ಪದ್ಯ ೨೦: ಕೃಪಾಚಾರ್ಯರಲ್ಲಿ ಮಕ್ಕಳು ಯಾವ ವಿದ್ಯೆಯನ್ನು ಕಲೆತರು?

ಆ ಕೃಪಾಚಾರಿಯನ ದೆಸೆಯಿಂ
ದೀ ಕುಮಾರರು ನಿಖಿಳ ತರ್ಕ
ವ್ಯಾಕರಣ ಮೊದಲೆನೆ ಚತುರ್ದಶ ವಿದ್ಯೆಗಳನರಿದು
ಲೋಕ ವೈದಿಕ ಮುಖ್ಯ ಸಕಲಕ
ಲಾಕುಶಲರಾದರು ಧನುಃ ಪ್ರವಿ
ವೇಕ ವಿಪುಣರನರಸುತ್ತಿದ್ದನು ಮತ್ತೆ ಗಾಂಗೇಯ (ಆದಿ ಪರ್ವ, ೬ ಸಂಧಿ, ೨೦ ಪದ್ಯ)

ತಾತ್ಪರ್ಯ:
ಕೃಪಚಾರ್ಯರಲ್ಲಿ ಕೌರವ ಪಾಂಡವರು ಹದಿನಾಲ್ಕು ವಿದ್ಯೆಗಳನ್ನು (ನಾಲ್ಕು ವೇದ, ಆರು ವೇದಾಂತ, ಧರ್ಮಶಾಸ್ತ್ರ, ಪುರಾಣ, ಮೀಮಾಂಸ, ನ್ಯಾಯ, ತರ್ಕ) ಕಲಿತರು. ಲೌಕಿಕ ವೈದಿಕ ಕಲೆಗಳಲ್ಲಿ ನಿಪುಣರಾದರು. ಧರ್ನುವಿದ್ಯೆಯನ್ನು ಕಲಿಸಲು ಯಾರಾದರು ನಿಪುಣರಾದ ಗುರುಗಳನ್ನು ಭೀಷ್ಮನು ಹುಡುಕುತ್ತಿದ್ದನು.

ಅರ್ಥ:
ದೆಸೆ: ಕಾರಣ; ನಿಖಿಳ: ಎಲ್ಲಾ; ತರ್ಕ: ಆರು ದರ್ಶನಗಳಲ್ಲಿ ಒಂದು; ವ್ಯಾಕರಣ: ಭಾಷೆಯ ನಿಯಮಗಳನ್ನು ತಿಳಿಸುವ ಶಾಸ್ತ್ರ; ಮೊದಲು: ಮುಂತಾದ; ಚತುರ್ದಶ: ಹದಿನಾಲ್ಕು; ವಿದ್ಯೆ: ಜ್ಞಾನ; ಅರಿ: ತಿಳಿ; ಲೋಕ: ಜಗತ್ತು; ವೈದಿಕ: ವೇದಗಳಿಗೆ ಸಂಬಂಧಿಸಿದ; ಮುಖ್ಯ: ಪ್ರಮುಖ; ಸಕಲ: ಎಲ್ಲಾ; ಕಲೆ: ಲಲಿತವಿದ್ಯೆ, ಕುಶಲವಿದ್ಯೆ; ಕುಶಲ: ಪಾಂಡಿತ್ಯ; ಧನು: ಬಿಲ್ಲು; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ನಿಪುಣ: ಪಾರಂಗತ; ಅರಸು: ಹುಡುಕು; ಮತ್ತೆ: ಪುನಃ; ಗಾಂಗೇಯ: ಭೀಷ್ಮ;

ಪದವಿಂಗಡಣೆ:
ಆ+ ಕೃಪಾಚಾರಿಯನ +ದೆಸೆಯಿಂದ್
ಈ+ ಕುಮಾರರು +ನಿಖಿಳ +ತರ್ಕ
ವ್ಯಾಕರಣ+ ಮೊದಲೆನೆ+ ಚತುರ್ದಶ+ ವಿದ್ಯೆಗಳನರಿದು
ಲೋಕ +ವೈದಿಕ +ಮುಖ್ಯ +ಸಕಲ+ಕ
ಲಾ+ಕುಶಲರಾದರು +ಧನುಃ +ಪ್ರವಿ
ವೇಕ +ವಿಪುಣರನ್+ಅರಸುತ್ತಿದ್ದನು +ಮತ್ತೆ+ ಗಾಂಗೇಯ

ಪದ್ಯ ೧೦: ಮಕ್ಕಳಿಗೆ ಯಾವ ಹೆಸರನ್ನಿಡಲಾಯಿತು?

ಜಾತಕರ್ಮಾದಿಯನು ಪಾರ್ಥಿವ
ಜಾತಿವಿಧಿವಿಹಿತದಲಿ ಗಂಗಾ
ಜಾತ ಮಾಡಿಸಿ ತುಷ್ಟಿ ಪದಿಸಿದ ನಿಖಿಳ ಯಾಚಕರ
ಈತನೇ ಧೃತರಾಷ್ಟ್ರನೆರಡನೆ
ಯಾತ ಪಾಂಡು ವಿಲಾಸಿನೀಸಂ
ಭೂತನೀತನು ವಿದುರನೆಂದಾಯ್ತವರಿಗಭಿದಾನ (ಆದಿ ಪರ್ವ, ೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ಭೀಷ್ಮನು ಕ್ಷತ್ರಿಯಜಾತಿಗೆ ಅನುಗುಣವಾಗುವ ವಿಧಿಯಂತೆ ಜಾತಕರ್ಮವನ್ನು ನಡೆಸಿದನು. ಯಾಚಕರನ್ನು ತೃಪ್ತಿಪಡಿಸಿದನು. ಅಂಬಿಕೆಯ ಮಗನಿಗೆ ಧೃತರಾಷ್ಟ್ರನೆಂದೂ, ಅಂಬಾಲಿಕೆಯ ಮಗನಿಗೆ ಪಾಂಡುವೆಂದೂ, ವಿಲಾಸಿನಿಯ ಮಗನಿಗೆ ವಿದುರನೆಂದೂ ಹೆಸರನ್ನಿಟ್ಟರು.

ಅರ್ಥ:
ಜಾತಕರ್ಮ: ಹುಟ್ಟಿದ ಮಗುವಿಗೆ ಮಾಡುವ ಒಂದು ಸಂಸ್ಕಾರ; ಆದಿ: ಮೊದಲಾದ; ಪಾರ್ಥಿವ: ಭೌತಿಕವಾದುದು; ಪಾರ್ಥಿವಜಾತಿ: ಕ್ಷತ್ರಿಯ; ವಿಧಿ: ನಿಯಮ; ವಿಹಿತ: ಯೋಗ್ಯವಾದುದು; ಜಾತ: ಹುಟ್ಟಿದ; ಗಂಗಾಜಾತ: ಭೀಷ್ಮ; ತುಷ್ಟಿ: ಸಂತಸ; ನಿಖಿಳ: ಎಲ್ಲಾ; ಯಾಚಕ: ಬೇಡು; ವಿಲಾಸಿನಿ: ಸಖಿ; ಅಭಿದಾನ: ಹೆಸರು;

ಪದವಿಂಗಡಣೆ:
ಜಾತಕರ್ಮಾದಿಯನು +ಪಾರ್ಥಿವ
ಜಾತಿ+ವಿಧಿ+ವಿಹಿತದಲಿ +ಗಂಗಾ
ಜಾತ +ಮಾಡಿಸಿ +ತುಷ್ಟಿ +ಪಡಿಸಿದ +ನಿಖಿಳ +ಯಾಚಕರ
ಈತನೇ +ಧೃತರಾಷ್ಟ್ರನ್+ಎರಡನೆ
ಯಾತ+ ಪಾಂಡು +ವಿಲಾಸಿನೀ+ಸಂ
ಭೂತನ್+ಈತನು +ವಿದುರನೆಂದಾಯ್ತ್+ಅವರಿಗ್+ಅಭಿದಾನ

ಅಚ್ಚರಿ:
(೧) ಭೀಷ್ಮನನ್ನು ಗಂಗಾಜಾತ; ಕ್ಷತ್ರಿಯರನ್ನು ಪಾರ್ಥಿವಜಾತಿ ಎಂದು ಕರೆದಿರುವುದು

ಪದ್ಯ ೨೩: ಯೋಧರ ಅಪರಕರ್ಮವನ್ನು ಹೇಗೆ ಮಾಡಲಾಯಿತು?

ಕಳನ ಚೌಕದ ಸುತ್ತಲೊಟ್ಟಿಸಿ
ತಳಿಗಳನು ಬಹಳಾಗ್ನಿಯನು ಕೈ
ಕೊಳಿಸಿದರು ದಹಿಸಿದರು ಬಹಳಾಕ್ಷೋಹಿಣೀಭಟರ
ಬಳಿಕ ಹಸ್ತಿನಪುರದ ಸೀಮಾ
ಸ್ಥಳಕೆ ಬಂದರು ನಿಖಿಳ ಕಾಂತಾ
ವಳಿಸಹಿತ ಗಂಗಾವಗಹನವ ಮಾಡಿದನು ನೃಪತಿ (ಗದಾ ಪರ್ವ, ೧೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ರಣರಂಗದ ಸುತ್ತಲೂ ಕೊರಡುಗಲನ್ನೊಟ್ಟಿಸಿ, ಹದಿನೆಂಟು ಅಕ್ಷೋಹಿಣೀ ಸೈನ್ಯದ ಯೋಧರನ್ನು ದಹಿಸಿದರು. ನಂತರ ಧರ್ಮಜನು ಹಸ್ತಿನಾವತಿಯ ಪ್ರದೇಶಕ್ಕೆ ಬಂದು ಸ್ತ್ರೀಯರೊಡನೆ ಗಂಗಾ ಸ್ನಾನವನ್ನು ಮಾಡಿದರು.

ಅರ್ಥ:
ಕಳ: ರಣರಂಗ; ಚೌಕ: ಚತುಷ್ಕಾಕಾರವಾದುದು; ಸುತ್ತ: ಎಲ್ಲಾ ಕಡೆ; ಒಟ್ಟಿಸು: ಕೂಡಿಸು; ತಳಿ: ಹರಡು, ಕೆದರು; ಬಹಳ: ತುಂಬ; ಅಗ್ನಿ: ಬೆಂಕಿ; ಕೈಕೊಳಿಸು: ಸ್ವೀಕರಿಸು; ದಹಿಸು: ಸುಡು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಭಟ: ಸೈನಿಕ; ಬಳಿಕ: ನಂತರ; ಸೀಮೆ: ಎಲ್ಲೆ, ಗಡಿ; ಸ್ಥಳ: ಪ್ರದೇಶ; ಬಂದು: ಆಗಮಿಸು; ನಿಖಿಳ: ಎಲ್ಲಾ; ಕಾಂತಾವಳಿ: ಸ್ತ್ರೀಯರ ಗುಂಪು; ಅವಗಾಹ: ಸ್ನಾನ; ನೃಪತಿ: ರಾಜ;

ಪದವಿಂಗಡಣೆ:
ಕಳನ +ಚೌಕದ +ಸುತ್ತಲೊಟ್ಟಿಸಿ
ತಳಿಗಳನು +ಬಹಳಾಗ್ನಿಯನು+ ಕೈ
ಕೊಳಿಸಿದರು +ದಹಿಸಿದರು +ಬಹಳ+ಅಕ್ಷೋಹಿಣೀ+ಭಟರ
ಬಳಿಕ +ಹಸ್ತಿನಪುರದ ಸೀಮಾ
ಸ್ಥಳಕೆ+ ಬಂದರು +ನಿಖಿಳ +ಕಾಂತಾ
ವಳಿ+ಸಹಿತ +ಗಂಗಾವಗಹನವ+ ಮಾಡಿದನು +ನೃಪತಿ

ಪದ್ಯ ೫೭: ಕೌರವನ ಮುಖವೇಕೆ ಅರಳಿತು?

ಆ ನಿಖಿಳ ಪರಿವಾರದನುಸಂ
ಧಾನ ದೃಷ್ಟಿಗಳತ್ತ ತಿರುಗಿದ
ವೇನನೆಂಬೆನು ಮುಸಲಧರನಾಗಮನ ಸಂಗತಿಯ
ಈ ನರೇಂದ್ರನ ಸುಮುಖತೆಯ ಸು
ಮ್ಮಾನ ಹೊಳೆದುದು ಭಯದಿ ಕುಂತೀ
ಸೂನುಗಳು ಮರೆಗೊಳುತಲಿರ್ದುದು ವೀರನರಯಣನ (ಗದಾ ಪರ್ವ, ೫ ಸಂಧಿ, ೫೭ ಪದ್ಯ)

ತಾತ್ಪರ್ಯ:
ಸೇನಾ ಪರಿವಾರದ ದೃಷ್ಟಿಗಳು ಬಲರಾಮನತ್ತ ತಿರುಗಿದವು. ಅವನ ಆಗಮನದಿಂದ ಕೌರವನ ಮುಖವರಳಿತು. ಪಾಂಡವರು ಭಯದಿಂದ ವೀರನಾರಾಯಣನ ಆಶ್ರಯಕ್ಕೆ ಬಂದರು.

ಅರ್ಥ:
ನಿಖಿಳ: ಎಲ್ಲಾ; ಪರಿವಾರ: ಬಂಧುಜನ; ಅನುಸಂಧಾನ: ಪರಿಶೀಲನೆ, ಪ್ರಯೋಗ; ದೃಷ್ಟಿ: ನೋಟ; ತಿರುಗು: ಸುತ್ತು; ಮುಸಲ: ಗದೆ; ಧರ: ಧರಿಸು; ಆಗಮನ: ಬಂದು; ಸಂಗತಿ: ಜೊತೆ, ಸಂಗಡ; ನರೇಂದ್ರ: ಇಂದ್ರ; ಮುಖ: ಆನನ; ಸುಮ್ಮಾನ: ಸಂತಸ; ಹೊಳೆ: ಪ್ರಕಾಶ; ಭಯ: ಅಂಜಿಕೆ; ಸೂನು: ಮಗ; ಮರೆ: ಅವಿತುಕೋ;

ಪದವಿಂಗಡಣೆ:
ಆ +ನಿಖಿಳ +ಪರಿವಾರದ್+ಅನುಸಂ
ಧಾನ +ದೃಷ್ಟಿಗಳತ್ತ+ ತಿರುಗಿದವ್
ಏನನೆಂಬೆನು +ಮುಸಲಧರನ್+ಆಗಮನ +ಸಂಗತಿಯ
ಈ +ನರೇಂದ್ರನ+ ಸುಮುಖತೆಯ +ಸು
ಮ್ಮಾನ +ಹೊಳೆದುದು +ಭಯದಿ +ಕುಂತೀ
ಸೂನುಗಳು +ಮರೆಗೊಳುತಲಿರ್ದುದು+ ವೀರನರಯಣನ

ಅಚ್ಚರಿ:
(೧) ಬಲರಾಮನನ್ನು ಮುಸಲಧರ ಎಂದು ಕರೆದಿರುವುದು
(೨) ಸುಮುಖತೆ, ಸುಮ್ಮಾನ, ಸೂನು – ಸು ಕಾರದ ಪದಗಳ ಬಳಕೆ

ಪದ್ಯ ೪೪: ಕೌರವನನ್ನು ಸೈನ್ಯದವರು ಹೇಗೆ ಹೊಗಳಿದರು?

ದಿಟ್ಟನೈ ನೃಪರಾವು ಮಝ ಜಗ
ಜಟ್ಟಿಯಲ್ಲಾ ದೊರೆಗಳೊಡನೀ
ಥಟ್ಟಿಗೊಬ್ಬನೆ ನಿಲುವೆನೆಂದನದಾವ ಸತ್ವನಿಧಿ
ಹುಟ್ಟಿದವರಿಗೆ ಸಾವು ಹಣೆಯಲಿ
ಕಟ್ಟಿಹುದು ವಿಧಿಯೆಂದಡೀ ಪರಿ
ಮುಟ್ಟೆ ಧೀವಸಿಯಾವನೆಂದುದು ನಿಖಿಳ ಪರಿವಾರ (ಗದಾ ಪರ್ವ, ೫ ಸಂಧಿ, ೪೪ ಪದ್ಯ)

ತಾತ್ಪರ್ಯ:
ಪಾಂಡವ ಪರಿವಾರದವರು, ದೊರೆಯು ಧೈರ್ಯಶಾಲಿ, ರಾವು, ಮಝ, ಭಲೇ ಪರಾಕ್ರಮಿಯಲ್ಲವೇ ಎಂದು ಹೊಗಳಿತು. ಸೇನಾನಾಯಕರೊಡನೆ ಈ ಸೈನ್ಯವನ್ನು ತಾನೊಬ್ಬನೇ ಇದಿರಿಸುವೆನೆನ್ನುತ್ತಾನೆ, ಹುಟ್ಟಿದವರಿಗೆ ಸಾವು ತಪ್ಪಿದ್ದಲ್ಲ, ಆದರೂ ಕಂಡೂ ಕಂಡೂ ಬುದ್ಧಿಪೂರ್ವಕವಾಗಿ ಇಂತಹ ಯುದ್ಧಕ್ಕೆ ನಿಂತಿದ್ದಾರೆ, ಇಂತಹವರು ಯಾರಿದ್ದಾರೆ ಎಂದು ಹೊಗಳಿದರು.

ಅರ್ಥ:
ದಿಟ್ಟ: ನಿಜ, ಸತ್ಯ; ನೃಪ: ರಾಜ; ಮಝ: ಭಲೆ, ಭೇಷ್; ಜಗಜಟ್ಟಿ: ಪರಾಕ್ರಮಿ; ದೊರೆ: ರಾಜ; ಥಟ್ಟು: ಗುಂಪು; ನಿಲುವೆ: ನಿಲ್ಲು; ಸತ್ವ: ಸರ; ನಿಧಿ: ಹುದುಗಿಟ್ಟ ಧನ, ನಿಕ್ಷೇಪ; ಹುಟ್ಟು: ಜನನ; ಸಾವು: ಮರಣ; ಹಣೆ: ಲಲಾಟ; ಕಟ್ಟು: ಬಂಧಿಸು, ಧರಿಸು; ವಿಧಿ: ನಿಯಮ; ಪರಿ: ರೀತಿ; ಮುಟ್ಟು: ತಾಗು; ಧೀವಸಿ: ಸಾಹಸಿ, ಶೂರ; ನಿಖಿಳ: ಎಲ್ಲಾ; ಪರಿವಾರ: ಬಂಧುಜನ; ರಾವು: ದಿಗ್ಭ್ರಮೆ, ಆರ್ಭಟ;

ಪದವಿಂಗಡಣೆ:
ದಿಟ್ಟನೈ +ನೃಪ+ರಾವು +ಮಝ +ಜಗ
ಜಟ್ಟಿಯಲ್ಲಾ +ದೊರೆಗಳೊಡನ್+ಈ+
ಥಟ್ಟಿಗೊಬ್ಬನೆ+ ನಿಲುವೆನ್+ಎಂದನದ್+ಆವ +ಸತ್ವನಿಧಿ
ಹುಟ್ಟಿದವರಿಗೆ+ ಸಾವು +ಹಣೆಯಲಿ
ಕಟ್ಟಿಹುದು +ವಿಧಿ+ಎಂದಡ್+ಈ+ ಪರಿ
ಮುಟ್ಟೆ +ಧೀವಸಿ+ಆವನೆಂದುದು +ನಿಖಿಳ +ಪರಿವಾರ

ಅಚ್ಚರಿ:
(೧) ದಿಟ್ಟ, ಜಗಜಟ್ಟಿ, ಧೀವಸಿ – ಸಾಮ್ಯಾರ್ಥ ಪದಗಳು
(೨) ಲೋಕ ನೀತಿ: ಹುಟ್ಟಿದವರಿಗೆ ಸಾವು ಹಣೆಯಲಿ ಕಟ್ಟಿಹುದು ವಿಧಿ

ಪದ್ಯ ೨೩: ಭೂರಿಶ್ರವನ ಸಂಬಂಧಿಕರು ಯಾರಿಗೆ ಬೈದರು?

ಆಗದಾಗದು ಕಷ್ಟವಿದು ತೆಗೆ
ಬೇಗವೆನಲರ್ಜುನನ ಕೃಷ್ಣನ
ನಾಗಳವ ಕೈಕೋಳ್ಲದರಿದನು ಗೋಣನಾ ನೃಪನ
ಹೋಗು ಹೋಗೆಲೆ ಪಾಪಿ ಸುಕೃತವ
ನೀಗಿ ಹುಟ್ಟಿದೆ ರಾಜಋಷಿಯವ
ನೇಗಿದನು ನಿನಗೆನುತ ಬೈದುದು ನಿಖಿಳಪರಿವಾರ (ದ್ರೋಣ ಪರ್ವ, ೧೪ ಸಂಧಿ, ೨೩ ಪದ್ಯ)

ತಾತ್ಪರ್ಯ:
ಇದು ಕಷ್ಟದ ಕಾರ್ಯ. ಬೇಡ, ಬೇಡ, ಬಿಡು ಎಂದು ಕೃಷ್ಣಾರ್ಜುನರು ಹೇಳಿದರೂ ಲೆಕ್ಕಿಸದೆ ಭೂರಿಶ್ರವನ ಕೊರಳನ್ನು ಕತ್ತರಿಸಿದನು. ಭೂರಿಶ್ರವನ ಪರಿವಾರದವರು ಸಾತ್ಯಕಿಯು ಎಲೋ ಪಾಪಿ, ಹೋಗು ತೆರಳು, ನೀನು ಪುಣ್ಯವನ್ನು ಕಳೆದುಕೊಂಡು ಹುಟ್ಟಿದವನು. ಭೂರಿಶ್ರವನು ನಿನಗೇನು ಮಾಡಿದನು ಎಂದು ಜರೆದರು.

ಅರ್ಥ:
ಕಷ್ಟ: ಕಠಿಣ; ತೀ: ಹೊರತರು; ಬೇಗ: ಶೀಘ್ರ; ಅರಿ: ಸೀಳು; ಗೋಣು: ಕುತ್ತಿಗೆ; ನೃಪ: ರಾಜ; ಹೋಗು: ತೆರಳು; ಪಾಪಿ: ದುಷ್ಟ; ಸುಕೃತ: ಒಳ್ಳೆಯ ಕೆಲಸ; ನೀಗು: ನಿವಾರಿಸಿಕೊಳ್ಳು; ಹುಟ್ಟು: ಜನಿಸು; ರಾಜಋಷಿ: ರಾಜ ಹಾಗೂ ಋಷಿಯ ವ್ಯಕ್ತಿತ್ವಗಳನ್ನು ಮೈಗೂಡಿಸಿಕೊಂಡವನು; ಏಗು: ಸಾಗಿಸು, ನಿಭಾಯಿಸು; ಬೈದು: ಜರಿ; ನಿಖಿಳ: ಎಲ್ಲಾ; ಪರಿವಾರ: ಬಂಧುಜನ;

ಪದವಿಂಗಡಣೆ:
ಆಗದ್+ಆಗದು +ಕಷ್ಟವಿದು+ ತೆಗೆ
ಬೇಗವೆನಲ್+ಅರ್ಜುನನ +ಕೃಷ್ಣನನ್
ಆಗಳವ +ಕೈಕೋಳ್ಳದ್+ಅರಿದನು +ಗೋಣನಾ +ನೃಪನ
ಹೋಗು +ಹೋಗ್+ಎಲೆ+ ಪಾಪಿ +ಸುಕೃತವ
ನೀಗಿ +ಹುಟ್ಟಿದೆ +ರಾಜಋಷಿಯವನ್
ಏಗಿದನು +ನಿನಗೆನುತ +ಬೈದುದು +ನಿಖಿಳ+ಪರಿವಾರ

ಅಚ್ಚರಿ:
(೧) ಭೂರಿಶ್ರವನನ್ನು ಸಂಬಂಧಿಕರು ಕರೆದ ಪರಿ – ರಾಜಋಷಿ
(೨) ಆಗದಾಗದು, ಹೋಗು ಹೋಗು – ಜೋಡಿ ಪದಗಳ ಬಳಕೆ

ಪದ್ಯ ೧೫: ದ್ರೋಣರು ರಥದಲ್ಲಿ ಹೇಗೆ ಕಂಡರು?

ನಿರಿಯುಡಿಗೆಯಲಿ ಮಲ್ಲಗಂಟಿನ
ಸೆರಗ ಮೋಹಿಸಿ ಬೆರಳ ದರ್ಭೆಯ
ಹರಿದು ಬಿಸುಟನು ಜೋಡು ಸೀಸಕ ಬಾಹುರಕ್ಷೆಗಳ
ಮುರುಹಿ ಬಿಗಿದನು ನಿಖಿಳಭೂಸುರ
ರುರುವ ಮಂತ್ರಾಕ್ಷತೆಯ ಕೊಳುತ
ಳ್ಳಿರಿವ ಜಯರವದೊಡನೆ ರಥವೇರಿದನು ಕಲಿದ್ರೋಣ (ದ್ರೋಣ ಪರ್ವ, ೯ ಸಂಧಿ, ೧೫ ಪದ್ಯ)

ತಾತ್ಪರ್ಯ:
ಮಲ್ಲಗಂಟಿನಿಂದ ವಸ್ತ್ರವನ್ನುಟ್ಟು, ಬೆರಳಿನಲ್ಲಿದ್ದ ದರ್ಭೆಯನ್ನು ಕಿತ್ತೆಸೆದನು. ಕವಚ, ಶಿರಸ್ತ್ರಾಣ, ಬಾಹುರಕ್ಷೆಗಳನ್ನು ಭದ್ರವಾಗಿ ಧರಿಸಿದನು. ಬ್ರಾಹ್ಮನರನ್ನರ್ಚಿಸಿ ಅವರ ಆಶೀರ್ಮಂತ್ರಾಕ್ಷತೆಗಳನ್ನು ಸ್ವೀಕರಿಸಿ, ಜಯ ಶಬ್ದವು ಎತ್ತೆತ್ತ ಮೊಳಗುತ್ತಿರಲು ರಥವನ್ನೇರಿದನು.

ಅರ್ಥ:
ನಿರಿ: ಸೀರೆಯ ಮಡಿಕೆ; ಉಡಿಗೆ: ಉಟ್ಟುಕೊಳ್ಳುವ ಬಟ್ಟೆ; ಮಲ್ಲ: ಕುಸ್ತಿಪಟು; ಗಂಟು: ಸೇರಿಸಿ ಕಟ್ಟಿದುದು; ಸೆರಗು:ಸೀರೆಯಲ್ಲಿ ಹೊದೆಯುವ ಭಾಗ; ಮೋಹಿಸು: ಅಪ್ಪಳಿಸುವಂತೆ ಮಾಡು; ಬೆರಳು: ಅಂಗುಲಿ; ದರ್ಭೆ: ಹುಲ್ಲು; ಹರಿ: ಕಡಿ, ಕತ್ತರಿಸು; ಬಿಸುಟು: ಹೊರಹಾಕು; ಜೋಡು: ಜೊತೆ, ಜೋಡಿ; ಸೀಸಕ: ಶಿರಸ್ತ್ರಾಣ; ಬಾಹು: ಭುಜ; ರಕ್ಷೆ: ಕವಚ; ಮುರುಹು: ತಿರುಗಿಸು; ಬಿಗಿ: ಭದ್ರವಾಗಿ; ನಿಖಿಳ: ಎಲ್ಲಾ; ಭೂಸುರ: ಬ್ರಾಹ್ಮನ; ಉರು: ವಿಶೇಷವಾದ; ಮಂತ್ರಾಕ್ಷತೆ: ಆಶೀರ್ವದಿಸಿದ ಅಕ್ಕಿ; ಕೊಳು: ತೆಗೆದುಕೋ; ಇರಿ: ಚುಚ್ಚು, ಕರೆ; ಜಯ: ಗೆಲುವು; ರವ: ಶಬ್ದ; ರಥ: ಬಂಡಿ; ಏರು: ಹತ್ತು; ಕಲಿ: ಶೂರ;

ಪದವಿಂಗಡಣೆ:
ನಿರಿ+ಉಡಿಗೆಯಲಿ +ಮಲ್ಲ+ಗಂಟಿನ
ಸೆರಗ+ ಮೋಹಿಸಿ +ಬೆರಳ+ ದರ್ಭೆಯ
ಹರಿದು +ಬಿಸುಟನು +ಜೋಡು +ಸೀಸಕ +ಬಾಹು+ರಕ್ಷೆಗಳ
ಮುರುಹಿ +ಬಿಗಿದನು +ನಿಖಿಳ+ಭೂಸುರರ್
ಉರುವ +ಮಂತ್ರಾಕ್ಷತೆಯ +ಕೊಳುತಳ್
ಇರಿವ +ಜಯರವದೊಡನೆ +ರಥವೇರಿದನು +ಕಲಿ+ದ್ರೋಣ

ಅಚ್ಚರಿ:
(೧) ಬ್ರಾಹ್ಮಣ ವೇಷವನ್ನು ಕಳಚಿದ ಎಂದು ಹೇಳಲು – ಬೆರಳ ದರ್ಭೆಯ ಹರಿದು ಬಿಸುಟನು

ಪದ್ಯ ೬: ಶಿವನು ಅರ್ಜುನನನ್ನು ಎಲ್ಲಿಗೆ ಕರೆತಂದನು?

ಶಿವನ ಕರುಣಾಲಾಭ ಪುಣ್ಯ
ಪ್ರವರ ಪಾರ್ಥನ ಮುನ್ನಿನಂದದ
ಲವನಿಗಿಳುಹಿದ ನಿಖಿಳದಿವ್ಯಾಯುಧದ ವೇದಿಕೆಗೆ
ಸವೆದುದಿರುಳಿಂದೂಪಲಂಗಳ
ನಿವಹ ಬಲಿದುದು ಚಕ್ರವಾಕದ
ತವಕ ತಗ್ಗಿತು ತರಣಿಯಡರಿದನುದಯಪರ್ವತವ (ದ್ರೋಣ ಪರ್ವ, ೯ ಸಂಧಿ, ೬ ಪದ್ಯ)

ತಾತ್ಪರ್ಯ:
ಶಿವನು ಕರುಣೆಯಿಂದ ಅರ್ಜುನನನ್ನು ನೋಡಿ ಅನುಗ್ರಹಿಸಲು ಅವನನ್ನು ಮೊದಲಿನಂತೆ ಭೂಮಿಗೆ ಕರೆತಂದು ಆಯುಧ ಶಾಲೆಯ ವೇದಿಕೆಗಿಳಿಸಿದನು. ಚಂದ್ರಕಾಂತ ಶಿಲೆಗಳು ಗಟ್ಟಿಯಾದವು. ಚಕ್ರವಾಕಗಳ ತವಕ ಕಮ್ಮಿಯಾಯಿತು. ಸೂರ್ಯನು ಉದಯ ಪರ್ವತವನ್ನೇರಿದನು.

ಅರ್ಥ:
ಶಿವ: ಶಂಕರ; ಕರುಣೆ: ದಯೆ; ಪುಣ್ಯ: ಒಳ್ಳೆಯ ಕಾರ್ಯ; ಪ್ರವರ: ಪ್ರಧಾನ ವ್ಯಕ್ತಿ; ಪಾರ್ಥ: ಅರ್ಜುನ; ಮುನ್ನ: ಮೊದಲು; ಅವನಿ: ಭೂಮಿ; ಇಳುಹು: ಕೆಳಕ್ಕೆ ಬಂದು; ನಿಖಿಳ: ಎಲ್ಲಾ; ದಿವ್ಯ: ಶ್ರೇಷ್ಠ; ಆಯುಧ: ಶಸ್ತ್ರ; ವೇದಿಕೆ: ಕಟ್ಟೆ, ಜಗಲಿ; ಸವೆ: ನಿರ್ಮಿಸು, ಸಜ್ಜುಮಾಡು; ಇರುಳು: ರಾತ್ರಿ; ನಿವಹ: ಗುಂಪು; ಬಲಿ: ಗಟ್ಟಿಯಾಗು; ಚಕ್ರವಾಕ: ಕೋಕ ಪಕ್ಷಿ; ತವಕ: ಬಯಕೆ, ಆತುರ; ತಗ್ಗು: ಕಡಿಮೆಯಾಗು; ತರಣಿ: ಸೂರ್ಯ; ಅಡರು: ಮೇಲಕ್ಕೆ ಹತ್ತು; ಉದಯ: ಹುಟ್ಟು; ಪರ್ವತ: ಬೆಟ್ಟ;

ಪದವಿಂಗಡಣೆ:
ಶಿವನ +ಕರುಣಾಲಾಭ +ಪುಣ್ಯ
ಪ್ರವರ +ಪಾರ್ಥನ +ಮುನ್ನಿನಂದದಲ್
ಅವನಿಗ್+ಇಳುಹಿದ +ನಿಖಿಳ+ದಿವ್ಯ+ಆಯುಧದ +ವೇದಿಕೆಗೆ
ಸವೆದುದ್+ಇರುಳ್+ಇಂದೂಪಲಂಗಳ
ನಿವಹ +ಬಲಿದುದು +ಚಕ್ರವಾಕದ
ತವಕ+ ತಗ್ಗಿತು +ತರಣಿ+ಅಡರಿದನ್+ಉದಯ+ಪರ್ವತವ

ಅಚ್ಚರಿ:
(೧) ಸೂರ್ಯನು ಹುಟ್ಟಿದನು ಎಂದು ಹೇಳುವ ಪರಿ – ತರಣಿಯಡರಿದನುದಯಪರ್ವತವ

ಪದ್ಯ ೩೫: ಧರ್ಮರಾಯನ ಪ್ರಶ್ನೆಗಳಿಗೆ ಸಂಜಯನ ಉತ್ತರವೇನು?

ಸುಖಿಗಳನಿಬರು ಜೀಯ ನಿಮ್ಮಯ
ನಿಖಿಲ ಬಾಂಧವರನು ಸಹೋದರ
ಸಖ ಸುತಾದಿಗಳನು ಪುರೋಹಿತ ಪೌರ ಪರಿಜನವ
ಮಖ ಸಮುದ್ಭವೆ ಮೊದಲು ಪಂಕಜ
ಮುಖಿಯರನು ಬೆಸಗೊಂಡು ಕಳುಹಿದ
ರಖಿಳ ಕುರುನಂದನರು ಭೀಷ್ಮ ದ್ರೋಣ ಗೌತಮರು (ಉದ್ಯೋಗ ಪರ್ವ, ೨ ಸಂಧಿ, ೩೫ ಪದ್ಯ)

ತಾತ್ಪರ್ಯ:
ಧರ್ಮರಾಯನ ಪ್ರಶ್ನೆಗಳಿಗೆ ಸಂಜಯನನು, ಒಡೆಯ ಎಲ್ಲರು ಹಸ್ತಿನಾಪುರದಲ್ಲಿ ಕ್ಷೇಮವಾಗಿದ್ದಾರೆ, ನೀವು ನಿಮ್ಮ ಸಮಸ್ತ ಬಾಂಧವರು, ಮಿತ್ರರು, ಮಕ್ಕಳು, ಪುರೋಹಿತರು, ಊರಿನವರು, ದ್ರೌಪದಿಯಾದಿಯಾಗಿ ಸಮಸ್ತ ಸ್ತ್ರಿಯರು ಸುಖದಿಂದಿರುವವರೇ ಎಂದು ವಿಚಾರಿಸಲು ಕೌರವರೆಲ್ಲರೂ, ಭೀಷ್ಮ, ದ್ರೋಣ, ಕೃಪಚಾರ್ಯರೂ ತಿಳಿಸಿದ್ದಾರೆ.

ಅರ್ಥ:
ಸುಖಿ: ಸಂತೋಷ, ನಲಿವು; ಜೀಯ: ಒಡೆಯ; ನಿಖಿಲ: ಎಲ್ಲಾ; ಬಾಂಧವರು: ಸಂಬಂಧಿಕರು; ಸಹೋದರ: ಅಣ್ಣ ತಮ್ಮ, ಬಾಂಧವರು; ಸಖ: ಸ್ನೇಹಿತ; ಸುತ: ಮಕ್ಕಳು; ಆದಿ: ಮುಂತಾದ; ಪುರೋಹಿತ: ದೇವತಾರ್ಚನೆ ಕಾರ್ಯವನ್ನು ಮಾಡುವವರು; ಪೌರ: ಗರಕ್ಕೆ ಸಂಬಂಧಿಸಿದ; ಪರಿಜನ:ಸೇವಕ ವರ್ಗ; ಮಖ: ಯಜ್ಞ; ಸಮುದ್ಭವೆ: ಹುಟ್ಟಿದ; ಮೊದಲು: ಆದಿ; ಪಂಕಜ: ಕಮಲ; ಪಂಕಜಮುಖಿ: ಸ್ತ್ರೀಯರು; ಬೆಸ:ವಿಚಾರಿಸುವುದು; ಕಳುಹು: ಕಳಿಸು; ಅಖಿಳ: ಎಲ್ಲಾ; ನಂದನ: ಮಗ; ಅನಿಬರು: ಅಷ್ಟು ಜನ;

ಪದವಿಂಗಡಣೆ:
ಸುಖಿಗಳ್+ ಅನಿಬರು +ಜೀಯ +ನಿಮ್ಮಯ
ನಿಖಿಲ+ ಬಾಂಧವರನು +ಸಹೋದರ
ಸಖ+ ಸುತಾದಿಗಳನು +ಪುರೋಹಿತ +ಪೌರ +ಪರಿಜನವ
ಮಖ +ಸಮುದ್ಭವೆ +ಮೊದಲು+ ಪಂಕಜ
ಮುಖಿಯರನು+ ಬೆಸಗೊಂಡು +ಕಳುಹಿದರ್
ಅಖಿಳ +ಕುರುನಂದನರು+ ಭೀಷ್ಮ+ ದ್ರೋಣ +ಗೌತಮರು

ಅಚ್ಚರಿ:
(೧) ದ್ರೌಪದಿಯನ್ನು ಮಖ ಸಮುದ್ಭವೆ ಎಂದು ಕರೆದಿರುವುದು
(೨) ಅಖಿಳ, ನಿಖಿಳ – ಪ್ರಾಸ ಮತ್ತು ಸಮನಾರ್ಥಕ ಪದ
(೩) ಸಖ, ಮಖ – ಪ್ರಾಸ ಪದ