ಪದ್ಯ ೩೨: ಅಶ್ವತ್ಥಾಮನು ಶಿಖಂಡಿ, ಉತ್ತಮೌಂಜಸನನ್ನು ಹೇಗೆ ಸಂಹರಿಸಿದನು?

ಉರಲ ಹತಿಸಿ ಸೆಳೆಯೆ ಗೋಣಲಿ
ಗುರುಗುರಿಸಲಸು ಜಾರಿದುದು ಬೊ
ಬ್ಬಿರಿದು ಹೊಕ್ಕನು ಕದವನೊದೆದು ಶಿಖಂಡಿಯರಮನೆಯ
ತರಿದನಾತನನುತ್ತ ಮೌಂಜನ
ನರಸಿ ಹೊಯ್ದನು ಹೊಕ್ಕು ಬಾಗಿಲ
ಮುರಿದು ಮೈಯರಿಹಿಸಿ ಯುಧಾಮನ್ಯುವ ವಿದಾರಿಸಿದ (ಗದಾ ಪರ್ವ, ೯ ಸಂಧಿ, ೩೨ ಪದ್ಯ)

ತಾತ್ಪರ್ಯ:
ಉರುಲು ಹಾಕಿ ಎಳೆದೊಡನೆ ಕುತ್ತಿಗೆಯಲ್ಲಿ ಗುರುಗುರು ಸದ್ದು ಬಂದು ಧೃಷ್ಟದ್ಯುಮ್ನನ ಪ್ರಾಣವು ಹಾರಿಹೋಯಿತು. ಶಿಖಂಡಿಯ ಮನೆಯ ಕದವನ್ನು ಒದೆದು ಒಳಹೊಕ್ಕು ಅವನನ್ನು ಕೊಂದನು. ಉತ್ತಮೌಂಜಸನನ್ನು ಹುಡುಕಿ ಕೊಂದು, ಬಾಗಿಲು ಮುರಿದು ಎಚ್ಚರಿಸಿ ಯುಧಾಮನ್ಯುವನ್ನು ಸಾಯಿಸಿದನು.

ಅರ್ಥ:
ಉರಲು: ಪಾಶ, ಜೀರುಗುಣಿಕೆಯ ಹಗ್ಗ; ಹತ್ತಿಸು: ಮೇಲೇರು; ಸೆಳೆ:ಎಳೆತ, ಸೆಳೆತ; ಗೋಣು: ಕಂಠ, ಕುತ್ತಿಗೆ; ಗುರುಗುರಿಸು: ಶಬ್ದವನ್ನು ಸೂಚಿಸುವ ಪರಿ; ಅಸು: ಪ್ರಾಣ; ಜಾರು: ಬೀಳು; ಬೊಬ್ಬಿರಿ: ಗರ್ಜಿಸು; ಹೊಕ್ಕು: ಸೇರು; ಕದ: ಬಾಗಿಲು; ಒದೆ: ನೂಕು; ಶಿಖಂಡಿ: ನಪುಂಸಕ; ಅರಮನೆ: ರಾಜರ ಆಲಯ; ತರಿ: ಕಡಿ, ಕತ್ತರಿಸು; ಅರಸು: ಹುಡುಕು; ಹೊಯ್ದು: ಹೊಡೆ; ಹೊಕ್ಕು: ಸೇರು; ಬಾಗಿಲು: ಕದ; ಮುರಿ: ಸೀಳು; ಮೈಯರಿ: ಎಚ್ಚರಿಸು; ವಿದಾರಿಸು: ನಾಶಮಾಡು;

ಪದವಿಂಗಡಣೆ:
ಉರಲ +ಹತಿಸಿ +ಸೆಳೆಯೆ +ಗೋಣಲಿ
ಗುರುಗುರಿಸಲ್+ಅಸು +ಜಾರಿದುದು +ಬೊ
ಬ್ಬಿರಿದು +ಹೊಕ್ಕನು+ ಕದವನ್+ಒದೆದು +ಶಿಖಂಡಿ+ಅರಮನೆಯ
ತರಿದನ್+ಆತನನ್+ ಉತ್ತಮೌಂಜನನ್
ಅರಸಿ +ಹೊಯ್ದನು +ಹೊಕ್ಕು +ಬಾಗಿಲ
ಮುರಿದು +ಮೈ+ಅರಿಹಿಸಿ +ಯುಧಾಮನ್ಯುವ +ವಿದಾರಿಸಿದ

ಅಚ್ಚರಿ:
(೧) ಸಾಯಿಸಿದನು ಎಂದು ಹೇಳುವ ಪರಿ – ಅಸು ಜಾರಿದುದು, ತರಿ, ಹೊಯ್ದನು, ವಿದಾರಿಸು

ಪದ್ಯ ೨೨: ದ್ರೋಣನು ಸೈನಿಕರಿಗೆ ಏನು ಹೇಳಿದ?

ಚೂಣಿ ತೆಗೆಯಲಿ ಮಿಸುಕಿದರೆ ನೃಪ
ನಾಣೆ ಬರಿದೇಕಾಳು ಕುದುರೆಯ
ಗೋಣನವರಿಗೆ ಮಾರುವಿರಿ ಕೌರವನ ಥಟ್ಟಿನಲಿ
ದ್ರೋಣನಲ್ಲಾ ರಕ್ಷಕನು ರಣ
ಹೂಣಿಗರು ನಿಲಿ ಭೀಮ ಪಾರ್ಥರ
ಕಾಣಬಹುದೋ ಕರೆಯೆನುತ ಗರ್ಜಿಸಿದನಾಚಾರ್ಯ (ದ್ರೋಣ ಪರ್ವ, ೧೭ ಸಂಧಿ, ೨೨ ಪದ್ಯ)

ತಾತ್ಪರ್ಯ:
ದ್ರೋಣನು ಗರ್ಜಿಸಿ, ಸೈನ್ಯವು ಹಿಂದಕ್ಕೆ ಬರಲಿ, ಮೂಮ್ದೆ ಕಾಲಿಟ್ಟರೆ ದೊರೆಯಾಣೆ. ಕೇವಲ ಯೋದರ ಕುದುರೆಗಳ ಕತ್ತುಗಳನ್ನು ಅವರಿಗೇಕೆ ಮಾರುತ್ತೀರಿ, ಸುಮ್ಮನೆ ಸಾಯಬೇಡಿ, ಯುದ್ಧ ಕುತೂಹಲಿಗಳು ನಿಂತುಕೊಳ್ಳಿ, ನಿಮ್ಮ ರಕ್ಷಕನಾದ ದ್ರೋಣನಿರಲು, ಭೀಮಾರ್ಜುನರನ್ನು ಅವರ ಸತ್ವವನ್ನು ನೋಡಬಹುದು.

ಅರ್ಥ:
ಚೂಣಿ: ಮುಂದಿನ ಸಾಲು, ಮುಂಭಾಗ; ತೆಗೆ: ಹೊರತರು; ಮಿಸುಕು: ಅಲುಗಾಟ; ನೃಪ: ರಾಜ; ಆಣೆ: ಪ್ರಮಾಣ; ಬರಿ: ಕೇವಲ; ಆಳು: ಸೈನಿಕ; ಕುದುರೆ: ಅಶ್ವ; ಗೋಣು: ಕಂಠ, ಕುತ್ತಿಗೆ; ಮಾರು: ವಿಕ್ರಯಿಸು; ಥಟ್ಟು: ಗುಂಪು; ರಕ್ಷಕ: ಕಾಪಾಡುವವ; ರಣ: ಯುದ್ಧ; ಹೂಣಿಗ: ಬಿಲ್ಲುಗಾರ; ಕರೆ: ಬರೆಮಾಡು; ಗರ್ಜಿಸು: ಆರ್ಭಟಿಸು; ಆಚಾರ್ಯ: ಗುರು;

ಪದವಿಂಗಡಣೆ:
ಚೂಣಿ +ತೆಗೆಯಲಿ +ಮಿಸುಕಿದರೆ +ನೃಪ
ನಾಣೆ +ಬರಿದೇಕ್+ಆಳು+ ಕುದುರೆಯ
ಗೋಣನವರಿಗೆ+ ಮಾರುವಿರಿ +ಕೌರವನ +ಥಟ್ಟಿನಲಿ
ದ್ರೋಣನಲ್ಲಾ +ರಕ್ಷಕನು +ರಣ
ಹೂಣಿಗರು +ನಿಲಿ +ಭೀಮ +ಪಾರ್ಥರ
ಕಾಣಬಹುದೋ+ ಕರೆಯೆನುತ +ಗರ್ಜಿಸಿದನ್+ಆಚಾರ್ಯ

ಅಚ್ಚರಿ:
(೧) ದ್ರೋಣನ ಹಿರಿಮೆಯನ್ನು ಹೇಳುವ ಪರಿ – ಕೌರವನ ಥಟ್ಟಿನಲಿ ದ್ರೋಣನಲ್ಲಾ ರಕ್ಷಕನು

ಪದ್ಯ ೪೦: ಸೈಂಧವನ ಅಂತ್ಯ ಹೇಗಾಯಿತು?

ಬಲಿದು ಮಂಡಿಯನೂರಿ ಕೆನ್ನೆಗೆ
ಸೆಳೆದು ಮುಷ್ಟಿಯ ಪಾರ್ಥನಹಿತನ
ತಲೆಯನೆಚ್ಚನು ಗೋಣ ಕಡಿದುದು ಪಾಶುಪತ ಬಾಣ
ಹೊಳೆವ ಮಕುಟದ ವದನ ಗಗನಾಂ
ಗಳಕೆ ಚಿಮ್ಮಿತು ರಕುತಧಾರಾ
ವಳಿಯ ರಿಂಗಣವಾಯ್ತು ಮುಂಡದ ತಲೆಯ ಮಧ್ಯದಲಿ (ದ್ರೋಣ ಪರ್ವ, ೧೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅರ್ಜುನನು ಮಂಡಿಯನ್ನೂರಿ ಪಾಶುಪತಾಸ್ತ್ರವನ್ನು ಹೂಡಿ ಕೆನ್ನೆಯವರೆಗೆ ಹೆದೆಯನ್ನೆಳೆದು, ಸೈಂಧವನ ಕುತ್ತಿಗೆಗೆ ಗುರಿಯಿಟ್ಟು ಹೊಡೆಯಲು ಸೈಂಧವನ ಕತ್ತು ಕತ್ತರಿಸಿತು. ಥಳಥಳಿಸುವ ಕಿರೀಟವನ್ನಿಟ್ಟ ತಲೆ ಆಕಾಶಕ್ಕೆ ಹಾರಿ ರಕ್ತಧಾರೆಯು ಮುಂಡ ತಲೆಗಳಿಂದ ಚಿಮ್ಮಿ ಹರಿಯಿತು.

ಅರ್ಥ:
ಬಲಿ: ಗಟ್ಟಿ, ದೃಢ; ಮಂಡಿ: ಮೊಳಕಾಲು, ಜಾನು; ಊರು: ಭದ್ರವಾಗಿ ನಿಲ್ಲಿಸು; ಕೆನ್ನೆ: ಕದಪು; ಸೆಳೆ: ಥಳಿಸು; ಮುಷ್ಟಿ: ಮುಚ್ಚಿದ ಅಂಗೈ, ಮುಟ್ಟಿಗೆ; ಅಹಿತ: ವೈರಿ; ತಲೆ: ಶಿರ; ಎಚ್ಚು: ಬಾಣ ಪ್ರಯೋಗ ಮಾಡು; ಗೋಣು: ಕೊರಳು; ಕಡಿ: ಸೀಳು, ಕತ್ತರಿಸು; ಬಾಣ: ಸರಳು; ಹೊಳೆ: ಪ್ರಕಾಶ; ಮಕುಟ: ಕಿರೀಟ; ವದನ: ಮುಖ; ಗಗನ: ಆಗಸ; ಅಂಗಳ: ಬಯಲು; ಚಿಮ್ಮು: ಹರಡು, ಬೀಳು; ರಕುತ: ನೆತ್ತರು; ಧಾರಾ: ಮಳೆ; ರಿಂಗಣ: ಸುತ್ತುತ್ತಾ ಮಾಡುವ ಚಲನೆ; ಮುಂಡ: ತಲೆಯಿಲ್ಲದ ದೇಹ; ತಲೆ: ಶಿರ; ಮಧ್ಯ: ನಡುವೆ;

ಪದವಿಂಗಡಣೆ:
ಬಲಿದು +ಮಂಡಿಯನೂರಿ +ಕೆನ್ನೆಗೆ
ಸೆಳೆದು +ಮುಷ್ಟಿಯ +ಪಾರ್ಥನ್+ಅಹಿತನ
ತಲೆಯನ್+ಎಚ್ಚನು +ಗೋಣ +ಕಡಿದುದು +ಪಾಶುಪತ +ಬಾಣ
ಹೊಳೆವ +ಮಕುಟದ +ವದನ +ಗಗನಾಂ
ಗಳಕೆ +ಚಿಮ್ಮಿತು +ರಕುತಧಾರಾ
ವಳಿಯ +ರಿಂಗಣವಾಯ್ತು +ಮುಂಡದ +ತಲೆಯ +ಮಧ್ಯದಲಿ

ಅಚ್ಚರಿ:
(೧) ಸೈಂಧವನ ಅಂತ್ಯವನ್ನು ಚಿತ್ರಿಸುವ ಪರಿ – ಹೊಳೆವ ಮಕುಟದ ವದನ ಗಗನಾಂಗಳಕೆ ಚಿಮ್ಮಿತು
(೨) ಮ ಕಾರದ ಪದಗಳು – ಮಂಡಿ, ಮುಷ್ಟಿ, ಮಕುಟ, ಮುಂಡ

ಪದ್ಯ ೨೩: ಭೂರಿಶ್ರವನ ಸಂಬಂಧಿಕರು ಯಾರಿಗೆ ಬೈದರು?

ಆಗದಾಗದು ಕಷ್ಟವಿದು ತೆಗೆ
ಬೇಗವೆನಲರ್ಜುನನ ಕೃಷ್ಣನ
ನಾಗಳವ ಕೈಕೋಳ್ಲದರಿದನು ಗೋಣನಾ ನೃಪನ
ಹೋಗು ಹೋಗೆಲೆ ಪಾಪಿ ಸುಕೃತವ
ನೀಗಿ ಹುಟ್ಟಿದೆ ರಾಜಋಷಿಯವ
ನೇಗಿದನು ನಿನಗೆನುತ ಬೈದುದು ನಿಖಿಳಪರಿವಾರ (ದ್ರೋಣ ಪರ್ವ, ೧೪ ಸಂಧಿ, ೨೩ ಪದ್ಯ)

ತಾತ್ಪರ್ಯ:
ಇದು ಕಷ್ಟದ ಕಾರ್ಯ. ಬೇಡ, ಬೇಡ, ಬಿಡು ಎಂದು ಕೃಷ್ಣಾರ್ಜುನರು ಹೇಳಿದರೂ ಲೆಕ್ಕಿಸದೆ ಭೂರಿಶ್ರವನ ಕೊರಳನ್ನು ಕತ್ತರಿಸಿದನು. ಭೂರಿಶ್ರವನ ಪರಿವಾರದವರು ಸಾತ್ಯಕಿಯು ಎಲೋ ಪಾಪಿ, ಹೋಗು ತೆರಳು, ನೀನು ಪುಣ್ಯವನ್ನು ಕಳೆದುಕೊಂಡು ಹುಟ್ಟಿದವನು. ಭೂರಿಶ್ರವನು ನಿನಗೇನು ಮಾಡಿದನು ಎಂದು ಜರೆದರು.

ಅರ್ಥ:
ಕಷ್ಟ: ಕಠಿಣ; ತೀ: ಹೊರತರು; ಬೇಗ: ಶೀಘ್ರ; ಅರಿ: ಸೀಳು; ಗೋಣು: ಕುತ್ತಿಗೆ; ನೃಪ: ರಾಜ; ಹೋಗು: ತೆರಳು; ಪಾಪಿ: ದುಷ್ಟ; ಸುಕೃತ: ಒಳ್ಳೆಯ ಕೆಲಸ; ನೀಗು: ನಿವಾರಿಸಿಕೊಳ್ಳು; ಹುಟ್ಟು: ಜನಿಸು; ರಾಜಋಷಿ: ರಾಜ ಹಾಗೂ ಋಷಿಯ ವ್ಯಕ್ತಿತ್ವಗಳನ್ನು ಮೈಗೂಡಿಸಿಕೊಂಡವನು; ಏಗು: ಸಾಗಿಸು, ನಿಭಾಯಿಸು; ಬೈದು: ಜರಿ; ನಿಖಿಳ: ಎಲ್ಲಾ; ಪರಿವಾರ: ಬಂಧುಜನ;

ಪದವಿಂಗಡಣೆ:
ಆಗದ್+ಆಗದು +ಕಷ್ಟವಿದು+ ತೆಗೆ
ಬೇಗವೆನಲ್+ಅರ್ಜುನನ +ಕೃಷ್ಣನನ್
ಆಗಳವ +ಕೈಕೋಳ್ಳದ್+ಅರಿದನು +ಗೋಣನಾ +ನೃಪನ
ಹೋಗು +ಹೋಗ್+ಎಲೆ+ ಪಾಪಿ +ಸುಕೃತವ
ನೀಗಿ +ಹುಟ್ಟಿದೆ +ರಾಜಋಷಿಯವನ್
ಏಗಿದನು +ನಿನಗೆನುತ +ಬೈದುದು +ನಿಖಿಳ+ಪರಿವಾರ

ಅಚ್ಚರಿ:
(೧) ಭೂರಿಶ್ರವನನ್ನು ಸಂಬಂಧಿಕರು ಕರೆದ ಪರಿ – ರಾಜಋಷಿ
(೨) ಆಗದಾಗದು, ಹೋಗು ಹೋಗು – ಜೋಡಿ ಪದಗಳ ಬಳಕೆ

ಪದ್ಯ ೧೮: ಕರ್ಣನು ಹೇಗೆ ಯುದ್ಧ ಮಾಡುವೆನೆಂದು ಹೇಳಿದನು?

ಕಾದುವೆನು ರಿಪುಭಟರ ಜೀವವ
ಸೇದುವೆನು ಸಮರಂಗ ಭೂಮಿಯ
ನಾದುವೆನು ನೆಣಗೊಬ್ಬಿನಹಿತರ ಗೋಣ ರಕುತದಲಿ
ಹೋದ ದಿವಸಂಗಳಲಿ ಕಾಳೆಗ
ಮಾದುದಂದಿನ ಭೀಷ್ಮರೊಡನೆ ವಿ
ವಾದ ಕಾರಣ ಬೇಡಿಕೊಳಬೇಹುದು ನದೀಸುತನ (ದ್ರೋಣ ಪರ್ವ, ೧ ಸಂಧಿ, ೧೮ ಪದ್ಯ)

ತಾತ್ಪರ್ಯ:
ನಾನು ಯುದ್ಧಮಾಡಿ ಶತ್ರುವೀರರ ಪ್ರಾಣಗಳನ್ನು ಸೇದುತ್ತೇನೆ, ಕೊಬ್ಬಿದ ಶತ್ರುಗಳ ಕುತ್ತಿಗೆಗಳನ್ನು ಕತ್ತರಿಸಿ, ರಕ್ತದಿಂದ ರಣಭೂಮಿಯನ್ನು ತೋಯಿಸುತ್ತೇನೆ, ಭೀಷ್ಮರೊಡನೆ ಆದ ವಿವಾದದಿಂದ ಇಷ್ಟುದಿನ ನಾನು ಯುದ್ಧಮಾಡುವುದು ತಪ್ಪಿತು, ಈಗ ಹೋಗಿ ಭೀಷ್ಮರನ್ನು ಬೇಡಿಕೊಳ್ಳುತ್ತೇನೆ ಎಂದು ಕರ್ಣನು ನುಡಿದನು.

ಅರ್ಥ:
ಕಾದು: ಹೋರಾಡು; ರಿಪು: ವೈರಿ; ಭಟ: ಸೈನಿಕ, ಪರಾಕ್ರಮಿ; ಜೀವ: ಪ್ರಾಣ; ಸೇದು: ಮುದುಡು, ದೋಚು; ಸಮರಂಗ: ಯುದ್ಧಭೂಮಿ; ಭೂಮಿ: ಇಳೆ: ಸಮರಂಗಭೂಮಿ: ಯುದ್ಧಭೂಮಿ; ನಾದು: ಕಲಸು, ನೆನಸು; ನೆಣಗೊಬ್ಬು: ಅಹಂಕಾರ; ಅಹಿತ: ವೈರಿ; ಗೋಣು: ಕುತ್ತಿಗೆ; ರಕುತ: ನೆತ್ತರು; ಹೋದ: ಕಳೆದ; ದಿವ: ದಿನ; ಕಾಳೆಗ: ಯುದ್ಧ; ಮಾದುದು: ನಿಂತುಹೋಯಿತು; ವಿವಾದ: ಚರ್ಚೆ, ಕಲಹ; ಕಾರಣ: ನಿಮಿತ್ತ, ಹೇತು, ಮೂಲ ಕಾರಣ; ಬೇಡು: ಕೇಳು; ನದೀಸುತ: ಭೀಷ್ಮ;

ಪದವಿಂಗಡಣೆ:
ಕಾದುವೆನು +ರಿಪುಭಟರ +ಜೀವವ
ಸೇದುವೆನು +ಸಮರಂಗ +ಭೂಮಿಯ
ನಾದುವೆನು +ನೆಣಗೊಬ್ಬಿನ್+ಅಹಿತರ+ ಗೋಣ +ರಕುತದಲಿ
ಹೋದ +ದಿವಸಂಗಳಲಿ +ಕಾಳೆಗ
ಮಾದುದ್+ಅಂದಿನ +ಭೀಷ್ಮರೊಡನೆ +ವಿ
ವಾದ +ಕಾರಣ +ಬೇಡಿಕೊಳಬೇಹುದು +ನದೀಸುತನ

ಅಚ್ಚರಿ:
(೧) ಕಾದು, ಸೇದು, ನಾದು, ಮಾದು – ಪ್ರಾಸ ಪದಗಳು
(೨) ರಿಪುಭಟ, ಅಹಿತ; ಸಮರ, ಕಾಳೆಗ – ಸಮಾನಾರ್ಥ ಪದಗಳು

ಪದ್ಯ ೬೪: ಮಾಳವದ ರಾವುತರ ಪರಾಕ್ರಮವು ಹೇಗಿತ್ತು?

ಎಡನ ಹೊಯಿದರು ಬಲದವರನಡ
ಗೆಡಹಿದರು ಸಮ್ಮುಖದ ನೃಪರನು
ಸಿಡಿಲ ಹರೆಯವೊಲೆರಗಿದರು ಸೂಟಿಯಲಿ ಸೈವರಿದು
ಅಡುಗುದುಳಿದರು ಮೋಹರವನೊ
ಗ್ಗೊಡೆದು ಚೂಣಿಯ ಗೋಣ ಬನದಲಿ
ಖಡುಗ ನರ್ತಿಸಲೊದಗಿದರು ಮಾಳವವ ರಾವುತರು (ಭೀಷ್ಮ ಪರ್ವ, ೪ ಸಂಧಿ, ೬೪ ಪದ್ಯ)

ತಾತ್ಪರ್ಯ:
ಮಾಳವದ ರಾವುತರು ತಮ್ಮ ಎಡದಲ್ಲಿದ್ದವರನ್ನು ಹೊಡೆದರು, ಬಲಭಾಗದಲ್ಲಿದ್ದವರನ್ನು ನೆಲಕ್ಕೆ ಕೆಡವಿದರು. ವೇಗವಾಗಿ ಚಲಿಸು ಎದುರು ಬಂದ ಶತ್ರುರಾಜರನ್ನು ಸಿಡಿಲ ತಮ್ಮಟೆಯೋ ಕಹಳೆಯೋ ಎಂಬಂತಹ ಸದ್ದು ಮಾಡುತ್ತಾ ತಿವಿದರು. ರಣರಂಗದ ಹೆಣಗಳನ್ನು ತುಳಿದು, ಶತ್ರುಗಳ ಸಾಲನ್ನೊಡೆದು ಮುಂಚೂಣಿಯ ಸೈನಿಕರ ಕತ್ತುಗಳನ್ನೊಳಗೊಂಡ ಕಾಡನ್ನು ಕುಣಿಯುವ ಕತ್ತಿಗಳಿಂದ ಕತ್ತರಿಸಿದರು.

ಅರ್ಥ:
ಎಡ: ವಾಮಭಾಗ; ಹೊಯಿದು: ಹೊಡೆ; ಬಲ: ಪಾರ್ಶ್ವ; ಕೆಡಹು: ಕೆಳಕ್ಕೆ ಬೀಳಿಸು; ಸಮ್ಮುಖ: ಎದುರು; ನೃಪ: ರಾಜ; ಸಿಡಿಲು: ಅಶನಿ; ಹರೆ: ವ್ಯಾಪಿಸು; ಎರಗು: ಮೇಲೆ ಬೀಳು; ಸೂಟಿ: ವೇಗ, ರಭಸ; ಸೈವರಿ:ನೇರವಾಗಿ ಸಾಗು; ಅಡಗು: ಅವಿತುಕೊಳ್ಳು, ಮರೆಯಾಗು; ಉಳಿ: ಮಿಕ್ಕ; ಮೋಹರ: ಯುದ್ಧ; ಒಗ್ಗು: ಗುಂಪು; ಒಡೆ: ಸೀಳು; ಚೂಣಿ: ಮುಂದಿನ ಸಾಲು; ಗೋಣು: ಕುತ್ತಿಗೆ; ಬನ: ಕಾಡು; ಖಡುಗ: ಕತ್ತಿ; ನರ್ತಿಸು: ನೃತ್ಯಮಾಡು, ಕುಣಿ; ಒದಗು: ಲಭ್ಯ, ದೊರೆತುದು; ರಾವುತ: ಕುದುರೆ ಸವಾರ, ಅಶ್ವಾರೋಹಿ;

ಪದವಿಂಗಡಣೆ:
ಎಡನ +ಹೊಯಿದರು +ಬಲದವರನ್+ಅಡ
ಕೆಡಹಿದರು +ಸಮ್ಮುಖದ +ನೃಪರನು
ಸಿಡಿಲ +ಹರೆಯವೊಲ್+ಎರಗಿದರು +ಸೂಟಿಯಲಿ +ಸೈವರಿದು
ಅಡುಗುದ್+ಉಳಿದರು +ಮೋಹರವನ್
ಒಗ್ಗೊಡೆದು +ಚೂಣಿಯ+ ಗೋಣ +ಬನದಲಿ
ಖಡುಗ +ನರ್ತಿಸಲ್+ಒದಗಿದರು+ ಮಾಳವವ+ ರಾವುತರು

ಅಚ್ಚರಿ:
(೧) ರಾವುತರು ಹೊಡೆದಾಡುವ ದೃಶ್ಯ – ಗೋಣ ಬನದಲಿ ಖಡುಗ ನರ್ತಿಸಲೊದಗಿದರು ಮಾಳವವ ರಾವುತರು

ಪದ್ಯ ೨೦: ಬಾಣದ ರಭಸವು ಹೇಗಿತ್ತು?

ಪ್ರಳಯದಿವಸದ ಪಟುಪವನನೀ
ಹಿಳುಕುಗಾಳಿಯೊಳುದಿಸಿದುದೊ ಮಿಗೆ
ಮೊಳಗಿ ಮೋದುವ ಸಿಡಿಲ್ಗಳಂಬಿನ ಮೊನೆಯೊಳುದಿಸಿದುದೊ
ಜಲಧಿಯಲಿ ಜಂಗುಳಿಸಿ ಕುಧರಕೆ
ಕುಲಿಶಭೀತಿಯ ಬೀರಿ ಕಣೆ ಬಳಿ
ಸಲಿಸಿ ಹರಿದಾಡಿದವು ಸುಭಟರ ಗೋಣ ಗುರಿಮಾಡಿ (ಭೀಷ್ಮ ಪರ್ವ, ೪ ಸಂಧಿ, ೨೦ ಪದ್ಯ)

ತಾತ್ಪರ್ಯ:
ಪ್ರಳಯಕಾಲದ ಬಿಲ್ಲುಗಾರರ ಬಾಣಗಳ ಗಾಳಿಯಿಂದ ಹುಟ್ಟಿತೋ, ಅಬ್ಬರಿಸಿ ಬಡಿಯುವ ಸಿಡಿಲುಗಳು ಈ ಬಾಣಗಳ ತುದಿಯಲ್ಲಿ ಹುಟ್ಟಿದವೋ, ಸೈನ್ಯ ಸಮುದ್ರದಲ್ಲಿ ಈ ಬಾಣಗಳು ಉದಿಸಿ, ಬೆಟ್ಟಗಳಿಗೆ ಭೀತಿಯನ್ನು ತೋರಿದವೋ, ಈ ಬಾಣಗಳು ವೀರರ ಕುತ್ತಿಗೆಗಳಿಗೆ ಅಪ್ಪಳಿಸಿದವು.

ಅರ್ಥ:
ಪ್ರಳಯ: ಅಂತ್ಯಕಾಲ; ದಿವಸ: ದಿನ; ಪಟು: ಸಮರ್ಥ; ಪವನ: ವಾಯು; ಹಿಳುಕು: ಬಾಣದ ಹಿಂಭಾಗ; ಗಾಳಿ: ವಾಯು; ಉದಿಸು: ಹುಟ್ಟು; ಮಿಗೆ: ಹೆಚ್ಚು; ಮೊಳಗು: ಧ್ವನಿ, ಸದ್ದು ; ಮೋದು: ಪೆಟ್ಟು, ಹೊಡೆತ; ಸಿಡಿಲು: ಚಿಮ್ಮು, ಸಿಡಿ, ಗರ್ಜಿಸು; ಅಂಬು: ಬಾಣ; ಮೊನೆ: ತುದಿ; ಜಲಧಿ: ಸಾಗರ; ಜಂಗುಳಿ:ಸಮೂಹ; ಕುಧರ:ಬೆಟ್ಟ, ಪರ್ವತ; ಕುಲಿಶ: ವಜ್ರಾಯುಧ, ಬೆಟ್ಟ; ಭೀತಿ: ಭಯ; ಬೀರು: ಒಗೆ, ಎಸೆ, ತೂರು; ಕಣೆ: ಬಾಣ; ಬಳಿ: ಹತ್ತಿರ; ಸಲಿಸು: ದೊರಕಿಸಿ ಕೊಡು; ಹರಿದಾಡು: ಚಲಿಸು; ಸುಭಟ: ಪರಾಕ್ರಮಿ; ಗೋಣು: ಕುತ್ತಿಗೆ; ಗುರಿ: ಲಕ್ಷ್ಯ;

ಪದವಿಂಗಡಣೆ:
ಪ್ರಳಯ+ದಿವಸದ +ಪಟು+ಪವನನ್+ಈ+
ಹಿಳುಕು+ಗಾಳಿಯೊಳ್+ಉದಿಸಿದುದೊ +ಮಿಗೆ
ಮೊಳಗಿ +ಮೋದುವ +ಸಿಡಿಲ್ಗಳ್+ಅಂಬಿನ+ ಮೊನೆಯೊಳ್+ಉದಿಸಿದುದೊ
ಜಲಧಿಯಲಿ +ಜಂಗುಳಿಸಿ+ ಕುಧರಕೆ
ಕುಲಿಶ+ಭೀತಿಯ +ಬೀರಿ +ಕಣೆ +ಬಳಿ
ಸಲಿಸಿ+ ಹರಿದಾಡಿದವು +ಸುಭಟರ +ಗೋಣ +ಗುರಿಮಾಡಿ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಪ್ರಳಯದಿವಸದ ಪಟುಪವನನೀ ಹಿಳುಕುಗಾಳಿಯೊಳುದಿಸಿದುದೊ ಮಿಗೆ
ಮೊಳಗಿ ಮೋದುವ ಸಿಡಿಲ್ಗಳಂಬಿನ ಮೊನೆಯೊಳುದಿಸಿದುದೊ

ಪದ್ಯ ೪೭: ಗಜಸಿಂಗನನ್ನು ಭೀಮನು ಹೇಗೆ ಸೋಲಿಸಿದನು?

ಎದ್ದನಾ ಗಜಸಿಂಗ ಬಾಣಸಿ
ದೊದ್ದೆಗೂಳಿನ ಮೈಸಿರಿಯ ಬಲು
ಬಿದ್ದನಿಕ್ಕುವೆನೆನುತ ಪವಮಾನಜನ ಕಿಬ್ಬದಿಯ
ಗುದ್ದಿದರೆ ಕಲಿ ಭೀಮನದಕು
ಬ್ಬೆದ್ದು ಗೋಣನು ತಿರುಹಿ ಬಸುರೊಳ
ಗದ್ದಯಿಸಿಯರೆಯರೆದು ಕಾಲಲಿ ತಿಕ್ಕಿದನು ಭೀಮ (ವಿರಾಟ ಪರ್ವ, ೪ ಸಂಧಿ, ೪೭ ಪದ್ಯ)

ತಾತ್ಪರ್ಯ:
ಎಲೋ ಅಡಿಗೆಯವನೇ, ಬಾಣಸಿಗರ ಗುಂಪಿನಲ್ಲಿ ಹೇರಳವಾಗಿ ತಿಂದ ಮೈಯಲ್ಲಿ ರಂಧ್ರವನ್ನು ಮಾಡುತ್ತೇನೆ ಎನ್ನುತ್ತಾ ಗಜಸಿಂಗನು ಎದ್ದು ಭೀಮನ ಕೆಳಪಕ್ಕೆಗೆ ಗುದ್ದಿದನು. ಭೀಮನು ಸಂತೋಷದಿಂದ ಗಜಸಿಂಗನ ಕುತ್ತಿಗೆಯನ್ನು ಮುರಿದು ಹೊಟ್ಟೆಯಲ್ಲಿಟ್ಟು, ಕಾಲಲ್ಲಿ ಅವನ ದೇಹವನ್ನು ತಿಕ್ಕಿ ಅರೆದನು.

ಅರ್ಥ:
ಎದ್ದು: ಮೇಲೇಳು; ಬಾಣಸಿ: ಅಡಿಗೆಯವ; ಒದ್ದು: ಕಾಲಲ್ಲಿ ಒದೆ; ಕೂಳು: ಊಟ; ಮೈಸಿರಿ: ದೇಹ ಸೌಂದರ್ಯ; ಬಲು: ಶಕ್ತಿ; ಬಿದ್ದು: ಬೀಳು; ಇಕ್ಕು: ಇರಿಸು, ಇಡು; ಪವಮಾನಜ: ವಾಯುಪುತ್ರ (ಭೀಮ); ಕಿಬ್ಬದಿ: ಪಕ್ಕ; ಗುದ್ದು: ಮುಷ್ಟಿಯಿಂದ ಹೊಡೆಯುವಿಕೆ; ಕಲಿ: ಶೂರ; ಉಬ್ಬು: ಗರ್ವಿಸು, ಹಿಗ್ಗು;ಗೋಣು: ಕಂಠ, ಕುತ್ತಿಗೆ; ತಿರುಹು: ತಿರುಗಿಸು; ಬಸುರು: ಹೊಟ್ಟೆ; ಅದ್ದು: ಮುಳುಗಿಸು; ಅರೆ: ನುಣ್ಣಗೆ ಮಾಡು; ಕಾಲು: ಪಾದ; ತಿಕ್ಕು: ಉಜ್ಜು, ಒರಸು;

ಪದವಿಂಗಡಣೆ:
ಎದ್ದನಾ +ಗಜಸಿಂಗ +ಬಾಣಸಿದ್
ಒದ್ದೆ+ಕೂಳಿನ+ ಮೈಸಿರಿಯ+ ಬಲು
ಬಿದ್ದನ್+ಇಕ್ಕುವೆನ್+ಎನುತ +ಪವಮಾನಜನ +ಕಿಬ್ಬದಿಯ
ಗುದ್ದಿದರೆ +ಕಲಿ +ಭೀಮನ್+ಅದಕ್
ಉಬ್ಬೆದ್ದು+ ಗೋಣನು +ತಿರುಹಿ +ಬಸುರೊಳಗ್
ಅದ್ದಯಿಸಿ+ಅರೆ+ಅರೆದು +ಕಾಲಲಿ +ತಿಕ್ಕಿದನು +ಭೀಮ

ಅಚ್ಚರಿ:
(೧) ಭೀಮನ ಪರಾಕ್ರಮ – ಕಲಿ ಭೀಮನದಕುಬ್ಬೆದ್ದು ಗೋಣನು ತಿರುಹಿ ಬಸುರೊಳಗದ್ದಯಿಸಿಯರೆಯರೆದು ಕಾಲಲಿ ತಿಕ್ಕಿದನು ಭೀಮ

ಪದ್ಯ ೩೭: ಭೀಮನು ಯಾವ ಪ್ರತಿಜ್ಞೆ ಮಾಡಿದನು?

ಮಾಣಲದು ಕೌರವರ ನೂರ್ವರ
ಗೋಣಬನ ಕಾಳಗದೊಳೆನ್ನಯ
ಕೇಣಿ ತನ್ನಯ ಗದೆಗೆ ದುರಿಯೋಧನನ ತೊಡೆಗಳಿಗೆ
ವಾಣಿಯವು ದುಶ್ಯಾಸನನ ತನಿ
ಶೋಣಿತವ ನಾ ಕುಡಿಯದಿರೆ ನಿ
ನ್ನಾಣೆ ಸೈರಣೆಗಿದುವೆ ಫಲವೆಂದೊದರಿದನು ಭೀಮ (ಸಭಾ ಪರ್ವ, ೧೬ ಸಂಧಿ, ೩೭ ಪದ್ಯ)

ತಾತ್ಪರ್ಯ:
ಅರ್ಜುನನು ಭೀಮನಿಗೆ ಸಮಾಧಾನಿಸಲು ಹೇಳಿದ ನಂತರ, ಭೀಮನು ಅರ್ಜುನನಿಗೆ, ಅರ್ಜುನ ಹಾಗಾದರೆ ನಾನು ಕೌರವರನ್ನು ಈಗ ತಿನ್ನುವುದಿಲ್ಲ. ಯುದ್ಧದಲ್ಲಿ ನೂರ್ವರು ಕೌರವರ ಕತ್ತುಗಳ ಕಾಡನ್ನು ನಾನು ಗುತ್ತಿಗೆ ಹಿಡಿದಿದ್ದೇನೆ. ದುರ್ಯೋಧನನ ತೊಡೆಗಳನ್ನು ನನ್ನ ಗದೆಗೆ ಕೊಂಡುಕೊಂಡಿದ್ದೇನೆ. ದುಶ್ಯಾಸನ ಬಿಸಿ ರಕ್ತವನ್ನು ನಾನು ಕುಡಿಯದಿದ್ದರೆ ನಿನ್ನಾಣೆ, ಇದಕ್ಕೆ ತಪ್ಪುವುದಿಲ್ಲ. ಈಗ ನಾನು ಸೈರಿಸಿದುದಕ್ಕೆ ಇದೇ ನನ್ನ ಫಲ ಎಂದು ಭೀಮನು ಪ್ರಮಾಣ ಮಾಡಿ ಅರ್ಜುನನಿಗೆ ಉತ್ತರಿಸಿದನು.

ಅರ್ಥ:
ಮಾಣು: ನಿಲ್ಲಿಸು; ಗೋಣು: ಕುತ್ತಿಗೆ; ಕಾಳಗ: ಯುದ್ಧ; ಕೇಣಿ: ಗುತ್ತಿಗೆ, ಗೇಣಿ; ಗದೆ: ಮುದ್ಗರ; ತೊಡೆ: ಊರು; ವಾಣಿ: ಮಾತು; ತನಿ: ರುಚಿ, ಪಕ್ವವಾದ; ಶೋಣಿತ: ರಕ್ತ; ಕುಡಿ: ಪಾನ ಮಾಡು; ಆಣೆ: ಪ್ರಮಾಣ; ಸೈರಣೆ: ತಾಳ್ಮೆ, ಸಹನೆ; ಫಲ: ಪ್ರಯೋಜನ; ಒದರು: ಹೇಳು;

ಪದವಿಂಗಡಣೆ:
ಮಾಣಲದು+ ಕೌರವರ +ನೂರ್ವರ
ಗೋಣಬನ+ ಕಾಳಗದೊಳ್+ಎನ್ನಯ
ಕೇಣಿ +ತನ್ನಯ +ಗದೆಗೆ +ದುರಿಯೋಧನನ +ತೊಡೆಗಳಿಗೆ
ವಾಣಿಯವು +ದುಶ್ಯಾಸನನ +ತನಿ
ಶೋಣಿತವ +ನಾ +ಕುಡಿಯದಿರೆ+ ನಿ
ನ್ನಾಣೆ +ಸೈರಣೆಗ್+ಇದುವೆ +ಫಲವೆಂದ್+ಒದರಿದನು +ಭೀಮ

ಅಚ್ಚರಿ:
(೧) ಮಾಣ, ಗೋಣ – ಪ್ರಾಸ ಪದ
(೨) ಭೀಮನ ಪ್ರಮಾಣ – ದುಶ್ಯಾಸನನ ತನಿಶೋಣಿತವ ನಾ ಕುಡಿಯದಿರೆ ನಿನ್ನಾಣೆ

ಪದ್ಯ ೫: ಕರ್ಣನು ಏಕೆ ಕೊರಗಿದನು?

ದ್ರೋಣಭೀಷ್ಮರ ನಚ್ಚಿದರೆ ಮುಂ
ಗಾಣಿಕೆಯಲೇ ಮಡಿದರೆನ್ನಯ
ಗೋಣ ಕೊಯ್ದನು ಕೃಷ್ಣ ಮುನ್ನಿನ ಕುಲವನೆಚ್ಚರಿಸಿ
ಪ್ರಾಣ ಪಾಂಡವರೆಂಬ ನುಡಿಯನು
ಜಾಣಿನಲಿ ಹರಿ ಬಲಿದನೊಡೆಯಗೆ
ಕಾಣೆನಾಪ್ತರನೆಂದು ಮನದಲಿ ಮರುಗಿದನು ಕರ್ಣ (ಕರ್ಣ ಪರ್ವ, ೨೭ ಸಂಧಿ, ೫ ಪದ್ಯ)

ತಾತ್ಪರ್ಯ:
ಕರುಣಾರಸವು ಕರ್ಣನ ಮನಸ್ಸನ್ನು ಆವರಿಸಲು ಅವನು ಯೋಚಿಸುತ್ತಾ, ಭೀಷ್ಮ, ದ್ರೋಣರನ್ನು ದುರ್ಯೋಧನನು ನಂಬಿದ್ದ, ಆದರೆ ಅವರು ತೋರಿಕೆಯ ಯುದ್ಧ ಮಾಡಿ ಮಡಿದರು, ನನ್ನ ಕುಲವನ್ನು ಮೊದಲೇ ತಿಳಿಸಿ ಕೃಷ್ಣನು ನನ್ನ ಕೊರಲನ್ನೇ ಕೊಯ್ದು ಹಾಕಿದನು. ಪಾಂಡವರೇ ನನ್ನ ಪ್ರಾಣ ಎಂಬ ಪ್ರತಿಜ್ಞೆಯನ್ನು ಕೃಷ್ಣನು ಜಾಣತನದಿಂದ ಈಡೇರಿಸಿಕೊಂಡನು. ನನ್ನ ಒಡೆಯನಿಗೆ ಆಪ್ತರಾದವರು ಯಾರು ಕಾಣುತ್ತಿಲ್ಲ ಎಂದು ಕರ್ಣನು ಮನಸ್ಸಿನಲ್ಲೇ ಮರುಗಿದನು.

ಅರ್ಥ:
ನಚ್ಚು: ನಂಬಿಕೆ, ವಿಶ್ವಾಸ; ಮುಂಗಾಣಿಕೆ: ತೋರಿಕೆ; ಮಡಿ: ಸಾವು; ಗೋಣ: ಕೊರಳು; ಕೊಯ್ದನು: ಸೀಳು; ಮುನ್ನ: ಮೊದಲೇ; ಕುಲ: ವಂಶ; ಎಚ್ಚರಿಸು: ಸಾವಧಾನ; ಪ್ರಾಣ:ಜೀವ; ನುಡಿ: ಮಾತು; ಜಾಣ: ಬುದ್ಧಿವಂತ; ಬಲಿ: ಗಟ್ಟಿ, ದೃಢ; ಒಡೆಯ: ದೊರೆ; ಕಾಣು: ತೋರು; ಆಪ್ತ: ಹತ್ತಿರದವ; ಮನ: ಮನಸ್ಸು; ಮರುಗು: ಕೊರಗು;

ಪದವಿಂಗಡಣೆ:
ದ್ರೋಣ+ಭೀಷ್ಮರ +ನಚ್ಚಿದರೆ+ ಮುಂ
ಗಾಣಿಕೆಯಲೇ +ಮಡಿದರ್+ಎನ್ನಯ
ಗೋಣ +ಕೊಯ್ದನು +ಕೃಷ್ಣ +ಮುನ್ನಿನ+ ಕುಲವನ್+ಎಚ್ಚರಿಸಿ
ಪ್ರಾಣ+ ಪಾಂಡವರೆಂಬ+ ನುಡಿಯನು
ಜಾಣಿನಲಿ +ಹರಿ +ಬಲಿದನ್+ಒಡೆಯಗೆ
ಕಾಣೆನಾಪ್ತರನೆಂದು ಮನದಲಿ ಮರುಗಿದನು ಕರ್ಣ

ಅಚ್ಚರಿ:
(೧) ಕರ್ಣನ ದುಃಖ – ಒಡೆಯಗೆ ಕಾಣೆನಾಪ್ತರನೆಂದು ಮನದಲಿ ಮರುಗಿದನು ಕರ್ಣ
(೨) ದ್ರೋಣ, ಗೋಣ, ಪ್ರಾಣ – ಪ್ರಾಸ ಪದ