ಪದ್ಯ ೨೯: ದ್ರೋಣರು ಯಾರ ಬಳಿಗೆ ಹೋಗಲು ನಿರ್ಧರಿಸಿದರು?

ಮಗನೆ ಬಲ್ಲೈ ದ್ರುಪದ ಭೂಪತಿ
ಮಗುವುತನದಿಂದೆಮ್ಮ ಸಖನೋ
ಲಗಿಸುವೆವು ನಾವಲ್ಲಿ ಸಲಹನೆ ಮಿತ್ರಭಾವದಲಿ
ಹೊಗುವ ನಡೆ ಪಾಂಚಾಲರಾಯನ
ನಗರಿಯನು ನಾವೆಂದು ಮುನಿ ಮೌ
ಳಿಗಳ ಮಣಿಯನು ಬೀಳುಕೊಂಡನು ರೇಣುಕಾಸುತನ (ಆದಿ ಪರ್ವ, ೬ ಸಂಧಿ, ೨೯ ಪದ್ಯ)

ತಾತ್ಪರ್ಯ:
ಮಗು ಅಶ್ವತ್ಥಾಮ, ದ್ರುಪದರಾಜನು ಚಿಕ್ಕಮ್ದಿನಿಮ್ದಲೂ ನಮ್ಮ ಸ್ನೇಹಿತನಾಗಿದ್ದಾನೆ. ಅವನ ಓಲಗಕ್ಕೆ ನಾವು ಹೋದರೆ ಮಿತ್ರ ಭಾದವಿಮ್ದ ನಮ್ಮನು ಸಲಹದೇ ಬಿಡುವನೇ? ಪಾಂಚಾಲರಾಜನ ಪಟ್ಟಣಕ್ಕೆ ಹೋಗೋಣ ಬಾ ಎಂದು ಮಗನೊಡನೆ ದ್ರೋಣನು ಮುನಿಶಿರೋಮಣಿಯಾದ ರೇಣುಕಾದೇವಿಯ ಪುತ್ರರಾದ ಪರಶುರಾಮರನ್ನು ಬೀಳ್ಕೊಂಡರು.

ಅರ್ಥ:
ಮಗ: ಸುತ; ಬಲ್ಲೈ: ತಿಳಿದಿರುವೆ; ಭೂಪತಿ: ರಾಜ; ಮಗುವುತನ: ಚಿಕ್ಕವದಿಂದಲು; ಸಖ: ಮಿತ್ರ; ಓಲಗ: ದರ್ಬಾರು; ಸಲಹೆ: ಸೂಚನೆ; ಮಿತ್ರ: ಸ್ನೇಹಿತ; ಭಾವ: ಅಭಿಪ್ರಾಯ, ಇಂಗಿತ; ಹೊಗು: ತೆರಳು; ನಡೆ: ಚಲಿಸು; ರಾಯ: ರಾಜ; ನಗರಿ: ಊರು; ಮುನಿ: ಋಷಿ; ಮುನಿಮೌಳಿ: ಶ್ರೇಷ್ಠನಾದ ಋಷಿ; ಬೀಳುಕೊಂಡು: ತೆರಳು; ಸುತ: ಪುತ್ರ;

ಪದವಿಂಗಡಣೆ:
ಮಗನೆ+ ಬಲ್ಲೈ +ದ್ರುಪದ +ಭೂಪತಿ
ಮಗುವುತನದಿಂದ್+ಎಮ್ಮ +ಸಖನ್
ಓಲಗಿಸುವೆವು +ನಾವಲ್ಲಿ +ಸಲಹನೆ +ಮಿತ್ರ+ಭಾವದಲಿ
ಹೊಗುವ +ನಡೆ +ಪಾಂಚಾಲರಾಯನ
ನಗರಿಯನು +ನಾವೆಂದು +ಮುನಿ +ಮೌ
ಳಿಗಳ +ಮಣಿಯನು +ಬೀಳುಕೊಂಡನು +ರೇಣುಕಾಸುತನ

ಅಚ್ಚರಿ:
(೧) ಪರಶುರಾಮರನ್ನು ರೇಣುಕಾಸುತ, ಮುನಿ ಮೌಳಿಗಳ ಮಣಿ ಎಂದು ಕರೆದಿರುವುದು
(೨) ಮ ಕಾರದ ಪದಗಳ ಬಳಕೆ – ಮುನಿ ಮೌಳಿಗಳ ಮಣಿಯನು

ಪದ್ಯ ೨೭: ಪಾಂಡವರನ್ನು ಹಸ್ತಿನಾಪುರಕ್ಕೆ ಹೇಗೆ ಬರಮಾಡಿಕೊಳ್ಳಲಾಯಿತು?

ಎಂದು ಕುಂತಿದೇವಿ ಸಹಿತಾ
ನಂದನರನೈವರನು ಮುನಿಗಳು
ತಂದರಿಭಪುರಿಗಾಗಿ ಭೀಷ್ಮಾದಿಗಳಿಗೀ ಹದನ
ಮುಂದೆ ಸೂಚಿಸಲುತ್ಸವದಿದಿ
ರ್ವಂದರನಿಬರು ಶುಭಮುಹೂರ್ತದೊ
ಳಂದು ನಗರಿಯ ಹೊಗಿಸಿದನು ಪರಿತೋಷದಲಿ ಭೀಷ್ಮ (ಆದಿ ಪರ್ವ, ೫ ಸಂಧಿ, ೨೭ ಪದ್ಯ)

ತಾತ್ಪರ್ಯ:
ಪಾಂಡವರನ್ನು ಕರೆದುಕೊಂಡು ಬರುವ ವಿಷಯವನ್ನು ಭೀಷ್ಮನೇ ಮೊದಲಾದವರಿಗೆ ಮೊದಲೇ ತಿಳಿಸಿದರು. ಕುಂತೀದೇವಿಯನ್ನೂ ಐವರು ಪಾಂಡವರನ್ನೂ ಹಸ್ತಿನಾಪುರಕ್ಕೆ ಕರೆದೊಯ್ದರು. ಭೀಷ್ಮನು ಅವರನ್ನೆದುರುಗೊಂಡು ಶುಭಮುಹೂರ್ತದಲ್ಲಿ ಹಸ್ತಿನಾಪುರ ಪ್ರವೇಶವನ್ನು ಉತ್ಸವದಿಂದ ಮಾಡಿಸಿದನು.

ಅರ್ಥ:
ಸಹಿತ: ಜೊತೆ; ನಂದನ: ಮಕ್ಕಳು; ಮುನಿ: ಋಷಿ; ತಂದರು: ಆಗಮಿಸು; ಇಭಪುರಿ: ಹಸ್ತಿನಾಪುರ; ಆದಿ: ಮುಂತಾದ; ಹದ: ಸ್ಥಿತಿ; ಮುಂದೆ: ಎದುರು; ಸೂಚಿಸು: ತೋರಿಸಿಕೊಡು; ಉತ್ಸವ: ಸಮಾರಂಭ; ಇದಿರ್ವಂದು: ಎದುರುಬಂದು; ಅನಿಬರು: ಅಷ್ಟುಜನ; ಶುಭ: ಮಂಗಲ; ಮುಹೂರ್ತ: ಶುಭ ಸಮಯ; ನಗರ: ಊರು; ಹೊಗಿಸು: ಸೇರು ಪರಿತೋಷ: ಸಂತಸ;

ಪದವಿಂಗಡಣೆ:
ಎಂದು +ಕುಂತಿದೇವಿ +ಸಹಿತಾ
ನಂದನರನ್+ಐವರನು +ಮುನಿಗಳು
ತಂದರ್+ಇಭಪುರಿಗಾಗಿ +ಭೀಷ್ಮಾದಿಗಳಿಗ್+ಈ+ ಹದನ
ಮುಂದೆ +ಸೂಚಿಸಲ್+ಉತ್ಸವದ್+ಇದಿ
ರ್ವಂದರ್+ಅನಿಬರು +ಶುಭ+ಮುಹೂರ್ತದೊಳ್
ಅಂದು +ನಗರಿಯ +ಹೊಗಿಸಿದನು+ ಪರಿತೋಷದಲಿ+ ಭೀಷ್ಮ

ಅಚ್ಚರಿ:
(೧) ಎಂದು, ಅಂದು – ಪ್ರಾಸ ಪದಗಳು
(೨) ಪುರಿ, ನಗರಿ – ಸಮಾನಾರ್ಥಕ ಪದ