ಪದ್ಯ ೨೦: ಕೃಷ್ಣನು ಧರ್ಮಜನನ್ನು ಹೇಗೆ ಸಮಾಧಾನ ಪಡಿಸಿದನು?

ಹೋಗಲಿನ್ನಾ ಕ್ಷತ್ರಧರ್ಮ
ತ್ಯಾಗ ದುರ್ವ್ಯಸನ ಪ್ರಪಂಚವ
ನೀಗಿ ಕಳೆಯೆಂದಸುರರಿಪುವೈ ತಂದು ಮನ್ನಿಸಿದ
ಮೇಗಿವರ ಸಂಸ್ಕಾರಕಾರ್ಯ ನಿ
ಯೋಗವಿದೆ ಭಾರಂಕ ನಿನಗೆ ಸ
ರಾಗದಲಿ ಸಂತೈಸಿಯೆಂದನು ಭೂಪತಿಗೆ ಶೌರಿ (ಗದಾ ಪರ್ವ, ೧೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಧರ್ಮಜನನ್ನು ಉದ್ದೇಶಿಸಿ, ಆದದ್ದು ಆಯಿತು, ಅದು ಹೋಗಲಿ, ಕ್ಷತ್ರಿಯ ಧರ್ಮವನ್ನು ಪಾಲಿಸಲು ನೀನೀ ಕೆಲಸವನ್ನು ಮಾಡಬೇಕಾಯಿತು. ಅದನ್ನಿನ್ನು ಬಿಡು, ಇನ್ನು ಇವರೆಲ್ಲರ ಸಂಸ್ಕಾರ ಕಾರ್ಯದ ದೊಡ್ಡಹೊರೆಯಿದೆ. ಅದನ್ನು ಪೂರೈಸು. ಸಮಾಧಾನ ಮಾಡಿಕೋ ಎಂದು ಧರ್ಮಜನನ್ನು ಸಂತೈಸಿದನು.

ಅರ್ಥ:
ಹೋಗು: ತೆರಳು; ಕ್ಷತ್ರ: ಕ್ಷತ್ರಿಯರಿಗೆ ಸಂಬಂಧಿಸಿದುದು; ಧರ್ಮ: ಧಾರಣೆ ಮಾಡಿದುದು; ತ್ಯಾಗ: ದಾನ, ಕೊಡುಗೆ; ದುರ್ವ್ಯಸನ: ಕೆಟ್ಟ ಗೀಳು/ಚಟ; ಪ್ರಪಂಚ: ಜಗತ್ತು; ನೀಗು: ಪರಿಹರಿಸಿಕೊಳ್ಳು ; ಕಳೆ: ತೊರೆ; ಅಸುರರಿಪು: ಕೃಷ್ಣ; ಮನ್ನಿಸು: ಶಮನಗೊಳಿಸು, ಸಮಾಧಾನ ಮಾಡು; ಮೇಗೆ: ಮೇಲಕ್ಕೆ, ಆಮೇಲೆ; ಸಂಸ್ಕಾರ: ಧಾರ್ಮಿಕ ವಿಧಿ, ಅಪರಕರ್ಮ; ಕಾರ್ಯ: ಕೆಲಸ; ನಿಯೋಗ: ಗುಂಪು; ಭಾರಂಕ: ಮಹಾಯುದ್ಧ; ಸರಾಗ: ಪ್ರೀತಿ; ಸಂತೈಸು: ಸಮಾಧಾನ ಪಡಿಸು; ಭೂಪತಿ: ರಾಜ; ಶೌರಿ: ಕೃಷ್ಣ;

ಪದವಿಂಗಡಣೆ:
ಹೋಗಲಿನ್ನ್+ಆ+ ಕ್ಷತ್ರಧರ್ಮ
ತ್ಯಾಗ+ ದುರ್ವ್ಯಸನ +ಪ್ರಪಂಚವ
ನೀಗಿ+ ಕಳೆ+ಎಂದ್+ಅಸುರರಿಪುವ್+ಐತಂದು +ಮನ್ನಿಸಿದ
ಮೇಗ್+ಇವರ +ಸಂಸ್ಕಾರ+ಕಾರ್ಯ +ನಿ
ಯೋಗವಿದೆ +ಭಾರಂಕ +ನಿನಗೆ +ಸ
ರಾಗದಲಿ +ಸಂತೈಸಿ+ಎಂದನು +ಭೂಪತಿಗೆ +ಶೌರಿ

ಅಚ್ಚರಿ:
(೧) ಕರ್ತವ್ಯದ ಬಗ್ಗೆ ಹೇಳುವ ಪರಿ – ಮೇಗಿವರ ಸಂಸ್ಕಾರಕಾರ್ಯ ನಿಯೋಗವಿದೆ ಭಾರಂಕ ನಿನಗೆ
(೨) ತ್ಯಾಗ, ನಿಯೋಗ, ಸರಾಗ – ಪ್ರಾಸ ಪದಗಳು

ಪದ್ಯ ೫೫: ಭೀಮ ದುರ್ಯೋಧನರು ತಮ್ಮ ಹಗೆಯನ್ನು ಹೇಗೆ ವ್ಯಕ್ತಪಡಿಸಿದರು?

ಚಟುಳತರ ಭಾರಂಕದಂಕದ
ಭಟರು ತರುಬಿದರುಬ್ಬೆಯಲಿ ಲಟ
ಕಟಿಸಿದವು ಕಣ್ಣಾಲಿ ಬದ್ಧಭ್ರುಕುಟಿಭಂಗದಲಿ
ಕಟುವಚನ ವಿಕ್ಷೇಪರೋಷ
ಸ್ಫುಟನವೇಲ್ಲಿತವಾಕ್ಯಭಂಗೀ
ಘಟನ ವಿಘಟನದಿಂದ ಮೂದಲಿಸಿದರು ಮುಳಿಸಿನಲಿ (ಗದಾ ಪರ್ವ, ೫ ಸಂಧಿ, ೫೫ ಪದ್ಯ)

ತಾತ್ಪರ್ಯ:
ಘೋರವಾದ ಅತಿವೇಗದ ವೀರರಿಬ್ಬರೂ ಒಬ್ಬರನ್ನೊಬ್ಬರು ತರುಬಿ ನಿಂತರು. ಕಣ್ಣಾಲಿಗಳು ನೆಟ್ಟನೋಟದಿಂದ ಲಟಕಟಿಸಿದವು. ಕತುವಚನಗಳಿಂದ ಒಬ್ಬರನ್ನೊಬ್ಬರು ನಿಂದಿಸಿ ರೋಷವನ್ನು ವ್ಯಕ್ತಪಡಿಸಿದರು. ಸಿಟ್ಟಿನಿಂದ ಒಬ್ಬರನ್ನೊಬ್ಬರು ಮೂದಲಿಸಿದರು.

ಅರ್ಥ:
ಚತುಳ: ಚಟುವಟಿಕೆ, ಲವಲವಿಕೆ; ಭಾರಂಕ: ಮಹಾಯುದ್ಧ; ಭಟ: ಸೈನಿಕ; ತರುಬು: ಎದುರಿಸು, ಅಡ್ಡಹಾಕು; ಉಬ್ಬೆ: ಹೆಚ್ಚಳ; ಲಟಕಟ: ಉದ್ರೇಕಗೊಳ್ಳು; ಕಣ್ಣು: ನಯನ; ಕಣ್ಣಾಲಿ: ಕಣ್ಣಿನ ಕೊನೆ, ಓರೆ ಕಣ್ಣು; ಬದ್ಧ: ಕಟ್ಟಿದ, ಬಿಗಿದ; ಭ್ರುಕುಟಿ: ಹುಬ್ಬು; ಭಂಗ: ಮುರಿ; ಕಟುವಚನ: ಒರಟು ಮಾತು; ವಿಕ್ಷೇಪ: ಇಡಲ್ಪಟ್ಟಿದ್ದು; ರೋಷ: ಕೋಪ; ಸ್ಫುಟ: ಸ್ಪಷ್ಟವಾದ; ಘಟ: ಶರೀರ; ವಿಘಟನ: ಬೇರೆ ಮಾಡು; ಮೂದಲಿಸು: ಹಂಗಿಸು; ಮುಳಿಸು: ಕೋಪ;

ಪದವಿಂಗಡಣೆ:
ಚಟುಳತರ +ಭಾರಂಕದ್+ಅಂಕದ
ಭಟರು +ತರುಬಿದರ್+ಉಬ್ಬೆಯಲಿ+ ಲಟ
ಕಟಿಸಿದವು +ಕಣ್ಣಾಲಿ +ಬದ್ಧ+ಭ್ರುಕುಟಿ+ಭಂಗದಲಿ
ಕಟುವಚನ +ವಿಕ್ಷೇಪ+ರೋಷ
ಸ್ಫುಟನವೇಲ್ಲಿತ+ವಾಕ್ಯಭಂಗೀ
ಘಟನ +ವಿಘಟನದಿಂದ +ಮೂದಲಿಸಿದರು +ಮುಳಿಸಿನಲಿ

ಅಚ್ಚರಿ:
(೧) ಪದಗಳ ರಚನೆ – ಘಟನ ವಿಘಟನದಿಂದ
(೨) ಮ ಕಾರದ ಜೋಡಿ ಪದ – ಮೂದಲಿಸಿದರು ಮುಳಿಸಿನಲಿ

ಪದ್ಯ ೨೦: ಯಾರಿಗೆ ಯುದ್ಧದ ಅಂತ್ಯ ತಿಳಿದಿದೆ?

ಅದೆ ದುರಂತದ ದುರುಳ ದೊದ್ದೆಯ
ಹದನ ಬಣ್ಣಿಸಲೆನಗೆ ನೂಕದು
ತುದಿಯಲರಿವೆನು ದಳದ ಮನ್ನೆಯ ಮಂಡಲೀಕರಲಿ
ಕದನವಿದು ಭಾರಂಕವಾರ
ಭ್ಯುದಯ ತಲೆದೋರುವುದೊ ನಮಗೇ
ಕಿದರ ಚಿಂತೆ ಮುರಾರಿ ಬಲ್ಲನು ಕಂದ ಕೇಳೆಂದ (ಭೀಷ್ಮ ಪರ್ವ, ೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ಮಗು ದುರ್ಯೋಧನ ದುರಂತದ ಕೆಟ್ಟ ಕೂಗು ಕಾದಿದೆ, ಅದನ್ನು ನಾನು ವರ್ಣಿಸಲಾರೆನು. ಯುದ್ಧಾಂತ್ಯದಲ್ಲಿ ತಿಳಿಯುತ್ತದೆ, ಇಲ್ಲಿರುವ ಸಾಮಂತರು, ನಾಯಕರು ಈ ಯುದ್ಧದ ಹೊಡೆತವನ್ನು ತಡೆಯಲಾರರು. ಕೊನೆಗೆ ಯಾರಿಗೆ ಅಭ್ಯುದಯವಾಗಬಹುದು ನಮಗೋ ಪಾಂಡವರಿಗೋ ನನಗೇಕೆ ಈ ಚಿಂತೆ, ಕೃಷ್ಣನೇ ಇದನ್ನು ಬಲ್ಲ ಮಗು ಎಂದು ಭೀಷ್ಮರು ತಿಳಿಸಿದರು.

ಅರ್ಥ:
ದುರಂತ: ದುಃಖಾಂತ; ದುರುಳ: ದುಷ್ಟ; ದೊದ್ದೆ: ಗುಂಪು, ಸಮೂಹ; ಹದ: ಸ್ಥಿತಿ; ಬಣ್ಣಿಸು: ವಿವರಿಸು; ನೂಕು: ತಳ್ಳು; ತುದಿ: ಕೊನೆ; ಅರಿ: ತಿಳಿ; ದಳ: ಸೈನ್ಯ; ಮನ್ನೆಯ: ಮೆಚ್ಚಿನ, ಮೌನ್ಯ; ಮಂಡಲೀಕ: ಸಣ್ಣ ಪ್ರಾಂತ್ಯದ ಒಡೆಯ; ಕದನ: ಯುದ್ಧ; ಭಾರಂಕ: ಮಹಾಯುದ್ಧ; ಅಭ್ಯುದಯ: ಏಳಿಗೆ; ತಲೆದೋರು: ಕಾಣಿಸಿಕೋ; ಚಿಂತೆ: ಯೋಚನೆ; ಮುರಾರಿ: ಕೃಷ್ಣ; ಬಲ್ಲ: ತಿಳಿ; ಕಂದ: ಮಗು; ಕೇಳು: ಆಲಿಸು;

ಪದವಿಂಗಡಣೆ:
ಅದೆ +ದುರಂತದ+ ದುರುಳ +ದೊದ್ದೆಯ
ಹದನ +ಬಣ್ಣಿಸಲೆನಗೆ+ ನೂಕದು
ತುದಿಯಲ್+ಅರಿವೆನು +ದಳದ +ಮನ್ನೆಯ +ಮಂಡಲೀಕರಲಿ
ಕದನವಿದು +ಭಾರಂಕವ್+ಆರ್
ಅಭ್ಯುದಯ +ತಲೆದೋರುವುದೊ +ನಮಗೇ
ಕಿದರ+ ಚಿಂತೆ +ಮುರಾರಿ +ಬಲ್ಲನು +ಕಂದ +ಕೇಳೆಂದ

ಅಚ್ಚರಿ:
(೧) ದ ಕಾರದ ತ್ರಿವಳಿ ಪದ – ದುರಂತದ ದುರುಳ ದೊದ್ದೆಯ

ಪದ್ಯ ೩೩: ವೃಷಸೇನನ ಪರಾಕ್ರಮ ಎಂತಹುದು?

ನರನ ಮಾರಂಕದ ಮಹೇಂದ್ರಗೆ
ಚರಣಯುಗ ಬೆನ್ನಿನಲಿ ಬವರದೊ
ಳರಿದಲೈ ಭೀಷ್ಮಾದಿಗಳಿಗೀ ರಣದ ಮೇಳಾಪ
ಜರಡನೈ ಭಾರಂಕದಾಳಿವ
ತರಳನೇ ಸುರಗಿರಿಯನಾನುವ
ಕೊರಳ ಸತ್ವವೆ ಶಿವಶಿವೆಂದುದು ಮೇಲೆ ಸುರಕಟಕ (ಕರ್ಣ ಪರ್ವ, ೨೦ ಸಂಧಿ, ೩೩ ಪದ್ಯ)

ತಾತ್ಪರ್ಯ:
ಅರ್ಜುನನೊಡನೆ ಕಾದಿದ ದೇವೆಂದ್ರನು, ಬೆನ್ನು ತೋರಿಸಿ ಓಡಿದನು. ಭೀಷ್ಮನೇ ಮೊದಲಾದವರಿಗೂ ಇಂತಹ ಯುದ್ಧ ಚಾತುರ್ಯವಿರಲಿಲ್ಲ. ಇವನೇನು ನಿಸ್ಸತ್ವನೇ! ಇವನು ಮಹಾವೀರ. ಇವನನ್ನು ಹುಡುಗನೆನ್ನಬಹುದೇ? ಇವನು ತಲೆಯ ಮೇಲೆ ಮೇರು ಪರ್ವತವನ್ನು ಹೊರಬಲ್ಲ ಸತ್ವಯುತವಾದ ಕೊರಳನ್ನುಳ್ಳವನು ಎಂದು ಹೊಗಳಿದರು ಆಕಾಶದಲ್ಲಿದ್ದ ದೇವತೆಗಳು.

ಅರ್ಥ:
ನರ: ಅರ್ಜುನ; ಮಾರಂಕ: ಪ್ರತಿಯುದ್ಧ; ಮಹೇಂದ್ರ: ಇಂದ್ರ; ಚರಣ: ಪಾದ; ಬೆನ್ನು: ಹಿಂಭಾಗ; ಬವರ: ಯುದ್ಧ; ಇರಿ: ಸೀಳು, ಚುಚ್ಚು; ರಣ: ಯುದ್ಧ; ಮೇಳ: ಗುಂಪು; ಮೇಳಾಪ: ಜೋಡಣೆ; ಜರಡು: ಅಲ್ಪ, ನಿಷ್ಪ್ರಯೋಜಕ; ಭಾರಂಕ: ಮಹಾಯುದ್ಧ; ಅಳಿ: ಸಾವು; ತರಳು: ಹುಡುಗ; ಸುರಗಿರಿ: ಮೇರುಪರ್ವತ; ಆನು:ಎದುರಿಸು; ಕೊರಳು: ಕಂಠ; ಸತ್ವ: ಶಕ್ತಿ, ಬಲ; ಸುರ: ದೇವತೆ; ಕಟಕ:ಗುಂಪು;

ಪದವಿಂಗಡಣೆ:
ನರನ +ಮಾರಂಕದ+ ಮಹೇಂದ್ರಗೆ
ಚರಣಯುಗ+ ಬೆನ್ನಿನಲಿ +ಬವರದೊಳ್
ಅರಿದಲೈ+ ಭೀಷ್ಮಾದಿಗಳಿಗ್+ಈ+ ರಣದ +ಮೇಳಾಪ
ಜರಡನೈ+ ಭಾರಂಕದ್+ಅಳಿವ
ತರಳನೇ +ಸುರಗಿರಿಯನ್+ಆನುವ
ಕೊರಳ +ಸತ್ವವೆ +ಶಿವಶಿವೆಂದುದು +ಮೇಲೆ +ಸುರಕಟಕ

ಅಚ್ಚರಿ:
(೧) ಮಾರಂಕ, ಭಾರಂಕ – ಯುದ್ದವನ್ನು ಅರ್ಥೈಸುವ ಪ್ರಾಸ ಪದಗಳು
(೨) ಓಡಿದನು ಎಂದು ಹೇಳಲು – ನರನ ಮಾರಂಕದ ಮಹೇಂದ್ರಗೆ ಚರಣಯುಗ ಬೆನ್ನಿನಲಿ
(೩) ವೃಷಸೇನನ ಪರಾಕ್ರಮದ ವಿವರಣೆ – ಸುರಗಿರಿಯನಾನುವಕೊರಳ ಸತ್ವವೆ ಶಿವಶಿವೆಂದುದು ಮೇಲೆ ಸುರಕಟಕ

ಪದ್ಯ ೧೪: ಸಾತ್ಯಕಿಯು ಯಾವುದನ್ನು ಲೆಕ್ಕಿಸುವುದಿಲ್ಲ?

ಮುಂಕಣಿಯಲಿಟ್ಟಣಿಸಿದರು ಭಾ
ರಂಕದಾಳುಗಳೆಂಟು ಸಾವಿರ
ಬಿಂಕದತಿರಥರೆಂಟು ಕೋಟಿ ತುರಂಗ ಪಾಯದಳ
ಶಂಕಿಸುವನೇ ಬಳಿಕ ಯದುಕುಲ
ದಂಕಕಾರನು ನಿಂದನನಿಬರಿ
ಗಂಕ ಝಂಕೆಯನೇನನೆಂಬೆನು ಸಾತ್ಯಕಿಯ ಮನದ (ಕರ್ಣ ಪರ್ವ, ೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ಸೈನ್ಯದ ಮುಂಚೂಣಿಯಲ್ಲಿ ಎಂಟು ಸಾವಿರ ಅತಿರಥರು, ಎಂಟು ಕೋಟಿ ರಾವುತರು, ಕಾಲಾಳುಗಳು ಮಹಾಸಮರಕ್ಕೆ ಬಂದರು. ಯಾದವನಾದ ಸಾತ್ಯಕಿಯು ಇದನ್ನೆಲ್ಲಾ ಲೆಕ್ಕಿಸುವವನೇ? ಸಾತ್ಯಕಿಯ ಮಹೋತ್ಸಾಹವನ್ನು ಏನೆಂದು ಹೇಳಲಿ ಎಂದು ವೈಶಂಪಾಯನರು ಜನಮೇಜಯ ರಾಜನಿಗೆ ಹೇಳುತ್ತಿದ್ದರು.

ಅರ್ಥ:
ಮುಂಕಣಿ: ಮುಂಚೂಣಿ; ಅಣಿ: ಸಿದ್ಧತೆ; ಅಣಸು: ಬಾಣದ ಹಿಳುಕು;ಭಾರಂಕ: ಮಹಾಯುದ್ಧ; ಆಳು: ಸೈನ್ಯ; ಸಾವಿರ: ಸಹಸ್ರ; ಬಿಂಕ: ಗರ್ವ, ಜಂಬ; ಅತಿರಥ: ಪರಾಕ್ರಮಿ; ತುರಂಗ: ಕುದುರೆ; ಪಾಯದಳ: ಸೈನ್ಯ, ಕಾಲಾಳು; ಶಂಕಿಸು: ಅನುಮಾನಿಸು; ಬಳಿಕ: ನಂತರ; ಅಂಕ: ಯುದ್ಧ; ಅಂಕಕಾರ: ಯೋಧ, ಪರಾಕ್ರಮಿ; ನಿಂದನು: ನಿಲ್ಲು; ಅನಿಬರು:ಆಷ್ಟು ಜನ; ಝಂಕೆ: ಆರ್ಭಟ, ಗದರಿಕೆ; ಮನ: ಮನಸ್ಸು;

ಪದವಿಂಗಡಣೆ:
ಮುಂಕಣಿಯಲ್+ಇಟ್ಟಣಿಸಿದರು +ಭಾ
ರಂಕದ್+ಆಳುಗಳ್+ಎಂಟು +ಸಾವಿರ
ಬಿಂಕದ್+ಅತಿರಥರ್+ಎಂಟು +ಕೋಟಿ +ತುರಂಗ+ ಪಾಯದಳ
ಶಂಕಿಸುವನೇ +ಬಳಿಕ+ ಯದುಕುಲದ್
ಅಂಕಕಾರನು +ನಿಂದನ್+ಅನಿಬರಿಗ್
ಅಂಕ +ಝಂಕೆಯನ್+ಏನನೆಂಬೆನು +ಸಾತ್ಯಕಿಯ +ಮನದ

ಅಚ್ಚರಿ:
(೧) ಅಂಕ – ೨, ೫, ೬ ಸಾಲಿನ ಮೊದಲ ಪದ
(೨) ಅಂಕ, ಬಿಂಕ – ಪ್ರಾಸ ಪದ