್+ಎನಗೆ +ಮುನಿಪತಿ
ಠೌಳಿಕಾರನಲಾ +ಸುಡೀ +ಗ
ರ್ಭಾಳಿಗಳನೆಂದ್+ಅಬಲೆ +ಹೊಸೆದಳು +ಬಸುರನೊಡೆ+ಮುರಿದು

ಅಚ್ಚರಿ:
(೧) ಕೇಳಿ, ಠೌಳಿ, ಗರ್ಭಾಳಿ, ಬಾಲಕೇಳಿ – ಪ್ರಾಸ ಪದಗಳು
(೨) ವ್ಯಾಸರನ್ನು ಬಯ್ಯುವ ಪರಿ – ಕಾಳುಮಾಡಿದನೆನಗೆ ಮುನಿಪತಿ ಠೌಳಿಕಾರನಲಾ

ಪದ್ಯ ೮: ವ್ಯಾಸರು ಹುಟ್ಟುವ ಮಕ್ಕಳ ಬಗ್ಗೆ ಏನು ಹೇಳಿದರು?

ಬಂದು ಮುನಿಪತಿ ತಾಯ್ಗೆ ಕೈಮುಗಿ
ದೆಂದನಂಬಿಯಲ್ಲಿ ಜನಿಸುವ
ನಂದನನು ಜಾತ್ಯಂಧನಂಬಾಲಿಕೆಗೆ ಪಾಂಡುಮಯ
ಬಂದ ಬಳಿಕಿನ ಚಪಲೆಗತಿಬಲ
ನೆಂದು ಹೇಳಿದು ತನಗೆ ನೇಮವೆ
ಯೆಂದು ತನ್ನಾಶ್ರಮಕೆ ಸರಿದನು ಬಾದರಾಯಣನು (ಆದಿ ಪರ್ವ, ೩ ಸಂಧಿ, ೮ ಪದ್ಯ)

ತಾತ್ಪರ್ಯ:
ಮುನಿಶ್ರೇಷ್ಠನಾದ ಬಾದರಾಯಣನು ತಾಯಿಗೆ ಕೈಮುಗಿದು ಅಂಬಿಕೆಯಲ್ಲಿ ಜನಿಸುವ ಮಗನು ಹುಟ್ಟುಕುರುಡನಾಗುವನು, ಅಂಬಾಲಿಕೆಯ ಮಗನ ಮೈ ಬಿಳುಪಾಗಿರುತ್ತದೆ, ಆಮೇಲೆ ಬಂದ ಚಪಲೆಗೆ ಹುಟ್ಟುವ ಮಗನು ಮಹಾಬಲಶಾಲಿಯಾಗುವನು ಎಂದನು. ಬಳಿಕ ತನಗೆ ಅಪ್ಪಣೆಯೇ ಎಂದು ಹೇಳಿ ತನ್ನ ಆಶ್ರಮಕ್ಕೆ ಹೊರಟುಹೋದನು.

ಅರ್ಥ:
ಮುನಿಪ: ಋಷಿ; ತಾಯಿ: ಮಾತೆ; ಕೈಮುಗಿ: ನಮಸ್ಕರಿಸು, ಎರಗು; ಜನಿಸು: ಹುಟ್ಟು; ಅಂಧ: ಕುರುಡ; ಪಾಂಡು: ಬಿಳಿಯ ಬಣ್ಣ, ಧವಳವರ್ಣ; ಮಯ: ತುಂಬಿದ; ಬಳಿಕ: ನಂತರ; ಚಪಲೆ: ಚಂಚಲೆ; ಬಲ: ಶಕ್ತಿ; ಹೇಳು: ತಿಳಿಸು; ನೇಮ: ಅಪ್ಪಣೆ; ಆಶ್ರಮ: ಕುಟೀರ; ಸರಿ: ಹೊರಡು;

ಪದವಿಂಗಡಣೆ:
ಬಂದು +ಮುನಿಪತಿ +ತಾಯ್ಗೆ +ಕೈಮುಗಿದ್
ಎಂದನ್+ಅಂಬಿಯಲ್ಲಿ+ ಜನಿಸುವ
ನಂದನನು +ಜಾತ್ಯಂಧನ್+ಅಂಬಾಲಿಕೆಗೆ +ಪಾಂಡುಮಯ
ಬಂದ +ಬಳಿಕಿನ+ ಚಪಲೆಗ್+ಅತಿಬಲನ್
ಎಂದು +ಹೇಳಿದು +ತನಗೆ +ನೇಮವೆ
ಎಂದು +ತನ್ನಾಶ್ರಮಕೆ +ಸರಿದನು +ಬಾದರಾಯಣನು

ಅಚ್ಚರಿ:
(೧) ಬಂದು, ಎಂದು – ಪ್ರಾಸ ಪದ

ಪದ್ಯ ೫೪: ವೇದವ್ಯಾಸರು ಅರ್ಜುನನಿಗೆ ಏನನ್ನು ತಿಳಿಸಿದರು?

ನರನ ಚಿತ್ತಗ್ಲಾನಿಯನು ಪರಿ
ಹರಿಸಿದನು ಶೂಲದಲಿ ಮುಂಕೊಂ
ಡರಿ ಬಲವನಿರಿದಾತನಾರೆನಲಿಂದುಧರನೆಂದು
ಹರನ ಕರುಣದ ಹದನನೀತಂ
ಗೊರೆದು ಶತರುದ್ರೀಯವನು ವಿ
ಸ್ತರಿಸಿ ಬಿಜಯಂಗೈದನಾ ಮುನಿಪತಿ ನಿಜಾಶ್ರಮಕೆ (ದ್ರೋಣ ಪರ್ವ, ೧೯ ಸಂಧಿ, ೫೪ ಪದ್ಯ)

ತಾತ್ಪರ್ಯ:
ವೇದವ್ಯಾಸರು ತನ್ನ ಮಾತುಗಳಿಂದ ಅರ್ಜುನನ ಆಯಾಸ ನಿರುತ್ಸಾಹಗಳನ್ನು ಕಳೆದನು. ತ್ರಿಶೂಲದಿಂದ ಶತ್ರುಬಲವನ್ನು ಕೊಂದವನಾರೆಂದು ಕೇಳಲು ಶಿವನೇ ಸಂಹರಿಸಿದನೆಂದು ತಿಳಿಸಿ ಶತರುದ್ರೀಯವನ್ನು ಅರ್ಜುನನಿಗೆ ವಿವರಿಸಿ ತನ್ನ ಆಶ್ರಮಕ್ಕೆ ಹಿಂದಿರುಗಿದನು.

ಅರ್ಥ:
ನರ: ಅರ್ಜುನ; ಚಿತ್ತ: ಮನಸ್ಸು; ಗ್ಲಾನಿ:ಬಳಲಿಕೆ, ದಣಿವು; ಪರಿಹರಿಸು: ನಿವಾರಿಸು; ಶೂಲ: ಈಟಿ; ಮುಂಕೊಂಡು: ಮುಂದೆ ನೆಡೆದು; ಅರಿ: ವೈರಿ; ಬಲ: ಸೈನ್ಯ; ಇರಿ: ಚುಚ್ಚು; ಇಂದುಧರ: ಶಂಕರ; ಹರ: ಈಶ್ವರ; ಕರುಣ: ದಯೆ; ಹದ: ರೀತಿ; ಒರೆ: ಬಳಿ, ಸವರು; ಶತ: ನೂರು; ವಿಸ್ತರ: ಹಬ್ಬುಗೆ; ಬಿಜಯಂಗೈ: ದಯಮಾಡಿಸು; ಮುನಿ: ಋಷಿ; ನಿಜ: ತನ್ನ; ಆಶ್ರಮ: ಕುಟೀರ;

ಪದವಿಂಗಡಣೆ:
ನರನ +ಚಿತ್ತ+ಗ್ಲಾನಿಯನು +ಪರಿ
ಹರಿಸಿದನು +ಶೂಲದಲಿ +ಮುಂಕೊಂಡ್
ಅರಿ +ಬಲವನ್+ಇರಿದಾತನ್+ಆರ್+ಎನಲ್+ಇಂದುಧರನೆಂದು
ಹರನ +ಕರುಣದ +ಹದನನ್+ಈತಂಗ್
ಒರೆದು +ಶತರುದ್ರೀಯವನು +ವಿ
ಸ್ತರಿಸಿ +ಬಿಜಯಂಗೈದನ್+ಆ+ ಮುನಿಪತಿ+ ನಿಜಾಶ್ರಮಕೆ

ಅಚ್ಚರಿ:
(೧) ಇಂದುಧರ, ಹರ – ಶಿವನನ್ನು ಹೇಳುವ ಪದಗಳು

ಪದ್ಯ ೨೧: ವ್ಯಾಸರು ಯಾರನ್ನು ಸಂತೈಸಿದರು?

ಬಂದು ವೇದವ್ಯಾಸಮುನಿ ನೃಪ
ಮಂದಿರವ ಹೊಗಲೆದ್ದು ಪದದಲಿ
ಸಂದಣಿಸಿ ಚಾಚಿದನು ಮಕುಟವನವನಿಪಾಲಕನು
ನೊಂದವರು ಸತ್ಸಂಗತಿಯಲಾ
ನಂದವಡೆವುದೆನುತ್ತ ಮುನಿಪತಿ
ಕಂದು ಮೋರೆಯ ಮಹಿಪತಿಯ ನೆಗಹಿದನು ಕರುಣದಲಿ (ದ್ರೋಣ ಪರ್ವ, ೭ ಸಂಧಿ, ೨೧ ಪದ್ಯ)

ತಾತ್ಪರ್ಯ:
ವೇದವ್ಯಾಸ ಮುನಿಗಳು ರಾಜನ ಮಂದಿರಕ್ಕೆ ಬಂದನು. ಯುಧಿಷ್ಠಿರ ಎದ್ದು ಅವರ ಪಾದಕಮಲಗಳ ಮೇಲೆ ತನ್ನ ಕಿರೀಟವನ್ನು ಹರಡಿ ನಮಸ್ಕರಿಸಿದನು. ಯುಧಿಷ್ಠಿರ ನೀವು ಬಹಳ ನೊಂದಿರುವಿರಿ, ಈ ಸಮಯವನ್ನು ಸತ್ಕಥಾ ಪ್ರಸಂಗದಿಂದ ಕಳೆಯಬೇಕೆ ಎಂದು ಹೇಳುತ್ತಾ ವ್ಯಾಸನು ಬಾಡಿದ ಮುಖದ ಧರ್ಮಜನನ್ನೆತ್ತಿದನು.

ಅರ್ಥ:
ಮುನಿ: ಋಷಿ; ನೃಪ: ರಾಜ; ನೃಪಮಂದಿರ: ಅರಮನೆ; ಹೊಗಲು: ಬರಲು; ಎದ್ದು: ಮೇಲೇಳು; ಪದ: ಚರಣ; ಸಂದಣಿಸು: ಗುಂಪು; ಚಾಚು: ಹರಡು; ಮಕುಟ: ಕಿರೀಟ; ಅವನಿಪಾಲಕ: ರಾಜ; ನೊಂದು: ನೋವು; ಸಂಗತಿ: ವಿಷಯ, ವಿಚಾರ; ಆನಂದ: ಸಂತಸ; ಕಂದು: ಬಾಡು; ಮೋರೆ: ಮುಖ; ಮಹಿಪತಿ: ರಾಜ; ನೆಗಹು: ತಬ್ಬಿಕೊ; ಕರುಣ: ದಯೆ;

ಪದವಿಂಗಡಣೆ:
ಬಂದು+ ವೇದವ್ಯಾಸ+ಮುನಿ +ನೃಪ
ಮಂದಿರವ +ಹೊಗಲ್+ಎದ್ದು +ಪದದಲಿ
ಸಂದಣಿಸಿ +ಚಾಚಿದನು +ಮಕುಟವನ್+ಅವನಿಪಾಲಕನು
ನೊಂದವರು +ಸತ್ಸಂಗತಿಯಲ್
ಆನಂದವಡೆವುದ್+ಎನುತ್ತ +ಮುನಿಪತಿ
ಕಂದು +ಮೋರೆಯ +ಮಹಿಪತಿಯ +ನೆಗಹಿದನು +ಕರುಣದಲಿ

ಅಚ್ಚರಿ:
(೧) ಯುಧಿಷ್ಠಿರನ ಸ್ಥಿತಿಯನ್ನು ಚಿತ್ರಿಸುವ ಪರಿ – ಮುನಿಪತಿ ಕಂದು ಮೋರೆಯ ಮಹಿಪತಿಯ ನೆಗಹಿದನು ಕರುಣದಲಿ
(೨) ನಮಸ್ಕರಿಸಿದನು ಎಂದು ಹೇಳುವ ಪರಿ – ಪದದಲಿ ಸಂದಣಿಸಿ ಚಾಚಿದನು ಮಕುಟವನವನಿಪಾಲಕನು

ಪದ್ಯ ೧೧: ಧರ್ಮಜನು ದುರ್ವಾಸರನ್ನು ಹೇಗೆ ಬರೆಮಾಡಿದನು?

ಮರುದಿವಸ ಸತಿಯುಂಡ ಸಮಯವ
ನರಿದು ಮುನಿಪತಿ ಬರಲು ಕಪಟದ
ನಿರಿಗೆಯನು ಬಲ್ಲನೆ ಯುಧಿಷ್ಠಿರನೆದ್ದು ಮುನಿಸಹಿತ
ಕಿರಿದೆಡೆಯಲಿದಿರ್ಗೊಂಡು ಭಕ್ತಿಯ
ಹೊರೆಯೊಳಗೆ ಕುಸಿದಂತೆ ನಡೆತಂ
ದೆರಗಿದನು ಮುನಿಪದಕೆ ತನ್ನನುಜಾತರೊಡಗೂಡಿ (ಅರಣ್ಯ ಪರ್ವ, ೧೭ ಸಂಧಿ, ೧೧ ಪದ್ಯ)

ತಾತ್ಪರ್ಯ:
ಮರುದಿವಸ ದ್ರೌಪದಿಯ ಊಟವಾದುದನ್ನು ತಿಳಿದು, ದೂರ್ವಾಸರು ಯುಧಿಷ್ಠಿರನ ಕುಟೀರಕ್ಕೆ ಬರಲು, ಕಪಟದ ವಾಸನೆಯನ್ನೇ ಅರಿಯದ ಯುಧಿಷ್ಠಿರನು, ತನ್ನ ತಮ್ಮಂದಿರು ಮತ್ತು ಧೌಮ್ಯನೊಡನೆ ಎದ್ದು ಬಂದು ತನ್ನ ಕುಟೀರಕ್ಕೆ ಸ್ವಲ್ಪದೂರದಲ್ಲೇ ಅವರನ್ನೆದುರುಗೊಂಡು, ಭಕ್ತಿಯ ಭಾರದಿಂದ ಕುಸಿಯುತ್ತಿರುವನೋ ಎಂಬಂತೆ ನಮಸ್ಕರಿಸಿದನು.

ಅರ್ಥ:
ಮರು: ಮುಂದಿನ, ಮಾರನೆಯ; ದಿವಸ: ದಿನ, ವಾರ; ಸತಿ: ಹೆಂಡತಿ; ಉಂಡು: ತಿನ್ನು; ಸಮಯ: ಕಾಲ; ಅರಿ: ತಿಳಿ; ಮುನಿಪತಿ: ಋಷಿ; ಬರಲು: ಆಗಮಿಸು; ಕಪಟ: ಮೋಸ; ನಿರಿಗೆ: ಸುಕ್ಕು; ಬಲ್ಲನೆ: ತಿಳಿ; ಎದ್ದು: ಮೇಲೇಳು; ಮುನಿ: ಋಷಿ; ಸಹಿತ: ಜೊತೆ; ಕಿರಿ, ಎಡೆ: ಹತ್ತಿರ; ಇದಿರ್ಗೊಂಡು: ಎದುರುಬಂದು; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಹೊರೆ: ಭಾರ; ಕುಸಿ: ಕೆಳಕ್ಕೆ ಬೀಳು; ಎರಗು: ನಮಸ್ಕರಿಸು; ಪದ: ಪಾದ, ಚರಣ; ಅನುಜ: ತಮ್ಮ; ಒಡಗೂಡು: ಜೊತೆ;

ಪದವಿಂಗಡಣೆ:
ಮರು+ದಿವಸ +ಸತಿಯುಂಡ +ಸಮಯವನ್
ಅರಿದು +ಮುನಿಪತಿ+ ಬರಲು +ಕಪಟದ
ನಿರಿಗೆಯನು +ಬಲ್ಲನೆ +ಯುಧಿಷ್ಠಿರನ್+ಎದ್ದು+ ಮುನಿ+ಸಹಿತ
ಕಿರಿದೆಡೆಯಲ್+ಇದಿರ್ಗೊಂಡು+ ಭಕ್ತಿಯ
ಹೊರೆಯೊಳಗೆ+ ಕುಸಿದಂತೆ +ನಡೆತಂದ್
ಎರಗಿದನು +ಮುನಿ+ಪದಕೆ+ ತನ್+ಅನುಜಾತರ್+ಒಡಗೂಡಿ

ಅಚ್ಚರಿ:
(೧) ನಮಸ್ಕರಿಸಿದ ಪರಿ – ಭಕ್ತಿಯಹೊರೆಯೊಳಗೆ ಕುಸಿದಂತೆ ನಡೆತಂದೆರಗಿದನು ಮುನಿಪದಕೆ

ಪದ್ಯ ೫: ದೂರ್ವಾಸ ಮುನಿಗಳನ್ನು ಹೇಗೆ ಗೌರವಿಸಲಾಯಿತು?

ಹೊಳೆವ ಹೊಂಗಳಶದಲಿ ತುಂಬಿದ
ಜಲದಲಾ ಮುನಿಪತಿಯ ಪಾದವ
ತೊಳೆದು ಮಧುಪರ್ಕಾದಿ ಮನ್ನಣೆಗಳನು ವಿಸ್ತರಿಸಿ
ಬಳಿಕ ಕುಶಲವ ಕೇಳ್ದು ಮುನಿಸಂ
ಕುಲವನೊಲಿದಾದರಿಸಲಿತ್ತಲು
ಒಳಗೆ ಮಿಗೆಯೆಡೆಯಾಗಲಾರೋಗಣೆಗೆ ಮುನಿಪೊಕ್ಕ (ಅರಣ್ಯ ಪರ್ವ, ೧೭ ಸಂಧಿ, ೫ ಪದ್ಯ)

ತಾತ್ಪರ್ಯ:
ಬಂಗಾರದ ಕಲಶದಲ್ಲಿದ್ದ ನೀರಿನಿಂದ ಮುನಿಯ ಪಾದಗಳನ್ನು ತೊಳೆದು, ಮಧುಪರ್ಕಾದಿಗಳಿಂದ
ದುರ್ಯೋಧನನು ಉಪಚರಿಸಿದನು. ನಂತರ ಒಳಗೆ ಆಡಿಗೆಯಾಗಿರಲು, ದೂರ್ವಾಸ ಮುನಿಗಳು ಊಟಕ್ಕೆ ಕುಳಿತರು.

ಅರ್ಥ:
ಹೊಳೆ: ಪ್ರಕಾಶ; ಹೊಂಗಳಶ: ಚಿನ್ನದ ಕಳಸ; ತುಂಬಿದ: ಭರ್ತಿಯಾದ; ಜಲ: ನೀರು; ಮುನಿ: ಋಷಿ; ಪಾದ: ಚರಣ; ತೊಳೆ: ಸ್ವಚ್ಛಮಾಡು, ಶುದ್ಧಗೊಳಿಸು; ಮಧು: ಜೇನುತುಪ್ಪ; ಮಧುಪರ್ಕ: ಮೊಸರು, ತುಪ್ಪ, ಹಾಲು, ಜೇನು ತುಪ್ಪ, ಸಕ್ಕರೆ – ಈ ಐದರ ಮಿಶ್ರಣ; ಆದಿ: ಮುಂತಾದ; ಮನ್ನಣೆ: ಗೌರವ; ವಿಸ್ತರಿಸು: ಹರಡು; ಬಳಿಕ: ನಂತರ; ಕುಶಲ: ಕ್ಷೇಮ; ಕೇಳು: ಆಲಿಸು; ಸಂಕುಲ: ಗುಂಪು; ಒಲಿ: ಪ್ರೇಮ; ಆದರಿಸು: ಗೌರವಿಸು; ಎಡೆ: ನೈವೇದ್ಯ; ಆರೋಗಣೆ: ಊಟ, ಭೋಜನ; ಪೊಕ್ಕು: ಸೇರು;

ಪದವಿಂಗಡಣೆ:
ಹೊಳೆವ+ ಹೊಂಗಳಶದಲಿ +ತುಂಬಿದ
ಜಲದಲ್+ಆ+ ಮುನಿಪತಿಯ+ ಪಾದವ
ತೊಳೆದು +ಮಧುಪರ್ಕಾದಿ +ಮನ್ನಣೆಗಳನು+ ವಿಸ್ತರಿಸಿ
ಬಳಿಕ+ ಕುಶಲವ +ಕೇಳ್ದು +ಮುನಿ+ಸಂ
ಕುಲವನ್+ಒಲಿದ್+ಆದರಿಸಲ್+ಇತ್ತಲು
ಒಳಗೆ+ ಮಿಗೆ+ಎಡೆಯಾಗಲ್+ಆರೋಗಣೆಗೆ +ಮುನಿ+ಪೊಕ್ಕ

ಅಚ್ಚರಿ:
(೧) ಒಂದೇ ಅಕ್ಷರದ ಜೋಡಿ ಪದಗಳು: ಮಧುಪರ್ಕಾದಿ ಮನ್ನಣೆಗಳನು, ಕುಶಲವ ಕೇಳ್ದು, ಹೊಳೆವ ಹೊಂಗಳಶದಲಿ

ಪದ್ಯ ೨: ಧರ್ಮರಾಜನನ್ನು ನೋಡಲು ಯಾರು ಬಂದರು?

ಕಳುಹಿದನು ಲೋಮಶನನವನೀ
ತಳಕೆ ಸುರಪತಿ ಸಿತಹಯನ ಕೌ
ಶಲವನೊಡಹುಟ್ಟಿದರಿಗರುಹಲಿಕಭ್ರಮಾರ್ಗದಲಿ
ಇಳಿದನಾ ಮುನಿಪತಿ ಧರಿತ್ರೀ
ತಳಕೆ ಕಾಮ್ಯಕನಾಮ ವನದಲಿ
ತಳಿರಗೂಡಾರದಲಿ ಕಂಡನು ಧರ್ಮನಂದನನ (ಅರಣ್ಯ ಪರ್ವ, ೧೦ ಸಂಧಿ, ೨ ಪದ್ಯ)

ತಾತ್ಪರ್ಯ:
ದೇವಲೋಕಕ್ಕೆ ಹೋಗಿದ್ದ ಲೋಮಶ ಮಹರ್ಷಿಗೆ ಅರ್ಜುನನ ವಿಜಯವನ್ನು ಧರ್ಮಜನಿಗೆ ತಿಳಿಸಲು ದೇವೇಂದ್ರನು ಧರ್ಮರಾಜನ ಬಳಿಗೆ ಕಳುಹಿಸಿದನು. ಲೋಮಶನು ಆಕಾಶಮಾರ್ಗವಾಗಿ ಕಾಮಾಕ್ಯವನದಲ್ಲಿ ಇಳಿದು ಪರ್ಣಕುಟೀರದಲ್ಲಿದ್ದ ಧರ್ಮರಾಜನನ್ನು ಕಂಡನು.

ಅರ್ಥ:
ಕಳುಹು: ತೆರಳು; ತಳ: ಕೆಳಗು, ಪಾತಾಳ; ಸುರಪತಿ: ಇಂದ್ರ; ಸಿತಹಯ: ಬಿಳಿಯ ಕುದುರೆ; ಕೌಶಲ: ಚದುರು; ಒಡಹುಟ್ಟು: ಜೊತೆಗೆ ಜನ್ಮತಾಳು; ಅರುಹು: ಹೇಳು; ಅಭ್ರ: ಆಗಸ; ಮಾರ್ಗ: ದಾರಿ; ಇಳಿ: ಕೆಳಗೆ ಬಾ; ಮುನಿ: ಋಷಿ; ಪತಿ: ಒಡೆಯ; ಧರಿತ್ರೀ: ಭೂಮಿ; ವನ: ಕಾಡು; ನಾಮ: ಹೆಸರು; ತಳಿರಗೂಡು: ಪರ್ಣಕುಟೀರ; ಕಂಡು: ನೋಡು; ನಂದನ: ಮಗ; ಅವನೀ: ಭೂಮಿ;

ಪದವಿಂಗಡಣೆ:
ಕಳುಹಿದನು +ಲೋಮಶನನ್+ಅವನೀ
ತಳಕೆ+ ಸುರಪತಿ +ಸಿತಹಯನ +ಕೌ
ಶಲವನ್+ಒಡಹುಟ್ಟಿದರಿಗ್+ಅರುಹಲಿಕ್+ಅಭ್ರ+ಮಾರ್ಗದಲಿ
ಇಳಿದನಾ+ ಮುನಿಪತಿ+ ಧರಿತ್ರೀ
ತಳಕೆ +ಕಾಮ್ಯಕನಾಮ+ ವನದಲಿ
ತಳಿರಗೂಡಾರದಲಿ+ ಕಂಡನು +ಧರ್ಮನಂದನನ

ಅಚ್ಚರಿ:
(೧) ಅವನೀತಳ, ಧರಿತ್ರೀತಳ – ಭೂಮಿಯನ್ನು ಕರೆದ ಪರಿ
(೨) ಅರ್ಜುನನನ್ನು ಕರೆದ ಪರಿ – ಸಿತಹಯನ
(೩) ಮುನಿಪತಿ, ಸುರಪತಿ – ಪ್ರಾಸ ಪದಗಳು

ಪದ್ಯ ೭೫: ನಾರದರು ಧರ್ಮರಾಯನಿಗೇನು ಹೇಳಿದರು?

ಆ ಹರಿಯೆ ನಿಮಗಿಂದು ಜೀವ
ಸ್ನೇಹಿತನು ನಿಮಗಾವ ಚಿಂತೆ ವಿ
ಮೋಹ ಚೇಷ್ಟೆಗಳಿವನ ವಧೆಗೋ ಬಲ್ಲರಾರಿದನು
ಊಹಿಸಲು ಬೇಡೆಂದು ಮುನಿಪತಿ
ಗಾಹಿನಲಿ ಬೇಡೆಂದು ಘನ ಸ
ನ್ನಾಹರೆಚ್ಚಾಡಿದರು ಶಿಶುಪಾಲಕ ಮುರಾಂತಕರು (ಸಭಾ ಪರ್ವ, ೧೧ ಸಂಧಿ, ೭೫ ಪದ್ಯ)

ತಾತ್ಪರ್ಯ:
ನಾರದರು ಧರ್ಮರಾಯನ ಪ್ರಶ್ನೆಯನ್ನು ಉತ್ತರಿಸುತ್ತಾ, ಪರಮಾತ್ಮ ಕೃಷ್ಣನು ನಿಮಗೆ ಜೀವಸ್ನೇಹಿತನಾಗಿರಲು ನಿಮಗೆ ಯಾವ ಚಿಂತೆಯೂ ಬೇಡ. ಈ ಉತ್ಪಾತಗಳು ಶಿಶುಪಾಲನ ವಧೆಗೋ ಇನ್ನೇತಕ್ಕೋ ಎಂದು ಬಲ್ಲವರಾರು? ನೀನು ಊಹಿಸಲು ಹೋಗಬೇಡ ಎಂದು ನಾರದರು ಗಂಭೀರವಾಗಿಯೇ ಧರ್ಮರಾಯನಿಗೆ ಹೇಳಿದರು. ಶಸ್ತ್ರಸನ್ನದ್ಧರಾದ ಶ್ರೀಕೃಷ್ಣ ಶಿಶುಪಾಲರು ಯುದ್ಧ ಮಾಡಿದರು.

ಅರ್ಥ:
ಹರಿ: ವಿಷ್ಣು; ಜೀವ: ಉಸಿರು, ಬದುಕು; ಸ್ನೇಹಿತ: ಮಿತ್ರ; ಚಿಂತೆ: ಯೋಚನೆ; ವಿಮೋಹ: ಭ್ರಮೆ, ಭ್ರಾಂತಿ; ಚೇಷ್ಟೆ: ಚೆಲ್ಲಾಟ; ವಧೆ: ಸಾವು; ಬಲ್ಲರು: ತಿಳಿದವರು; ಊಹೆ: ಎಣಿಕೆ, ಅಂದಾಜು; ಮುನಿ: ಋಷಿ; ಮುನಿಪತಿ: ನಾರದ; ಗಾಹು: ತಿಳುವಳಿಕೆ, ಮೋಸ, ವಂಚನೆ; ಘನ: ಮಹತ್ತ್ವವುಳ್ಳ; ಸನ್ನಾಹ: ಬಂಧನ; ಎಚ್ಚು: ಬಾಣಪ್ರಯೋಗ ಮಾಡು; ಅಂತಕ: ಸಾವು, ಮೃತ್ಯುದೇವತೆ;

ಪದವಿಂಗಡಣೆ:
ಆ +ಹರಿಯೆ +ನಿಮಗಿಂದು +ಜೀವ
ಸ್ನೇಹಿತನು +ನಿಮಗಾವ+ ಚಿಂತೆ +ವಿ
ಮೋಹ +ಚೇಷ್ಟೆಗಳ್+ಇವನ +ವಧೆಗೋ +ಬಲ್ಲರಾರ್+ಇದನು
ಊಹಿಸಲು +ಬೇಡೆಂದು +ಮುನಿಪತಿ
ಗಾಹಿನಲಿ+ ಬೇಡೆಂದು +ಘನ +ಸ
ನ್ನಾಹರ್+ಎಚ್ಚಾಡಿದರು +ಶಿಶುಪಾಲಕ+ ಮುರಾಂತಕರು

ಅಚ್ಚರಿ:
(೧) ಕೃಷ್ಣನ ಲೀಲೆಯನ್ನು ಹೇಳುವ ಪರಿ – ವಿಮೋಹ ಚೇಷ್ಟೆಗಳಿವನ ವಧೆಗೋ ಬಲ್ಲರಾರಿದನು

ಪದ್ಯ ೨೨: ಪಾಂಡವರು ನಾರದರನ್ನು ಹೇಗೆ ಬರೆಮಾಡಿಕೊಂಡರು?

ಬಂದನಿವರೋಲಗಕೆ ಗಗನದಿ
ನಿಂದುಮಂಡಲವಿಳಿವ ವೋಲ್ ನೃಪ
ವೃಂದವೆದ್ದಭಿನಮಿಸಿದುದು ಪದಯುಗಕೆ ಮುನಿಪತಿಯ
ಇಂದು ಧನ್ಯರು ನಾವಲಾ ಮುನಿ
ವಂದ್ಯದರ್ಶನವಾಯ್ತಪೂರ್ವವಿ
ದೆಂದು ಕುಂತೀತನುಜರಿದಿರೆದ್ದಂಘ್ರಿಗೆರಗಿದರು (ಆದಿ ಪರ್ವ, ೧೮ ಸಂಧಿ, ೨೨ ಪದ್ಯ)

ತಾತ್ಪರ್ಯ:
ನಾರದರು ಗಗನದಿಂದ ಚಂದ್ರಮಂಡಲವು ಇಳಿದುಬಂದಂತೆ ಪಾಂಡವರ ಸಭೆಗೆ ಬರಲು, ಅಲ್ಲಿ ನೆರೆದಿದ್ದ ರಾಜರೆಲ್ಲರು ಎದ್ದು ಅವರಿಗೆ ಅಭಿನಮಿಸಿದರು. ಪಾಂಡವರು, ಇಂದು ನಾವು ಪಡೆಯಬೇಕಾದುದನ್ನು ಪಡೆದಂತಾಯಿತು, ಇದು ಅಪೂರ್ವ ಎಂದು ಆತನ ಪಾದಗಳಿಗೆ ನಮಸ್ಕರಿಸಿದರು.

ಅರ್ಥ:
ಬಂದರು: ಆಗಮಿಸಿದರು; ಓಲಗ: ಆಸ್ಥಾನ, ದರ್ಬಾರು; ಗಗನ: ಆಗಸ, ಅಂಬರ; ಇಂದು: ಚಂದ್ರ; ಮಂಡಲ: ಜಗತ್ತು; ಇಳಿವ: ಕೆಳಗೆ ಬರುವ; ವೋಲ್: ರೀತಿ; ನೃಪ: ರಾಜ; ವೃಂದ: ಗುಂಪು; ಎದ್ದು: ಮೇಲೇಳು; ಅಭಿನಮಿಸು: ನಮಸ್ಕರಿಸು; ಪದ: ಚರಣ; ಮುನಿ: ಋಷಿ; ಮುನಿಪತಿ: ಮುನಿಗಳಲ್ಲಿ ಅಗ್ರಗಣ್ಯ; ಧನ್ಯ: ಪುಣ್ಯವಂತ; ದರ್ಶನ: ನೋಡು, ಸಂದರ್ಶನ; ಅಪೂರ್ವ: ಅಪರೂಪವಾದ, ಆಶ್ಚರ್ಯ; ತನುಜ: ಮಕ್ಕಳು; ಅಂಘ್ರಿ: ಪಾದ; ಎರಗು: ನಮಸ್ಕರಿಸು;

ಪದವಿಂಗಡಣೆ:
ಬಂದನ್+ಇವರ್+ಓಲಗಕೆ+ ಗಗನದಿನ್
ಇಂದು+ಮಂಡಲವ್+ಇಳಿವ+ ವೋಲ್ +ನೃಪ
ವೃಂದ+ವೆದ್+ಅಭಿನಮಿಸಿದುದು +ಪದಯುಗಕೆ+ ಮುನಿಪತಿಯ
ಇಂದು +ಧನ್ಯರು+ ನಾವಲಾ+ ಮುನಿ
ವಂದ್ಯ+ದರ್ಶನವಾಯ್ತ್ +ಅಪೂರ್ವ+ವಿ
ದೆಂದು +ಕುಂತೀ+ತನುಜರ್+ಇದಿರ್+ಎದ್+ಅಂಘ್ರಿಗ್+ಎರಗಿದರು

ಅಚ್ಚರಿ:
(೧) ರಾತ್ರಿಯಲ್ಲಿ ಚಂದ್ರನು ಭೂಮಿಯನ್ನು ಬೆಳಗಿದ ಹಾಗೆ ನಾರದರ ಆಗಮನ ಎಂದು ವರ್ಣಿಸಿರುವುದು – ಬಂದನಿವರೋಲಗಕೆ ಗಗನದಿ ನಿಂದುಮಂಡಲವಿಳಿವ ವೋಲ್
(೨) ಇಂದು – ೨, ೪ ಸಾಲಿನ ಮೊದಲ ಪದ, ೨ – ಚಂದ್ರ ಎಂಬ ಅರ್ಥ; ೪ – ಈಗ ಎಂಬ ಅರ್ಥ
(೩) ಮುನಿಪತಿ, ಮುನಿವಂದ್ಯ – ನಾರದರನ್ನು ಕರೆದಿರುವ ಬಗೆ