ಪದ್ಯ ೨೪: ಪಾಂಡುವು ಕಾಡಿನಲ್ಲಿ ಯಾವುದರಲ್ಲಿ ನಿರತನಾದನು?

ಈತನಮಲಾಷ್ಟಾಂಗಯೋಗ ವಿ
ಧೂತ ಕಿಲ್ಭಿಷನಾಗಿ ಬಳಿಕ ಮ
ಹಾತಪಸ್ವಿಗಳೊಳಗೆ ಸಂದನು ತೀವ್ರತೇಜದಲಿ
ಆ ತಪೋನಿಷ್ಟಂಗೆ ತಾವತಿ
ಭೀತಿ ಭಕ್ತಿಯೊಲಧಿಕ ಶುಶ್ರೂ
ಷಾತಿಶಯದಲಿ ಮನವಹಿಡಿದರು ಕುಂತಿಮಾದ್ರಿಯರು (ಆದಿ ಪರ್ವ, ೪ ಸಂಧಿ, ೨೪ ಪದ್ಯ)

ತಾತ್ಪರ್ಯ:
ಪಾಂಡುವು ದೋಷರಹಿತವಾದ ಅಷ್ಟಾಂಗ ಯೊಗದಿಂದ ತನ್ನ ಕಲ್ಮಷಗಳನ್ನು ಕಳೆದುಕೊಂಡು ಮಹಾತೇಜಸ್ವಿಯಾದನು. ತಪೋನಿರತನಾಗಿದ್ದ ಪಾಂಡುವಿಗೆ ಕುಂತಿ ಮಾದ್ರಿಯರು ಭಯ ಭಕ್ತಿಗಳಿಂದ ಶುಶ್ರೂಷೆ ಮಾಡುವುದರಲ್ಲೇ ತಮ್ಮ ಮನಸ್ಸನ್ನು ನಿಯೋಜಿಸಿದರು.

ಅರ್ಥ:
ಅಮಲ: ನಿರ್ಮಲ; ಅಷ್ಟಾಂಗ: ಎಂಟು ಅಂಗಗಳು; ವಿಧೂತ: ಅಲುಗಾಡುವ; ಕಿಲ್ಭಿಷ: ಪಾಪ; ಬಳಿಕ: ನಂತರ; ಮಹಾತಪಸ್ವಿ: ಶ್ರೇಷ್ಠ ಮುನಿವರ್ಯ; ಸಂದು: ಎಡೆ, ಸ್ಥಳ; ತೀವ್ರ: ಹರಿತ, ತೀಕ್ಷ್ಣತೆ; ತೇಜ: ಪ್ರಕಾಶ; ಭೀತಿ: ಭಯ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಅಧಿಕ: ಹೆಚ್ಚು; ಶುಶ್ರೂಷ: ಉಪಚಾರ, ಸೇವೆ; ಮನ: ಮನಸ್ಸು; ಹಿಡಿ: ಗ್ರಹಿಸು;

ಪದವಿಂಗಡಣೆ:
ಈತನ್+ಅಮಲ+ಅಷ್ಟಾಂಗಯೋಗ +ವಿ
ಧೂತ +ಕಿಲ್ಭಿಷನಾಗಿ +ಬಳಿಕ +ಮ
ಹಾ+ತಪಸ್ವಿಗಳೊಳಗೆ +ಸಂದನು +ತೀವ್ರ+ತೇಜದಲಿ
ಆ +ತಪೋನಿಷ್ಟಂಗೆ +ತಾವ್+ಅತಿ
ಭೀತಿ +ಭಕ್ತಿಯೊಳ್+ಅಧಿಕ +ಶುಶ್ರೂಷ
ಅತಿಶಯದಲಿ +ಮನವ+ಹಿಡಿದರು+ ಕುಂತಿ+ಮಾದ್ರಿಯರು

ಅಚ್ಚರಿ:
(೧) ಒಂದೇ ಪದವಾಗಿ ರಚನೆ: ಈತನಮಲಾಷ್ಟಾಂಗಯೋಗ

ಪದ್ಯ ೧೭: ಪಾಂಡುರಾಜನ ಬಾಣಗಳಿಗೆ ಜಿಂಕೆಗಳೇನಾಗಿ ಮಾರ್ಪಾಡುಗೊಂಡವು?

ಅರಿಯೆ ನಾವಿವರೆಂದು ಮೃಗವೆಂ
ದಿರಿದೊಡಿದು ಮತ್ತೊಂದು ಪರಿಯಾ
ಯ್ತುರುವ ಮಾಣಿಕವೆಂದು ಕೊಂಡಡೆ ಕೆಂಡವಾದುದಲ
ಸರವಿಯೇ ಹಾವಾದುದೇನೆಂ
ದರಿಯೆನೀ ಕೌತುಕವನುರೆ ಮೈ
ಮರೆಸಿ ಕೊಂದುದೆ ವಿಧಿಯೆನುತ ಹರಿತಂದನಾ ಸ್ಥಳಕೆ (ಆದಿ ಪರ್ವ, ೪ ಸಂಧಿ, ೧೭ ಪದ್ಯ)

ತಾತ್ಪರ್ಯ:
ತಿಳಿಯದೇ ಇವರು ಮೃಗಗಳೆಂದು ನಾನು ಬಾಣದಿಂದ ಹೊಡೆದರೆ ಇದು ಇನ್ನೊಂದು ರೀತಿಯಾಯಿತು. ಮಾಣಿಕ್ಯವೆಮ್ದು ತೆಗೆದುಕೊಂಡಿದ್ದು ಕೆಂಡವಾಯಿತು. ಹುಲ್ಲಿನ ಸರವಿಯೇ ಹಾವಾಯಿತು. ಇದು ಏನೆಂಬುದೆ ತಿಳಿಯದಾಯ್ತು. ವಿಧಿಯು ನನ್ನ ಮೈಮರೆಸಿ ಕೊಂದು ಬಿಟ್ಟಿತು ಎಂದುಕೊಳ್ಳುತ್ತಾ ಪಾಂಡುವು ಆ ಋಷಿ-ಋಷಿಪತ್ನಿಯರಿದ್ದ ಸ್ಥಳಕ್ಕೆ ಹೋದನು.

ಅರ್ಥ:
ಅರಿ: ತಿಳಿ; ಮೃಗ: ಪ್ರಾಣಿ, ಜಿಂಕೆ; ಇರಿ: ಚುಚ್ಚು; ಪರಿ: ರೀತಿ; ಉರುವ: ಶ್ರೇಷ್ಠ; ಮಾಣಿಕ: ಮಾಣಿಕ್ಯ; ಕೊಂಡು: ತೆಗೆದುಕೋ; ಕೆಂಡ: ಬೆಂಕಿ; ಸರವಿ: ಹಗ್ಗ, ಹುರಿ; ಹಾವು: ಉರಗ; ಕೌತುಕ: ಆಶ್ಚರ್ಯ; ಮೈಮರೆಸು: ಜ್ಞಾನತಪ್ಪು; ಕೊಂದು: ಕೊಲ್ಲು; ವಿಧಿ: ನಿಯಮ; ಹರಿತಂದು: ಚಲಿಸು, ನಡೆ; ಸ್ಥಳ: ಪ್ರದೇಶ;

ಪದವಿಂಗಡಣೆ:
ಅರಿಯೆ+ ನಾವಿವರೆಂದು +ಮೃಗವೆಂದ್
ಇರಿದೊಡಿದು+ ಮತ್ತೊಂದು +ಪರಿಯಾಯ್ತ್
ಉರುವ +ಮಾಣಿಕವೆಂದು +ಕೊಂಡಡೆ +ಕೆಂಡವಾದುದಲ
ಸರವಿಯೇ +ಹಾವಾದುದ್+ಏನೆಂದ್
ಅರಿಯೆನ್+ಈ+ ಕೌತುಕವನ್+ಉರೆ +ಮೈ
ಮರೆಸಿ +ಕೊಂದುದೆ +ವಿಧಿಯೆನುತ +ಹರಿತಂದನಾ +ಸ್ಥಳಕೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉರುವ ಮಾಣಿಕವೆಂದು ಕೊಂಡಡೆ ಕೆಂಡವಾದುದಲ, ಸರವಿಯೇ ಹಾವಾದುದೇ

ಪದ್ಯ ೫೬: ವೀರನಾರಾಯಣನನ್ನು ಹೇಗೆ ಭಜಿಸಿದರು?

ಹರಿನಮೋ ಜಯ ಭಕ್ತರಘಸಂ
ಹರ ನಮೋ ಜಯ ಸಕಲ ಭುವನೇ
ಶ್ವರ ನಮೋ ಜಯ ಕೃಷ್ಣಕೇಶವ ವಿಷ್ಣುವಾಮನನೆ
ಪರಮ ಪುಣ್ಯ ಶ್ಲೋಕ ಜಯ ಜಗ
ಭರಿತ ನಿರ್ಮಳ ರೂಪ ಜಯ ಜಯ
ಕರುಣಿ ರಕ್ಷಿಸುವೊಲಿದು ಗದುಗಿನ ವೀರನಾರಯಣ (ಅರಣ್ಯ ಪರ್ವ, ೨೬ ಸಂಧಿ, ೫೬ ಪದ್ಯ)

ತಾತ್ಪರ್ಯ:
ಮನೋಹರನಾದ ಶ್ರೀಹರಿಯೇ ನಿನಗೆ ನಮ್ಮ ನಮಸ್ಕಾರಗಳು, ಭಕ್ತರ ಪಾಪ, ಕಷ್ಟಗಳನ್ನು ದೂರಮಾಡುವವನೇ ನಿನಗೆ ಜಯವಾಗಲಿ, ಸಕಲ ಲೋಕಗಳ ಒಡೆಯನೇ ನಿನಗೆ ನಮಸ್ಕಾರಗಳು, ಕೃಷ್ಣ, ಕೇಶವ, ವಿಷ್ಣು, ವಾಮನ ನಿನಗೆ ಜಯವಾಗಲಿ, ಸಮಸ್ತ ಜಗತ್ತನ್ನೂ ತುಂಬಿರುವ ಪರಮ ಪುಣ್ಯಶ್ಲೋಕನೇ ನಿನಗೆ ಜಯವಾಗಲಿ, ಗದುಗಿನ ವೀರನಾರಾಯಣನೇ ನಮ್ಮನ್ನು ರಕ್ಷಿಸು ಎನ್ನುತ್ತಾ ಪಾಂಡವರು ವರವಾಸವನ್ನು ಮುಗಿಸಿ ಅಜ್ಞಾತವಾಸಕ್ಕೆ ತಮ್ಮ ಪ್ರಯಾಣವನ್ನು ಮಾಡಿದರು.

ಅರ್ಥ:
ಹರಿ: ವಿಷ್ಣು; ಜಯ: ಉಘೇ; ಭಕ್ತ: ಆರಾಧಕ; ಅಘ: ದುಃಖ, ಕಷ್ಟ; ಸಂಹರ: ನಾಶ; ಸಕಲ: ಎಲ್ಲಾ; ಭುವನ: ಪ್ರಪಂಚ; ಈಶ್ವರ: ಒಡೆಯ; ಪರಮ: ಶ್ರೇಷ್ಠ; ಪುಣ್ಯ: ಸದಾಚಾರ; ಶ್ಲೋಕ: ಕೀರ್ತಿ, ಯಶಸ್ಸು; ಭರಿತ: ತುಂಬಿದ; ನಿರ್ಮಳ: ಶುದ್ಧವಾದ; ರೂಪ: ಆಕಾರ; ಕರುಣೆ: ದಯೆ; ರಕ್ಷಿಸು: ಕಾಪಾದು; ಒಲಿ: ಪ್ರೀತಿ;

ಪದವಿಂಗಡಣೆ:
ಹರಿನಮೋ +ಜಯ +ಭಕ್ತರ್+ಅಘ+ಸಂ
ಹರ +ನಮೋ +ಜಯ +ಸಕಲ+ ಭುವನೇ
ಶ್ವರ +ನಮೋ +ಜಯ +ಕೃಷ್ಣ+ಕೇಶವ+ ವಿಷ್ಣು+ವಾಮನನೆ
ಪರಮ +ಪುಣ್ಯ +ಶ್ಲೋಕ +ಜಯ +ಜಗ
ಭರಿತ+ ನಿರ್ಮಳ +ರೂಪ +ಜಯ+ ಜಯ
ಕರುಣಿ +ರಕ್ಷಿಸು+ಒಲಿದು +ಗದುಗಿನ+ ವೀರನಾರಯಣ

ಅಚ್ಚರಿ:
(೧) ನಮೋ, ಜಯ – ೧-೩ ಸಾಲಿನ ೨,೩ ಪದಗಳು
(೨) ಹೊಗಳುವ ಪರಿ – ಪರಮ ಪುಣ್ಯ ಶ್ಲೋಕ ಜಯ, ಜಗಭರಿತ ನಿರ್ಮಳ ರೂಪ ಜಯ
(೩) ವಿಷ್ಣುವಿನ ಹಲವು ನಾಮಗಳು – ಹರಿ, ಅಘಸಂಹರ, ಕರುಣಿ, ವಿಷ್ಣು, ವಾಮನ, ಕೇಶವ, ಕೃಷ್ಣ, ವೀರನಾರಾಯಣ

ಪದ್ಯ ೫೫: ಪಾಂಡವರು ಅಜ್ಞಾತವಾಸಕ್ಕೆ ತೆರಳಲು ಹೇಗೆ ಸಿದ್ಧರಾದರು?

ಅಂದು ಭೂಪತಿ ನೆರೆದ ಪರಿಜನ
ವೃಂದವನು ಸಂತವಿಸಿ ನೀವ್ ಮನ
ಬಂದ ಠಾವಿನಲಿಹುದು ಎಮ್ಮಜ್ಞಾತ ಹೋಹನಕ
ಎಂದು ಕಳುಹಿಸಿ ಅನುಜರೊಡನಾ
ಯಿಂದುಮುಖಿ ಸಹಗಮಿಸಿದನು ನಲ
ವಿಂದ ನೆನೆವುತ ವೀರನಾರಾಯಣನ ಸಿರಿಪದವ (ಅರಣ್ಯ ಪರ್ವ, ೨೬ ಸಂಧಿ, ೫೫ ಪದ್ಯ)

ತಾತ್ಪರ್ಯ:
ಅಂದು ಧರ್ಮಜನು ತನ್ನ ಹತ್ತಿರದವರೆಲ್ಲರನ್ನು ಸಂತೈಸಿ ನಮ್ಮ ಅಜ್ಞಾತವಾಸವು ಮುಗಿಯುವವರೆಗೂ ನೀವು ಇಷ್ಟಬಂದ ಸ್ಥಳದಲ್ಲಿ ಇರಬಹುದು ಎಂದು ಹೇಳಿ ಬೀಳ್ಕೊಟ್ಟನು. ತನ್ನ ತಮ್ಮಂದಿರು ಮತ್ತು ದ್ರೌಪದಿಯರೊಡನೆ ವೀರನಾರಾಯಣನ ಶ್ರೀಪಾದಗಳನ್ನು ಸಂತೋಷದಿಂದ ನೆನೆದನು.

ಅರ್ಥ:
ಭೂಪತಿ: ರಾಜ; ನೆರೆದ: ಸೇರಿದ್ದ; ಪರಿಜನ: ಹತ್ತಿರದವರು, ಪರಿವಾರ; ವೃಂದ: ಗುಂಫು; ಸಂತವಿಸು: ತೃಪ್ತಿಗೊಳಿಸು; ಮನ: ಮನಸ್ಸು; ಠಾವು: ಎಡೆ, ಸ್ಥಳ, ತಾಣ; ಅಜ್ಞಾತ: ತಿಳಿಯದ; ಹೋಹು: ತೆರಳು; ಕಳುಹು: ಬೀಳ್ಕೊದು; ಅನುಜ: ತಮ್ಮ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು (ದ್ರೌಪದಿ); ಸಹ: ಜೊತೆ; ಗಮಿಸು: ತೆರಳು; ನಲವು: ಸಂತೋಷ; ನೆನೆ: ಜ್ಞಾಪಿಸು; ಸಿರಿ: ಶ್ರೀ, ಐಶ್ವರ್ಯ; ಪದ: ಪಾದ, ಚರಣ;

ಪದವಿಂಗಡಣೆ:
ಅಂದು +ಭೂಪತಿ +ನೆರೆದ +ಪರಿಜನ
ವೃಂದವನು +ಸಂತವಿಸಿ +ನೀವ್ +ಮನ
ಬಂದ +ಠಾವಿನಲ್+ಇಹುದು +ಎಮ್ಮ್+ಅಜ್ಞಾತ +ಹೋಹನಕ
ಎಂದು +ಕಳುಹಿಸಿ+ ಅನುಜರೊಡನ್+ಆ
ಇಂದುಮುಖಿ +ಸಹ+ಗಮಿಸಿದನು +ನಲ
ವಿಂದ+ ನೆನೆವುತ+ ವೀರನಾರಾಯಣನ +ಸಿರಿ+ಪದವ

ಅಚ್ಚರಿ:
(೧) ಅಜ್ಞಾತವಾಸವನ್ನು ಶುರುಮಾಡಿದ ಪರಿ – ಅನುಜರೊಡನಾಯಿಂದುಮುಖಿ ಸಹಗಮಿಸಿದನು ನಲ
ವಿಂದ ನೆನೆವುತ ವೀರನಾರಾಯಣನ ಸಿರಿಪದವ

ಪದ್ಯ ೫೪: ಅರಣಿಯನ್ನು ಧರ್ಮಜನು ಯಾರಿಗೆ ನೀಡಿದನು?

ಅರಣಿಯನು ತಂದಿತ್ತು ಧರಣೀ
ಸುರನ ಮನ್ನಿಸಿ ಕಳುಹಿ ಮುನಿಗಳ
ಕರೆಸಿ ಧೌಮ್ಯಾದಿಗಳಿಗೀ ಹದನರುಹಿದನು ಬಳಿಕ
ವರ ಸುಭದ್ರಾಸೂನು ಪಾಂಚಾ
ಲರನು ಧೃಷ್ಟದ್ಯುಮ್ನ ಮೊದಲಾ
ಗಿರೆ ನಿಜಾಪ್ತರನವರವರ ಪಟ್ಟಣಕೆ ಕಳುಹಿದನು (ಅರಣ್ಯ ಪರ್ವ, ೨೬ ಸಂಧಿ, ೫೪ ಪದ್ಯ)

ತಾತ್ಪರ್ಯ:
ಅರಣಿಯನ್ನು ತಂದು ಬ್ರಾಹ್ಮಣರಿಗೆ ನೀಡಿ, ಅವರನ್ನು ಗೌರವಿಸಿದನು. ಮುನಿಗಳನ್ನೂ ಧೌಮ್ಯನನ್ನೂ ಕರೆಸಿ, ತಾವು ಅಜ್ಞಾತವಾಸಕ್ಕೆ ಹೊರಟಿರುವ ವಿಷಯವನ್ನು ತಿಳಿಸಿದನು. ಅಭಿಮನ್ಯು, ಧೃಷ್ಟದ್ಯುಮ್ನ, ಪಾಂಚಾಲರನ್ನು ಅವರವರ ಊರುಗಳಿಗೆ ಕಳುಹಿಸಿದನು.

ಅರ್ಥ:
ಅರಣಿ:ಯಾಗಕ್ಕೆ ಉಪಯೋಗಿಸುವ ಕೊರಡು; ತಂದು: ತೆಗೆದುಕೊಂಡು ಬಂದು; ಧರಣಿಸುರ: ಬ್ರಾಹ್ಮಣ; ಮನ್ನಿಸು: ಗೌರವಿಸು; ಕಳುಹು: ಬೀಳ್ಕೊಡು; ಮುನಿ: ಋಷಿ; ಕರೆಸು: ಬರೆಮಾಡು; ಹದ: ಸ್ಥಿತಿ; ಅರುಹು: ಹೇಳು; ಬಳಿಕ: ನಂತರ; ವರ: ಶ್ರೇಷ್ಠ; ಸೂನು: ಮಗ; ಆಪ್ತ: ಹತ್ತಿರದವ; ಪಟ್ಟಣ: ಊರು; ಕಳುಹು: ಬೀಳ್ಕೊಡು;

ಪದವಿಂಗಡಣೆ:
ಅರಣಿಯನು +ತಂದಿತ್ತು +ಧರಣೀ
ಸುರನ +ಮನ್ನಿಸಿ +ಕಳುಹಿ +ಮುನಿಗಳ
ಕರೆಸಿ +ಧೌಮ್ಯಾದಿಗಳಿಗ್+ಈ+ ಹದನ್+ಅರುಹಿದನು +ಬಳಿಕ
ವರ+ ಸುಭದ್ರಾ+ಸೂನು +ಪಾಂಚಾ
ಲರನು+ ಧೃಷ್ಟದ್ಯುಮ್ನ +ಮೊದಲಾ
ಗಿರೆ+ ನಿಜಾಪ್ತರನ್+ಅವರವರ +ಪಟ್ಟಣಕೆ +ಕಳುಹಿದನು

ಅಚ್ಚರಿ:
(೧) ಬ್ರಾಹ್ಮಣರನ್ನು ಧರಣೀಸುರ, ಅಭಿಮನ್ಯುವನ್ನು ಸುಭದ್ರಾಸೂನು ಎಂದು ಕರೆದಿರುವುದು

ಪದ್ಯ ೫೩: ಯಮನು ಏನನ್ನು ಹೇಳಿ ಹಿಂದಿರುಗಿದನು?

ನೀವು ಪಾಂಡವರೆಂದು ನಿಮ್ಮನ
ದಾವ ಮಾನವರರಿಯದಿರಲಿ ಮ
ಹಾವಿಭವದಲಿ ಬೆಳಗುವುದು ಬಳಿಕವನಿಮಂಡಲವ
ದೈವಬಲ ನಿಮಗುಂಟು ಮೇಣಿ
ನ್ನಾವುದರಿದಲ್ಲೆಂದು ತನುಜನ
ನೋವಿ ಮನ್ನಿಸಿ ಬೀಳುಕೊಟ್ಟನು ಪಾಂಡುನಂದನರ (ಅರಣ್ಯ ಪರ್ವ, ೨೬ ಸಂಧಿ, ೫೩ ಪದ್ಯ)

ತಾತ್ಪರ್ಯ:
ಅಜ್ಞಾತವಾಸ ಕಾಲದಲ್ಲಿ ನೀವು ಪಾಂಡವರೆಂದು ಯಾರು ತಿಳಿಯದಿರಲಿ. ಬಳಿಕ ಭೂಮಿಯನ್ನು ಮಹಾವೈಭವದಿಂದ ರಾಜ್ಯವಾಳುವಿರಿ. ನಿಮಗೆ ದೈವ ಬಲವಿದೆ ನಿಮಗೆ ನಿಮಗೆ ತಿಳಿಯದಾವುದು ಇಲ್ಲೆಂದು ಮಗನನ್ನು ಪ್ರೀತಿಯಿಂದ ಅನುಗ್ರಹಿಸಿ ಪಾಂಡವರನ್ನು ಬೀಳುಕೊಟ್ಟನು.

ಅರ್ಥ:
ಮಾನ: ಮರ್ಯಾದೆ, ಗೌರವ; ಅರಿ: ತಿಳಿ; ಮಹಾ: ದೊಡ್ಡ; ವಿಭವ: ಸಿರಿ, ಸಂಪತ್ತು; ಬೆಳಗು: ಪ್ರಕಾಶಿಸು; ಬಳಿಕ: ನಂತರ; ಅವನಿ: ಭೂಮಿ; ಮಂಡಲ: ನಾಡಿನ ಒಂದು ಭಾಗ; ದೈವ: ಭಗವಂತ; ಬಲ: ಶಕ್ತಿ; ಮೇಣ್: ಮತ್ತೆ; ತನುಜ: ಮಗ; ಓವಿ: ಒಲಿದು, ಪ್ರೀತಿಯಿಂದ; ಮನ್ನಿಸು: ಅನುಗ್ರಹಿಸು; ಬೀಳುಕೊಡು: ತೆರಳು; ನಂದನ: ಮಗ;

ಪದವಿಂಗಡಣೆ:
ನೀವು +ಪಾಂಡವರೆಂದು +ನಿಮ್ಮನ್
ಅದಾವ +ಮಾನವರ್+ಅರಿಯದಿರಲಿ+ ಮ
ಹಾ+ವಿಭವದಲಿ +ಬೆಳಗುವುದು + ಬಳಿಕ್+ಅವನಿ+ಮಂಡಲವ
ದೈವಬಲ +ನಿಮಗುಂಟು +ಮೇಣಿನ್
ಆವುದರಿದಲ್ಲೆಂದು +ತನುಜನನ್
ಓವಿ +ಮನ್ನಿಸಿ +ಬೀಳುಕೊಟ್ಟನು +ಪಾಂಡು+ನಂದನರ

ಅಚ್ಚರಿ:
(೧) ಪಾಂಡವರಿಗಿರುವ ಶಕ್ತಿ – ದೈವಬಲ ನಿಮಗುಂಟು ಮೇಣಿನ್ನಾವುದರಿದಲ್ಲೆಂದು

ಪದ್ಯ ೫೨: ಯಮನು ಮಗನಿಗೆ ಏನು ಹೇಳಿದನು?

ಯಮನ ಬಳಿಕೊಲಿದೀ ಪ್ರಸಂಗದ
ಕ್ರಮವ ಕೃತ್ಯೆಯ ಹದನನೆಲ್ಲಾ
ಯಮತನೂಜಂಗರುಹಿ ತದ್ವೃತ್ತಾಂತ ಸಂಗತಿಯ
ಕಮಲನಾಭನ ಕರುಣದಳತೆಯ
ಕ್ರಮವನರುಹುತೆ ಬಳಿಕ ಮುಂದಣ
ವಿಮಲದಜ್ಞಾತಕ್ಕೆ ನೇಮಿಸಿ ಹರಹಿದನು ಮಗನ (ಅರಣ್ಯ ಪರ್ವ, ೨೬ ಸಂಧಿ, ೫೨ ಪದ್ಯ)

ತಾತ್ಪರ್ಯ:
ಯಮನು ಈ ಪ್ರಸಂಗದ ವಿವರಗಳನ್ನೂ, ಕೃತ್ಯೆಯ ವೃತ್ತಾಮ್ತವನ್ನೂ ಧರ್ಮಜನಿಗೆ ವಿವರವಾಗಿ ತಿಳಿಸಿದನು. ಶ್ರೀಕೃಷ್ಣನ ಕರುಣೆಯಿಂದ ಪಾಂಡವರು ಪಾರಾದ ಕ್ರಮವನ್ನು ವಿವರಿಸಿದನು. ಬಳಿಕ ಅಜ್ಞಾತವಾಸಕ್ಕೆ ಹೊರಡಲು ಅಪ್ಪಣೆಯನ್ನು ನೀಡಿದನು.

ಅರ್ಥ:
ಬಳಿಕ: ನಂತರ; ಒಲಿ: ಪ್ರೀತಿ; ಪ್ರಸಂಗ: ಮಾತುಕತೆ; ಸಂದರ್ಭ; ಕ್ರಮ: ರೀತಿ; ಹದ: ಸ್ಥಿತಿ; ತನುಜ: ಮಗ; ಅರುಹು: ಹೇಳು; ವೃತ್ತಾಂತ: ಘಟನೆ; ಸಂಗತಿ: ಸಹವಾಸ, ಒಡನಾಟ; ಕಮಲನಾಭ: ವಿಷ್ಣು; ಕರುಣ: ದಯೆ; ಕ್ರಮ: ಅಡಿ, ಪಾದ; ಬಳಿಕ: ನಂತರ; ಮುಂದಣ: ಮುಂದಿನ; ವಿಮಲ: ನಿರ್ಮಲ; ಅಜ್ಞಾತ: ಯಾರಿಗೂ ಗೊತ್ತಾಗದ ಹಾಗೆ ಇರುವ ಸ್ಥಿತಿ; ನೇಮಿಸು: ಮನಸ್ಸನ್ನು ನಿಯಂತ್ರಿಸು; ಹರಹು: ಪ್ರಸರ, ಹರಡು; ಮಗ: ಪುತ್ರ;

ಪದವಿಂಗಡಣೆ:
ಯಮನ +ಬಳಿಕ+ಒಲಿದ್+ಈ+ ಪ್ರಸಂಗದ
ಕ್ರಮವ +ಕೃತ್ಯೆಯ +ಹದನನೆಲ್ಲಾ
ಯಮ+ತನೂಜಂಗ್+ಅರುಹಿ+ ತದ್ವೃತ್ತಾಂತ +ಸಂಗತಿಯ
ಕಮಲನಾಭನ+ ಕರುಣದಳತೆಯ
ಕ್ರಮವನ್+ಅರುಹುತೆ +ಬಳಿಕ+ ಮುಂದಣ
ವಿಮಲದ್+ಅಜ್ಞಾತಕ್ಕೆ +ನೇಮಿಸಿ +ಹರಹಿದನು +ಮಗನ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಮಲನಾಭನ ಕರುಣದಳತೆಯ ಕ್ರಮವನರುಹುತೆ

ಪದ್ಯ ೫೧: ಕೃತ್ಯೆಯು ಯಾರನ್ನು ತಿಂದಿತು?

ಆ ಸಮಯದಲಿ ಕನಕ ಹರಹಿಸಿ
ದಾಸು ಹೋಮಕೆ ತೃಪ್ತಿವಡೆಯಿಸಿ
ಮೀಸಲಿನ ಪೂರ್ಣಾಹುತಿಯ ಕೊಡುವಾ ಮುಹೂರ್ತದಲಿ
ಭಾಸುರದ ತೇಜಃ ಪ್ರಕಾಶದ
ಮೀಸಲಳಿಯದ ಭೂತ ನಡೆತಂ
ದಾಸಗರ್ವನ ಕನಕನನು ತಿಂದಡಗಿತಗ್ನಿಯಲಿ (ಅರಣ್ಯ ಪರ್ವ, ೨೬ ಸಂಧಿ, ೫೧ ಪದ್ಯ)

ತಾತ್ಪರ್ಯ:
ಇತ್ತ ಕನಕನು ಮಾರಣ ಹೋಮದಲ್ಲಿ ಪೂರ್ಣಾಹುತಿಯನ್ನು ಕೊಡಲು ಎಲ್ಲಾ ಸಿದ್ಧತೆಗಳನ್ನೂ ಮಾದಿಕೊಂಡಿದ್ದನು. ಆಗ ಪ್ರಕಾಶಮಯವಾದ ಕೃತ್ಯೆಯು ಹಿಂದಿರುಗಿ ಬಂದು ಕನಕನನ್ನು ತಿಂದು ಅಗ್ನಿಕುಂಡದಲ್ಲಿ ಅಡಗಿತು.

ಅರ್ಥ:
ಸಮಯ: ಕಾಲ; ಹರಹು: ಹಬ್ಬುವಿಕೆ, ಪ್ರಸರ; ಆಸು: ಮೇಲಿನಿಂದ ಬಿಡು, ಅಷ್ಟು; ಹೋಮ: ಯಾಗ; ತೃಪ್ತಿ: ಸಂತುಷ್ಟಿ, ಸಮಾಧಾನ; ಮೀಸಲು: ಕಾಯ್ದಿರಿಸು; ಪೂರ್ಣಾಹುತಿ: ಯಜ್ಞಾದಿಗಳಲ್ಲಿ ದರ್ವಿ ಯಾ ಸವುಟನ್ನು ಪೂರ್ತಿಯಾಗಿ ತುಂಬಿಕೊಂಡು ಕೊಡುವ ಆಹುತಿ; ಕೊಡು: ನೀಡು; ಮುಹೂರ್ತ: ಒಳ್ಳೆಯ ಸಮಯ; ಭಾಸುರ: ಅಂದ, ಸೊಗಸು; ತೇಜ: ಕಾಂತಿ; ಪ್ರಕಾಶ: ಹೊಳಪು; ಅಳಿ: ಸಾವು, ಕುಂದು; ಭೂತ: ಪಿಶಾಚಿ; ಗರ್ವ: ಅಹಂಕಾರ; ತಿಂದು: ಉಣ್ಣು; ಅಡಗು: ಕಣ್ಮರೆಯಾಗು, ಕಾಣದಾಗು; ಅಗ್ನಿ: ಬೆಂಕಿ;

ಪದವಿಂಗಡಣೆ:
ಆ+ ಸಮಯದಲಿ +ಕನಕ +ಹರಹಿಸಿದ್
ಆಸು +ಹೋಮಕೆ +ತೃಪ್ತಿವಡೆಯಿಸಿ
ಮೀಸಲಿನ +ಪೂರ್ಣಾಹುತಿಯ +ಕೊಡುವಾ +ಮುಹೂರ್ತದಲಿ
ಭಾಸುರದ +ತೇಜಃ +ಪ್ರಕಾಶದ
ಮೀಸಲಳಿಯದ +ಭೂತ +ನಡೆತಂದ್
ಆಸ+ಗರ್ವನ+ ಕನಕನನು +ತಿಂದ್+ಅಡಗಿತ್+ಅಗ್ನಿಯಲಿ

ಅಚ್ಚರಿ:
(೧) ಕೃತ್ಯೆಯ ಆಗಮನವನ್ನು ವಿವರಿಸುವ ಪರಿ – ಭಾಸುರದ ತೇಜಃ ಪ್ರಕಾಶದ ಮೀಸಲಳಿಯದ ಭೂತ

ಪದ್ಯ ೫೦: ಯಮನು ಯಾವುದಕ್ಕೆ ಸಿದ್ಧನಾಗಲು ತಿಳಿಸಿದ?

ಎನಲು ಮೆಚ್ಚಿದನುಳಿದ ಭೀಮಾ
ರ್ಜುನರ ಹರಣವನಿತ್ತು ನಿಜ ನಂ
ದನನನಪ್ಪಿದನೊಲವಿನಲಿ ಯಮರಾಜನೈತಂದು
ತನುಜಸಾಕಿನ್ನಾಯ್ತು ನಿಮಗೀ
ವನನಿವಾಸವು ಬೀಳುಕೊಡು ಮುನಿ
ಜನವನಿನ್ನಜ್ಞಾತವಾಸಕೆ ಮನವ ಮಾಡೆಂದ (ಅರಣ್ಯ ಪರ್ವ, ೨೬ ಸಂಧಿ, ೫೦ ಪದ್ಯ)

ತಾತ್ಪರ್ಯ:
ಯಕ್ಷನು ಮೆಚ್ಚಿ ಭೀಮಾರ್ಜುನರಿಗೂ ಪ್ರಾಣವನ್ನು ಕೊಟ್ಟು, ಯಮನಾಗಿ ಬಂದು ತನ್ನ ಮಗನನ್ನು ಆಲಂಗಿಸಿಕೊಂಡು, ಮಗನೇ ನಿಮ್ಮ ವನವಾಸದ ಅವಧಿ ಮುಗಿಯಿತು. ನಿನ್ನೊಡನಿರುವ ಮುನಿಜನರನ್ನು ಕಳಿಸಿಕೊಟ್ಟು, ಅಜ್ಞಾತವಾಸಕ್ಕೆ ಅನುವಾಗು ಎಂದು ಹೇಳಿದನು.

ಅರ್ಥ:
ಮೆಚ್ಚು: ಹೊಗಳು; ಉಳಿದ: ಮಿಕ್ಕ; ಹರಣ: ಪ್ರಾಣ; ನಿಜ: ತನ್ನ; ನಂದನ: ಮಗ; ಅಪ್ಪು: ಆಲಂಗಿಸು; ಒಲವು: ಪ್ರೀತಿ; ಐತರು: ಬಂದು ಸೇರು; ತನುಜ: ಮಗ; ಸಾಕು: ನಿಲ್ಲಿಸು; ವನ: ಕಾಡು; ನಿವಾಸ: ಆಲಯ, ಮನೆ; ಬೀಳುಕೊಡು: ತೆರಳು; ಮುನಿ: ಋಷಿ; ಅಜ್ಞಾತ: ಯಾರಿಗೂ ಗೊತ್ತಾಗದ ಸ್ಥಿತಿ; ಮನ: ಮನಸ್ಸು;

ಪದವಿಂಗಡಣೆ:
ಎನಲು +ಮೆಚ್ಚಿದನ್+ಉಳಿದ +ಭೀಮಾ
ರ್ಜುನರ +ಹರಣವನಿತ್ತು +ನಿಜ+ ನಂ
ದನನನ್+ಅಪ್ಪಿದನ್+ಒಲವಿನಲಿ +ಯಮರಾಜನ್+ಐತಂದು
ತನುಜ+ಸಾಕಿನ್+ಆಯ್ತು +ನಿಮಗೀ
ವನ+ನಿವಾಸವು +ಬೀಳುಕೊಡು+ ಮುನಿ
ಜನವನ್+ಇನ್+ಅಜ್ಞಾತವಾಸಕೆ +ಮನವ +ಮಾಡೆಂದ

ಅಚ್ಚರಿ:
(೧) ಯಮನ ಪುತ್ರ ಪ್ರೇಮವನ್ನು ಹೇಳುವ ಪರಿ – ನಿಜ ನಂದನನನಪ್ಪಿದನೊಲವಿನಲಿ ಯಮರಾಜನೈತಂದು

ಪದ್ಯ ೪೯: ಧರ್ಮಜನು ಯಕ್ಷನಿಗೆ ಏನುತ್ತರವನ್ನಿತ್ತನು?

ಸಾವು ಬೊಪ್ಪಂಗಾಗೆ ಮಾದ್ರೀ
ದೇವಿ ತನ್ನನು ಕರೆದು ಶಿಶುಗಳ
ನೋವು ಕೇಡಿದು ನಿನ್ನದಾರೈದಿವರ ಸಲಹುವುದು
ಭಾವ ಭೇದವನಣುವ ಬಗೆಯದೆ
ಕಾವುದೆಲೆ ಮಗನೆಂದು ಬೆಸಸಿದ
ಳಾವಪರಿಯಲಿ ಮರೆವೆನೈ ನಾ ಮಾದ್ರಿದೇವಿಯರ (ಅರಣ್ಯ ಪರ್ವ, ೨೬ ಸಂಧಿ, ೪೯ ಪದ್ಯ)

ತಾತ್ಪರ್ಯ:
ಧರ್ಮಜನು ಯಕ್ಷನ ಪ್ರಶ್ನೆಗೆ ಉತ್ತರಿಸುತ್ತಾ, ಯಕ್ಷನೇ ಕೇಳು, ಹಿಂದೆ ನಮ್ಮ ತಂದೆಯು ಮರಣಹೊಂದಿದನು. ಸಹಗಮನಕ್ಕೆ ಸಿದ್ಧಳಾದ ಮಾದ್ರೀದೇವಿಯು ನನ್ನನ್ನು ಕರೆದು ನಕುಲ ಸಹದೇವರನ್ನೊಪ್ಪಿಸಿ, ಧರ್ಮಜ ನನ್ನ ಮಕ್ಕಳ ನೋವು ಕೇಡುಗಳು ನಿನ್ನವು, ಅಣುಮಾತ್ರವೂ ಭೇದವನ್ನು ಬಗೆಯದೆ ಇವರನ್ನು ಕಾಪಾಡು ಎಂದು ಅಪ್ಪಣೆ ಕೊಟ್ಟಳು. ಅವಳನ್ನು ಹೇಗೆ ಮರೆಯಲಿ ಎಂದು ಕೇಳಿದನು.

ಅರ್ಥ:
ಸಾವು: ಮರಣ; ಬೊಪ್ಪ: ತಂದೆ; ಕರೆ: ಬರೆಮಾದು; ಶಿಶು: ಮಕ್ಕಳು; ನೋವು: ಬೇನೆ, ಶೂಲೆ; ಕೇಡು: ಆಪತ್ತು, ಕೆಡಕು; ಸಲಹು: ರಕ್ಷಿಸು; ಭೇದ: ವ್ಯತ್ಯಾಸ; ಅಣು: ಸ್ವಲ್ಪ, ಅತಿ ಚಿಕ್ಕ; ಬಗೆ: ರೀತಿ; ಕಾವುದು: ರಕ್ಷಿಸು; ಮಗ: ಪುತ್ರ; ಬೆಸ: ಅಪ್ಪಣೆ, ಆದೇಶ, ಕೇಳು; ಪರಿ: ರೀತಿ; ಮರೆ: ನೆನಪಿನಿಂದ ದೂರಮಾಡು;

ಪದವಿಂಗಡಣೆ:
ಸಾವು+ ಬೊಪ್ಪಂಗ್+ಆಗೆ +ಮಾದ್ರೀ
ದೇವಿ +ತನ್ನನು +ಕರೆದು +ಶಿಶುಗಳ
ನೋವು +ಕೇಡಿದು+ ನಿನ್ನದಾರೈದ್+ಇವರ +ಸಲಹುವುದು
ಭಾವ +ಭೇದವನ್+ಅಣುವ+ ಬಗೆಯದೆ
ಕಾವುದೆಲೆ +ಮಗನೆಂದು +ಬೆಸಸಿದಳ್
ಆವ+ಪರಿಯಲಿ +ಮರೆವೆನೈ+ ನಾ +ಮಾದ್ರಿ+ದೇವಿಯರ

ಅಚ್ಚರಿ:
(೧) ಮಾದ್ರಿಯ ಅಪ್ಪಣೆ – ಭಾವ ಭೇದವನಣುವ ಬಗೆಯದೆ ಕಾವುದೆಲೆ