ಪದ್ಯ ೫೬: ದ್ರೋಣಾಚಾರ್ಯರ ರಥವು ಹೇಗಿತ್ತು?

ಉದಯ ದರುಣನ ಕರುವ ಹಿಡಿದಂ
ದದಲಿ ವರ್ಣಚ್ಛವಿಯಲೊಪ್ಪುವ
ಕುದುರೆಗಳ ತಳತಳಿಸಿ ಬೆಳಗುವ ಕೊಡನ ಹಳವಿಗೆಯ
ಗದಗದಿಪ ಮಣಿಮಯದ ತೇರಿನ
ಕದನ ಕೋಳಾಹಳನು ಗರುಡಿಯ
ಸದನ ಸರ್ವಜ್ಞನನು ನೋಡೈ ದ್ರೋಣನವನೆಂದ (ವಿರಾಟ ಪರ್ವ, ೭ ಸಂಧಿ, ೫೬ ಪದ್ಯ)

ತಾತ್ಪರ್ಯ:
ಉದಿಸುವ ಅರುಣನ ಕರುಗಳೋ ಎಂಬಂತಹ ಬಣ್ಣದ ಕುದುರೆಗಳನ್ನು ಕಟ್ಟಿದ ರಥದ ಮೇಲೆ ಕಲಶ ಧ್ವಜವಿದೆ, ಮಣಿ ಖಚಿತವಾದ ತೇರು ಕುಣಿಯುತ್ತಿದೆ, ಅದರಲ್ಲಿ ಕುಳಿತವನು ಧನುರ್ವಿದ್ಯಾ ಸರ್ವಜ್ಞನೂ, ಎಲ್ಲಾ ರಾಜರಿಗೂ ಗರುಡಿಯ ಗುರುವಾದ ದ್ರೋಣಾಚಾರ್ಯರನ್ನು ನೋಡು ಎಂದು ದ್ರೋಣರನ್ನು ತೋರಿಸಿದನು.

ಅರ್ಥ:
ಉದಯ: ಹುಟ್ಟುವ; ಅರುಣ: ಕೆಂಪು ಬಣ್ಣ; ಕರು: ಹಸುವಿನ ಮರಿ; ಹಿಡಿ: ಕಟ್ಟು; ಅಂದ: ರೀತಿ, ಚೆಲುವು; ವರ್ಣ: ಬಣ್ಣ; ಚ್ಛವಿ: ಕಾಂತಿ; ಒಪ್ಪು: ಒಪ್ಪಿಗೆ, ಸಮ್ಮತಿ; ಕುದುರೆ: ಅಶ್ವ; ತಳತಳಿಸು: ಹೊಳೆ; ಬೆಳಗು: ಪ್ರಕಾಶಿಸು; ಕೊಡ: ಕುಂಭ; ಹಳವಿಗೆ: ಬಾವುಟ; ಗದಗದಿಪ: ನಡುಗು; ಮಣಿ: ರತ್ನ; ಮಣಿಮಯ: ರತ್ನದಿಂದ ಆವರಿಸಿಕೊಂಡ; ತೇರು: ಬಂಡಿ; ಕದನ: ಯುದ್ಧ; ಕೋಳಾಹಳ: ಗದ್ದಲ; ಗರುಡಿ: ವ್ಯಾಯಾಮ ಶಾಲೆ; ಸದನ: ಮನೆ; ಸರ್ವಜ್ಞ: ಎಲ್ಲಾ ತಿಳಿದವ; ನೋಡು: ವೀಕ್ಷಿಸು;

ಪದವಿಂಗಡಣೆ:
ಉದಯದ್ + ಅರುಣನ +ಕರುವ +ಹಿಡಿದಂ
ದದಲಿ +ವರ್ಣಚ್ಛವಿಯಲ್+ಒಪ್ಪುವ
ಕುದುರೆಗಳ +ತಳತಳಿಸಿ +ಬೆಳಗುವ +ಕೊಡನ +ಹಳವಿಗೆಯ
ಗದಗದಿಪ +ಮಣಿಮಯದ +ತೇರಿನ
ಕದನ +ಕೋಳಾಹಳನು +ಗರುಡಿಯ
ಸದನ +ಸರ್ವಜ್ಞನನು +ನೋಡೈ +ದ್ರೋಣನವನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉದಯ ದರುಣನ ಕರುವ ಹಿಡಿದಂದದಲಿ