ಪದ್ಯ ೧೨: ಧೃತರಾಷ್ಟ್ರನ ಹೆಂಡತಿ ಯಾರು?

ಧಾರುಣೀಪತಿ ಚಿತ್ತವಿಸು ಗಾಂ
ಧಾರ ದೇಶದ ಸುಬಲರಾಜ ಕು
ಮಾರಿ ಕುಲವಧುವಾದಳಾ ಧೃತರಾಷ್ಟ್ರಭೂಪತಿಗೆ
ನಾರಿಯರೊಳುತ್ತಮೆಯಲಾ ಗಾಂ
ಧಾರಿಯೆನಿಸಿ ಪತಿವ್ರತಾ ವಿ
ಸ್ತಾರಗುಣದಲಿ ಮೆರೆದಳಬಲೆ ಸಮಸ್ತ ಜನ ಹೊಗಳೆ (ಆದಿ ಪರ್ವ, ೩ ಸಂಧಿ, ೧೨ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಗಾಂಧಾರದೇಶದ ಸುಬಲರಾಜನ ಮಗಳಾದ ಗಾಂಧಾರಿಯು ಧೃತರಾಷ್ಟ್ರನ ಪತ್ನಿಯಾದಳು. ಉತ್ತಮಸ್ತ್ರೀಯಾದ ಅವಳು ಪಾತಿವ್ರತ್ಯದಿಮ್ದ ಎಲ್ಲರಿಂದಲೂ ಹೊಗಳಿಸಿಕೊಂಡಳು.

ಅರ್ಥ:
ಧಾರುಣೀಪತಿ: ರಾಜ; ಚಿತ್ತವಿಸು: ಕೇಳು; ದೇಶ: ರಾಷ್ಟ್ರ; ಕುಮಾರಿ: ಹುಡುಗಿ; ಕುಲವಧು: ಹೆಂಡತಿ; ಭೂಪತಿ: ರಾಜ; ನಾರಿ: ಸ್ತ್ರೀ; ಉತ್ತಮ: ಶ್ರೇಷ್ಠ; ಪತಿವ್ರತೆ: ಸಾಧ್ವಿ, ಗರತಿ; ವಿಸ್ತಾರ: ಹೆಚ್ಚಳ; ಗುಣ: ನಡತೆ; ಮೆರೆ: ಹೊಳೆ, ಪ್ರಕಾಶಿಸು; ಸಮಸ್ತ: ಎಲ್ಲಾ; ಹೊಗಳು: ಪ್ರಶಂಶಿಸು;

ಪದವಿಂಗಡಣೆ:
ಧಾರುಣೀಪತಿ +ಚಿತ್ತವಿಸು +ಗಾಂ
ಧಾರ +ದೇಶದ +ಸುಬಲ+ರಾಜಕು
ಮಾರಿ +ಕುಲವಧುವಾದಳಾ +ಧೃತರಾಷ್ಟ್ರ+ಭೂಪತಿಗೆ
ನಾರಿಯರೊಳ್+ಉತ್ತಮೆಯಲಾ+ ಗಾಂ
ಧಾರಿ+ಎನಿಸಿ +ಪತಿವ್ರತಾ+ ವಿ
ಸ್ತಾರಗುಣದಲಿ +ಮೆರೆದಳ್+ಅಬಲೆ +ಸಮಸ್ತ +ಜನ +ಹೊಗಳೆ

ಅಚ್ಚರಿ:
(೧) ಗಾಂಧಾರಿಯನ್ನು ವರ್ಣಿಸುವ ಪರಿ – ಗಾಂಧಾರ ದೇಶದ ಸುಬಲರಾಜ ಕುಮಾರಿ ಕುಲವಧುವಾದಳಾ
(೨) ಧಾರುಣೀಪತಿ, ಭೂಪತಿ – ಸಮಾನಾರ್ಥಕ ಪದ

ಪದ್ಯ ೧೯: ಕೌರವನನ್ನು ನೋಡಿ ಹೆಂಗಸರೇಕೆ ನಗುವರು?

ಅಡವಿಯೇ ನೆಲೆ ಪಾಂಡುಸುತರಿಗೆ
ಕೊಡೆನು ಧರಣಿಯನೆಂದುಖಡುಗವ
ಜಡಿದೆಲಾ ನಿನ್ನೋಲಗದ ನಾರಿಯರ ಸಮ್ಮುಖದಿ
ಖಡುಗವನು ಕಳನೊಳಗೆ ಹಾಯಿಕಿ
ನಡುಗೊಳನ ನೀನೋಡಿ ಹೊಕ್ಕಡೆ
ಮಡದಿಯರು ತಮತಮಗೆ ನಗರೇ ಹೊಯ್ದು ಕರತಳವ (ಗದಾ ಪರ್ವ, ೫ ಸಂಧಿ, ೧೯ ಪದ್ಯ)

ತಾತ್ಪರ್ಯ:
ಅಂದು ನಿನ್ನ ಆಸ್ಥಾನದಲ್ಲಿ ಇದ್ದ ಸ್ತ್ರೀಯರ ಸಮ್ಮುಖದಲ್ಲಿ ಪಾಂಡವರಿಗೆ ಭೂಮಿಯನ್ನು ಕೊಡುವುದಿಲ್ಲ, ಅವರಿಗೆ ಕಾಡೇಗತಿ ಎಂದು ಘೋಷಿಸಿ ಖಡ್ಗವನ್ನು ಹಿರಿದೆಯಲ್ಲವೇ? ಆ ಖಡ್ಗವನ್ನು ರಣಭೂಮಿಯಲ್ಲೆಸೆದು ಓಡಿಬಂದು ಕೊಳದ ಮಧ್ಯದಲ್ಲಿ ಅವಿತುಕೊಂಡರೆ, ಆ ಹೆಣ್ಣುಮಕ್ಕಳು ಕೈ ತಟ್ಟಿ ನಗುವುದಿಲ್ಲವೇ ಎಂದು ಧರ್ಮಜನು ಹಂಗಿಸಿದನು.

ಅರ್ಥ:
ಅಡವಿ: ಕಾಡು; ನೆಲೆ: ಭೂಮಿ; ಸುತ: ಮಕ್ಕಳು; ಕೊಡೆ: ನೀಡುವುದಿಲ್ಲ; ಧರಣಿ: ಭೂಮಿ; ಖಡುಗ: ಕತ್ತಿ; ಜಡಿ: ಬೀಸು; ಓಲಗ: ದರ್ಬಾರು; ನಾರಿ: ಸ್ತ್ರೀ; ಸಮ್ಮುಖ: ಎದುರು; ಕಳ: ರಣರಂಗ; ಹಾಯಿಕು: ಹಾಕು, ಬಿಸಾಡು; ನಡು: ಮಧ್ಯ; ಕೊಳ: ಸರಸಿ; ಓಡು: ಧಾವಿಸು; ಹೊಕ್ಕು: ಸೇರು; ಮಡದಿ: ಹೆಂಡತಿ; ನಗು: ಹರ್ಷಿಸು; ಹೊಯ್ದು: ಹೊಡೆ; ಕರತಳ: ಹಸ್ತ, ಕೈ;

ಪದವಿಂಗಡಣೆ:
ಅಡವಿಯೇ +ನೆಲೆ +ಪಾಂಡುಸುತರಿಗೆ
ಕೊಡೆನು+ ಧರಣಿಯನೆಂದು+ಖಡುಗವ
ಜಡಿದೆಲಾ +ನಿನ್ನೋಲಗದ +ನಾರಿಯರ +ಸಮ್ಮುಖದಿ
ಖಡುಗವನು +ಕಳನೊಳಗೆ +ಹಾಯಿಕಿ
ನಡು+ಕೊಳನ +ನೀನೋಡಿ+ ಹೊಕ್ಕಡೆ
ಮಡದಿಯರು +ತಮತಮಗೆ+ ನಗರೇ+ ಹೊಯ್ದು +ಕರತಳವ

ಅಚ್ಚರಿ:
(೧) ನಾರಿಯರು ನಗುವ ಪರಿ – ಮಡದಿಯರು ತಮತಮಗೆ ನಗರೇ ಹೊಯ್ದು ಕರತಳವ

ಪದ್ಯ ೧೨: ಅರ್ಜುನನು ಹೇಗೆ ಅರಮನೆಯನ್ನು ಪ್ರವೇಶಿಸಿದನು?

ವೀರರಿದಿರುಗ್ಗಡಣೆಗಳ ಕೈ
ವಾರಿಗಳ ಮಾಣಿಸುತಲೈತಹ
ನಾರಿಯರ ರತುನಾರತಿಯ ತಳಿಗೆಗಳ ನೂಕಿಸುತ
ಸಾರಿ ಕೈಗೊಡುವದಟರನು ಕ
ಣ್ಣೋರೆಯಲಿ ಕೋಪಿಸುತ ತನ್ನಯ
ತೇರನಿಳಿದನು ಪಾರ್ಥನಸುರಾರಿಯ ನಿರೂಪದಲಿ (ದ್ರೋಣ ಪರ್ವ, ೮ ಸಂಧಿ, ೧೨ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಪರಾಕ್ರಮವನ್ನು ಹೊಗಳುವವರನ್ನು ನಿಲ್ಲಿಸಿ, ರತ್ನದ ಆರತಿಯನ್ನು ತಂದ ಹೆಣ್ಣುಮಕ್ಕಳನ್ನು ಆಚೆ ಕಳಿಸಿ, ಹಸ್ತಲಾಘವ ಕೊಡಲು ಬಂದ ವೀರರನ್ನು ಕಡೆಗಣ್ಣೋಟದಿಂದಲೇ ಕೋಪವನ್ನು ತೋರಿಸಿ ಕೃಷ್ಣನ ಅಪ್ಪಣೆಯನ್ನು ಪಡೆದು ರಥದಿಂದಿಳಿದನು.

ಅರ್ಥ:
ವೀರ: ಶೂರ; ಉಗ್ಗಡ: ಶ್ರೇಷ್ಠ; ಕೈವಾರಿ: ಹೊಗಳು ಭಟ್ಟ; ಮಾಣಿಸು: ನಿಲ್ಲಿಸು; ನಾರಿ: ಹೆಣ್ಣು; ರತುನ: ಬೆಲೆಬಾಳುವ ಮಣಿ; ಆರತಿ: ನೀರಾಜನ; ತಳಿಗೆ: ತಟ್ಟೆ, ತಾಟು; ನೂಕು: ತಳ್ಳು; ಸಾರಿ: ತಳ್ಳು; ಕೈ: ಹಸ್ತ; ಕಣ್ಣು: ನಯನ; ಓರೆ: ಡೊಂಕು; ಕೋಪ: ಸಿಟ್ಟು; ತೇರು: ರಥ; ಇಳಿ: ಕೆಳಕ್ಕೆ ಬಾ; ನಿರೂಪ: ಅಪ್ಪಣೆ, ಆಜ್ಞೆ;

ಪದವಿಂಗಡಣೆ:
ವೀರರ್+ಇದಿರ್+ಉಗ್ಗಡಣೆಗಳ +ಕೈ
ವಾರಿಗಳ +ಮಾಣಿಸುತಲ್+ಐತಹ
ನಾರಿಯರ+ ರತುನಾರತಿಯ+ ತಳಿಗೆಗಳ +ನೂಕಿಸುತ
ಸಾರಿ +ಕೈಗೊಡುವದಟರನು +ಕ
ಣ್ಣೋರೆಯಲಿ +ಕೋಪಿಸುತ +ತನ್ನಯ
ತೇರನಿಳಿದನು +ಪಾರ್ಥನ್+ಅಸುರಾರಿಯ +ನಿರೂಪದಲಿ

ಅಚ್ಚರಿ:
(೧) ಕೈವಾರಿ, ಅಸುರಾರಿ, ನಾರಿ, ಸಾರಿ – ಪ್ರಾಸ ಪದಗಳು

ಪದ್ಯ ೫: ಶಲ್ಯನ ಸೈನ್ಯದ ಮಾಂಸವು ಯಾರಿಗೆ ರುಚಿಸಿತು?

ಹಳಚಿ ಮುರಿದುದು ವೀರ ಕರ್ಣನ
ಬಲ ಕೃಪಾಚಾರಿಯರ ಸೇನೆಗೆ
ತಲೆಯ ಋಣ ಸಂಬಂಧ ಸವೆದುದು ಕಾತರಿಸಿ ಕವಿವ
ಬಲದ ಬಿರುದರಿಗಮರ ನಾರಿಯ
ರೊಳಗೆ ಸೇರುವೆಯಾಯ್ತು ಶಲ್ಯನ
ಬಲದಡಗು ಸವಿಯಾಯ್ತು ಜಂಬುಕ ಕಾಕ ಸಂತತಿಗೆ (ದ್ರೋಣ ಪರ್ವ, ೬ ಸಂಧಿ, ೫ ಪದ್ಯ)

ತಾತ್ಪರ್ಯ:
ಕರ್ಣನ ಸೈನ್ಯ ಯುದ್ಧಮಾಡಿ ಸೋತು ಓಡಿತು, ಕೃಪಾಚಾರ್ಯನ ಯೋಧರಿಗೆ ತಲೆಯ ಋಣಸಂಬಂಧ ಕಡಿದು ಹೋಯಿತು. ಉತ್ಸಾಹದಿಂದ ಸುತ್ತುವರಿದ ವೀರರು ಅಪ್ಸರ ಸ್ತ್ರೀಯರೊಂದಿಗೆ ಬೆರೆತರು. ಶಲ್ಯನ ಸೈನ್ಯದ ಮಾಂಸಖಂಡಗಳು ಕಾಗೆ ನರಿಗಳಿಗೆ ಪ್ರಿಯವಾಯಿತು.

ಅರ್ಥ:
ಹಳಚು: ತಾಗು, ಬಡಿ; ಮುರಿ: ಸೀಳು; ವೀರ: ಶೂರ; ಬಲ: ಸೈನ್ಯಲ್ ಸೇನೆ: ಸೈನ್ಯ; ತಲೆ: ಶಿರ; ಋಣ: ಹಂಗು; ಸಂಬಂಧ: ಸಂಪರ್ಕ, ಸಹವಾಸ; ಸವೆ: ಹಾಕು, ಉಂಟಾಗು; ಕಾತರಿಸು: ತವಕಗೊಳ್ಳು; ಕವಿ: ಆವರಿಸು; ಬಲ: ಸೈನ್ಯ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಅಮರ: ದೇವತೆ; ನಾರಿ: ಹೆಣ್ಣು; ಸೇರು: ಜೊತೆಗೂಡು; ಅಡಗು: ಮಾಂಸ; ಸವಿ: ರುಚಿ; ಜಂಬುಕ: ನರಿ; ಕಾಕ: ಕಾಗೆ; ಸಂತತಿ: ವಂಶ;

ಪದವಿಂಗಡಣೆ:
ಹಳಚಿ +ಮುರಿದುದು +ವೀರ +ಕರ್ಣನ
ಬಲ +ಕೃಪಾಚಾರಿಯರ +ಸೇನೆಗೆ
ತಲೆಯ +ಋಣ +ಸಂಬಂಧ +ಸವೆದುದು +ಕಾತರಿಸಿ +ಕವಿವ
ಬಲದ +ಬಿರುದರಿಗ್+ಅಮರ +ನಾರಿಯ
ರೊಳಗೆ +ಸೇರುವೆಯಾಯ್ತು +ಶಲ್ಯನ
ಬಲದ್+ಅಡಗು +ಸವಿಯಾಯ್ತು +ಜಂಬುಕ +ಕಾಕ +ಸಂತತಿಗೆ

ಅಚ್ಚರಿ:
(೧) ಸತ್ತರು ಎಂದು ಹೇಳುವ ಪರಿ – ಬಲದ ಬಿರುದರಿಗಮರ ನಾರಿಯರೊಳಗೆ ಸೇರುವೆಯಾಯ್ತು; ಬಲದಡಗು ಸವಿಯಾಯ್ತು ಜಂಬುಕ ಕಾಕ ಸಂತತಿಗೆ; ತಲೆಯ ಋಣ ಸಂಬಂಧ ಸವೆದುದು

ಪದ್ಯ ೧೦: ಕರ್ಣನ ಮುಂದೆ ಯಾರು ರಥವನ್ನು ನಿಲ್ಲಿಸಿದರು?

ಸಾರು ನೀ ಸಹದೇವ ಜಗದ ವಿ
ಕಾರಿಯಿವನೀ ಕರ್ಣನಿವನ ದೊ
ಠಾರಿಸುವ ನಾಲಗೆಯ ಕೊಯ್ಲಿಗೆ ಶಸ್ತ್ರವಿವೆಯೆನುತ
ಸಾರಥಿಯ ಬೋಳೈಸಿ ಚಾಪದ
ನಾರಿಯನು ದನಿಮಾಡಿ ನಕುಲನು
ದಾರ ಕರ್ಣನ ಮುಟ್ಟಿ ಬಂದನು ಚಾಚಿದನು ರಥವ (ಕರ್ಣ ಪರ್ವ, ೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ಸಹದೇವನ ಸ್ಥಿತಿಯನ್ನು ನೋಡಿದ ನಕುಲನು ಅವನ ಸಹಾಯಕ್ಕೆ ಬಂದು, ಸಹದೇವ ಈ ಕರ್ಣನು ಜಗತ್ತಿನಲ್ಲಿ ಅತಿ ವಿಕೃತ ಮನಸ್ಸಿನ ಸ್ವಭಾವದವನು, ಬಾಯಿಗೆ ಬಂದಂತೆ ಬೊಗಳುವ ಇವನ ನಾಲಿಗೆಯನ್ನು ಕೊಯ್ಯಲು ನನ್ನಲ್ಲಿ ಆಯುಧಗಳಿವೆ ಎಂದು ಸಾರಥಿಯನ್ನು ಸಂತೈಸಿ ಹೆದೆಯನ್ನು ಧ್ವನಿಮಾಡಿ ದಾನ ಶೂರನಾದ ಕರ್ಣನ ಮುಂದೆ ತನ್ನ ರಥವನ್ನು ತಂದು ನಿಲ್ಲಿಸಿದನು.

ಅರ್ಥ:
ಸಾರು: ಹತ್ತಿರಕ್ಕೆ ಬರು, ಸಮೀಪಿಸು; ಜಗ: ವಿಶ್ವ; ವಿಕಾರಿ: ಕುರೂಪ, ಮನಸ್ಸಿನ ವಿಕೃತಿ; ದೊಠಾರ: ಶೂರ, ಕಲಿ, ಬಲಿಷ್ಠ; ನಾಲಗೆ: ಜಿಹ್ವೆ; ಕೊಯ್ಲು: ಸೀಳು, ಕತ್ತರಿಸು; ಶಸ್ತ್ರ: ಆಯುಧ; ಸಾರಥಿ: ರಥ ಓಡಿಸುವ, ಸೂತ; ಬೋಳೈಸು: ಸಂತೈಸು, ಸಮಾಧಾನಪಡಿಸು; ಚಾಪ: ಬಿಲ್ಲು; ನಾರಿ: ಬಿಲ್ಲಿನ ಹೆದೆ; ದನಿ: ಶಬ್ದ; ಉದಾರ: ದಾನ ಶೀಲನಾದ ವ್ಯಕ್ತಿ; ಮುಟ್ಟು: ಹತ್ತಿರ, ಸಮೀಪ; ಬಂದು: ಆಗಮಿಸು; ಚಾಚು: ಹರಡು; ರಥ: ಬಂಡಿ;

ಪದವಿಂಗಡಣೆ:
ಸಾರು +ನೀ +ಸಹದೇವ+ ಜಗದ+ ವಿ
ಕಾರಿ+ಯಿವನ್+ ಈ+ ಕರ್ಣನ್+ಇವನ+ ದೊ
ಠಾರಿಸುವ +ನಾಲಗೆಯ+ ಕೊಯ್ಲಿಗೆ +ಶಸ್ತ್ರವಿವೆ+ಯೆನುತ
ಸಾರಥಿಯ +ಬೋಳೈಸಿ +ಚಾಪದ
ನಾರಿಯನು +ದನಿಮಾಡಿ +ನಕುಲನ್
ಉದಾರ+ ಕರ್ಣನ +ಮುಟ್ಟಿ +ಬಂದನು +ಚಾಚಿದನು +ರಥವ

ಅಚ್ಚರಿ:
(೧) ಕರ್ಣನನ್ನು ವಿಕಾರಿ, ಉದಾರ, ದೊಠಾರಿಸುವ ನಾಲಗೆ ಎಂದು ಕರೆದಿರುವುದು
(೨) ನಕುಲನ ಯುದ್ಧ ಸಿದ್ಧತೆ – ಸಾರಥಿಯ ಬೋಳೈಸಿ ಚಾಪದ ನಾರಿಯನು ದನಿಮಾಡಿ ನಕುಲನುದಾರ ಕರ್ಣನ ಮುಟ್ಟಿ ಬಂದನು

ಪದ್ಯ ೨೯:ಗಂಗೆಯು ಕುಂತಿಗೆ ಏನು ಹೇಳಿದಳು?

ಆ ಸಮಯದೊಳು ಗಂಗೆ ನಾರೀ
ವೇಷದೊಳು ನಡೆತಂದಳೆಲೆ ಕುಂ
ತೀ ಸತಿಯೆ ಕೈಯೆಡೆಯ ಕಂದನನೊಪ್ಪುಗೊಳು ನೀನು
ಈಸುದಿನಮಿವನಾಗು ಹೋಗಿನ
ಗಾಸಿಯನು ಸಲೆ ಯಾದೆನೆನ್ನಯ
ಭಾಷೆಸಂದುದೆನುತ್ತೆ ತಾಯಿಗೆ ಕೊಟ್ಟಳಾತ್ಮಜನ (ಉದ್ಯೋಗ ಪರ್ವ, ೧೧ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕುಂತಿ ಕರ್ಣರಿಬ್ಬರು ಇದ್ದ ಸಮಯದಲ್ಲಿ ಗಂಗಾದೇವಿಯು ನಾರೀ ರೂಪವನ್ನು ಧರಿಸಿ ಬಂದು ಕುಂತಿಗೆ, “ಎಲೌ ಕುಂತಿ ಚಿಕ್ಕಂದಿನಲ್ಲಿ ನನ್ನ ಕೈಗೊಪ್ಪಿಸಿದ್ದ ನಿನ್ನ ಮಗುವನ್ನು ಹಿಂದಿರುಗಿ ಕೊಟ್ಟಿದ್ದೇನೆ, ಇಷ್ಟು ದಿನ ಇವನ ಆಗು ಹೋಗುಗಳು ಕಷ್ಟದಿಂದ ನಾನಿವನನ್ನು ಕಾಪಾಡಿದೆ. ನನ್ನ ಭಾಷೆ ಇಂದಿಗೆ ತೀರಿತು. ನಿನ್ನ ಮಗನನ್ನು ಒಪ್ಪಿಸಿಕೋ ಎಂದು ಹೇಳಿ ಹೊರಟು ಹೋದಳು.

ಅರ್ಥ:
ಸಮಯ: ಕಾಲ; ನಾರಿ: ಹೆಣ್ಣು; ವೇಷ: ರೂಪ; ನಡೆ: ಮುಂದೆ ಬಂದು; ಸತಿ: ನಾರಿ; ಕೈ: ಕರ, ಹಸ್ತ; ಕಂದ: ಮಗು; ಒಪ್ಪುಗೊಳು: ಒಪ್ಪಿಸಿಕೋ, ಸ್ವೀಕರಿಸು; ಈಸು: ಇಷ್ಟು; ದಿನ: ವಾರ, ಸಮಯ; ಆಗುಹೋಗು: ನಡೆದ; ಗಾಸಿ:ತೊಂದರೆ, ಕಷ್ಟ; ಸಲೆ: ಒಂದೇ ಸಮನೆ; ಕಾಯ್ದೆನು: ನೋಡಿಕೊಂಡೆನು, ರಕ್ಷಿಸು; ಭಾಷೆ: ಪ್ರಮಾಣ; ಸಂದುದು: ತೀರಿತು; ಆತ್ಮಜ: ಮಗ; ಕೊಟ್ಟಳು: ನೀಡಿದಳು;

ಪದವಿಂಗಡಣೆ:
ಆ +ಸಮಯದೊಳು +ಗಂಗೆ +ನಾರೀ
ವೇಷದೊಳು +ನಡೆತಂದಳ್+ಎಲೆ +ಕುಂ
ತೀ +ಸತಿಯೆ +ಕೈಯೆಡೆಯ+ ಕಂದನನ್+ಒಪ್ಪುಗೊಳು +ನೀನು
ಈಸುದಿನಮ್+ಇವನ್+ಆಗು ಹೋಗಿನ
ಗಾಸಿಯನು +ಸಲೆ +ಯಾದೆನ್+ಎನ್ನಯ
ಭಾಷೆಸಂದುದ್+ಎನುತ್ತೆ +ತಾಯಿಗೆ +ಕೊಟ್ಟಳ್+ಆತ್ಮಜನ

ಅಚ್ಚರಿ:
(೧) ನಾರಿ, ಸತಿ – ಸಮನಾರ್ಥಕ ಪದ

ಪದ್ಯ ೬೬: ಯಾರನ್ನು ಎಲ್ಲಿ ಹೇಗೆ ಹೊಗಳಬೇಕು?

ಮುಂದೆ ಗುರುವನು ಬಂಧುಜನವನು
ಹಿಂದೆ ಕರ್ಮಾಂತದಲಿ ಸೇವಕ
ವೃಂದವನು ಕೊಂಡಾಡುವುದು ಸಾಹಿತ್ಯ ಮಾರ್ಗವಿದು
ಹಿಂದು ಮುಂದೆಂದೆಂದು ನಿನ್ನಯ
ನಂದನರ ನಾರಿಯರ ಹೊಗಳುವು
ದಂದವೇ ಭೂಪಾಲ ಚಿತ್ತೈಸೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೬೬ ಪದ್ಯ)

ತಾತ್ಪರ್ಯ:
ಯಾರನ್ನು ಹೇಗೆ ಎಲ್ಲಿ ಹೊಗಳಬೇಕೆಂದು ವಿದುರ ನೀತಿ ನಮಗ ಕಲಿಸುತ್ತದೆ. ಗುರುಗಳನ್ನು ಅವರ ಸಮ್ಮುಖದಲ್ಲಿ ಹೊಗಳಬೇಕು, ಬಂಧುಜನರನ್ನು ಅವರಿಲ್ಲದಾಗ ಹೊಗಳಬೇಕು, ಸೇವಕರನ್ನು ಅವರ ಕೆಲಸ ಮುಗಿದ ಮೇಲೆ ಹೊಗಳಬೇಕು, ಹಿಂದೆಯಾಗಲಿ, ಮುಂದೆಯಾಗಲಿ, ಯಾವಾಗಲೂ ನಿನ್ನ ಮಕ್ಕಳನ್ನೂ, ರಾಣಿವಾಸದವರನ್ನು ಹೊಗಳುವುದು ಸರಿಯಲ್ಲ, ಇದನ್ನು ಗಮನದಲ್ಲಿಡು ಎಂದು ವಿದುರ ತಿಳಿಸಿದ.

ಅರ್ಥ:
ಮುಂದೆ: ಎದುರು; ಗುರು: ಆಚಾರ್ಯ; ಬಂಧುಜನ: ಬಾಂಧವರು; ಹಿಂದೆ: ಹಿಂಬದಿ; ಕರ್ಮ: ಕೆಲಸ, ಕಾರ್ಯ; ಅಂತ್ಯ: ಕೊನೆ; ಸೇವಕ: ದಾಸ; ವೃಂದ: ಗುಂಪು; ಕೊಂಡಾಡು: ಹೊಗಳು; ಹಿತ: ಒಳ್ಳೆಯದು, ಹಿತಕರ; ಮಾರ್ಗ: ದಾರಿ; ಎಂದೆಂದು: ಯಾವಾಗಲು; ನಂದನ: ಮಕ್ಕಳು; ನಾರಿ: ಸ್ತ್ರೀ; ಹೊಗಳು:ಸ್ತುತಿ, ಕೊಂಡಾಡು; ಭೂಪಾಲ: ರಾಜ; ಚಿತ್ತೈಸು: ಗಮನವಿಟ್ಟು ಕೇಳು;

ಪದವಿಂಗಡಣೆ:
ಮುಂದೆ +ಗುರುವನು +ಬಂಧುಜನವನು
ಹಿಂದೆ+ ಕರ್ಮಾಂತದಲಿ +ಸೇವಕ
ವೃಂದವನು+ ಕೊಂಡಾಡುವುದು+ ಸಾಹಿತ್ಯ+ ಮಾರ್ಗವಿದು
ಹಿಂದು +ಮುಂದ್+ ಎಂದೆಂದು +ನಿನ್ನಯ
ನಂದನರ+ ನಾರಿಯರ+ ಹೊಗಳುವುದ್
ಅಂದವೇ+ ಭೂಪಾಲ +ಚಿತ್ತೈಸೆಂದನಾ +ವಿದುರ

ಅಚ್ಚರಿ:
(೧) ಮುಂದೆ, ಹಿಂದೆ – ವಿರುದ್ಧ ಪದಗಳು
(೨) ಮಕ್ಕಳು ಸ್ತ್ರೀಯರನ್ನು ಸದಾ ಹೊಗಳುವುದು ಸರಿಯಲ್ಲ ಎಂದು ಹೇಳುವ ವಿದುರ ನೀತಿ
(೩) ಕೊಂಡಾಡು, ಹೊಗಳು – ಸಮನಾರ್ಥಕ ಪದ

ಪದ್ಯ ೧೪: ಸ್ತ್ರೀಯರ ಮಾತನ್ನೇ ಒಪ್ಪಿ ಹೇಳಿದಂತೆ ಕೇಳಿದರೆ ಏನಾಗುತ್ತದೆ?

ಹರಿವ ನದಿ ತನ್ನಿಚ್ಛೆಯೊಳು ದಡ
ವೆರಡ ಕಿಡಿಸುವವೋಲು ನಾರಿಯ
ರುರವಣೆಗೆ ಕೈಗೊಟ್ಟು ನಡೆಸಿದೊಡುಭಯ ವಂಶವನು
ನೆರಪುವರು ನೀರೊಳಗೆ ಮೇರೆಯ
ಮುರಿಯಲೀಯದೆ ಮಾರ್ಗದೊಳು ಮ
ತ್ಸರಿಸದಾಳುವುದನುನಯವು ಭೂಪಾಲ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ಹರಿಯುತಿರುವ ನದಿಯ ಪ್ರವಾಹವು ತನ್ನ ದಡಕ್ಕೆ ಅಪ್ಪಳಿಸಿ ಅಲ್ಲಿರುವುದನ್ನು ಬೀಳುವಂತೆ ಮಾಡುವ ಹಾಗೆ, ಸ್ತ್ರೀಯರ ಮಾತನ್ನೇ ಒಪ್ಪಿ ಹೇಳಿದಂತೆ ಕೇಳಿದರೆ, ಅವರು ಉಭಯ ವಂಶಗಳನ್ನು ಹಾಳು ಮಾಡಿ ನೀರಲ್ಲಿ ಮುಳುಗಿಸುತ್ತಾರೆ. ಧರ್ಮಮಾರ್ಗದ ಮೇರೆಯನ್ನು ಮೀರದೆ ಅವರ ಸದ್ಗುಣಗಳಿಗೆ ಸದಭಿಪ್ರಾಯಗಳಿಗೆ ಮನ್ನಣೆ ಮತ್ಸವರಿಲ್ಲದಂತೆ ಆಳುವುದು ಸರಿಯಾದ ಮಾರ್ಗ ಎಂದು ವಿದುರನು ಹೇಳಿದ.

ಅರ್ಥ:
ಹರಿ: ಪ್ರವಾಹ, ರೀತಿ; ನದಿ: ಹೊಳೆ; ಇಚ್ಛೆ: ಬಯಕೆ, ಆಸೆ; ದಡ:ತೀರ; ಎರಡು: ಯುಗಳ; ಕಿಡಿಸು: ಹಾಳುಮಾಡು; ನಾರಿ: ಸ್ತ್ರೀ; ಉರವಣೆ:ಆತುರ, ಅವಸರ; ಕೈಗೊಟ್ಟು: ಹೇಳಿದಂತೆ ಕೇಳು; ನಡೆಸು: ಆಚರಿಸು; ಉಭಯ: ಎರಡು; ವಂಶ: ಕುಲ; ನೆರಪು: ಕೂಡಿಸು, ಸೇರಿಸು; ನೀರು: ಅಂಬು, ಜಲ; ಮೇರೆ: ಎಲ್ಲೆ, ಗಡಿ; ಮುರಿ: ಸೀಳು; ಮಾರ್ಗ: ದಾರಿ; ಮತ್ಸರ:ಹೊಟ್ಟೆಕಿಚ್ಚು, ಮಾತ್ಸರ್ಯ; ಅನುನಯ: ಪ್ರೀತಿ; ಭೂಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಹರಿವ +ನದಿ +ತನ್ನಿಚ್ಛೆಯೊಳು +ದಡ
ವೆರಡ+ ಕಿಡಿಸುವವೋಲು+ ನಾರಿಯರ್
ಉರವಣೆಗೆ +ಕೈಗೊಟ್ಟು +ನಡೆಸಿದೊಡ್+ಉಭಯ +ವಂಶವನು
ನೆರಪುವರು+ ನೀರೊಳಗೆ+ ಮೇರೆಯ
ಮುರಿಯಲ್+ಈಯದೆ +ಮಾರ್ಗದೊಳು +ಮ
ತ್ಸರಿಸದ್+ಆಳುವುದ್+ಅನುನಯವು +ಭೂಪಾಲ +ಕೇಳೆಂದ

ಪದ್ಯ ೪೭: ಉತ್ತರೆಯು ಅರ್ಜುನನಿಗೆ ಏನನ್ನು ತೆಗೆದುಕೊಂಡು ಬಾ ಎಂದು ಹೇಳಿದಳು?

ಕವಚವನು ತೊಡಲರಿಯದವನಾ
ಹವಕೆ ಸಾರಥಿತನವ ಮಾಡುವ
ಹವಣು ತಾನೆಂತೆನುತಲಿದ್ದರು ನಿಖಿಳ ನಾರಿಯರು
ಬವರವನು ನಮ್ಮಣ್ಣಗೆಲಿದಪ
ನವರ ಮಣಿ ಪರಿಧಾನವಾಭರ
ಣವನು ಸಾರಥಿ ಕೊಂಡುಬಾಯೆಂದಳು ಸರೋಜಮುಖಿ (ವಿರಾಟ ಪರ್ವ, ೬ ಸಂಧಿ, ೪೭ ಪದ್ಯ)

ತಾತ್ಪರ್ಯ:
ಸಾರಥಿಯ ಕವಚವನ್ನೇ ಹಾಕಿಕೊಳ್ಳಲು ಬಾರದವನು ಇನ್ನು ಯುದ್ಧದಲ್ಲಿ ಸಾರಥಿಯಾಗಿ ರಥವನ್ನು ಓಡಿಸಬಲ್ಲನೆ ಎಂದು ಸಭೆಯಲ್ಲಿದ್ದ ನಾರಿಯರು ಮಾತಾಡಿಕೊಂಡರು. ಉತ್ತರೆಯು, ನಮ್ಮಣ್ಣನು ಯುದ್ಧದಲ್ಲಿ ಗೆಲ್ಲುತ್ತಾನೆ, ಶತ್ರುಗಳ ಒಳ್ಳೆಯ ವಸ್ತ್ರಗಳನ್ನು ಆಭರಣಗಳನ್ನು ತೆಗೆದುಕೊಂಡು ಬಾ ಎಂದು ಅರ್ಜುನನಿಗೆ ಹೇಳಿದಳು.

ಅರ್ಥ:
ಕವಚ: ಹೊದಿಕೆ; ತೊಡಲು: ಹಾಕಿಕೊಳ್ಳಲು, ಧರಿಸಲು; ಅರಿ: ತಿಳಿ; ಆಹವ: ಯುದ್ಧ; ಸಾರಥಿ: ರಥವನ್ನು ಓಡಿಸುವ; ಹವಣು: ಪ್ರಮಾಣ; ಶಕ್ತಿ; ನಿಖಿಳ: ಎಲ್ಲಾ; ನಾರಿ: ಸ್ತ್ರೀ; ಬವರ:ಯುದ್ಧ; ಅಣ್ಣ: ಸಹೋದರ; ಗೆಲಿ: ಜಯ; ಮಣಿ:ಬಾಗು, ಬಗ್ಗು; ಪರಿಧಾನ:ಕಾಣಿಕೆ; ಆಭರಣ: ಒಡವೆ; ಕೊಂಡುಬಾ: ತೆಗೆದುಕೊಂಡು ಬಾ; ಸರೋಜಮುಖಿ: ಸುಂದರಿ, ಯುವತಿ; ಸರೋಜ: ಕಮಲ;

ಪದವಿಂಗಡಣೆ:
ಕವಚವನು +ತೊಡಲ್+ಅರಿಯದವನ್+
ಆಹವಕೆ +ಸಾರಥಿತನವ+ ಮಾಡುವ
ಹವಣು +ತಾನೆಂತ್+ಎನುತಲಿದ್ದರು +ನಿಖಿಳ +ನಾರಿಯರು
ಬವರವನು +ನಮ್ಮಣ್ಣ+ಗೆಲಿದಪ
ನವರ+ ಮಣಿ +ಪರಿಧಾನವ್+ಆಭರ
ಣವನು +ಸಾರಥಿ +ಕೊಂಡುಬಾಯೆಂದಳು+ ಸರೋಜಮುಖಿ

ಅಚ್ಚರಿ:
(೧) ಆಹವ, ಬವರ – ಸಮನಾರ್ಥಕ ಪದ
(೨) ಸಾರಥಿ – ೨, ೬ ಸಾಲಿನ ೨ನೇ ಪದ

ಪದ್ಯ ೩೨: ಬೃಹನ್ನಳೆಯನ್ನು ಕರೆಸಲು ಉತ್ತರನು ಯಾರನ್ನು ಕಳುಹಿಸಿದನು?

ಸಾರಥಿಯ ಕೊಟ್ಟೆನ್ನನುಳುಹಿದೆ
ವಾರಿಜಾನನೆ ಲೇಸಮಾಡಿದೆ
ಕೌರವನ ತನಿಗರುಳ ತೆಗೆವೆನು ತಡವ ಮಾಡಿಸದೆ
ನಾರಿ ನೀನೇ ಹೋಗಿ ಪಾರ್ಥನ
ಸಾರಥಿಯ ತಾಯೆನಲು ನಮ್ಮನು
ವೀರ ಬಗೆಯನು ನಿಮ್ಮ ತಂಗಿಯ ಕಳುಹಿ ಕರೆಸುವುದು (ವಿರಾಟ ಪರ್ವ, ೬ ಸಂಧಿ, ೩೨ ಪದ್ಯ)

ತಾತ್ಪರ್ಯ:
ಸಾರಥಿಯು ಇದ್ದಾನೆ ಎಂದು ಹೇಳಿ ನೀನು ನನ್ನನ್ನು ಉಳಿಸಿದೆ, ಸೈರಂಧ್ರಿ ನೀನು ಬಹಳ ಒಳ್ಳೆಯದನ್ನೇ ಮಾಡಿರುವೆ, ಕೌರವನ ಕರುಳನ್ನು ಹೊರಗೆಳೆಯುತ್ತೇನೆ, ತಡ ಮಾಡದೆ ನೀನು ಹೋಗೆ ಪಾರ್ಥನ ಸಾರಥಿಯನ್ನು ಕರೆದುಕೊಂಡು ಬಾ ಎಂದು ಉತ್ತರನು ಹೇಳಲು, ಸೈರಂಧ್ರಿಯು ನನ್ನ ಮಾತನ್ನು ಆತ ಕೇಳುವುದಿಲ್ಲ, ನಿಮ್ಮ ಸಹೋದರಿ ಉತ್ತರೆಯನ್ನೇ ಕಳಿಸಿ ಎಂದಳು.

ಅರ್ಥ:
ಸಾರಥಿ: ಗಾಡಿ ಓಡಿಸುವವ; ಕೊಟ್ಟೆ: ನೀಡು; ಉಳುಹು: ಕಾಪಾಡು, ಸಂರಕ್ಷಿಸು; ವಾರಿ: ನೀರು; ವಾರಿಜ: ಕಮಲ; ಆನನ: ಮುಖ; ವಾರಿಜಾನನೆ: ಹುಡುಗಿ, ಕಮಲದಂತ ಮುಖವಿರುವವಳು; ಲೇಸು: ಒಳ್ಳೆಯದು; ತನಿಗರುಳು: ರಸವತ್ತಾದ ಕರುಳು; ತೆಗೆ: ಹೊರತರು; ತಡ: ನಿಧಾನ; ನಾರಿ: ಸ್ತ್ರೀ; ಹೋಗು: ನಡೆ; ತಾ: ಕರೆದುಕೊಂಡು ಬಾ; ವೀರ: ಕಲಿ, ಶೌರ್ಯ; ಬಗೆ:ಲಕ್ಷಿಸು; ತಂಗಿ: ಸೋದರಿ; ಕಳುಹು: ಕಳುಹಿಸಿ; ಕರೆ: ಬರೆಮಾಡು;

ಪದವಿಂಗಡಣೆ:
ಸಾರಥಿಯ +ಕೊಟ್ಟ್+ಎನ್ನನ್+ಉಳುಹಿದೆ
ವಾರಿಜಾನನೆ+ ಲೇಸಮಾಡಿದೆ
ಕೌರವನ +ತನಿಗರುಳ +ತೆಗೆವೆನು +ತಡವ +ಮಾಡಿಸದೆ
ನಾರಿ +ನೀನೇ +ಹೋಗಿ +ಪಾರ್ಥನ
ಸಾರಥಿಯ +ತಾಯೆನಲು +ನಮ್ಮನು
ವೀರ +ಬಗೆಯನು +ನಿಮ್ಮ +ತಂಗಿಯ +ಕಳುಹಿ +ಕರೆಸುವುದು

ಅಚ್ಚರಿ:
(೧) ಸಾಯಿಸುವೆನು ಎನ್ನಲು – ತನಿಗರುಳ ತೆಗೆವೆನು ಎನ್ನುವ ಪದ ಪ್ರಯೋಗ
(೨) ವಾರಿಜಾನನೆ, ನಾರಿ – ಸ್ತ್ರೀಯನ್ನು ಸಂಭೋದಿಸಲು ಬಳಸಿದ ಪದಗಳು