ಪದ್ಯ ೨೫: ಪಾಂಡವರು ಯಾವ ಅರಮನೆಗೆ ಬಂದು ಸೇರಿದರು?

ತಿಳುಹಿ ರಾಯನ ಹೃದಯಸಂಚಿತ
ಕಲುಷವನು ಖಂಡಿಸಿ ಗತಾಕ್ಷನ
ಬಲಿದ ಚಿತ್ತವ್ಯಥೆಯನಾರಿಸಿ ನೃಪವಧೂಜನದ
ಅಳಲನಾರಿಸಿ ಗಜಪುರದ ನೃಪ
ನಿಳಯವನು ಹೊಗಿಸಿದನು ಯದುಕುಲ
ತಿಲಕ ಗದುಗಿನ ವೀರನಾರಾಯಣನು ಪಾಂಡವರ (ಗದಾ ಪರ್ವ, ೧೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಯುಧಿಷ್ಠಿರನ ಮನಸ್ಸಿನಲ್ಲಿ ಕೂಡಿಟ್ಟಿದ್ದ ವ್ಯಥೆಯನ್ನು ಹೋಗಲಾಡಿಸಿ, ಧೃತರಾಷ್ಟ್ರನ ಮತ್ತು ರಾಜ ಪತ್ನಿಯರ ದುಃಖವನ್ನು ಶಾಂತಮಾಡಿ ಹಸ್ತಿನಾಪುರದ ಅರಮನೆಗೆ ಪಾಂಡವರನ್ನು ಹೊಗಿಸಿದನು.

ಅರ್ಥ:
ತಿಳುಹಿ: ತಿಳಿದು; ರಾಯ: ರಾಜ; ಹೃದಯ: ಎದೆ; ಸಂಚಿತ: ಸಂಗ್ರಹಿತವಾದುದು; ಕಲುಷ: ಕಳಂಕ; ಖಂಡಿಸು: ತುಂಡುಮಾಡು, ಕಡಿ, ಕತ್ತರಿಸು; ಗತಾಕ್ಷ: ಅಂಧ, ಕುರುಡ (ಧೃತರಾಷ್ಟ್ರ); ಬಲಿ: ಗಟ್ಟಿ; ಚಿತ್ತ: ಮನಸ್ಸು; ವ್ಯಥೆ: ನೋವು, ಯಾತನೆ; ನೃಪ: ರಾಜ; ವಧು: ಸ್ತ್ರೀ; ಜನ: ಗುಂಪು; ಅಳಲು: ದುಃಖ; ಆರಿಸು: ಕಡಿಮೆಮಾಡು; ನೃಪ: ರಾಜ; ನಿಳಯ: ಮನೆ; ಹೊಗಿಸು: ಸೇರು; ತಿಲಕ: ಶ್ರೇಷ್ಠ;

ಪದವಿಂಗಡಣೆ:
ತಿಳುಹಿ +ರಾಯನ +ಹೃದಯ+ಸಂಚಿತ
ಕಲುಷವನು +ಖಂಡಿಸಿ +ಗತಾಕ್ಷನ
ಬಲಿದ +ಚಿತ್ತವ್ಯಥೆಯನ್+ಆರಿಸಿ +ನೃಪ+ವಧೂಜನದ
ಅಳಲನ್+ಆರಿಸಿ +ಗಜಪುರದ +ನೃಪ
ನಿಳಯವನು +ಹೊಗಿಸಿದನು +ಯದುಕುಲ
ತಿಲಕ +ಗದುಗಿನ +ವೀರನಾರಾಯಣನು +ಪಾಂಡವರ

ಅಚ್ಚರಿ:
(೧) ಖಂಡಿಸಿ, ಆರಿಸಿ, ಹೊಗಿಸಿ – ಪದಗಳ ಪ್ರಯೋಗ
(೨) ಧೃತರಾಷ್ಟ್ರನನ್ನು ಗತಾಕ್ಷ ಎಂದು ಕರೆದಿರುವುದು

ಪದ್ಯ ೨೪: ಧರ್ಮಜನು ನದೀ ತಿರದಲ್ಲಿ ಒಂದು ತಿಂಗಳೇಕೆ ಇದ್ದನು?

ಆ ನದಿಯ ತೀರದಲಿ ತಿಂಗಳು
ಮಾನನಿಧಿ ತತ್ಪ್ರೇತರಿಗೆ ಜಲ
ದಾನ ವಿಧಿವಿಹಿತಪ್ರಪಂಚಿತ ಸಕಲ ಸಂಸ್ಕೃತಿಯ
ಭೂನುತನು ಮಾಡಿದನು ಬಂದುದು
ಜಾನಪದಜನವೈದೆ ಕುಂತೀ
ಸೂನುವನು ದರುಶನವ ಮಾಡಿತು ಕಾಣಿಕೆಯ ನೀಡಿ (ಗದಾ ಪರ್ವ, ೧೨ ಸಂಧಿ, ೨೪ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ನದೀ ತೀರದಲ್ಲಿ ಒಂದು ತಿಂಗಳ ಕಾಲ ನೆಲೆಸಿದ್ದು ಜಲತರ್ಪಣ ಇತ್ಯಾದಿ ವಿಧ್ಯುಕ್ತ ಸಂಸ್ಕಾರಗಳನ್ನು ಮಾಡಿದನು. ನಂತರ ಆ ಪ್ರದೇಶದ ಜನರೆಲ್ಲರೂ ಬಂದು ಯುಧಿಷ್ಠಿರನಿಗೆ ಕಾಣಿಕೆಯನ್ನು ಕೊಟ್ಟು ದರ್ಶನವನ್ನು ಪಡೆದರು.

ಅರ್ಥ:
ನದಿ: ಹೊಳೆ, ತೊರೆ; ತೀರ: ದಡ; ತಿಂಗಳು: ಮಾಸ; ಮಾನನಿಧಿ: ಮಾನವನ್ನೇ ಐಶ್ವರ್ಯವಾಗಿಸಿಕೊಂಡವ (ಧರ್ಮಜ); ಪ್ರೇತ: ಜೀವವಿಲ್ಲದ ದೇಹ, ಶವ; ಜಲ: ನಿರು; ದಾನ: ನೀಡು, ಚತುರೋಪಾಯಗಳಲ್ಲಿ ಒಂದು; ವಿಧಿ: ನಿಯಮ; ವಿಹಿತ: ಯೋಗ್ಯ; ಪ್ರಪಂಚ: ಜಗತ್ತು; ಸಕಲ: ಎಲ್ಲಾ; ಸಂಸ್ಕೃತಿ: ಸಂಸಾರ, ಭವಾವಳಿ; ಭೂನುತ: ರಾಜ; ಬಂದು: ಆಗಮಿಸು; ಜಾನಪದ: ಪ್ರದೇಶದ ಜನ; ಸೂನು: ಮಗ; ದರುಶನ: ತೋರು; ಕಾಣಿಕೆ: ಉಡುಗೊರೆ;

ಪದವಿಂಗಡಣೆ:
ಆ +ನದಿಯ +ತೀರದಲಿ +ತಿಂಗಳು
ಮಾನನಿಧಿ +ತತ್ಪ್ರೇತರಿಗೆ +ಜಲ
ದಾನ +ವಿಧಿವಿಹಿತ+ಪ್ರಪಂಚಿತ +ಸಕಲ +ಸಂಸ್ಕೃತಿಯ
ಭೂನುತನು +ಮಾಡಿದನು +ಬಂದುದು
ಜಾನಪದಜನವೈದೆ +ಕುಂತೀ
ಸೂನುವನು+ ದರುಶನವ +ಮಾಡಿತು +ಕಾಣಿಕೆಯ +ನೀಡಿ

ಅಚ್ಚರಿ:
(೧) ಮಾನನಿಧಿ, ಭೂನುತ, ಕುಂತೀಸೂನು – ಧರ್ಮಜನನ್ನು ಕರೆದ ಪರಿ

ಪದ್ಯ ೨೩: ಯೋಧರ ಅಪರಕರ್ಮವನ್ನು ಹೇಗೆ ಮಾಡಲಾಯಿತು?

ಕಳನ ಚೌಕದ ಸುತ್ತಲೊಟ್ಟಿಸಿ
ತಳಿಗಳನು ಬಹಳಾಗ್ನಿಯನು ಕೈ
ಕೊಳಿಸಿದರು ದಹಿಸಿದರು ಬಹಳಾಕ್ಷೋಹಿಣೀಭಟರ
ಬಳಿಕ ಹಸ್ತಿನಪುರದ ಸೀಮಾ
ಸ್ಥಳಕೆ ಬಂದರು ನಿಖಿಳ ಕಾಂತಾ
ವಳಿಸಹಿತ ಗಂಗಾವಗಹನವ ಮಾಡಿದನು ನೃಪತಿ (ಗದಾ ಪರ್ವ, ೧೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ರಣರಂಗದ ಸುತ್ತಲೂ ಕೊರಡುಗಲನ್ನೊಟ್ಟಿಸಿ, ಹದಿನೆಂಟು ಅಕ್ಷೋಹಿಣೀ ಸೈನ್ಯದ ಯೋಧರನ್ನು ದಹಿಸಿದರು. ನಂತರ ಧರ್ಮಜನು ಹಸ್ತಿನಾವತಿಯ ಪ್ರದೇಶಕ್ಕೆ ಬಂದು ಸ್ತ್ರೀಯರೊಡನೆ ಗಂಗಾ ಸ್ನಾನವನ್ನು ಮಾಡಿದರು.

ಅರ್ಥ:
ಕಳ: ರಣರಂಗ; ಚೌಕ: ಚತುಷ್ಕಾಕಾರವಾದುದು; ಸುತ್ತ: ಎಲ್ಲಾ ಕಡೆ; ಒಟ್ಟಿಸು: ಕೂಡಿಸು; ತಳಿ: ಹರಡು, ಕೆದರು; ಬಹಳ: ತುಂಬ; ಅಗ್ನಿ: ಬೆಂಕಿ; ಕೈಕೊಳಿಸು: ಸ್ವೀಕರಿಸು; ದಹಿಸು: ಸುಡು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಭಟ: ಸೈನಿಕ; ಬಳಿಕ: ನಂತರ; ಸೀಮೆ: ಎಲ್ಲೆ, ಗಡಿ; ಸ್ಥಳ: ಪ್ರದೇಶ; ಬಂದು: ಆಗಮಿಸು; ನಿಖಿಳ: ಎಲ್ಲಾ; ಕಾಂತಾವಳಿ: ಸ್ತ್ರೀಯರ ಗುಂಪು; ಅವಗಾಹ: ಸ್ನಾನ; ನೃಪತಿ: ರಾಜ;

ಪದವಿಂಗಡಣೆ:
ಕಳನ +ಚೌಕದ +ಸುತ್ತಲೊಟ್ಟಿಸಿ
ತಳಿಗಳನು +ಬಹಳಾಗ್ನಿಯನು+ ಕೈ
ಕೊಳಿಸಿದರು +ದಹಿಸಿದರು +ಬಹಳ+ಅಕ್ಷೋಹಿಣೀ+ಭಟರ
ಬಳಿಕ +ಹಸ್ತಿನಪುರದ ಸೀಮಾ
ಸ್ಥಳಕೆ+ ಬಂದರು +ನಿಖಿಳ +ಕಾಂತಾ
ವಳಿ+ಸಹಿತ +ಗಂಗಾವಗಹನವ+ ಮಾಡಿದನು +ನೃಪತಿ

ಪದ್ಯ ೨೨: ಯಾರನ್ನು ಆಹಿತಾಗ್ನಿಯಿಂದ ದಹಿಸಿದರು?

ಕುರುಪತಿಯ ರವಿಸುತನ ಮಾದ್ರೇ
ಶ್ವರನ ದುಶ್ಯಾಸನ ವಿಕರ್ಣಾ
ದ್ಯರ ಜಯದ್ರಥ ಬಾಹ್ಲಿಕರ ಭಗದತ್ತ ಲಕ್ಷಣರ
ಗುರುವರನ ಪಾಂಚಾಲ ಮತ್ಸ್ಯೇ
ಶ್ವರರ ಕುಂತೀಭೋಜನೃಪಮು
ಖ್ಯರನು ವಿಧಿಪೂರ್ವಕದಿ ದಹಿಸಿದರಾಹಿತಾಗ್ನಿಯಲಿ (ಗದಾ ಪರ್ವ, ೧೨ ಸಂಧಿ, ೨೨
ಪದ್ಯ)

ತಾತ್ಪರ್ಯ:
ಕೌರವ, ಕರ್ಣ, ಶಲ್ಯ, ದುಶ್ಯಾಸನ, ವಿಕರ್ನನೇ ಮೊದಲಾದವರು, ಜಯದ್ರಥ, ಬಾಹ್ಲಿಕ, ಭಗದತ್ತ, ಲಕ್ಷಣ, ದ್ರೋಣ, ದ್ರುಪದ, ವಿರಾಟ, ಕುಂತೀಭೋಜ ಮೊದಲಾದವರನ್ನು ಆಹಿತಾಗ್ನಿಯಿಂದ ವಿಧಿಪೂರ್ವಕವಾಗಿ ದಹಿಸಿದರು.

ಅರ್ಥ:
ನೃಪ: ರಾಜ; ಮುಖ್ಯ: ಶ್ರೇಷ್ಠ; ವಿಧಿ: ನಿಯಮ; ಪೂರಕ: ಪೂರ್ಣಗೊಳಿಸು; ದಹಿಸು: ಸುಡು; ಅಗ್ನಿ: ಬೆಂಕಿ; ಸುತ: ಮಗ; ರವಿ: ಸೂರ್ಯ; ಆದಿ: ಮುಂತಾದ;

ಪದವಿಂಗಡಣೆ:
ಕುರುಪತಿಯ+ ರವಿಸುತನ+ ಮಾದ್ರೇ
ಶ್ವರನ +ದುಶ್ಯಾಸನ +ವಿಕರ್ಣಾ
ದ್ಯರ +ಜಯದ್ರಥ+ ಬಾಹ್ಲಿಕರ +ಭಗದತ್ತ +ಲಕ್ಷಣರ
ಗುರುವರನ +ಪಾಂಚಾಲ+ ಮತ್ಸ್ಯೇ
ಶ್ವರರ+ ಕುಂತೀಭೋಜ+ನೃಪ+ಮು
ಖ್ಯರನು+ ವಿಧಿಪೂರ್ವಕದಿ+ ದಹಿಸಿದರ್+ಆಹಿತಾಗ್ನಿಯಲಿ

ಅಚ್ಚರಿ:
(೧) ವರ, ಮುಖ್ಯ – ಸಾಮ್ಯಾರ್ಥ ಪದ

ಪದ್ಯ ೨೧: ಮೃತ ರಾಜರಿಗೆ ಯಾರು ಅಂತ್ಯ ಸಂಸ್ಕಾರವನ್ನು ಮಾಡಿದರು?

ವ್ಯಾಸ ನಾರದ ವಿದುರ ಸಾತ್ಯಕಿ
ಕೇಶವನು ದಾರುಕ ಯುಯುತ್ಸು ಮ
ಹೀಶ ಮೊದಲಾದನಿಬರರಸರ ಸಾರಥಿವ್ರಾತ
ಆ ಸಚಿವರಾ ಹಸ್ತಿನಾಪುರ
ದಾ ಸಮಸ್ತ ಪ್ರಕೃತಿಜನ ಸಂ
ತೈಸಿದರು ಸಂಸ್ಕಾರವಿಧಿಯನು ಹತಮಹೀಶರಿಗೆ (ಗದಾ ಪರ್ವ, ೧೨ ಸಂಧಿ, ೨೧ ಪದ್ಯ)

ತಾತ್ಪರ್ಯ:
ವ್ಯಾಸ, ನಾರದ, ವಿದುರ, ಸಾತ್ಯಕಿ, ಕೃಷ್ಣ, ದಾರುಕ, ಯುಯುತ್ಸು, ಮಡಿದ ಅರಸರ ಸಾರಥಿಗಳು, ಸಚಿವರು, ಹಸ್ತಿನಾಪುರದ ಜನರು ಎಲ್ಲರೂ ಸೇರಿ ಮೃತರಾದ ರಾಜರಿಗೆ ಅಂತ್ಯ ಸಂಸ್ಕಾರವನ್ನು ಮಾಡಿದರು.

ಅರ್ಥ:
ಮಹೀಶ: ರಾಜ; ಮೊದಲಾದ: ಮುಂತಾದ; ಸಾರಥಿ: ಸೂತ; ಅರಸ: ರಾಜ; ವ್ರಾತ: ಗುಂಪು; ಸಚಿವ: ಮಂತ್ರಿ; ಸಮಸ್ತ: ಎಲ್ಲಾ; ಪ್ರಕೃತಿಜನ: ಪುರಜನ; ಸಂತೈಸು: ಸಮಾಧಾನ ಪಡಿಸು; ಸಂಸ್ಕಾರ: ನಿತ್ಯವಿಧಿ, ನೇಮ; ವಿಧಿ: ರೀತಿ, ನಿಯಮ; ಹತ: ಸತ್ತ; ಮಹೀಶ: ರಾಜ;

ಪದವಿಂಗಡಣೆ:
ವ್ಯಾಸ +ನಾರದ +ವಿದುರ +ಸಾತ್ಯಕಿ
ಕೇಶವನು +ದಾರುಕ +ಯುಯುತ್ಸು +ಮ
ಹೀಶ +ಮೊದಲಾದ್+ಅನಿಬರ್+ಅರಸರ +ಸಾರಥಿ+ವ್ರಾತ
ಆ +ಸಚಿವರ್+ಆ+ ಹಸ್ತಿನಾಪುರದ್
ಆ+ ಸಮಸ್ತ +ಪ್ರಕೃತಿಜನ +ಸಂ
ತೈಸಿದರು +ಸಂಸ್ಕಾರ+ವಿಧಿಯನು +ಹತ+ಮಹೀಶರಿಗೆ

ಅಚ್ಚರಿ:
(೧) ಮಹೀಶ – ೨, ೬ ಸಾಲಿನ ಕೊನೆಯ ಪದ

ಪದ್ಯ ೨೦: ಕೃಷ್ಣನು ಧರ್ಮಜನನ್ನು ಹೇಗೆ ಸಮಾಧಾನ ಪಡಿಸಿದನು?

ಹೋಗಲಿನ್ನಾ ಕ್ಷತ್ರಧರ್ಮ
ತ್ಯಾಗ ದುರ್ವ್ಯಸನ ಪ್ರಪಂಚವ
ನೀಗಿ ಕಳೆಯೆಂದಸುರರಿಪುವೈ ತಂದು ಮನ್ನಿಸಿದ
ಮೇಗಿವರ ಸಂಸ್ಕಾರಕಾರ್ಯ ನಿ
ಯೋಗವಿದೆ ಭಾರಂಕ ನಿನಗೆ ಸ
ರಾಗದಲಿ ಸಂತೈಸಿಯೆಂದನು ಭೂಪತಿಗೆ ಶೌರಿ (ಗದಾ ಪರ್ವ, ೧೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಧರ್ಮಜನನ್ನು ಉದ್ದೇಶಿಸಿ, ಆದದ್ದು ಆಯಿತು, ಅದು ಹೋಗಲಿ, ಕ್ಷತ್ರಿಯ ಧರ್ಮವನ್ನು ಪಾಲಿಸಲು ನೀನೀ ಕೆಲಸವನ್ನು ಮಾಡಬೇಕಾಯಿತು. ಅದನ್ನಿನ್ನು ಬಿಡು, ಇನ್ನು ಇವರೆಲ್ಲರ ಸಂಸ್ಕಾರ ಕಾರ್ಯದ ದೊಡ್ಡಹೊರೆಯಿದೆ. ಅದನ್ನು ಪೂರೈಸು. ಸಮಾಧಾನ ಮಾಡಿಕೋ ಎಂದು ಧರ್ಮಜನನ್ನು ಸಂತೈಸಿದನು.

ಅರ್ಥ:
ಹೋಗು: ತೆರಳು; ಕ್ಷತ್ರ: ಕ್ಷತ್ರಿಯರಿಗೆ ಸಂಬಂಧಿಸಿದುದು; ಧರ್ಮ: ಧಾರಣೆ ಮಾಡಿದುದು; ತ್ಯಾಗ: ದಾನ, ಕೊಡುಗೆ; ದುರ್ವ್ಯಸನ: ಕೆಟ್ಟ ಗೀಳು/ಚಟ; ಪ್ರಪಂಚ: ಜಗತ್ತು; ನೀಗು: ಪರಿಹರಿಸಿಕೊಳ್ಳು ; ಕಳೆ: ತೊರೆ; ಅಸುರರಿಪು: ಕೃಷ್ಣ; ಮನ್ನಿಸು: ಶಮನಗೊಳಿಸು, ಸಮಾಧಾನ ಮಾಡು; ಮೇಗೆ: ಮೇಲಕ್ಕೆ, ಆಮೇಲೆ; ಸಂಸ್ಕಾರ: ಧಾರ್ಮಿಕ ವಿಧಿ, ಅಪರಕರ್ಮ; ಕಾರ್ಯ: ಕೆಲಸ; ನಿಯೋಗ: ಗುಂಪು; ಭಾರಂಕ: ಮಹಾಯುದ್ಧ; ಸರಾಗ: ಪ್ರೀತಿ; ಸಂತೈಸು: ಸಮಾಧಾನ ಪಡಿಸು; ಭೂಪತಿ: ರಾಜ; ಶೌರಿ: ಕೃಷ್ಣ;

ಪದವಿಂಗಡಣೆ:
ಹೋಗಲಿನ್ನ್+ಆ+ ಕ್ಷತ್ರಧರ್ಮ
ತ್ಯಾಗ+ ದುರ್ವ್ಯಸನ +ಪ್ರಪಂಚವ
ನೀಗಿ+ ಕಳೆ+ಎಂದ್+ಅಸುರರಿಪುವ್+ಐತಂದು +ಮನ್ನಿಸಿದ
ಮೇಗ್+ಇವರ +ಸಂಸ್ಕಾರ+ಕಾರ್ಯ +ನಿ
ಯೋಗವಿದೆ +ಭಾರಂಕ +ನಿನಗೆ +ಸ
ರಾಗದಲಿ +ಸಂತೈಸಿ+ಎಂದನು +ಭೂಪತಿಗೆ +ಶೌರಿ

ಅಚ್ಚರಿ:
(೧) ಕರ್ತವ್ಯದ ಬಗ್ಗೆ ಹೇಳುವ ಪರಿ – ಮೇಗಿವರ ಸಂಸ್ಕಾರಕಾರ್ಯ ನಿಯೋಗವಿದೆ ಭಾರಂಕ ನಿನಗೆ
(೨) ತ್ಯಾಗ, ನಿಯೋಗ, ಸರಾಗ – ಪ್ರಾಸ ಪದಗಳು

ಪದ್ಯ ೧೯: ಧರ್ಮಜನೇಕೆ ಬೇಸರದಿಂದ ನಿಟ್ಟುಸಿರಿಟ್ಟನು?

ಅರಿದನಂತಕಸೂನು ಮುರಹರ
ನಿರಿದನೇ ನಾವಿನ್ನು ಕರ್ಣಗೆ
ಕಿರಿಯರೈ ಲೇಸಾಯ್ತು ಗುರುಜನ ಬಂಧುಜನ ಹನನ
ಉರುವ ಶಶಿವಂಶದ ಮಹಾನೃಪ
ರೆರಗಿದರೆ ಪಾತಕಕೆ ಮುನ್ನೆ
ಚ್ಚರಿಸಿದಕಟಾ ತಾಯಿ ಕೆಡಿಸಿದಳೆಂದು ಬಿಸುಸುಯ್ದ (ಗದಾ ಪರ್ವ, ೧೨ ಸಂಧಿ, ೧೯ ಪದ್ಯ)

ತಾತ್ಪರ್ಯ:
ಕರ್ಣನು ನಮ್ಮ ಅಣ್ಣನೆಂದು ಧರ್ಮಜನಿಗೆ ಗೊತ್ತಾಯಿತು. ಗುರುಗಳನ್ನು ಬಂಧುಗಳನ್ನು ಕೊಂದುದು ಲೇಸಾಯಿತು. ಚಂದ್ರವಂಶದ ಮಹಾರಾಜರು ಪಾಪಕಾರ್ಯಕ್ಕೆ ಭಾಜನರಾದ ಹಾಗಾಯಿತು. ಮೊದಲೇ ಈ ವಿಷಯವನ್ನು ತಿಳಿಸದೆ ಅಮ್ಮನು ನಮ್ಮನ್ನು ಕೆಡಿಸಿದಳು, ಶ್ರೀಕೃಷ್ಣನೆ ನಮ್ಮನ್ನು ಇರಿದಂತಾಯಿತು ಎಂದು ನಿಟ್ಟುಸಿರನ್ನು ಬಿಟ್ಟನು.

ಅರ್ಥ:
ಅರಿ: ತಿಳಿ; ಅಂತಕ: ಯಮ; ಸೂನು: ಮಗ; ಮುರಹರ: ಕೃಷ್ಣ; ಇರಿ: ಚುಚ್ಚು; ಕಿರಿ: ಚಿಕ್ಕವ; ಲೇಸು: ಒಳಿತು; ಗುರು: ಆಚಾರ್ಯ; ಬಂಧು: ಸಂಬಂಧಿಕ; ಹನ: ಸಾಯಿಸು; ಉರು: ಶ್ರೇಷ್ಠ; ವಂಶ: ಕುಲ; ನೃಪ: ರಾಜ; ಎರಗು: ನಮಸ್ಕರಿಸು; ಪಾತಕ: ಪಾಪ; ಮುನ್ನ: ಮೊದಲು; ಎಚ್ಚರ: ಹುಷಾರಾಗಿರು; ಕೆಡಿಸು: ಹಾಳುಮಾಡು; ಬಿಸುಸುಯ್ದು: ನಿಟ್ಟುಸಿರು;

ಪದವಿಂಗಡಣೆ:
ಅರಿದನ್+ಅಂತಕಸೂನು +ಮುರಹರನ್
ಇರಿದನೇ +ನಾವಿನ್ನು +ಕರ್ಣಗೆ
ಕಿರಿಯರೈ+ ಲೇಸಾಯ್ತು +ಗುರುಜನ +ಬಂಧುಜನ +ಹನನ
ಉರುವ +ಶಶಿವಂಶದ +ಮಹಾ+ನೃಪರ್
ಎರಗಿದರೆ +ಪಾತಕಕೆ +ಮುನ್ನೆ
ಚ್ಚರಿಸಿದ್+ಅಕಟಾ +ತಾಯಿ +ಕೆಡಿಸಿದಳೆಂದು +ಬಿಸುಸುಯ್ದ

ಅಚ್ಚರಿ:
(೧) ನ ಕಾರದಿಂದ ಕೊನೆಗೊಳ್ಳುವ ತ್ರಿವಳಿ ಪದ – ಗುರುಜನ ಬಂಧುಜನ ಹನನ

ಪದ್ಯ ೧೮: ಕುಂತಿ ಯಾರನ್ನು ಕಂಡು ಒರಲಿದಳು?

ಜನಪ ಕೇಳೀಚೆಯಲಿ ಕುಂತೀ
ವನಿತೆ ಕರ್ಣನ ಮೇಲೆ ಹೊರಳಿದ
ಳಿನತನುಜ ಹಾ ಕರ್ಣ ಹಾ ಹಾ ಕರ್ಣ ಹಾಯೆನುತ
ನಿನಗೆ ಧರ್ಮಸುತಾದಿ ಭೂಮಿಪ
ರನುಜರೈ ಮಾಯಾವಿ ಮಧುಸೂ
ದನನೆ ಮರಯಿಸಿ ಕೊಂದನಕಟೆಂದೊರಲಿದಳು ಕುಂತಿ (ಗದಾ ಪರ್ವ, ೧೨ ಸಂಧಿ, ೧೮ ಪದ್ಯ)

ತಾತ್ಪರ್ಯ:
ಇತ್ತ ಕುಂತಿಯು ಕರ್ಣನ ದೇಹದ ಮೇಲೆ ಹೊರಳುತ್ತಾ, ಅಯ್ಯೋ, ಸೂರ್ಯನಂದನ ಕರ್ಣ, ಹಾ ಹಾ ಅಯ್ಯೋ, ನಿನಗೆ ಯುಧಿಷ್ಠಿರನೇ ಮೊದಲಾದ ಪಾಂಡವರು ತಮ್ಮಂದಿರು. ನೀನೇ ಚಕ್ರವರ್ತಿ, ಆದರೆ ಮಾಯಾವಿಯಾದ ಕೃಷ್ಣನು ಈ ವಿಷಯವನ್ನು ಹೊರಗೆಡಹದೆ ನಿನ್ನನ್ನು ಕೊಂದ ಎಂದು ಕುಂತಿ ಒರಲಿದಳು.

ಅರ್ಥ:
ಜನಪ: ರಾಜ; ಕೇಳು: ಆಲಿಸು; ಈಚೆ: ಈ ಭಾಗ; ವನಿತೆ: ಹೆಣ್ಣು; ಹೊರಳು: ಉರುಳಾಡು, ಉರುಳು; ಇನ: ಸೂರ್ಯ; ತನುಜ: ಮಗ; ಹಾ:ಅಯ್ಯೋ; ಸುತ: ಮಗ; ಭೂಮಿಪ: ರಾಜ; ಅನುಜ: ತಮ್ಮ; ಮಾಯ: ಗಾರುಡಿ, ಇಂದ್ರಜಾಲ; ಮಧುಸೂದನ: ಕೃಷ್ಣ; ಮರಯಿಸು: ನೆನಪಿನಿಂದ ದೂರಮಾಡು; ಕೊಂದು: ಸಾಯಿಸು; ಅಕಟ: ಅಯ್ಯೋ; ಒರಲು: ಅರಚು, ಕೂಗಿಕೊಳ್ಳು;

ಪದವಿಂಗಡಣೆ:
ಜನಪ +ಕೇಳ್+ಈಚೆಯಲಿ +ಕುಂತೀ
ವನಿತೆ +ಕರ್ಣನ +ಮೇಲೆ +ಹೊರಳಿದಳ್
ಇನ+ತನುಜ +ಹಾ +ಕರ್ಣ+ ಹಾ+ ಹಾ+ ಕರ್ಣ+ ಹಾ+ಎನುತ
ನಿನಗೆ +ಧರ್ಮಸುತಾದಿ +ಭೂಮಿಪರ್
ಅನುಜರೈ +ಮಾಯಾವಿ +ಮಧುಸೂ
ದನನೆ +ಮರಯಿಸಿ +ಕೊಂದನ್+ಅಕಟೆಂದ್+ಒರಲಿದಳು +ಕುಂತಿ

ಅಚ್ಚರಿ:
(೧) ಅಯ್ಯೋ ಎಂದು ಹೇಳುವ ಪರಿ – ಇನತನುಜ ಹಾ ಕರ್ಣ ಹಾ ಹಾ ಕರ್ಣ ಹಾಯೆನುತ
(೨) ಮ ಕಾರದ ತ್ರಿವಳಿ ಪದ – ಮಾಯಾವಿ ಮಧುಸೂದನನೆ ಮರಯಿಸಿ

ಪದ್ಯ ೧೭: ರಾಣಿಯರ ಶೋಕ ಧ್ವನಿಯು ಹೇಗಿತ್ತು?

ಎನುತ ಬಿದ್ದಳು ಮೂರ್ಛೆಯಲಿ ಮಾ
ನಿನಿಯನೆತ್ತಿದನಸುರರಿಪು ನೃಪ
ವನಿತೆಯರು ಭಾನುಮತಿ ಮೊದಲಾದಖಿಳ ರಾಣಿಯರು
ಜನಪತಿಯ ಮುಕ್ಕುರುಕಿದರು ತ
ಜ್ಜನಿತ ಶೋಕಾದ್ಭುತದ ಹಾ ಹಾ
ಧ್ವನಿಯು ಥಟ್ಟಣೆ ಘಟ್ಟಿಸಿತು ಬ್ರಹ್ಮಾಂಡಮಂಡಲವ (ಗದಾ ಪರ್ವ, ೧೨ ಸಂಧಿ, ೧೭ ಪದ್ಯ)

ತಾತ್ಪರ್ಯ:
ಹೀಗೆ ಹೇಳುತ್ತಾ ಗಾಂಧಾರಿಯು ಮೂರ್ಛಿತಳಾಗಿ ಬಿದ್ದಳು. ಶ್ರೀಕೃಷ್ಣನು ಅವಳನ್ನು ಮೇಲಕ್ಕೆತ್ತಿದನು. ಭಾನುಮತಿಯೇ ಮೊದಲಾದ ರಾಣಿಯರು ಕೌರವನನ್ನು ಬಳಸಿ ಶೋಕದಿಂದ ಹಾಹಾಕಾರವನ್ನು ಮಾಡಿದರು. ಅವರ ಆಕ್ರಂದನವು ಬ್ರಹ್ಮಾಂಡಮಂಡಲವನ್ನು ವ್ಯಾಪಿಸಿತು.

ಅರ್ಥ:
ಬಿದ್ದು: ಜಾರು, ಬೀಳು; ಮೂರ್ಛೆ: ಜ್ಞಾನವಿಲ್ಲದ ಸ್ಥಿತಿ; ಮಾನಿನಿ: ಹೆಣ್ಣು; ಎತ್ತು: ಮೇಲೇಳಿಸು; ಅಸುರರಿಪು: ರಾಕ್ಷಸರ ವೈರಿ (ಕೃಷ್ಣ); ನೃಪ: ರಾಜ; ವನಿತೆ: ಸ್ತ್ರೀ; ಮೊದಲಾದ: ಮುಂತಾದ; ಅಖಿಳ: ಎಲ್ಲಾ; ರಾಣಿ: ಅರಸಿ; ಜನಪತಿ: ರಾಜ; ಮುಕ್ಕುರು: ಆವರಿಸು; ಜನಿತ: ಹುಟ್ಟಿದ; ಶೋಕ: ದುಃಖ; ಅದ್ಭುತ: ಆಶ್ಚರ್ಯ; ಧ್ವನಿ: ರವ; ಥಟ್ಟು: ಗುಂಪು; ಘಟ್ಟಿಸು: ಸೇರಿಸು, ಅಳವಡಿಸು; ಬ್ರಹ್ಮಾಂಡ: ವಿಶ್ವ, ಜಗತ್ತು; ಮಂಡಲ: ಜಗತ್ತು;

ಪದವಿಂಗಡಣೆ:
ಎನುತ +ಬಿದ್ದಳು +ಮೂರ್ಛೆಯಲಿ +ಮಾ
ನಿನಿಯನ್+ಎತ್ತಿದನ್+ಅಸುರರಿಪು +ನೃಪ
ವನಿತೆಯರು +ಭಾನುಮತಿ +ಮೊದಲಾದ್+ಅಖಿಳ +ರಾಣಿಯರು
ಜನಪತಿಯ +ಮುಕ್ಕುರುಕಿದರು +ತ
ಜ್ಜನಿತ +ಶೋಕ+ಅದ್ಭುತದ +ಹಾ +ಹಾ
ಧ್ವನಿಯು +ಥಟ್ಟಣೆ +ಘಟ್ಟಿಸಿತು +ಬ್ರಹ್ಮಾಂಡ+ಮಂಡಲವ

ಅಚ್ಚರಿ:
(೧) ಮಾನಿನಿ, ವನಿತೆ, ರಾಣಿ, – ಸ್ತ್ರೀಯರು ಎಂದು ಸೂಚಿಸುವ ಪದ
(೨) ನೃಪವನಿತೆ, ರಾಣಿ; ನೃಪ, ಜನಪತಿ – ಸಮಾನಾರ್ಥಕ ಪದ

ಪದ್ಯ ೧೬: ದುರ್ಯೊಧನನ ಬಗ್ಗೆ ಗಾಂಧಾರಿಯು ಹೇಗೆ ದುಃಖಿಸಿದಳು?

ಇತ್ತ ನೋಡೈ ಕೃಷ್ಣ ತನ್ನಯ
ಮತ್ತದಂತಿಯನಿಂದುಕುಲ ರಾ
ಜೋತ್ತಮನನೇಕಾದಶಾಕ್ಷೋಹಿಣಿಯ ವಲ್ಲಭನ
ಹತ್ತೆ ಹಿಡಿದೋಲಗಿಸುವರು ವರ
ಮತ್ತ ಕಾಶಿನಿಯರುಗಳೀಗಳು
ಸುತ್ತ ಮುತ್ತಿತು ಘೂಕ ವಾಯಸ ಜಂಬುಕವ್ರಾತ (ಗದಾ ಪರ್ವ, ೧೨ ಸಂಧಿ, ೧೬ ಪದ್ಯ)

ತಾತ್ಪರ್ಯ:
ಗಾಂಧಾರಿಯು ಶ್ರೀಕೃಷ್ಣನಿಗೆ ತನ್ನ ಮಗನ ದೇಹವನ್ನು ನೋಡಿ ದುಃಖದಿಂದ ಹೇಳುತ್ತಾ, ಕೃಷ್ಣಾ, ನನ್ನ ಮದದಾನೆಯನ್ನು ಇಲ್ಲಿ ನೋಡು ನನ್ನ ಮಗನು ಚಂದ್ರವಂಶದ ಸಾರ್ವಭೌಮ. ಹನ್ನೊಂದು ಅಕ್ಷೋಹಿಣಿಯ ಒಡೆಯನಾಗಿದ್ದ. ಅವನ ಸಮ್ಗವನ್ನು ಬಯಸಿ ಸುಮ್ದರಿಯರು ಓಲೈಸುತ್ತಿದ್ದರು. ಈಗಲಾದರೋ ಗೂಗೆ, ಕಾಗೆ, ನರಿಗಳು ಸುತ್ತಲೂ ಮುತ್ತಿವೆ ನೋಡು ಎಂದು ದುಃಖಿಸಿದಳು.

ಅರ್ಥ:
ನೋಡು: ವೀಕ್ಷಿಸು; ಮತ್ತ: ಮದ; ದಂತಿ: ಆನೆ; ಇಂದುಕುಲ: ಚಂದ್ರವಂಶ; ರಾಜ: ನೃಪ; ಉತ್ತಮ: ಶ್ರೇಷ್ಠ; ಏಕಾದಶ: ಹನ್ನೊಂದು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ವಲ್ಲಭ: ಒಡೆಯ; ಹತ್ತೆ: ಹತ್ತಿರ, ಸಮೀಪ; ಹಿಡಿ: ಗ್ರಹಿಸು; ಓಲಗ: ದರ್ಬಾರು; ವರ: ಶ್ರೇಷ್ಠ; ಮತ್ತ:ಅಮಲು; ಕಾಶಿನಿ: ಸ್ತ್ರೀ, ಸುಂದರಿ; ಈಗಳು: ಈಗ; ಸುತ್ತ: ಎಲ್ಲಾ ಕಡೆ, ಅಕ್ಕ ಪಕ್ಕ; ಮುತ್ತು: ಆವರಿಸು; ಘೂಕ: ಗೂಬೆ, ವಾಯಸ: ಕಾಗೆ; ಜಂಬುಕ: ನರಿ; ವ್ರಾತ: ಗುಂಪು;

ಪದವಿಂಗಡಣೆ:
ಇತ್ತ+ ನೋಡೈ +ಕೃಷ್ಣ +ತನ್ನಯ
ಮತ್ತದಂತಿಯನ್ +ಇಂದುಕುಲ +ರಾ
ಜೋತ್ತಮನನ್+ಏಕಾದಶ+ಅಕ್ಷೋಹಿಣಿಯ +ವಲ್ಲಭನ
ಹತ್ತೆ+ ಹಿಡಿದ್+ಓಲಗಿಸುವರು +ವರ
ಮತ್ತ+ ಕಾಶಿನಿಯರುಗಳ್+ಈಗಳು
ಸುತ್ತ+ ಮುತ್ತಿತು +ಘೂಕ +ವಾಯಸ +ಜಂಬುಕ+ವ್ರಾತ

ಅಚ್ಚರಿ:
(೧) ದುರ್ಯೋಧನನನ್ನು ಹೊಗಳುವ ಪರಿ – ಮತ್ತದಂತಿಯನಿಂದುಕುಲ ರಾಜೋತ್ತಮನನೇಕಾದಶಾಕ್ಷೋಹಿಣಿಯ ವಲ್ಲಭನ