ಪದ್ಯ ೭೨: ಕೃಷ್ಣನ ಮಾತನಾಡುವುದನ್ನು ಯಾವುದಕ್ಕೆ ಹೋಲಿಸಿದ್ದಾರೆ ಕುಮಾರವ್ಯಾಸರು?

ಕುಲದವನ ಹೃದಯಾಂಧಕಾರವ
ಕಳಚಲೆಂದು ಹಿಮಾಂಶು ಹರಹಿದ
ನೆಳೆಯಬೆಳುದಿಂಗಳನೆನಲು ಸುರರಿಪುಕುಲಾಂತಕನು
ತೊಳಪ ದಶನಮಯೂಖ ತತಿ ಹೊಳೆ
ಹೊಳೆಯೆ ನುಡಿದನು ತತ್ಸಭಾ ಮಂ
ಡಲ ಮಹಾಂಬುಧಿ ನುಡಿದೆರೆಯ ತನಿಗಡಣವಡಗಿರಲು (ಉದ್ಯೋಗ ಪರ್ವ, ೮ ಸಂಧಿ, ೭೨ ಪದ್ಯ)

ತಾತ್ಪರ್ಯ:
ದುರ್ಯೋಧನನ ಹೃದಯದಲ್ಲಿದ್ದ ಅಂಧಕಾರವನ್ನು ಹೊರದೂಡಲು, ಹೇಗೆ ಚಂದ್ರನು ತನ್ನ ಬೆಳದಿಂಗಳ ಕಾಂತಿಯಿಂದ ರಾತ್ರಿಯ ಅಂಧಕಾರವನ್ನು ದೂಡುವ ಹಾಗೆ, ಕೃಷ್ಣನು ಅಂಧಕಾರವನ್ನು ಹೋಗಲಾಡಿಸಲು ತನ್ನ ದಂತದ ಕಾಂತಿಯಿಂದ ಹೊರಬಂದ ಮಾತುಗಳನ್ನಾಡಿದನು ಆ ಸಭೆಯಲ್ಲಿ ಕೂಡಿದ್ದ ಎಲ್ಲಾ ಮಹಾರಾರಜು ಅವನ ನುಡಿಯನ್ನು ಕೇಳುತ್ತ ಆ ಪ್ರತ್ಯೇಕ ಗುಂಪುಗಳು ಅಡಗಿದವು.

ಅರ್ಥ:
ಕುಲ: ವಂಶ; ಹೃದಯ: ವಕ್ಷ; ಅಂಧಕಾರ: ಕತ್ತಲು; ಕಳಚು: ಹೊರತೆಗೆ; ಹಿಮಾಂಶು:ಚಂದ್ರ; ಹರಹು: ಹಬ್ಬುವಿಕೆ, ಪ್ರಸರ; ಎಳೆಯ: ಚಿಕ್ಕದಾದ; ಬೆಳದಿಂಗಳು: ಚಂದ್ರನ ಬೆಳಕು; ಸುರ: ದೇವತೆ; ರಿಪು: ವೈರಿ; ಕುಲಾಂತಕ: ಕುಲವನ್ನು ನಾಶಮಾಡಿದವ; ಸುರರಿಪುಕುಲಾಂತಕ: ಕೃಷ್ಣ; ತೊಳಸು: ಮನಸ್ಸಿನ ಅಲ್ಲೋಲ ಕಲ್ಲೋಲ; ಮಯೂಖ: ಕಾಂತಿ, ಹೊಳಪು; ದಶನ: ಹಲ್ಲು, ದಂತ; ತತಿ: ಸಮೂಹ, ಗುಂಪು; ಹೊಳೆ: ಕಾಂತಿ, ಪ್ರಕಾಶಿಸು; ನುಡಿ: ಮಾತಾಡು; ಸಭಾ: ದರ್ಬಾರು; ಮಂಡಲ: ವರ್ತುಲಾಕಾರ; ಮಹಾ: ದೊಡ್ಡ; ಅಂಬುಧಿ: ಸಾಗರ; ನುಡಿ: ಮಾತು; ತನಿಗಡಣ: ಪ್ರತ್ಯೇಕವಾದ ಗುಂಪು; ಅಡಗು: ಮುಚ್ಚು; ಎರೆ: ಬೇಡು, ಪ್ರಾರ್ಥಿಸು;

ಪದವಿಂಗಡಣೆ:
ಕುಲದವನ+ ಹೃದಯ+ಅಂಧಕಾರವ
ಕಳಚಲೆಂದು+ ಹಿಮಾಂಶು +ಹರಹಿದನ್
ಎಳೆಯ+ಬೆಳುದಿಂಗಳನ್+ಎನಲು +ಸುರರಿಪುಕುಲಾಂತಕನು
ತೊಳಪ +ದಶನ+ಮಯೂಖ +ತತಿ +ಹೊಳೆ
ಹೊಳೆಯೆ +ನುಡಿದನು +ತತ್+ಸಭಾ +ಮಂ
ಡಲ +ಮಹಾಂಬುಧಿ +ನುಡಿದೆರೆಯ ತನಿಗಡಣವಡಗಿರಲು

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಿಮಾಂಶು ಹರಹಿದ ನೆಳೆಯಬೆಳುದಿಂಗಳ
(೨) ಕೃಷ್ಣನು ಮಾತು ಹೇಗೆ ಹೊಳೆಯಿತು – ಸುರರಿಪುಕುಲಾಂತಕನು ತೊಳಪ ದಶನಮಯೂಖ ತತಿ ಹೊಳೆ ಹೊಳೆಯೆ ನುಡಿದನು

ಪದ್ಯ ೭೧: ದುರ್ಯೋಧನನು ಕೃಷ್ಣನಿಗೆ ಏನು ಹೇಳಿದ?

ಸೇರುವನು ಸಕಳಂಕ ಚಂದ್ರನು
ವಾರಿಧಿಗೆ ನೀನಖಿಳ ಗೋಪೀ
ಜಾರ ಜಾರೆಯ ಮಕ್ಕಳಿಗೆ ನೀ ಜೀವ ತಪ್ಪೇನು
ಆರು ತಮ್ಮಂದದ ಮಹಾತ್ಮರ
ಸೇರುವರಲೈ ಪಾಂಡುಪುತ್ರರ
ಕೂರುಮೆಗೆ ನಾನೆನ್ನೆ ನೀ ಬಂದನುವ ಹೇಳೆಂದ (ಉದ್ಯೋಗ ಪರ್ವ, ೮ ಸಂಧಿ, ೭೧ ಪದ್ಯ)

ತಾತ್ಪರ್ಯ:
ದೋಷದಿಂದ ಕೂಡಿದ ಚಂದ್ರನು ಸಹ ಸಮುದ್ರಕೆ ಸೇರುತ್ತಾನೆ, ನೀನಾದರೋ ಎಲ್ಲಾ ಗೋಪಿಕೆಯರ ಪ್ರಿಯಕರ, ಅವರ ಮಕ್ಕಳೆಲ್ಲರ ನೀನೇ ಜೀವ, ಅದರಿಂದೇನು ತಪ್ಪು? ಯಾರು ತಮ್ಮಂತ ಮಹಾತ್ಮರರನ್ನು ಸೇರರು, ಪ್ರೀತಿಪಾತ್ರರಾದ ಪಾಂಡವರು ನಿನ್ನನ್ನು ಸೇರುತ್ತಾರೆ, ನೀನು ಇಲ್ಲಿ ಬಂದ ವಿಷಯವೇನು ಹೇಳು ಎಂದು ದುರ್ಯೋಧನನು ಕೃಷ್ಣನಿಗೆ ಹೇಳಿದ.

ಅರ್ಥ:
ಸೇರು: ತಲುಪು; ಕಳಂಕ:ಗುರುತು, ಕುಂದು; ಸಕಳಂಕ: ದೋಷದಿಂದ ಕೂಡಿದ; ಚಂದ್ರ: ಇಂದು; ವಾರಿಧಿ: ಸಮುದ್ರ; ಅಖಿಳ: ಎಲ್ಲಾ; ಜಾರ: ವ್ಯಭಿಚಾರಿ, ಹಾದರಿಗ; ಜಾರೆ: ಹಾದರಗಿತ್ತಿ, ವ್ಯಭಿಚಾರಿಣಿ; ಮಕ್ಕಳು: ಕುಮಾರರು; ಜೀವ: ಬದುಕು; ತಮ್ಮಂದದ: ಅವರಂತೆ; ಮಹಾತ್ಮ: ಶ್ರೇಷ್ಠ; ಪುತ್ರ: ಮಕ್ಕಳು; ಕೂರು: ಪ್ರೀತಿ, ಮೆಚ್ಚು; ಅನುವು: ರೀತಿ, ಹೊಂದಿಕೆ; ಬಂದ: ಆಗಮಿಸಿದ; ಹೇಳು: ತಿಳಿಸು;

ಪದವಿಂಗಡಣೆ:
ಸೇರುವನು +ಸಕಳಂಕ +ಚಂದ್ರನು
ವಾರಿಧಿಗೆ+ ನೀನ್+ಅಖಿಳ +ಗೋಪೀ
ಜಾರ +ಜಾರೆಯ +ಮಕ್ಕಳಿಗೆ+ ನೀ +ಜೀವ +ತಪ್ಪೇನು
ಆರು +ತಮ್ಮಂದದ +ಮಹಾತ್ಮರ
ಸೇರುವರಲೈ +ಪಾಂಡು+ಪುತ್ರರ
ಕೂರುಮೆಗೆ+ ನಾನೆನ್ನೆ+ ನೀ +ಬಂದ್+ಅನುವ +ಹೇಳೆಂದ

ಅಚ್ಚರಿ:
(೧) ಗೋಪೀಜಾರ ಜಾರೆಯ – ಪದಗಳ ಬಳಕೆ
(೨) ‘ಸ’ಕಾರದ ಜೋಡಿ ಪದ – ಸೇರುವನು ಸಕಳಂಕ
(೩) ಉಪಮಾನ ಪ್ರಯೋಗ – ಸೇರುವನು ಸಕಳಂಕ ಚಂದ್ರನು ವಾರಿಧಿಗೆ
(೪) ಸೇರು – ೧, ೫ ಸಾಲಿನ ಮೊದಲ ಪದ

ಪದ್ಯ ೭೦: ರಾಜನೀತಿ ಏನು ಹೇಳುತ್ತದೆ?

ಹಗೆಯನೊಳಗಿಡಲಾಗದದು ವೈ
ರಿಗಳ ನಿಳಯದಲನ್ನ ಪಾನಾ
ದಿನಗಳನುಣಲಾಗದು ನಿಧಾನಿಸೆ ರಾಜನೀತಿಯಿದು
ಬಗೆಯೆ ನೀ ಪಾಂಡವರಿಗಹಿತನು
ವಿಗಡ ಪಾಂಡವರೆನ್ನ ಜೀವನ
ಹಗೆಯ ನಂಬುವೆನೆಂತು ಹೇಳೈ ಕೌರವರ ರಾಯ (ಉದ್ಯೋಗ ಪರ್ವ, ೮ ಸಂಧಿ, ೭೦ ಪದ್ಯ)

ತಾತ್ಪರ್ಯ:
ವೈರತ್ವವನ್ನು ಒಳಗೇ ಇಡಲಾಗದು ಅದು ಹೊರಗಡೆ ಪ್ರಕಟಗೊಳ್ಳುತ್ತದೆ, ವೈರುಗಳ ಮನೆಯಲ್ಲಿ ಊಟ ಮತ್ತು ಪಾನಿಯಗಳನ್ನು ಸೇವಿಸಬಾರದು ಮಾಡಬಾರದೆಂದು ರಾಜನೀತಿ ತಿಳಿಸುತ್ತದೆ. ನೀನು ಪಾಂಡವರ ವೈರಿಯೆಂದು ತಿಳಿದ ಸಂಗತಿ, ಪರಾಕ್ರಮಿಗಳಾದ ಪಾಂಡವರು ಹೇಗೆ ತಾನೆ ನನ್ನ ಬದುಕಿನ ವೈರತ್ವವನ್ನು ನಂಬುತ್ತಾರೆ ನೀನೆ ಹೇಳೆಂದು ಕೌರವನಿಗೆ ಕೃಷ್ಣ ಕೇಳಿದ.

ಅರ್ಥ:
ಹಗೆ: ವೈರತ್ವ; ಒಳಗೆ: ಆಂತರ್ಯ; ವೈರಿ: ಶತ್ರು; ನಿಳಯ: ಮನೆ; ಅನ್ನ: ಊಟ; ಪಾನ: ಕುಡಿ;ಆದಿ: ಮುಂತಾದ; ಉಣ: ಉಣ್ಣು, ತಿನ್ನು; ನಿಧಾನ:ಸಾವಕಾಶ; ರಾಜನೀತಿ: ರಾಜ್ಯಾಡಳಿತಕ್ಕೆ ಸಂಬಂಧಿಸಿದ ನೀತಿ, ರಾಜಕಾರಣ; ಬಗೆ: ಆಲೋಚನೆ; ಅಹಿತ: ಶತ್ರು; ವಿಗಡ:ಶೌರ್ಯ, ಪರಾಕ್ರಮ; ಜೀವನ: ಬಾಳು, ಬದುಕು; ನಂಬು: ವಿಶ್ವಾಸವಿಡು, ಭರವಸೆ; ರಾಯ: ರಾಜ;

ಪದವಿಂಗಡಣೆ:
ಹಗೆಯನ್+ಒಳಗ್+ಇಡಲಾಗದದು +ವೈ
ರಿಗಳ+ ನಿಳಯದಲ್+ಅನ್ನ +ಪಾನಾ
ದಿನಗಳನ್+ಉಣಲಾಗದು +ನಿಧಾನಿಸೆ+ ರಾಜ+ನೀತಿಯಿದು
ಬಗೆಯೆ +ನೀ +ಪಾಂಡವರಿಗ್+ಅಹಿತನು
ವಿಗಡ+ ಪಾಂಡವರ್+ಎನ್ನ +ಜೀವನ
ಹಗೆಯ +ನಂಬುವೆನ್+ಎಂತು +ಹೇಳೈ+ ಕೌರವರ+ ರಾಯ

ಅಚ್ಚರಿ:
(೧) ಹಗೆ – ೧, ೬ ಸಾಲಿನ ಮೊದಲ ಪದ
(೨) ವೈರಿ, ಅಹಿತ – ಸಮನಾರ್ಥಕ ಪದ

ಪದ್ಯ ೬೯: ಎಲ್ಲಿ ಮನುಷ್ಯರು ಊಟ ಮಾಡಬೇಕು?

ಪ್ರಿಯದಲುಂಬುದು ಮೇಣು ವಿಬುಧಾ
ಶ್ರಯದಲುಂಬುದು ಮಾನವರಿಗಿದು
ನಿಯತವಿಂತಲ್ಲದೊಡೆ ಕೇಳೈ ಕೌರವ ರಾಯ
ಪ್ರಿಯನು ನೀನಲ್ಲೆಮಗೆ ವಿಬುಧಾ
ಶ್ರಯವು ತಾ ಮುನ್ನಿಲ್ಲ ನಿನ್ನಾ
ಲಯದೆಲೆಮಗೆಂತೂಟ ಸಂಭವಿಸುವುದು ಹೇಳೆಂದ (ಉದ್ಯೋಗ ಪರ್ವ, ೮ ಸಂಧಿ, ೬೯ ಪದ್ಯ)

ತಾತ್ಪರ್ಯ:
ಯಾರು ನಮಗೆ ಪ್ರೀತಿಯನ್ನು ತೋರಿಸುತ್ತಾರೋ ಅವರಲ್ಲಿ ಊಟವನ್ನ ಮಾಡಬೇಕು, ಇಲ್ಲವೇ ಪಂಡಿತರ ಆಶ್ರಯವಿದ್ದಕಡೆ ಊಟವನ್ನು ಮಾಡುವುದು ಮನುಷ್ಯರಿಗೆ ಲೇಸೆಂದು ಹಿಂದಿನಿಂದ ನಡೆದುಬಂದು ತಿಳುವಳಿಕೆ. ದುರ್ಯೋಧನ ಕೇಳು ನೀನು ನನಗೆ ಪ್ರಿಯನಲ್ಲ, ಪಂಡಿತನೂ ನೀನಲ್ಲ ನಿನ್ನಾಶ್ರಯವನ್ನು ಬೇಡಲು, ಹೀಗಿರುವಾಗ ನಿನ್ನ ಮನೆಯಲ್ಲಿ ಊಟಮಾಡಲು ಹೇಗೆತಾನೆ ಆದೀತು ಎಂದು ಕೃಷ್ಣನು ಹೇಳಿದನು.

ಅರ್ಥ:
ಪ್ರಿಯ: ಪ್ರೀತಿಯ; ಉಂಬು: ಉಣ್ಣು; ಮೇಣ್: ಮತ್ತು ವಿಬುಧ: ಪಂಡಿತ, ವಿದ್ವಾಂಸ; ಆಶ್ರಯ: ಆಸರೆ, ಅವಲಂಬನ; ಮಾನವ: ಮನುಷ್ಯ; ನಿಯತ: ನಿಶ್ಚಿತವಾದುದು; ಕೇಳು: ಆಲಿಸು; ರಾಯ: ರಾಜ; ಮುನ್ನ: ಹಿಂದೆ; ಆಲಯ: ಮನೆ; ಊಟ: ಭೋಜನ; ಸಂಭವಿಸು: ಒದಗಿಬರು; ಹೇಳು: ತಿಳಿಸು;

ಪದವಿಂಗಡಣೆ:
ಪ್ರಿಯದಲ್+ಉಂಬುದು +ಮೇಣು +ವಿಬುಧಾ
ಶ್ರಯದಲ್+ಉಂಬುದು +ಮಾನವರಿಗಿದು
ನಿಯತವ್+ಇಂತಲ್ಲದೊಡೆ+ ಕೇಳೈ+ ಕೌರವ+ ರಾಯ
ಪ್ರಿಯನು +ನೀನಲ್+ಎಮಗೆ+ ವಿಬುಧಾ
ಶ್ರಯವು +ತಾ +ಮುನ್ನಿಲ್ಲ +ನಿನ್ನಾ
ಲಯದೆಲ್+ಎಮಗ್+ಎಂತೂಟ +ಸಂಭವಿಸುವುದು +ಹೇಳೆಂದ

ಅಚ್ಚರಿ:
(೧) ವಿಬುಧಾ – ೧, ೪ ಸಾಲಿನ ಕೊನೆಯ ಪದ
(೨) ಪ್ರಿಯ – ೧, ೪ ಸಾಲಿನ ಮೊದಲ ಪದ
(೩) ಉಂಬುದು – ೧, ೨ ಸಾಲಿನ ೨ನೇ ಪದ

ಪದ್ಯ ೬೮: ದುರ್ಯೋಧನನ ಕೃತ್ಯಕ್ಕೆ ಕೃಷ್ಣನ ಪ್ರತಿಕ್ರಿಯೆ ಹೇಗಿತ್ತು?

ಧನು ಮುರಿಯೆ ಗಾಂಧಾರಿ ಗತ ಲೋ
ಚನರು ಮಮ್ಮುಲ ಮರುಗಿದರು ಭೂ
ಪನ ದುಗುಡ ಮಿಗಿಲಾಯ್ತು ಭೀಷ್ಮ ದ್ರೋಣರಳಲಿದರು
ಮನದ ಹರುಷದಿ ನಗುತ ಮಧುಸೂ
ದನನು ನುಡಿದನು ಮರುಳು ಕೌರವ
ಜನಪ ಕೇಳೈ ಮತ್ತೆ ನಮ್ಮಯ ಶೀಲ ಬೇರೆಂದ (ಉದ್ಯೋಗ ಪರ್ವ, ೮ ಸಂಧಿ, ೬೮ ಪದ್ಯ)

ತಾತ್ಪರ್ಯ:
ದುರ್ಯೋಧನನ ಮಾತುಗಳಿಂದ ಕೋಪಗೊಂಡು ವಿದುರನು ಆತನ ರಕ್ಷಣೆಗಾಗಿಯಿರಿಸಿದ್ದ ಬಿಲ್ಲನ್ನು ಮುರಿದುದನ್ನು ಕೇಳಿ ಹಿಂದೆ ಕಣ್ಣಿಗೆ ಪಟ್ಟಿಯನ್ನು ಕಟ್ಟಿ ಕುರುಡಾಗಿದ್ದ ಗಾಂಧಾರಿ ತಾಯಿ ಮಮತೆಯಿಂದ ದುಃಖತಪ್ತಳಾದಳು, ಧೃತರಾಷ್ಟ್ರನ ದುಃಖವು ಇಮ್ಮಡಿಗೊಂಡಿತು, ಭೀಷ್ಮ ದ್ರೋಣರು ಸಹ ದುಃಖಿಸಿದರು. ಆದರೆ ಈ ಎಲ್ಲಾ ಸನ್ನಿವೇಶಗಳನ್ನು ನೋಡಿ ಮನಸ್ಸಿನಲ್ಲೇ ನಗೆಯನ್ನು ಬೀರುತ್ತಿದ್ದ ಕೃಷ್ಣನು ದುರ್ಯೋಧನನ್ನು ಉದ್ದೇಶಿಸಿ, “ಎಲೆ ಮೂಢನೆ ಈಗ ನಡೆದುದ್ದೆಲ್ಲ ನೋಡಿ, ಕೇಳಿಯು ನನ್ನ ನಡತೆ ಬೇರೆಯೆಂದು ಹೇಳುವೆಯೆಲ್ಲಾ” ಎಂದನು.

ಅರ್ಥ:
ಧನು: ಬಿಲ್ಲು; ಮುರಿ: ಸೀಳು, ಹೋಳುಮಾಡು; ಗತ: ಹಿಂದೆ ಆದುದು ; ಲೋಚನ: ಕಣ್ಣು; ಮಮ್ಮಲ: ಅನುಕರಣ; ಮರುಗು:ತಳಮಳ, ಸಂಕಟ; ಭೂಪ: ರಾಜ; ದುಗುಡು: ದುಃಖ; ಮಿಗಿಲು: ಹೆಚ್ಚು, ಅಧಿಕ; ಅಳಲು: ದುಃಖಿಸು; ಮನ: ಮನಸ್ಸು; ಹರುಷ: ಸಂತೋಷ; ನಗು: ಆನಂದ; ಮಧುಸೂದನ: ಕೃಷ್ಣ; ನುಡಿ: ಮಾತಾಡು; ಮರುಳು: ಹುಚ್ಚು, ದಡ್ಡತನದಿಂದ ಕೂಡಿದ; ಜನಪ: ರಾಜ; ಕೇಳು: ಆಲಿಸು; ಶೀಲ: ನಡತೆ, ಸ್ವಭಾವ; ಬೇರೆ: ಅನ್ಯ;

ಪದವಿಂಗಡಣೆ:
ಧನು +ಮುರಿಯೆ +ಗಾಂಧಾರಿ +ಗತ+ ಲೋ
ಚನರು +ಮಮ್ಮುಲ +ಮರುಗಿದರು+ ಭೂ
ಪನ+ ದುಗುಡ +ಮಿಗಿಲಾಯ್ತು +ಭೀಷ್ಮ +ದ್ರೋಣರ್+ಅಳಲಿದರು
ಮನದ +ಹರುಷದಿ +ನಗುತ +ಮಧುಸೂ
ದನನು +ನುಡಿದನು +ಮರುಳು +ಕೌರವ
ಜನಪ +ಕೇಳೈ +ಮತ್ತೆ +ನಮ್ಮಯ +ಶೀಲ +ಬೇರೆಂದ

ಅಚ್ಚರಿ:
(೧) ದುಗುಡ, ಅಳಲು, ಮರುಗು – ಸಾಮ್ಯಾರ್ಥ ಪದಗಳು
(೨) ಹರುಷದಿ ನಗುತ – ಒಟ್ಟಿಗೆ ಬಂದ ಪದಗಳು, ಹರುಷವನ್ನು ವ್ಯಕ್ತಪಡಿಸುವ ಬಗೆ – ನಗು
(೩) ಜನಪ, ಭೂಪ – ಸಮನಾರ್ಥಕ ಪದ

ಪದ್ಯ ೬೭: ವಿದುರ ತನ್ನ ಬಿಲ್ಲನ್ನು ಏಕೆ ಮುರಿದನು?

ಕಡು ಮುಳಿಸಿನಲಿ ಭೀಮ ನಿನ್ನಯ
ತೊಡೆಗಳನು ಕಡಿವಾ ಸಮಯದೊಳು
ತಡೆದು ನಿನ್ನನು ಕಾಯಬೇಕೆಂದುಳುಹಿದೆನು ಧನುವ
ಕೆಡೆನುಡಿಸಿಕೊಂಡಿನ್ನು ಕಾವೆನೆ
ನುಡಿದು ಫಲವೇನೆನುತ ವಿದುರನು
ಹಿಡಿದ ಬಿಲ್ಲನು ಮುರಿದನಾ ಕುರುರಾಯ ಬೆರಗಾಗೆ (ಉದ್ಯೋಗ ಪರ್ವ, ೮ ಸಂಧಿ, ೬೭ ಪದ್ಯ)

ತಾತ್ಪರ್ಯ:
ಅಧಿಕ ಕೋಪದಲ್ಲಿದ್ದ ವಿದುರ “ಎಲೈ ದುರ್ಯೋಧನ ಭೀಮನು ನಿನ್ನ ತೊಡೆಗಳನ್ನು ಮುರಿಯುವ ಸಮಯದಲ್ಲಿ ನಿನ್ನನ್ನು ರಕ್ಷಿಸಲೆಂದು ನಾನು ನನ್ನ ಬಿಲ್ಲನ್ನು ಕಾಪಾಡಿಕೊಂಡಿದ್ದೆ, ನೀನು ನಿನ್ನ ಬಿರುನುಡಿಗಳಿಂದ ಅದಕ್ಕೆ ಯೋಗ್ಯನಲ್ಲನೆಂದು ತೋರಿದೆ, ಈಗ ನಾನು ನಿನ್ನನ್ನು ರಕ್ಷಿಸುವೆನೆ? ನಿನ್ನೊಂದಿಗೆ ಮಾತನಾಡಿ ಪ್ರಯೋಜನವಿಲ್ಲ, ಈಗಲೇ ಈ ಬಿಲ್ಲನ್ನು ಮುರಿವೆ” ನೆಂದು ವಿದುರ ಮುರಿಯಲು ಅಚ್ಚರಿಯಿಂದ ದುರ್ಯೋಧನನು ನೋಡಿದ.

ಅರ್ಥ:
ಕಡು: ವಿಶೇಷ, ಅಧಿಕ; ಮುಳಿ: ಸಿಟ್ಟು, ಕೋಪ; ತೊಡೆ: ಊರು, ಸೊಂಟದಿಂದ ಮಂಡಿಯವರೆಗಿನ ಭಾಗ; ಕಡಿ: ಸೀಳು; ಸಮಯ: ಕಾಲ; ತಡೆ: ನಿಲ್ಲು; ಕಾಯು: ಕಾಪಾಡು; ಉಳುಹು: ಕಾಪಾಡು, ಸಂರಕ್ಷಿಸು; ಧನು: ಬಿಲ್ಲು; ಕೆಡೆ: ಬೀಳಿಸು; ಕಾವು: ರಕ್ಷಿಸು; ನುಡಿ: ಮಾತು; ಫಲ: ಪ್ರಯೋಜನ; ಹಿಡಿ:ಮುಷ್ಟಿ; ಮುರಿ: ಬಾಗಿಸು, ತಿರುಚು, ಸೀಳು; ಬೆರಗು: ಅಚ್ಚರಿ;

ಪದವಿಂಗಡಣೆ:
ಕಡು +ಮುಳಿಸಿನಲಿ+ ಭೀಮ +ನಿನ್ನಯ
ತೊಡೆಗಳನು +ಕಡಿವಾ+ ಸಮಯದೊಳು
ತಡೆದು +ನಿನ್ನನು +ಕಾಯ+ಬೇಕೆಂದ್+ಉಳುಹಿದೆನು +ಧನುವ
ಕೆಡೆನುಡಿಸಿಕೊಂಡ್+ಇನ್ನು +ಕಾವೆನೆ
ನುಡಿದು+ ಫಲವೇನ್+ಎನುತ +ವಿದುರನು
ಹಿಡಿದ +ಬಿಲ್ಲನು +ಮುರಿದನಾ +ಕುರುರಾಯ +ಬೆರಗಾಗೆ

ಪದ್ಯ ೬೬: ವಿದುರನು ತನ್ನ ಕೋಪವನ್ನು ಹೇಗೆ ವ್ಯಕ್ತಪಡಿಸಿದನು?

ಕುರುಪತಿಯ ಬಿರುನುಡಿಯ ಕೇಳಿದು
ಕರಣದಲಿ ಕೋಪಾಗ್ನಿಯುಕ್ಕಲು
ಕೆರಳಿ ನಿರ್ಭೀತಿಯಲಿ ನುಡಿದನು ವಿದುರನರಸಂಗೆ
ದುರುಳ ನೀನಾಡಿದ ನುಡಿಗೆ ಉ
ತ್ತರವನೀಯಲದೇಕೆ ನಿನ್ನಯ
ವರ ಜನನಿಗಾದಿಯಲಿ ಗಂಡರದಾರು ಹೇಳೆಂದ (ಉದ್ಯೋಗ ಪರ್ವ, ೮ ಸಂಧಿ, ೬೬ ಪದ್ಯ)

ತಾತ್ಪರ್ಯ:
ದುರ್ಯೋಧನನ ಮಾತು ಕೇಳಿ ಕಿವಿಯಲ್ಲಿ ಕೋಪದ ಜ್ವಾಲೆಗಳು ಹೊರಹೊಮ್ಮಲು ಕೆರಳಿ ಅಂಜದೇ ದುರ್ಯೋಧನನೆದುರು ನಿಂತು ವಿದುರನು ಹೇಳಿದ, “ಎಲೈ ಪಾಪಿ ದುರ್ಯೋಧನ, ನೀನಾಡಿದ ಮಾತಿಗೆ ಉತ್ತರವನು ನೀಡಬೇಕೆ, ಹಾಗದರೆ ನಿನ್ನಯ ತಾಯಿಗೆ ಆದಿಯಲಿ ಗಂಡರು ಯಾರು ಹೇಳು” ಎಂದು ವಿದುರ ದುರ್ಯೋಧನನಿಗೆ ಪ್ರಶ್ನಿಸಿದ.

ಅರ್ಥ:
ಕುರುಪತಿ: ದುರ್ಯೋಧನ; ಬಿರುನುಡಿ: ಒರಟಾದ ಮಾತು; ಕೇಳಿ: ಆಲಿಸಿ; ಕರಣ: ಕಿವಿ; ಕೋಪ: ಕ್ರೋಧ, ಸಿಟ್ಟು; ಉಕ್ಕು: ಹೊರಹೊಮ್ಮು; ಕೆರಳು: ಉದ್ರಿಕ್ತವಾಗು; ನಿರ್ಭೀತಿ: ಅಂಜಿಕೆಯಿಲ್ಲದೆ; ನುಡಿ: ಮಾತಾಡು; ಅರಸ: ರಾಜ; ದುರುಳ: ಪಾಪಿ, ದುಷ್ಟ; ನುಡಿ: ಮಾತು; ಉತ್ತರ: ಜವಾಬು; ವರ: ಶ್ರೇಷ್ಠ; ಜನನಿ: ಮಾತೆ; ಆದಿ: ಹಿಂದೆ; ಗಂಡ: ಯಜಮಾನ; ಹೇಳು: ತಿಳಿಸು;

ಪದವಿಂಗಡಣೆ:
ಕುರುಪತಿಯ +ಬಿರುನುಡಿಯ +ಕೇಳಿದು
ಕರಣದಲಿ +ಕೋಪಾಗ್ನಿಯುಕ್ಕಲು
ಕೆರಳಿ +ನಿರ್ಭೀತಿಯಲಿ+ ನುಡಿದನು +ವಿದುರನ್+ಅರಸಂಗೆ
ದುರುಳ +ನೀನ್+ಆಡಿದ +ನುಡಿಗೆ+ ಉ
ತ್ತರವನೀಯಲ್+ಅದೇಕೆ +ನಿನ್ನಯ
ವರ +ಜನನಿಗ್+ಆದಿಯಲಿ+ ಗಂಡರ್+ಅದಾರು+ ಹೇಳೆಂದ

ಅಚ್ಚರಿ:
(೧) ‘ಕ’ಕಾರದ ಸಾಲು ಪದಗಳು – ಕೇಳಿದು ಕರಣದಲಿ ಕೋಪಾಗ್ನಿಯುಕ್ಕಲು ಕೆರಳಿ

ಪದ್ಯ ೬೫: ದುರ್ಯೋಧನನು ವಿದುರನನ್ನು ಹೇಗೆ ಹೀಯಾಳಿಸಿದನು?

ಈ ಕೃಪನನೀ ದ್ರೋಣನೀ ಗಂ
ಗಾ ಕುಮಾರನ ಮನೆಯ ಹೊಗದವಿ
ವೇಕಿ ತೊತ್ತಿನ ಮಗನ ಮನೆಯಲಿ ಹಸಿವನೂಕಿದಿರಿ
ಸಾಕಿದಾತನು ನಂದಗೋಪನು
ಕಾಕ ಬಳಸಲು ಸಲ್ಲದೇ ನಿಮ
ಗೇಕೆ ರಾಯರ ನೀತಿಯೆಂದನು ನಗುತ ಕುರುರಾಯ (ಉದ್ಯೋಗ ಪರ್ವ, ೮ ಸಂಧಿ, ೬೫ ಪದ್ಯ)

ತಾತ್ಪರ್ಯ:
ಹಸ್ತಿನಾವತಿಯಲ್ಲಿ ಕೃಪ, ದ್ರೋಣ, ಭೀಷ್ಮರ ಮನೆಗೆ ಹೋಗದೆ ಅವಿವೀಕಿಯಾದ ದಾಸಿಯ ಮಗನಾದ ವಿದುರನ ಮನೆಗೆ ಹೋಗಿ ನಿಮ್ಮ ಹಸಿವನ್ನು ನೀಗಿಸಿಕೊಂಡಿರಿ, ನಿಮ್ಮನ್ನು ಸಾಕಿದವ ನಂದಗೋಪನು, ನಿಮ್ಮ ಕ್ಷುಲ್ಲಕು ಬುದ್ಧಿಯನ್ನು ಬಳಸುವುದು ಸರಿಯೇ, ನಿಮಗೇಕೆ ರಾಜರ ನೀತಿಮಾತುಗಳು ಎಂದು ದುರ್ಯೋಧನನು ಕೃಷ್ಣನಿಗೆ ಹೇಳಿದ.

ಅರ್ಥ:
ಕುಮಾರ: ಮಗ; ಮನೆ: ಆಲಯ; ಹೋಗದೆ: ತೆರಳದೆ; ಅವಿವೇಕಿ: ಯುಕ್ತಾಯುಕ್ತ ಪರಿಜ್ಞಾನವುಳ್ಳದವ; ಹಸಿವು: ಊಟವಿಲ್ಲದ ಸ್ಥಿತಿ; ನೂಕು: ತಳ್ಳು; ಸಾಕು: ಸಲಹು; ಗೋಪ:ಗೋವುಗಳನ್ನು ಕಾಯುವವನು, ದನಗಾಹಿ, ಗೊಲ್ಲ; ಕಾಕ:ಕ್ಷುಲ್ಲಕ, ನೀಚ, ಕಾಗೆಯ ಪೌರುಷ; ಬಳಸು: ಸುತ್ತುವರಿ; ಸಲ್ಲು: ಹೋಗು, ಸೇರು; ರಾಯ: ರಾಜ; ನೀತಿ:ಮಾರ್ಗ ದರ್ಶನ, ಮುನ್ನಡೆಸುವಿಕೆ; ನಗು: ಸಂತೋಷ; ರಾಯ: ರಾಜ; ತೊತ್ತು: ದಾಸಿ, ಸೇವಕಿ;

ಪದವಿಂಗಡಣೆ:
ಈ +ಕೃಪನನ್+ಈ + ದ್ರೋಣನ್+ಈ+ ಗಂ
ಗಾ +ಕುಮಾರನ +ಮನೆಯ +ಹೊಗದ್+ಅವಿ
ವೇಕಿ +ತೊತ್ತಿನ +ಮಗನ +ಮನೆಯಲಿ +ಹಸಿವ+ನೂಕಿದಿರಿ
ಸಾಕಿದ್+ಆತನು+ ನಂದ+ಗೋಪನು
ಕಾಕ+ ಬಳಸಲು+ ಸಲ್ಲದೇ +ನಿಮ
ಗೇಕೆ+ ರಾಯರ+ ನೀತಿಯೆಂದನು +ನಗುತ +ಕುರುರಾಯ

ಅಚ್ಚರಿ:
(೧) ವಿದುರನನ್ನು ಹೀಯಾಳಿಸುವ ಪದ – ಅವಿವೇಕಿ ತೊತ್ತಿನ ಮಗ

ಪದ್ಯ ೬೪: ದುರ್ಯೋಧನನ ದುಃಖದ ಕಾರಣವೇನು?

ನೀವು ಬಿಜಯಂಗೈವಿರೆಂದು ಮ
ಹಾ ವಿಳಾಸದೊಳಳವಡಿಸಿ ನಾ
ನಾ ವಿಧದ ಷಡುರಸವ ಗರುಡಿಯಲಿಂದು ಸವೆಸಿದೆನು
ದೇವ ನಮ್ಮರಮನೆಗೆ ಬಾರದೆ
ನೀವು ವಿದುರನ ಮನೆಯಲುಂಡಿರೆ
ಗೋವಳಿಗತನ ನಿಮ್ಮ ಮೈ ಸಿರಿ ತಪ್ಪದಾಯ್ತೆಂದ (ಉದ್ಯೋಗ ಪರ್ವ, ೮ ಸಂಧಿ, ೬೪ ಪದ್ಯ)

ತಾತ್ಪರ್ಯ:
ದುರ್ಯೋಧನನು ಕೃಷ್ಣನನ್ನು ಉದ್ದೇಶಿಸಿ, ಎಲೈ ದೇವ ನೀವು ಆಗಮಿಸುವಿರೆಂದು ನಾನು ನಮ್ಮ ಮನೆಯನ್ನು ನಿಮ್ಮ ವಾಸಕ್ಕಾಗಿ ಸಿದ್ಧಪಡಿಸಿ ಷಡ್ರಸಭರಿತ ಊಟವನ್ನು ತಯಾರು ಮಾಡಿಸಿದ್ದೆ ಆದರೆ ದೇವ ನೀವು ನಮ್ಮ ಅರಮನೆಗೆ ಬಾರದೆ ವಿದುರನ ಮನೆಗೆ ಹೋಗಿ ಊಟ ಮಾಡಿದಿರಿ. ನಿಮ್ಮನ್ನು ಸೇವಿಸುವುದು ನನಗೆ ತಪ್ಪಿತೆಂದು ಹೇಳಿದನು.

ಅರ್ಥ:
ಬಿಜಯಂಗೈ: ದಯಮಾಡಿ; ಮಹಾ: ದೊಡ್ಡ, ಶ್ರೇಷ್ಠ; ವಿಳಾಸ: ಸುಂದರ; ಅಳವಡಿಸು: ಹೊಂದಿಸು; ನಾನಾ: ಹಲವಾರು; ವಿಧ: ಬಗೆ; ಗರುಡಿ: ಮನೆ; ಷಡುರಸ: ಉಪ್ಪು, ಕಾರ, ಸಿಹಿ, ಕಹಿ, ಹುಳಿ ಮತ್ತು ಒಗರು ಎಂಬ ಆರು ಬಗೆಯ ರುಚಿಗಳು; ಸವೆಸು: ಸಜ್ಜುಮಾಡು; ದೇವ: ಭಗವಂತ; ಅರಮನೆ: ರಾಜನ ವಾಸಸ್ಥಾನ; ಬಾರದೆ: ಆಗಮಿಸದೆ; ಮನೆ: ಆಲಯ; ಉಂಡು: ತಿಂದು; ಗೋವಳಿಗತನ: ಗೊಲ್ಲತನ; ತಪ್ಪಿತು: ಬಿಟ್ಟುಹೋಯಿತು; ಸಿರಿ: ಐಶ್ವರ್ಯ, ಸಂಪತ್ತು; ಮೈ: ತನು;

ಪದವಿಂಗಡಣೆ:
ನೀವು +ಬಿಜಯಂಗೈವಿರೆಂದು +ಮ
ಹಾ +ವಿಳಾಸದೊಳ್+ಅಳವಡಿಸಿ+ ನಾ
ನಾ +ವಿಧದ +ಷಡುರಸವ+ ಗರುಡಿಯಲ್+ಇಂದು +ಸವೆಸಿದೆನು
ದೇವ +ನಮ್ಮ +ಅರಮನೆಗೆ+ ಬಾರದೆ
ನೀವು +ವಿದುರನ+ ಮನೆಯಲ್+ಉಂಡಿರೆ
ಗೋವಳಿಗತನ+ ನಿಮ್ಮ +ಮೈ +ಸಿರಿ+ ತಪ್ಪದಾಯ್ತೆಂದ

ಅಚ್ಚರಿ:
(೧) ಅಡುಗೆಮನೆಗೆ – ಗರುಡಿ ಎಂಬ ಪದದ ಬಳಕೆ
(೨) ಮಹಾವಿಳಾಸ – ಅರಮನೆಯನ್ನು ಸೂಚಿಸುವ ಪದ

ಪದ್ಯ ೬೩: ಕೃಷ್ಣನು ದುರ್ಯೋಧನನನ್ನು ಏಕೆ ಕರೆಯುತ್ತಾನೆ?

ಕುಶಲವೇ ಕುರುರಾಯ ಬಾರೈ
ಮುಸುಡ ದುಗುಡವಿದೇಕೆ ಬಾಯಂ
ದಸುರರಿಪು ಕೌರವನ ಕರೆದನು ತನ್ನ ಸಮ್ಮುಖಕೆ
ಉಸುರಲಮ್ಮೆನು ಭಾವತನದೊಂ
ದೆಸಕ ಸಲುಗೆಯ ನೇಮವಾದೊಡೆ
ಬಿಸಜಲೋಚನ ಬಿನ್ನಹವನವಧರಿಸಬೇಕೆಂದ (ಉದ್ಯೋಗ ಪರ್ವ, ೮ ಸಂಧಿ, ೬೩ ಪದ್ಯ)

ತಾತ್ಪರ್ಯ:
ಕೃಷ್ಣನು ಚಿನ್ನದ ಸಿಂಹಾಸನದ ಮೇಲೆ ಆಸೀನನಾಗಿ ದುರ್ಯೋಧನನ್ನು ನೋಡಿ, ಇಲ್ಲಿ ಬಾ ದುರ್ಯೋಧನ, ಏಕೆ ಮುಖ ದುಃಖದಲ್ಲಿ ಮುಳುಗಿದೆ ನನ್ನೆದುರು ಬಾ ಎಂದು ಕರೆಯುತ್ತಾನೆ. ದುರ್ಯೋಧನನು ಆತನ ಮುಂದೆ ಬಂದು, ಹೇಳಲು ನೀನು ನಮಗೆ ಭಾವನ ಸಮಾನ, ಆ ಸಲುಗೆಯ ಮೇಲೆ ಒಂದು ಮನವಿಯನ್ನು ಮಾದುತ್ತೇನೆ ಅದನ್ನು ಗಮನವಿಟ್ಟು ಆಲಿಸು ಕಮಲಲೋಚನನಾದ ಕೃಷ್ಣನೇ ಎಂದು ಹೇಳಿದನು.

ಅರ್ಥ:
ಕುಶಲ: ಕ್ಷೇಮ; ರಾಯ: ರಾಜ; ಬಾರೈ: ಬಾ, ಆಗಮಿಸು; ಮುಸುಡ: ಮುಖ; ದುಗುಡ: ದುಃಖ; ಅಸುರರಿಪು: ಕೃಷ್ಣ; ಅಸುರ: ದನುಜ; ರಿಪು: ವೈರಿ; ಕರೆ: ಬರೆಮಾಡು; ಸಮ್ಮುಖ: ಮುಂದೆ; ಉಸುರು: ಹೇಳು; ಭಾವ: ತಂಗಿಯ ಗಂಡ; ಎಸಕ: ಕೆಲಸ; ಸಲುಗೆ: ಸದರ; ನೇಮ: ನಿಯಮ; ಬಿಸಜ:ಕಮಲ; ಲೋಚನ: ನಯನ; ಬಿಸಜಲೋಚನ: ಕಮಲದಂತೆ ನಯನವುಳ್ಳವ; ಬಿನ್ನಹ: ಮನವಿ; ಅವಧರಿಸು: ಮನಸ್ಸಿಟ್ಟು ಕೇಳು;

ಪದವಿಂಗಡಣೆ:
ಕುಶಲವೇ +ಕುರುರಾಯ +ಬಾರೈ
ಮುಸುಡ +ದುಗುಡವ್+ಇದೇಕೆ +ಬಾಯಂದ್
ಅಸುರರಿಪು+ ಕೌರವನ +ಕರೆದನು +ತನ್ನ +ಸಮ್ಮುಖಕೆ
ಉಸುರಲ್+ಎಮ್ಮೆನು+ ಭಾವತನದ್+ಒಂದ್
ಎಸಕ +ಸಲುಗೆಯ +ನೇಮವಾದೊಡೆ
ಬಿಸಜಲೋಚನ +ಬಿನ್ನಹವನ್+ಅವಧರಿಸ+ಬೇಕೆಂದ

ಅಚ್ಚರಿ:
(೧) ಕೃಷ್ಣನನ್ನು ಬಿಸಜಲೋಚನ, ಅಸುರರಿಪು ಎಂದು ಕರೆದಿರುವುದು
(೨) ಜೋಡಿ ಅಕ್ಷರಗಳ ಪದಗಳು – ಬಿಸಜಲೋಚನ ಬಿನ್ನಹವನವಧರಿಸು, ಕುಶಲವೇ ಕುರುರಾಯ, ಕೌರವನ ಕರೆದನು
(೩) ಮುಸುಡ, ದುಗುಡ – ಪ್ರಾಸ ಪದ