ಪದ್ಯ ೨೨: ದ್ರೋಣನಿಗೆ ದ್ರೋಣನೆಂದು ಹೆಸರಿಡಲು ಕಾರಣವೇನು?

ದ್ರೋಣಕಲಶದೊಳಾದ ದೆಸೆಯಿಂ
ದ್ರೋಣನಾದನು ಬಳಿಕ ಮುನಿಯಾ
ದ್ರೋಣಗುಪನಯನಾದಿ ವಿಪ್ರಕ್ರಿಯೆಗಳನು ರಚಿಸಿ
ದ್ರೋಣನೊಡನೋದಿಸಿ ನೃಪಾಲ
ಶ್ರೇಣಿಯನು ಶಸ್ತ್ರಾಸ್ತ್ರ ಕಳೆಯಲಿ
ಜಾಣರನು ಮಾಡಿದನು ಭಾರದ್ವಾಜ ಮುನಿಯಂದು (ಆದಿ ಪರ್ವ, ೬ ಸಂಧಿ, ೨೨ ಪದ್ಯ)

ತಾತ್ಪರ್ಯ:
ನೀರನ್ನು ತುಂಬುವ ಮರದ ಪಾತ್ರೆ (ದ್ರೋಣ)ಯ ಕಲಶದಲ್ಲಿ ಹುಟ್ತಿದುದರಿಂದ ಅವನಿಗೆ ದ್ರೋಣನೆಮ್ಬ ಹೆಸರಾಯಿತು. ದ್ರೋಣನಿಗೆ ಉಪನಯನಾದಿ ಸಂಸ್ಕಾರಗಲನ್ನು ಮಾಡಿಸಿದನು. ಅನೇಕ ರಾಜರಿಗೆ ದ್ರೋಣನೊಡನೆ ಶಸ್ತ್ರಾಸ್ತ್ರವಿದ್ಯಾಭ್ಯಾಸವನ್ನು ಭಾರದ್ವಾಜನು ಮಾಡಿಸಿದನು.

ಅರ್ಥ:
ಕಲಶ: ಕುಂಭ; ದೆಸೆ: ಕಾರಣ; ಬಳಿಕ: ನಂತರ; ಮುನಿ: ಋಷಿ; ಉಪನಯನ: ಮುಂಜಿ; ವಿಪ್ರ: ಬ್ರಾಹ್ಮಣ; ಕ್ರಿಯೆ: ಕಾರ್ಯ; ರಚಿಸು: ನಿರ್ಮಿಸು; ಓದು: ವಿದ್ಯಾಭ್ಯಾಸ; ನೃಪಾಲ: ರಾಜ; ಶ್ರೇಣಿ: ಪಂಕ್ತಿ, ಸಾಲು; ಶಸ್ತ್ರಾಸ್ತ್ರ: ಆಯುಧ; ಕಳೆ: ಕುಶಲವಿದ್ಯೆ; ಜಾಣ: ಬುದ್ಧಿವಂತ;

ಪದವಿಂಗಡಣೆ:
ದ್ರೋಣ+ಕಲಶದೊಳ್+ಆದ +ದೆಸೆಯಿಂ
ದ್ರೋಣನಾದನು +ಬಳಿಕ+ ಮುನಿಯಾ
ದ್ರೋಣಗ್+ಉಪನಯನಾದಿ +ವಿಪ್ರ+ಕ್ರಿಯೆಗಳನು+ ರಚಿಸಿ
ದ್ರೋಣನೊಡನ್+ಓದಿಸಿ +ನೃಪಾಲ
ಶ್ರೇಣಿಯನು+ ಶಸ್ತ್ರಾಸ್ತ್ರ +ಕಳೆಯಲಿ
ಜಾಣರನು +ಮಾಡಿದನು +ಭಾರದ್ವಾಜ+ ಮುನಿಯಂದು

ಅಚ್ಚರಿ:
(೧) ದ್ರೋಣ ಪದದ ಬಳಕೆ – ೧-೪ ಸಾಲಿನ ಮೊದಲ ಪದ
(೨) ದ್ರೋಣ ಪದದ ಬಳಕೆ – ದ್ರೋಣಕಲಶದೊಳಾದ ದೆಸೆಯಿಂದ್ರೋಣನಾದನು

ಪದ್ಯ ೪೮: ಘಟೋತ್ಕಚನ ಯುದ್ಧವು ಹೇಗೆ ರಣರಂಗವನ್ನು ತಲ್ಲಣಗೊಳಿಸಿತು?

ಅಣೆದನಶ್ವತ್ಥಾಮನನು ತ
ಕ್ಷಣದೊಳರಸನ ತಾಗಿ ದ್ರೋಣನ
ಕೆಣಕಿ ದುಶ್ಯಾಸನನ ಮಸೆಗಾಣಿಸಿ ಕೃಪಾದಿಗಳ
ರಣದೊಳೋಡಿಸಿ ಮುರಿದು ಕರ್ಣನ
ಸೆಣಸಿ ನಿಂದನು ಮತ್ತೆ ಸಮರಾಂ
ಗಣದ ಚೌಪಟಮಲ್ಲನಿತ್ತನು ಪಡೆಗೆ ತಲ್ಲಣವ (ದ್ರೋಣ ಪರ್ವ, ೧೬ ಸಂಧಿ, ೪೮ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನನ್ನು ತಿವಿದು, ಅದೇ ಕ್ಷಣದಲ್ಲಿ ಕೌರವನನ್ನು ಹೊಡೆದು, ದ್ರೋಣನನ್ನು ಕೆಣಕಿ, ದುಶ್ಯಾಸನನಿಗೆ ಗಾಯಮಾಡಿ, ಕೃಪಾದಿಗಳನ್ನು ಓಡಿಸಿ ಹಿಂದಿರುಗಿ ಬಂದು ಕರ್ಣನೊಡನೆ ಸಮರಕ್ಕೆ ನಿಂತು ರಣರಂಗವು ತಲ್ಲಣಿಸುವಂತೆ ಮಾಡಿದನು.

ಅರ್ಥ:
ಅಣೆ: ತಿವಿ, ಹೊಡೆ; ತಕ್ಷಣ: ಕೂಡಲೆ; ಅರಸ: ರಾಜ; ತಾಗು: ಹೊಡೆತ, ಪೆಟ್ಟು; ಕೆಣಕು: ರೇಗಿಸು; ಮಸೆ: ಹರಿತವಾದುದು; ರಣ: ಯುದ್ಧ; ಓಡು: ಧಾವಿಸು; ಮುರಿ: ಸೀಳು; ಸೆಣಸು: ಯುದ್ಧಮಾಡು; ನಿಂದು: ನಿಲ್ಲು; ಸಮರಾಂಗಣ: ಯುದ್ಧಭೂಮಿ; ಚೌಪಟಮಲ್ಲ: ಪರಾಕ್ರಮಿ; ಪಡೆ: ಸೈನ್ಯ; ತಲ್ಲಣ: ಅಂಜಿಕೆ, ಭಯ;

ಪದವಿಂಗಡಣೆ:
ಅಣೆದನ್+ಅಶ್ವತ್ಥಾಮನನು +ತ
ಕ್ಷಣದೊಳ್+ಅರಸನ +ತಾಗಿ +ದ್ರೋಣನ
ಕೆಣಕಿ +ದುಶ್ಯಾಸನನ +ಮಸೆಗಾಣಿಸಿ +ಕೃಪಾದಿಗಳ
ರಣದೊಳ್+ಓಡಿಸಿ +ಮುರಿದು +ಕರ್ಣನ
ಸೆಣಸಿ +ನಿಂದನು +ಮತ್ತೆ +ಸಮರಾಂ
ಗಣದ +ಚೌಪಟಮಲ್ಲನ್+ಇತ್ತನು +ಪಡೆಗೆ +ತಲ್ಲಣವ

ಅಚ್ಚರಿ:
(೧) ಘಟೋತ್ಕಚನ ಪರಾಕ್ರಮವನ್ನು ವರ್ಣಿಸುವ ಪರಿ – ಸಮರಾಂಗಣದ ಚೌಪಟಮಲ್ಲ

ಪದ್ಯ ೭೧: ಪಾಂಡವರು ಯಾರನ್ನು ಒಲಿಸಿದರು?

ಹಲಬರಸುರರು ಮಡಿದರಿವನ
ಗ್ಗಳೆಯನಿರುಳಿನ ಬವರದಾಯತ
ತಿಳಿವುದೀತಂಗೆನುತಲಾ ದ್ರೋಣಾದಿ ನಾಯಕರು
ಅಳುಕಿದರು ಬಳಿಕೇನು ಭಕುತಿಯ
ಲೊಲಿಸಿದರಲೈ ಪಾಂಡವರು ಯದು
ಕುಲಲಲಾಮನನಮಳ ಗದುಗಿನ ವೀರನರಯಣನ (ದ್ರೋಣ ಪರ್ವ, ೧೫ ಸಂಧಿ, ೭೧ ಪದ್ಯ)

ತಾತ್ಪರ್ಯ:
ಇವನಿಂದ ಅನೇಕ ದೈತ್ಯರು ಮಡಿದರು, ರಾತ್ರಿಯುದ್ಧದ ಗುಟ್ಟು ಇವನಿಗೆ ಗೊತ್ತಿದೆ ಎಂದು ದ್ರೋಣನೇ ಮೊದಲಾದ ನಾಯಕರು ಹೆದರಿದರು. ಧೃತರಾಷ್ಟ್ರ ಹೇಳಲು ಇನ್ನೇನು ಉಳಿದಿದೆ, ಯದುಕುಲ ಭೂಷಣನೂ, ನಿರ್ಮಲನೂ ಆದ ಗದುಗಿನ ವೀರ ನಾಯಾರಣನನ್ನು ಪಾಂಡವರು ಭಕ್ತಿಯಿಂದ ಒಲಿಸಿದರು.

ಅರ್ಥ:
ಹಲಬರು: ಅನೇಕ; ಅಸುರ: ರಾಕ್ಷಸ; ಮಡಿ: ಸಾವನ್ನು ಹೊಂದು; ಅಗ್ಗಳೆ: ಶ್ರೇಷ್ಠ; ಇರುಳು: ರಾತ್ರಿ; ಬವರ: ಯುದ್ಧ; ಆಯತ: ವಿಶಾಲವಾದ; ನಾಯಕ: ಒಡೆಯ; ಅಳುಕು: ಹೆದರು; ಬಳಿಕ: ನಂತರ; ಭಕುತಿ: ಗುರು ದೈವಗಳಲ್ಲಿ ಶ್ರದ್ಧೆ; ಒಲಿಸು: ಪ್ರೀತಿ; ಕುಲ: ವಂಶ; ಲಲಾಮ: ಶ್ರೇಷ್ಠ, ತಿಲಕ; ಅಮಳ: ನಿರ್ಮಲ;

ಪದವಿಂಗಡಣೆ:
ಹಲಬರ್+ಅಸುರರು +ಮಡಿದರ್+ಇವನ್
ಅಗ್ಗಳೆಯನ್+ಇರುಳಿನ +ಬವರದ್+ಆಯತ
ತಿಳಿವುದ್+ಈತಂಗೆನುತಲ್+ಆ+ ದ್ರೋಣಾದಿ +ನಾಯಕರು
ಅಳುಕಿದರು +ಬಳಿಕೇನು +ಭಕುತಿಯಲ್
ಒಲಿಸಿದರಲೈ +ಪಾಂಡವರು +ಯದು
ಕುಲ+ಲಲಾಮನನ್+ಅಮಳ +ಗದುಗಿನ+ ವೀರನರಯಣನ

ಅಚ್ಚರಿ:
(೧) ಕೃಷ್ಣನನ್ನು ಹೊಗಳಿದ ಪರಿ – ಯದುಕುಲಲಲಾಮನನಮಳ

ಪದ್ಯ ೧೪: ಕುರುಸೇನೆ ಹೇಗೆ ಸಿದ್ಧವಾಯಿತು?

ಉಲಿದು ಸಮಸಪ್ತಕರು ತಮ್ಮಯ
ಕಳನ ಗೆಲಿದರು ಚಾತುರಂಗದ
ದಳದ ತೆರಳಿಕೆ ತೆಕ್ಕೆಮಿಗೆ ಕುರುಸೇನೆ ನಡೆತಂದು
ಕಳನ ವೆಂಠಣಿಸಿದವು ರಾಯನ
ಕೆಲಬಲದ ಸುಯಿಧಾನದಲಿ ರಿಪು
ವಳಯ ಧೂಳೀಪಟನು ಹೊಕ್ಕನು ರಣವನಾ ದ್ರೋಣ (ದ್ರೋಣ ಪರ್ವ, ೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಸಮಸಪ್ತಕರು ಗರ್ಜಿಸಿ ರಣರಂಗದಲ್ಲಿ ಬಂದು ನಿಮ್ತರು. ಕುರುಸೇನೆಯ ಚತುರಂಗಗಳು ಕಳದಲ್ಲಿ ಸೇರಿದವು. ದುರ್ಯೋಧನನ ಕೆಲಬಲದವರ ಕಾವಲಿನಲ್ಲಿ ದ್ರೋಣನು ರಣರಂಗವನ್ನು ಹೊಕ್ಕನು.

ಅರ್ಥ:
ಉಲಿ:ಧ್ವನಿ; ಸಮಸಪ್ತಕ: ಪ್ರತಿಜ್ಞೆ ಮಾಡಿ ಹೋರಾಡುವರು; ಕಳ:ರಣರಂಗ; ಗೆಲಿದು: ಜಯಿಸು; ಚಾತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ದಳ: ಸೈನ್ಯ; ತೆರಳು: ಹಿಂತಿರುಗು; ತೆಕ್ಕೆ: ಗುಂಪು, ಸಮೂಹ; ನಡೆ: ಚಲಿಸು; ವೆಂಠಣಿಸು: ಮುತ್ತಿಗೆ ಹಾಕು; ರಾಯ: ರಾಜ; ಕೆಲಬಲ: ಅಕ್ಕಪಕ್ಕ, ಎಡಬಲ; ಸುಯಿಧಾನ: ರಕ್ಷಣೆ; ರಿಪು: ವೈರಿ; ವಳಯ: ಗುಂಪು; ಧೂಳೀಪಟ: ಧೂಳಿನ ಸಮೂಹ; ಹೊಕ್ಕು: ಸೇರು; ರಣ: ಯುದ್ಧ;

ಪದವಿಂಗಡಣೆ:
ಉಲಿದು +ಸಮಸಪ್ತಕರು+ ತಮ್ಮಯ
ಕಳನ +ಗೆಲಿದರು +ಚಾತುರಂಗದ
ದಳದ +ತೆರಳಿಕೆ +ತೆಕ್ಕೆಮಿಗೆ +ಕುರುಸೇನೆ +ನಡೆತಂದು
ಕಳನ +ವೆಂಠಣಿಸಿದವು +ರಾಯನ
ಕೆಲಬಲದ +ಸುಯಿಧಾನದಲಿ +ರಿಪು
ವಳಯ +ಧೂಳೀಪಟನು +ಹೊಕ್ಕನು +ರಣವನಾ +ದ್ರೋಣ

ಅಚ್ಚರಿ:
(೧) ದ್ರೋಣನನ್ನು ಕರೆದ ಪರಿ – ರಿಪುವಳಯ ಧೂಳೀಪಟನು

ಪದ್ಯ ೫೬: ದ್ರೋಣಾಚಾರ್ಯರ ರಥವು ಹೇಗಿತ್ತು?

ಉದಯ ದರುಣನ ಕರುವ ಹಿಡಿದಂ
ದದಲಿ ವರ್ಣಚ್ಛವಿಯಲೊಪ್ಪುವ
ಕುದುರೆಗಳ ತಳತಳಿಸಿ ಬೆಳಗುವ ಕೊಡನ ಹಳವಿಗೆಯ
ಗದಗದಿಪ ಮಣಿಮಯದ ತೇರಿನ
ಕದನ ಕೋಳಾಹಳನು ಗರುಡಿಯ
ಸದನ ಸರ್ವಜ್ಞನನು ನೋಡೈ ದ್ರೋಣನವನೆಂದ (ವಿರಾಟ ಪರ್ವ, ೭ ಸಂಧಿ, ೫೬ ಪದ್ಯ)

ತಾತ್ಪರ್ಯ:
ಉದಿಸುವ ಅರುಣನ ಕರುಗಳೋ ಎಂಬಂತಹ ಬಣ್ಣದ ಕುದುರೆಗಳನ್ನು ಕಟ್ಟಿದ ರಥದ ಮೇಲೆ ಕಲಶ ಧ್ವಜವಿದೆ, ಮಣಿ ಖಚಿತವಾದ ತೇರು ಕುಣಿಯುತ್ತಿದೆ, ಅದರಲ್ಲಿ ಕುಳಿತವನು ಧನುರ್ವಿದ್ಯಾ ಸರ್ವಜ್ಞನೂ, ಎಲ್ಲಾ ರಾಜರಿಗೂ ಗರುಡಿಯ ಗುರುವಾದ ದ್ರೋಣಾಚಾರ್ಯರನ್ನು ನೋಡು ಎಂದು ದ್ರೋಣರನ್ನು ತೋರಿಸಿದನು.

ಅರ್ಥ:
ಉದಯ: ಹುಟ್ಟುವ; ಅರುಣ: ಕೆಂಪು ಬಣ್ಣ; ಕರು: ಹಸುವಿನ ಮರಿ; ಹಿಡಿ: ಕಟ್ಟು; ಅಂದ: ರೀತಿ, ಚೆಲುವು; ವರ್ಣ: ಬಣ್ಣ; ಚ್ಛವಿ: ಕಾಂತಿ; ಒಪ್ಪು: ಒಪ್ಪಿಗೆ, ಸಮ್ಮತಿ; ಕುದುರೆ: ಅಶ್ವ; ತಳತಳಿಸು: ಹೊಳೆ; ಬೆಳಗು: ಪ್ರಕಾಶಿಸು; ಕೊಡ: ಕುಂಭ; ಹಳವಿಗೆ: ಬಾವುಟ; ಗದಗದಿಪ: ನಡುಗು; ಮಣಿ: ರತ್ನ; ಮಣಿಮಯ: ರತ್ನದಿಂದ ಆವರಿಸಿಕೊಂಡ; ತೇರು: ಬಂಡಿ; ಕದನ: ಯುದ್ಧ; ಕೋಳಾಹಳ: ಗದ್ದಲ; ಗರುಡಿ: ವ್ಯಾಯಾಮ ಶಾಲೆ; ಸದನ: ಮನೆ; ಸರ್ವಜ್ಞ: ಎಲ್ಲಾ ತಿಳಿದವ; ನೋಡು: ವೀಕ್ಷಿಸು;

ಪದವಿಂಗಡಣೆ:
ಉದಯದ್ + ಅರುಣನ +ಕರುವ +ಹಿಡಿದಂ
ದದಲಿ +ವರ್ಣಚ್ಛವಿಯಲ್+ಒಪ್ಪುವ
ಕುದುರೆಗಳ +ತಳತಳಿಸಿ +ಬೆಳಗುವ +ಕೊಡನ +ಹಳವಿಗೆಯ
ಗದಗದಿಪ +ಮಣಿಮಯದ +ತೇರಿನ
ಕದನ +ಕೋಳಾಹಳನು +ಗರುಡಿಯ
ಸದನ +ಸರ್ವಜ್ಞನನು +ನೋಡೈ +ದ್ರೋಣನವನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉದಯ ದರುಣನ ಕರುವ ಹಿಡಿದಂದದಲಿ

ಪದ್ಯ ೫: ಕರ್ಣನು ಏಕೆ ಕೊರಗಿದನು?

ದ್ರೋಣಭೀಷ್ಮರ ನಚ್ಚಿದರೆ ಮುಂ
ಗಾಣಿಕೆಯಲೇ ಮಡಿದರೆನ್ನಯ
ಗೋಣ ಕೊಯ್ದನು ಕೃಷ್ಣ ಮುನ್ನಿನ ಕುಲವನೆಚ್ಚರಿಸಿ
ಪ್ರಾಣ ಪಾಂಡವರೆಂಬ ನುಡಿಯನು
ಜಾಣಿನಲಿ ಹರಿ ಬಲಿದನೊಡೆಯಗೆ
ಕಾಣೆನಾಪ್ತರನೆಂದು ಮನದಲಿ ಮರುಗಿದನು ಕರ್ಣ (ಕರ್ಣ ಪರ್ವ, ೨೭ ಸಂಧಿ, ೫ ಪದ್ಯ)

ತಾತ್ಪರ್ಯ:
ಕರುಣಾರಸವು ಕರ್ಣನ ಮನಸ್ಸನ್ನು ಆವರಿಸಲು ಅವನು ಯೋಚಿಸುತ್ತಾ, ಭೀಷ್ಮ, ದ್ರೋಣರನ್ನು ದುರ್ಯೋಧನನು ನಂಬಿದ್ದ, ಆದರೆ ಅವರು ತೋರಿಕೆಯ ಯುದ್ಧ ಮಾಡಿ ಮಡಿದರು, ನನ್ನ ಕುಲವನ್ನು ಮೊದಲೇ ತಿಳಿಸಿ ಕೃಷ್ಣನು ನನ್ನ ಕೊರಲನ್ನೇ ಕೊಯ್ದು ಹಾಕಿದನು. ಪಾಂಡವರೇ ನನ್ನ ಪ್ರಾಣ ಎಂಬ ಪ್ರತಿಜ್ಞೆಯನ್ನು ಕೃಷ್ಣನು ಜಾಣತನದಿಂದ ಈಡೇರಿಸಿಕೊಂಡನು. ನನ್ನ ಒಡೆಯನಿಗೆ ಆಪ್ತರಾದವರು ಯಾರು ಕಾಣುತ್ತಿಲ್ಲ ಎಂದು ಕರ್ಣನು ಮನಸ್ಸಿನಲ್ಲೇ ಮರುಗಿದನು.

ಅರ್ಥ:
ನಚ್ಚು: ನಂಬಿಕೆ, ವಿಶ್ವಾಸ; ಮುಂಗಾಣಿಕೆ: ತೋರಿಕೆ; ಮಡಿ: ಸಾವು; ಗೋಣ: ಕೊರಳು; ಕೊಯ್ದನು: ಸೀಳು; ಮುನ್ನ: ಮೊದಲೇ; ಕುಲ: ವಂಶ; ಎಚ್ಚರಿಸು: ಸಾವಧಾನ; ಪ್ರಾಣ:ಜೀವ; ನುಡಿ: ಮಾತು; ಜಾಣ: ಬುದ್ಧಿವಂತ; ಬಲಿ: ಗಟ್ಟಿ, ದೃಢ; ಒಡೆಯ: ದೊರೆ; ಕಾಣು: ತೋರು; ಆಪ್ತ: ಹತ್ತಿರದವ; ಮನ: ಮನಸ್ಸು; ಮರುಗು: ಕೊರಗು;

ಪದವಿಂಗಡಣೆ:
ದ್ರೋಣ+ಭೀಷ್ಮರ +ನಚ್ಚಿದರೆ+ ಮುಂ
ಗಾಣಿಕೆಯಲೇ +ಮಡಿದರ್+ಎನ್ನಯ
ಗೋಣ +ಕೊಯ್ದನು +ಕೃಷ್ಣ +ಮುನ್ನಿನ+ ಕುಲವನ್+ಎಚ್ಚರಿಸಿ
ಪ್ರಾಣ+ ಪಾಂಡವರೆಂಬ+ ನುಡಿಯನು
ಜಾಣಿನಲಿ +ಹರಿ +ಬಲಿದನ್+ಒಡೆಯಗೆ
ಕಾಣೆನಾಪ್ತರನೆಂದು ಮನದಲಿ ಮರುಗಿದನು ಕರ್ಣ

ಅಚ್ಚರಿ:
(೧) ಕರ್ಣನ ದುಃಖ – ಒಡೆಯಗೆ ಕಾಣೆನಾಪ್ತರನೆಂದು ಮನದಲಿ ಮರುಗಿದನು ಕರ್ಣ
(೨) ದ್ರೋಣ, ಗೋಣ, ಪ್ರಾಣ – ಪ್ರಾಸ ಪದ

ಪದ್ಯ ೩೧: ಯಾರಿದ್ದಿದ್ದರೆ ಯುಧಿಷ್ಠಿರನಿಗೆ ಈ ವಿಪತ್ತು ಬರದಂತಾಗುತ್ತಿತ್ತು?

ಏನನೆಂಬೆನು ನಮ್ಮ ಪುಣ್ಯದ
ಹಾನಿ ತಲೆದೋರಿದರೆ ಭೀಮನ
ಸೂನುವಿರಲಭಿಮನ್ಯು ವಿರಲೆವಗೀ ವಿಪತ್ತಹುದೆ
ಆ ನದೀಜ ದ್ರೋಣರಲಿ ತಾ
ಹಾನಿಯನು ಮಿಗೆ ಕಂಡೆನೇ ನೆರೆ
ಹೀನನು ಕಂಡಾದಡೆಯು ಬದುಕುವುದು ಲೇಸೆಂದ (ಕರ್ಣ ಪರ್ವ, ೧೬ ಸಂಧಿ, ೩೧ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ತನ್ನ ನೋವನ್ನು ತೋಡಿಕೊಳ್ಳುತ್ತಾ, ನಮ್ಮ ಪುಣ್ಯಕ್ಕೆ ಹಾನಿಯಾದರೆ ಏನೆಂದು ಹೇಳಬೇಕು! ಘಟೋತ್ಕಚ, ಅಭಿಮನ್ಯುಗಳಿದ್ದರೆ ನಮಗೆ ಈ ವಿಪತ್ತು ಬರುತ್ತಿತ್ತೆ? ಭೀಷ್ಮ ದ್ರೋಣರಿದ್ದಾಗಲೂ ನನಗಿಂತಹ ಕಷ್ಟ ಬರಲಿಲ್ಲ, ಇಂತಹ ಹೀನನನ್ನು ಕಂಡಾದರೂ ಬದುಕಬೇಕಾದುದು ಒಳೆತೆ ಎಂದು ತನ್ನ ನೋವನ್ನು ಅರ್ಜುನನ ಮೇಲಿನ ಕೋಪವನ್ನು ಹೊರಹಾಕಿದ.

ಅರ್ಥ:
ಎಂಬೆನು: ಹೇಳಲಿ; ಪುಣ್ಯ: ಸದಾಚಾರ; ಹಾನಿ: ನಾಶ; ತಲೆದೋರು: ಕಾಣಿಸು, ಬಂದು; ಸೂನು: ಮಗ; ವಿಪತ್ತು: ಆಪತ್ತು, ತೊಂದರೆ; ನದೀಜ: ಭೀಷ್ಮ; ಮಿಗೆ: ಅಧಿಕವಾಗಿ, ಮತ್ತು; ಕಂಡು: ನೋಡು; ನೆರೆ: ಸಮೀಪ, ಹತ್ತಿರ; ಹೀನ: ಕೆಟ್ಟ, ದುಷ್ಟ, ತೊರೆದ; ಕಂಡು: ನೋಡು; ಬದುಕು: ಜೀವಿಸು; ಲೇಸು: ಒಳಿತು;

ಪದವಿಂಗಡಣೆ:
ಏನನೆಂಬೆನು+ ನಮ್ಮ +ಪುಣ್ಯದ
ಹಾನಿ +ತಲೆದೋರಿದರೆ+ ಭೀಮನ
ಸೂನುವಿರಲ್+ಅಭಿಮನ್ಯು +ವಿರಲ್+ಎವಗೀ+ ವಿಪತ್ತಹುದೆ
ಆ +ನದೀಜ +ದ್ರೋಣರಲಿ +ತಾ
ಹಾನಿಯನು +ಮಿಗೆ +ಕಂಡೆನೇ+ ನೆರೆ
ಹೀನನು +ಕಂಡಾದಡೆಯು +ಬದುಕುವುದು +ಲೇಸೆಂದ

ಅಚ್ಚರಿ:
(೧) ಧರ್ಮಜನು ತನ್ನ ಕೋಪವನ್ನು ಅರ್ಜುನನ ಮೇಲೆ ಮಾತಿನ ಮೂಲಕ ತೋರಿಸುತ್ತಿರುವುದು

ಪದ್ಯ ೩೫: ಕೃಷ್ಣನ ಪ್ರಸ್ತಾಪಕ್ಕೆ ವಿದುರನು ಏನು ಹೇಳಿದನು?

ಪರಮ ಪುರುಷನು ಕೃಷ್ಣರಾಯನು
ಕುರುಕುಲದ ಹಿರಿಯನು ನದೀಸುತ
ಪರಮಧನ ಸಮ ಚಾಪವಿದ್ಯನು ದ್ರೋಣನವರಿಂದ
ಧರಣಿಪತಿ ಬಲುಹುಳ್ಳವರು ನಿ
ನ್ನರಮನೆಯಲುಂಟೇ ವಿಚಾರಿಸು
ಮರುಳುತನ ಬೇಡಿವರ ನುಡಿಗಳನೆಂದನಾ ವಿದುರ (ಉದ್ಯೋಗ ಪರ್ವ, ೯ ಸಂಧಿ, ೩೫ ಪದ್ಯ)

ತಾತ್ಪರ್ಯ:
ಪರಮ ಪುರುಷನಾದ ಕೃಷ್ಣನು, ಹಿರಿಯರಾದ ಭೀಷ್ಮರು, ಬಿಲ್ಲುವಿದ್ಯೆಯಲ್ಲಿ ಪರಮಧನನಾದ ದ್ರೋಣರು ಇವರಿಗಿಂತಲೂ ಹೆಚ್ಚಿನ ಬಲಶಾಲಿಗಳು ನಿನ್ನರಮನೆಯ ಪರಿವಾರದಲ್ಲುಂಟೇ? ಹುಚ್ಚುತನಮಾಡಬೇಡ, ಇವರ ಮಾತುಗಳನ್ನು ಸರಿಯೋ ತಪ್ಪೋ ಎಂದು ಯಾರಲ್ಲಾದರೂ ಕೇಳು ಎಂದು ವಿದುರ ನುಡಿದನು.

ಅರ್ಥ:
ಪರಮ: ಶ್ರೇಷ್ಠ; ಪುರುಷ: ನರ, ಮನುಷ್ಯ; ರಾಯ: ದೊರೆ; ಕುಲ: ವಂಶ; ಹಿರಿ: ದೊಡ್ಡವ; ನದೀಸುತ: ಭೀಷ್ಮ; ಸುತ: ಮಗ; ಧನ: ಐಶ್ವರ್ಯ; ಸಮ: ಸರಿಸಮಾನವಾದುದು; ಚಾಪ: ಬಿಲ್ಲು; ವಿದ್ಯ: ಜ್ಞಾನ; ಧರಣಿಪತಿ: ರಾಜ; ಧರಣಿ: ಭೂಮಿ; ಬಲುಹು: ಶೌರ್ಯ, ಬಲಶಾಲಿ; ಅರಮನೆ: ರಾಜರ ಗೃಹ; ಮರುಳು: ಬುದ್ಧಿಭ್ರಮೆ, ಹುಚ್ಚು; ಬೇಡ: ಸಲ್ಲದು, ಕೂಡದು; ನುಡಿ: ಮಾತು;

ಪದವಿಂಗಡಣೆ:
ಪರಮ +ಪುರುಷನು +ಕೃಷ್ಣ+ರಾಯನು
ಕುರುಕುಲದ +ಹಿರಿಯನು +ನದೀಸುತ
ಪರಮಧನ +ಸಮ +ಚಾಪ+ವಿದ್ಯನು +ದ್ರೋಣನ್+ಅವರಿಂದ
ಧರಣಿಪತಿ+ ಬಲುಹುಳ್ಳವರು +ನಿನ್ನ್
ಅರಮನೆಯಲ್+ಉಂಟೇ +ವಿಚಾರಿಸು
ಮರುಳುತನ+ ಬೇಡ್+ಇವರ +ನುಡಿಗಳನ್+ಎಂದನಾ +ವಿದುರ

ಅಚ್ಚರಿ:
(೧) ಪರಮ – ೧, ೩ ಸಾಲಿನ ಮೊದಲ ಪದ
(೨) ಗುಣವಾಚಕಗಳು – ಕುರುಕುಲದ ಹಿರಿಯ, ಪರಮಧನ ಸಮ ಚಾಪವಿದ್ಯನು, ಪರಮ ಪುರುಷನು

ಪದ್ಯ ೬೫: ದುರ್ಯೋಧನನು ವಿದುರನನ್ನು ಹೇಗೆ ಹೀಯಾಳಿಸಿದನು?

ಈ ಕೃಪನನೀ ದ್ರೋಣನೀ ಗಂ
ಗಾ ಕುಮಾರನ ಮನೆಯ ಹೊಗದವಿ
ವೇಕಿ ತೊತ್ತಿನ ಮಗನ ಮನೆಯಲಿ ಹಸಿವನೂಕಿದಿರಿ
ಸಾಕಿದಾತನು ನಂದಗೋಪನು
ಕಾಕ ಬಳಸಲು ಸಲ್ಲದೇ ನಿಮ
ಗೇಕೆ ರಾಯರ ನೀತಿಯೆಂದನು ನಗುತ ಕುರುರಾಯ (ಉದ್ಯೋಗ ಪರ್ವ, ೮ ಸಂಧಿ, ೬೫ ಪದ್ಯ)

ತಾತ್ಪರ್ಯ:
ಹಸ್ತಿನಾವತಿಯಲ್ಲಿ ಕೃಪ, ದ್ರೋಣ, ಭೀಷ್ಮರ ಮನೆಗೆ ಹೋಗದೆ ಅವಿವೀಕಿಯಾದ ದಾಸಿಯ ಮಗನಾದ ವಿದುರನ ಮನೆಗೆ ಹೋಗಿ ನಿಮ್ಮ ಹಸಿವನ್ನು ನೀಗಿಸಿಕೊಂಡಿರಿ, ನಿಮ್ಮನ್ನು ಸಾಕಿದವ ನಂದಗೋಪನು, ನಿಮ್ಮ ಕ್ಷುಲ್ಲಕು ಬುದ್ಧಿಯನ್ನು ಬಳಸುವುದು ಸರಿಯೇ, ನಿಮಗೇಕೆ ರಾಜರ ನೀತಿಮಾತುಗಳು ಎಂದು ದುರ್ಯೋಧನನು ಕೃಷ್ಣನಿಗೆ ಹೇಳಿದ.

ಅರ್ಥ:
ಕುಮಾರ: ಮಗ; ಮನೆ: ಆಲಯ; ಹೋಗದೆ: ತೆರಳದೆ; ಅವಿವೇಕಿ: ಯುಕ್ತಾಯುಕ್ತ ಪರಿಜ್ಞಾನವುಳ್ಳದವ; ಹಸಿವು: ಊಟವಿಲ್ಲದ ಸ್ಥಿತಿ; ನೂಕು: ತಳ್ಳು; ಸಾಕು: ಸಲಹು; ಗೋಪ:ಗೋವುಗಳನ್ನು ಕಾಯುವವನು, ದನಗಾಹಿ, ಗೊಲ್ಲ; ಕಾಕ:ಕ್ಷುಲ್ಲಕ, ನೀಚ, ಕಾಗೆಯ ಪೌರುಷ; ಬಳಸು: ಸುತ್ತುವರಿ; ಸಲ್ಲು: ಹೋಗು, ಸೇರು; ರಾಯ: ರಾಜ; ನೀತಿ:ಮಾರ್ಗ ದರ್ಶನ, ಮುನ್ನಡೆಸುವಿಕೆ; ನಗು: ಸಂತೋಷ; ರಾಯ: ರಾಜ; ತೊತ್ತು: ದಾಸಿ, ಸೇವಕಿ;

ಪದವಿಂಗಡಣೆ:
ಈ +ಕೃಪನನ್+ಈ + ದ್ರೋಣನ್+ಈ+ ಗಂ
ಗಾ +ಕುಮಾರನ +ಮನೆಯ +ಹೊಗದ್+ಅವಿ
ವೇಕಿ +ತೊತ್ತಿನ +ಮಗನ +ಮನೆಯಲಿ +ಹಸಿವ+ನೂಕಿದಿರಿ
ಸಾಕಿದ್+ಆತನು+ ನಂದ+ಗೋಪನು
ಕಾಕ+ ಬಳಸಲು+ ಸಲ್ಲದೇ +ನಿಮ
ಗೇಕೆ+ ರಾಯರ+ ನೀತಿಯೆಂದನು +ನಗುತ +ಕುರುರಾಯ

ಅಚ್ಚರಿ:
(೧) ವಿದುರನನ್ನು ಹೀಯಾಳಿಸುವ ಪದ – ಅವಿವೇಕಿ ತೊತ್ತಿನ ಮಗ

ಪದ್ಯ ೫೫: ಕೃಷ್ಣನು ಬಂದೊಡನೆ ಎಲ್ಲರು ಹೇಗೆ ಸ್ವಾಗತಿಸಿದರು?

ಬರಲು ಮುರಹರನಿದಿರುವಂದರು
ಗುರುನದೀಜ ದ್ರೋಣ ಗೌತಮ
ಗುರುಸುರಾದಿ ಸಮಸ್ತ ಭೂಪ ಚಮೂಹ ಸಂದೋಹ
ಚರಣದಲಿ ಚಾಚಿದರು ಭೂಮೀ
ಶ್ವರರು ಮುಕುಟವನಂತತಾರಾ
ಪರಿವೃತೇಂದುವಿನಂತೆ ಮೆರೆದುದು ಹರಿಯ ಪದನಖವು (ಉದ್ಯೋಗ ಪರ್ವ, ೮ ಸಂಧಿ, ೫೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಓಲಗಕೆ ಬರಲು ಅವನನ್ನು ಎದುರು ನೋಡುತ್ತಾ, ಕೃಪಾಚಾರ್ಯರು, ಭೀಷ್ಮ, ದ್ರೋಣ, ಗೌತಮ, ಬೃಹಸ್ಪತಿ, ಸಮಸ್ತ ರಾಜ, ಸೇನಾಧಿಪತಿಗಳ ಗುಂಪು ಆತನ ಚರಣಕ್ಕೆ ಎರಗಿದರು. ಎಲ್ಲರ ಮಣೀಖಚಿತ ಮಕುಟವು ಆಗಸದಲ್ಲಿ ನಕ್ಷತ್ರಗಳೂ ಹೇಗೆ ಚಂದ್ರನನ್ನು ಆವರಿಸುತ್ತದೋ ಹಾಗೆ ಕೃಷ್ಣನ ಚರಣದ ನಖವು ಮೆರೆಯುತ್ತಿತ್ತು.

ಅರ್ಥ:
ಬರಲು: ಆಗಮಿಸಲು; ಮುರಹರ: ಕೃಷ್ಣ; ಇದಿರು: ಎದುರು; ವಂದರು: ಸ್ತುತಿಸುವವ; ಗುರು: ಆಚಾರ್ಯ; ನದೀಜ: ಭೀಷ್ಮ;ಸುರ: ದೇವ; ಆದಿ: ಮುಂತಾದ; ಸಮಸ್ತ: ಎಲ್ಲಾ; ಭೂಪ: ರಾಜ; ಚಮೂಹ: ಸೇನಾಧಿಪತಿ; ಸಂದೋಹ: ಗುಂಪು, ಸಮೂಹ; ಚರಣ: ಪಾದ; ಚಾಚು: ಹರಡು; ಭೂಮೀಶ್ವರ: ರಾಜ; ಮಕುಟ: ಕಿರೀಟ; ತಾರ: ನಕ್ಷತ್ರ; ಪರಿವೃತ: ಆವರಿಸು; ಇಂದು:ಚಂದ್ರ; ಮೆರೆ: ಹೊಳೆ, ಪ್ರಜ್ವಲಿಸು; ಹರಿ: ವಿಷ್ಣು; ಪದ: ಪಾದ; ನಖ: ಉಗುರು; ಗುರುಸುರ: ಬೃಹಸ್ಪತಿ;

ಪದವಿಂಗಡಣೆ:
ಬರಲು+ ಮುರಹರನ್+ಇದಿರು+ವಂದರು
ಗುರು+ನದೀಜ+ ದ್ರೋಣ +ಗೌತಮ
ಗುರುಸುರಾದಿ+ ಸಮಸ್ತ+ ಭೂಪ +ಚಮೂಹ +ಸಂದೋಹ
ಚರಣದಲಿ +ಚಾಚಿದರು +ಭೂಮೀ
ಶ್ವರರು+ ಮಕುಟವ್+ಅನಂತ+ತಾರಾ
ಪರಿವೃತ+ಇಂದುವಿನಂತೆ+ ಮೆರೆದುದು +ಹರಿಯ +ಪದನಖವು

ಅಚ್ಚರಿ:
(೧) ಗುರು ಪದದ ಬಳಕೆ – ೨, ೩ ಸಾಲಿನ ಮೊದಲ ಪದ
(೨) ನಮಸ್ಕರಿಸಿದರು ಎಂದು ಹೇಳಲು – ಚರಣದಲಿ ಚಾಚಿದರು ಭೂಮೀಶ್ವರರು ಮಕುಟವ
(೩) ಉಪಮಾನದ ಪ್ರಯೋಗ – ಅನಂತ ತಾರಾ ಪರಿವೃತೇಂದುವಿನಂತೆ ಮೆರೆದುದು