ಪದ್ಯ ೧೪: ಭೀಮನೇಕೆ ಕೋಪಗೊಂಡ?

ಈವುದಾ ಬೇಡಿದರೆ ಪಾರ್ಥಂ
ಗೀವುದೀಯಜ್ಞಾತ ವಾಸದೊ
ಳೀ ವಿಗಡ ಭೀಮಂಗೆ ಕೊಡದಿರಿಯೆನಲು ಖತಿಗೊಂಡು
ನೀವು ಕುಂತಿಯ ಮಕ್ಕಳಾದಿರಿ
ನಾವು ದುರ್ಯೋಧನನವರು ತ
ಪ್ಪಾವುದಿದಕೆಂದನಿಲಸುತನೌಡೊತ್ತಿ ಗರ್ಜಿಸಿದ (ವಿರಾಟ ಪರ್ವ, ೧ ಸಂಧಿ, ೧೪ ಪದ್ಯ)

ತಾತ್ಪರ್ಯ:
ನಾನೋ, ಅರ್ಜುನನೋ ಕೇಳಿದರೆ ಈ ಆಯುಧಗಳನ್ನು ನೀಡಿ, ಈ ದುಡುಕು ಬುದ್ಧಿಯ ಭೀಮನಿಗೆ ಕೊಡಬೇಡಿ ಎಂದು ಧರ್ಮಜನು ಬೇಡಿಕೊಳ್ಳಲು ಭೀಮನು ಹಲ್ಲುಕಡಿದು ತುಟಿಕಚ್ಚಿ, ಹೌದು ನೀವು ಕುಂತಿಯ ಮಕ್ಕಳು ನಾನಾದರೋ ದುರ್ಯೋಧನನ ಕಡೆಯವನು ನಿಜ, ನೀವು ಹೇಳುವುದರಲ್ಲಿ ತಪ್ಪೇನೂ ಇಲ್ಲ ಎಂದು ಗರ್ಜಿಸಿದ.

ಅರ್ಥ:
ಬೇಡು: ಕೇಳು; ಅಜ್ಞಾತ: ತಿಳಿಯದ; ವಿಗಡ: ಪರಾಕ್ರಮಿ; ಕೊಡು: ನೀಡು; ಖತಿ: ಕೋಪ; ಮಕ್ಕಳು: ಸುತರು; ತಪ್ಪು: ಸರಿಯಲ್ಲದ; ಅನಿಲಸುತ: ವಾಯುಪುತ್ರ; ಗರ್ಜಿಸು: ಜೋರಾಗಿ ಕೂಗು; ಔಡು: ಹಲ್ಲಿನಿಂದ ಕಚ್ಚು;

ಪದವಿಂಗಡಣೆ:
ಈವುದಾ +ಬೇಡಿದರೆ+ ಪಾರ್ಥಂಗ್
ಈವುದ್+ಈ+ಅಜ್ಞಾತ +ವಾಸದೊಳ್
ಈ+ ವಿಗಡ+ ಭೀಮಂಗೆ +ಕೊಡದಿರಿ+ಎನಲು +ಖತಿಗೊಂಡು
ನೀವು +ಕುಂತಿಯ +ಮಕ್ಕಳಾದಿರಿ
ನಾವು +ದುರ್ಯೋಧನನವರು+ ತ
ಪ್ಪಾವುದ್+ಇದಕೆಂದ್+ಅನಿಲಸುತನ್+ಔಡೊತ್ತಿ ಗರ್ಜಿಸಿದ

ಅಚ್ಚರಿ:
(೧) ಭೀಮನ ಕೋಪದ ವರ್ಣನೆ – ಅನಿಲಸುತನೌಡೊತ್ತಿ ಗರ್ಜಿಸಿದ

ಪದ್ಯ ೨: ಧರ್ಮಜನನಿಗೆ ಯಾವ ಚಿಂತೆ ಕಾಡಿತು?

ಬಂದು ವಟಕುಜದಡಿಯಲನಿಬರು
ನಿಂದು ದುರುಪದಿ ಸಹಿತ ಬಳಲಿಕೆ
ಯಿಂದ ವಿಶ್ರಮಿಸಿದರು ಚಿಂತಿಸಿ ಧರ್ಮನಂದನನು
ಹಿಂದೆ ಹನ್ನೆರಡಬುದ ಸವೆದವು
ಮುಂದಣನುವಿನ ಹದನು ತಮಗಿ
ನ್ನೊಂದಬುದವಜ್ಞಾತವುತ್ಕಟವಾಯ್ತುಲಾಯೆಂದ (ವಿರಾಟ ಪರ್ವ, ೧ ಸಂಧಿ, ೨ ಪದ್ಯ)

ತಾತ್ಪರ್ಯ:
ಪಾಂಡವರು ದ್ರೌಪದಿಯೊಡನೆ ಆಲದ ಮರದ ಕೆಳಗೆ ಬಳಲಿಕೆಯಿಮ್ದ ಸ್ವಲ್ಪಕಾಲ ವಿಶ್ರಮಿಸಿಕೊಂಡರು. ಬಳಿಕ ಯುಧಿಷ್ಠಿರನು ಚಿಂತಿಸಿ, ಈ ಹಿಂದೆ ಹನ್ನೆರಡು ವರ್ಷಗಳು ಕಳೆದವು. ಮುಂದೆ ಬರುವ ಯಾತನೆಯು ಅಜ್ಞಾತವಾಸ. ಇದು ಬಹು ಕಷ್ಟ ಇದನ್ನು ಹೇಗೆ ಕಳೆಬೇಕೆಂದು ಕೇಳಿದನು.

ಅರ್ಥ:
ಬಂದು: ಆಗಮಿಸು; ವಟಕುಜ: ಆಲದಮರ; ಅಡಿ: ಕೆಳಗೆ; ಅನಿಬರು: ಅಷ್ಟು ಜನ; ನಿಂದು: ನಿಲ್ಲು ದುರುಪದಿ: ದ್ರೌಪದಿ; ಸಹಿತ: ಜೊತೆ; ಬಳಲಿಕೆ: ಆಯಾಸ; ವಿಶ್ರಮ: ವಿರಾಮ; ಚಿಂತಿಸು: ಯೋಚಿಸು; ನಂದನ: ಮಗ; ಹಿಂದೆ: ನಡೆದ; ಅಬುದ: ವರ್ಷ; ಸವೆದು: ಕಳೆದು; ಮುಂದಣ: ಮುಂದಿನ; ಅನುವು: ರೀತಿ; ಹದ: ಸ್ಥಿತಿ; ಅಜ್ಞಾತ: ಯಾರಿಗೂ ತಿಳಿಯದ; ಉತ್ಕಟ: ಉಗ್ರತೆ, ಆಧಿಕ್ಯ;

ಪದವಿಂಗಡಣೆ:
ಬಂದು +ವಟಕುಜದ್+ಅಡಿಯಲ್+ಅನಿಬರು
ನಿಂದು +ದುರುಪದಿ+ ಸಹಿತ+ ಬಳಲಿಕೆ
ಯಿಂದ +ವಿಶ್ರಮಿಸಿದರು +ಚಿಂತಿಸಿ +ಧರ್ಮ+ನಂದನನು
ಹಿಂದೆ +ಹನ್ನೆರಡ್+ಅಬುದ +ಸವೆದವು
ಮುಂದಣನುವಿನ +ಹದನು +ತಮಗಿನ್
ಒಂದ್+ಅಬುದವ್+ಅಜ್ಞಾತವ್+ಉತ್ಕಟವಾಯ್ತಲಾಯೆಂದ

ಅಚ್ಚರಿ:
(೧) ಬಂದು, ನಿಂದು – ಪ್ರಾಸ ಪದ
(೨) ಹಿಂದೆ, ಮುಂದಣ – ವಿರುದ್ಧ ಪದ

ಪದ್ಯ ೫೫: ಪಾಂಡವರು ಅಜ್ಞಾತವಾಸಕ್ಕೆ ತೆರಳಲು ಹೇಗೆ ಸಿದ್ಧರಾದರು?

ಅಂದು ಭೂಪತಿ ನೆರೆದ ಪರಿಜನ
ವೃಂದವನು ಸಂತವಿಸಿ ನೀವ್ ಮನ
ಬಂದ ಠಾವಿನಲಿಹುದು ಎಮ್ಮಜ್ಞಾತ ಹೋಹನಕ
ಎಂದು ಕಳುಹಿಸಿ ಅನುಜರೊಡನಾ
ಯಿಂದುಮುಖಿ ಸಹಗಮಿಸಿದನು ನಲ
ವಿಂದ ನೆನೆವುತ ವೀರನಾರಾಯಣನ ಸಿರಿಪದವ (ಅರಣ್ಯ ಪರ್ವ, ೨೬ ಸಂಧಿ, ೫೫ ಪದ್ಯ)

ತಾತ್ಪರ್ಯ:
ಅಂದು ಧರ್ಮಜನು ತನ್ನ ಹತ್ತಿರದವರೆಲ್ಲರನ್ನು ಸಂತೈಸಿ ನಮ್ಮ ಅಜ್ಞಾತವಾಸವು ಮುಗಿಯುವವರೆಗೂ ನೀವು ಇಷ್ಟಬಂದ ಸ್ಥಳದಲ್ಲಿ ಇರಬಹುದು ಎಂದು ಹೇಳಿ ಬೀಳ್ಕೊಟ್ಟನು. ತನ್ನ ತಮ್ಮಂದಿರು ಮತ್ತು ದ್ರೌಪದಿಯರೊಡನೆ ವೀರನಾರಾಯಣನ ಶ್ರೀಪಾದಗಳನ್ನು ಸಂತೋಷದಿಂದ ನೆನೆದನು.

ಅರ್ಥ:
ಭೂಪತಿ: ರಾಜ; ನೆರೆದ: ಸೇರಿದ್ದ; ಪರಿಜನ: ಹತ್ತಿರದವರು, ಪರಿವಾರ; ವೃಂದ: ಗುಂಫು; ಸಂತವಿಸು: ತೃಪ್ತಿಗೊಳಿಸು; ಮನ: ಮನಸ್ಸು; ಠಾವು: ಎಡೆ, ಸ್ಥಳ, ತಾಣ; ಅಜ್ಞಾತ: ತಿಳಿಯದ; ಹೋಹು: ತೆರಳು; ಕಳುಹು: ಬೀಳ್ಕೊದು; ಅನುಜ: ತಮ್ಮ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು (ದ್ರೌಪದಿ); ಸಹ: ಜೊತೆ; ಗಮಿಸು: ತೆರಳು; ನಲವು: ಸಂತೋಷ; ನೆನೆ: ಜ್ಞಾಪಿಸು; ಸಿರಿ: ಶ್ರೀ, ಐಶ್ವರ್ಯ; ಪದ: ಪಾದ, ಚರಣ;

ಪದವಿಂಗಡಣೆ:
ಅಂದು +ಭೂಪತಿ +ನೆರೆದ +ಪರಿಜನ
ವೃಂದವನು +ಸಂತವಿಸಿ +ನೀವ್ +ಮನ
ಬಂದ +ಠಾವಿನಲ್+ಇಹುದು +ಎಮ್ಮ್+ಅಜ್ಞಾತ +ಹೋಹನಕ
ಎಂದು +ಕಳುಹಿಸಿ+ ಅನುಜರೊಡನ್+ಆ
ಇಂದುಮುಖಿ +ಸಹ+ಗಮಿಸಿದನು +ನಲ
ವಿಂದ+ ನೆನೆವುತ+ ವೀರನಾರಾಯಣನ +ಸಿರಿ+ಪದವ

ಅಚ್ಚರಿ:
(೧) ಅಜ್ಞಾತವಾಸವನ್ನು ಶುರುಮಾಡಿದ ಪರಿ – ಅನುಜರೊಡನಾಯಿಂದುಮುಖಿ ಸಹಗಮಿಸಿದನು ನಲ
ವಿಂದ ನೆನೆವುತ ವೀರನಾರಾಯಣನ ಸಿರಿಪದವ

ಪದ್ಯ ೫೨: ಯಮನು ಮಗನಿಗೆ ಏನು ಹೇಳಿದನು?

ಯಮನ ಬಳಿಕೊಲಿದೀ ಪ್ರಸಂಗದ
ಕ್ರಮವ ಕೃತ್ಯೆಯ ಹದನನೆಲ್ಲಾ
ಯಮತನೂಜಂಗರುಹಿ ತದ್ವೃತ್ತಾಂತ ಸಂಗತಿಯ
ಕಮಲನಾಭನ ಕರುಣದಳತೆಯ
ಕ್ರಮವನರುಹುತೆ ಬಳಿಕ ಮುಂದಣ
ವಿಮಲದಜ್ಞಾತಕ್ಕೆ ನೇಮಿಸಿ ಹರಹಿದನು ಮಗನ (ಅರಣ್ಯ ಪರ್ವ, ೨೬ ಸಂಧಿ, ೫೨ ಪದ್ಯ)

ತಾತ್ಪರ್ಯ:
ಯಮನು ಈ ಪ್ರಸಂಗದ ವಿವರಗಳನ್ನೂ, ಕೃತ್ಯೆಯ ವೃತ್ತಾಮ್ತವನ್ನೂ ಧರ್ಮಜನಿಗೆ ವಿವರವಾಗಿ ತಿಳಿಸಿದನು. ಶ್ರೀಕೃಷ್ಣನ ಕರುಣೆಯಿಂದ ಪಾಂಡವರು ಪಾರಾದ ಕ್ರಮವನ್ನು ವಿವರಿಸಿದನು. ಬಳಿಕ ಅಜ್ಞಾತವಾಸಕ್ಕೆ ಹೊರಡಲು ಅಪ್ಪಣೆಯನ್ನು ನೀಡಿದನು.

ಅರ್ಥ:
ಬಳಿಕ: ನಂತರ; ಒಲಿ: ಪ್ರೀತಿ; ಪ್ರಸಂಗ: ಮಾತುಕತೆ; ಸಂದರ್ಭ; ಕ್ರಮ: ರೀತಿ; ಹದ: ಸ್ಥಿತಿ; ತನುಜ: ಮಗ; ಅರುಹು: ಹೇಳು; ವೃತ್ತಾಂತ: ಘಟನೆ; ಸಂಗತಿ: ಸಹವಾಸ, ಒಡನಾಟ; ಕಮಲನಾಭ: ವಿಷ್ಣು; ಕರುಣ: ದಯೆ; ಕ್ರಮ: ಅಡಿ, ಪಾದ; ಬಳಿಕ: ನಂತರ; ಮುಂದಣ: ಮುಂದಿನ; ವಿಮಲ: ನಿರ್ಮಲ; ಅಜ್ಞಾತ: ಯಾರಿಗೂ ಗೊತ್ತಾಗದ ಹಾಗೆ ಇರುವ ಸ್ಥಿತಿ; ನೇಮಿಸು: ಮನಸ್ಸನ್ನು ನಿಯಂತ್ರಿಸು; ಹರಹು: ಪ್ರಸರ, ಹರಡು; ಮಗ: ಪುತ್ರ;

ಪದವಿಂಗಡಣೆ:
ಯಮನ +ಬಳಿಕ+ಒಲಿದ್+ಈ+ ಪ್ರಸಂಗದ
ಕ್ರಮವ +ಕೃತ್ಯೆಯ +ಹದನನೆಲ್ಲಾ
ಯಮ+ತನೂಜಂಗ್+ಅರುಹಿ+ ತದ್ವೃತ್ತಾಂತ +ಸಂಗತಿಯ
ಕಮಲನಾಭನ+ ಕರುಣದಳತೆಯ
ಕ್ರಮವನ್+ಅರುಹುತೆ +ಬಳಿಕ+ ಮುಂದಣ
ವಿಮಲದ್+ಅಜ್ಞಾತಕ್ಕೆ +ನೇಮಿಸಿ +ಹರಹಿದನು +ಮಗನ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಮಲನಾಭನ ಕರುಣದಳತೆಯ ಕ್ರಮವನರುಹುತೆ

ಪದ್ಯ ೫೨: ಇಂದ್ರನು ಅರ್ಜುನನನ್ನು ಹೇಗೆ ಸಂತೈಸಿದನು?

ಎಲೆ ಕಿರೀಟಿ ವೃಥಾ ಮನೋವ್ಯಥೆ
ತಳಿತುದೇಕೂರ್ವಶಿಯ ಶಾಪದ
ಲಳುಕಿದೈ ತತ್ಕ್ರೋಧ ನಿನಗುಪಕಾರವಾಯ್ತು ಕಣಾ
ಹಳುವದಲಿ ಹನ್ನೆರಡುವರುಷದ
ಕಳಹಿನಜ್ಞಾತದಲಿ ವರುಷವ
ಕಳೆವೊಡಿದು ಸಾಧನವೆಯಾಯ್ತು ಶಿಖಂಡಿತನವೆಂದ (ಅರಣ್ಯ ಪರ್ವ, ೯ ಸಂಧಿ, ೫೨ ಪದ್ಯ)

ತಾತ್ಪರ್ಯ:
ಅರ್ಜುನನನ್ನು ಸಂತೈಸುತ್ತಾ ಇಂದ್ರನು, ಎಲೈ ಅರ್ಜುನ ಊರ್ವಶಿಯ ಶಾಪಕ್ಕೆ ನೀನೇಕೆ ಹೆದರುವೆ, ವೃಥಾ ಮನೋವ್ಯಥೆ ಪಡುವೆ? ಅವಳಿಗೆ ಬಂದ ಕೋಪದಿಂದ ನಿನಗೆ ಉಪಕಾರವೇ ಆಗಿದೆ, ಹನ್ನೆರಡು ವರುಷ ವನವಾಸ ಮುಗಿದ ಮೇಲೆ, ಒಂದು ವರುಷ ಅಜ್ಞಾತವಾಸ ಮಾಡುವುದಕ್ಕೆ ಈ ನಪುಂಸಕತನವೇ ನಿನಗೆ ಸಾಧನವಾಗುತ್ತದೆ ಎಂದು ಬುದ್ಧಿಮಾತನ್ನು ಹೇಳಿ ಸಂತೈಸಿದನು.

ಅರ್ಥ:
ಕಿರೀಟಿ: ಅರ್ಜುನ; ವೃಥ: ಸುಮ್ಮನೆ; ವ್ಯಥೆ: ನೋವು, ಯಾತನೆ; ಮನ: ಮನಸ್ಸು, ಚಿತ್ತ; ತಳಿತ: ಚಿಗುರಿದ; ಶಾಪ: ನಿಷ್ಠುರದ ನುಡಿ; ಅಳುಕು: ಹೆದರು; ಕ್ರೋಧ: ಕೋಪ; ಉಪಕಾರ: ಸಹಾಯ; ಹಳುವ: ಕಾಡು; ವರುಷ: ಸಂವತ್ಸರ; ಕಳೆ: ಪಾರುಮಾಡು, ಹೋಗಲಾಡಿಸು; ಅಜ್ಞಾತ: ತಿಳಿಯದ; ಸಾಧನ: ಉಪಕರಣ; ಶಿಖಂಡಿ: ನಪುಂಸಕ;

ಪದವಿಂಗಡಣೆ:
ಎಲೆ +ಕಿರೀಟಿ +ವೃಥಾ +ಮನೋವ್ಯಥೆ
ತಳಿತುದೇಕ್+ ಊರ್ವಶಿಯ +ಶಾಪದಲ್
ಅಳುಕಿದೈ +ತತ್+ಕ್ರೋಧ +ನಿನಗ್+ಉಪಕಾರವಾಯ್ತು +ಕಣಾ
ಹಳುವದಲಿ +ಹನ್ನೆರಡು+ವರುಷದ
ಕಳಹಿನ್+ಅಜ್ಞಾತದಲಿ +ವರುಷವ
ಕಳೆವೊಡ್+ಇದು +ಸಾಧನವೆಯಾಯ್ತು +ಶಿಖಂಡಿತನವೆಂದ

ಅಚ್ಚರಿ:
(೧) ಶಾಪವನ್ನು ಉಪಯೋಗಿಸಿಕೊಳ್ಳುವ ಉಪಾಯ – ಅಜ್ಞಾತದಲಿ ವರುಷವ
ಕಳೆವೊಡಿದು ಸಾಧನವೆಯಾಯ್ತು ಶಿಖಂಡಿತನವೆಂದ

ಪದ್ಯ ೪೯: ಜೂಜಿಗೆ ಯಾವ ಪಣವನ್ನು ಶಕುನಿಯು ಹೇಳಿದನು?

ಧರಣಿಪತಿ ಕೇಳ್ ನಿನ್ನ ಧಾರುಣಿ
ಕುರುಪತಿಯ ನೆಲನೊಡ್ಡ ನಿಮ್ಮೀ
ಯೆರಡರಸುಗಳೊಳಾರು ಸೋತರು ಸೋತ ಭೂಪತಿಗೆ
ವರುಷ ಹನ್ನೆರಡರಲಿ ವನದೊಳ
ಗಿರವು ಮೇಣಜ್ಞಾತವೊಂದೇ
ವರುಷ ಹದಿನಾಲ್ಕರಲಿ ಹೊಗುವುದು ತಮ್ಮ ಪಟ್ಟಣವ (ಸಭಾ ಪರ್ವ, ೧೭ ಸಂಧಿ, ೪೯ ಪದ್ಯ)

ತಾತ್ಪರ್ಯ:
ಶಕುನಿಯು ಪಣವನ್ನು ವಿವರಿಸುತ್ತಾ, ರಾಜ ನಿನ್ನ ಮತ್ತು ಕೌರವನ ರಾಜ್ಯಗಳೇ ಪಣಗಳು. ಈ ಆಟದಲ್ಲಿ ಸೋತ ರಾಜನು ಹನ್ನೆರಡು ವರ್ಷಗಳ ಕಾಲ ಕಾಡಿನೊಳಗಿರಬೇಕು. ಒಂದು ವರ್ಷ ಅಜ್ಞಾತವಾಸ ಮಾಡಬೇಕು. ಇವೆರಡೂ ಮುಗಿದ ಮೇಲೆ ಹದಿನಾಲ್ಕನೆಯ ವರ್ಷದಲ್ಲಿ ತಮ್ಮ ಪಟ್ಟಣವನ್ನು ಪ್ರವೇಶಿಸಬೇಕು ಎಂದು ಹೇಳಿದನು.

ಅರ್ಥ:
ಧರಣಿಪತಿ: ರಾಜ; ಧರಣಿ: ಭೂಮಿ; ಧಾರುಣಿ: ಭೂಮಿ; ಪತಿ: ಒಡೆಯ; ಕೇಳು: ಆಲಿಸು; ನೆಲ: ಭೂಮಿ; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ; ಅರಸು: ರಾಜ; ಸೋಲು: ಪರಾಭವ; ಭೂಪತಿ: ರಾಜ; ವರುಷ: ಸಂವತ್ಸರ; ವನ: ಕಾಡು; ಇರವು: ವಾಸ; ಮೇಣ್: ಮತ್ತು; ಅಜ್ಞಾತ: ತಿಳಿಯದ; ಹೊಗು: ಸೇರು; ಪಟ್ಟಣ: ಊರು;

ಪದವಿಂಗಡಣೆ:
ಧರಣಿಪತಿ +ಕೇಳ್ +ನಿನ್ನ +ಧಾರುಣಿ
ಕುರುಪತಿಯ+ ನೆಲನ್+ಒಡ್ಡ +ನಿಮ್ಮೀ
ಯೆರಡ್+ಅರಸುಗಳೊಳ್+ಆರು +ಸೋತರು +ಸೋತ +ಭೂಪತಿಗೆ
ವರುಷ +ಹನ್ನೆರಡರಲಿ +ವನದೊಳಗ್
ಇರವು +ಮೇಣ್+ಅಜ್ಞಾತವ್+ಒಂದೇ
ವರುಷ +ಹದಿನಾಲ್ಕರಲಿ +ಹೊಗುವುದು +ತಮ್ಮ +ಪಟ್ಟಣವ

ಅಚ್ಚರಿ:
(೧) ಧರಣಿಪತಿ, ಭೂಪತಿ, ಅರಸು; ಧಾರುಣಿ, ಧರಣಿ, ನೆಲ – ಸಮನಾರ್ಥಕ ಪದ

ಪದ್ಯ ೨೧: ದುರ್ಯೋಧನನು ಯಾವ ಕುತಂತ್ರದ ಉಪಾಯವನ್ನು ಹೇಳಿದನು?

ಕರೆಸಿಕೊಡಿ ನೀವಿಲ್ಲಿಗವರೈ
ವರನು ಜೂಜಿನಲೊಂದು ಹಲಗೆಯ
ಲರಸ ನೀ ಚಿತ್ತವಿಸು ಹನ್ನೆರಡಬುದ ವಿಪಿನದಲಿ
ವರುಷವೊಂದಜ್ಞಾತವದರೊಳ
ಗರಿದೆವಾದಡೆ ಮರಳಿ ವಿಪಿನಕೆ
ವರುಷ ಹನ್ನೆರಡಕ್ಕೆ ಕೊಡುವೆವು ಮತ್ತೆ ವೀಳೆಯವ (ಸಭಾ ಪರ್ವ, ೧೭ ಸಂಧಿ, ೨೧ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಕುತಂತ್ರದ ಉಪಾಯವನ್ನು ಹೇಳಿದನು. ತಂದೆ ನೀವು ಇಲ್ಲಿಗೆ ಪಾಂಡವರನ್ನು ಕರೆಸಿರಿ, ಒಂದೇ ಹಲಗೆಯ ಪಗಡೆಯಾಟ. ಅದರಲ್ಲಿ ಅವರನ್ನು ಸೋಲಿಸಿ ಹನ್ನೆರಡು ವರುಷ ವನವಾಸ ಒಂದು ವರ್ಷ ಅಜ್ಞಾತವಾಸಕ್ಕೆ ಕಳಿಸಿಬಿಡುತ್ತೇವೆ. ಅಜ್ಞಾತವಾಸದಲ್ಲಿ ಅವರನ್ನು ನಾವು ಗುರುತಿಸಿದರೆ ಅವರು ಮತ್ತೆ ಹನ್ನೆರಡು ವರ್ಷ ವನವಾಸಕ್ಕೆ ಹೋಗಬೇಕೆಂಬುದು ಪಣ ಎಂದು ತಿಳಿಸಿದನು.

ಅರ್ಥ:
ಕರೆಸು: ಬರೆಮಾಡು; ಜೂಜು: ದ್ಯೂತ; ಹಲಗೆ: ಜೂಜಿನ ಪಟ, ಅಗಲವಾದ ಹಾಗೂ ತೆಳುವಾದ ಸೀಳು; ಅರಸ: ರಾಜ; ಚಿತ್ತವಿಸು: ಗಮನವಿಟ್ಟು ಕೇಳು; ಅಬುದ: ವರ್ಷ; ವಿಪಿನ: ಕಾಡು; ವರುಷ: ಸಂವತ್ಸರ; ಅಜ್ಞಾತ: ಯಾರಿಗೂ ತಿಳಿಯದ; ಅರಿ: ತಿಳಿ; ಮರಳಿ: ಪುನಃ; ವೀಳೆಯ: ಆಮಂತ್ರಿಸು, ಕೊಡು;

ಪದವಿಂಗಡಣೆ:
ಕರೆಸಿಕೊಡಿ +ನೀವಿಲ್ಲಿಗ್+ಅವರ್+
ಐವರನು +ಜೂಜಿನಲ್+ಒಂದು +ಹಲಗೆಯಲ್
ಅರಸ +ನೀ +ಚಿತ್ತವಿಸು +ಹನ್ನೆರಡ್+ಅಬುದ +ವಿಪಿನದಲಿ
ವರುಷವ್+ಒಂದ್+ ಅಜ್ಞಾತವ್+ಅದರೊಳಗ್
ಅರಿದೆವಾದಡೆ+ ಮರಳಿ +ವಿಪಿನಕೆ
ವರುಷ +ಹನ್ನೆರಡಕ್ಕೆ+ ಕೊಡುವೆವು +ಮತ್ತೆ +ವೀಳೆಯವ

ಅಚ್ಚರಿ:
(೧) ದುರ್ಯೋಧನನ ಕುತಂತ್ರ ಉಪಾಯವನ್ನು ಹೇಳುವ ಪರಿ – ವರುಷವೊಂದಜ್ಞಾತವದರೊಳ
ಗರಿದೆವಾದಡೆ ಮರಳಿ ವಿಪಿನಕೆ ವರುಷ ಹನ್ನೆರಡಕ್ಕೆ ಕೊಡುವೆವು ಮತ್ತೆ ವೀಳೆಯವ

ಪದ್ಯ ೬೭: ಧೃತರಾಷ್ಟ್ರನು ಇನ್ನಾವ ಪ್ರಶ್ನೆಗಳನ್ನು ಕೇಳಿದನು?

ಜ್ಞಾತವೇನಜ್ಞಾತವಾವುದು
ನೀತಿಯಾವುದನೀತಿ ಯಾವುದು
ದ್ವೈತವೇನದ್ವೈತವಾವುದು ವೈದಿಕಾಂಗದಲಿ
ಖ್ಯಾತಿಯೇನಖ್ಯಾತಿ ಯಾವುದು
ಭೀತಿ ಯಾವುದಭೀತಿ ಯಾವುದು
ನೀತಿಯಿಂದ ಮುನೀಶ ಬಿತ್ತರಿಸೆಂದನಾ ಭೂಪ (ಉದ್ಯೋಗ ಪರ್ವ, ೪ ಸಂಧಿ, ೬೭ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ತನ್ನಲ್ಲಿದ್ದ ಪ್ರಶ್ನೆಗಳನ್ನು ಮುಂದುವರೆಸಿದನು. ಮುನಿವರ್ಯರೇ, ತಿಳಿದುದು ಯಾವುದು, ತಿಳಿಯದಿರುವುದಾವುದು, ನೀತಿ ಯಾವುದು ಅನೀತಿ ಯಾವುದು, ದ್ವೈತವೇನು ಅದ್ವೈತವೇನು? ಕೀರ್ತಿಯಾವುದು ಅಪಕೀರ್ತಿ ಯಾವುದು, ಭೀತಿ ಮತ್ತು ನಿರ್ಭೀತಿ ಯಾವುದು, ಇವೆಲ್ಲವನ್ನು ತಿಳಿಯಹೇಳಲು ಧೃತರಾಷ್ಟ್ರನು ಸನತ್ಸುಜಾತರಿಗೆ ಕೇಳಿದನು.

ಅರ್ಥ:
ಜ್ಞಾತ: ತಿಳಿದವನು, ತಿಳಿದ; ಅಜ್ಞಾತ: ತಿಳಿಯದವ; ನೀತಿ: ಶಿಷ್ಟಾಚಾರ; ಅನೀತಿ: ಕೆಟ್ಟ ನಡತೆ; ದ್ವೈತ: ಉಭಯತ್ವ, ದ್ವಂದ್ವಸ್ಥಿತಿ; ಅದ್ವೈತ: ಒಂದೇ ಎಂದು ಪ್ರತಿಪಾದಿಸುವ ತತ್ವ; ವೈದಿಕ: ವೇದಗಳನ್ನು ಬಲ್ಲವನು; ಖ್ಯಾತಿ: ಪ್ರಸಿದ್ಧ; ಅಖ್ಯಾತಿ: ಅಪ್ರಸಿದ್ಧ; ಭೀತಿ: ಭಯ; ಅಭೀತಿ: ನಿರ್ಭಯ; ಮುನೀಶ: ಋಷಿ; ಬಿತ್ತರಿಸು: ತಿಳಿಸು; ಭೂಪ: ರಾಜ; ಅಂಗ: ಭಾಗ;

ಪದವಿಂಗಡಣೆ:
ಜ್ಞಾತವೇನ್+ಅಜ್ಞಾತವಾವುದು
ನೀತಿಯಾವುದ್+ಅನೀತಿ +ಯಾವುದು
ದ್ವೈತವೇನ್+ಅದ್ವೈತವಾವುದು +ವೈದಿಕಾಂಗದಲಿ
ಖ್ಯಾತಿಯೇನ್+ಅಖ್ಯಾತಿ +ಯಾವುದು
ಭೀತಿ+ ಯಾವುದ್+ಅಭೀತಿ +ಯಾವುದು
ನೀತಿಯಿಂದ +ಮುನೀಶ +ಬಿತ್ತರಿಸೆಂದನಾ+ ಭೂಪ

ಅಚ್ಚರಿ:
(೧) ವಿರುದ್ಧ ಪದಗಳ ಬಳಕೆ: ಜ್ಞಾತ, ಅಜ್ಞಾತ; ನೀತಿ, ಅನೀತಿ; ದ್ವೈತ, ಅದ್ವೈತ; ಖ್ಯಾತಿ, ಅಖ್ಯಾತಿ; ಭೀತಿ, ಅಭೀತಿ
(೨) ಖ್ಯಾತಿ, ಭೀತಿ, ನೀತಿ – ಪ್ರಾಸ ಪದಗಳ ಬಳಕೆ