ಪದ್ಯ ೩೦: ಬಲರಾಮನು ಕೃಷ್ಣನನ್ನು ಏನೆಂದು ಪ್ರಶ್ನಿಸಿದನು?

ಏನ ತಿಳುಹುವೆ ನೀನು ಶಾಸ್ತ್ರದೊ
ಳೇನ ನಡೆದರು ನಿನ್ನವರು ಯಮ
ಸೂಉ ನುಡಿಯನೆ ಸಮಯವನು ಶಾಸ್ರೌಘಸಂಗತಿಯ
ಹೀನಗತಿ ಪಡಿತಳದ ಹೊಯ್ಲು
ತ್ತಾನ ಘಾಯದಲೊದಗಬೇಕೆಂ
ಬೀ ನಿಬಂಧನವಾರಲಳಿದುದು ಕೃಷ್ಣ ಹೇಳೆಂದ (ಗದಾ ಪರ್ವ, ೮ ಸಂಧಿ, ೩೦ ಪದ್ಯ)

ತಾತ್ಪರ್ಯ:
ಕೃಷ್ಣನ ಮಾತಿಗೆ ಉತ್ತರಿಸುತ್ತಾ, ಏನು ಹೇಳುತ್ತಿರುವೆ ಕೃಷ್ಣ, ಶಾಸ್ತ್ರಕ್ಕೆ ಅನುಸಾರವಾಗಿ ನಿನ್ನವರು ನಡೆದರೋ? ಧರ್ಮಜನು ಶಾಸ್ತ್ರ ವಿಚಾರವನ್ನು ಹೇಳಿರಲಿಲ್ಲವೆ? ನಾಭಿಯ ಕೆಳಗೆ ಗದೆಯಿಂದ ಹೊಡೆಯಬಾರದೆಂಬ ನಿಬಂಧವನ್ನು ಮೀರಿದವರಾರು ಎಂದು ಪ್ರಶ್ನಿಸಿದನು.

ಅರ್ಥ:
ತಿಳುಹು: ತಿಳಿಸು, ಹೇಳು; ಶಾಸ್ತ್ರ: ಸಾಂಪ್ರದಾಯಿಕವಾದ ಆಚರಣೆ, ಪದ್ಧತಿ; ನಡೆ: ಚಲಿಸು, ಆಚರಿಸು; ಸೂನು: ಮಗ; ನುಡಿ: ಮಾತಾಡು; ಸಮಯ: ಕಾಲ; ಔಘ: ಗುಂಪು, ಸಮೂಹ; ಸಂಗತಿ: ಜೊತೆ, ಸಂಗಡ; ಹೀನ: ಕೆಟ್ಟದ್ದು, ಕಳಪೆ; ಪಡಿತಳ: ಮುನ್ನುಗ್ಗುವಿಕೆ, ಆಕ್ರಮಣ; ಹೊಯ್ಲು: ಏಟು, ಹೊಡೆತ; ಘಾಯ: ಪೆಟ್ಟು; ಒದಗು: ಲಭ್ಯ, ದೊರೆತುದು; ನಿಬಂಧ: ಕರಾರು, ಕಟ್ಟಳೆ; ಅಳಿ: ನಾಶ; ಹೇಳು: ತಿಳಿಸು;

ಪದವಿಂಗಡಣೆ:
ಏನ +ತಿಳುಹುವೆ +ನೀನು +ಶಾಸ್ತ್ರದೊಳ್
ಏನ +ನಡೆದರು +ನಿನ್ನವರು +ಯಮ
ಸೂನು +ನುಡಿಯನೆ +ಸಮಯವನು +ಶಾಸ್ರೌಘ+ಸಂಗತಿಯ
ಹೀನಗತಿ +ಪಡಿತಳದ +ಹೊಯ್ಲು
ತ್ತಾನ+ ಘಾಯದಲ್+ಒದಗಬೇಕೆಂಬ್
ಈ +ನಿಬಂಧನವ್+ಆರಲ್+ಅಳಿದುದು +ಕೃಷ್ಣ+ ಹೇಳೆಂದ

ಅಚ್ಚರಿ:
(೧) ಏನ – ೧, ೨ ಸಾಲಿನ ಮೊದಲ ಪದ

ಪದ್ಯ ೧೧: ಬಲರಾಮನು ಯಾವ ತೀರ್ಥಕ್ಷೇತ್ರಗಳನ್ನು ಸಂಚರಿಸಿದನು?

ಗಂಗೆ ಮೊದಲಾದಮಳತರ ತೀ
ರ್ಥಂಗಳಲಿ ತದ್ವಾರಣಾಖ್ಯಾ
ನಂಗಳಲಿ ತತ್ತದ್ವಿಶೇಷವಿಧಾನ ದಾನದಲಿ
ತುಂಗವಿಕ್ರಮನೀ ಸಮಸ್ತ ಜ
ನಂಗಳೊಡನೆ ಸುತೀರ್ಥಯಾತ್ರಾ
ಸಂಗತಿಯಲೇ ಬಳಸಿದನು ಭೂಮಿಪ್ರದಕ್ಷಿಣವ (ಗದಾ ಪರ್ವ, ೬ ಸಂಧಿ, ೧೧ ಪದ್ಯ)

ತಾತ್ಪರ್ಯ:
ಗಂಗೆಯೇ ಮೊದಲಾದ ನದಿಗಳು ಹರಿಯುವ ತಿರ್ಥಕ್ಷೇತ್ರಗಳಲ್ಲಿ ಆಯಾ ಕ್ಷೇತ್ರದ ವಿಧಿಗಳಂತೆ ನಡೆದು, ತನ್ನ ಜೊತೆಗೆ ಬಂದವರೊಡನೆ ತೀರ್ಥಯಾತ್ರೆ ಮಾಡುತ್ತಾ ಭೂಪ್ರದಕ್ಷಿಣೆ ಮಾಡಿದನು.

ಅರ್ಥ:
ಗಂಗೆ: ಸುರನಧಿ; ಮೊದಲಾದ: ಮುಂತಾದ; ಅಮಳ: ನಿರ್ಮಲ; ತೀರ್ಥ: ಪವಿತ್ರ ಕ್ಷೇತ್ರ; ವಾರಣ: ಆನೆ; ವಿಶೇಷ: ಅತಿಶಯತೆ, ವೈಶಿಷ್ಟ್ಯ; ವಿಧಾನ: ರೀತಿ; ತುಂಗ: ಶ್ರೇಷ್ಠ; ವಿಕ್ರಮ: ಶೂರ; ಸಮಸ್ತ: ಎಲ್ಲಾ; ಜನ: ಮನುಷ್ಯ; ಯಾತ್ರಾ: ಪ್ರಯಾಣ; ಸಂಗತಿ: ವಿಷಯ, ವಿವರ; ಬಳಸು: ಉಪಯೋಗಿಸು; ಭೂಮಿ: ಅವನಿ; ಪ್ರದಕ್ಷಿಣೆ: ಸುತ್ತುವರಿ;

ಪದವಿಂಗಡಣೆ:
ಗಂಗೆ +ಮೊದಲಾದ್+ಅಮಳತರ +ತೀ
ರ್ಥಂಗಳಲಿ +ತದ್+ವಾರಣಾಖ್ಯಾನ್
ಅಂಗಳಲಿ +ತತ್ತದ್+ವಿಶೇಷ+ವಿಧಾನ +ದಾನದಲಿ
ತುಂಗವಿಕ್ರಮನ್+ಈ+ ಸಮಸ್ತ+ ಜ
ನಂಗಳೊಡನೆ +ಸುತೀರ್ಥ+ಯಾತ್ರಾ
ಸಂಗತಿಯಲೇ+ ಬಳಸಿದನು +ಭೂಮಿ+ಪ್ರದಕ್ಷಿಣವ

ಅಚ್ಚರಿ:
(೧) ತೀರ್ಥಂಗಳಲಿ, ವಾರಣಾಖ್ಯಾನಂಗಳಲಿ, ದಾನದಲಿ – ಪದಗಳ ಬಳಕೆ

ಪದ್ಯ ೫೭: ಕೌರವನ ಮುಖವೇಕೆ ಅರಳಿತು?

ಆ ನಿಖಿಳ ಪರಿವಾರದನುಸಂ
ಧಾನ ದೃಷ್ಟಿಗಳತ್ತ ತಿರುಗಿದ
ವೇನನೆಂಬೆನು ಮುಸಲಧರನಾಗಮನ ಸಂಗತಿಯ
ಈ ನರೇಂದ್ರನ ಸುಮುಖತೆಯ ಸು
ಮ್ಮಾನ ಹೊಳೆದುದು ಭಯದಿ ಕುಂತೀ
ಸೂನುಗಳು ಮರೆಗೊಳುತಲಿರ್ದುದು ವೀರನರಯಣನ (ಗದಾ ಪರ್ವ, ೫ ಸಂಧಿ, ೫೭ ಪದ್ಯ)

ತಾತ್ಪರ್ಯ:
ಸೇನಾ ಪರಿವಾರದ ದೃಷ್ಟಿಗಳು ಬಲರಾಮನತ್ತ ತಿರುಗಿದವು. ಅವನ ಆಗಮನದಿಂದ ಕೌರವನ ಮುಖವರಳಿತು. ಪಾಂಡವರು ಭಯದಿಂದ ವೀರನಾರಾಯಣನ ಆಶ್ರಯಕ್ಕೆ ಬಂದರು.

ಅರ್ಥ:
ನಿಖಿಳ: ಎಲ್ಲಾ; ಪರಿವಾರ: ಬಂಧುಜನ; ಅನುಸಂಧಾನ: ಪರಿಶೀಲನೆ, ಪ್ರಯೋಗ; ದೃಷ್ಟಿ: ನೋಟ; ತಿರುಗು: ಸುತ್ತು; ಮುಸಲ: ಗದೆ; ಧರ: ಧರಿಸು; ಆಗಮನ: ಬಂದು; ಸಂಗತಿ: ಜೊತೆ, ಸಂಗಡ; ನರೇಂದ್ರ: ಇಂದ್ರ; ಮುಖ: ಆನನ; ಸುಮ್ಮಾನ: ಸಂತಸ; ಹೊಳೆ: ಪ್ರಕಾಶ; ಭಯ: ಅಂಜಿಕೆ; ಸೂನು: ಮಗ; ಮರೆ: ಅವಿತುಕೋ;

ಪದವಿಂಗಡಣೆ:
ಆ +ನಿಖಿಳ +ಪರಿವಾರದ್+ಅನುಸಂ
ಧಾನ +ದೃಷ್ಟಿಗಳತ್ತ+ ತಿರುಗಿದವ್
ಏನನೆಂಬೆನು +ಮುಸಲಧರನ್+ಆಗಮನ +ಸಂಗತಿಯ
ಈ +ನರೇಂದ್ರನ+ ಸುಮುಖತೆಯ +ಸು
ಮ್ಮಾನ +ಹೊಳೆದುದು +ಭಯದಿ +ಕುಂತೀ
ಸೂನುಗಳು +ಮರೆಗೊಳುತಲಿರ್ದುದು+ ವೀರನರಯಣನ

ಅಚ್ಚರಿ:
(೧) ಬಲರಾಮನನ್ನು ಮುಸಲಧರ ಎಂದು ಕರೆದಿರುವುದು
(೨) ಸುಮುಖತೆ, ಸುಮ್ಮಾನ, ಸೂನು – ಸು ಕಾರದ ಪದಗಳ ಬಳಕೆ

ಪದ್ಯ ೫೨: ಯಮನು ಮಗನಿಗೆ ಏನು ಹೇಳಿದನು?

ಯಮನ ಬಳಿಕೊಲಿದೀ ಪ್ರಸಂಗದ
ಕ್ರಮವ ಕೃತ್ಯೆಯ ಹದನನೆಲ್ಲಾ
ಯಮತನೂಜಂಗರುಹಿ ತದ್ವೃತ್ತಾಂತ ಸಂಗತಿಯ
ಕಮಲನಾಭನ ಕರುಣದಳತೆಯ
ಕ್ರಮವನರುಹುತೆ ಬಳಿಕ ಮುಂದಣ
ವಿಮಲದಜ್ಞಾತಕ್ಕೆ ನೇಮಿಸಿ ಹರಹಿದನು ಮಗನ (ಅರಣ್ಯ ಪರ್ವ, ೨೬ ಸಂಧಿ, ೫೨ ಪದ್ಯ)

ತಾತ್ಪರ್ಯ:
ಯಮನು ಈ ಪ್ರಸಂಗದ ವಿವರಗಳನ್ನೂ, ಕೃತ್ಯೆಯ ವೃತ್ತಾಮ್ತವನ್ನೂ ಧರ್ಮಜನಿಗೆ ವಿವರವಾಗಿ ತಿಳಿಸಿದನು. ಶ್ರೀಕೃಷ್ಣನ ಕರುಣೆಯಿಂದ ಪಾಂಡವರು ಪಾರಾದ ಕ್ರಮವನ್ನು ವಿವರಿಸಿದನು. ಬಳಿಕ ಅಜ್ಞಾತವಾಸಕ್ಕೆ ಹೊರಡಲು ಅಪ್ಪಣೆಯನ್ನು ನೀಡಿದನು.

ಅರ್ಥ:
ಬಳಿಕ: ನಂತರ; ಒಲಿ: ಪ್ರೀತಿ; ಪ್ರಸಂಗ: ಮಾತುಕತೆ; ಸಂದರ್ಭ; ಕ್ರಮ: ರೀತಿ; ಹದ: ಸ್ಥಿತಿ; ತನುಜ: ಮಗ; ಅರುಹು: ಹೇಳು; ವೃತ್ತಾಂತ: ಘಟನೆ; ಸಂಗತಿ: ಸಹವಾಸ, ಒಡನಾಟ; ಕಮಲನಾಭ: ವಿಷ್ಣು; ಕರುಣ: ದಯೆ; ಕ್ರಮ: ಅಡಿ, ಪಾದ; ಬಳಿಕ: ನಂತರ; ಮುಂದಣ: ಮುಂದಿನ; ವಿಮಲ: ನಿರ್ಮಲ; ಅಜ್ಞಾತ: ಯಾರಿಗೂ ಗೊತ್ತಾಗದ ಹಾಗೆ ಇರುವ ಸ್ಥಿತಿ; ನೇಮಿಸು: ಮನಸ್ಸನ್ನು ನಿಯಂತ್ರಿಸು; ಹರಹು: ಪ್ರಸರ, ಹರಡು; ಮಗ: ಪುತ್ರ;

ಪದವಿಂಗಡಣೆ:
ಯಮನ +ಬಳಿಕ+ಒಲಿದ್+ಈ+ ಪ್ರಸಂಗದ
ಕ್ರಮವ +ಕೃತ್ಯೆಯ +ಹದನನೆಲ್ಲಾ
ಯಮ+ತನೂಜಂಗ್+ಅರುಹಿ+ ತದ್ವೃತ್ತಾಂತ +ಸಂಗತಿಯ
ಕಮಲನಾಭನ+ ಕರುಣದಳತೆಯ
ಕ್ರಮವನ್+ಅರುಹುತೆ +ಬಳಿಕ+ ಮುಂದಣ
ವಿಮಲದ್+ಅಜ್ಞಾತಕ್ಕೆ +ನೇಮಿಸಿ +ಹರಹಿದನು +ಮಗನ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಮಲನಾಭನ ಕರುಣದಳತೆಯ ಕ್ರಮವನರುಹುತೆ