ಪದ್ಯ ೩೮: ದುರ್ಯೋಧನನು ಪರಿವಾರದವರನ್ನು ಹೇಗೆ ರಂಜಿಸಿದನು?

ಅಂಗ ಚಿತ್ತವನಿತ್ತು ಮೊದಲಿನ
ಪುಂಗವನ ಪತಿಕರಿಸಿ ಹಿಂಡಿನ
ವಂಗಡದ ಗೋಪಾಲನಿಕರಕೆ ಕೊಟ್ಟನುಡುಗೊರೆಯ
ಹಿಂಗಿದವು ತುರು ಬೇಟೆಯಾಡಿ ಮೃ
ಗಂಗಳಿಗೆ ಮದ್ದರೆದು ಕಡಿಭಾ
ಗಂಗಲನು ಕೊಡಿಸಿದನು ಪರಿವಾರಕೆ ವಿನೋದದಲಿ (ಅರಣ್ಯ ಪರ್ವ, ೧೮ ಸಂಧಿ, ೩೮ ಪದ್ಯ)

ತಾತ್ಪರ್ಯ:
ಗೋವಳರ ಪ್ರಮುಖನಿಗೆ ತನ್ನ ಮೈ ಮೇಲಿನ ಆಭರಣಗಳನ್ನು ಕೊಟ್ಟು ಮನ್ನಿಸಿ, ಬೇರೆ ಬೇರೆ ಹಿಂಡುಗಳ ಗೋಪಾಲಕರಿಗೆ ಉಡುಗೊರೆಯನ್ನು ಕೊಟ್ಟನು. ಬೇಟೆಯಾಡಿ ಮೃಗಗಳನ್ನು ಕೊಂದು, ಪರಿವಾರದವರಿಗೆ ಅವುಗಳ ಭಾಗವನ್ನು ಹಂಚಿದನು.

ಅರ್ಥ:
ಅಂಗ: ದೇಹದ ಭಾಗ; ಚಿತ್ತ: ಮನಸ್ಸು; ಮೊದಲು: ಆದಿ; ಪುಂಗವ: ಎತ್ತು, ಗೂಳಿ, ಒಡೆಯ; ಪತಿಕರಿಸು: ದಯೆತೋರು, ಅನುಗ್ರಹಿಸು; ಹಿಂಡು: ಗುಂಪು, ಸಮೂಹ; ಅಂಗ: ಭಾಗ; ಗೋಪಾಲಕ: ದನಗಾಹಿ, ಗೊಲ್ಲ; ನಿಕರ: ಗುಂಪು; ಉಡುಗೊರೆ: ಕಾಣಿಕೆ, ಬಳುವಳಿ; ಹಿಂಗು: ಕಡಮೆಯಾಗು; ತುರು: ಗೋವು; ಬೇಟೆ: ಕ್ರೂರ ಮೃಗಗಳನ್ನು ಕೊಲ್ಲುವುದು; ಮೃಗ: ಪ್ರಾನಿ; ಮದ್ದು: ಔಷಧಿ, ವಿಷ; ಎರೆ: ಸುರಿ, ಹೊಯ್ಯು; ಕಡಿ: ತುಂಡು; ಭಾಗ: ಪಾಲು; ಕೊಡಿಸು: ನೀಡು; ಪರಿವಾರ: ಬಂಧುಜನ; ವಿನೋದ: ಸಂತಸ;

ಪದವಿಂಗಡಣೆ:
ಅಂಗ +ಚಿತ್ತವನಿತ್ತು +ಮೊದಲಿನ
ಪುಂಗವನ +ಪತಿಕರಿಸಿ+ ಹಿಂಡಿನವ್
ಅಂಗಡದ +ಗೋಪಾಲ+ನಿಕರಕೆ+ ಕೊಟ್ಟನ್+ಉಡುಗೊರೆಯ
ಹಿಂಗಿದವು +ತುರು +ಬೇಟೆಯಾಡಿ+ ಮೃ
ಗಂಗಳಿಗೆ +ಮದ್ದರೆದು +ಕಡಿ+ಭಾ
ಗಂಗಳನು+ ಕೊಡಿಸಿದನು +ಪರಿವಾರಕೆ +ವಿನೋದದಲಿ

ಅಚ್ಚರಿ:
(೧) ಅಂಗ, ಪುಂಗ – ಪ್ರಾಸ ಪದ

ಪದ್ಯ ೩೭: ದುರ್ಯೋಧನನು ಯಾರಿಗೆ ಗೋವುಗಳನ್ನು ನೀಡಿದನು?

ತರಿಸಿ ಹೋರಿಯ ಗವಿಯ ಗೂಳಿಯ
ಬರಿಸಿದನು ಕೆಲಕೆಲವ ಕೃಷಿಕರಿ
ಗಿರಿಸಿದನು ಗೋಲಕ್ಷವಿತ್ತನು ವಿಪ್ರಸಂಕುಲಕೆ
ಕರೆಸಿಕೊಟ್ಟನು ಭಟ್ಟರಿಗೆ ಮ
ಲ್ಲರಿಗೆ ವಿಟರಿಗೆ ನಟ ವಿಧಾವಂ
ತರಿಗೆ ಬಹುವಿಧ ಬಹಳ ವಮ್ದಿಗೆ ಮಾಗಧವ್ರಜಕೆ (ಅರಣ್ಯ ಪರ್ವ, ೧೮ ಸಂಧಿ, ೩೭ ಪದ್ಯ)

ತಾತ್ಪರ್ಯ:
ದುರ್ಯೋಧನನು ಹೋರಿಗಳನ್ನೂ ಹಸುಗಳನ್ನೂ ತರಿಸಿ, ಕೆಲಸವನ್ನು ಕೃಷಿಕರಿಗೆ ನೀಡಿದನು. ಬ್ರಾಹ್ಮಣರಿಗೆ ಲಕ್ಷ ಗೋವುಗಳನ್ನು ಕೊಟ್ಟನು. ಭಟ್ಟರು, ವಂದಿಮಾಗಧರು ಮಲ್ಲರು, ವಿಟರು, ನಟರು, ಆನೆ ಕುದುರೆಗಳ ಆರೈಕೆಗಾರರುಗಳನ್ನು ಕರೆಸಿ ಗೋವುಗಳನ್ನು ನೀಡಿದನು.

ಅರ್ಥ:
ತರಿಸು: ಹೊಂದಿಸು; ಹೋರಿ: ಗೂಳಿ; ಗವಿ: ನೆಲೆ, ಆಶ್ರಯಸ್ಥಾನ; ಗೂಳಿ: ಎತ್ತು, ವೃಷಭ; ಬರಿಸು: ಬರೆಮಾಡು; ಕೆಲ: ಕೊಂಚ, ಸ್ವಲ್ಪ; ಕೆಲವ: ಕೆಲಸ; ಕೃಷಿಕ: ರೈತ; ಗೋ: ಗೋವು; ವಿತ್ತು: ನೀಡು; ವಿಪ್ರ: ಬ್ರಾಹ್ಮಣ; ಸಂಕುಲ: ಗುಂಪು; ಕರೆಸಿ: ಬರೆಮಾಡು; ಭಟ್ಟ: ವಿದ್ವಾಂಸ, ಪಂಡಿತ; ಮಲ್ಲ: ಜಟ್ಟಿ; ವಿಟ:ಜಾರ, ಕಾಮುಕ; ನಟ: ನಟನೆ ಮಾಡುವವ; ವಿಧಾವಂತ: ಆನೆ ಕುದುರೆಗಳನ್ನು ಆರೈಕೆ ಮಾಡುವವ; ಬಹುವಿಧ: ಹಲವಾರು; ಬಹಳ: ತುಂಬ; ವಂದಿಮಾಗಧ: ಹೊಗಳುಭಟ್ಟ; ವ್ರಜ: ಗುಂಪು;

ಪದವಿಂಗಡಣೆ:
ತರಿಸಿ +ಹೋರಿಯ +ಗವಿಯ +ಗೂಳಿಯ
ಬರಿಸಿದನು +ಕೆಲಕೆಲವ +ಕೃಷಿಕರಿಗ್
ಇರಿಸಿದನು +ಗೋಲಕ್ಷವಿತ್ತನು+ ವಿಪ್ರ+ಸಂಕುಲಕೆ
ಕರೆಸಿಕೊಟ್ಟನು +ಭಟ್ಟರಿಗೆ+ ಮ
ಲ್ಲರಿಗೆ+ ವಿಟರಿಗೆ+ ನಟ +ವಿಧಾವಂ
ತರಿಗೆ+ ಬಹುವಿಧ +ಬಹಳ+ ವಂದಿಗೆ +ಮಾಗಧ+ವ್ರಜಕೆ

ಅಚ್ಚರಿ:
(೧) ತರಿಸಿ, ಕರೆಸಿ, ಬರಿಸಿ, ಇರಿಸಿ – ಪ್ರಾಸ ಪದಗಳು
(೨) ಹಲವು ರೀತಿಯ ಜನರು – ಭಟ್ಟ, ಮಲ್ಲ, ವಿಟ, ನಟ, ವಿಧಾವಂತ, ವಂದಿ, ಮಾಗಧ

ಪದ್ಯ ೩೬: ಹೋರಿಗಳು ಹೇಗೆ ಚರಿಸುತ್ತಿದ್ದವು?

ಬೆಳೆವಿಣಿಲ ಮಿಡಿಗಲವ ಬಾಲದ
ನೆಲಕೆ ನಿಗುರುವ ಗಂಗೆದೊಗಲಿನ
ಹಲಗೆ ಬೆನ್ನಿನ ಸಿಡಿಲಮರಿಯೆನೆ ಮೆರೆವ ಹುಂಕೃತಿಯ
ಕೆಲವಿದಿರುಬರಲದ್ರಿಯದ್ರಿಯ
ಹಳಚುವಂತಿರೆ ಹರಿವ ಹಾರುವ
ಸಲಗನಳ್ಳಿರಿದಾಡುತಿದ್ದವು ಹಿಂಡು ಹಿಂಡಿನಲಿ (ಅರಣ್ಯ ಪರ್ವ, ೧೮ ಸಂಧಿ, ೩೬ ಪದ್ಯ)

ತಾತ್ಪರ್ಯ:
ಬೆಳೆದ ಡುಬ್ಬ ಅಲುಗಾಡುವ ಕತ್ತು, ಬಾಲ, ಜೋಲು ಬಿದ್ದ ಗಂಗೆದೊಗಲು, ಹಲಗೆ ಬೆನ್ನು, ಸಿಡಿಲಿನ ಮರಿಯೋ ಎನ್ನುವಂತಹ ಗುಟುರು, ಇದಿರು ಪಕ್ಕಕ್ಕೆ ಇನ್ನೊಂದು ಬಂದರೆ ಬೆಟ್ಟವು ಬೆಟ್ಟದೊಡನೆ ಹೋರುತ್ತಿದೆಯೋ ಎನ್ನುವಂತೆ ನುಗ್ಗುವ ಹಾರುವ ಗೂಳಿಗಳು ಹಿಂಡುಗಳಲ್ಲಿ ಚರಿಸುತ್ತಿದ್ದವು.

ಅರ್ಥ:
ಬೆಳೆವಿಣಿಲು:ಬೆಳೆದ ಡುಬ್ಬ; ಮಿಡಿ: ಕಿರಿದು; ಮಿಡಿಗಲ: ಎಳೆಯದಾದ ಗರಿಗೆದೊಗಲು; ಬಾಲ: ಪುಚ್ಛ; ನೆಲ: ಭೂಮಿ; ನಿಗುರು: ಹರಡು, ವ್ಯಾಪಿಸು; ಗಂಗೆ: ಕಂಠ, ಕೊರಳು; ತೊಗಲು: ಚರ್ಮ, ತ್ವಕ್ಕು; ಹಲಗೆ: ಪಲಗೆ, ಮರ; ಬೆನ್ನು: ಹಿಂಭಾಗ; ಸಿಡಿಲ: ಅಶನಿ, ಸೀಳು; ಮೆರೆ: ಹೊಳೆ, ಪ್ರಕಾಶಿಸು; ಹುಂಕೃತಿ: ಗರ್ಜನೆ; ಕೆಲವು: ಸ್ವಲ್ಪ; ಇದಿರು: ಎದುರು; ಅದ್ರಿ: ಬೆಟ್ಟ; ಹಳಚು: ತಾಗು, ಬಡಿ; ಹರಿವ: ಚಲಿಸುವ; ಹಾರುವ: ಎಗರುವ; ಸಲಗ: ಬಲಿಷ್ಠವಾದ ಹೋರಿ, ಗೂಳಿ; ಇರಿದಾಡು: ಹೊಡೆದಾಡು; ಹಿಂಡು: ಗುಂಪು;

ಪದವಿಂಗಡಣೆ:
ಬೆಳೆವಿಣಿಲ+ ಮಿಡಿಗಲವ+ ಬಾಲದ
ನೆಲಕೆ +ನಿಗುರುವ +ಗಂಗೆದೊಗಲಿನ
ಹಲಗೆ +ಬೆನ್ನಿನ +ಸಿಡಿಲ+ಮರಿಯೆನೆ+ ಮೆರೆವ+ ಹುಂಕೃತಿಯ
ಕೆಲವ್+ಇದಿರುಬರಲ್+ಅದ್ರಿ+ಅದ್ರಿಯ
ಹಳಚುವಂತಿರೆ+ ಹರಿವ+ ಹಾರುವ
ಸಲಗನಳ್+ಇರಿದಾಡುತಿದ್ದವು +ಹಿಂಡು +ಹಿಂಡಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಿಡಿಲಮರಿಯೆನೆ ಮೆರೆವ ಹುಂಕೃತಿಯ; ಕೆಲವಿದಿರುಬರಲದ್ರಿಯದ್ರಿಯಹಳಚುವಂತಿರೆ ಹರಿವ ಹಾರುವಸಲಗನಳ್ಳಿರಿದಾಡುತಿದ್ದವು

ಪದ್ಯ ೩೫: ದುರ್ಯೋಧನನು ಯಾವ ರೀತಿ ದನಗಳನ್ನು ನೋಡಿದನು?

ಕರೆಸಿದನು ಕೀಲಾರಿಗಳನಾ
ದರಿಸಿ ಹಟ್ಟಿಯ ತುರುಗಳೆಲ್ಲವ
ತರಿಸಿ ನೋಡಿದನಲ್ಲಿ ಹಿಂಡಿನ ಕೋಟಿ ಸಂಖ್ಯೆಗಳ
ಹರಿವ ಹಾರುವ ಪಂಟಿಸುವ ಸೈ
ವರಿವ ಮರಳುವ ಮುರಿವ ನಿಲುವೆಳೆ
ಗರುಗಳನು ನೋಡಿದನು ನಗುತ ನರೇಂದ್ರನೊಲವಿನಲಿ (ಅರಣ್ಯ ಪರ್ವ, ೧೮ ಸಂಧಿ, ೩೫ ಪದ್ಯ)

ತಾತ್ಪರ್ಯ:
ದನಗಾಹಿಗಳನ್ನು ಕರೆಸಿ ಹಟ್ಟಿಯಲ್ಲಿದ್ದ ಅಸಂಖ್ಯಾತ ಗೋವುಗಳ ಹಿಂಡುಗಳನ್ನು ನೋಡಿದನು. ಓಡುವ, ಎಗರುವ, ಮುಗ್ಗರಿಸುವ, ಮುಂದೆ ಓಡುವ, ಹಿಂದಿರುಗಿ ಬರುವ, ಪಕ್ಕಕ್ಕೆ ತಿರುಗುವ, ನಿಲ್ಲುವ ಎಳೆಯಕರುಗಳನ್ನು ಕೌರವನು ಪ್ರೀತಿಯಿಂದ ನಗುತ್ತಾ ನೋಡಿದನು.

ಅರ್ಥ:
ಕರೆಸು: ಬರೆಮಾಡು; ಕೀಲಾರಿ: ದನಕರುಗಳನ್ನು ಸಾಕುವವನು, ಗೋವಳ; ಆದರಿಸು: ಗೌರವಿಸು; ಹಟ್ಟಿ: ದನಗಳು ವಾಸಿಸುವ ಸ್ಥಳ; ತುರು: ದನ ಕರುಗಳು; ತರಿಸು: ಬರೆಮಾಡು; ನೋಡು: ವೀಕ್ಷಿಸು; ಹಿಂಡು: ಗುಂಪು; ಕೋಟಿ: ಅಸಂಖ್ಯಾತ; ಸಂಖ್ಯೆ: ಎಣಿಕೆ; ಹರಿ: ಚಲಿಸುವ, ಹಾರು: ಎಗರುವ; ಪಂಟಿಸು: ಸುತ್ತುವರಿ, ಎದುರಿಸು; ಸೈವರಿ: ನೇರವಾಗಿ ಸಾಗು; ಮರಳು: ಹಿಂದಿರುಗು; ಮುರಿ: ಸೀಳು; ನಿಲುವ: ನಿಲ್ಲುವ; ಕರು: ಹಸು, ಎಮ್ಮೆಗಳ ಮರಿ; ನಗು: ಸಂತಸ; ನರೇಂದ್ರ: ರಾಜ; ಒಲವು: ಪ್ರೀತಿ;

ಪದವಿಂಗಡಣೆ:
ಕರೆಸಿದನು +ಕೀಲಾರಿಗಳನ್
ಆದರಿಸಿ +ಹಟ್ಟಿಯ +ತುರುಗಳೆಲ್ಲವ
ತರಿಸಿ +ನೋಡಿದನಲ್ಲಿ+ ಹಿಂಡಿನ +ಕೋಟಿ +ಸಂಖ್ಯೆಗಳ
ಹರಿವ +ಹಾರುವ +ಪಂಟಿಸುವ +ಸೈ
ವರಿವ +ಮರಳುವ+ ಮುರಿವ +ನಿಲುವ್+ಎಳೆ
ಕರುಗಳನು +ನೋಡಿದನು +ನಗುತ +ನರೇಂದ್ರನೊಲವಿನಲಿ

ಅಚ್ಚರಿ:
(೧) ನ ಕಾರದ ಸಾಲು ಪದ – ನಿಲುವೆಳೆಗರುಗಳನು ನೋಡಿದನು ನಗುತ ನರೇಂದ್ರನೊಲವಿನಲಿ
(೨) ಕರುಗಳ ವಿವರ – ಹರಿವ, ಹಾರುವ, ಪಂಟಿಸುವ, ಸೈವರಿವ, ಮರಳುವ, ಮುರಿವ, ನಿಲುವ

ಪದ್ಯ ೩೪: ತಂಗುವ ಜಾಗವನ್ನು ಹೇಗೆ ಸಿದ್ಧಪಡಿಸಿದರು?

ಅರಸ ಕೇಳೈ ದ್ವೈತವನ ಬಂ
ಧುರ ನದೀತೀರದಲಿ ವನದಲಿ
ಸರಸಿಯಲಿ ದೀರ್ಘಿಕೆಗಳಲಿ ನದದಲಿ ತಟಾಕದಲಿ
ಬೆರೆಸಿ ಬಿಟ್ಟುದು ಕೂಡೆ ವಾಳೆಯ
ವರಮನೆಯ ಗುಡಿ ನೆಗಹಿದವು ವಿ
ಸ್ತರಿಸಿದವು ಮಂಡವಿಗೆ ಲಾಯದ ಭದ್ರಭವನಗಳು (ಅರಣ್ಯ ಪರ್ವ, ೧೮ ಸಂಧಿ, ೩೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ದ್ವೈತವನದ ನದೀನದಗಳ ತೀರಗಳು, ಸರೋವರಗಳು ಕೊಳಗಳ ತೀರದಲ್ಲಿ ದುರ್ಯೋಧನನ ಪರಿವಾರ ಸೈನ್ಯಗಳು ಬೀಡು ಬಿಟ್ಟವು. ಗುಡಾರಗಳು, ಡೇರೆಗಳ ಮನೆಗಳನ್ನು ಭದ್ರವಾಗಿ ಕಟ್ಟಿದರು. ಅರಸನಿಗೆ ಒಂದು ಭವನವನ್ನು ಕಟ್ಟಿ ಅದರ ಮೇಲೆ ಧ್ವಜವನ್ನು ಹಾರಿಸಿದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಬಂಧುರ: ಸುಂದರವಾದ; ನದಿ: ಸರಸಿ; ತೀರ: ತಟ; ವನ: ಕಾಡು; ಸರಸಿ: ನೀರು; ದೀರ್ಘ: ಉದ್ದ; ನದ: ಗಂಡು ತೊರೆ; ತಟಾಕ: ಕೆರೆ, ಜಲಾಶಯ; ಬೆರೆಸು: ಕೂಡು, ಸೇರು; ಕೂಡೆ: ಜೊತೆ; ಪಾಳೆಯ: ಬೀಡು, ಶಿಬಿರ; ಅರಮನೆ: ರಾಜರ ಆಲಯ; ಗುಡಿ: ಕುಟೀರ, ಮನೆ; ನೆಗಹು: ಮೇಲೆತ್ತು; ವಿಸ್ತರಿಸು: ಹಬ್ಬು, ಹರಡು; ಮಂಡವಿಗೆ: ಡೇರೆ,ಮಂಟಪ; ಲಾಯ: ಅಶ್ವಶಾಲೆ; ಭದ್ರ: ಗಟ್ಟಿಯಾದ; ಭವನ: ಆಲಯ;

ಪದವಿಂಗಡಣೆ:
ಅರಸ +ಕೇಳೈ +ದ್ವೈತವನ +ಬಂ
ಧುರ +ನದೀತೀರದಲಿ +ವನದಲಿ
ಸರಸಿಯಲಿ +ದೀರ್ಘಿಕೆಗಳಲಿ +ನದದಲಿ +ತಟಾಕದಲಿ
ಬೆರೆಸಿ +ಬಿಟ್ಟುದು +ಕೂಡೆ +ವಾಳೆಯವ್
ಅರಮನೆಯ +ಗುಡಿ +ನೆಗಹಿದವು+ ವಿ
ಸ್ತರಿಸಿದವು +ಮಂಡವಿಗೆ +ಲಾಯದ +ಭದ್ರ+ಭವನಗಳು

ಪದ್ಯ ೩೩: ಯಾವ ಶಕುನಗಳು ದುರ್ಯೋಧನನು ನೋಡಿದನು?

ಅರಸ ಕೇಳಿವರತ್ತ ಪಯಣದ
ಭರದಿನೈತರೆ ಮುಂದೆ ವಾಯಸ
ವೆರಡು ತಮ್ಮೊಳು ಕದನ ಮುಖದಲಿ ವಾಮದೆಸೆಗಾಗಿ
ಪರಿದುವಲ್ಲಿಂ ಬಳಿಕ ಹಸುಬನ
ಸರವು ವಾಮದೆ ಗರ್ಧಭನ ಬಲ
ಕರಿಯ ಹಕ್ಕಿಯ ತಡೆಯ ಮನ್ನಿಸದೈದಿದನು ಭೂಪ (ಅರಣ್ಯ ಪರ್ವ, ೧೮ ಸಂಧಿ, ೩೩ ಪದ್ಯ)

ತಾತ್ಪರ್ಯ:
ಕೌರವನು ಪ್ರಯಾಣ ಮಾಡುತ್ತಿರಲು ಎರಡು ಕಾಗೆಗಳು ಜಗಳವಾಡುತ್ತಾ ಬಲದಿಂದ ಎಡಕ್ಕೆ ಹೋದವು, ಶಕುನದ ಹಕ್ಕಿಯು ಎಡದಲ್ಲಿ ಸುಳಿಯಿತು. ಕತ್ತೆಯು ಬಲಕ್ಕೆ ಕಾಣಿಸಿತು. ಕರಿಹಕ್ಕಿ ಅಡ್ಡಗಟ್ಟಿತು, ಶಕುನವನ್ನು ಲೆಕ್ಕಿಸದೆ ದುರ್ಯೋಧನನು ಪ್ರಯಾಣವನ್ನು ಮುಂದುವರಿಸಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಪಯಣ: ಪ್ರಯಾಣ; ಭರ: ಹೆಚ್ಚಳ, ಆಧಿಕ್ಯ, ವೇಗ; ಐತರು: ಬಂದು ಸೇರು; ಮುಂದೆ: ಅಗ್ರಭಾಗ; ವಾಯಸ: ಕಾಗೆ; ಕದನ: ಕಾಳಗ, ಜಗಳ; ಮುಖ: ಆನನ; ವಾಮ: ಎಡಭಾಗ; ದೆಸೆ: ದಿಕ್ಕು, ಕಾರಣ; ಪರಿದು:ಚಲಿಸು, ನಡೆ; ಬಳಿಕ: ನಂತರ; ಹಸುಬ: ಒಂದು ಬಗೆಯ ಹಕ್ಕಿ; ಸರ: ಉಲಿ, ಧ್ವನಿ; ವಾಮ: ಎಡಭಾಗ; ಗರ್ಧಭ: ಕತ್ತೆ; ತಡೆ: ಅಡ್ಡಗಟ್ಟು; ಮನ್ನಿಸು: ಶಮನಗೊಳಿಸು; ಭೂಪ: ರಾಜ;

ಪದವಿಂಗಡಣೆ:
ಅರಸ +ಕೇಳ್+ಇವರತ್ತ+ ಪಯಣದ
ಭರದಿನ್+ಐತರೆ +ಮುಂದೆ +ವಾಯಸವ್
ಎರಡು +ತಮ್ಮೊಳು +ಕದನ +ಮುಖದಲಿ +ವಾಮ+ದೆಸೆಗಾಗಿ
ಪರಿದುವಲ್ಲಿಂ +ಬಳಿಕ +ಹಸುಬನ
ಸರವು +ವಾಮದೆ +ಗರ್ಧಭನ +ಬಲ
ಕರಿಯ+ ಹಕ್ಕಿಯ +ತಡೆಯ +ಮನ್ನಿಸದ್+ಐದಿದನು +ಭೂಪ

ಅಚ್ಚರಿ:
(೧) ವಾಮ, ಬಲ – ವಿರುದ್ಧ ಪದಗಳು
(೨) ಶಕುನ ತೋರುವವರು – ವಾಯಸ, ಹಸುಬ, ಗರ್ಧಭ, ಕರಿಹಕ್ಕಿ

ಪದ್ಯ ೩೨: ಘೋಷಯಾತ್ರೆಗೆ ಯಾರು ಹೊರಟರು?

ನೆರೆದುದಗಣಿತ ವಂದಿಗಳು ಕವಿ
ವರರು ವಿದ್ವಾಂಸರು ವಿಧಾವಂ
ತರು ಸುನರ್ತಕ ಕಥಕ ಪರಿಹಾಸಕರು ಪಾಠಕರು
ಚರರು ಮಲ್ಲರು ಬೇಂಟೆಗಾರರು
ಪರಿಜನಾವಳಿ ಸಹಿತ ನಗರಾಂ
ತರದ ಪಯಣದ ಮೇಲೆ ಪಯಣದಲರಸನೈತಂದ (ಅರಣ್ಯ ಪರ್ವ, ೧೮ ಸಂಧಿ, ೩೨ ಪದ್ಯ)

ತಾತ್ಪರ್ಯ:
ಲೆಕ್ಕವಿಲ್ಲದಷ್ಟು ವಂದಿಮಾಗಧರು, ಕವಿಗಳು, ವಿದ್ವಾಂಸರು, ಆನೆ ಕುದುರೆಗಳ ಆಹಾರವನ್ನು ಸಿದ್ಧಪದಿಸುವವರು, ನರ್ತಕರು, ಕಥೆಗಾರರು, ವಿದೂಷಕರು, ಸ್ತುತಿಪಾಥಕರು, ಆಳುಗಳು, ಜಟ್ಟಿಗಳು, ಬೇಟೆಗಾರರು, ಮೊದಲಾದ ಪರಿಜನರೊಡನೆ ದುರ್ಯೋಧನನು ಪಯಣದ ಮೇಲೆ ಪಯಣ ಮಾಡುತ್ತಾ ಬಂದನು.

ಅರ್ಥ:
ನೆರೆ: ಪಕ್ಕ, ಪಾರ್ಶ್ವ, ಮಗ್ಗುಲು; ಅಗಣಿತ: ಅಸಂಖ್ಯಾತ; ವಂದಿ: ಹೊಗಳುಭಟ್ಟ; ಕವಿ: ಕಬ್ಬಿಗ, ಕಾವ್ಯವನ್ನು ರಚಿಸುವವನು; ವಿದ್ವಾಂಸ: ಜ್ಞಾನಿ, ಪಂಡಿತ; ವಿಧಾವಂತ: ಧಾರ್ಮಿಕ ರೀತಿಗಳನ್ನು ಬಲ್ಲವ; ನರ್ತಕ: ನೃತ್ಯಮಾಡುವವ; ಕಥಕ: ಕತೆಗಾರ; ಪರಿಹಾಸ: ವಿನೋದ, ಸರಸ; ಪಾಠಕ: ಸ್ತುತಿ ಪಾಠಕ; ಭಟ್ಟಂಗಿ, ಹೊಗಳುಭಟ್ಟ; ಚರ: ದೂತ; ಮಲ್ಲ: ಕುಸ್ತಿಪಟು, ಜಟ್ಟಿ; ಬೇಂಟೆಗಾರ: ಶಬರ, ಬೇಡ, ಕಿರಾತ; ಪರಿಜನ: ಸುತ್ತಲಿನ ಜನ, ಪರಿವಾರ; ಆವಳಿ: ಗುಂಪು; ಸಹಿತ: ಜೊತೆ; ನಗರ: ಊರು; ಪಯಣ: ಪ್ರಯಾಣ; ಐತಂದ: ಬಂದು ಸೇರು;

ಪದವಿಂಗಡಣೆ:
ನೆರೆದುದ್+ಅಗಣಿತ +ವಂದಿಗಳು +ಕವಿ
ವರರು +ವಿದ್ವಾಂಸರು +ವಿಧಾವಂ
ತರು +ಸುನರ್ತಕ +ಕಥಕ +ಪರಿಹಾಸಕರು +ಪಾಠಕರು
ಚರರು +ಮಲ್ಲರು +ಬೇಂಟೆಗಾರರು
ಪರಿಜನಾವಳಿ +ಸಹಿತ +ನಗರಾಂ
ತರದ +ಪಯಣದ +ಮೇಲೆ +ಪಯಣದಲ್+ಅರಸನ್+ಐತಂದ

ಅಚ್ಚರಿ:
(೧) ವಂದಿ, ವಿದ್ವಾಂಸ, ವಿಧಾವಂತ – ವ ಕಾರದ ಪದಗಳ ಬಳಕೆ

ಪದ್ಯ ೩೧: ಘೋಷಯಾತ್ರೆಗೆ ಯಾರು ಹೊರಟರು?

ಅರಸ ಕೇಳೈ ಹತ್ತು ಸಾವಿರ
ಕರಿಘಟಾವಳಿಯೆಂಟು ಸಾವಿರ
ವರ ವರೂಥವು ರಾವುತರ ವಾಘೆಯಲಿ ಹಯ ಕೋಟಿ
ಬಿರುದಿನಗ್ಗದ ಭಟರ ಸಂಖ್ಯೆಯ
ನರಿಯೆ ನಿಂತಿದು ಘೋಷಯಾತ್ರೆಯ
ಪರುಠವಣೆಗೊದಗಿದ ಚತುರ್ಬಲವವನಿಪಾಲಕನ (ಅರಣ್ಯ ಪರ್ವ, ೧೮ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕೌರವನ ಘೋಷಯಾತ್ರೆಗೆ ಹತ್ತುಸಾವಿರ ಆನೆಗಳು, ಎಂಟು ಸಾವಿರ ರಥಗಳು, ಲೆಕ್ಕವಿಲ್ಲದಷ್ಟು ರಾವುತರು, ಎಣಿಕೆಯಿಲ್ಲದಷ್ಟು ಬಲಿಷ್ಠರಾದ ಕಾಲಾಳುಗಳು, ಸಿದ್ಧರಾಗಿ ಹೊರಟರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಹತ್ತು: ದಶ; ಸಾವಿರ: ಸಹಸ್ರ; ಕರಿ: ಆನೆ; ಕರಿಘಟಾವಳಿ: ಆನೆಯ ಸಮೂಹ; ವರ: ಶ್ರೇಷ್ಠ; ವರೂಥ: ತೇರು, ರಥ; ರಾವುತ: ಅಶ್ವಾರೋಹಿ; ವಾಘೆ: ಲಗಾಮು; ಹಯ: ಕುದುರೆ; ಕೋಟಿ: ಅಸಂಖ್ಯತ; ಬಿರು: ಬಿರುಸಾದುದು; ಅಗ್ಗ: ಶ್ರೇಷ್ಠ; ಭಟ: ಯುದ್ಧದಲ್ಲಿ ಕಾದುವವನು, ಸೈನಿಕ; ಸಂಖ್ಯೆ:ಎಣಿಕೆ; ಅರಿ: ತಿಳಿ; ನಿಂತು: ನಿಲ್ಲು; ಘೋಷ: ಗಟ್ಟಿಯಾದ ಶಬ್ದ; ಯಾತ್ರೆ: ಪ್ರಯಾಣ; ಪರುಠವ: ವಿಸ್ತಾರ, ಹರಹು; ಒದಗು: ಲಭ್ಯ, ದೊರೆತುದು; ಚತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ಅವನಿಪಾಲಕ: ರಾಜ; ಅವನಿ: ಭೂಮಿ; ಪಾಲಕ: ರಕ್ಷಸುವ;

ಪದವಿಂಗಡಣೆ:
ಅರಸ+ ಕೇಳೈ +ಹತ್ತು +ಸಾವಿರ
ಕರಿಘಟಾವಳಿ+ಎಂಟು +ಸಾವಿರ
ವರ +ವರೂಥವು +ರಾವುತರ +ವಾಘೆಯಲಿ +ಹಯ +ಕೋಟಿ
ಬಿರುದಿನ್+ಅಗ್ಗದ +ಭಟರ +ಸಂಖ್ಯೆಯನ್
ಅರಿಯೆ+ನಿಂತಿದು +ಘೋಷಯಾತ್ರೆಯ
ಪರುಠವಣೆಗ್+ಒದಗಿದ +ಚತುರ್ಬಲವ್+ಅವನಿಪಾಲಕನ

ಅಚ್ಚರಿ:
(೧) ಚತುರ್ಬಲ ಸೈನ್ಯದ ವಿಸ್ತಾರ – ಹತ್ತು ಸಾವಿರ ಕರಿಘಟಾವಳಿ, ಎಂಟು ಸಾವಿರ ವರ ವರೂಥವು ರಾವುತರ ವಾಘೆಯಲಿ ಹಯ ಕೋಟಿ

ಪದ್ಯ ೩೦: ಯುವತಿಯರು ಹೇಗೆ ಪ್ರಯಾಣ ಪ್ರಾರಂಭಿಸಿದರು?

ಸವಡಿಯಾನೆಯ ಮೇಲೆ ಗಣಿಕಾ
ನಿವಹ ದಂಡಿಗೆಗಳಲಿ ಕೆಲಬರು
ಯುವತಿಯರು ಕೆಲರಶ್ವಚಯದಲಿ ರಥನಿಕಾಯದಲಿ
ಯುವತಿಮಯವೋ ಸೃಷ್ಟಿ ಗಣಿಕಾ
ಯುವತಿಯರ ನೆಲನೀದುದೋ ದಿಗು
ವಿವರ ಕರೆದುದೊ ಕಾಂತೆಯರನೆನೆ ಕವಿದುದಗಲದಲಿ (ಅರಣ್ಯ ಪರ್ವ, ೧೮ ಸಂಧಿ, ೩೦ ಪದ್ಯ)

ತಾತ್ಪರ್ಯ:
ಜೋಡಿ ಆನೆಗಳ ಮೇಲೆ, ಪಲ್ಲಕ್ಕಿಗಳಲ್ಲಿ, ಕುದುರೆಗಳ ಮೇಲೆ, ರಥಗಲಲ್ಲಿ, ಗಣಿಕಾಯುವತಿಯರು ಹೋಗುತ್ತಿದ್ದರೆ, ಸೃಷ್ಟಿಯಲ್ಲಿರುವುದು ಬರೀ ಯುವತಿಯರೋ, ನೆಲವು ಇಷ್ಟು ಜನ ಯುವತಿಯರನ್ನು ಸೃಜಿಸಿತೋ ಅಥವಾ ದಿಕ್ಕುಗಳು ಇವರನ್ನು ಕರೆದುಕೊಂಡು ಬಂದವೋ ಎನ್ನುವ ಹಾಗೆ ಕಾಣುತ್ತಿತ್ತು.

ಅರ್ಥ:
ಸವಡಿ: ಜೊತೆ, ಜೋಡಿ; ಆನೆ: ಗಜ; ಗಣಿಕ: ವೇಶ್ಯೆ; ನಿವಹ: ಗುಂಪು; ದಂಡಿಗೆ: ಪಲ್ಲಕ್ಕಿ; ಕೆಲಬರು: ಕೆಲವರು; ಯುವತಿ: ಹೆಣ್ಣು; ಅಶ್ವ: ಕುದುರೆ; ಚಯ: ಸಮೂಹ, ರಾಶಿ; ರಥ: ಬಂಡಿ; ನಿಕಾಯ: ಗುಂಪು; ಮಯ: ತುಂಬಿರುವುದು; ಸೃಷ್ಟಿ: ಉತ್ಪತ್ತಿ, ಹುಟ್ಟು; ನೆಲ:ಭೂಮಿ; ದಿಗು: ದಿಕ್ಕು; ವಿವರ: ವಿಸ್ತಾರ, ಹರಹು; ಕರೆದು: ಬರೆಮಾಡು; ಕಾಂತೆ: ಹೆಣ್ಣು; ಕವಿ: ಆವರಿಸು; ಅಗಲ: ವಿಸ್ತಾರ;

ಪದವಿಂಗಡಣೆ:
ಸವಡಿ+ಆನೆಯ +ಮೇಲೆ +ಗಣಿಕಾ
ನಿವಹ +ದಂಡಿಗೆಗಳಲಿ+ ಕೆಲಬರು
ಯುವತಿಯರು +ಕೆಲರ್+ಅಶ್ವ+ಚಯದಲಿ +ರಥ+ನಿಕಾಯದಲಿ
ಯುವತಿಮಯವೋ +ಸೃಷ್ಟಿ +ಗಣಿಕಾ
ಯುವತಿಯರ +ನೆಲನೀದುದೋ +ದಿಗು
ವಿವರ +ಕರೆದುದೊ +ಕಾಂತೆಯರನ್+ಎನೆ +ಕವಿದುದ್+ಅಗಲದಲಿ

ಅಚ್ಚರಿ:
(೧) ೩ ಸಾಲುಗಳಲ್ಲಿ ಯುವತಿ ಮೊದಲ ಪದವಾಗಿರುವುದು
(೨) ಗಣಿಕಾ – ೧, ೪ ಸಾಲಿನ ಕೊನೆ ಪದ
(೩) ಚಯ, ನಿಕಾಯ, ನಿವಹ; ಕಾಂತೆ, ಯುವತಿ – ಸಮನಾರ್ಥಕ ಪದ

ಪದ್ಯ ೨೯: ಗಗನವೇಕೆ ಕಾಣದಾಯಿತು?

ಬಿಗಿದ ಬೀಯಗ ಬದ್ದರದ ಬಂ
ಡಿಗಳು ರಾಣಿವಾಸದಂದಣ
ತೆಗೆದುವೊರಲುವ ಕಂಚುಕಿಗಳುಗ್ಗಡದ ರಭಸದಲಿ
ಗಗನವಡಗಿತು ಪಲ್ಲವದ ಸ
ತ್ತಿಗೆಯ ಸಾಲಿನ ಝಲ್ಲರಿಯ ಜಾ
ಡಿಗಳಲಾಡುವ ಚಮರ ಸೀಗುರಿಗಳ ಪತಾಕೆಯಲಿ (ಅರಣ್ಯ ಪರ್ವ, ೧೮ ಸಂಧಿ, ೨೯ ಪದ್ಯ)

ತಾತ್ಪರ್ಯ:
ಬೀಗ ಹಾಕಿ ಬಿಗಿ ಮಾಡಿದ ರಥಗಳು ಮತ್ತು ಪಲ್ಲಕ್ಕಿಗಳಲ್ಲಿ ರಾಣಿವಾಸದವರು ಹೊರಡಲು, ಮುಂದೆ ಕಂಚುಕಿಗಳು ದಾರಿ ಬಿಡಿಸಲು ಕೂಗುತ್ತಿದ್ದರು. ಚಾಮರ, ಕೊಡೆ, ಜಾಲರಿಗಳ ಆಟದಿಂದ ಆಕಾಶವು ಕಾಣದಾಯಿತು.

ಅರ್ಥ:
ಬಿಗಿ: ಭದ್ರವಾಗಿ; ಬೀಯಗ: ಬಂಧು; ಬದ್ದರ: ಮಂಗಳಕರವಾದುದು; ಬಂಡಿ: ರಥ; ರಾಣಿ: ಅರಸಿ; ಅಂದಣ: ಚೆಲುವು; ತೆಗೆ: ಹೊರತರು; ಒರಲು: ಅರಚು, ಕೂಗಿಕೊಳ್ಳು; ಕಂಚುಕಿ: ಅಂತಃಪುರದ ಅಧಿಕಾರಿ; ಉಗ್ಗಡ: ಶ್ರೇಷ್ಠತೆ; ರಭಸ: ವೇಗ; ಗಗನ: ಆಗಸ; ಅಡಗು: ಮುಚ್ಚು; ಪಲ್ಲವ: ಮೊಳಕೆ, ಚಿಗುರು; ಸತ್ತಿಗೆ: ಕೊಡೆ, ಛತ್ರಿ; ಸಾಲು: ಪಂಕ್ತಿ, ಶ್ರೇಣಿ; ಝಲ್ಲರಿ: ಕುಚ್ಚು; ಜಾಡಿ: ಸಂದಣಿ, ದಟ್ಟಣೆ; ಆಡು: ಕ್ರೀಡಿಸು; ಸೀಗುರಿ: ಚಾಮರ; ಪತಾಕೆ: ಬಾವುಟ;

ಪದವಿಂಗಡಣೆ:
ಬಿಗಿದ +ಬೀಯಗ +ಬದ್ದರದ+ ಬಂ
ಡಿಗಳು +ರಾಣಿವಾಸದ್+ಅಂದಣ
ತೆಗೆದುವ್+ಒರಲುವ+ ಕಂಚುಕಿಗಳ್+ಉಗ್ಗಡದ +ರಭಸದಲಿ
ಗಗನವ್+ಅಡಗಿತು +ಪಲ್ಲವದ+ ಸ
ತ್ತಿಗೆಯ +ಸಾಲಿನ +ಝಲ್ಲರಿಯ +ಜಾ
ಡಿಗಳಲ್+ಆಡುವ +ಚಮರ +ಸೀಗುರಿಗಳ +ಪತಾಕೆಯಲಿ

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಬಿಗಿದ ಬೀಯಗ ಬದ್ದರದ ಬಂಡಿಗಳು