ಪದ್ಯ ೧೮: ಅರ್ಜುನನು ಹೇಗೆ ಕಂಡನು?

ಆತನೆಡವಂಕದಲಿ ಹನುಮನ
ಕೇತನದ ಗರುವಾಯಿಯಲಿ ನವ
ಶಾತಕುಂಭವರೂಥದಲಿ ನೆರೆ ತೀವಿದಸ್ತ್ರದಲಿ
ನೂತನಾಶ್ವನಿಕಾಯ ಖುರಪುಟ
ಧೂತಧೂಳೀಪಟಲವಿಹಿತ ನಿ
ಶಾತಘನ ಜಯಯುವತಿವಿಟನರ್ಜುನನ ನೋಡೆಂದ (ಭೀಷ್ಮ ಪರ್ವ, ೨ ಸಂಧಿ, ೧೮ ಪದ್ಯ)

ತಾತ್ಪರ್ಯ:
ಧರ್ಮಜನ ಎಡಭಾಗದಲ್ಲಿ ಹನುಮನ ಧ್ವಜವನ್ನು ಕಟ್ಟಿರುವ, ಬಂಗಾರದ ರಥದಲ್ಲಿ ಶಸ್ತ್ರ ಸನ್ನಾಹದಿಂದಿರುವವನು ಅರ್ಜುನ. ಅವನ ರಥಕ್ಕೆ ದಿವ್ಯಾಶ್ವಗಳ ಖುರಪುಟದಿಂದೆದ್ದ ಧೂಳು ಆವರಿಸಿದೆ, ಮಹಾ ಜಯಯುವತಿಯನ್ನು ಕಾಮಿಸುವವನಾದ ಅರ್ಜುನನನ್ನು ನೋಡು ಎಂದು ಭೀಷ್ಮರು ಹೇಳಿದರು.

ಅರ್ಥ:
ಎಡ: ವಾಮಭಾಗ; ಅಂಕ: ಸ್ಥಳ; ಕೇತನ: ಬಾವುಟ; ಗರುವಾಯಿ: ಠೀವಿ; ನವ: ಹೊಸ; ಶಾತಕುಂಭ: ಚಿನ್ನ, ಹೊನ್ನು; ವರೂಥ: ತೇರು, ರಥ; ನೆರೆ: ಗುಂಪು; ತೀವು: ತುಂಬು; ಅಸ್ತ್ರ: ಶಸ್ತ್ರ, ಆಯುಧ; ನೂತನ: ಹೊಸ; ಅಶ್ವ: ಕುದುರೆ; ನಿಕಾಯ: ಗುಂಪು; ಖುರಪುಟ: ಗೊರಸು; ಧೂತ: ನಿವಾರಣೆ; ಧೂಳೀಪಟಲ: ಧೂಳಿನ ಸಮೂಹ; ವಿಹಿತ: ಹೊಂದಿಸಿದ; ನಿಶಾತಘನ: ತೀವ್ರವಾದ ಮೋಡ; ಜಯ: ಗೆಲುವು; ಯುವತಿ: ಹೆಣ್ಣು; ವಿಟ: ಕಾಮುಕ;

ಪದವಿಂಗಡಣೆ:
ಆತನ್+ಎಡವ್+ಅಂಕದಲಿ +ಹನುಮನ
ಕೇತನದ +ಗರುವಾಯಿಯಲಿ +ನವ
ಶಾತಕುಂಭ+ವರೂಥದಲಿ +ನೆರೆ +ತೀವಿದ್+ಅಸ್ತ್ರದಲಿ
ನೂತನ+ಅಶ್ವ+ನಿಕಾಯ +ಖುರಪುಟ
ಧೂತ+ಧೂಳೀಪಟಲ+ವಿಹಿತ +ನಿ
ಶಾತಘನ +ಜಯ+ಯುವತಿ+ವಿಟನ್+ಅರ್ಜುನನ +ನೋಡೆಂದ

ಅಚ್ಚರಿ:
(೧) ಅರ್ಜುನನನ್ನು ಕರೆದ ಪರಿ – ನಿಶಾತಘನ ಜಯಯುವತಿವಿಟ
(೨) ಅರ್ಜುನನ ಗುರುತನ್ನು ತೋರುವ ಪರಿ – ಹನುಮನ ಕೇತನದ ಗರುವಾಯಿಯಲಿ ನವ
ಶಾತಕುಂಭವರೂಥದಲಿ ನೆರೆ ತೀವಿದಸ್ತ್ರದಲಿ

ಪದ್ಯ ೧೪: ಅಶ್ವತ್ಥಾಮನು ಕರ್ಣನನ್ನು ಹೇಗೆ ಹಂಗಿಸಿದನು?

ಭಟನು ನಾನಿರಲುಭಯ ರಾಯರ
ಕಟಕದೊಳಗಿನ್ನಾವನೆಂದು
ಬ್ಬಟೆಯ ನುಡಿಗಳ ನುಡಿದು ಬಾಚಿದೆ ಕೌರವನ ಧನವ
ಭಟನು ಫಲುಗುಣನಹನು ತೋರಾ
ಪಟುತನವನೆಲೆಯಪಜಯಸ್ತ್ರೀ
ವಿಟನೆ ವಿಹ್ವಲನಾದೆಯೆಂದನು ದ್ರೋಣಸುತ ನಗುತ (ವಿರಾಟ ಪರ್ವ, ೯ ಸಂಧಿ, ೧೪ ಪದ್ಯ)

ತಾತ್ಪರ್ಯ:
ಕೌರವ ಪಾಂಡವರಿಬ್ಬರ ಸೈನ್ಯಗಳಲ್ಲೂ ನನ್ನಂತಹ ಇನ್ನಾವ ವೀರನಿದ್ದಾನೆ ಎಂದು ಜಂಬಕೊಚ್ಚಿಕೊಳ್ಳುತ್ತಿದ್ದೆ, ಕೌರವನ ಹಣವನ್ನು ಬಾಚಿಕೊಂಡು ತಿಂದೆ, ವೀರನೆಂದರೆ ಅರ್ಜುನ, ಎಲವೋ ಅಪಕೀರ್ತಿಸ್ತ್ರೀಯ ಕಾಮುಕನೇ, ಅವನ ಮೇಲೆ ನಿನ್ನ ಪರಾಕ್ರಮವನ್ನು ತೋರಿಸು, ಈಗ ಒದೆತಿಂದು ಕಳವಳಗೊಂಡಿರುವೆ ಎಂದು ಅಶ್ವತ್ಥಾಮನು ನಗುತ್ತಾ ಹಂಗಿಸಿದನು.

ಅರ್ಥ:
ಭಟ: ಸೈನಿಕ; ಉಭಯ: ಎರಡು; ರಾಯ: ರಾಜ; ಕಟಕ: ಸೈನ್ಯ; ಉಬ್ಬಟೆ: ಅತಿಶಯ, ಹಿರಿಮೆ; ನುಡಿ: ಮಾತು; ಬಾಚು: ಎಳೆದುಕೊಳ್ಳು, ಸೆಳೆ; ಧನ: ಐಶ್ವರ್ಯ; ಪಟುತನ: ಸಾಮರ್ಥ್ಯ; ಅಪಜಯ: ಸೋಲು; ಸ್ತ್ರೀ: ಹೆಂಗಸು; ವಿಟ: ಕಾಮುಕ, ವಿಷಯಾಸಕ್ತ; ವಿಹ್ವಲ: ಹತಾಶ; ಸುತ: ಮಗ; ನಗು: ಹರ್ಷ;

ಪದವಿಂಗಡಣೆ:
ಭಟನು +ನಾನಿರಲ್+ಉಭಯ +ರಾಯರ
ಕಟಕದೊಳಗ್+ಇನ್ನಾವನೆಂದ್
ಉಬ್ಬಟೆಯ +ನುಡಿಗಳ +ನುಡಿದು +ಬಾಚಿದೆ +ಕೌರವನ+ ಧನವ
ಭಟನು +ಫಲುಗುಣನಹನು +ತೋರಾ
ಪಟುತನವನ್+ಎಲೆ+ಅಪಜಯಸ್ತ್ರೀ
ವಿಟನೆ+ ವಿಹ್ವಲನಾದೆ+ಎಂದನು +ದ್ರೋಣಸುತ +ನಗುತ

ಅಚ್ಚರಿ:
(೧) ಕರ್ಣನನ್ನು ಹಂಗಿಸುವ ಪರಿ – ಪಟುತನವನೆಲೆಯಪಜಯಸ್ತ್ರೀವಿಟನೆ ವಿಹ್ವಲನಾದೆ

ಪದ್ಯ ೩೭: ದುರ್ಯೋಧನನು ಯಾರಿಗೆ ಗೋವುಗಳನ್ನು ನೀಡಿದನು?

ತರಿಸಿ ಹೋರಿಯ ಗವಿಯ ಗೂಳಿಯ
ಬರಿಸಿದನು ಕೆಲಕೆಲವ ಕೃಷಿಕರಿ
ಗಿರಿಸಿದನು ಗೋಲಕ್ಷವಿತ್ತನು ವಿಪ್ರಸಂಕುಲಕೆ
ಕರೆಸಿಕೊಟ್ಟನು ಭಟ್ಟರಿಗೆ ಮ
ಲ್ಲರಿಗೆ ವಿಟರಿಗೆ ನಟ ವಿಧಾವಂ
ತರಿಗೆ ಬಹುವಿಧ ಬಹಳ ವಮ್ದಿಗೆ ಮಾಗಧವ್ರಜಕೆ (ಅರಣ್ಯ ಪರ್ವ, ೧೮ ಸಂಧಿ, ೩೭ ಪದ್ಯ)

ತಾತ್ಪರ್ಯ:
ದುರ್ಯೋಧನನು ಹೋರಿಗಳನ್ನೂ ಹಸುಗಳನ್ನೂ ತರಿಸಿ, ಕೆಲಸವನ್ನು ಕೃಷಿಕರಿಗೆ ನೀಡಿದನು. ಬ್ರಾಹ್ಮಣರಿಗೆ ಲಕ್ಷ ಗೋವುಗಳನ್ನು ಕೊಟ್ಟನು. ಭಟ್ಟರು, ವಂದಿಮಾಗಧರು ಮಲ್ಲರು, ವಿಟರು, ನಟರು, ಆನೆ ಕುದುರೆಗಳ ಆರೈಕೆಗಾರರುಗಳನ್ನು ಕರೆಸಿ ಗೋವುಗಳನ್ನು ನೀಡಿದನು.

ಅರ್ಥ:
ತರಿಸು: ಹೊಂದಿಸು; ಹೋರಿ: ಗೂಳಿ; ಗವಿ: ನೆಲೆ, ಆಶ್ರಯಸ್ಥಾನ; ಗೂಳಿ: ಎತ್ತು, ವೃಷಭ; ಬರಿಸು: ಬರೆಮಾಡು; ಕೆಲ: ಕೊಂಚ, ಸ್ವಲ್ಪ; ಕೆಲವ: ಕೆಲಸ; ಕೃಷಿಕ: ರೈತ; ಗೋ: ಗೋವು; ವಿತ್ತು: ನೀಡು; ವಿಪ್ರ: ಬ್ರಾಹ್ಮಣ; ಸಂಕುಲ: ಗುಂಪು; ಕರೆಸಿ: ಬರೆಮಾಡು; ಭಟ್ಟ: ವಿದ್ವಾಂಸ, ಪಂಡಿತ; ಮಲ್ಲ: ಜಟ್ಟಿ; ವಿಟ:ಜಾರ, ಕಾಮುಕ; ನಟ: ನಟನೆ ಮಾಡುವವ; ವಿಧಾವಂತ: ಆನೆ ಕುದುರೆಗಳನ್ನು ಆರೈಕೆ ಮಾಡುವವ; ಬಹುವಿಧ: ಹಲವಾರು; ಬಹಳ: ತುಂಬ; ವಂದಿಮಾಗಧ: ಹೊಗಳುಭಟ್ಟ; ವ್ರಜ: ಗುಂಪು;

ಪದವಿಂಗಡಣೆ:
ತರಿಸಿ +ಹೋರಿಯ +ಗವಿಯ +ಗೂಳಿಯ
ಬರಿಸಿದನು +ಕೆಲಕೆಲವ +ಕೃಷಿಕರಿಗ್
ಇರಿಸಿದನು +ಗೋಲಕ್ಷವಿತ್ತನು+ ವಿಪ್ರ+ಸಂಕುಲಕೆ
ಕರೆಸಿಕೊಟ್ಟನು +ಭಟ್ಟರಿಗೆ+ ಮ
ಲ್ಲರಿಗೆ+ ವಿಟರಿಗೆ+ ನಟ +ವಿಧಾವಂ
ತರಿಗೆ+ ಬಹುವಿಧ +ಬಹಳ+ ವಂದಿಗೆ +ಮಾಗಧ+ವ್ರಜಕೆ

ಅಚ್ಚರಿ:
(೧) ತರಿಸಿ, ಕರೆಸಿ, ಬರಿಸಿ, ಇರಿಸಿ – ಪ್ರಾಸ ಪದಗಳು
(೨) ಹಲವು ರೀತಿಯ ಜನರು – ಭಟ್ಟ, ಮಲ್ಲ, ವಿಟ, ನಟ, ವಿಧಾವಂತ, ವಂದಿ, ಮಾಗಧ

ಪದ್ಯ ೩೪: ಉತ್ತರೆಯ ಸೌಂದರ್ಯವನ್ನು ಕುಮಾರವ್ಯಾಸ ಹೇಗೆ ವರ್ಣಿಸುತ್ತಾರೆ?

ಐದು ಶರವೇಕೊಂದು ಬಾಣವಿ
ದೈದದೇಯಿನ್ನಮಮ ಕಾಮನ
ಕೈದುಗಾರತನಕ್ಕೆ ಕೋಡದೆ ಕೊಂಕದಿಹರಾರು
ಒಯ್ದುಕೊಳ್ಳನೆ ಮುನಿಮನವನಡ
ಹಾಯ್ದು ಹಿಡಿಯನೆ ಹಿರಿಯರನು ವಿಧಿ
ಕೊಯ್ದನಕಟಾ ಕೊರಳನೆಂದುದು ನಗುತ ವಿಟನಿಕರ (ವಿರಾಟ ಪರ್ವ, ೬ ಸಂಧಿ, ೩೪ ಪದ್ಯ)

ತಾತ್ಪರ್ಯ:
ಮನ್ಮಥನಿಗೆ ಜನರ ಮನಸ್ಸನ್ನು ಕಾಮದ ಬಲೆಗೆ ಬೀಸಲು ಐದು ಹೂವಿನ ಬಾಣಗಳ ಅಗತ್ಯವಿಲ್ಲ ಉತ್ತರೆಯೇ ಸಾಕು, ಮನ್ಮಥನ ಬಿಲ್ಲುಗಾರತನಕ್ಕೆ ಹೆದರದೆ ಉದ್ವೇಗಗೊಳ್ಳದೆ ಇರುವವರು ಯಾರಿದ್ದಾರೆ? ಮುನಿಗಳ ಮನಸ್ಸನ್ನೂ, ಹಿರಿಯರನೂ ಅಡ್ಡಗಟ್ಟಿ ಸೆಳೆದುಕೊಳ್ಳುವದೆ ಕಾಮನು ಬಿಡುವುದಿಲ್ಲ. ವಿಧಿಯು ನಮ್ಮ ಕೊರಳನ್ನು ಕೊಯ್ದುಹಾಕಿದೆ ಎಂದು ವಿಟರು ಮಾತನಾಡಿದರು.

ಅರ್ಥ:
ಐದು: ಪಂಚ; ಶರ: ಬಾಣ; ಒಂದು: ಏಕ; ಕಾಮ: ಮನ್ಮಥ; ಕೈದು:ಆಯುಧ; ಕೊಡು: ನೀಡು; ಕೊಂಕ: ಅಸತ್ಯ; ಒಯ್ದು: ಎಳೆದು; ಮುನಿ: ಋಷಿ; ಮನ: ಮನಸ್ಸು; ಹಾಯ್ದು: ಮೇಲೆ ಬಿದ್ದು; ಹಿಡಿ: ಬಂಧಿಸು; ಹಿರಿಯ: ದೊಡ್ಡವ; ವಿಧಿ: ಬ್ರಹ್ಮ, ನಿಯಮ; ಕೊಯ್ದು: ಸೀಳು; ಅಕಟಾ: ಅಯ್ಯೋ; ಕೊರಳು: ಕತ್ತು; ನಗು: ಸಂತೋಷ; ವಿಟ: ನಾಲ್ಕು ವರ್ಗದ ಪುರುಷರಲ್ಲಿ ಶ್ರೇಷ್ಠನಾದವ; ನಿಕರ: ಗುಂಪು;

ಪದವಿಂಗಡಣೆ:
ಐದು +ಶರವೇಕೆ+ಎಂದು+ಬಾಣವಿದ್
ಐದದೇಯಿನ್ನ+ಮಮ+ ಕಾಮನ
ಕೈದು+ಗಾರತನಕ್ಕೆ+ ಕೋಡದೆ +ಕೊಂಕದಿಹರಾರು
ಒಯ್ದು+ಕೊಳ್ಳನೆ +ಮುನಿ+ಮನವನ್+ಅಡ
ಹಾಯ್ದು +ಹಿಡಿಯನೆ +ಹಿರಿಯರನು +ವಿಧಿ
ಕೊಯ್ದನ್+ಅಕಟಾ +ಕೊರಳ+ನೆಂದುದು +ನಗುತ +ವಿಟನಿಕರ

ಅಚ್ಚರಿ:
(೧) ಐದು, ಕೈದು; ಒಯ್ದು, ಹಾಯ್ದು – ಪ್ರಾಸ ಪದಗಳು
(೨) ‘ಕ’ ಕಾರದ ಜೋಡಿ ಪದ – ಕಾಮನ ಕೈದುಗಾರತನಕ್ಕೆ ಕೋಡದೆ ಕೊಂಕದಿಹರಾರು
(೩) ‘ಹ’ ಕಾರದ ಜೋಡಿ ಪದ – ಹಾಯ್ದು ಹಿಡಿಯನೆ ಹಿರಿಯರನು

ಪದ್ಯ ೩೩: ಉತ್ತರೆಯ ನಡಿಗೆಯನ್ನು ಜನರು ಹೇಗೆ ನೋಡಿದರು?

ತಾಯೆ ನೀನೇ ಹೋಗಿ ಸೂತನ
ತಾಯೆನಲು ಕೈಕೊಂಡು ಕಮಲದ
ಳಾಯತಾಕ್ಷಿ ಮನೋಭವನ ಮರಿಯಾನೆಯಂದದಲಿ
ರಾಯ ಕುವರಿ ನವಾಯಿಗತಿ ಗರು
ವಾಯಿಯಲಿ ಬರೆ ವಿಟರ ಕರಣದ
ಲಾಯ ತೊಡಕಿತು ತೆಗೆದಳಂಗನೆ ಜನರ ಕಣ್ಮನವ (ವಿರಾಟ ಪರ್ವ, ೬ ಸಂಧಿ, ೩೩ ಪದ್ಯ)

ತಾತ್ಪರ್ಯ:
ಸೈರಂಧ್ರಿಯು ಉತ್ತರೆಯ ಬಳಿ ಬಂದು ತಾಯೆ, ನೀವೆ ಹೋಗಿ ಸಾರಥಿಯನ್ನು ಕರೆಯಿರಿ ಎನಲು, ಅವಳ ಕೋರಿಕೆಯನ್ನು ಒಪ್ಪಿದ ಉತ್ತರೆಯು, ಮನ್ಮಥನ ಮರಿಯಾನೆಯಂತೆ ನವೀನ ಗಂಭೀರ ನಡೆಯಲ್ಲಿ ಬರಲು ಪುರುಷರ ಇಂದ್ರಿಯಗಳು ಅವಳಲ್ಲಿಯೇ ತೊಡಕಿಕೊಂಡವು, ಜನರ ಕಣ್ಣು ಮತ್ತು ಮನಸ್ಸುಗಳು ಅವಳಲ್ಲಿ ನೆಟ್ಟವು.

ಅರ್ಥ:
ತಾಯೆ: ಮಾತೆ; ಹೋಗು: ನಿರ್ಗಮಿಸು; ಸೂತ: ದೂತ; ತಾ: ಕರೆದುಕೊಂಡು ಬಾ; ಕೈ: ಕರ, ಹಸ್ತ; ಕಮಲ: ವಾರಿಜ; ಅಕ್ಷಿ: ಕಣ್ಣು; ಮನೋಭವ: ಮನ್ಮಥ; ಮರಿ: ಚಿಕ್ಕ; ಆನೆ: ಕರಿ; ರಾಯ: ರಾಜ; ಕುವರಿ: ಹುಡುಗಿ; ನವಾಯಿ: ಹೊಸರೀತಿ, ಠೀವಿ; ಗತಿ: ವೇಗ; ಗರುವ: ಶ್ರೇಷ್ಠ; ಬರೆ: ಬರಲು; ವಿಟ: ನಾಲ್ಕು ವರ್ಗದ ಪುರುಷರಲ್ಲಿ ಶ್ರೇಷ್ಠನಾದವ; ಕರಣ: ಜ್ಞಾನೇಂದ್ರಿಯ, ಕಿವಿ, ಮನಸ್ಸು; ತೊಡಕು: ಸಿಕ್ಕಿಕೊಳ್ಳು; ತೆಗೆ: ಈಚೆಗೆ ತರು; ಅಂಗನೆ: ಸುಂದರಿ; ಜನ: ಮನುಷ್ಯರ ಗುಂಪು; ಕಣ್ಣು: ನಯನ; ಮನ: ಮನಸ್ಸು; ಆಯತ: ವಿಶಾಲವಾದ; ದಳ: ಎಲೆ, ಎಸಳು; ಲಾಯ: ಸ್ಥಳ;

ಪದವಿಂಗಡಣೆ:
ತಾಯೆ+ ನೀನೇ +ಹೋಗಿ +ಸೂತನ
ತಾ+ಯೆನಲು+ ಕೈಕೊಂಡು+ ಕಮಲದ
ಳಾಯತ+ಅಕ್ಷಿ +ಮನೋಭವನ+ ಮರಿಯಾನೆ+ಯಂದದಲಿ
ರಾಯ +ಕುವರಿ +ನವಾಯಿಗತಿ+ ಗರು
ವಾಯಿಯಲಿ +ಬರೆ+ ವಿಟರ+ ಕರಣದ
ಲಾಯ +ತೊಡಕಿತು +ತೆಗೆದಳ್+ಅಂಗನೆ+ ಜನರ+ ಕಣ್ಮನವ

ಅಚ್ಚರಿ:
(೧) ಉತ್ತರೆಯ ಸೌಂದರ್ಯದ ನಡಿಗೆಯ ವರ್ಣನೆ: ಮನೋಭವನ ಮರಿಯಾನೆಯಂದದಲಿ ನವಾಯಿಗತಿ ಗರುವಾಯಿಯಲಿ ಬರೆ ವಿಟರ ಕರಣದ ಲಾಯ ತೊಡಕಿತು
(೨) ತಾಯೆ – ೧, ೨ ಸಾಲಿನ ಮೊದಲ ಪದ, ಬೇರೆ ಅರ್ಥವನ್ನು ನೀಡುವ ಪದಗಳ ಜೋಡಣೆ
(೩) ರಾಯಕುವರಿ – ಉತ್ತರೆಯನ್ನು ವರ್ಣಿಸಲು ಬಳಸಿದ ಪದ
(೪) ಜೋಡಿ ಪದಗಳು – ‘ಮ’ – ಮನೋಭವನ ಮರಿಯಾನೆ; ‘ತ’ – ತೊಡಕಿತು ತೆಗೆದಳಂಗನೆ; ‘ಕ’ – ಕೈಕೊಂಡು ಕಮಲದಳಾಯತಾಕ್ಷಿ
(೫) ಮನಸ್ಸಿನಲ್ಲಿದವ – ಮನೋಭವ – ಮನ್ಮಥ