ಪದ್ಯ ೬೪: ದುರ್ಯೋಧನನ ದುಃಖದ ಕಾರಣವೇನು?

ನೀವು ಬಿಜಯಂಗೈವಿರೆಂದು ಮ
ಹಾ ವಿಳಾಸದೊಳಳವಡಿಸಿ ನಾ
ನಾ ವಿಧದ ಷಡುರಸವ ಗರುಡಿಯಲಿಂದು ಸವೆಸಿದೆನು
ದೇವ ನಮ್ಮರಮನೆಗೆ ಬಾರದೆ
ನೀವು ವಿದುರನ ಮನೆಯಲುಂಡಿರೆ
ಗೋವಳಿಗತನ ನಿಮ್ಮ ಮೈ ಸಿರಿ ತಪ್ಪದಾಯ್ತೆಂದ (ಉದ್ಯೋಗ ಪರ್ವ, ೮ ಸಂಧಿ, ೬೪ ಪದ್ಯ)

ತಾತ್ಪರ್ಯ:
ದುರ್ಯೋಧನನು ಕೃಷ್ಣನನ್ನು ಉದ್ದೇಶಿಸಿ, ಎಲೈ ದೇವ ನೀವು ಆಗಮಿಸುವಿರೆಂದು ನಾನು ನಮ್ಮ ಮನೆಯನ್ನು ನಿಮ್ಮ ವಾಸಕ್ಕಾಗಿ ಸಿದ್ಧಪಡಿಸಿ ಷಡ್ರಸಭರಿತ ಊಟವನ್ನು ತಯಾರು ಮಾಡಿಸಿದ್ದೆ ಆದರೆ ದೇವ ನೀವು ನಮ್ಮ ಅರಮನೆಗೆ ಬಾರದೆ ವಿದುರನ ಮನೆಗೆ ಹೋಗಿ ಊಟ ಮಾಡಿದಿರಿ. ನಿಮ್ಮನ್ನು ಸೇವಿಸುವುದು ನನಗೆ ತಪ್ಪಿತೆಂದು ಹೇಳಿದನು.

ಅರ್ಥ:
ಬಿಜಯಂಗೈ: ದಯಮಾಡಿ; ಮಹಾ: ದೊಡ್ಡ, ಶ್ರೇಷ್ಠ; ವಿಳಾಸ: ಸುಂದರ; ಅಳವಡಿಸು: ಹೊಂದಿಸು; ನಾನಾ: ಹಲವಾರು; ವಿಧ: ಬಗೆ; ಗರುಡಿ: ಮನೆ; ಷಡುರಸ: ಉಪ್ಪು, ಕಾರ, ಸಿಹಿ, ಕಹಿ, ಹುಳಿ ಮತ್ತು ಒಗರು ಎಂಬ ಆರು ಬಗೆಯ ರುಚಿಗಳು; ಸವೆಸು: ಸಜ್ಜುಮಾಡು; ದೇವ: ಭಗವಂತ; ಅರಮನೆ: ರಾಜನ ವಾಸಸ್ಥಾನ; ಬಾರದೆ: ಆಗಮಿಸದೆ; ಮನೆ: ಆಲಯ; ಉಂಡು: ತಿಂದು; ಗೋವಳಿಗತನ: ಗೊಲ್ಲತನ; ತಪ್ಪಿತು: ಬಿಟ್ಟುಹೋಯಿತು; ಸಿರಿ: ಐಶ್ವರ್ಯ, ಸಂಪತ್ತು; ಮೈ: ತನು;

ಪದವಿಂಗಡಣೆ:
ನೀವು +ಬಿಜಯಂಗೈವಿರೆಂದು +ಮ
ಹಾ +ವಿಳಾಸದೊಳ್+ಅಳವಡಿಸಿ+ ನಾ
ನಾ +ವಿಧದ +ಷಡುರಸವ+ ಗರುಡಿಯಲ್+ಇಂದು +ಸವೆಸಿದೆನು
ದೇವ +ನಮ್ಮ +ಅರಮನೆಗೆ+ ಬಾರದೆ
ನೀವು +ವಿದುರನ+ ಮನೆಯಲ್+ಉಂಡಿರೆ
ಗೋವಳಿಗತನ+ ನಿಮ್ಮ +ಮೈ +ಸಿರಿ+ ತಪ್ಪದಾಯ್ತೆಂದ

ಅಚ್ಚರಿ:
(೧) ಅಡುಗೆಮನೆಗೆ – ಗರುಡಿ ಎಂಬ ಪದದ ಬಳಕೆ
(೨) ಮಹಾವಿಳಾಸ – ಅರಮನೆಯನ್ನು ಸೂಚಿಸುವ ಪದ