ಪದ್ಯ ೨೮: ದ್ರೋಣನು ಕರ್ಣನಿಗೆ ಯಾವ ಉಪಾಯವನ್ನು ಹೇಳಿದನು?

ಇದಿರೊಳಾನುವುದರಿದು ಹಸುಳೆಯ
ಕದನ ಹಂಗಿಗರಾದೆವಾಳ್ದನ
ವದನಕಮಲಕೆ ನಮ್ಮ ಪೌರುಷವಿಂದು ಹಿಮವಾಯ್ತು
ಇದಿರೊಳಾನಿಹೆ ಶಲ್ಯನೆಡವಂ
ಕದಲಿ ಬಲದಲಿ ಕೃಪನಪರಭಾ
ಗದಲಿ ನೀ ಬಂದೆಸು ಕುಮಾರನ ಕರದ ಕಾರ್ಮುಕವ (ದ್ರೋಣ ಪರ್ವ, ೬ ಸಂಧಿ, ೨೮ ಪದ್ಯ)

ತಾತ್ಪರ್ಯ:
ದ್ರೋಣನು ಕರ್ಣನಿಗೆ ಹೇಳುತ್ತಾ, ಅಭಿಮನ್ಯುವನ್ನು ಮುಂದೆ ಎದುರಿಸಲಾಗುವುದಿಲ್ಲ. ಯುದ್ಧದಲ್ಲಿ ಅವನ ಹಂಗಿಗೊಳಗಾಗಿ ಇನ್ನೂ ಬದುಕಿದ್ದೇವೆ. ನಮ್ಮ ಪೌರುಷವು ನಮ್ಮೊಡೆಯನ ಮುಖಕಮಲಕ್ಕೆ ಹಿಮವಾಯಿತು. ನಾನು ಎದುರಿನಲ್ಲಿ ನಿಲ್ಲುತೇನೆ, ಶಲ್ಯನು ಅಭಿಮನ್ಯುವಿನ ಎಡಕ್ಕೆ ನಿಲ್ಲುತ್ತಾನೆ, ಪಶ್ಚಿಮ ಭಾಗದಲ್ಲಿ ಕೃಪನಿರುತ್ತಾನೆ, ನೀನು ಹಿಂದಿನಿಂದ ಬಂದು ಅಭಿಮನ್ಯುವಿನ ಕೈ ಮತ್ತು ಬಿಲ್ಲನ್ನು ಕತ್ತರಿಸು ಎಂದು ದ್ರೋಣನು ಹೇಳಿದನು.

ಅರ್ಥ:
ಇದಿರು: ಎದುರು; ಅರಿ: ತಿಳಿ; ಹಸುಳೆ: ಚಿಕ್ಕವ; ಕದನ: ಮಕ್ಕಳು; ಹಂಗು: ದಾಕ್ಷಿಣ್ಯ; ಆಳ್ದ: ಆಳುವ; ವದನ: ಮುಖ; ಕಮಲ: ತಾವರೆ; ಪೌರುಷ: ಪರಾಕ್ರಮ; ಹಿಮ: ಮಂಜು; ಆನು: ನಾನು; ಎಡ: ವಾಮಭಾಗ; ಅಪರಭಾಗ: ಹಿಂದೆ; ಎಸು: ಬಾಣಪ್ರಯೋಗ; ಕುಮಾರ: ಪುತ್ರ; ಕರ: ಕೈ; ಕಾರ್ಮುಕ: ಬಿಲ್ಲು;

ಪದವಿಂಗಡಣೆ:
ಇದಿರೊಳ್+ಆನುವುದ್+ಅರಿದು+ ಹಸುಳೆಯ
ಕದನ+ ಹಂಗಿಗರ್+ಆದೆವ್+ಆಳ್ದನ
ವದನಕಮಲಕೆ +ನಮ್ಮ +ಪೌರುಷವಿಂದು +ಹಿಮವಾಯ್ತು
ಇದಿರೊಳ್+ಆನಿಹೆ+ ಶಲ್ಯನ್+ಎಡವಂ
ಕದಲಿ +ಬಲದಲಿ +ಕೃಪನ್+ಅಪರಭಾ
ಗದಲಿ+ ನೀ +ಬಂದೆಸು +ಕುಮಾರನ +ಕರದ +ಕಾರ್ಮುಕವ

ಅಚ್ಚರಿ:
(೧) ರೂಪಕದ ಪ್ರಯೋಗ – ಆಳ್ದನ ವದನಕಮಲಕೆ ನಮ್ಮ ಪೌರುಷವಿಂದು ಹಿಮವಾಯ್ತು

ಪದ್ಯ ೪೫: ಭೀಷ್ಮನ ಬಿಲ್ಲನ್ನು ಯಾರು ಕತ್ತರಿಸಿದರು?

ಎರಡು ಶರದಲಿ ನರನು ಭೀಷ್ಮನ
ಕರದ ಕಾರ್ಮುಕ ದಂಡವನು ಕ
ತ್ತರಿಸಿದನು ಕೈಯೊಡನೆ ಕೊಂಡನು ಭೀಷ್ಮ ಹೊಸ ಧನುವ
ಸರಳ ಸೂಟಿಯ ತೋರಿಸಿದಡ
ಬ್ಬರಿಸಿ ಫಲುಗುಣನೈದು ಬಾಣದ
ಲರಿ ಭಟನ ಚಾಪವನು ಕಡಿ ಮೂರಾಗಿ ಖಂಡಿಸಿದ (ಭೀಷ್ಮ ಪರ್ವ, ೯ ಸಂಧಿ, ೪೫ ಪದ್ಯ)

ತಾತ್ಪರ್ಯ:
ಅರ್ಜುನನು ಎರಡು ಬಾಣಗಳಿಂದ ಭೀಷ್ಮನ ಬಿಲ್ಲನ್ನು ಕತ್ತರಿಸಿದನು. ಭೀಷ್ಮನು ಅತಿ ವೇಗದಿಂದ ಹೊಸ ಬಿಲ್ಲನ್ನು ಹಿಡಿದು ಅರ್ಜುನನನ್ನು ಘಾತಿಸಿದನು. ಅರ್ಜುನನು ಭೀಷ್ಮನ ಬಿಲ್ಲನ್ನು ಮೂರು ತುಂಡುಗಳಾಗುವಂತೆ ಕತ್ತರಿಸಿದನು.

ಅರ್ಥ:
ಶರ: ಬಾಣ; ನರ: ಅರ್ಜುನ; ಕರ: ಹಸ್ತ; ಕಾರ್ಮುಕ: ಬಿಲ್ಲು; ದಂಡ: ಕೋಲು; ಕತ್ತರಿಸು: ಸೀಳು, ಚೂರು ಮಾಡು; ಕೊಂಡು: ಧರಿಸು; ಹೊಸ: ನವೀನ; ಧನು: ಬಿಲ್ಲು; ಸರಳ: ಬಾಣ; ಸೂಟಿ: ವೇಗ, ರಭಸ; ತೋರಿಸು: ಪ್ರದರ್ಶಿಸು; ಅಬ್ಬರಿಸು: ಗರ್ಜಿಸು; ಬಾಣ: ಸರಳು; ಅರಿ: ವೈರಿ; ಭಟ: ಶೂರ; ಚಾಪ: ಬಿಲ್ಲು; ಕಡಿ: ಕತ್ತರಿಸು; ಖಂಡಿಸು: ಕಡಿ, ಕತ್ತರಿಸು;

ಪದವಿಂಗಡಣೆ:
ಎರಡು+ ಶರದಲಿ +ನರನು +ಭೀಷ್ಮನ
ಕರದ +ಕಾರ್ಮುಕ +ದಂಡವನು +ಕ
ತ್ತರಿಸಿದನು +ಕೈಯೊಡನೆ +ಕೊಂಡನು +ಭೀಷ್ಮ +ಹೊಸ +ಧನುವ
ಸರಳ +ಸೂಟಿಯ +ತೋರಿಸಿದಡ್
ಅಬ್ಬರಿಸಿ +ಫಲುಗುಣನ್+ಐದು +ಬಾಣದಲ್
ಅರಿ +ಭಟನ +ಚಾಪವನು +ಕಡಿ +ಮೂರಾಗಿ +ಖಂಡಿಸಿದ

ಅಚ್ಚರಿ:
(೧) ಶರ, ಬಾಣ; ಚಾಪ, ಕಾರ್ಮುಕ, ಧನು – ಸಮಾನಾರ್ಥಕ ಪದಗಳು
(೨) ಕ ಕಾರದ ತ್ರಿವಳಿ ಪದ – ಕತ್ತರಿಸಿದನು ಕೈಯೊಡನೆ ಕೊಂಡನು

ಪದ್ಯ ೧೫: ಶ್ರೀಕೃಷ್ಣನೇಕೆ ಬೆರಗಾದನು?

ಪೂತುರೇ ಕಲಿ ಪಾರ್ಥ ವಿಶಿಖ
ವ್ರಾತಮಯವಾಯ್ತವನಿ ಕಾರ್ಮುಕ
ಭೂತನಾತನ ಗರುಡಿಯಲ್ಲಾ ಕಲಿತ ಮನೆ ನಿನಗೆ
ಆತುಕೊಳ್ಳಾದಡೆಯೆನುತ ಕಪಿ
ಕೇತನನ ಶರಹತಿಯನಾಂತಾ
ಮಾತು ಹಿಂಚಿತು ಕಡಿದು ಬಿಸುಟನು ಕೃಷ್ಣ ಬೆರಗಾಗೆ (ಭೀಷ್ಮ ಪರ್ವ, ೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೀಷ್ಮನು ಅರ್ಜುನನ ಠೀವಿಯನ್ನು ಗಮನಿಸಿ, ಭಲೇ ಅರ್ಜುನ, ಭೂಮಿಯೆಲ್ಲಾ ಬಾಣಮಯವಾಯಿತು, ಎಷ್ಟೇ ಆಗಲಿ ಧನುರ್ವಿದ್ಯಾ ಪಿನಾಕಿಯಾದ ದ್ರೋಣನ ಗರಡಿಯಲ್ಲಿ ನೀನು ಬಿಲ್ವಿದ್ಯೆಯನ್ನು ಕಲಿತವನಲ್ಲವೇ! ಆದರೂ ನನ್ನ ಬಾಣಗಳ ಪರಿಯನ್ನೊಮ್ಮೆ ನೋಡು ಎಂದನು. ಆ ಮಾತು ಮುಗಿಯುವ ಮೊದಲೇ ಅರ್ಜುನನ ಬಾಣಗಳೆಲ್ಲವನ್ನೂ ಕತ್ತರಿಸಿ ಹಾಕಿದನು, ಅವನ ನೈಪುಣ್ಯವನ್ನು ಕಂಡು ಶ್ರೀಕೃಷ್ಣನೇ ಬೆರಗಾದನು.

ಅರ್ಥ:
ಪೂತು: ಕೊಂಡಾಟದ ಮಾತು, ಭಲೇ; ಕಲಿ: ಶೂರ; ವಿಶಿಖ: ಬಾಣ, ಅಂಬು; ವ್ರಾತ: ಗುಂಪು; ಅವನಿ: ಭೂಮಿ; ಕಾರ್ಮುಕ: ಬಿಲ್ಲು; ಭೂತ: ಪರಮಾತ್ಮ, ಪ್ರಥಮ ಗಣ; ಗರುಡಿ: ವ್ಯಾಯಾಮ ಶಾಲೆ; ಕಲಿತ: ಅಭ್ಯಾಸಮಾಡಿದ; ಮನೆ: ಆಲ್ಯ; ಕಪಿ: ಹನುಮಂತ; ಕೇತನ: ಬಾವುಟ; ಶರ: ಬಾಣ; ಹತಿ: ಹೊಡೆತ; ಹಿಂಚು: ತಡ, ಸಾವಕಾಶ; ಕಡಿ: ಸೀಳು; ಬಿಸುಟು: ಹೊರಹಾಕು; ಬೆರಗು: ಆಶ್ಚರ್ಯ;

ಪದವಿಂಗಡಣೆ:
ಪೂತುರೇ +ಕಲಿ +ಪಾರ್ಥ +ವಿಶಿಖ
ವ್ರಾತಮಯವಾಯ್ತ್+ಅವನಿ +ಕಾರ್ಮುಕ
ಭೂತನಾತನ+ ಗರುಡಿಯಲ್ಲಾ +ಕಲಿತ +ಮನೆ +ನಿನಗೆ
ಆತುಕೊಳ್ಳಾದಡೆ+ಎನುತ +ಕಪಿ
ಕೇತನನ+ ಶರಹತಿಯನ್+ಅಂತ್+ಆ
ಮಾತು +ಹಿಂಚಿತು +ಕಡಿದು+ ಬಿಸುಟನು +ಕೃಷ್ಣ +ಬೆರಗಾಗೆ

ಅಚ್ಚರಿ:
(೧) ದ್ರೋಣನನ್ನು ಅವನಿ ಕಾರ್ಮುಕ ಭೂತ ಎಂದು ಕರೆದಿರುವುದು
(೨) ಅರ್ಜುನನನ್ನು ಕಪಿಕೇತನ ಎಂದು ಕರೆದಿರುವುದು

ಪದ್ಯ ೧೬: ಕೌರವ ಸೈನ್ಯದಲ್ಲಿ ಯಾರು ಇದ್ದರು?

ಆಳುಗೆಲಸಕೆ ಕೆಲಬರರಸನ
ಖೇಳಮೇಳಕೆ ಕೆಲರು ಕೆಲಬರು
ಬಾಲೆಯರ ಕೊಳುಕೊಡೆಯ ಬಳಗದ ಬಂಧುಕೃತ್ಯದಲಿ
ತೋಳ ಬಲುಹೊರೆಗಲಸಿ ಕೆಲಬರು
ಮೇಲೆ ನಮ್ಮಯ ಹಗೆಗೆ ಕೆಲಬರು
ಕಾಳಗದ ಕಾರ್ಮುಕನೃಪಾಲರ ನೆರವಿಯದೆಯೆಂದ (ಭೀಷ್ಮ ಪರ್ವ, ೩ ಸಂಧಿ, ೧೬ ಪದ್ಯ)

ತಾತ್ಪರ್ಯ:
ಕೌರವ ಸೈನ್ಯದಲ್ಲಿರುವವರ ಪೈಕಿ ಕೆಲವರು ಚಕ್ರವರ್ತಿಯ ಆಳುಗಳು, ಸ್ನೇಹಿತರು, ಕೆಲವರು ಆಟದಲ್ಲಿ ಜೊತೆಗಾರರು, ಕೆಲವರು ಹೆಣ್ಣು ಗಂಡು ಸಂಬಂಧದ ನಂಟರು, ಕೆಲವರು ಕೊಬ್ಬಿನಿಂದ ಬಂದವರು, ಕೆಲವರು ನಮ್ಮ ಮೇಲಿನ ವೈರದಿಂದ ಕೌರವನೊಡನೆ ಸೇರಿದವರು, ಅವರೆಲ್ಲ ಯುದ್ಧ ಸನ್ನದ್ಧರಾಗಿ ನಿಂತಿದ್ದಾರೆ.

ಅರ್ಥ:
ಆಳು: ಸೇವಕ; ಕೆಲಸ: ಕಾರ್ಯ; ಅರಸ: ರಾಜ; ಖೇಳ: ಆಟ; ಖೇಳಮೇಳ: ವಿನೋದ ಕ್ರೀಡೆ; ಕೆಲರು: ಕೆಲವರು; ಬಾಲೆ: ಹೆಣ್ಣು; ಕೊಳುಕೊಡೆ: ತೆಗೆದುಕೋ, ಪಡೆ, ಹೆಣ್ಣುಗಂಡ ಸಂಬಂಧ; ಬಳಗ: ಬಾಂಧವ; ಬಂಧು: ಸಂಬಂಧಿಕ; ಕೃತ್ಯ: ಕಾರ್ಯ; ತೋಳ: ಬಾಹು; ಬಲು: ಶಕ್ತಿ; ಹೊರೆ: ಪೋಷಿಸು, ಸಲಹು, ಕೂಡು; ಹಗೆ: ವೈರ; ಕಾಳಗ: ಯುದ್ಧ; ಕಾರ್ಮುಕ: ಬಿಲ್ಲು; ನೃಪಾಲ: ರಾಜ; ನೆರವು: ಸಹಾಯ; ಅಲಸು: ಆಯಾಸಗೊಳ್ಳು;

ಪದವಿಂಗಡಣೆ:
ಆಳು+ಕೆಲಸಕೆ +ಕೆಲಬರ್+ ಅರಸನ
ಖೇಳಮೇಳಕೆ+ ಕೆಲರು+ ಕೆಲಬರು
ಬಾಲೆಯರ+ ಕೊಳುಕೊಡೆಯ +ಬಳಗದ+ ಬಂಧು+ಕೃತ್ಯದಲಿ
ತೋಳ +ಬಲು+ಹೊರೆಗ್+ಅಲಸಿ +ಕೆಲಬರು
ಮೇಲೆ +ನಮ್ಮಯ +ಹಗೆಗೆ +ಕೆಲಬರು
ಕಾಳಗದ+ ಕಾರ್ಮುಕ+ನೃಪಾಲರ +ನೆರವಿಯದ್+ಎಂದ

ಅಚ್ಚರಿ:
(೧) ಹೆಣ್ಣು ಗಂಡು ಕೊಟ್ಟು ಕೊಳುವ ಸಂಬಂಧವನ್ನು ಹೇಳುವ ಪರಿ – ಬಾಲೆಯರ ಕೊಳುಕೊಡೆಯ ಬಳಗದ ಬಂಧುಕೃತ್ಯದಲಿ

ಪದ್ಯ ೧೧: ಕೃಷ್ಣನು ಶಲ್ಯನನ್ನು ಹೇಗೆ ವಿವರಿಸಿದನು?

ರಾಯನಾತನ ಬಳಿಯಲಾ ಕ
ರ್ಣಾಯತಾಸ್ತ್ರರು ಕಾರ್ಮುಕದ ಸ್ವಾ
ಧ್ಯಾಯಸಿದ್ಧರು ಹತ್ತುಸಾವಿರ ಮಕುಟವರ್ಧನರು
ಸಾಯಲಂಜದ ಸಿತಗರದೆ ತ
ನ್ನಾಯತದೊಳಪ್ರತಿಮ ರೌದ್ರದ
ನಾಯಕರ ನೆರವಿಯೊಳು ಶಲ್ಯನೃಪಾಲ ನೋಡೆಂದ (ಭೀಷ್ಮ ಪರ್ವ, ೩ ಸಂಧಿ, ೧೧ ಪದ್ಯ)

ತಾತ್ಪರ್ಯ:
ಆ ರಾಜನ ಬಳಿಯಲ್ಲಿ ಬಿಲ್ಲಿಗೆ ಬಾಣವನ್ನು ಹೂಡಿ ಹೆದೆಯನ್ನು ಕಿವಿಯವರೆಗೆ ಎಳೆದ ಧನುರ್ವೇದ ಸ್ವಾಧ್ಯಾಯ ಸಿದ್ಧರಾದ ಅತಿಬಲರಾದ ಹತ್ತುಸಾವಿರ ದೊರೆಗಳಿದ್ದಾರೆ, ಅವರು ಸಾಯಲು ಹೆದರದ ನಿಷ್ಠುರಿಗಳು. ತನ್ನ ಪರಿವಾರದ ನಡುವೆ ನಿಂತ ಶಲ್ಯನನ್ನು ನೋಡು ಎಂದು ಕೃಷ್ಣನು ತೋರಿಸಿದನು.

ಅರ್ಥ:
ರಾಯ: ರಾಜ; ಬಳಿ: ಹತ್ತಿರ; ಕರ್ಣ: ಕಿವಿ; ಆಯತ: ಅಣಿಗೊಳಿಸು, ಸಿದ್ಧ; ಅಸ್ತ್ರ: ಶಸ್ತ್ರ; ಕಾರ್ಮುಕ: ಬಿಲ್ಲು; ಸ್ವಾಧ್ಯಾಯ: ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುವಿಕೆ; ಸಿದ್ಧ: ಸಾಧಿಸಿದವನು; ಹತ್ತು: ದಶ; ಸಾವಿರ: ಸಹಸ್ರ; ಮಕುಟ: ಕಿರೀಟ; ವರ್ಧನ: ಹೆಚ್ಚುವಿಕೆ; ಸಾಯಲು: ಮಡಿಯಲು; ಅಂಜು: ಹೆದರು; ಸಿತಗ: ದುಷ್ಟ; ಅಪ್ರತಿಮ: ಎಣೆಯಿಲ್ಲದ; ರೌದ್ರ: ಶೂರ; ನಾಯಕ: ಒಡೆಯ; ನೆರವಿ: ಗುಂಪು; ನೃಪಾಲ: ರಾಜ; ನೋಡು: ವೀಕ್ಷಿಸು;

ಪದವಿಂಗಡಣೆ:
ರಾಯನ್+ಆತನ+ ಬಳಿಯಲ್+ಆ+ ಕರ್ಣ
ಆಯತಾಸ್ತ್ರರು +ಕಾರ್ಮುಕದ +ಸ್ವ
ಅಧ್ಯಾಯಸಿದ್ಧರು +ಹತ್ತು+ಸಾವಿರ+ ಮಕುಟ+ವರ್ಧನರು
ಸಾಯಲ್+ಅಂಜದ+ ಸಿತಗರದೆ+ ತನ್
ಆಯತದೊಳ್+ಅಪ್ರತಿಮ +ರೌದ್ರದ
ನಾಯಕರ +ನೆರವಿಯೊಳು +ಶಲ್ಯ+ನೃಪಾಲ+ ನೋಡೆಂದ

ಅಚ್ಚರಿ:
(೧) ಆಯತ – ೨, ೫ ಸಾಲಿನ ಮೊದಲ ಪದ
(೨) ನೃಪಾಲ, ರಾಯ – ಸಮನಾರ್ಥಕ ಪದ

ಪದ್ಯ ೬೩: ಕೃಷ್ಣನು ಯುದ್ಧಕ್ಕೆ ಹೇಗೆ ಸಿದ್ಧನಾದನು?

ಈ ಮಹಾಯಜ್ಞವನು ಕೆಡಿಸುವೆ
ನೀ ಮಹೀಶನ ಮುರಿವೆನೆಂದೇ
ವೈಮನಸ್ಯದಿ ಬಗೆದು ಮೊನೆಮಾಡಿದನು ನುಡಿಯೆರಡ
ತಾಮಸನ ತರಿದಖಿಳ ಭೂತ
ಸ್ತೋಮ ತುಷ್ಟಿಯ ಕೀರ್ತಿ ಫಲಿಸಲಿ
ಯೀ ಮಹಾಶರಕೆಂದು ಕೊಂಡನು ದಿವ್ಯಕಾರ್ಮುಕವ (ಸಭಾ ಪರ್ವ, ೧೧ ಸಂಧಿ, ೬೩ ಪದ್ಯ)

ತಾತ್ಪರ್ಯ:
ಶಿಶುಪಾಲನು ಈ ದಿವ್ಯವಾದ ಯಜ್ಞವನ್ನು ಹಾಳುಮಾಡುತ್ತೇನೆ, ಯುಧಿಷ್ಠಿರನನ್ನು ಸೀಳುತ್ತೇನೆ ಎಂದು ದ್ವೇಷದಿಂದ ಎರಡು ಮಾತುಗಳನ್ನು ಆಡಿದನು, ಇದನ್ನು ನಾನು ಸಹಿಸಲಾರೆ, ತಾಮಸಿಯಾದ ಶಿಶುಪಾಲನನ್ನು ಕಡಿದು ಭೂತಗಳನ್ನು ತೃಪ್ತಿಪಡಿಸಿದ ಕೀರ್ತಿ ನನ್ನ ಬಾಣಕ್ಕೆ ದೊರೆಯಲಿ ಎಂದು ಶ್ರೀಕೃಷ್ಣನು ತನ್ನ ದಿವ್ಯಧನುಸ್ಸನ್ನು ಕೈಗೆತ್ತಿಕೊಂಡನು.

ಅರ್ಥ:
ಮಹಾ: ದೊಡ್ಡ, ಶ್ರೇಷ್ಠ; ಯಜ್ಞ: ಕ್ರತು, ಯಾಗ; ಕೆಡಿಸು: ಹಾಳುಮಾಡು; ಮಹೀಶ: ರಾಜ; ಮುರಿ: ಸೀಳು; ವೈಮನಸ್ಯ: ಹಗೆತನ, ವೈರ; ಬಗೆ: ಯೋಚನೆ, ಎಣಿಸು; ಮೊನೆ: ಹರಿತ, ಚೂಪು; ನುಡಿ: ಮಾತು; ತಾಮಸ: ಕತ್ತಲೆ, ಅಂಧಕಾರ; ತರಿದು: ಹೋಗಲಾಡಿಸಿ; ಅಖಿಳ: ಸರ್ವ; ಭೂತಸ್ತೋಮ: ಭೂತಗಣ/ಗುಂಪು; ತುಷ್ಟಿ: ಸಂತೋಷ; ಕೀರ್ತಿ: ಖ್ಯಾತಿ; ಫಲಿಸು: ದೊರಕು, ಪಡೆ; ಶರ: ಬಾಣ; ಕಾರ್ಮುಕ: ಬಿಲ್ಲು; ಕೊಂಡು: ಹಿಡಿ;

ಪದವಿಂಗಡಣೆ:
ಈ+ ಮಹಾಯಜ್ಞವನು +ಕೆಡಿಸುವೆನ್
ಈ+ ಮಹೀಶನ +ಮುರಿವೆನೆಂದೇ
ವೈಮನಸ್ಯದಿ+ ಬಗೆದು +ಮೊನೆಮಾಡಿದನು +ನುಡಿಯೆರಡ
ತಾಮಸನ +ತರಿದ್+ಅಖಿಳ +ಭೂತ
ಸ್ತೋಮ +ತುಷ್ಟಿಯ +ಕೀರ್ತಿ +ಫಲಿಸಲಿ
ಯೀ+ ಮಹಾಶರಕೆಂದು +ಕೊಂಡನು +ದಿವ್ಯ+ಕಾರ್ಮುಕವ

ಅಚ್ಚರಿ:
(೧) ಕಾರ್ಮುಕ, ಶರ – ಬಿಲ್ಲು ಬಾಣಗಳಿಗೆ ಬಳಸಿದ ಪದ
(೨) ಮಹಾಯಜ್ಞ, ಮಹೀಶ, ಮೊನೆಮಾಡಿ, ಮಹಾಶರ, ಮುರಿ – ಮ ಕಾರದ ಪದಗಳ ಬಳಕೆ
(೩) ಶಿಶುಪಾಲನನ್ನು ಕೊಲ್ಲುವೆ ಎಂದು ಹೇಳುವ ಪರಿ – ತಾಮಸನ ತರಿದಖಿಳ ಭೂತ
ಸ್ತೋಮ ತುಷ್ಟಿಯ ಕೀರ್ತಿ ಫಲಿಸಲಿ ಯೀ ಮಹಾಶರಕೆಂದು ಕೊಂಡನು ದಿವ್ಯಕಾರ್ಮುಕವ

ಪದ್ಯ ೨೧: ಕರ್ಣಾರ್ಜುನರ ಸಮರಾರಂಭ ಹೇಗೆ ಶುರುವಾಯಿತು?

ಧಾರಿಣೀಪತಿ ಕೇಳು ಬಲುಟಂ
ಕಾರ ಕದನೋಪಕ್ರಮದೊಳೋಂ
ಕಾರವಾಯಿತು ಕಾರ್ಮುಕಸ್ವಾಧ್ಯಾಯವಿಸ್ತರಕೆ
ಭೂರಿ ಬಹುವಿಧ ಬಾಣವರ್ಗವಿ
ಹಾರವೆಸೆದುದು ಕರ್ಣಪಾರ್ಥರು
ದಾರ ಸಮರಾರಂಭವಳ್ಳಿರಿದುದು ಜಗತ್ರಯವ (ಕರ್ಣ ಪರ್ವ, ೨೨ ಸಂಧಿ, ೨೧ ಪದ್ಯ)

ತಾತ್ಪರ್ಯ:
ಸಂಜಯನು ಯುದ್ಧವನ್ನು ವಿವರಿಸುತ್ತಾ, ರಾಜ ಧೃತರಾಷ್ಟ್ರ ಕೇಳು, ಯುದ್ಧಾರಂಭಕ್ಕೆ ಮೊದಲು ಕಾರ್ಮುಕ ಸ್ವಾಧ್ಯಾಯಕ್ಕೆ ಅರ್ಜುನ ಕರ್ಣರ ಬಿಲ್ಲಿನ ಟಂಕಾರವೇ ಪ್ರಾರಂಭವಾದ ಓಂಕಾರದ ಉಚ್ಚಾರವಾಯಿತು. ಬಹುವಿಧ ಬಾಣಗಳು ವಿಹರಿಸುತ್ತಿದ್ದವು. ಕರ್ಣಾರ್ಜುನರ ಸಮರಾರಂಭದ ಘೋಷವು ಮೂರು ಲೋಕಗಳಲ್ಲಿ ಹರಡಿತು.

ಅರ್ಥ:
ಧಾರಿಣಿ: ಭೂಮಿ; ಧಾರಿಣೀಪತಿ: ರಾಜ; ಕೇಳು: ಆಲಿಸು; ಬಲು: ಬಹಳ, ಹೆಚ್ಚು; ಟಂಕಾರ: ಬಿಲ್ಲಿನ ಶಬ್ದ; ಕದನ: ಯುದ್ಧ; ಉಪಕ್ರಮ: ಸಮೀಪಿಸುವುದು, ಪ್ರಾರಂಭ; ಕಾರ್ಮುಕ: ಬಿಲ್ಲು; ಸ್ವ: ಸ್ವಂತ; ಅಧ್ಯಾಯ: ವ್ಯಾಸಂಗ; ವಿಸ್ತರ: ಹರಡು; ಭೂರಿ: ಹೆಚ್ಚು, ಅಧಿಕ; ಬಹು: ಬಹಳ; ವಿಧ: ರೀತಿ, ಕ್ರಮ; ವರ್ಗ: ಗುಂಪು, ಸಮೂಹ; ವಿಹಾರ: ಅಲೆದಾಟ, ತಿರುಗಾಡುವುದು; ಉದಾರ: ವಿಸ್ತಾರವಾದ; ಆರಂಭ: ಶುರು; ಸಮರ: ಯುದ್ಧ; ಜಗ: ಪ್ರಪಂಚ; ತ್ರಯ: ಮೂರು;

ಪದವಿಂಗಡಣೆ:
ಧಾರಿಣೀಪತಿ +ಕೇಳು +ಬಲು+ಟಂ
ಕಾರ +ಕದನ+ಉಪಕ್ರಮದೊಳ್+ಓಂ
ಕಾರವಾಯಿತು +ಕಾರ್ಮುಕ+ಸ್ವ+ಅಧ್ಯಾಯ+ವಿಸ್ತರಕೆ
ಭೂರಿ +ಬಹುವಿಧ +ಬಾಣ+ವರ್ಗ+ವಿ
ಹಾರವ್+ಎಸೆದುದು +ಕರ್ಣ+ಪಾರ್ಥರ್
ಉದಾರ +ಸಮರಾರಂಭವಳ್+ಇರಿದುದು +ಜಗತ್ರಯವ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಭೂರಿ ಬಹುವಿಧ ಬಾಣವರ್ಗ
(೨) ಬಿಲ್ಲಿನ ಶಬ್ದ ಓಂಕಾರ ನುಡಿಯಿತು ಎಂದು ಹೇಳುತ್ತಿರುವ ಬಗೆ – ಬಲುಟಂಕಾರ ಕದನೋಪಕ್ರಮದೊಳೋಂಕಾರವಾಯಿತು

ಪದ್ಯ ೧೬: ವೃಷಸೇನನು ಯಾರನ್ನು ಕರೆಸಿಕೊಳ್ಳಲು ಭೀಮನಿಗೆ ಹೇಳಿದನು?

ನಕುಲ ಮುರಿದನು ಭೀಮ ನಿಲು ಕಾ
ರ್ಮುಕವ ಹಿಡಿ ಬಿಡು ಸರಲನಳುಕುವ
ಡಕಟ ಕೊಲ್ಲೆನು ನಿನ್ನ ತಮ್ಮನ ಕರಸು ಫಲುಗುಣನ
ವಿಕಳರುಳಿದಿರಲಾಗದೀ ಸಾ
ಯಕದ ಸೃಷ್ಟಿವಿರಿಂಚ ಸುಭಟ
ಪ್ರಕರದೊಳು ತಾನೆನುತ ತೆಗೆದೆಚ್ಚನು ವೃಕೋದರನ (ಕರ್ಣ ಪರ್ವ, ೨೦ ಸಂಧಿ, ೧೬ ಪದ್ಯ)

ತಾತ್ಪರ್ಯ:
ನಕುಲನು ಸೋತನು, ಭೀಮ ನೀನು ನಿಲ್ಲು, ಬಿಲ್ಲು ಹಿಡಿ ಬಾಣವನ್ನು ಹೂಡು, ಇದಕ್ಕೆ ನೀನು ಅಂಜಿದರೆ ಅಯ್ಯೋ ನಾನೇನು ನಿನ್ನನ್ನು ಕೊಲ್ಲುವುದಿಲ್ಲ, ನಿನ್ನ ಸಹಾಯಕ್ಕೆ ನಿನ್ನ ತಮ್ಮನಾದ ಅರ್ಜುನನನ್ನು ಕರೆಸಿಕೋ. ಬಾಣಸೃಷ್ಟಿಯ ಬ್ರಹ್ಮನಾದ ನನ್ನೆದುರಿನಲ್ಲಿ ಉಳಿದವರು ನಿಲ್ಲಲಾರರು, ಎಂದು ಹೇಳಿ ವೃಷಸೇನನು ಭೀಮನ ಮೇಲೆ ಬಾಣಗಳನ್ನು ಬಿಟ್ಟನು.

ಅರ್ಥ:
ಮುರಿ: ಸೀಳು; ನಿಲು: ತಡೆ; ನಿಲ್ಲು; ಕಾರ್ಮುಕ:ಬಿಲ್ಲು; ಹಿಡಿ: ಗ್ರಹಿಸು; ಬಿಡು: ಹೊರಸೂಸು; ಸರಳ: ಬಾಣ; ಅಳುಕು: ಭಯ; ಅಕಟ: ಅಯ್ಯೋ; ಕೊಲ್ಲು: ಸಾಯಿಸು; ತಮ್ಮ: ಸಹೋದರ; ಕರಸು: ಬರೆಮಾಡು; ಫಲುಗುಣ: ಅರ್ಜುನ; ವಿಕಳ: ಭ್ರಮೆ, ಭ್ರಾಂತಿ; ಉಳಿದ: ಮಿಕ್ಕ; ಸಾಯಕ: ಬಾಣ; ಸೃಷ್ಟಿ: ಹುಟ್ಟು; ವಿರಿಂಚ: ಬ್ರಹ್ಮ; ಸುಭಟ: ಪರಾಕ್ರಮಿ; ಪ್ರಕರ: ಸಮೂಹ; ಎಚ್ಚು: ಬಾಣಬಿಡು; ತೆಗೆ: ಹೊರತರು; ವೃಕೋದರ: ಭೀಮ;

ಪದವಿಂಗಡಣೆ:
ನಕುಲ+ ಮುರಿದನು +ಭೀಮ +ನಿಲು +ಕಾ
ರ್ಮುಕವ +ಹಿಡಿ +ಬಿಡು +ಸರಳನ್+ಅಳುಕುವಡ್
ಅಕಟ+ ಕೊಲ್ಲೆನು +ನಿನ್ನ +ತಮ್ಮನ +ಕರಸು +ಫಲುಗುಣನ
ವಿಕಳರ್+ಉಳಿದಿರಲ್+ಆಗದ್+ಈ+ ಸಾ
ಯಕದ +ಸೃಷ್ಟಿ+ವಿರಿಂಚ +ಸುಭಟ
ಪ್ರಕರದೊಳು +ತಾನೆನುತ+ ತೆಗೆದ್+ಎಚ್ಚನು +ವೃಕೋದರನ

ಅಚ್ಚರಿ:
(೧) ಭೀಮನನ್ನು ಕೆರಳಿಸುವ ಬಗೆ – ಭೀಮ ನಿಲು ಕಾರ್ಮುಕವ ಹಿಡಿ ಬಿಡು ಸರಲನಳುಕುವ
ಡಕಟ ಕೊಲ್ಲೆನು ನಿನ್ನ ತಮ್ಮನ ಕರಸು ಫಲುಗುಣನ