ಪದ್ಯ ೫೦: ಅರ್ಜುನನ್ನು ನೋಡಿದ ದೇವತೆಗಳು ಏನೆಂದು ಹೇಳಿದರು?

ಮುಂದೆ ರಥವೆಸಗಿದನು ಪಾರ್ಥನು
ಬಂದನುತ್ತರ ಸಹಿತ ವಹಿಲದೊ
ಳಂದು ಬಡಗಣದೆಸಗೆ ಮೇಲಣ ಸುರರು ನೋಡುತಿರೆ
ಇಂದಿನಾಹವದೊಳಗೆ ನರ ರಿಪು
ವೃಂದವನು ಜಯಿಸುವನೆನುತಲಾ
ನಂದದಿಂದವೆ ಹರುಷಿಯಾದನು ವೀರನಾರಯಣ (ವಿರಾಟ ಪರ್ವ, ೬ ಸಂಧಿ, ೫೦ ಪದ್ಯ)

ತಾತ್ಪರ್ಯ:
ಅರ್ಜುನನು ರಥವನ್ನು ನಡೆಸುತ್ತಾ ಉತ್ತರದಿಕ್ಕಿಗೆ ಬಂದನು. ದೇವತೆಗಳು ಆಕಾಶದಲ್ಲಿ ಇದನ್ನು ನೋಡುತ್ತಿದ್ದರು. ಇಂದಿನ ಯುದ್ಧದಲ್ಲಿ ಅರ್ಜುನನು ಶತ್ರು ಸಮೂಹವನ್ನು ಗೆಲ್ಲುವನೆಂದು ತಿಳಿದು ವೀರನಾರಾಯಣನು ಹರ್ಷಿಸಿದನು.

ಅರ್ಥ:
ಮುಂದೆ: ಆಮೇಲೆ; ರಥ: ಬಂಡಿ; ಉತ್ತರ:ಉತ್ತರದಿಕ್ಕು; ಸಹಿತ: ಜೊತೆ; ವಹಿಲ: ವೇಗ, ಪ್ರವಾಹ; ಬಡಗ: ಉತ್ತರ; ಸುರ: ದೇವತೆ; ನೋಡು: ವೀಕ್ಷಿಸು; ಆಹವ: ಯುದ್ಧ; ನರ: ಮನುಷ್ಯ (ಇಲ್ಲಿ ಅರ್ಜುನ); ರಿಪು: ವೈರಿ; ವೃಂದ: ಗುಂಪು; ಜಯಿಸು: ಗೆಲುವು; ಆನಂದ: ಸಂತೋಷ; ಹರುಷ: ಸಂತೋಷ; ಎಸಗು: ಮಾಡು; ದೆಸೆ: ದಿಕ್ಕು;

ಪದವಿಂಗಡಣೆ:
ಮುಂದೆ +ರಥವ್+ಎಸಗಿದನು +ಪಾರ್ಥನು
ಬಂದನ್+ಉತ್ತರ +ಸಹಿತ+ ವಹಿಲದೊಳ್
ಅಂದು +ಬಡಗಣ+ದೆಸಗೆ +ಮೇಲಣ +ಸುರರು +ನೋಡುತಿರೆ
ಇಂದಿನ+ಆಹವದೊಳಗೆ+ ನರ+ ರಿಪು
ವೃಂದವನು +ಜಯಿಸುವನ್+ಎನುತಲ್
ಆನಂದದಿಂದವೆ+ ಹರುಷಿಯಾದನು+ ವೀರನಾರಯಣ

ಅಚ್ಚರಿ:
(೧) ಆನಂದ, ಹರುಷ – ಸಮನಾರ್ಥಕ ಪದ
(೨) ಅರ್ಜುನನ ಸಾರಥ್ಯವನ್ನು ಕಂಡು ವೀರನಾರಯಣ (ಕೃಷ್ಣ) ಸಂತೋಷನಾದನು ಎಂದು ವರ್ಣಿಸಿರುವುದು
(೩) ಉತ್ತರ, ಬಡಗ – ೨, ೩ ಸಾಲಿನಲ್ಲಿ ಬರುವ ಪದ, ಉತ್ತರ ಕುಮಾರ ಮತ್ತು ಉತ್ತರ ದಿಕ್ಕು ಎಂದು ಅರ್ಥೈಸಬೇಕು
(೩) ಸಂತೋಷದಿಂದ ಸಂತಸಪಡೆಯುವುದು – ಪದ ಪ್ರಯೋಗ – ಆನಂದದಿಂದವೆ ಹರುಷಿಯಾದನು.

ಪದ್ಯ ೪೯: ಅರ್ಜುನನು ಓಡಿಸುತ್ತಿದ್ದ ರಥ ಹೇಗಿತ್ತು?

ಗತಿಗೆ ಕುಣಿದವು ನಾಸಿಕದ ಹುಂ
ಕೃತಿಯ ಪವನನ ಹಳಿವ ಲುಳಿಯಲಿ
ಗತಿಯ ಸಂಚಿತ ಪಂಚಧಾರಾ ಪ್ರೌಢವಾಜಿಗಳು
ವಿತತ ರಥ ಪದದಳಿತ ವಸುಧೋ
ತ್ಪತಿತ ಧೂಳೀಪಟಲ ಪರಿಚುಂ
ಬಿತ ದಿಶಾಮುಖನೈದಿದನು ಕುರುರಾಯ ಮೋಹರವ (ವಿರಾಟ ಪರ್ವ, ೬ ಸಂಧಿ, ೪೯ ಪದ್ಯ)

ತಾತ್ಪರ್ಯ:
ಪಂಚಧಾರೆಯ ಕುದುರೆಗಳ ಮೂಗಿನಿಂದ ಹುಂಕಾರ ಮಾಡುತ್ತಾ, ಗಾಳಿಯನ್ನೇ ಮೀರಿಸಿದ ವೇಗದಿಂದ ಓಡಿದವು. ರಥದ ಚಕ್ರಗಳು ಹರಿದು, ಕುದುರೆಗಳು ನೆಲವನ್ನು ತುಳಿದು ಎದ್ದ ಧೂಳು ದೆಸೆದೆಸೆಗಳನ್ನು ಚುಂಬಿಸುತ್ತಿತ್ತು. ಅರ್ಜುನನು ಕೌರವ ಸೈನ್ಯದತ್ತ ಹೊರಟನು.

ಅರ್ಥ:
ಗತಿ:ವೇಗ; ಕುಣಿ: ಜಿಗಿ; ನಾಸಿಕ: ಮೂಗು; ಹುಂಕೃತಿ: ಹೂಂಕಾರ; ಪವನ: ಯಾವು; ಹಳಿವ:ಮೀರು, ಅತಿಶಯಿಸು, ಮೀರು; ಲುಳಿ: ರಭಸ, ವೇಗ; ಸಂಚಿತ:ಸಂಗ್ರಹ; ಪಂಚ: ಐದು; ಪಂಚಧಾರ: ಐದು ಬಗೆಯ ನಡಿಗೆಯುಳ್ಳ ಕುದುರೆ; ಪ್ರೌಢ: ಚೆನ್ನಾಗಿ ಬೆಳೆದ; ವಾಜಿ: ಕುದುರೆ; ವಿತತ:ವಿಸ್ತಾರವಾದ, ಶ್ರೇಷ್ಠ; ರಥ: ಬಂಡಿ; ಪದದಳಿತ: ಪಾದತಾಡನ; ವಸುಧ: ಭೂಮಿ; ಉತ್ಪತಿತ: ಮೇಲಕ್ಕೆದ್ದ; ಧೂಳು: ಮಣ್ಣಿನ ಕಣ; ಧೂಳೀಪಟಲ: ಧೂಳಿನ ಕಣ; ಪರಿಚುಂಬಿತ: ಮುತ್ತಿಡುತ್ತಾ; ದಿಶ: ದಿಕ್ಕು; ಮೋಹರ: ಸೈನ್ಯ, ದಂಡು;

ಪದವಿಂಗಡಣೆ:
ಗತಿಗೆ +ಕುಣಿದವು +ನಾಸಿಕದ +ಹುಂ
ಕೃತಿಯ +ಪವನನ +ಹಳಿವ +ಲುಳಿಯಲಿ
ಗತಿಯ +ಸಂಚಿತ +ಪಂಚಧಾರಾ +ಪ್ರೌಢ+ವಾಜಿಗಳು
ವಿತತ +ರಥ +ಪದದಳಿತ +ವಸುಧೋ
ತ್ಪತಿತ +ಧೂಳೀಪಟಲ +ಪರಿಚುಂ
ಬಿತ+ ದಿಶಾ+ಮುಖನೈದಿದನು +ಕುರುರಾಯ +ಮೋಹರವ

ಅಚ್ಚರಿ:
(೧) ಕುದುರೆ ಹೇಗೆ ಓಡಿದವು ಎಂಬ ವಿವರಣೆ – ಗತಿಗೆ ಕುಣಿದವು ನಾಸಿಕದ ಹುಂ
ಕೃತಿಯ;
(೨) ರಥ ಹೇಗೆ ಮುನ್ನಡೆಯಿತು – ವಿತತ ರಥ ಪದದಳಿತ ವಸುಧೋ
ತ್ಪತಿತ ಧೂಳೀಪಟಲ ಪರಿಚುಂಬಿತ

ಪದ್ಯ ೪೮: ಅರ್ಜುನನ ಸಾರಥ್ಯದ ಬಲ ಹೇಗಿತ್ತು?

ನಸುನಗುತ ಕೈಕೊಂಡನರ್ಜುನ
ನೆಸಗಿದನು ರಥವನು ಸಮೀರನ
ಮಿಸುಕಲೀಯದೆ ಮುಂದೆ ಮಿಕ್ಕವು ವಿಗಡವಾಜಿಗಳು
ಹೊಸಪರಿಯ ಸಾರಥಿಯಲಾ ನಮ
ಗಸದಳವು ಸಂಗಾತ ಬರಲೆಂ
ದುಸುರದುಳಿದುದು ಹಿಂದೆ ಪುರದಲಿ ಚಾತುರಂಗ (ವಿರಾಟ ಪರ್ವ, ೬ ಸಂಧಿ, ೪೮ ಪದ್ಯ)

ತಾತ್ಪರ್ಯ:
ಅರ್ಜುನನು ನಸುನಗುತ್ತಾ, ರಥದ ನೊಗವನ್ನು ಕೈಯಲ್ಲಿ ಹಿಡಿದನು, ಅವನು ರಥವನ್ನು ನಡೆಸಲು ಕುದುರೆಗಳು ವಾಯುವೇಗವನ್ನು ಮೀರಿ ಓಡಿದವು. ಚತುರಂಗ ಸೈನ್ಯವು ಇವನು ಹೊಸರೀತಿಯಾಗಿ ರಥವನ್ನು ಓಡಿಸುತ್ತಿದ್ದಾನೆ ಇವನೊಡನೆ ಹೋಗಲು ಅಸಾಧ್ಯ ಎಂದು ನಗರದಲ್ಲೇ ನಿಂತು ಬಿಟ್ಟವು.

ಅರ್ಥ:
ನಸುನಗು: ಮಂದಸ್ಮಿತ; ಕೈ: ಕರ; ಕೊಂಡನು: ಹಿಡಿದನು; ನೆಸಲು: ಸಲಿಗೆ, ಸದರ; ರಥ: ಬಂಡಿ; ಸಮೀರ: ವಾಯು, ಗಾಳಿ; ಮಿಸುಕು: ಅಲ್ಲಾಟ; ಮಿಕ್ಕ: ಉಳಿದ; ವಿಗಡ:ಶೌರ್ಯ, ಪರಾಕ್ರಮ; ವಾಜಿ: ಕುದುರೆ; ಹೊಸ: ನವೀನ; ಪರಿ: ರೀತಿ; ಅಸದಳ: ಅಸಾಧ್ಯ; ಸಂಗಾತ:ಜೊತೆ, ಸಹವಾಸ; ಬರಲು: ಆಗಮಿಸು; ಉಸುರು: ಉಸಿರಾಡು, ಶ್ವಾಸ; ಉಳಿದು: ಮಿಕ್ಕ; ಹಿಂದೆ: ಹಿಂಬದಿಯಲ್ಲಿ; ಪುರ: ಊರು; ಚಾತುರಂಗ: ಸೈನ್ಯ;

ಪದವಿಂಗಡಣೆ:
ನಸುನಗುತ +ಕೈಕೊಂಡನ್+ಅರ್ಜುನನ್
ಎಸಗಿದನು +ರಥವನು +ಸಮೀರನ
ಮಿಸುಕಲೀಯದೆ+ ಮುಂದೆ +ಮಿಕ್ಕವು +ವಿಗಡ+ವಾಜಿಗಳು
ಹೊಸಪರಿಯ+ ಸಾರಥಿಯಲಾ +ನಮಗ್
ಅಸದಳವು +ಸಂಗಾತ +ಬರಲೆಂದ್
ಉಸುರದ್+ಉಳಿದುದು +ಹಿಂದೆ +ಪುರದಲಿ +ಚಾತುರಂಗ

ಅಚ್ಚರಿ:
(೧) ರಥವನ್ನು ಓಡಿಸುವ ಪರಿ – ಸಮೀರನ ಮಿಸುಕಲೀಯದೆ ಮುಂದೆ ಮಿಕ್ಕವು ವಿಗಡವಾಜಿಗಳು
(೨) ಅರ್ಜುನನು ಸಾರಥ್ಯವನ್ನು ತೆಗೆದುಕೊಂಡಾಗಿನ ಮುಖಭಾವ – ನಸುನಗುತ ಕೈಕೊಂಡನು

ಪದ್ಯ ೪೭: ಉತ್ತರೆಯು ಅರ್ಜುನನಿಗೆ ಏನನ್ನು ತೆಗೆದುಕೊಂಡು ಬಾ ಎಂದು ಹೇಳಿದಳು?

ಕವಚವನು ತೊಡಲರಿಯದವನಾ
ಹವಕೆ ಸಾರಥಿತನವ ಮಾಡುವ
ಹವಣು ತಾನೆಂತೆನುತಲಿದ್ದರು ನಿಖಿಳ ನಾರಿಯರು
ಬವರವನು ನಮ್ಮಣ್ಣಗೆಲಿದಪ
ನವರ ಮಣಿ ಪರಿಧಾನವಾಭರ
ಣವನು ಸಾರಥಿ ಕೊಂಡುಬಾಯೆಂದಳು ಸರೋಜಮುಖಿ (ವಿರಾಟ ಪರ್ವ, ೬ ಸಂಧಿ, ೪೭ ಪದ್ಯ)

ತಾತ್ಪರ್ಯ:
ಸಾರಥಿಯ ಕವಚವನ್ನೇ ಹಾಕಿಕೊಳ್ಳಲು ಬಾರದವನು ಇನ್ನು ಯುದ್ಧದಲ್ಲಿ ಸಾರಥಿಯಾಗಿ ರಥವನ್ನು ಓಡಿಸಬಲ್ಲನೆ ಎಂದು ಸಭೆಯಲ್ಲಿದ್ದ ನಾರಿಯರು ಮಾತಾಡಿಕೊಂಡರು. ಉತ್ತರೆಯು, ನಮ್ಮಣ್ಣನು ಯುದ್ಧದಲ್ಲಿ ಗೆಲ್ಲುತ್ತಾನೆ, ಶತ್ರುಗಳ ಒಳ್ಳೆಯ ವಸ್ತ್ರಗಳನ್ನು ಆಭರಣಗಳನ್ನು ತೆಗೆದುಕೊಂಡು ಬಾ ಎಂದು ಅರ್ಜುನನಿಗೆ ಹೇಳಿದಳು.

ಅರ್ಥ:
ಕವಚ: ಹೊದಿಕೆ; ತೊಡಲು: ಹಾಕಿಕೊಳ್ಳಲು, ಧರಿಸಲು; ಅರಿ: ತಿಳಿ; ಆಹವ: ಯುದ್ಧ; ಸಾರಥಿ: ರಥವನ್ನು ಓಡಿಸುವ; ಹವಣು: ಪ್ರಮಾಣ; ಶಕ್ತಿ; ನಿಖಿಳ: ಎಲ್ಲಾ; ನಾರಿ: ಸ್ತ್ರೀ; ಬವರ:ಯುದ್ಧ; ಅಣ್ಣ: ಸಹೋದರ; ಗೆಲಿ: ಜಯ; ಮಣಿ:ಬಾಗು, ಬಗ್ಗು; ಪರಿಧಾನ:ಕಾಣಿಕೆ; ಆಭರಣ: ಒಡವೆ; ಕೊಂಡುಬಾ: ತೆಗೆದುಕೊಂಡು ಬಾ; ಸರೋಜಮುಖಿ: ಸುಂದರಿ, ಯುವತಿ; ಸರೋಜ: ಕಮಲ;

ಪದವಿಂಗಡಣೆ:
ಕವಚವನು +ತೊಡಲ್+ಅರಿಯದವನ್+
ಆಹವಕೆ +ಸಾರಥಿತನವ+ ಮಾಡುವ
ಹವಣು +ತಾನೆಂತ್+ಎನುತಲಿದ್ದರು +ನಿಖಿಳ +ನಾರಿಯರು
ಬವರವನು +ನಮ್ಮಣ್ಣ+ಗೆಲಿದಪ
ನವರ+ ಮಣಿ +ಪರಿಧಾನವ್+ಆಭರ
ಣವನು +ಸಾರಥಿ +ಕೊಂಡುಬಾಯೆಂದಳು+ ಸರೋಜಮುಖಿ

ಅಚ್ಚರಿ:
(೧) ಆಹವ, ಬವರ – ಸಮನಾರ್ಥಕ ಪದ
(೨) ಸಾರಥಿ – ೨, ೬ ಸಾಲಿನ ೨ನೇ ಪದ

ಪದ್ಯ ೪೬: ಅರ್ಜುನನು ಕವಚವನ್ನು ತೋಡಲರಿಯದಂತೆ ಹೇಗೆ ನಾಟಕವಾಡಿದನು?

ನರನು ತಲೆಕೆಳಗಾಗಿ ಕವಚವ
ಸರಿವುತಿರೆ ಘೊಳ್ಳೆಂದು ಕೈ ಹೊ
ಯ್ದರಸಿಯರು ನಗೆ ನಾಚಿದಂತಿರೆ ಪಾರ್ಥ ತಲೆವಾಗಿ
ತಿರುಗಿ ಮೇಲ್ಮುಖವಾಗಿ ತೊಡಲು
ತ್ತರೆ ಬಳಿಕ ನಸುನಗಲು ಸಾರಥಿ
ಯರಿಯ ತಪ್ಪೇನೆನುತಲುತ್ತರ ತಾನೆ ತೊಡಿಸಿದನು (ವಿರಾಟ ಪರ್ವ, ೬ ಸಂಧಿ, ೪೬ ಪದ್ಯ)

ತಾತ್ಪರ್ಯ:
ಅರ್ಜುನನು ತಾನು ಬೃಹನ್ನಳೆ ರಥವನ್ನು ಓಡಿಸಿ ತುಂಬ ವರುಷಗಳಾಯ್ತು ಆದ್ದರಿಂದ ಕವಚವನ್ನು ಧರಿಸುವಲ್ಲಿ ಬೇಕೆಂದೆ ತಪ್ಪಾಗಿ ತೊಡಲು ಪ್ರಯತ್ನಿಸಿದ. ತಲೆ ಕೆಳಗೆ ಮಾಡಿ ಕವಚವನ್ನು ತೊಡಲು ಹೋದನು. ಹೆಣ್ಣು ಮಕ್ಕಳು ಅದನ್ನು ನೋಡಿ ಜೋರಾಗಿ ಕೈ ಹೊಡೆದು ನಕ್ಕಿದರು, ಇದನ್ನು ನೋಡಿದ ಅರ್ಜುನನು ನಾಚಿಕೆಪಟ್ಟು ತಲೆಬಾಗಿ ನಿಂತನು, ಪುನಃ ಮೇಲ್ಮುಖವಾಗಿ ಧರಿಸಲು ಪ್ರಯತ್ನಿಸಿದನು, ಈಗ ಉತ್ತರೆ ಅವನ ಪ್ರಯತ್ನವನ್ನು ನೋಡಿ ನಕ್ಕಳು. ಸಾರಥಿಯ ಈ ಸ್ಥಿತಿಯನ್ನು ನೋಡಿ, ಉತ್ತರ ಕುಮಾರನೇ ಪಾಪ ಈತನಿಗೆ ಗೊತ್ತಿಲ್ಲ, ತಪ್ಪೇನು ಎಂದು ತಾನೆ ಅರ್ಜುನನಿಗೆ ಕವಚವನ್ನು ತೊಡಿಸಿದನು.

ಅರ್ಥ:
ನರ: ಅರ್ಜುನ; ತಲೆ; ಶಿರ; ಕೆಳಗೆ: ಅಡಿಯಲ್ಲಿ; ತಲೆಕೆಳಗೆ: ಉಲ್ಟ, ಹಿಂದು ಮುಂದು; ಕವಚ: ರಕ್ಷೆ, ಹೊದಿಕೆ; ಸರಿವುತ: ಸರಿಪಡಿಸು; ಘೊಳ್ಳು: ಜೋರಾಗಿ; ಕೈ: ಕರ; ಹೊಯ್ದು: ಹೊಡೆದು; ಅರಸಿ: ಹೆಣ್ಣುಮಕ್ಕಳು; ನಗೆ: ಸಂತೋಷ; ನಾಚಿ: ಲಜ್ಜೆ, ಅವಮಾನ; ತಲೆ: ಶಿರ; ವಾಗಿ: ಬಾಗಿ; ತಿರುಗಿ: ಪುನಃ; ತೋಡು: ಹಾಕು, ಧರಿಸು; ಬಳಿಕ: ನಂತರ; ನಸುನಗು: ಮಂದಸ್ಮಿತ; ಅರಿ: ತಿಳಿ; ತಪ್ಪು: ಸರಿಯಲ್ಲದ, ಸುಳ್ಳಾಗು; ತಾನೆ: ಸ್ವತಃ;

ಪದವಿಂಗಡಣೆ:
ನರನು+ ತಲೆ+ಕೆಳಗಾಗಿ +ಕವಚವ
ಸರಿವುತಿರೆ+ ಘೊಳ್ಳೆಂದು +ಕೈ+ ಹೊ
ಯ್ದ+ಅರಸಿಯರು +ನಗೆ +ನಾಚಿದಂತಿರೆ+ ಪಾರ್ಥ +ತಲೆವಾಗಿ
ತಿರುಗಿ +ಮೇಲ್ಮುಖವಾಗಿ+ ತೊಡಲ್
ಉತ್ತರೆ+ ಬಳಿಕ+ ನಸುನಗಲು +ಸಾರಥಿ
ಯರಿಯ +ತಪ್ಪೇನ್+ಎನುತಲ್+ಉತ್ತರ+ ತಾನೆ+ ತೊಡಿಸಿದನು

ಅಚ್ಚರಿ:
(೧) ಅರ್ಜುನನು ತನಗೆ ತಿಳಿಯದು ಎಂದು ನಾಟಕ ಮಾಡುವ ದೃಶ್ಯವನ್ನು ಹೇಳಿರುವುದು
(೨) ‘ತ’ ಕಾರದ ಜೋಡಿ ಪದ – ತಪ್ಪೇನೆನುತಲುತ್ತರ ತಾನೆ ತೊಡಿಸಿದನು
(೩) ನಗುವನ್ನು ಚಿತ್ರಿಸುವ ಬಗೆ – ಘೊಳ್ಳೆಂದು ಕೈ ಹೊಯ್ದರ್
(೪) ತಲೆಕೆಳಗೆ, ಮೇಲ್ಮುಖ – ವೈರುದ್ದ್ಯ ಅರ್ಥವನ್ನು ಸೂಚಿಸುವ ಪದ ಬಳಕೆ

ಪದ್ಯ ೪೫: ಯುದ್ಧಕ್ಕೆ ಉತ್ತರನ ಸಿದ್ಧತೆ ಹೇಗಾಯಿತು?

ಮಂಗಳಾರತಿಯೆತ್ತಿದರು ನಿಖಿ
ಳಾಂಗನೆಯರುತ್ತರಗೆ ನಿಜ ಸ
ರ್ವಾಂಗ ಶೃಂಗಾರದಲಿ ಹೊಳೆವುತ ಬಂದು ರಥವೇರಿ
ಹೊಂಗೆಲಸಮಯ ಕವಚವನು ಪಾ
ರ್ಥಂಗೆ ಕೊಟ್ಟನು ಜೋಡಿಸೀಸಕ
ದಂಗಿಗಳನಳವಡಿಸಿ ರಾಜಕುಮಾರನನುವಾದ (ವಿರಾಟ ಪರ್ವ, ೬ ಸಂಧಿ, ೪೫ ಪದ್ಯ)

ತಾತ್ಪರ್ಯ:
ಆಸ್ಥಾನದಲ್ಲಿದ್ದ ಹೆಣ್ಣುಮಕ್ಕಳು ಉತ್ತರನಿಗೆ ಜಯದ ಆರತಿಯನ್ನು ಎತ್ತಿದರು, ಸರ್ವಾಂಗದಲ್ಲೂ ಶೃಂಗಾರಮಾಡಿಕೊಂಡು ಉತ್ತರನು ಸಿದ್ಧನಾಗಿ ರಥವನ್ನು ಏರಿದನು. ಬಂಗಾರದ ಕುಸುರಿ ಕೆಲಸದ ಕವಚವನ್ನು ಅರ್ಜುನನಿಗೆ ಕೊಟ್ಟು ತಾನು ಅಂಗರಕ್ಷೆ, ಶಿರಸ್ತ್ರಾಣಗಳನ್ನು ಧರಿಸಿ ಉತ್ತರನು ಸಿದ್ಧನಾದನು.

ಅರ್ಥ:
ಮಂಗಳ: ಶುಭ; ಆರತಿ: ನೀರಾಂಜನ; ಎತ್ತು: ತೋರಿಸು, ಬೆಳಗು; ನಿಖಿಳ: ಸರ್ವ; ಅಂಗನೆ:ಸ್ತ್ರೀ; ನಿಖಿಳಾಂಗನೆ: ಎಲ್ಲಾ ಹೆಣ್ಣುಮಕ್ಕಳು; ನಿಜ: ನೈಜ; ಸರ್ವಾಂಗ: ಎಲ್ಲಾ ದೇಹದ ಅಂಗ; ಶೃಂಗಾರ: ಅಲಂಕಾರ; ಹೊಳೆ: ಕಾಂತಿಯುಕ್ತ; ಬಂದು: ಆಗಮಿಸಿ; ರಥ: ತೇರು, ಬಂಡಿ; ಏರು: ಹತ್ತು; ಹೊಂಗೆಲಸಮಯ: ಬಂಗಾರದಿಂದು ಕೂಡಿದ; ಹೊನ್ನು; ಚಿನ್ನ; ಕೆಲಸ:ಕಾರ್ಯ; ಕವಚ: ಹೊದಿಕೆ; ಕೊಟ್ಟು: ನೀಡು; ಜೋಡಿ: ಜೊತೆ; ಸೀಸಕ: ಶಿರಸ್ತ್ರಾಣ; ಅಂಗಿ: ಬಟ್ಟೆ, ಕವಚ; ಅಳವಡಿಸು: ಜೋಡಿಸು; ಅನುವು: ರೀತಿ; ಅನುವಾಗು: ಸಿದ್ಧವಾಗು;

ಪದವಿಂಗಡಣೆ:
ಮಂಗಳಾರತಿ+ಯೆತ್ತಿದರು +ನಿಖಿ
ಳಾಂಗನೆಯರ್+ಉತ್ತರಗೆ +ನಿಜ +ಸ
ರ್ವಾಂಗ +ಶೃಂಗಾರದಲಿ +ಹೊಳೆವುತ+ ಬಂದು +ರಥವೇರಿ
ಹೊಂಗೆಲಸಮಯ +ಕವಚವನು +ಪಾ
ರ್ಥಂಗೆ +ಕೊಟ್ಟನು +ಜೋಡಿ+ಸೀಸಕದ್
ಅಂಗಿಗಳನ್+ಅಳವಡಿಸಿ +ರಾಜಕುಮಾರನ್+ಅನುವಾದ

ಅಚ್ಚರಿ:
(೧) ಉತ್ತರನು ಯುದ್ಧಕ್ಕೆ ಹೋಗುವಾಗ – ಸರ್ವಾಂಗ ಶೃಂಗಾರದಲಿ ಹೊಳೆವುತ ಬಂದನು – ಯುದ್ದಕ್ಕೆ ಶೃಂಗಾರಮಯವಾಗಿ ಹೋಗುತ್ತರೆಯೆ ಎಂದು ಇಲ್ಲಿ ಕವಿ ಮಾರ್ಮಿಕವಾಗಿ ಕೇಳುವಂತಿದೆ

ಪದ್ಯ ೪೪: ಅರ್ಜುನನು ರಥವನ್ನು ಹೇಗೆ ಏರಿದನು?

ವೀರನಹೆ ಬಳಿಕೇನು ರಾಜಕು
ಮಾರನಿರಿವೊಡೆ ಹರೆಯವಲ್ಲಾ
ಸಾರಥಿತ್ವವ ಮಾಡಿ ನೋಡುವೆ ರಥವ ತರಿಸೆನಲು
ವಾರುವದ ಮಂದಿರದಲಾಯಿದು
ಚಾರು ತುರಗಾವಳಿಯ ಬಿಗಿದನು
ತೇರ ಸಂವರಿಸಿದನು ರಥವೇರಿದನು ಕಲಿಪಾರ್ಥ (ವಿರಾಟ ಪರ್ವ, ೬ ಸಂಧಿ, ೪೪ ಪದ್ಯ)

ತಾತ್ಪರ್ಯ:
ಉತ್ತರನ ಮಾತನ್ನು ಕೇಳಿದ ಬೃಹನ್ನಳೆಯ ವೇಷದಲ್ಲಿದ್ದ ಅರ್ಜುನನು, ನೀನಾದರೋ ವೀರನಿರುವೆ, ರಾಜಕುಮಾರನಾದ ನೀನು ಹರೆಯದವ, ನಿನಗೆ ಯುದ್ಧದಲ್ಲಿ ಆಸಕ್ತಿ ಸಹಜ. ನೀನಿರುವಾಗ ನನಗೇಕೆ ಚಿಂತೆ, ನಿನಗೆ ಸಾರಥಿಯಾಗಿ ಒಂದು ಕೈ ನೋಡೆ ಬಿಡೋಣ, ರಥವನ್ನು ತರಿಸು ಎಂದು ಅರ್ಜುನನು ಹೇಳಿದ ಕೂಡಲೆ ಅಶ್ವಶಾಲೆಯಿಂದ ಉತ್ತಮವಾದ ಕುದುರೆಗಳನ್ನು ಆರಿಸಿ ರಥಕ್ಕೆ ಕಟ್ಟಿ ಸಿದ್ಧಪಡಿಸಿ ಅರ್ಜುನನು ಸಾರಥಿಯಾಗಿ ರಥವನ್ನು ಏರಿದನು.

ಅರ್ಥ:
ವೀರ: ಕಲಿ, ಬಲಶಾಲಿ; ಬಳಿಕ: ನಂತರ; ರಾಜಕುಮಾರ: ರಾಜಪುತ್ರ; ಹರೆ: ಚಿಕ್ಕವಯಸ್ಸು; ಸಾರಥಿ: ರಥವನ್ನು ಓಡಿಸುವವ; ರಥ: ಬಂಡಿ; ತರಿಸು: ಬರೆಮಾಡು; ವಾರುವ: ಕುದುರೆ, ಅಶ್ವ; ಮಂದಿರ: ಮನೆ; ಚಾರು: ಸುಂದರ; ತುರಗ: ಕುದುರೆ; ಆವಳಿ: ಗುಂಪು; ಬಿಗಿದು: ಕಟ್ಟಿ; ತೇರ: ರಥ; ಸಂವರಿಸು: ಸಜ್ಜು ಮಾಡು; ಕಲಿ: ಶೂರ; ಆಯಿದು: ಆಯ್ಕೆ, ಆರಿಸು;

ಪದವಿಂಗಡಣೆ:
ವೀರನಹೆ +ಬಳಿಕೇನು+ ರಾಜಕು
ಮಾರನ್+ಇರಿವೊಡೆ +ಹರೆಯವಲ್ಲಾ
ಸಾರಥಿತ್ವವ +ಮಾಡಿ +ನೋಡುವೆ +ರಥವ +ತರಿಸೆನಲು
ವಾರುವದ+ ಮಂದಿರದಲ್+ಆಯಿದು
ಚಾರು +ತುರಗಾವಳಿಯ+ ಬಿಗಿದನು
ತೇರ +ಸಂವರಿಸಿದನು +ರಥವೇರಿದನು +ಕಲಿಪಾರ್ಥ

ಅಚರಿ:
(೧) ವಾರುವ, ತುರಗ – ಕುದುರೆಯ ಸಮನಾರ್ಥಕ ಪದ
(೨) ವೀರ, ಕಲಿ – ಪದ್ಯದ ಮೊದಲ ಮತ್ತು ಕೊನೆ ಪದ – ಸಮನಾರ್ಥ ಪದ
(೩) ತೇರು, ರಥ – ಸಮನಾರ್ಥಕ ಪದ
(೪) ರಥವ ತರಿಸು, ರಥವ ಏರು – ೩, ೬ ಸಾಲಿನಲ್ಲಿ ಬರುವ ಪದಗಳು

ಪದ್ಯ ೪೩: ಉತ್ತರನು ಬೃಹನ್ನಳೆಗೆ ಏಕೆ ಸಾರಥಿಯಾಗಲು ಹೇಳಿದ?

ಆನಿರಲು ಭೀಷ್ಮಾದಿಗಳು ನಿನ
ಗೇನ ಮಾಡಲು ಬಲ್ಲರಳುಕದೆ
ನೀನು ನಿಲು ಸಾಕೊಂದು ನಿಮಿಷಕೆ ಗೆಲುವೆನವರುಗಳ
ತಾನದಾರೆಂದರಿಯಲಾ ಗುರು
ಸೂನು ಕರ್ಣ ದ್ರೋಣರೆಂಬವ
ರಾನರಿಯದವರಲ್ಲ ಸಾರಥಿಯಾಗು ನೀನೆಂದ (ವಿರಾಟ ಪರ್ವ, ೬ ಸಂಧಿ, ೪೩ ಪದ್ಯ)

ತಾತ್ಪರ್ಯ:
ಅರ್ಜುನನ ಮಾತನ್ನು ಕೇಳಿದ ಉತ್ತರ, ನಾನಿರುವಾಗ ಭೀಷ್ಮಾದಿಗಳು ನಿನಗೆ ಏನು ಮಾಡುತ್ತಾರೆ? ನೀನು ಭಯಪಡದೆ ನನ್ನೊಂದಿಗೆ ನಿಲ್ಲು, ಒಂದೇ ಒಂದು ಗಳಿಗೆಯಲ್ಲಿ ಅವರೆಲ್ಲರನ್ನು ಸೋಲಿಸಿ ಜಯಶಾಲಿಯಾಗುತ್ತೇನೆ, ನಾನು ಯಾರು ಎಂದು ನಿನಗೆ ತಿಳಿಯದು, ಅಶ್ವತ್ಥಾಮ, ದ್ರೋಣ, ಕರ್ಣ ಮೊದಲಾದವರು ನನಗೆ ತಿಳಿಯದೆ, ನೀನು ಸುಮ್ಮನೆ ಸಾರಥಿಯಾಗು ಎಂದು ಹೇಳಿದನು.

ಅರ್ಥ:
ಆನು: ನಾನು; ಇರಲು: ಇರುವಾಗ; ಆದಿ: ಮುಂತಾದ; ಬಲ್ಲರು: ತಿಳಿ; ಅಳುಕು: ಭಯ; ನಿಲು: ನಿಲ್ಲು; ಸಾಕು: ಬೇಡ; ನಿಮಿಷ: ಕಾಲ ಪ್ರಮಾಣ, ಗಳಿಗೆ; ಗೆಲುವೆ: ಜಯಿಸುವೆ; ತಾನು: ನಾನು; ಅರಿ: ತಿಳಿ; ಸೂನು: ಮಗ; ಸಾರಥಿ: ರಥವನ್ನು ಓಡಿಸುವ;

ಪದವಿಂಗಡಣೆ:
ಆನಿರಲು +ಭೀಷ್ಮಾದಿಗಳು +ನಿನ
ಗೇನ +ಮಾಡಲು +ಬಲ್ಲರ್+ಅಳುಕದೆ
ನೀನು +ನಿಲು +ಸಾಕೊಂದು +ನಿಮಿಷಕೆ +ಗೆಲುವೆನ್+ಅವರುಗಳ
ತಾನ್+ಅದಾರೆಂದ್+ಅರಿಯಲಾ +ಗುರು
ಸೂನು +ಕರ್ಣ +ದ್ರೋಣ+ರೆಂಬವರ್
ಆನ್+ಅರಿಯದ್+ಅವರಲ್ಲ+ ಸಾರಥಿಯಾಗು +ನೀನೆಂದ

ಅಚ್ಚರಿ:
(೧) ಆನಿರಲು, ಆನರಿಯದು – ನಾನು ಎಂಬ ಪದದ ಮತ್ತೊಂದು ರೂಪ ಆನು

ಪದ್ಯ ೪೨: ಬೃಹನ್ನಳೆಯ ವೇಷದಲ್ಲಿದ್ದ ಅರ್ಜುನನು ಉತ್ತರನಿಗೆ ಏನು ಹೇಳಿದನು?

ಭರತವಿದ್ಯಾ ವಿಷಯದಲಿ ಪರಿ
ಚರಿಯತನ ನಮಗಲ್ಲದೀ ಸಂ
ಗರದ ಸಾರಥಿತನವ ಮರೆದೆವು ಹಲವು ಕಾಲದಲಿ
ಅರಿಭಟರು ಭೀಷ್ಮಾದಿಗಳು ನಿಲ
ಲರಿದು ಸಾರಥಿತನದ ಕೈ ಮನ
ಬರಡರಿಗೆ ದೊರೆಕೊಂಬುದೇ ರಣ ಸೂರೆಯಲ್ಲೆಂದ (ವಿರಾಟ ಪರ್ವ, ೬ ಸಂಧಿ, ೪೨ ಪದ್ಯ)

ತಾತ್ಪರ್ಯ:
ಅರ್ಜುನನು ಉತ್ತರನ ಬಳಿ ಬಂದು, ನನಗೆ ಭರತನಾಟ್ಯ ವಿಷಯದಲ್ಲಿ ಹೆಚ್ಚು ಪರಿಣತಿಯಿದೆ, ಆದರೆ ಯುದ್ಧದಲ್ಲಿ ಸಾರಥಿತನ ನಾನು ಬಹಳ ಹಿಂದೆ ಮಾಡಿದ್ದೆ ಆದುದರಿಂದ ಈಗ ಅದರ ಪರಿಚಯ ಕಡಿಮೆ ಯಾಗಿದೆ. ನಮ್ಮ ಶತ್ರುಗಳಾದರೋ ಭೀಷ್ಮ ಮುಂತಾದ ಕಲಿಗಳು ಅವರ ಎದುರು ಸಾರಥಿತನಕ್ಕೆ ಬೇಕಾದ ಕೈಚಳಕ ಮತ್ತು ಬುದ್ಧಿ ಚತುರತೆ ಈಗ ನನ್ನಲ್ಲಿ ಬರಡಾಗಿದೆ. ಯುದ್ಧ ಗೆಲ್ಲುವುದು ಗೆದ್ದ ಮೇಲೆ ಸೂರೆಹೊಡೆದಷ್ಟು ಸುಲಭವೇ ಎಂದು ಅರ್ಜುನನು ಕೇಳಿದನು.

ಅರ್ಥ:
ಭರತವಿದ್ಯ: ಭರತನಾಟ್ಯ; ವಿಷಯ: ವಿಚಾರ; ಪರಿಚರಿಯತ: ತಿಳಿವಳಿಕೆ ಇರುವ; ಸಂಗರ: ಯುದ್ಧ; ಸಾರಥಿ: ರಥ ಓಡಿಸುವವ; ಮರೆ: ನೆನಪಿನಿಂದ ದೂರವಾದ; ಹಲವು: ಬಹಳ; ಕಾಲ: ವರ್ಷ; ಅರಿ: ವೈರಿ; ಭಟ: ಬಲಶಾಲಿ; ನಿಲಲು: ಎದುರು ನಿಲ್ಲು; ಅರಿ: ತಿಳಿ; ಕೈ: ಹಸ್ತ; ಮನ: ಮನಸ್ಸು; ಬರಡು: ಕೆಲಸಕ್ಕೆ ಬಾರದ; ದೊರೆಕು: ಸಿಗುವುದು; ರಣ: ಯುದ್ಧ; ಸೂರೆ: ಕೊಳ್ಳೆ, ಲೂಟಿ;

ಪದವಿಂಗಡಣೆ:
ಭರತವಿದ್ಯಾ+ ವಿಷಯದಲಿ +ಪರಿ
ಚರಿಯತನ +ನಮಗಲ್ಲದೀ +ಸಂ
ಗರದ +ಸಾರಥಿತನವ+ ಮರೆದೆವು+ ಹಲವು +ಕಾಲದಲಿ
ಅರಿ+ಭಟರು +ಭೀಷ್ಮಾದಿಗಳು +ನಿಲಲ್
ಅರಿದು +ಸಾರಥಿತನದ +ಕೈ +ಮನ
ಬರಡರಿಗೆ +ದೊರೆಕೊಂಬುದೇ +ರಣ+ ಸೂರೆಯಲ್ಲೆಂದ

ಅಚ್ಚರಿ:
(೧) ಅರಿ ಪದದ ಬಳಕೆ – ೪, ೫ ಸಾಲು
(೨) ಸಂಗರ, ರಣ – ಸಮನಾರ್ಥಕ ಪದ

ಪದ್ಯ ೪೧: ಉತ್ತರನು ಬೃಹನ್ನಳೆಗೆ ಏನು ಹೇಳಿದನು?

ಎಲೆ ಬೃಹನ್ನಳೆ ತೆತ್ತುದೆನಗ
ಗ್ಗಳೆಯರೊಳು ವಿಗ್ರಹವು ಸಾರಥಿ
ಯಳಿದನೆನ್ನವ ನೀನು ಸಾರಥಿಯಾಗಿ ಸಮರದಲಿ
ಉಳುಹಬೇಹುದು ನೀ ಸಮರ್ಥನು
ಫಲುಗುಣನ ಸಾರಥಿಯಲೈ ನೀ
ನೊಲಿದು ಮೆಚ್ಚಲು ಕಾದಿ ತೋರುವೆನಹಿತ ಸೇನೆಯಲಿ (ವಿರಾಟ ಪರ್ವ, ೬ ಸಂಧಿ, ೪೧ ಪದ್ಯ)

ತಾತ್ಪರ್ಯ:
ಉತ್ತರನು ಬೃಹನ್ನಳೆಯನ್ನು ಕಂಡು, ಎಲೆ ಬೃಹನ್ನಳೆ, ನನಗೆ ಮಹಾಬಲಶಾಲಿಯರೊಡನೆ ಯುದ್ಧಮಾಡುವೆ ಪ್ರಸಂಗ ಒದಗಿದೆ, ನನ್ನ ಸಾರಥಿಯು ಯುದ್ಧದಲ್ಲಿ ಸಾವನ್ನಪ್ಪಿದ್ದಾನೆ, ನೀನು ನನಗೆ ಯುದ್ಧದಲ್ಲಿ ಸಾರಥಿಯಾಗಿ ನನ್ನನ್ನು ಉಳಿಸಬೇಕು, ನೀನು ಅರ್ಜುನನ ಸಾರಥಿಯಲ್ಲವೇ? ನೀನು ಸಮರ್ಥನು, ನೀನು ಮೆಚ್ಚುವಂತೆ ಯುದ್ಧಮಾಡಿ ಶತ್ರುಗಳನ್ನು ಸೋಲಿಸುತ್ತೇನೆ.

ಅರ್ಥ:
ತೆತ್ತು: ಹೊಂದಿಕೊಂಡಿರು; ಅಗ್ಗ: ಶ್ರೇಷ್ಠ; ವಿಗ್ರಹ: ಯುದ್ಧ; ಸಾರಥಿ: ಗಾಡಿ ಓಡಿಸುವವ; ಅಳಿ: ಸಾವು; ಸಮರ: ಯುದ್ಧ; ಉಳುಹು: ಉಳಿಸು; ಸಮರ್ಥ: ಬಲಶಾಲಿ; ಫಲುಗುಣ: ಅರ್ಜುನ; ಒಲಿ: ಒಪ್ಪು; ಮೆಚ್ಚು:ಇಷ್ಟ; ಕಾದಿ: ಯುದ್ಧಮಾಡಿ; ತೋರುವೆ: ತೋರಿಸುವೆ, ಪ್ರದರ್ಶಿಸುವೆ; ಅಹಿತ: ಹಿತವಲ್ಲದ, ಶತ್ರು; ಸೇನೆ: ಸೈನ್ಯ;

ಪದವಿಂಗಡಣೆ:
ಎಲೆ +ಬೃಹನ್ನಳೆ +ತೆತ್ತುದ್+ಎನಗ
ಅಗ್ಗಳೆಯರೊಳು +ವಿಗ್ರಹವು+ ಸಾರಥಿ
ಯಳಿದನ್+ಎನ್ನವ +ನೀನು +ಸಾರಥಿಯಾಗಿ +ಸಮರದಲಿ
ಉಳುಹಬೇಹುದು +ನೀ +ಸಮರ್ಥನು
ಫಲುಗುಣನ +ಸಾರಥಿಯಲೈ +ನೀ
ನೊಲಿದು+ ಮೆಚ್ಚಲು +ಕಾದಿ +ತೋರುವೆನ್+ಅಹಿತ+ ಸೇನೆಯಲಿ

ಅಚ್ಚರಿ:
(೧) ನೀನು, ನೀ – ಪದಗಳ ಬಳಕೆ, ೩,೪, ೫ ಸಾಲು
(೨) ಶತ್ರಸೈನ್ಯವನ್ನು ಅಹಿತ ಸೇನೆ ಎಂದು ಹೇಳಿರುವುದು
(೩) ಸಾರಥಿ – ೨, ೩ ಸಾಲಿನಲ್ಲಿ ಬರುವ ಪದ