ಪದ್ಯ ೧೪: ಪಾಂಡು ಯಾವ ವಿಪತ್ತಿಗೆ ಗುರಿಯಾದ?

ಬಂದುದಾ ಪಾಂಡುವಿಗೆ ನಿನ್ನಯ
ತಂದೆಗಾದ ವಿಪತ್ತಿನಂದದ
ಲೊಂದು ಠಾವಿನೊಳೊಬ್ಬ ಮುನಿ ಮೃಗಮಿಥುನ ರೂಪಿನಲಿ
ನಿಂದು ರಮಿಸುತ್ತಿರೆ ಮೃಗದ್ವಯ
ವೆಂದು ಹೂಡಿದನಂಬಿನಿಬ್ಬರಿ
ಗೊಂದು ಶರದಲಿ ಕೀಲಿಸಿದಡೊರಲಿದರು ನರರಾಗಿ (ಆದಿ ಪರ್ವ್, ೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ನಿನ್ನ ತಮ್ದೆಗೆ ವಿಪತ್ತು ಬಂದ ರೀತಿಯೇ ಪಾಂಡು ಮಹಾರಾಜನಿಗೂ ವಿಪತ್ತು ಬಂದೊದಗಿತು. ಪಾಂಡುವು ಒಂದು ಜಾಗದಲ್ಲಿ ಒಬ್ಬ ಮುನಿಯು ತನ್ನ ಪತ್ನಿಯೊಂದಿಗೆ ಜಿಂಕೆಗಳ ರೂಪವನ್ನು ತಾಳಿ ರಮಿಸುತ್ತಿದ್ದುದನ್ನು ಕಂಡನು. ಇವು ಸಾಧಾರಣ ಜಿಂಕೆಗಳೆಂದು ತಿಳಿದು ಒಂದೇ ಬಾಣದಿಂದ ಅವೆರಡನ್ನೂ ಹೊಡೆದನು. ಬಾನವು ನಟ್ಟೊಡನೆ ಅವರಿಬ್ಬರೂ ಮನುಷ್ಯರಾಗಿ ಚೀರಿದರು.

ಅರ್ಥ:
ಬಂದು: ಆಗಮಿಸು; ಠಾವು: ಎಡೆ, ಸ್ಥಳ, ಜಾಗ; ಮುನಿ: ಋಷಿ; ಮೃಗ: ಪ್ರಾಣಿ, ಜಿಂಕೆ; ಮಿಥುನ: ಜೋಡಿ; ರೂಪು: ಆಕಾರ; ನಿಂದು: ನಿಲ್ಲು; ರಮಿಸು: ಪ್ರೇಮಿಸು; ದ್ವಯ: ಎರಡು; ಹೂಡು: ತೊಡು; ಅಂಬು: ಬಾಣ; ಶರ: ಬಾಣ; ಕೀಲಿಸು: ನಾಟು, ಚುಚ್ಚು; ನರ: ಮನುಷ್ಯ;

ಪದವಿಂಗಡಣೆ:
ಬಂದುದಾ +ಪಾಂಡುವಿಗೆ +ನಿನ್ನಯ
ತಂದೆಗಾದ +ವಿಪತ್ತಿನಂದದಲ್
ಒಂದು +ಠಾವಿನೊಳೊಬ್ಬ+ ಮುನಿ +ಮೃಗಮಿಥುನ +ರೂಪಿನಲಿ
ನಿಂದು +ರಮಿಸುತ್ತಿರೆ+ ಮೃಗ+ದ್ವಯವ್
ಎಂದು +ಹೂಡಿದನ್+ಅಂಬಿನ್+ಇಬ್ಬರಿಗ್
ಒಂದು +ಶರದಲಿ+ ಕೀಲಿಸಿದಡ್+ಒರಲಿದರು +ನರರಾಗಿ

ಅಚ್ಚರಿ:
(೧) ಬಂದು, ನಿಂದು, ಎಂದು, ಒಂದು – ಪ್ರಾಸ ಪದಗಳು
(೨) ಶರ, ಅಂಬು – ಸಮಾನಾರ್ಥಕ ಪದ

ಪದ್ಯ ೨೫: ಶಂತನು ಕಾಡಿನಲ್ಲಿ ಯಾರನ್ನು ಕಂಡನು?

ಪರಿಮಳದ ಬಳಿವಿಡಿದು ಬಂದೀ
ತರುಣಿಯನು ಕಂಡಾರು ನೀನೆಂ
ದರಸ ಬೆಸಗೊಳುತೆಸುವ ಕಾಮನ ಶರಕೆ ಮೈಯೊಡ್ಡಿ
ಅರಮನೆಗೆ ನಡೆಯೆನಲು ತಂದೆಯ
ಪರಮವಚನವಲಂಘ್ಯವೆನೆ ಕಾ
ತರಿಸಿ ಭಗ್ನಮನೋರಥನು ಮರಳಿದನು ಮಂದಿರಕೆ (ಆದಿ ಪರ್ವ, ೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ಶಂತನು ಬೇಟೆಯಾಡುತ್ತಿರುವಾಗ ಯೋಜನಗಮ್ಧಿಯ ಪದ್ಮಪುಷ್ಪದ ಸುವಾಸನೆಯು ಗಾಳಿಯಲ್ಲಿ ಬಂದಿತು. ಅವನು ಆ ದಾರಿಯನ್ನು ಹಿಡಿದು ಹೋಗಿ ಅವಳನ್ನು ಕಂಡು, ಮದನಶರಗಳಿಂದ ಗಾಯಗೊಂಡು ಅವಳಿಗೆ ನೀನು ಯಾರು? ಅರಮನೆಗೆ ಹೋಗೋಣ ಬಾ ಎಂದನು. ಅವಳು ನನ್ನ ತಂದೆಯ ಮಾತನ್ನು ದಾಟಲಾಗುವುದಿಲ್ಲ ಎಂದಳು. ಮನಸ್ಸು ಮುರಿದ ಶಂತನು ಕಾತರದಿಂದ ತನ್ನರಮನೆಗೆ ಹಿಂದಿರುಗಿದನು.

ಅರ್ಥ:
ಪರಿಮಳ: ಸುಗಂಧ; ಬಳಿ: ಹತ್ತಿರ; ಬಂದು: ಆಗಮಿಸು; ತರುಣಿ: ಹೆಣ್ಣು; ಕಂಡು: ನೋಡು; ಅರಸ: ರಾಜ; ಬೆಸಸು: ಹೇಳು; ಎಸು: ಬಾಣ ಪ್ರಯೋಗ; ಕಾಮ: ಮನ್ಮಥ; ಶರ: ಬಾಣ; ಮೈಯೊಡ್ಡು: ದೇಹವನ್ನು ತೋರು; ಅರಮನೆ: ರಾಜರ ಆಲಯ; ನಡೆ: ಚಲಿಸು; ತಂದೆ: ಪಿತ; ಪರಮ: ಶ್ರೇಷ್ಠ; ವಚನ: ಮಾತು; ಅಲಂಘ್ಯ: ದಾಟಲಸಾಧ್ಯವಾದ; ಕಾತರ: ಕಳವಳ; ಭಗ್ನ: ನಾಶ; ಮನೋರಥ: ಆಸೆ, ಬಯಕೆ; ಮರಳು: ಹಿಂದಿರುಗು; ಮಂದಿರ: ಆಲಯ, ಮನೆ;

ಪದವಿಂಗಡಣೆ:
ಪರಿಮಳದ +ಬಳಿವಿಡಿದು +ಬಂದ್ +ಈ
ತರುಣಿಯನು +ಕಂಡ್+ಆರು +ನೀನ್
ಎಂದ್+ಅರಸ +ಬೆಸಗೊಳುತ್+ಎಸುವ +ಕಾಮನ +ಶರಕೆ +ಮೈಯೊಡ್ಡಿ
ಅರಮನೆಗೆ +ನಡೆ+ಎನಲು +ತಂದೆಯ
ಪರಮ+ವಚನವ್+ಅಲಂಘ್ಯವ್+ಎನೆ +ಕಾ
ತರಿಸಿ +ಭಗ್ನ+ಮನೋರಥನು+ ಮರಳಿದನು +ಮಂದಿರಕೆ

ಅಚ್ಚರಿ:
(೧) ಮೋಹಗೊಂಡನು ಎಂದು ಹೇಳುವ ಪರಿ – ಎಸುವ ಕಾಮನ ಶರಕೆ ಮೈಯೊಡ್ಡಿ

ಪದ್ಯ ೪೨: ಕರ್ಣನು ಗದೆಯನ್ನು ಹೇಗೆ ನಾಶ ಮಾಡಿದನು?

ತಿರುಗುತೈತಹ ಪರಿಘ ಕಾಂತರೆ
ಗಿರಿಗಳಡಿ ಮೇಲಹವು ನಾವಿ
ನ್ನರಸ ಹೇಳುವುದೇನು ಕರ್ಣನ ಬಾಹುವಿಕ್ರಮವ
ಪರಿಘವದು ಪರಮಾಣುಮಯವಾ
ಯ್ತೆರಡುಶರದಲಿ ಸಾರಥಿಯನಿ
ಟ್ಟೊರಸಿದನು ಹದಿನೈದು ಶರದಲಿ ರಥದ ಕುದುರೆಗಳ (ದ್ರೋಣ ಪರ್ವ, ೧೬ ಸಂಧಿ, ೪೨ ಪದ್ಯ)

ತಾತ್ಪರ್ಯ:
ತಿರುಗುತ್ತಾ ಬಂದ ಗದೆಯನ್ನು ತಡೆದರೆ ಬೆಟ್ಟಗಳೇ ತಳಮೇಲಾಗಬೇಕು, ಆದರೆ ಧೃತರಾಷ್ಟ್ರ, ಕ್ಕರ್ಣನ ಭುಜಬಲವನ್ನು ಹೇಗೆ ವರ್ಣಿಸಲಿ. ಎರಡು ಬಾಣಗಳಿಗೆ ಆ ಗದೆಯು ಪುಡಿ ಪುಡಿಯಾಯಿತು. ಎರಡು ಬಾಣಗಳಿಂದ ಘಟೋತ್ಕಚನ ಸಾರಥಿಯನ್ನೂ ಹದಿನೈದು ಬಾಣಗಳಿಂದ ರಥದ ಕುದುರೆಗಳನ್ನೂ ಹೊಡೆದುರುಳಿಸಿದನು.

ಅರ್ಥ:
ತಿರುಗು: ವೃತ್ತಾಕಾರವಾಗಿ ಚಲಿಸು, ಸುತ್ತು; ಐತರು: ಬಂದು ಸೇರು; ಪರಿಘ: ಗದೆ; ಗಿರಿ: ಬೆಟ್ಟ; ಅಡಿ: ಕೆಳಗೆ; ಮೇಲೆ: ಎತ್ತರದಲ್ಲಿ; ಅರಸ: ರಾಜ; ಹೇಳು: ತಿಳಿಸು; ಬಾಹು: ತೋಳು ; ವಿಕ್ರಮ: ಪರಾಕ್ರಮ; ಪರಿಘ: ಗದೆ; ಪರಮಾಣು: ಅತ್ಯಂತ ಸಣ್ಣದಾದ ವಸ್ತು; ಶರ: ಬಾಣ; ಸಾರಥಿ: ಸೂತ; ಒರಸು: ನಾಶ; ರಥ: ಬಂಡಿ; ಕುದುರೆ: ಅಶ್ವ;

ಪದವಿಂಗಡಣೆ:
ತಿರುಗುತ್+ಐತಹ +ಪರಿಘ +ಕಾಂತರೆ
ಗಿರಿಗಳಡಿ +ಮೇಲಹವು +ನಾವಿನ್
ಅರಸ +ಹೇಳುವುದೇನು +ಕರ್ಣನ +ಬಾಹು+ವಿಕ್ರಮವ
ಪರಿಘವದು+ ಪರಮಾಣುಮಯವಾಯ್ತ್
ಎರಡು+ಶರದಲಿ +ಸಾರಥಿಯನಿಟ್ಟ್
ಒರಸಿದನು +ಹದಿನೈದು +ಶರದಲಿ +ರಥದ +ಕುದುರೆಗಳ

ಅಚ್ಚರಿ:
(೧) ಗದೆಯು ಪುಡಿಯಾಯಿತು ಎಂದು ಹೇಳುವ ಪರಿ – ಪರಿಘವದು ಪರಮಾಣುಮಯವಾಯ್ತೆರಡುಶರದಲಿ
(೨) ಗದೆಯ ಶಕ್ತಿಯನ್ನು ವರ್ಣಿಸುವ ಪರಿ – ತಿರುಗುತೈತಹ ಪರಿಘ ಕಾಂತರೆ ಗಿರಿಗಳಡಿ ಮೇಲಹವು

ಪದ್ಯ ೧೫: ಅರ್ಜುನನಿಗೆ ಭೂರಿಶ್ರವನು ಏನನ್ನು ಕೇಳಿದನು?

ಆರು ಕೊಟ್ಟರು ಶರವನಿದ ಮದ
ನಾರಿಯೋ ನಿಮ್ಮಯ್ಯನಹ ಜಂ
ಭಾರಿಯೋ ಮೇಣ್ ಕೃಷ್ಣ ದ್ರೋನರೊ ಹೇಳು ಹುಸಿಯದಿರು
ವೀರನಹೆಯೋ ಪಾರ್ಥ ನಿನ್ನವೊ
ಲಾರು ಬಿಲುಗಾರರು ಮಹಾಸ್ತ್ರವಿ
ದಾರು ಕಲಿಸಿದ ವಿದ್ಯವುಪಯೋಗಿಸಿತು ನಿನಗೆಂದ (ದ್ರೋಣ ಪರ್ವ, ೧೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೂರಿಶ್ರವನು ಮಾತನಾಡುತ್ತಾ, ಅರ್ಜುನ, ನಿನಗೆ ಈ ಭಾಣವನ್ನು ಕೊಟ್ಟವರಾರು? ಶಿವನೋ, ದೇವೇಂದ್ರನೋ, ಕೃಷ್ಣನೋ, ದ್ರೋಣನೋ, ಹೇಳು, ಸುಳ್ಳನ್ನು ಹೇಳಬೇಡ, ನೀನು ಶ್ರೇಷ್ಠ ಧನುರ್ಧರ, ನಿನ್ನ ಸಮಾನದ ವೀರನಾರು, ನೀನು ಬಳಸಿದ ಈ ಮಹಾಸ್ತ್ರವು ಯಾರು ಕಲಿಸಿದ ವಿದ್ಯೆ ಈ ದಿನ ನಿನ್ನ ಉಪಯೋಗಕ್ಕೆ ಬಂದಿತಲ್ಲವೇ ಎಂದು ಕೇಳಿದನು.

ಅರ್ಥ:
ಕೊಟ್ಟರು: ನೀಡಿದರು; ಶರ: ಬಾಣ; ಮದನಾರಿ: ಶಿವ; ಅಯ್ಯ: ತಂದೆ; ಜಂಭಾರಿ: ದೇವೇಂದ್ರ; ಮೇಣ್: ಅಥವ; ಹೇಳು: ತಿಳಿಸು; ಹುಸಿ: ಸುಳ್ಳು; ವೀರ: ಶೂರ; ಬಿಲುಗಾರ: ಬಿಲ್ವಿದ್ಯೆಯಲ್ಲಿ ನಿಪುಣ; ಅಸ್ತ್ರ: ಶಸ್ತ್ರ; ಕಲಿಸು: ಹೇಳಿಕೊಡು; ಉಪಯೋಗಿಸು: ಪ್ರಯೋಗಿಸು;

ಪದವಿಂಗಡಣೆ:
ಆರು +ಕೊಟ್ಟರು +ಶರವನ್+ ಇದ+ ಮದ
ನಾರಿಯೋ +ನಿಮ್ಮಯ್ಯನಹ ಜಂ
ಭಾರಿಯೋ +ಮೇಣ್ +ಕೃಷ್ಣ+ ದ್ರೋಣರೊ+ ಹೇಳು +ಹುಸಿಯದಿರು
ವೀರನಹೆಯೋ +ಪಾರ್ಥ +ನಿನ್ನವೊಲ್
ಆರು +ಬಿಲುಗಾರರು +ಮಹಾಸ್ತ್ರವಿದ್
ಆರು +ಕಲಿಸಿದ +ವಿದ್ಯ+ಉಪಯೋಗಿಸಿತು +ನಿನಗೆಂದ

ಅಚ್ಚರಿ:
(೧) ಶಿವ ಮತ್ತು ಇಂದ್ರನನ್ನು ಕರೆದ ಪರಿ – ಮದನಾರಿ, ಜಂಭಾರಿ

ಪದ್ಯ ೫೫: ಭೀಮನು ಎಷ್ಟು ಬಾಣಗಳನ್ನು ಬಿಟ್ಟು ಗರ್ಜಿಸಿದನು?

ಎರಡು ಶರದಲಿ ಸಾರಥಿಯ ಹೇ
ರುರವನೆಸೆಯಲು ಘಾಯದಲಿ ತರ
ಹರಿಸದವ ಹಾಯ್ದನು ಯುಧಾಮನ್ಯುವಿನ ಹೊರೆಗಾಗಿ
ಮರಳಿ ಹತ್ತಂಬಿನಲಿ ಭೀಮನ
ಕೆರಳಿಚಿದನಾರಂಬಿನಲಿ ಹ
ನ್ನೆರಡರಲಿ ಹದಿನೆಂಟರಲಿ ಮಗುಳೆಚ್ಚು ಬೊಬ್ಬಿರಿದ (ದ್ರೋಣ ಪರ್ವ, ೧೩ ಸಂಧಿ, ೫೫ ಪದ್ಯ)

ತಾತ್ಪರ್ಯ:
ಬಾಣಗಳಿಂದ ತಬ್ಬಿಬ್ಬಾಗದೆ ಭೀಮನು ಎರಡು ಕವಲಂಬುಗಳಿಂದ ಸಾರಥಿಯನ್ನು ಹೊಡೆದನು. ಆ ನೋವಿನಿಂದ ಸೈರಿಸುವಾಗಲೇ ಯುಧಾಮನ್ಯುವಿನ ರಕ್ಷಣೆಯಲ್ಲಿ ಹೋರಾಟ ಮಾಡಿದನು. ಮತ್ತೆ ಹತ್ತು ಬಾಣಗಳಲ್ಲಿ ಭೀಮನನ್ನು ಕೆರಳಿಸಿ, ಆರು, ಹನ್ನೆರಡು ಮತ್ತು ಹದಿನೆಂಟು ಬಾಣಗಳನ್ನು ಹೊಡೆದು ಗರ್ಜಿಸಿದನು.

ಅರ್ಥ:
ಶರ: ಬಾಣ; ಸಾರಥಿ: ಸೂತ; ಹೇರು: ಹೊರೆ, ಭಾರ; ಎಸೆ: ಹೊರತರು; ಘಾಯ: ಪೆಟ್ಟು; ತರಹರಿಸು: ತಡಮಾಡು, ಸೈರಿಸು; ಹಾಯ್ದು: ಹೊಡೆ; ಮರಳು: ಮತ್ತೆ; ಅಂಬು: ಬಾಣ; ಕೆರಳು: ರೇಗು, ಕೆದರು, ಹರಡು; ಮಗುಳು: ಮತ್ತೆ; ಬೊಬ್ಬಿರಿ: ಗರ್ಜಿಸು; ಹೊರೆ: ರಕ್ಷಣೆ, ಆಶ್ರಯ;

ಪದವಿಂಗಡಣೆ:
ಎರಡು +ಶರದಲಿ +ಸಾರಥಿಯ +ಹೇ
ರುರವನ್+ಎಸೆಯಲು +ಘಾಯದಲಿ +ತರ
ಹರಿಸದವ+ ಹಾಯ್ದನು +ಯುಧಾಮನ್ಯುವಿನ +ಹೊರೆಗಾಗಿ
ಮರಳಿ +ಹತ್ತಂಬಿನಲಿ +ಭೀಮನ
ಕೆರಳಿಚಿದನ್+ಆರಂಬಿನಲಿ +ಹ
ನ್ನೆರಡರಲಿ +ಹದಿನೆಂಟರಲಿ +ಮಗುಳ್+ಎಚ್ಚು +ಬೊಬ್ಬಿರಿದ

ಅಚ್ಚರಿ:
(೧) ಬಾಣಗಳ ಲೆಕ್ಕ – ಆರಂಬಿನಲಿ ಹನ್ನೆರಡರಲಿ ಹದಿನೆಂಟರಲಿ ಮಗುಳೆಚ್ಚು ಬೊಬ್ಬಿರಿದ

ಪದ್ಯ ೨೪: ಭೀಮ ಕರ್ಣರ ಯುದ್ಧವು ಹೇಗಿತ್ತು?

ಎಸಲು ಭೀಮನ ಬಾಣವನು ಖಂ
ಡಿಸಿದ ಮೂರಂಬಿನಲಿ ರವಿಸುತ
ನಸಮ ಸಾಹಸಿಯೆಚ್ಚಡೆಚ್ಚನು ಭೀಮ ಮರುಗಣೆಯ
ನಿಶಿತ ಶರವನು ಹತ್ತುಶರದಲಿ
ಕುಸುರಿದರಿದನು ಕರ್ಣನಿಬ್ಬರ
ದೆಸೆಗೆ ದೇವಾನೀಕ ಮೆಚ್ಚಿತು ಭೂಪ ಕೇಳೆಂದ (ದ್ರೋಣ ಪರ್ವ, ೧೩ ಸಂಧಿ, ೨೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಕರ್ಣನು ಭೀಮನ ಬಾಣಗಳನ್ನು ಕತ್ತರಿಸಿ ಮೂರು ಬಾಣಗಳನ್ನು ಭೀಮನ ಮೇಲೆ ಬಿಡಲು ಭೀಮನು ಅದಕ್ಕೆ ಪ್ರತಿಯಾಗಿ ಬಾಣಗಳನ್ನು ಬಿಟ್ಟನು. ಕರ್ಣನು ಹತ್ತು ಬಾಣಗಳಿಂದ ಭೀಮನ ಬಾಣಗಲನ್ನು ಕಡಿದನು. ದೇವತೆಗಳು ಇವರಿಬ್ಬರ ಸಾಹಸವನ್ನು ಮೆಚ್ಚಿದರು.

ಅರ್ಥ:
ಎಸಲು: ಬಾಣ ಪ್ರಯೋಗ ಮಾಡು; ಬಾಣ: ಅಂಬು; ಖಂಡಿಸು: ತುಂಡರಿಸು; ಅಂಬು: ಬಾಣ; ರವಿಸುತ: ಕರ್ಣ; ರವಿ: ಭಾನು; ಸುತ: ಪುತ್ರ; ಅಸಮ: ಅಸದೃಶವಾದ; ಸಾಹಸಿ: ಪರಾಕ್ರಮಿ; ಎಚ್ಚು: ಬಾಣ ಪ್ರಯೋಗ ಮಾಡು; ಮರು: ಪ್ರತಿಯಾದ; ಕಣೆ: ಬಾಣ; ನಿಶಿತ: ಹರಿತವಾದುದು; ಶರ: ಬಾಣ; ಕುಸುರಿ: ಸೂಕ್ಷ್ಮವಾದ ಮತ್ತು ನಾಜೂ ಕಾದ ಕೆಲಸ; ಅರಿ: ಸೀಳು; ದೆಸೆ: ದಿಕ್ಕು; ದೇವ: ಅಮರ; ಅನೀಕ: ಗುಂಪು; ಮೆಚ್ಚು: ಹೊಗಳು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಎಸಲು +ಭೀಮನ +ಬಾಣವನು +ಖಂ
ಡಿಸಿದ +ಮೂರಂಬಿನಲಿ +ರವಿಸುತನ್
ಅಸಮ +ಸಾಹಸಿ+ಎಚ್ಚಡ್+ಎಚ್ಚನು +ಭೀಮ +ಮರು+ಕಣೆಯ
ನಿಶಿತ +ಶರವನು +ಹತ್ತು+ಶರದಲಿ
ಕುಸುರಿದ್+ಅರಿದನು +ಕರ್ಣನ್+ಇಬ್ಬರ
ದೆಸೆಗೆ +ದೇವಾನೀಕ +ಮೆಚ್ಚಿತು +ಭೂಪ +ಕೇಳೆಂದ

ಅಚ್ಚರಿ:
(೧) ಅಂಬು, ಶರ, ಕಣೆ, ಬಾಣ – ಸಮಾನಾರ್ಥಕ ಪದಗಳು

ಪದ್ಯ ೪೨: ದ್ರೋಣರು ಶಿಖಂಡಿಯನ್ನು ಹೇಗೆ ಸೋಲಿಸಿದರು?

ಸಾಕು ಷಂಡನ ಕೂಡೆ ಕಾದುವು
ದೇಕೆ ತಿದ್ದುವೆನೆನುತ ರಥವನು
ನಾಕು ಶರದಲಿ ಮುರಿದು ಸೂತನ ತಲೆಯನೆರಡರಲಿ
ನೂಕಿ ಧನುವನು ಮೂರು ಬಾಣದ
ಲೌಕಿ ಖಂಡಿಸಿ ಹೋಗು ಹೋಗಿ
ನ್ನಾಕೆವಾಳರನರಸಿ ತಾ ಎನುತೈದಿದನು ದ್ರೋಣ (ದ್ರೋಣ ಪರ್ವ, ೨ ಸಂಧಿ, ೪೨ ಪದ್ಯ)

ತಾತ್ಪರ್ಯ:
ಈ ನಪುಂಸಕನ ಜೊತೆಗೆ ಯುದ್ಧಮಾಡಿದ್ದು ಸಾಕು, ಮುಗಿಸುತ್ತೇನೆ ಎಂದು ಯೋಚಿಸಿ ದ್ರೋಣನು ನಾಲ್ಕು ಬಾಣಗಳಿಂದ ಶಿಖಂಡಿಯ ರಥವನ್ನೂ ಎರಡು ಬಾಣಗಳಿಂದ ಸಾರಥಿಯ ತಲೆಯನ್ನೂ ಮುರು ಬಾಣಗಳಿಂದ ಬಿಲ್ಲನ್ನೂ ಕತ್ತರಿಸಿ ಶಿಖಂಡಿ ಹೋಗು ಯಾರಾದರೂ ವೀರರಿದ್ದರೆ ಹುಡುಕಿ ಕರೆದುಕೊಂಡು ಬಾ ಎಂದು ರಥವನ್ನು ಮುಂದಕ್ಕೆ ಚಲಿಸಿದನು.

ಅರ್ಥ:
ಸಾಕು: ನಿಲ್ಲಿಸು; ಷಂಡ: ಶಿಖಂಡಿ; ಕೂಡೆ: ಜೊತೆ; ಕಾದು: ಹೋರಾಡು; ತಿದ್ದು: ಸರಿಪಡಿಸು; ರಥ: ಬಂಡಿ; ನಾಕು: ನಾಲ್ಕು; ಶರ: ಬಾಣ; ಮುರಿ: ಸೀಳು; ಸೂತ: ಸಾರಥಿ ತಲೆ: ಶಿರ; ನೂಕು: ತಳ್ಳು; ಧನು: ಬಿಲ್ಲು; ಬಾಣ: ಶರ; ಔಕು: ತಳ್ಳು; ಖಂಡಿಸು: ಕಡಿ, ಕತ್ತರಿಸು; ಹೋಗು: ತೆರಳು; ಆಕೆವಾಳ: ವೀರ, ಪರಾಕ್ರಮಿ; ಅರಸು: ಹುಡುಕು; ಐದು: ಬಂದುಸೇರು;

ಪದವಿಂಗಡಣೆ:
ಸಾಕು +ಷಂಡನ +ಕೂಡೆ +ಕಾದುವುದ್
ಏಕೆ +ತಿದ್ದುವೆನ್+ಎನುತ +ರಥವನು
ನಾಕು +ಶರದಲಿ +ಮುರಿದು +ಸೂತನ +ತಲೆಯನ್+ಎರಡರಲಿ
ನೂಕಿ +ಧನುವನು +ಮೂರು +ಬಾಣದಲ್
ಔಕಿ +ಖಂಡಿಸಿ+ ಹೋಗು +ಹೋಗಿನ್
ಆಕೆವಾಳರನರಸಿ +ತಾ +ಎನುತ್+ಐದಿದನು +ದ್ರೋಣ

ಅಚ್ಚರಿ:
(೧) ನಾಕು, ಮೂರು, ಎರಡು ಬಾಣಗಳ ಪ್ರಯೋಗವನ್ನು ಚಿತ್ರಿಸುವ ಪರಿ
(೨) ಸಾಕು, ನಾಕು; ನೂಕಿ, ಔಕಿ – ಪ್ರಾಸ ಪದಗಳು

ಪದ್ಯ ೪೫: ಭೀಷ್ಮನ ಬಿಲ್ಲನ್ನು ಯಾರು ಕತ್ತರಿಸಿದರು?

ಎರಡು ಶರದಲಿ ನರನು ಭೀಷ್ಮನ
ಕರದ ಕಾರ್ಮುಕ ದಂಡವನು ಕ
ತ್ತರಿಸಿದನು ಕೈಯೊಡನೆ ಕೊಂಡನು ಭೀಷ್ಮ ಹೊಸ ಧನುವ
ಸರಳ ಸೂಟಿಯ ತೋರಿಸಿದಡ
ಬ್ಬರಿಸಿ ಫಲುಗುಣನೈದು ಬಾಣದ
ಲರಿ ಭಟನ ಚಾಪವನು ಕಡಿ ಮೂರಾಗಿ ಖಂಡಿಸಿದ (ಭೀಷ್ಮ ಪರ್ವ, ೯ ಸಂಧಿ, ೪೫ ಪದ್ಯ)

ತಾತ್ಪರ್ಯ:
ಅರ್ಜುನನು ಎರಡು ಬಾಣಗಳಿಂದ ಭೀಷ್ಮನ ಬಿಲ್ಲನ್ನು ಕತ್ತರಿಸಿದನು. ಭೀಷ್ಮನು ಅತಿ ವೇಗದಿಂದ ಹೊಸ ಬಿಲ್ಲನ್ನು ಹಿಡಿದು ಅರ್ಜುನನನ್ನು ಘಾತಿಸಿದನು. ಅರ್ಜುನನು ಭೀಷ್ಮನ ಬಿಲ್ಲನ್ನು ಮೂರು ತುಂಡುಗಳಾಗುವಂತೆ ಕತ್ತರಿಸಿದನು.

ಅರ್ಥ:
ಶರ: ಬಾಣ; ನರ: ಅರ್ಜುನ; ಕರ: ಹಸ್ತ; ಕಾರ್ಮುಕ: ಬಿಲ್ಲು; ದಂಡ: ಕೋಲು; ಕತ್ತರಿಸು: ಸೀಳು, ಚೂರು ಮಾಡು; ಕೊಂಡು: ಧರಿಸು; ಹೊಸ: ನವೀನ; ಧನು: ಬಿಲ್ಲು; ಸರಳ: ಬಾಣ; ಸೂಟಿ: ವೇಗ, ರಭಸ; ತೋರಿಸು: ಪ್ರದರ್ಶಿಸು; ಅಬ್ಬರಿಸು: ಗರ್ಜಿಸು; ಬಾಣ: ಸರಳು; ಅರಿ: ವೈರಿ; ಭಟ: ಶೂರ; ಚಾಪ: ಬಿಲ್ಲು; ಕಡಿ: ಕತ್ತರಿಸು; ಖಂಡಿಸು: ಕಡಿ, ಕತ್ತರಿಸು;

ಪದವಿಂಗಡಣೆ:
ಎರಡು+ ಶರದಲಿ +ನರನು +ಭೀಷ್ಮನ
ಕರದ +ಕಾರ್ಮುಕ +ದಂಡವನು +ಕ
ತ್ತರಿಸಿದನು +ಕೈಯೊಡನೆ +ಕೊಂಡನು +ಭೀಷ್ಮ +ಹೊಸ +ಧನುವ
ಸರಳ +ಸೂಟಿಯ +ತೋರಿಸಿದಡ್
ಅಬ್ಬರಿಸಿ +ಫಲುಗುಣನ್+ಐದು +ಬಾಣದಲ್
ಅರಿ +ಭಟನ +ಚಾಪವನು +ಕಡಿ +ಮೂರಾಗಿ +ಖಂಡಿಸಿದ

ಅಚ್ಚರಿ:
(೧) ಶರ, ಬಾಣ; ಚಾಪ, ಕಾರ್ಮುಕ, ಧನು – ಸಮಾನಾರ್ಥಕ ಪದಗಳು
(೨) ಕ ಕಾರದ ತ್ರಿವಳಿ ಪದ – ಕತ್ತರಿಸಿದನು ಕೈಯೊಡನೆ ಕೊಂಡನು

ಪದ್ಯ ೪೩: ಭೀಷ್ಮಾರ್ಜುನರು ಯಾವ ಅಸ್ತ್ರಗಳಿಂದ ಯುದ್ಧವನ್ನು ಮಾಡಿದರು?

ಉರಗ ಬಾಣವನಿವರು ಕರೆದರು
ಗರುಡ ಶರದಲಿ ಪಾರ್ಥ ತವಿಸಿದ
ನುರಿಯ ವಿಶಿಖವನಿವರು ನಂದಿಸಿದರು ಜಲಾಸ್ತ್ರದಲಿ
ಗಿರಿಶಿಳೀಮುಖಕಿವರು ವಜ್ರವ
ಹರಿಸಿದರು ತಿಮಿರಾಸ್ತ್ರವೆದ್ದರೆ
ತರಣಿ ಮಾರ್ಗಣದಿಂದ ತರಿದನು ಭೀಷ್ಮ ವಹಿಲದಲಿ (ಭೀಷ್ಮ ಪರ್ವ, ೯ ಸಂಧಿ, ೪೩ ಪದ್ಯ)

ತಾತ್ಪರ್ಯ:
ಭೀಷ್ಮನು ಬಿಟ್ಟ ಸರ್ಪಾಸ್ತ್ರವನ್ನು ಅರ್ಜುನನು ಗರುಡಾಸ್ತ್ರದಿಂದ ಕಡಿದನು, ಅರ್ಜುನನ ಆಗ್ನೇಯಾಸ್ತ್ರವನ್ನು ಭೀಷ್ಮನು ವರುಣಾಸ್ತ್ರದಿಂದ ಉಪಶಮನ ಮಾಡಿದನು, ಪರ್ವತಾಸ್ತ್ರವನ್ನು ಭೀಷ್ಮನು ವಜ್ರಾಸ್ತ್ರದಿಂದ ವಿಫಲಗೊಳಿಸಿದನು, ಅರ್ಜುನನ ತಿಮಿರಾಸ್ತ್ರವನ್ನು ಭೀಷ್ಮನು ಸೂರ್ಯಾಸ್ತ್ರದಿಂದ ಗೆದ್ದನು.

ಅರ್ಥ:
ಉರಗ: ಹಾವು; ಬಾಣ: ಅಂಬು; ಕರೆ: ಬರೆಮಾಡು; ಶರ: ಬಾಣ; ತವಿಸು: ಕೊಲ್ಲು, ನಾಶಮಾಡು; ಉರಿ: ಬೆಂಇ; ವಿಶಿಖ: ಬಾಣ, ಅಂಬು; ನಂದಿಸು: ಆರಿಸು; ಜಲ: ನೀರು; ಅಸ್ತ್ರ: ಶಸ್ತ್ರ; ಗಿರಿ: ಬೆಟ್ಟ; ಶಿಳೀಮುಖ: ಬಾಣ; ವಜ್ರ: ವಜ್ರಾಸ್ತ್ರ; ಹರಿಸು: ಬಿಡು, ವ್ಯಾಪಿಸು; ತಿಮಿರ: ಕತ್ತಲೆ; ತರಣಿ: ಸೂರ್ಯ; ಮಾರ್ಗಣ: ಬಾಣ; ತರಿ: ಬಿಡು; ವಹಿಲ: ಬೇಗ, ತ್ವರೆ;

ಪದವಿಂಗಡಣೆ:
ಉರಗ +ಬಾಣವನ್+ಇವರು +ಕರೆದರು
ಗರುಡ +ಶರದಲಿ +ಪಾರ್ಥ +ತವಿಸಿದನ್
ಉರಿಯ +ವಿಶಿಖವನ್+ಇವರು +ನಂದಿಸಿದರು+ ಜಲಾಸ್ತ್ರದಲಿ
ಗಿರಿ+ಶಿಳೀಮುಖಕ್+ಇವರು +ವಜ್ರವ
ಹರಿಸಿದರು +ತಿಮಿರಾಸ್ತ್ರವ್+ಎದ್ದರೆ
ತರಣಿ+ ಮಾರ್ಗಣದಿಂದ +ತರಿದನು +ಭೀಷ್ಮ +ವಹಿಲದಲಿ

ಅಚ್ಚರಿ:
(೧) ಬಾಣಕ್ಕೆ ಬಳಸಿದ ಪದಗಳು – ಬಾಣ, ಶರ, ವಿಶಿಖ, ಶಿಳೀಮುಖ, ಮಾರ್ಗಣ
(೨) ಅಸ್ತ್ರಗಳ ಬಲಕೆ – ಉರಗ, ಗರುಡ; ಉರಿ, ಜಲ; ಗಿರಿ, ವಜ್ರ; ತಿಮಿರ, ತರಣಿ;

ಪದ್ಯ ೪೧: ಅರ್ಜುನನ ಬಿಲ್ವಿದ್ಯೆಯ ಕೌಶಲ್ಯ ಹೇಗಿತ್ತು?

ಏನ ಹೇಳುವೆನವರ ಶರ ಸಂ
ಧಾನವನು ಕಲಿ ಪಾರ್ಥನನು ಸಂ
ಧಾನವನು ಕೈಯೊಡನೆಯನಿಬರ ಕಣೆಯ ಖಂಡಿಸಿದ
ದಾನವಾಮರರೊಳಗೆ ಸುಭಟ ನಿ
ಧಾನವನು ಪಡಿಗಟ್ಟಬಾರದು
ಮಾನವರ ಮಾತೇತಕೆಂದನು ಸಂಜಯನು ನಗುತ (ಭೀಷ್ಮ ಪರ್ವ, ೮ ಸಂಧಿ, ೪೧ ಪದ್ಯ)

ತಾತ್ಪರ್ಯ:
ಸಂಜಯನು ವಿವರಿಸುತ್ತಾ, ನಮ್ಮ ವೀರರ ಬಾಣಗಳ ಹೂಡುವಿಕೆ, ಅರ್ಜುನನ ಸಂಧಾನಗಳ ವೇಗವನ್ನು ಹೇಗೆ ಹೇಳಲಿ? ಅವರೆಲ್ಲರ ಬಾಣಗಳನ್ನು ಅರ್ಜುನನು ಕಡಿದು ಬಿಟ್ಟನು. ದೇವ ರಾಕ್ಷಸರಲ್ಲಿ ಯಾರೂ ಅರ್ಜುನನ ಬಿಲ್ವಿದ್ಯೆಗೆ ಸಮಾನರೆನಿಸಿದವರಿಲ್ಲ, ಇನು ಮನುಷ್ಯರ ಪಾಡೇನು ಎಂದು ಅರ್ಜುನನ ಕೌಶಲ್ಯವನ್ನು ಹೊಗಳಿದನು.

ಅರ್ಥ:
ಹೇಳು: ತಿಳಿಸು; ಶರ: ಬಾಣ; ಸಂಧಾನ: ಹೊಂದಿಸುವುದು; ಕಲಿ: ಶೂರ; ಅನಿಬರು: ಅಷ್ಟುಜನ; ಕಣೆ: ಬಾಣ; ಖಂಡಿಸು: ಕಡಿ, ಕತ್ತರಿಸು; ದಾನವ: ರಾಕ್ಷಸ; ಅಮರ: ದೇವತೆ; ಸುಭಟ: ಪರಾಕ್ರಮಿ, ಸೈನಿಕ; ನಿಧಾನ: ಸಾವಕಾಶ; ಪಡಿಗಟ್ಟು: ಎದುರಾಗು; ಮಾನವ: ಮನುಷ್ಯ; ಮಾತು: ನುಡಿ; ನಗು: ಹರ್ಷಿಸು;

ಪದವಿಂಗಡಣೆ:
ಏನ +ಹೇಳುವೆನ್+ಅವರ +ಶರ+ ಸಂ
ಧಾನವನು +ಕಲಿ +ಪಾರ್ಥನನು +ಸಂ
ಧಾನವನು+ ಕೈಯೊಡನೆ+ಅನಿಬರ +ಕಣೆಯ +ಖಂಡಿಸಿದ
ದಾನವ+ಅಮರರೊಳಗೆ+ ಸುಭಟ+ ನಿ
ಧಾನವನು +ಪಡಿಗಟ್ಟಬಾರದು
ಮಾನವರ+ ಮಾತೇತಕ್+ಎಂದನು +ಸಂಜಯನು +ನಗುತ

ಅಚ್ಚರಿ:
(೧) ಸಂಧಾನ, ದಾನ, ನಿಧಾನ – ಸಮಾನಾರ್ಥಕ ಪದಗಳು
(೨) ಅರ್ಜುನನ ಹಿರಿಮೆ – ದಾನವಾಮರರೊಳಗೆ ಸುಭಟ ನಿಧಾನವನು ಪಡಿಗಟ್ಟಬಾರದು ಮಾನವರ ಮಾತೇತಕೆಂದನು