ಪದ್ಯ ೨: ಧರ್ಮರಾಜನನ್ನು ನೋಡಲು ಯಾರು ಬಂದರು?

ಕಳುಹಿದನು ಲೋಮಶನನವನೀ
ತಳಕೆ ಸುರಪತಿ ಸಿತಹಯನ ಕೌ
ಶಲವನೊಡಹುಟ್ಟಿದರಿಗರುಹಲಿಕಭ್ರಮಾರ್ಗದಲಿ
ಇಳಿದನಾ ಮುನಿಪತಿ ಧರಿತ್ರೀ
ತಳಕೆ ಕಾಮ್ಯಕನಾಮ ವನದಲಿ
ತಳಿರಗೂಡಾರದಲಿ ಕಂಡನು ಧರ್ಮನಂದನನ (ಅರಣ್ಯ ಪರ್ವ, ೧೦ ಸಂಧಿ, ೨ ಪದ್ಯ)

ತಾತ್ಪರ್ಯ:
ದೇವಲೋಕಕ್ಕೆ ಹೋಗಿದ್ದ ಲೋಮಶ ಮಹರ್ಷಿಗೆ ಅರ್ಜುನನ ವಿಜಯವನ್ನು ಧರ್ಮಜನಿಗೆ ತಿಳಿಸಲು ದೇವೇಂದ್ರನು ಧರ್ಮರಾಜನ ಬಳಿಗೆ ಕಳುಹಿಸಿದನು. ಲೋಮಶನು ಆಕಾಶಮಾರ್ಗವಾಗಿ ಕಾಮಾಕ್ಯವನದಲ್ಲಿ ಇಳಿದು ಪರ್ಣಕುಟೀರದಲ್ಲಿದ್ದ ಧರ್ಮರಾಜನನ್ನು ಕಂಡನು.

ಅರ್ಥ:
ಕಳುಹು: ತೆರಳು; ತಳ: ಕೆಳಗು, ಪಾತಾಳ; ಸುರಪತಿ: ಇಂದ್ರ; ಸಿತಹಯ: ಬಿಳಿಯ ಕುದುರೆ; ಕೌಶಲ: ಚದುರು; ಒಡಹುಟ್ಟು: ಜೊತೆಗೆ ಜನ್ಮತಾಳು; ಅರುಹು: ಹೇಳು; ಅಭ್ರ: ಆಗಸ; ಮಾರ್ಗ: ದಾರಿ; ಇಳಿ: ಕೆಳಗೆ ಬಾ; ಮುನಿ: ಋಷಿ; ಪತಿ: ಒಡೆಯ; ಧರಿತ್ರೀ: ಭೂಮಿ; ವನ: ಕಾಡು; ನಾಮ: ಹೆಸರು; ತಳಿರಗೂಡು: ಪರ್ಣಕುಟೀರ; ಕಂಡು: ನೋಡು; ನಂದನ: ಮಗ; ಅವನೀ: ಭೂಮಿ;

ಪದವಿಂಗಡಣೆ:
ಕಳುಹಿದನು +ಲೋಮಶನನ್+ಅವನೀ
ತಳಕೆ+ ಸುರಪತಿ +ಸಿತಹಯನ +ಕೌ
ಶಲವನ್+ಒಡಹುಟ್ಟಿದರಿಗ್+ಅರುಹಲಿಕ್+ಅಭ್ರ+ಮಾರ್ಗದಲಿ
ಇಳಿದನಾ+ ಮುನಿಪತಿ+ ಧರಿತ್ರೀ
ತಳಕೆ +ಕಾಮ್ಯಕನಾಮ+ ವನದಲಿ
ತಳಿರಗೂಡಾರದಲಿ+ ಕಂಡನು +ಧರ್ಮನಂದನನ

ಅಚ್ಚರಿ:
(೧) ಅವನೀತಳ, ಧರಿತ್ರೀತಳ – ಭೂಮಿಯನ್ನು ಕರೆದ ಪರಿ
(೨) ಅರ್ಜುನನನ್ನು ಕರೆದ ಪರಿ – ಸಿತಹಯನ
(೩) ಮುನಿಪತಿ, ಸುರಪತಿ – ಪ್ರಾಸ ಪದಗಳು

ಪದ್ಯ ೧೦: ಕಣ್ವ ಮಹರ್ಷಿಗಳು ಏನೆಂದು ಉಪದೇಶಿಸಿದರು?

ತಪ್ಪಿನುಡಿಯನು ಪರಶುರಾಮನು
ದಪ್ಪವಿದು ಲೇಸಲ್ಲ ನೀ
ನೊಪ್ಪಿಸುವುದರ್ಧಾವನೀತಳವನು ಸರಾಗದೊಳು
ತಪ್ಪಿನುಡಿದೊಡೆ ಗರುಡದೇವನ
ದಪ್ಪವನು ಹರಿ ಸೆಳೆದು ಬಿಸುಡನೆ
ಒಪ್ಪಿ ತಾಗದಿರೆಂದು ನುಡಿದನು ಕಣ್ವನರಸಂಗೆ (ಉದ್ಯೋಗ ಪರ್ವ, ೯ ಸಂಧಿ, ೧೦ ಪದ್ಯ)

ತಾತ್ಪರ್ಯ:
ಕಣ್ವ ಮಹರ್ಷಿಗಳು ದುರ್ಯೋಧನನನ್ನುದ್ದೇಶಿಸಿ, ಎಲೈ ದುರ್ಯೋಧನ ಪರಶುರಾಮರ ನುಡಿ ತಪ್ಪಾಗಲಾರದು. ಅಹಂಕಾರ, ದರ್ಪವು ಒಳಿತಲ್ಲ. ನೀನು ಪ್ರೀತಿಯಿಂದ ಅರ್ಧ ರಾಜ್ಯವನ್ನು ಪಾಂಡವರಿಗೆ ನೀಡುವುದು ಒಳಿತು. ಗರ್ವತೋರಿದ ಗರುಡನನ್ನು ವಿಷ್ಣುವು ಅವನ ದರ್ಪವನ್ನು ಅಡಗಿಸಲಿಲ್ಲವೇ? ಸಂಧಾನಕ್ಕೆ ಒಪ್ಪು ಯುದ್ಧ ಮಾಡಬೇಡ ಎಂದು ಹಿತವಚನ ನುಡಿದರು.

ಅರ್ಥ:
ತಪ್ಪು: ಸರಿಯಲ್ಲದ; ನುಡಿ: ಮಾತು; ದಪ್ಪ: ದರ್ಪ, ಗರ್ವ; ಲೇಸು: ಒಳಿತಲ್ಲ; ಒಪ್ಪು: ಸಮ್ಮತಿ; ಅವನೀತಳ: ಭೂಮಿ; ಸರಾಗ: ಪ್ರೀತಿ; ಹರಿ: ವಿಷ್ಣು; ಸೆಳೆ: ಜಗ್ಗು, ಎಳೆ; ಬಿಸುಡು: ಹೊರಹಾಕು, ಬಿಸಾಕು; ತಾಗು: ಹೊಡೆತ, ಪೆಟ್ಟು; ಅರಸ: ರಾಜ;

ಪದವಿಂಗಡಣೆ:
ತಪ್ಪಿನುಡಿಯನು +ಪರಶುರಾಮನು
ದಪ್ಪವಿದು +ಲೇಸಲ್ಲ +ನೀನ್
ಒಪ್ಪಿಸುವುದ್+ಅರ್ಧ+ಅವನೀತಳವನು+ ಸರಾಗದೊಳು
ತಪ್ಪಿನುಡಿದೊಡೆ +ಗರುಡದೇವನ
ದಪ್ಪವನು +ಹರಿ +ಸೆಳೆದು +ಬಿಸುಡನೆ
ಒಪ್ಪಿ +ತಾಗದಿರೆಂದು+ ನುಡಿದನು +ಕಣ್ವನ್+ಅರಸಂಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ತಪ್ಪಿನುಡಿದೊಡೆ ಗರುಡದೇವನ ದಪ್ಪವನು ಹರಿ ಸೆಳೆದು ಬಿಸುಡನೆ
(೨) ದಪ್ಪ – ೨, ೫; ಒಪ್ಪಿ – ೩, ೬; ತಪ್ಪಿ- ೧, ೪ ಸಾಲಿನ ಮೊದಲ ಪದ