ಪದ್ಯ ೧೬: ದುರ್ಯೋಧನನು ಹೇಗೆ ಕಂಡನು?

ಅರಸ ಕರ್ಣಚ್ಛೇದವೇ ಜಯ
ಸಿರಿಯ ನಾಸಾಚ್ಛೇದವಿನ್ನರ
ವರಿಸದಿರು ಹೊಯ್ದಾಡಿ ಹೊಗಳಿಸು ಬಾಹುವಿಕ್ರಮವ
ಗುರುನದೀಸುತರಳಿದ ಬಳಿಕೀ
ಧರೆಗೆ ನಿನಗಸ್ವಾಮ್ಯ ಕರ್ಣನ
ಮರಣದಲಿ ನೀನರ್ಧದೇಹನು ಭೂಪ ಕೇಳೆಂದ (ಶಲ್ಯ ಪರ್ವ, ೧ ಸಂಧಿ, ೧೬ ಪದ್ಯ)

ತಾತ್ಪರ್ಯ:
ಕೃಪನು, ರಾಜಾ, ಕರ್ಣನ ಮರಣದಿಂದ ನಿನ್ನ ವಿಜಯಲಕ್ಷ್ಮಿಯ ಮೂಗು ಕೊಯ್ದು ಹೋಯಿತು. ಇನ್ನು ಚಿಂತಿಸುವುದೇಕೆ. ನಿಮ್ಮ ಭುಜಬಲ ಪರಾಕ್ರಮವನ್ನು ಡಂಗುರ ಹೊಯಿಸು. ಭೀಷ್ಮ ದ್ರೋನರು ಅಳಿದಾಗ ನಿನ್ನ ರಾಜ್ಯದ ಮೇಲಿನ ಸ್ವಾಮಿತ್ವ ಹೋಗಿ ಬಿಟ್ಟಿತು, ಇನ್ನು ಕರ್ಣನು ಹೋದಮೇಲೆ ನೀನು ಕೇವಲ ಅರ್ಧಶರೀರವುಳ್ಳವನಾಗಿ ತೋರುತ್ತೀಯ ಎಂದು ಕೃಪಾಚಾರ್ಯರು ಹೇಳಿದರು.

ಅರ್ಥ:
ಅರಸ: ರಾಜ; ಚ್ಛೇದ: ಮರಣ; ಜಯ: ಗೆಲುವು; ಸಿರಿ: ಐಶ್ವರ್ಯ; ನಾಸಾ: ಮೂಗು; ಚ್ಛೇದ: ಮುರಿ; ವರಿಸು: ಕೈಹಿಡಿ; ಹೊಯ್ದಾಡು: ಹೋರಾಡು; ಹೊಗಳಿಸು: ಪ್ರಶಂಶಿಸು; ಬಾಹುವಿಕ್ರಮ: ಭುಜಬಲ; ಸುತ: ಮಗ; ಅಳಿ: ಸಾವು; ಬಳಿಕ: ನಂತರ; ಧರೆ: ಭೂಮಿ; ಸ್ವಾಮ್ಯ: ಒಡೆತನ; ಮರಣ: ಸಾವು; ದೇಹ: ಶರೀರ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಅರಸ +ಕರ್ಣಚ್ಛೇದವೇ +ಜಯ
ಸಿರಿಯ +ನಾಸಾಚ್ಛೇದವಿನ್ನರ
ವರಿಸದಿರು +ಹೊಯ್ದಾಡಿ +ಹೊಗಳಿಸು +ಬಾಹುವಿಕ್ರಮವ
ಗುರು+ನದೀಸುತರ್+ಅಳಿದ+ ಬಳಿಕೀ
ಧರೆಗೆ +ನಿನಗಸ್ವಾಮ್ಯ +ಕರ್ಣನ
ಮರಣದಲಿ+ ನೀನ್+ಅರ್ಧದೇಹನು +ಭೂಪ +ಕೇಳೆಂದ

ಅಚ್ಚರಿ:
(೧) ಕರ್ಣಚ್ಛೇದ, ಕರ್ಣನ ಮರಣ – ಪದಗಳ ಬಳಕೆ
(೨) ಅರಸ, ಭೂಪ – ಸಮಾನಾರ್ಥಕ ಪದ

ಪದ್ಯ ೫: ಧೃತರಾಷ್ಟ್ರನು ಯಾವುದರಲ್ಲಿ ಚತುರ ಎಂದು ಸಂಜಯನು ಹೇಳಿದನು?

ಮಲಗಿಸಿದನೊರವೇಳ್ವ ನಯನ
ಸ್ಥಳವ ನೇವರಿಸಿದನು ಶೋಕಾ
ನಲನ ತಾಪಕೆ ತಂಪನೆರೆದನು ನೀತಿಮಯರಸದ
ಅಳಲ ಶ್ರಮಮಾಡಿದೆ ನದೀಸುತ
ನಳಿವಿನಲಿ ಗುರು ಕರ್ಣ ಶಲ್ಯರ
ಕಳಿವಿನಲಿ ಕಟ್ಟಳಲ ಬಹಳಾಭ್ಯಾಸಿ ನೀನೆಂದ (ಶಲ್ಯ ಪರ್ವ, ೧ ಸಂಧಿ, ೫ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನನ್ನು ಮಲಗಿಸಿ ಕಂಬನಿಯನ್ನೊರಸಿ, ನೀತಿ ಬೋಧೆಯಿಂದ ಶೋಕಾಗ್ನಿಯ ತಾಪವನ್ನು ತಂಪುಗೊಳಿಸಿದನು. ಭೀಷ್ಮ, ದ್ರೋಣ, ಕರ್ಣ ಶಲ್ಯರ ಮರಣವನ್ನು ಕೇಳಿ ಕಣ್ಣೀರು ಸುರಿಸುವ ಅಭ್ಯಾಸವನ್ನು ಚೆನ್ನಾಗಿ ಮಾಡಿರುವೆ. ಅಳಲಿನ ಅಭ್ಯಾಸದಲ್ಲಿ ನೀನು ಬಹುಚತುರ ಎಂದನು.

ಅರ್ಥ:
ಮಲಗು: ನಿದ್ರಿಸು; ಒರೆ: ಬಳಿ, ಸವರು; ಏಳು: ಎಚ್ಚರಗೊಳ್ಳು; ನಯನ: ಕಣ್ಣು; ಸ್ಥಳ: ಜಾಗ; ನೇವರಿಸು: ಮೃದುವಾಗಿ ಸವರು; ಶೋಕ: ದುಃಖ; ಅನಲ: ಬೆಂಕಿ; ತಾಪ: ಬಿಸಿ, ಸೆಕೆ; ತಂಪು: ತಣಿವು, ಶೈತ್ಯ; ಎರೆ: ಸುರಿ, ಹೊಯ್ಯು; ನೀತಿ: ಧರ್ಮ, ನ್ಯಾಯ; ರಸ: ಸಾರ; ಅಳಲು: ಶೋಕ; ಶ್ರಮ: ದಣಿವು, ಆಯಾಸ; ನದೀಸುತ: ಭೀಷ್ಮ; ಸುತ: ಮಗ; ಅಳಿವು: ಸಾವು; ಕಳಿವು: ಸಾವು, ನಾಶ; ಕಟ್ಟಳಲು: ಅತೀವ ದುಃಖ; ಬಹಳ: ತುಂಬ; ಅಭ್ಯಾಸ: ವ್ಯಾಸಂಗ;

ಪದವಿಂಗಡಣೆ:
ಮಲಗಿಸಿದನ್+ಒರವೇಳ್ವ+ ನಯನ
ಸ್ಥಳವ +ನೇವರಿಸಿದನು +ಶೋಕಾ
ನಲನ +ತಾಪಕೆ +ತಂಪನ್+ಎರೆದನು +ನೀತಿಮಯ+ರಸದ
ಅಳಲ +ಶ್ರಮಮಾಡಿದೆ+ ನದೀಸುತನ್
ಅಳಿವಿನಲಿ +ಗುರು +ಕರ್ಣ +ಶಲ್ಯರ
ಕಳಿವಿನಲಿ +ಕಟ್ಟಳಲ +ಬಹಳ+ಅಭ್ಯಾಸಿ +ನೀನೆಂದ

ಅಚ್ಚರಿ:
(೧) ಧೃತರಾಷ್ಟ್ರನನ್ನು ಹಂಗಿಸುವ ಪರಿ – ಕಟ್ಟಳಲ ಬಹಳಾಭ್ಯಾಸಿ ನೀನೆಂದ
(೨) ಸಮಾಧಾನ ಪಡಿಸುವ ಪರಿ – ಶೋಕಾನಲನ ತಾಪಕೆ ತಂಪನೆರೆದನು ನೀತಿಮಯರಸದ

ಪದ್ಯ ೩೩: ಕರ್ಣನು ದುರ್ಯೋಧನನಿಗೆ ಏನು ಹೇಳಿದನು?

ಭಾನುಸುತ ಕುಳ್ಳಿರು ನದೀಸುತ
ನೇನನೆಂದನು ತನ್ನ ಚಿತ್ತ
ಗ್ಲಾನಿಯನು ಬಿಸುಟೇನ ನುಡಿದನು ಭಾವಶುದ್ಧಿಯಲಿ
ಏನನೆಂಬೆನು ಜೀಯ ಬಹಳ ಕೃ
ಪಾನಿಧಿಯಲಾ ಭೀಷ್ಮನನುಸಂ
ಧಾನವಿಲ್ಲದೆ ಬೆಸಸಿ ಕಳುಹಿದನೆಂದನಾ ಕರ್ಣ (ದ್ರೋಣ ಪರ್ವ, ೧ ಸಂಧಿ, ೩೩ ಪದ್ಯ)

ತಾತ್ಪರ್ಯ:
ಕರ್ಣನನ್ನು ತನ್ನ ಓಲಗದಲ್ಲಿ ಕಂಡ ದುರ್ಯೋಧನನು, ಕುಳಿತುಕೋ ಕರ್ಣ, ಭೀಷ್ಮನು ತನ್ನ ಚಿಂತೆಯನ್ನು ಮರೆತು ಭಾವಶುದ್ಧಿಯಿಂದ ಏನು ಹೇಳಿದನು ಎಂದು ದುರ್ಯೋಧನನು ಕೇಳಲು, ಕರ್ಣನು, ಒಡೆಯ ಭೀಷ್ಮನು ಕೃಪಾನಿಧಿ, ಏನನ್ನೂ ಕೆದಕದೆ ಯುದ್ಧ ಮಾಡಲಿ ಹೇಳಿ ಕಳುಹಿಸಿದನೆಂದನು.

ಅರ್ಥ:
ಭಾನುಸುತ: ರವಿಯ ಪುತ್ರ (ಕರ್ಣ); ಕುಳ್ಳಿರು: ಆಸೀನನಾಗು; ನದೀಸುತ: ಭೀಷ್ಮ; ಚಿತ್ತ: ಮನಸ್ಸು; ಗ್ಲಾನಿ: ಬಳಲಿಕೆ; ಬಿಸುಟು: ಹೊರಹಾಕು; ನುಡಿ: ಮಾತಾಡು; ಭಾವ: ಚಿತ್ತವೃತ್ತಿ, ಸಂವೇದನೆ; ಶುದ್ಧ: ನಿರ್ಮಲ; ಜೀಯ: ಒಡೆಯ; ಬಹಳ: ತುಂಬ; ಕೃಪ: ಕರುಣೆ; ಕೃಪಾನಿಧಿ: ಕರುಣೆಯ ನಿಧಿ; ಅನುಸಂಧಾನ: ಪರಿಶೀಲನೆ, ವಿಮರ್ಶೆ; ಬೆಸಸು: ಆಜ್ಞಾಪಿಸು, ಹೇಳು; ಕಳುಹು: ತೆರಳು;

ಪದವಿಂಗಡಣೆ:
ಭಾನುಸುತ +ಕುಳ್ಳಿರು +ನದೀಸುತನ್
ಏನನೆಂದನು +ತನ್ನ +ಚಿತ್ತ
ಗ್ಲಾನಿಯನು +ಬಿಸುಟ್+ಏನ +ನುಡಿದನು +ಭಾವ+ಶುದ್ಧಿಯಲಿ
ಏನನೆಂಬೆನು +ಜೀಯ +ಬಹಳ+ ಕೃ
ಪಾನಿಧಿಯಲಾ +ಭೀಷ್ಮನ್+ಅನುಸಂ
ಧಾನವಿಲ್ಲದೆ +ಬೆಸಸಿ +ಕಳುಹಿದನ್+ಎಂದನಾ +ಕರ್ಣ

ಅಚ್ಚರಿ:
(೧) ಭಾನುಸುತ, ನದೀಸುತ – ಪದಗಳ ಬಳಕೆ, ೧ ಸಾಲು
(೨) ಭೀಷ್ಮರನ್ನು ಹೊಗಳಿದ ಪರಿ – ಬಹಳ ಕೃಪಾನಿಧಿಯಲಾ ಭೀಷ್ಮ

ಪದ್ಯ ೩೨: ಕರ್ಣನು ಭೀಷ್ಮರನ್ನು ಹೇಗೆ ಬೀಳ್ಕೊಟ್ಟನು?

ಭಾನುಸನ್ನಿಭ ಮರಳು ಭೂಪನ
ಹಾನಿ ವೃದ್ಧಿಗಳೆಲ್ಲ ನಿನ್ನದು
ನೀನು ಪಂಥದ ಜಾಣನಲ್ಲಾ ವಿಜಯನಾಗೆನಲು
ಆ ನದೀಸುತನಡಿಗೆರಗಿ ರವಿ
ಸೂನು ಕಳುಹಿಸಿ ಕೊಂಡು ಬಹಳ ಮ
ನೋನುರಾಗದಲೈದಿದನು ಕುರುರಾಯನೋಲಗವ (ದ್ರೋಣ ಪರ್ವ, ೧ ಸಂಧಿ, ೩೨ ಪದ್ಯ)

ತಾತ್ಪರ್ಯ:
ಕರ್ಣನ ಮಾತನ್ನು ಕೇಳಿ ಭೀಷ್ಮನು, ಎಲೈ ಸೂರ್ಯಸಮಾನನೇ, ನೀನು ಹಿಂದಿರುಗು, ಕೌರವನ ಹಾನಿ ಅಭಿವೃದ್ಧಿಗಳು ನಿನಗೆ ಸೇರಿವೆ, ನೀನು ಪಂಥದಲ್ಲಿ ಬುದ್ಧಿವಂತನಲ್ಲವೇ, ವಿಜಯಶಾಲಿಯಾಗು ಹೋಗು ಎನ್ನಲು ಕರ್ಣನು ಭೀಷ್ಮನ ಪಾದಗಳಿಗೆ ನಮಸ್ಕರಿಸಿ ಅವನನ್ನು ಬೀಳ್ಕೊಂಡು ಕೌರವನ ದರ್ಬಾರಿಗೆ ಬಂದನು.

ಅರ್ಥ:
ಭಾನು: ಸೂರ್ಯ; ಸನ್ನಿಭ: ಸಮಾನನಾದವನು, ಸದೃಶನಾದವನು; ಮರಳು: ಹಿಂದಿರುಗು; ಭೂಪ: ರಾಜ; ಹಾನಿ: ನಾಶ; ವೃದ್ಧಿ: ಹೆಚ್ಚಳ; ಪಂಥ: ಛಲ, ಸ್ಪರ್ಧೆ; ಜಾಣ: ಬುದ್ಧಿವಂತ; ವಿಜಯ: ಗೆಲುವು, ಜಯ; ನದೀಸುತ: ಭೀಷ್ಮ; ಸುತ: ಮಗ; ಅಡಿ: ಪಾದ; ಎರಗು: ನಮಸ್ಕರಿಸು; ರವಿ: ಭಾನು; ಸೂನು: ಮಗ; ಕಳುಹಿಸು: ಬೀಳ್ಕೊಡು; ಬಹಳ: ತುಂಬ; ಮನ: ಮನಸ್ಸು; ಅನುರಾಗ: ಪ್ರೀತಿ; ಐದು: ಬಂದುಸೇರು; ಓಲಗ: ದರ್ಬಾರು; ರಾಯ: ರಾಜ;

ಪದವಿಂಗಡಣೆ:
ಭಾನು+ಸನ್ನಿಭ+ ಮರಳು +ಭೂಪನ
ಹಾನಿ +ವೃದ್ಧಿಗಳೆಲ್ಲ +ನಿನ್ನದು
ನೀನು +ಪಂಥದ +ಜಾಣನಲ್ಲಾ +ವಿಜಯನಾಗ್+ಎನಲು
ಆ +ನದೀಸುತನ್+ಅಡಿಗ್+ಎರಗಿ +ರವಿ
ಸೂನು +ಕಳುಹಿಸಿ +ಕೊಂಡು +ಬಹಳ+ ಮ
ನೋನುರಾಗದಲ್+ಐದಿದನು +ಕುರುರಾಯನ್+ಓಲಗವ

ಅಚ್ಚರಿ:
(೧) ಭಾನು, ರವಿ; ಸುತ, ಸೂನು; ಭೂಪ, ರಾಯ – ಸಮಾನಾರ್ಥಕ ಪದ

ಪದ್ಯ ೧೮: ಕರ್ಣನು ಹೇಗೆ ಯುದ್ಧ ಮಾಡುವೆನೆಂದು ಹೇಳಿದನು?

ಕಾದುವೆನು ರಿಪುಭಟರ ಜೀವವ
ಸೇದುವೆನು ಸಮರಂಗ ಭೂಮಿಯ
ನಾದುವೆನು ನೆಣಗೊಬ್ಬಿನಹಿತರ ಗೋಣ ರಕುತದಲಿ
ಹೋದ ದಿವಸಂಗಳಲಿ ಕಾಳೆಗ
ಮಾದುದಂದಿನ ಭೀಷ್ಮರೊಡನೆ ವಿ
ವಾದ ಕಾರಣ ಬೇಡಿಕೊಳಬೇಹುದು ನದೀಸುತನ (ದ್ರೋಣ ಪರ್ವ, ೧ ಸಂಧಿ, ೧೮ ಪದ್ಯ)

ತಾತ್ಪರ್ಯ:
ನಾನು ಯುದ್ಧಮಾಡಿ ಶತ್ರುವೀರರ ಪ್ರಾಣಗಳನ್ನು ಸೇದುತ್ತೇನೆ, ಕೊಬ್ಬಿದ ಶತ್ರುಗಳ ಕುತ್ತಿಗೆಗಳನ್ನು ಕತ್ತರಿಸಿ, ರಕ್ತದಿಂದ ರಣಭೂಮಿಯನ್ನು ತೋಯಿಸುತ್ತೇನೆ, ಭೀಷ್ಮರೊಡನೆ ಆದ ವಿವಾದದಿಂದ ಇಷ್ಟುದಿನ ನಾನು ಯುದ್ಧಮಾಡುವುದು ತಪ್ಪಿತು, ಈಗ ಹೋಗಿ ಭೀಷ್ಮರನ್ನು ಬೇಡಿಕೊಳ್ಳುತ್ತೇನೆ ಎಂದು ಕರ್ಣನು ನುಡಿದನು.

ಅರ್ಥ:
ಕಾದು: ಹೋರಾಡು; ರಿಪು: ವೈರಿ; ಭಟ: ಸೈನಿಕ, ಪರಾಕ್ರಮಿ; ಜೀವ: ಪ್ರಾಣ; ಸೇದು: ಮುದುಡು, ದೋಚು; ಸಮರಂಗ: ಯುದ್ಧಭೂಮಿ; ಭೂಮಿ: ಇಳೆ: ಸಮರಂಗಭೂಮಿ: ಯುದ್ಧಭೂಮಿ; ನಾದು: ಕಲಸು, ನೆನಸು; ನೆಣಗೊಬ್ಬು: ಅಹಂಕಾರ; ಅಹಿತ: ವೈರಿ; ಗೋಣು: ಕುತ್ತಿಗೆ; ರಕುತ: ನೆತ್ತರು; ಹೋದ: ಕಳೆದ; ದಿವ: ದಿನ; ಕಾಳೆಗ: ಯುದ್ಧ; ಮಾದುದು: ನಿಂತುಹೋಯಿತು; ವಿವಾದ: ಚರ್ಚೆ, ಕಲಹ; ಕಾರಣ: ನಿಮಿತ್ತ, ಹೇತು, ಮೂಲ ಕಾರಣ; ಬೇಡು: ಕೇಳು; ನದೀಸುತ: ಭೀಷ್ಮ;

ಪದವಿಂಗಡಣೆ:
ಕಾದುವೆನು +ರಿಪುಭಟರ +ಜೀವವ
ಸೇದುವೆನು +ಸಮರಂಗ +ಭೂಮಿಯ
ನಾದುವೆನು +ನೆಣಗೊಬ್ಬಿನ್+ಅಹಿತರ+ ಗೋಣ +ರಕುತದಲಿ
ಹೋದ +ದಿವಸಂಗಳಲಿ +ಕಾಳೆಗ
ಮಾದುದ್+ಅಂದಿನ +ಭೀಷ್ಮರೊಡನೆ +ವಿ
ವಾದ +ಕಾರಣ +ಬೇಡಿಕೊಳಬೇಹುದು +ನದೀಸುತನ

ಅಚ್ಚರಿ:
(೧) ಕಾದು, ಸೇದು, ನಾದು, ಮಾದು – ಪ್ರಾಸ ಪದಗಳು
(೨) ರಿಪುಭಟ, ಅಹಿತ; ಸಮರ, ಕಾಳೆಗ – ಸಮಾನಾರ್ಥ ಪದಗಳು

ಪದ್ಯ ೨೫: ಕುರುಸೇನೆಯು ಏನೆಂದು ಕೂಗಿತು?

ಅದ್ದನೋ ಬಾಣಾಂಬುಧಿಯಲೊಡೆ
ಬಿದ್ದನೋ ವಿತಳದಲಿ ಮೇಣ್ವಿಧಿ
ಕದ್ದನೋ ಕೈವಾರವೇತಕೆ ಕಾಣೆನಿನಸುತನ
ತಿದ್ದಿತಾತನ ದೆಸೆ ನದೀಸುತ
ನಿದ್ದನಾದೊಡೆ ಕೌರವೇಂದ್ರನ
ಹೊದ್ದ ಹೇಳಿಂದೊದರುತಿರ್ದುದು ಕೂಡೆ ಕುರುಸೇನೆ (ವಿರಾಟ ಪರ್ವ, ೯ ಸಂಧಿ, ೨೫ ಪದ್ಯ)

ತಾತ್ಪರ್ಯ:
ಬಾಣಗಳ ಸಮುದ್ರದಲ್ಲಿ ಮುಳುಗಿ ಹೋದನೋ? ಪೆಟ್ಟು ತಿಂದು ಛಿದ್ರ ಛಿದ್ರವಾಗಿ ವಿತಳಕ್ಕೆ ಹೋದನೋ? ಅಥವಾ ವಿಧಿಯು ಅವನನ್ನು ಕದ್ದೊಯ್ದಿತೋ? ಅವನು ಸಮರ್ಥನಾಗಿದ್ದಾನೋ? ಆದರೆ ಅವನು ಕಾಣುತ್ತಿಲ್ಲ. ಅವನ ಜೀವಿತ ಮುಗಿಯಿತು. ಭೀಷ್ಮನೇನಾದರೂ ಇದ್ದರೆ, ಕೌರವನ ಬೆಂಬಲಕ್ಕೆ ಕರೆತನ್ನಿ ಎಂದು ಕುರುಸೈನ್ಯವು ಕೂಗಿಕೊಂಡಿತು.

ಅರ್ಥ:
ಅದ್ದು: ತೋಯು; ಬಾಣ: ಸರಳು; ಅಂಬುಧಿ: ಸಾಗರ; ಒಡೆ: ಕಾಣಿಸಿಕೊಳ್ಳು; ವಿತಳ: ಪಾತಾಳ; ಮೇಣ್: ಅಥವ; ವಿಧಿ: ಬ್ರಹ್ಮ; ಕದ್ದು: ಕಳ್ಳತನ; ಕೈವಾರ: ಕೊಂಡಾಟ, ಹೊಗಳಿಕೆ; ಕಾಣು: ತೋರು; ಇನಸುತ: ರವಿಯಮಗ (ಕರ್ಣ); ತಿದ್ದು: ಸರಿಪಡಿಸು; ದೆಸೆ: ದಿಕ್ಕು; ನದೀಸುತ: ಭೀಷ್ಮ; ಸುತ: ಮಗ; ಹೊದ್ದು: ಪರಿಣಮಿಸು; ಒದರು: ಕೂಗು; ಕೂಡು: ಜೊತೆ;

ಪದವಿಂಗಡಣೆ:
ಅದ್ದನೋ +ಬಾಣಾಂಬುಧಿಯಲ್+ಒಡೆ
ಬಿದ್ದನೋ +ವಿತಳದಲಿ+ ಮೇಣ್+ ವಿಧಿ
ಕದ್ದನೋ +ಕೈವಾರವ್+ಏತಕೆ +ಕಾಣೆನ್+ಇನಸುತನ
ತಿದ್ದಿತ್+ಆತನ +ದೆಸೆ +ನದೀಸುತನ್
ಇದ್ದನಾದೊಡೆ +ಕೌರವೇಂದ್ರನ
ಹೊದ್ದ +ಹೇಳಿಂದ್+ಒದರುತಿರ್ದುದು +ಕೂಡೆ +ಕುರುಸೇನೆ

ಅಚ್ಚರಿ:
(೧) ಅದ್ದನೋ, ಬಿದ್ದನೋ, ಕದ್ದನೋ – ಪ್ರಾಸ ಪದಗಳು

ಪದ್ಯ ೩: ಧರ್ಮರಾಯನು ಕೃಷ್ಣನೊಂದಿಗೆ ಯಾವ ವಿಚಾರದಿಂದ ಮಾತನ್ನು ಪ್ರಾರಂಭಿಸಿದನು?

ದರುಶನವ ನೀಡಿದನು ಕೃಷ್ಣನ
ಚರಣದಲಿ ಮೈಯಿಕ್ಕಿದರು ಮಿ
ಕ್ಕರಸುಗಳು ದ್ರುಪದಾದಿ ನಾಯಕರೆರಗಿದರು ಪದಕೆ
ಪರಮ ಬಾಂಧವರೆಲ್ಲ ಜೀವಂ
ತರೆ ನದೀಸುತ ವಿದುರ ಗುರು ನೃಪ
ಗುರು ತನುಜ ಧೃತರಾಷ್ತ್ರರೆಂದನು ಧರ್ಮನಂದನನು (ಉದ್ಯೋಗ ಪರ್ವ, ೧೨ ಸಂಧಿ, ೩ ಪದ್ಯ)

ತಾತ್ಪರ್ಯ:
ಶ್ರೀ ಕೃಷ್ಣನು ಎಲ್ಲರಿಗೂ ದರ್ಶನವನ್ನಿತ್ತನು. ಪಾಂಡವರು ಮತ್ತುಳಿದ ರಾಜರಾದ ದ್ರುಪದ ಮುಂತಾದವರು ಅವನಿಗೆ ನಮಸ್ಕರಿಸಿದರು ಬಳಿಕ ಧರ್ಮರಾಯನು ಪರಮ ಬಾಂಧವರಾದ ಭೀಷ್ಮ, ವಿದುರ, ದ್ರೋಣ, ದುರ್ಯೋಧನ, ಅಶ್ವತ್ಥಾಮ, ಕುಶಲದಿಂದ ಜೀವಿಸಿರುವರೆ ಎಂದು ಕೇಳುವ ಮೂಲಕ ಮಾತನ್ನು ಪ್ರಾರಂಭಿಸಿದನು.

ಅರ್ಥ:
ದರುಶನ: ನೋಡು; ಚರಣ: ಪಾದ; ಮೈಯಿಕ್ಕು: ನಮಸ್ಕರಿಸು; ಮಿಕ್ಕ: ಉಳಿದ; ಅರಸು: ರಾಜರು; ಆದಿ: ಮುಂತಾದ; ನಾಯಕ: ಒಡೆಯ; ಎರಗು: ನಮಸ್ಕರಿಸು; ಪದ: ಚರಣ; ಪರಮ: ಶ್ರೇಷ್ಠ; ಬಾಂಧವ: ಬಂಧುಜನ; ಜೀವ: ಬದುಕು; ನದೀಸುತ: ಭೀಷ್ಮ; ಸುತ: ಮಗ; ಗುರು: ಆಚಾರ್ಯ; ನೃಪ: ರಾಜ; ತನುಜ: ಮಗ;

ಪದವಿಂಗಡಣೆ:
ದರುಶನವ +ನೀಡಿದನು +ಕೃಷ್ಣನ
ಚರಣದಲಿ +ಮೈಯಿಕ್ಕಿದರು +ಮಿ
ಕ್ಕರಸುಗಳು +ದ್ರುಪದಾದಿ +ನಾಯಕರ್+ಎರಗಿದರು +ಪದಕೆ
ಪರಮ +ಬಾಂಧವರೆಲ್ಲ+ ಜೀವಂ
ತರೆ +ನದೀಸುತ +ವಿದುರ +ಗುರು +ನೃಪ
ಗುರು ತನುಜ +ಧೃತರಾಷ್ತ್ರರೆಂದನು +ಧರ್ಮನಂದನನು

ಅಚ್ಚರಿ:
(೧) ಭೀಷ್ಮ – ನದೀಸುತ, ನೃಪ – ದುರ್ಯೋಧನ, ಗುರುತನುಜ- ಅಶ್ವತ್ಥಾಮ
(೨) ಮೈಯಿಕ್ಕು, ಎರಗು – ನಮಸ್ಕರಿಸಿದರು ಎಂದು ಹೇಳಲು ಬಳಸಿರುವ ಪದ

ಪದ್ಯ ೩೫: ಕೃಷ್ಣನ ಪ್ರಸ್ತಾಪಕ್ಕೆ ವಿದುರನು ಏನು ಹೇಳಿದನು?

ಪರಮ ಪುರುಷನು ಕೃಷ್ಣರಾಯನು
ಕುರುಕುಲದ ಹಿರಿಯನು ನದೀಸುತ
ಪರಮಧನ ಸಮ ಚಾಪವಿದ್ಯನು ದ್ರೋಣನವರಿಂದ
ಧರಣಿಪತಿ ಬಲುಹುಳ್ಳವರು ನಿ
ನ್ನರಮನೆಯಲುಂಟೇ ವಿಚಾರಿಸು
ಮರುಳುತನ ಬೇಡಿವರ ನುಡಿಗಳನೆಂದನಾ ವಿದುರ (ಉದ್ಯೋಗ ಪರ್ವ, ೯ ಸಂಧಿ, ೩೫ ಪದ್ಯ)

ತಾತ್ಪರ್ಯ:
ಪರಮ ಪುರುಷನಾದ ಕೃಷ್ಣನು, ಹಿರಿಯರಾದ ಭೀಷ್ಮರು, ಬಿಲ್ಲುವಿದ್ಯೆಯಲ್ಲಿ ಪರಮಧನನಾದ ದ್ರೋಣರು ಇವರಿಗಿಂತಲೂ ಹೆಚ್ಚಿನ ಬಲಶಾಲಿಗಳು ನಿನ್ನರಮನೆಯ ಪರಿವಾರದಲ್ಲುಂಟೇ? ಹುಚ್ಚುತನಮಾಡಬೇಡ, ಇವರ ಮಾತುಗಳನ್ನು ಸರಿಯೋ ತಪ್ಪೋ ಎಂದು ಯಾರಲ್ಲಾದರೂ ಕೇಳು ಎಂದು ವಿದುರ ನುಡಿದನು.

ಅರ್ಥ:
ಪರಮ: ಶ್ರೇಷ್ಠ; ಪುರುಷ: ನರ, ಮನುಷ್ಯ; ರಾಯ: ದೊರೆ; ಕುಲ: ವಂಶ; ಹಿರಿ: ದೊಡ್ಡವ; ನದೀಸುತ: ಭೀಷ್ಮ; ಸುತ: ಮಗ; ಧನ: ಐಶ್ವರ್ಯ; ಸಮ: ಸರಿಸಮಾನವಾದುದು; ಚಾಪ: ಬಿಲ್ಲು; ವಿದ್ಯ: ಜ್ಞಾನ; ಧರಣಿಪತಿ: ರಾಜ; ಧರಣಿ: ಭೂಮಿ; ಬಲುಹು: ಶೌರ್ಯ, ಬಲಶಾಲಿ; ಅರಮನೆ: ರಾಜರ ಗೃಹ; ಮರುಳು: ಬುದ್ಧಿಭ್ರಮೆ, ಹುಚ್ಚು; ಬೇಡ: ಸಲ್ಲದು, ಕೂಡದು; ನುಡಿ: ಮಾತು;

ಪದವಿಂಗಡಣೆ:
ಪರಮ +ಪುರುಷನು +ಕೃಷ್ಣ+ರಾಯನು
ಕುರುಕುಲದ +ಹಿರಿಯನು +ನದೀಸುತ
ಪರಮಧನ +ಸಮ +ಚಾಪ+ವಿದ್ಯನು +ದ್ರೋಣನ್+ಅವರಿಂದ
ಧರಣಿಪತಿ+ ಬಲುಹುಳ್ಳವರು +ನಿನ್ನ್
ಅರಮನೆಯಲ್+ಉಂಟೇ +ವಿಚಾರಿಸು
ಮರುಳುತನ+ ಬೇಡ್+ಇವರ +ನುಡಿಗಳನ್+ಎಂದನಾ +ವಿದುರ

ಅಚ್ಚರಿ:
(೧) ಪರಮ – ೧, ೩ ಸಾಲಿನ ಮೊದಲ ಪದ
(೨) ಗುಣವಾಚಕಗಳು – ಕುರುಕುಲದ ಹಿರಿಯ, ಪರಮಧನ ಸಮ ಚಾಪವಿದ್ಯನು, ಪರಮ ಪುರುಷನು

ಪದ್ಯ ೬೧: ಕೃಷ್ಣನ ಪಕ್ಕದಲ್ಲಿ ಯಾರು ಆಸೀನರಾಗಿದ್ದರು?

ಹರಿಯು ಹರಿವಿಷ್ಟರದ ಬಲದಲಿ
ಧರಣಿಪತಿ ಕುಳ್ಳಿರ್ದನಾತನ
ಹಿರಿಯ ಮಗನೆಡವಂಕದಲಿ ಕರ್ಣಾದಿಗಳು ಸಹಿತ
ಹರಿಯ ನೇಮವ ಕೊಂಡು ಸನ್ಮುತಿ
ವರರು ಕುಳ್ಳಿರ್ದರು ನದೀಸುತ
ತರಿಸಿದನು ಪಡಿಗವನು ಹೊಂಗಳಸದ ಸುವಾರಿಗಳ (ಉದ್ಯೋಗ ಪರ್ವ, ೮ ಸಂಧಿ, ೬೧ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ತನ್ನ ಸಿಂಹಾಸನದ ಮೇಲೆ ಕುಳಿತನು. ಅವನ ಬಲಭಾಗದಲ್ಲಿ ಧೃತರಾಷ್ಟ್ರನಿದ್ದನು. ದುರ್ಯೋಧನ ಕರ್ಣ ಮುಂತಾದವರು ಕೃಷ್ಣನ ಎಡಭಾಗದಲ್ಲಿ ಕುಳಿತಿರ್ದರು. ಕೃಷ್ಣನ ಅಪ್ಪಣೆಯಮೇರೆಗೆ ಮುನಿವರ್ಯರು ಆಸೀನರಾದರು. ಭೀಷ್ಮನು ಪಡಿಗವನ್ನು ಮತ್ತು ಶುದ್ಧವಾದ ನೀರನ್ನು ಹೊಂಗಳಸದಲ್ಲಿ ತರಿಸಿದನು.

ಅರ್ಥ:
ಹರಿ: ವಿಷ್ಣು, ಕೃಷ್ಣ; ಹರಿವಿಷ್ಟರ: ಸಿಂಹಾಸನ; ಧರಣಿಪತಿ: ರಾಜ (ಧೃತರಾಷ್ಟ್ರ) ಕುಳ್ಳೀರ್ದನು: ಆಸೀನನಾಗಿದ್ದನು; ಹಿರಿ: ಶ್ರೇಷ್ಠ, ದೊಡ್ಡವ; ಮಗ: ಸುತ; ವಂಕ: ಭಾಗ; ಆದಿ: ಮುಂತಾದ; ಸಹಿತ: ಜೊತೆ; ನೇಮ: ವ್ರತ, ಅಪ್ಪಣೆ; ಕೊಂಡು: ಪಡೆದು; ಸನ್ಮುನಿ: ಮುನಿವರ್ಯರು; ನದೀಸುತ: ಭೀಷ್ಮ; ತರಿಸು: ಬರೆಮಾಡು; ಪಡಿಗ: ತೊಳೆದ ನೀರನ್ನು ಗ್ರಹಿಸುವ ಪಾತ್ರೆ; ಹೊಂಗಳಸ: ಚಿನ್ನದ ಕಳಸ; ಸುವಾರಿ: ಶುದ್ಧವಾದ ನೀರು;

ಪದವಿಂಗಡಣೆ:
ಹರಿಯು +ಹರಿವಿಷ್ಟರದ +ಬಲದಲಿ
ಧರಣಿಪತಿ+ ಕುಳ್ಳಿರ್ದನ್+ಆತನ
ಹಿರಿಯ +ಮಗನ್+ಎಡವಂಕದಲಿ+ ಕರ್ಣಾದಿಗಳು +ಸಹಿತ
ಹರಿಯ+ ನೇಮವ +ಕೊಂಡು +ಸನ್ಮುತಿ
ವರರು+ ಕುಳ್ಳಿರ್ದರು +ನದೀಸುತ
ತರಿಸಿದನು +ಪಡಿಗವನು+ ಹೊಂಗಳಸದ +ಸುವಾರಿಗಳ

ಅಚ್ಚರಿ:
(೧) ಹರಿ – ಪದದ ಬಳಕೆ, ಹರಿ, ಹರಿವಿಷ್ಟ
(೨) ಹರಿ, ಹಿರಿ – ಪ್ರಾಸ ಪದ
(೩) ಮಗ, ಸುತ – ಸಮನಾರ್ಥಕ ಪದ

ಪದ್ಯ ೨೦: ದುರ್ಯೋಧನನು ಧೃತರಾಷ್ಟ್ರನ ಮಾತಿಗೆ ಹೇಗೆ ಉತ್ತರಿಸಿದ?

ಮರುಳುಗಳಲಾ ಬೊಪ್ಪನವರೀ
ಮುರಹರನು ಹರಿಯೆಂದು ಮುನ್ನವೆ
ಅರಿದಿಹೆನು ನೀವಂಜದಿರಿ ನಿಮಗಾಗದವಸಾನ
ಗುರುನದೀಸುತ ಮುಖ್ಯರಿರಲೀ
ಕುರುಕುಲಕೆ ಕೇಡಹುದೆ ಕೊಲುವೊಡೆ
ಸುರಪತಿಯ ಸುತನಳವೆ ಎಂದನು ಕೌರವರರಾಯ (ಉದ್ಯೋಗ ಪರ್ವ, ೫ ಸಂಧಿ, ೨೦ ಪದ್ಯ)

ತಾತ್ಪರ್ಯ:
ದುರ್ಯೋಧನನು, “ಅಪ್ಪಾ ನೀವು ಹೆದರಬೇಡಿ, ಕೃಷ್ಣನು ಶ್ರೀಹರಿಯೆಂದು ನನಗೆ ಮೊದಲೇ ಗೊತ್ತಿದೆ. ನಿಮಗೆ ಸಾವು ಸಂಭವಿಸುವುದಿಲ್ಲವಾದುದರಿಂದ ನೀವು ಹೆದರಬೇಕಾಗಿಲ್ಲ. ಭೀಷ್ಮ ದ್ರೋಣರು ಇರಲು ಈ ಕುರುಕುಲಕ್ಕೆ ಕೇಡು ಬರುವುದಿಲ್ಲ. ಅರ್ಜುನನಿಗೆ ಇವರೆಲ್ಲರನ್ನು ಕೊಲ್ಲಲು ಸಾಧ್ಯವೇ” ಎಂದು ದುರ್ಯೋಧನನು ಹೇಳಿದನು.

ಅರ್ಥ:
ಮರುಳು: ಹುಚ್ಚರು, ಮೂಢರು; ಬೊಪ್ಪ: ತಂದೆ; ಮುನ್ನ: ಮೊದಲು; ಅರಿ: ತಿಳಿ; ಅಂಜದಿರಿ: ಹೆದರದಿರಿ; ಅವಸಾನ: ಸಾವು; ಗುರು: ಆಚಾರ್ಯ; ನದೀಸುತ: ಭೀಷ್ಮ; ಮುಖ್ಯ: ಪ್ರಮುಖರು; ಕುಲ: ವಂಶ; ಕೇಡು: ಆಪತ್ತು, ಕೆಡಕು; ಕೊಲು: ಸಾಯಿಸು; ಸುರಪತಿ: ಇಂದ್ರ; ಸುತ: ಮಗ; ಅಳವು: ಶಕ್ತಿ, ಸಾಮರ್ಥ್ಯ;

ಪದವಿಂಗಡಣೆ:
ಮರುಳುಗಳಲಾ+ ಬೊಪ್ಪನ್+ಅವರೀ
ಮುರಹರನು +ಹರಿಯೆಂದು +ಮುನ್ನವೆ
ಅರಿದಿಹೆನು +ನೀವಂಜದಿರಿ+ ನಿಮಗಾಗದ್+ಅವಸಾನ
ಗುರು+ನದೀಸುತ +ಮುಖ್ಯರಿರಲ್+ಈ
ಕುರುಕುಲಕೆ+ ಕೇಡಹುದೆ +ಕೊಲುವೊಡೆ
ಸುರಪತಿಯ +ಸುತನಳವೆ +ಎಂದನು +ಕೌರವರರಾಯ

ಅಚ್ಚರಿ:
(೧) ಮುರಹರ, ಹರಿ – ಕೃಷ್ಣನ ಇತರ ಹೆಸರು
(೨) ಅರ್ಜುನನನ್ನು ಸುರಪತಿಯ ಸುತ, ಭೀಷ್ಮರನ್ನು ನದೀಸುತ ಎಂದು ಕರೆದಿರುವುದು