ಪದ್ಯ ೩೨: ವ್ಯಾಸರು ಯಾವ ಆಶ್ರಮಕ್ಕೆ ಮರಳಿದರು?

ಎನಲು ಯೋಜನಗಂಧಿ ನಿಜ ನಂ
ದನನ ನುಡಿಯೇ ವೇದಸಿದ್ಧವಿ
ದೆನುತ ಸೊಸೆಯರು ಸಹಿತ ನಡೆದಳು ವರ ತಪೋವನಕೆ
ಮುನಿಪನತ್ತಲು ಬದರಿಕಾ ನಂ
ದನಕೆ ಮರಳಿದನಿತ್ತ ಗಂಗಾ
ತನುಜ ಸಲಹಿದನಖಿಳ ಪಾಂಡವ ಕೌರವ ವ್ರಜವ (ಆದಿ ಪರ್ವ, ೫ ಸಂಧಿ, ೩೨ ಪದ್ಯ)

ತಾತ್ಪರ್ಯ:
ಯೋಜನಗಮ್ಧಿಯು ವೇದವ್ಯಾಸರು ತನ್ನ ಮಗ ಹೇಳಿದ ಮಾತು ವೇದವಾಕ್ಯವೆಂದು ಒಪ್ಪಿ ತನ್ನ ಸೊಸೆಯಂದಿರ ಜೊತೆಗೆ ತಪೋವನಕ್ಕೆ ಹೊರಟು ಹೋದಳು. ವೇದವ್ಯಾಸರು ಬದರಿಕಾಶ್ರಮಕ್ಕೆ ಹಿಂದಿರುಗಿದರು. ಭೀಷ್ಮನು ಕೌರವ ಪಾಂಡವರನ್ನು ರಕ್ಷಿಸಿದನು.

ಅರ್ಥ:
ನಿಜ: ತನ್ನ, ದಿಟ; ನಂದನ: ಮಗ; ನುಡಿ: ಮಾತು; ಸಿದ್ಧ: ಸಾಧಿಸಿದ, ಅಣಿ; ಸೊಸೆ: ಮಗನ ಹೆಂಡತಿ; ಸಹಿತ: ಜೊತೆ; ನಡೆ: ಚಲಿಸು; ವರ: ಶ್ರೇಷ್ಠ; ತಪೋವನ: ಆಶ್ರಮ; ಮುನಿಪ: ಋಷಿ; ನಂದನ: ತೋಟ, ಉದ್ಯಾನ; ಮರಳು: ಹಿಂದಿರುಗು; ತನುಜ: ಮಗ; ಸಲಹು: ರಕ್ಶಿಸು; ಅಖಿಳ: ಎಲ್ಲಾ; ವ್ರಜ: ಗುಂಪು;

ಪದವಿಂಗಡಣೆ:
ಎನಲು+ ಯೋಜನಗಂಧಿ +ನಿಜ +ನಂ
ದನನ +ನುಡಿಯೇ +ವೇದಸಿದ್ಧವಿ
ದೆನುತ +ಸೊಸೆಯರು +ಸಹಿತ +ನಡೆದಳು +ವರ +ತಪೋವನಕೆ
ಮುನಿಪನ್+ಅತ್ತಲು +ಬದರಿಕಾ +ನಂ
ದನಕೆ +ಮರಳಿದನ್+ಇತ್ತ +ಗಂಗಾ
ತನುಜ+ ಸಲಹಿದನ್+ಅಖಿಳ +ಪಾಂಡವ +ಕೌರವ +ವ್ರಜವ

ಅಚ್ಚರಿ:
(೧) ನ ಕಾರದ ತ್ರಿವಳಿ ಪದ – ನಿಜ ನಂದನನ ನುಡಿಯೇ
(೨) ನಿಜನಂದನ, ಬದರಿಕಾ ನಂದನಕೆ- ನಂದನ ಪದದ ಬಳಕೆ

ಪದ್ಯ ೨೭: ಪಾಂಡವರನ್ನು ಹಸ್ತಿನಾಪುರಕ್ಕೆ ಹೇಗೆ ಬರಮಾಡಿಕೊಳ್ಳಲಾಯಿತು?

ಎಂದು ಕುಂತಿದೇವಿ ಸಹಿತಾ
ನಂದನರನೈವರನು ಮುನಿಗಳು
ತಂದರಿಭಪುರಿಗಾಗಿ ಭೀಷ್ಮಾದಿಗಳಿಗೀ ಹದನ
ಮುಂದೆ ಸೂಚಿಸಲುತ್ಸವದಿದಿ
ರ್ವಂದರನಿಬರು ಶುಭಮುಹೂರ್ತದೊ
ಳಂದು ನಗರಿಯ ಹೊಗಿಸಿದನು ಪರಿತೋಷದಲಿ ಭೀಷ್ಮ (ಆದಿ ಪರ್ವ, ೫ ಸಂಧಿ, ೨೭ ಪದ್ಯ)

ತಾತ್ಪರ್ಯ:
ಪಾಂಡವರನ್ನು ಕರೆದುಕೊಂಡು ಬರುವ ವಿಷಯವನ್ನು ಭೀಷ್ಮನೇ ಮೊದಲಾದವರಿಗೆ ಮೊದಲೇ ತಿಳಿಸಿದರು. ಕುಂತೀದೇವಿಯನ್ನೂ ಐವರು ಪಾಂಡವರನ್ನೂ ಹಸ್ತಿನಾಪುರಕ್ಕೆ ಕರೆದೊಯ್ದರು. ಭೀಷ್ಮನು ಅವರನ್ನೆದುರುಗೊಂಡು ಶುಭಮುಹೂರ್ತದಲ್ಲಿ ಹಸ್ತಿನಾಪುರ ಪ್ರವೇಶವನ್ನು ಉತ್ಸವದಿಂದ ಮಾಡಿಸಿದನು.

ಅರ್ಥ:
ಸಹಿತ: ಜೊತೆ; ನಂದನ: ಮಕ್ಕಳು; ಮುನಿ: ಋಷಿ; ತಂದರು: ಆಗಮಿಸು; ಇಭಪುರಿ: ಹಸ್ತಿನಾಪುರ; ಆದಿ: ಮುಂತಾದ; ಹದ: ಸ್ಥಿತಿ; ಮುಂದೆ: ಎದುರು; ಸೂಚಿಸು: ತೋರಿಸಿಕೊಡು; ಉತ್ಸವ: ಸಮಾರಂಭ; ಇದಿರ್ವಂದು: ಎದುರುಬಂದು; ಅನಿಬರು: ಅಷ್ಟುಜನ; ಶುಭ: ಮಂಗಲ; ಮುಹೂರ್ತ: ಶುಭ ಸಮಯ; ನಗರ: ಊರು; ಹೊಗಿಸು: ಸೇರು ಪರಿತೋಷ: ಸಂತಸ;

ಪದವಿಂಗಡಣೆ:
ಎಂದು +ಕುಂತಿದೇವಿ +ಸಹಿತಾ
ನಂದನರನ್+ಐವರನು +ಮುನಿಗಳು
ತಂದರ್+ಇಭಪುರಿಗಾಗಿ +ಭೀಷ್ಮಾದಿಗಳಿಗ್+ಈ+ ಹದನ
ಮುಂದೆ +ಸೂಚಿಸಲ್+ಉತ್ಸವದ್+ಇದಿ
ರ್ವಂದರ್+ಅನಿಬರು +ಶುಭ+ಮುಹೂರ್ತದೊಳ್
ಅಂದು +ನಗರಿಯ +ಹೊಗಿಸಿದನು+ ಪರಿತೋಷದಲಿ+ ಭೀಷ್ಮ

ಅಚ್ಚರಿ:
(೧) ಎಂದು, ಅಂದು – ಪ್ರಾಸ ಪದಗಳು
(೨) ಪುರಿ, ನಗರಿ – ಸಮಾನಾರ್ಥಕ ಪದ

ಪದ್ಯ ೧೪: ಮಾದ್ರಿಯು ಹೇಗೆ ಗೋಳಾಡಿದಳು?

ಕೊಂದಲಾ ಕಡುಪಾಪಿ ಮರೆದಾ
ಹಿಂದೆ ಮಾಡಿದ ಕೃತ್ಯವನು ಮುನಿ
ಯೆಂದ ನುಡಿ ಹೊಳ್ಳಹುದೆ ಸುಡು ದುರ್ವಿಷಯಕೆಳಸಿದೆಲಾ
ಬೆಂದುದೇ ನಿನ್ನರಿವು ಧೈರ್ಯವ
ನಿಂದು ನೀಗಿದೆಯಕಟ ನಿನ್ನಯ
ನಂದನರಿಗಾರುಂಟೆನುತ ಹೆಣಗಿದಳು ಲಲಿತಾಂಗಿ (ಆದಿ ಪರ್ವ, ೫ ಸಂಧಿ, ೧೪ ಪದ್ಯ)

ತಾತ್ಪರ್ಯ:
ಮಾದ್ರಿಯು ಗೋಳಾಡುತ್ತಾ ತನ್ನ ನೋವನ್ನು ಹೊರಹಾಕಿದಳು, ಅಯ್ಯೋ ಪಾಪಿ, ನಿನ್ನನ್ನೇ ಕೊಂದುಕೊಳ್ಳುತ್ತಿರುವೆ, ಹಿಂದೆ ಬೇಟೆಯಾಡಿದ ಕೆಲಸವನ್ನು ಮರೆತೆಯಾ, ಋಷಿಯ ಶಾಪವು ಸುಳ್ಳಾಗುವುದೇ? ದುರ್ವಿಷಯವನ್ನು ಬಯಸಿದ ನಿನ್ನ ರೀತಿಯನ್ನು ಸುಡಬೇಕು. ನಿನ್ನ ಬುದ್ಧಿಯ ಧೃತಿಯು ಸುಟ್ಟುಹೋಯಿತೇ? ಈ ದಿನ ಧೈರ್ಯವನ್ನು ಕಳೆದುಕೊಂಡುಬಿಟ್ಟೆ. ನಿನ್ನ ಮಕ್ಕಳಿಗೆ ಯಾರು ಗತಿಯೆಂದು ಪಾಂಡುವಿನೊಡನೆ ಅವಳು ಹೆಣಗಿದಳು.

ಅರ್ಥ:
ಕೊಂದೆ: ಸಾಯಿಸಿದೆ; ಕಡುಪಾಪಿ: ಮಹಾದುಷ್ಟ; ಮರೆ: ನೆನಪಿನಿಂದ ದೂರ ಮಾಡು; ಹಿಂದೆ: ಗತಿಸಿದ; ಕೃತ್ಯ: ಕಾರ್ಯ; ಮುನಿ: ಋಷಿ; ನುಡಿ: ಮಾತು; ಹೊಳ್ಳು:ಸುಳ್ಳು; ಸುಡು: ದಹಿಸು; ದುರ್ವಿಷಯ: ಕೆಟ್ಟ ಸುದ್ದಿ; ಬೆಂದು: ಸುಡು; ಅರಿ: ತಿಳಿ; ಧೈರ್ಯ: ಕೆಚ್ಚು, ದಿಟ್ಟತನ; ನೀಗು: ನಿವಾರಿಸಿಕೊಳ್ಳು; ಅಕಟ: ಅಯ್ಯೋ; ನಂದನ: ಮಕ್ಕಳು; ಹೆಣಗು: ಗೋಳಾಡು; ಲಲಿತಾಂಗಿ: ಸ್ತ್ರೀ, ಹೆಣ್ಣು, ಬಳ್ಳಿಯಂತೆ ದೇಹವುಳ್ಳವಳು;

ಪದವಿಂಗಡಣೆ:
ಕೊಂದಲಾ +ಕಡುಪಾಪಿ +ಮರೆದಾ
ಹಿಂದೆ +ಮಾಡಿದ +ಕೃತ್ಯವನು +ಮುನಿ
ಎಂದ +ನುಡಿ +ಹೊಳ್ಳಹುದೆ+ ಸುಡು +ದುರ್ವಿಷಯಕ್+ಎಳಸಿದೆಲಾ
ಬೆಂದುದೇ +ನಿನ್ನರಿವು +ಧೈರ್ಯವನ್
ಇಂದು +ನೀಗಿದೆ+ಅಕಟ +ನಿನ್ನಯ
ನಂದನರಿಗ್+ಆರುಂಟೆನುತ +ಹೆಣಗಿದಳು +ಲಲಿತಾಂಗಿ

ಅಚ್ಚರಿ:
(೧) ಋಷಿಗಳ ಮಾತಿನ ಪ್ರಭಾವ – ಮುನಿಯೆಂದ ನುಡಿ ಹೊಳ್ಳಹುದೆ

ಪದ್ಯ ೧೩: ಕೃಷ್ಣನು ಎಲ್ಲಿಗೆ ಹೊರಟನು?

ಕದನದಲಿ ಕಯ್ಯಾರೆ ದೈತ್ಯರ
ಸದೆದು ಭೂಭಾರವನು ಪರಹ
ಸ್ತದಲಿ ಕಟ್ಟಿಸಿ ಕೊಟ್ಟಭಾಷೆಯನುತ್ತರಾಯೆನಿಸಿ
ನದಿಯ ನಂದನನನು ಪರಾನಂ
ದದಲಿ ಸೇರಿಸಿ ಪರಮ ಪರಿತೋ
ಷದಲಿ ಪಯಣವ ಮಾಡಿದನು ಮುರವೈರಿ ನಿಜಪುರಿಗೆ (ಗದಾ ಪರ್ವ, ೧೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಮಹಾಭಾರತ ಯುದ್ಧದಲ್ಲಿ ರಾಕ್ಷಸರನ್ನು ಸಂಹರಿಸಿ, ಆಡಳಿತವನ್ನು ಮತ್ತೊಬ್ಬರಿಗೆ ವಹಿಸಿ, ಮಮಪ್ರಾಣಾಹಿ ಪಾಂಡವಾ ಎಂಬ ಪ್ರತಿಜ್ಞೆಯನ್ನು ನೆರವೇರಿಸಿ, ಭೀಷ್ಮನಿಗೆ ಪರಾನಂದ ಪದವಿಯನ್ನು ನೀಡಿ, ಅಪರಿಮಿತ ಪರಮ ಸಂತೋಷದಿಂದ ಶ್ರೀಕೃಷ್ಣನು ತನ್ನ ಊರಿಗೆ ಪ್ರಯಾಣ ಮಾಡಿದನು.

ಅರ್ಥ:
ಕದನ: ಯುದ್ಧ; ಕೈ: ಹಸ್ತ; ದೈತ್ಯ: ರಾಕ್ಷಸ; ಸದೆ: ಕುಟ್ಟು, ಪುಡಿಮಾಡು; ಭೂ: ಭೂಮಿ; ಭಾರ: ಹೊರೆ; ಪರ: ಬೇರೆ; ಹಸ್ತ: ಕೈ; ಕಟ್ಟು: ನಿರ್ಮಿಸು; ಕೊಟ್ಟ: ನೀಡಿದ; ಭಾಷೆ: ನುಡಿ; ನದಿ: ಸರೋವರ; ನಂದನ: ಮಗ; ಆನಂದ: ಸಂತಸ; ಸೇರು: ಜೊತೆಗೂಡು; ಪರಮ: ಶ್ರೇಷ್ಠ; ಪರಿತೋಷ: ಸಂತಸ; ಪಯಣ: ಪ್ರಯಾಣ; ಮುರವೈರಿ: ಕೃಷ್ಣ; ಪುರಿ: ಊರು;

ಪದವಿಂಗಡಣೆ:
ಕದನದಲಿ +ಕಯ್ಯಾರೆ ದೈತ್ಯರ
ಸದೆದು+ ಭೂಭಾರವನು +ಪರ+ಹ
ಸ್ತದಲಿ +ಕಟ್ಟಿಸಿ +ಕೊಟ್ಟ+ಭಾಷೆಯನ್+ಉತ್ತರಾಯೆನಿಸಿ
ನದಿಯ +ನಂದನನನು +ಪರಾನಂ
ದದಲಿ+ ಸೇರಿಸಿ+ ಪರಮ +ಪರಿತೋ
ಷದಲಿ +ಪಯಣವ +ಮಾಡಿದನು +ಮುರವೈರಿ +ನಿಜಪುರಿಗೆ

ಅಚ್ಚರಿ:
(೧) ಪ್ರಾಣ ಬಿಟ್ಟರು ಎಂದು ಹೇಳುವ ಪರಿ – ನದಿಯ ನಂದನನನು ಪರಾನಂದದಲಿ ಸೇರಿಸಿ
(೨) ಪ ಕಾರದ ತ್ರಿವಳಿ ಪದ – ಪರಮ ಪರಿತೋಷದಲಿ ಪಯಣವ

ಪದ್ಯ ೧೪: ಯಾವ ಪತ್ನಿಯರು ತಮ್ಮ ಪತಿಗಳ ಮೇಲೆ ಹೊರಳಾಡಿದರು?

ಕ್ಷೇಮಧೂರ್ತಿಯನಾ ಕಳಿಂಗನ
ಸೋಮದತ್ತನ ಚಿತ್ರಸೇನನ
ಭೀಮವೈರಿಯಲಂಬುಸನ ಕಿಮ್ಮೀರನಂದನನ
ಭೌಮಸುತನ ಸುಶರ್ಮಕನ ಸು
ತ್ರಾಮರಿಪುಗಳ ಭೂರಿಬಲದ ಸ
ನಾಮರರಸಿಯರದೆ ನಿಜೇಶನ ಮೇಲೆ ತನಿಹೊರಳಿ (ಗದಾ ಪರ್ವ, ೧೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಕ್ಷೇಮಧೂರ್ತಿ, ಕಳಿಂಗ, ಸೋಮದತ್ತ, ಚಿತ್ರಸೇನ, ಭೀಮನಶತ್ರು, ಅಲಂಬುಸ, ಕಿಮ್ಮೀರನ ಮಗ, ಭಗದತ್ತ, ಸುಧರ್ಮ, ರಾಕ್ಷಸ ವೀರರು ಮೊದಲಾದ ಪ್ರಖ್ಯಾತರ ಪತ್ನಿಯರು ತಮ್ಮ ಪತಿಗಳ ಮೇಲೆ ಹೊರಳಾಡಿ ದುಃಖಿಸಿದರು.

ಅರ್ಥ:
ರಿಪು: ವೈರಿ; ಬಲ: ಸೈನ್ಯ; ಅರಸಿ: ರಾಣಿ; ನಿಜ: ದಿಟ; ಈಶ: ಒಡೆಯ; ತನಿ: ಹೆಚ್ಚಾಗು; ಹೊರಳು: ತಿರುವು, ಬಾಗು;

ಪದವಿಂಗಡಣೆ:
ಕ್ಷೇಮಧೂರ್ತಿಯನ್+ಆ+ ಕಳಿಂಗನ
ಸೋಮದತ್ತನ+ ಚಿತ್ರಸೇನನ
ಭೀಮವೈರಿ +ಅಲಂಬುಸನ +ಕಿಮ್ಮೀರ+ನಂದನನ
ಭೌಮಸುತನ +ಸುಶರ್ಮಕನ+ ಸು
ತ್ರಾಮ+ರಿಪುಗಳ +ಭೂರಿಬಲದ +ಸ
ನಾಮರ್+ಅರಸಿಯರದೆ+ ನಿಜ+ಈಶನ+ಮೇಲೆ +ತನಿ+ಹೊರಳಿ

ಅಚ್ಚರಿ:
(೧) ನಂದನ, ಸುತ – ಸಮಾನಾರ್ಥಕ ಪದ

ಪದ್ಯ ೧೩: ಸೈಂಧವನ ಬಗ್ಗೆ ಗಾಂಧಾರಿ ಏನೆಂದಳು?

ತಂದೆ ನೋಡೈ ಕೃಷ್ಣ ತನ್ನಯ
ನಂದನರು ನೂರ್ವರಿಗೆ ಕಿರಿಯಳ
ನಿಂದುಮುಖಿ ದುಶ್ಶಳೆಯನಾ ಸೈಂಧವನ ವಲ್ಲಭೆಯ
ಅಂದು ವಿವಿಧವ್ಯೂಹದಲಿ ಗುರು
ನಿಂದಡೆಯು ಹುಸಿರಾತ್ರಿಯಲಿ ನೀ
ಕೊಂದಲೈ ತನ್ನಳಿಯನನು ವರ ಸಿಂಧುಭೂಪತಿಯ (ಗದಾ ಪರ್ವ, ೧೨ ಸಂಧಿ, ೧೩ ಪದ್ಯ)

ತಾತ್ಪರ್ಯ:
ಅಪ್ಪಾ ಕೃಷ್ಣ ನೋಡು, ನನ್ನ ನೂರು ಮಕ್ಕಳ ತಂಗಿಯೂ ಸೈಂಧವನ ಪತ್ನಿಯೂ ಆದ ದುಶ್ಶಳೆಯನ್ನು ನೋಡು, ಅಂದು ಹಲವು ವ್ಯೂಹಗಳನ್ನು ರಚಿಸಿ ಅದರ ನಡುವೆ ದ್ರೋಣನು ನಿಲ್ಲಿಸಿದ ನನ್ನಳಿಯ ಸೈಂಧವನನ್ನು ಹುಸಿ ರಾತ್ರಿಯನ್ನು ಸೃಷ್ಟಿಸಿ ಕೊಂದೆ ಎಂದು ತನ್ನ ದುಃಖವನ್ನು ತೋಡಿಕೊಂಡಳು.

ಅರ್ಥ:
ತಂದೆ: ಅಯ್ಯ, ಪಿತ; ನೋಡು: ವೀಕ್ಷಿಸು; ನಂದನ: ಮಕ್ಕಳು; ಕಿರಿ: ಚಿಕ್ಕವ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು, ಹೆಣ್ಣು; ವಲ್ಲಭೆ: ಒಡತಿ, ಪತ್ನಿ; ವಿವಿಧ: ಹಲವಾರು; ವ್ಯೂಹ: ಗುಂಪು, ಸಮೂಹ, ದಳ ರಚನೆ; ಗುರು: ಆಚಾರ್ಯ; ನಿಂದು: ನಿಲ್ಲು; ಹುಸಿ: ಸುಳ್ಳು; ರಾತ್ರಿ: ಇರುಳು; ಭೂಪತಿ: ರಾಜ;

ಪದವಿಂಗಡಣೆ:
ತಂದೆ +ನೋಡೈ +ಕೃಷ್ಣ+ ತನ್ನಯ
ನಂದನರು +ನೂರ್ವರಿಗೆ +ಕಿರಿಯಳನ್
ಇಂದುಮುಖಿ +ದುಶ್ಶಳೆಯನ್+ಆ+ ಸೈಂಧವನ +ವಲ್ಲಭೆಯ
ಅಂದು +ವಿವಿಧ+ವ್ಯೂಹದಲಿ +ಗುರು
ನಿಂದಡೆಯು +ಹುಸಿ+ರಾತ್ರಿಯಲಿ +ನೀ
ಕೊಂದಲೈ +ತನ್ನಳಿಯನನು +ವರ +ಸಿಂಧು+ಭೂಪತಿಯ

ಅಚ್ಚರಿ:
(೧) ದುಶ್ಶಳೆ ಎಂದು ಕರೆದ ಪರಿ – ಇಂದುಮುಖಿ, ದುಶ್ಶಳೆ, ವಲ್ಲಭೆ;
(೨) ಕೃಷ್ಣನು ಸೈಂಧವನನ್ನು ಸಾಯಿಸಿದ ಪರಿ – ಹುಸಿರಾತ್ರಿಯಲಿ ನೀ ಕೊಂದಲೈ ತನ್ನಳಿಯನನು ವರ ಸಿಂಧುಭೂಪತಿಯ

ಪದ್ಯ ೭೦: ಕುಂತಿಯು ತನ್ನ ಮಕ್ಕಳನ್ನು ಹೇಗೆ ಸಂತೈಸಿದಳು?

ಅನುನಯವ ರಚಿಸಿದಳು ಕೌರವ
ಜನನಿ ಲೇಸಾಯ್ತೆನುತ ಬಂದರು
ವಿನಯದಲಿ ಮೆಯ್ಯಿಕ್ಕಿದರು ನಿಜ ಮಾತೆಯಂಘ್ರಿಯಲಿ
ನನೆದಳಕ್ಷಿಪಯಃಪ್ರವಾಹದೊ
ಳನಿಬರನು ತೆಗೆದಪ್ಪಿ ಕುಂತೀ
ವನಿತೆ ಸಂತೈಸಿದಳು ನಯದಲಿ ತನ್ನ ನಂದನರ (ಗದಾ ಪರ್ವ, ೧೧ ಸಂಧಿ, ೭೦ ಪದ್ಯ)

ತಾತ್ಪರ್ಯ:
ಕೌರವರ ತಾಯಿಯು ಪ್ರೀತಿಯಿಂದ ಸರಿಯಾಗಿ ಮಾತಾಡಿದುದು ಒಳ್ಳೆಯದಾಯಿತೆಂದುಕೊಂಡು ಪಾಂಡವರು ಕುಂತೀದೇವಿಯ ಬಳಿಗೆ ಹೋಗಿ ವಿನಯದಿಂದ ನಮಸ್ಕರಿಸಿದರು. ಕುಂತಿಯು ಕಣ್ಣೀರಿನ ಪ್ರವಾಹದಿಂದ ನನೆದು ಅವರನ್ನು ಅಪ್ಪಿಕೊಂಡು ಸಂತೈಸಿದಳು.

ಅರ್ಥ:
ಅನುನಯ:ನಯವಾದ ಮಾತುಗಳಿಂದ ಮನವೊಲಿಸುವುದು, ಪ್ರೀತಿ; ರಚಿಸು: ನಿರ್ಮಿಸು; ಜನನಿ: ಮಾತೆ; ಲೇಸು: ಒಳಿತು; ಬಂದು: ಆಗಮಿಸು; ವಿನಯ: ಒಳ್ಳೆಯತನ, ಸೌಜನ್ಯ; ಮೆಯ್ಯಿಕ್ಕು: ನಮಸ್ಕರಿಸು; ನಿಜ: ದಿಟ; ಮಾತೆ: ತಾಯಿ; ಅಂಘ್ರಿ: ಪಾದ; ನನೆ: ತೋಯು, ಒದ್ದೆಯಾಗು; ಅಕ್ಷಿ: ಕಣ್ಣು; ಪಯಃ: ನೀರು; ಪ್ರವಾಹ: ರಭಸ; ಅನಿಬರು: ಅಷ್ಟುಜನ; ಅಪ್ಪು: ಆಲಂಗಿಸು; ವನಿತೆ: ಹೆಣ್ಣು; ಸಂತೈಸು: ಸಮಾಧಾನ ಪಡಿಸು; ನಯ: ಪ್ರೀತಿ; ನಂದನ: ಮಕ್ಕಳು;

ಪದವಿಂಗಡಣೆ:
ಅನುನಯವ+ ರಚಿಸಿದಳು +ಕೌರವ
ಜನನಿ +ಲೇಸಾಯ್ತೆನುತ +ಬಂದರು
ವಿನಯದಲಿ +ಮೆಯ್ಯಿಕ್ಕಿದರು +ನಿಜ +ಮಾತೆ+ಅಂಘ್ರಿಯಲಿ
ನನೆದಳ್+ಅಕ್ಷಿ+ಪಯಃ+ಪ್ರವಾಹದೊಳ್
ಅನಿಬರನು +ತೆಗೆದಪ್ಪಿ+ ಕುಂತೀ
ವನಿತೆ +ಸಂತೈಸಿದಳು +ನಯದಲಿ +ತನ್ನ+ ನಂದನರ

ಅಚ್ಚರಿ:
(೧) ಕಣ್ಣೀರು ಎಂದು ಹೇಳಲು – ಅಕ್ಷಿಪಯಃ
(೨) ಜನನಿ, ಮಾತೆ – ಸಮಾನಾರ್ಥಕ ಪದ
(೩) ನಮಸ್ಕರಿಸಿದರು ಎಂದು ಹೇಳಲು – ಮೆಯ್ಯಿಕ್ಕಿದರು ನಿಜ ಮಾತೆಯಂಘ್ರಿಯಲಿ

ಪದ್ಯ ೨೬: ದ್ರೌಪದಿಯು ಭೀಮಾರ್ಜುನರನ್ನು ಏಕೆ ತಡೆದಳು?

ಬಂದಳಾ ದ್ರೌಪದಿಯಹಹ ಗುರು
ನಂದನ ಕೊಲಬಾರದಕಟೀ
ನಂದನರ ಮರಣದ ಮಹಾ ವ್ಯಥೆಯೀತನಳಿವಿನಲಿ
ಕೊಂದು ಕೂಗದೆ ಕೃಪೆಯಸಬಲಾ
ವೃಂದ ಸಮಸುಖದುಃಖಿಗಳು ಸಾ
ರೆಂದು ಭೀಮಾರ್ಜುನರ ತೆಗೆದಳು ಬಳಿಕ ಪಾಂಚಾಲಿ (ಗದಾ ಪರ್ವ, ೧೦ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನನ್ನು ಕೊಲ್ಲಲು ಸಜ್ಜಾಗಿದ್ದ ಭೀಮಾರ್ಜುನರನ್ನು ದ್ರೌಪದಿಯು ಮುಂದೆ ಬಂದು ತಡೆದಳು. ಅಹಹಾ ಗುರುಪುತ್ರನನ್ನು ಕೊಲ್ಲಬಾರದು. ಹಾಗೆ ಮಾಡಿದರೆ ಪುತ್ರಶೋಕವು ಕೃಪೆಯನ್ನು ಘಾತಿಸುವುದಿಲ್ಲವೇ? ಹೆಣ್ಣು ಮಕ್ಕಳು ಸುಖ ದುಃಖದಲ್ಲಿ ಸಮಾನರು. ಬೇಡ, ಗುರುಪುತ್ರನನ್ನು ಬಿಡಿ ಎಂದು ಭೀಮಾರ್ಜುನರನ್ನು ನಿಲ್ಲಿಸಿದಳು.

ಅರ್ಥ:
ಬಂದಳು: ಆಗಮಿಸು; ಗುರು: ಆಚಾರ್ಯ; ನಂದನ: ಮಗ; ಕೊಲು: ಸಾಯಿಸು; ಅಕಟ: ಅಯ್ಯೋ; ಮರಣ: ಸವು; ವ್ಯಥೆ: ದುಃಖ; ಅಳಿವು: ನಾಶ; ಕೂಗು: ಕಿರುಚು, ಆರ್ಭಟಿಸು; ವೃಂದ: ಗುಮ್ಫು; ಅಬಲ: ಹೆಣ್ಣು; ಸಮ: ಸರಿಸಾಟಿ; ಸುಖ: ಸಂತಸ; ದುಃಖ: ನೋವು; ಸಾರು: ತಳ್ಳು; ತೆಗೆ: ಈಚೆಗೆ ತರು, ಹೊರತರು; ಬಳಿಕ: ನಂತರ;

ಪದವಿಂಗಡಣೆ:
ಬಂದಳಾ +ದ್ರೌಪದಿ+ಅಹಹ +ಗುರು
ನಂದನ +ಕೊಲಬಾರದ್+ಅಕಟೀ
ನಂದನರ +ಮರಣದ +ಮಹಾ +ವ್ಯಥೆ+ಈತನ್+ಅಳಿವಿನಲಿ
ಕೊಂದು +ಕೂಗದೆ +ಕೃಪೆಯಸ್+ಅಬಲಾ
ವೃಂದ +ಸಮಸುಖದುಃಖಿಗಳು +ಸಾ
ರೆಂದು +ಭೀಮಾರ್ಜುನರ+ ತೆಗೆದಳು +ಬಳಿಕ +ಪಾಂಚಾಲಿ

ಅಚ್ಚರಿ:
(೧) ದ್ರೌಪದಿಯ ಮೇರು ಚಿಂತನೆ – ಕೊಂದು ಕೂಗದೆ ಕೃಪೆಯಸಬಲಾವೃಂದ ಸಮಸುಖದುಃಖಿಗಳು
(೨) ಕೊಂದು, ಕೊಲು, ಮರನ, ಅಳಿವು – ಸಾಮ್ಯಾರ್ಥ ಪದಗಳು

ಪದ್ಯ ೬೩: ಶಲ್ಯ ಧರ್ಮಜರ ಯುದ್ಧವು ಹೇಗೆ ನಡೆಯಿತು?

ಹಿಂದೆ ಕರ್ಣನು ಫಲುಗುಣನು ಬಳಿ
ಕಿಂದು ಶಲ್ಯಯುಧಿಷ್ಠಿರರು ಸಾ
ನಂದದಲಿ ಸಮತಳಿಸಿ ಕಾದಿದರುಭಯಬಲ ಹೊಗಳೆ
ಇಂದು ಮಾದ್ರಾಧೀಶ್ವರಗೆ ಯಮ
ನಂದನನು ಯಮಸುತಗೆ ಪಡಿ ತಾ
ಸಂದನೈ ಮದ್ರಾಧಿಪತಿಯೆಂದುದು ಭಟಸ್ತೋಮ (ಶಲ್ಯ ಪರ್ವ, ೩ ಸಂಧಿ, ೬೩ ಪದ್ಯ)

ತಾತ್ಪರ್ಯ:
ಹಿಂದೆ ಕರ್ಣಾರ್ಜುನರ ಕದನ ನಡೆದಂತೆ ಇಂದು ಶಲ್ಯ ಯುಧಿಷ್ಠಿರರ ಯುದ್ಧವು ಸರಿಸಮನಾಗಿ ನಡೆಯಿತು. ಎರಡೂ ಬಲಗಳು ಇಬ್ಬರನ್ನೂ ಹೊಗಳುತ್ತಿದ್ದವು. ಧರ್ಮಜನಿಗೆ ಶಲ್ಯನೇ ಸಮ, ಶಲ್ಯನಿಗೆ ಧರ್ಮಜನೇ ಸಮನೆಂದು ಎರಡೂ ಕಡೆಯ ಸೈನಿಕರು ಉದ್ಗರಿಸುತ್ತಿದ್ದರು.

ಅರ್ಥ:
ಹಿಂದೆ: ಹಿಂಭಾಗದಲ್ಲಿ; ಬಳಿ: ಹತ್ತಿರ; ಸಾನಂದ: ಸಂತಸ; ಸಮತಳಿಸು: ಮಟ್ಟಮಾಡು; ಕಾದು: ಹೋರಾಡು; ಉಭಯ: ಎರಡು; ಬಲ: ಸೈನ್ಯ; ಹೊಗಳು: ಪ್ರಶಂಶಿಸು; ನಂದನ: ಮಗ; ಸುತ: ಮಗ; ಪಡಿ: ಸಮ, ಪ್ರತಿ; ಸಂದು: ಮೂಲೆ, ಕೋನ; ಅಧಿಪ: ಒಡೆಯ; ಭಟ: ಸೈನಿಕ; ಸ್ತೋಮ: ಗುಂಪು;

ಪದವಿಂಗಡಣೆ:
ಹಿಂದೆ +ಕರ್ಣನು +ಫಲುಗುಣನು +ಬಳಿಕ್
ಇಂದು +ಶಲ್ಯ+ಯುಧಿಷ್ಠಿರರು+ ಸಾ
ನಂದದಲಿ +ಸಮತಳಿಸಿ +ಕಾದಿದರ್+ಉಭಯಬಲ +ಹೊಗಳೆ
ಇಂದು +ಮಾದ್ರಾಧೀಶ್ವರಗೆ+ ಯಮ
ನಂದನನು +ಯಮಸುತಗೆ+ ಪಡಿ+ ತಾ
ಸಂದನೈ +ಮದ್ರಾಧಿಪತಿ+ಎಂದುದು +ಭಟಸ್ತೋಮ

ಅಚ್ಚರಿ:
(೧) ಧರ್ಮಜ, ಶಲ್ಯರನ್ನು ಕರೆದ ಪರಿ – ಮಾದ್ರಾಧೀಶ್ವರಗೆ ಯಮನಂದನನು ಯಮಸುತಗೆ ಪಡಿ ತಾ
ಸಂದನೈ ಮದ್ರಾಧಿಪತಿ

ಪದ್ಯ ೧: ದುರ್ಯೋಧನನ ಸ್ಥಿತಿ ಹೇಗಿತ್ತು?

ಒಳಗೆ ಢಗೆ ನಗೆ ಹೊರಗೆ ಕಳವಳ
ವೊಳಗೆ ಹೊರಗೆ ನವಾಯಿ ಡಿಳ್ಳಸ
ವೊಳಗೆ ಹೊರಗೆ ಸಘಾಡಮದ ಬಲುಬೇಗೆಯೊಳಗೊಳಗೆ
ಬಲುಹು ಹೊರಗೆ ಪರಾಭವದ ಕಂ
ದೊಳಗೆ ಕಡುಹಿನ ಕಲಿತನದ ಹಳ
ಹಳಿಕೆ ಹೊರಗೆ ಮಹೀಶ ಹದನಿದು ನಿನ್ನ ನಂದನನ (ಶಲ್ಯ ಪರ್ವ, ೨ ಸಂಧಿ, ೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ನಿನ್ನ ಮಗನ ಸ್ಥಿತಿಯನ್ನು ಕೇಳು, ಮನಸ್ಸಿನಲ್ಲಿ ಕಳವಲ, ಹೊರಗೆ ನಗೆ, ಒಳಗೆ ನಡುಕ, ಹೊರಗೆ ದರ್ಪ. ಒಳಗೆ ಬೇಗೆ ಹೊರಗೆ ಮಹಾಗರ್ವ, ಸೋಲಿನ ಅಳುಕು ಒಳಗೆ ಮಹಾಪರಾಕ್ರಮದ ದರ್ಪ ಹೊರಗೆ ಎಂದು ಸಂಜಯನು ಹೇಳಿದನು.

ಅರ್ಥ:
ಒಳಗೆ: ಅಂತರ್ಯ; ಢಗೆ: ಕಾವು, ದಗೆ; ನಗೆ: ಸಂತಸ; ಹೊರಗೆ: ಆಚೆ; ಕಳವಳ: ಗೊಂದಲ; ನವಾಯಿ: ಠೀವಿ; ಡಿಳ್ಳ: ಅಂಜಿಕೆ; ಸಘಾಡ: ವೇಗ, ರಭಸ; ಮದ: ಅಹಂಕಾರ; ಬೇಗೆ: ಬೆಂಕಿ, ಕಿಚ್ಚು; ಪರಾಭವ: ಸೋಲು; ಕಂದು:ಕಳಾಹೀನ; ಕಡುಹು: ಸಾಹಸ, ಹುರುಪು; ಕಲಿ: ಶೂರ; ಹಳಹಳಿ: ರಭಸ, ತೀವ್ರತೆ; ಮಹೀಶ: ರಾಜ; ಹದ: ಸ್ಥಿತಿ; ನಂದನ: ಮಗ;

ಪದವಿಂಗಡಣೆ:
ಒಳಗೆ +ಢಗೆ +ನಗೆ +ಹೊರಗೆ+ ಕಳವಳವ್
ಒಳಗೆ +ಹೊರಗೆ +ನವಾಯಿ +ಡಿಳ್ಳಸವ್
ಒಳಗೆ +ಹೊರಗೆ +ಸಘಾಡ+ಮದ +ಬಲುಬೇಗೆ+ಒಳಗೊಳಗೆ
ಬಲುಹು +ಹೊರಗೆ +ಪರಾಭವದ+ ಕಂದ್
ಒಳಗೆ +ಕಡುಹಿನ +ಕಲಿತನದ +ಹಳ
ಹಳಿಕೆ +ಹೊರಗೆ +ಮಹೀಶ +ಹದನಿದು +ನಿನ್ನ +ನಂದನನ

ಅಚ್ಚರಿ:
(೧) ಒಳಗೆ ಹೊರಗೆ ಪದಗಳ ಬಳಕೆ
(೨) ಒಳಗೆ – ೧-೩, ೫ ಸಾಲಿನ ಮೊದಲ ಪದ