ಪದ್ಯ ೭: ಅಶ್ವತ್ಥಾಮನ ವಾದವು ಹೇಗಿತ್ತು?

ಏನು ಗುರುಸುತ ಕಾರ್ಯದನುಸಂ
ಧಾನವೇನೆನೆ ವಾಯಸಂಗಳ
ನಾ ನಿಶಾಟನನಿರಿವುತದೆ ಗೂಡುಗಳನಬ್ಬರಿಸಿ
ಈ ನಿದರುಶನದಿಂದ ಪಾಂಡವ
ಸೇನೆಯನು ಕಗ್ಗೊಲೆಗೊಳಗೆ ಕೊಲ
ಲೇನು ಹೊಲ್ಲೆಹ ಮಾವ ಎಂದನು ಗುರುಸುತನು ಕೃಪಗೆ (ಗದಾ ಪರ್ವ, ೯ ಸಂಧಿ, ೭ ಪದ್ಯ)

ತಾತ್ಪರ್ಯ:
ಎಚ್ಚರಗೊಂಡ ಕೃಪನು, ಏನು ಅಶ್ವತ್ಥಾಮ, ನಿನ್ನ ಕೆಲಸವನ್ನು ಹೇಗೆ ಮಾಡುವೆ ಎಂದು ಕೇಳಲು, ಅಶ್ವತ್ಥಾಮನು ಕಾಗೆಗಳ ಗೂಡುಗಳನ್ನು ಮುರಿದು ಗೂಬೆಯು ಕಾಗೆಗಳನ್ನು ಕೊಲ್ಲುತ್ತಿದೆ, ಈ ನಿದರ್ಶನದಿಂದ ನಾನು ಪಾಂಡವಸೇನೆಯನ್ನು ಕೊಂದರೆ ತಪ್ಪೆನು ಎಂದು ಕೇಳಿದನು.

ಅರ್ಥ:
ಸುತ: ಮಗ; ಕಾರ್ಯ: ಕೆಲಸ; ಅನುಸಂಧಾನ: ಪರಿಶೀಲನೆ, ಏರ್ಪಾಡು; ವಾಯ: ಮೋಸ, ಕಪಟ; ಸಂಗ: ಜೊತೆ; ನಿಶಾಟ: ರಾತ್ರಿಯ ಆಟ; ನಿಶ: ರಾತ್ರಿ; ಇರಿ: ಚುಚ್ಚು; ಗೂಡು: ಮನೆ; ಅಬ್ಬರಿಸು: ಆರ್ಭಟಿಸು; ನಿದರುಶನ: ತೋರು; ಸೇನೆ: ಸೈನ್ಯ; ಕಗ್ಗೊಲೆ: ಸಾಯಿಸು; ಹೊಲ್ಲೆಹ: ದೋಷ;

ಪದವಿಂಗಡಣೆ:
ಏನು +ಗುರುಸುತ+ ಕಾರ್ಯದ್+ಅನುಸಂ
ಧಾನವೇನ್+ಎನೆ +ವಾಯಸಂಗಳನ್
ಆ+ ನಿಶಾಟನನ್+ಇರಿವುತದೆ +ಗೂಡುಗಳನ್+ಅಬ್ಬರಿಸಿ
ಈ +ನಿದರುಶನದಿಂದ +ಪಾಂಡವ
ಸೇನೆಯನು +ಕಗ್ಗೊಲೆಗೊಳಗೆ ಕೊಲಲ್
ಏನು +ಹೊಲ್ಲೆಹ +ಮಾವ +ಎಂದನು +ಗುರುಸುತನು +ಕೃಪಗೆ

ಅಚ್ಚರಿ:
(೧) ಗೂಬೆ ಎಂದು ಹೇಳಲು ನಿಶಾಟನ ಪದದ ಬಳಕೆ
(೨) ಕೃಪನನ್ನು ಮಾವ ಎಂದು ಅಶ್ವತ್ಥಾಮನು ಸಂಭೋದಿಸಿದುದು

ಪದ್ಯ ೧೭: ಭೀಮನು ಕೌರವನ ಯಾವ ಭಾಗಕ್ಕೆ ಹೊಡೆದನು?

ಧರಣಿಪತಿ ಕೇಳ್ ಭೀಮಸೇನನ
ಧರಧುರದ ಹೊಯ್ಲುಗಳ ಗದೆಯಲಿ
ಹೊರಳಿಗಿಡಿ ಝೊಂಪಿಸಿದುವುರು ಖದ್ಯೋತ ಮಂಡಲವ
ಅರಸನೆರಗಿದಡನಿಲಸುತ ಪೈ
ಸರಿಸಿ ಕಳಚಿದನಾ ಕ್ಷಣದೊಳ
ಬ್ಬರಿಸಿ ಹೊಯ್ದನು ಭೀಮ ಕೌರವನೃಪನ ಕಂಧರವ (ಗದಾ ಪರ್ವ, ೭ ಸಂಧಿ, ೧೭ ಪದ್ಯ)

ತಾತ್ಪರ್ಯ:
ರಾಜನೇ ಕೇಳು, ಭೀಮನು ಗದೆಯಂದ ಹೊಡೆದರೆ, ಅದರಿಂದುದುರುವ ಕಿಡಿಗಳು ಸೂರ್ಯಮಂಡಲವನ್ನು ಮುಸುಕುವುವು. ಕೌರವನು ಗದೆಯಿಂದ ಹೊಡೆಯಲು ಭೀಮನು ತಪ್ಪಿಸಿಕೊಂಡು, ಅಬ್ಬರಿಸಿ ಶತ್ರುವಿನ ಕೊರಳಿಗೆ ಹೊಡೆದನು.

ಅರ್ಥ:
ಧರಣಿಪತಿ: ರಾಜ; ಕೇಳು: ಆಲಿಸು; ಧರಧುರ: ಆರ್ಭಟ, ಕೋಲಾಹಲ; ಹೊಯ್ಲು: ಹೊಡೆತ; ಗದೆ: ಮುದ್ಗರ; ಹೊರಳು: ತಿರುಗು; ಕಿಡಿ: ಬೆಂಕಿ; ಝೊಂಪಿಸು: ಮೈಮರೆ, ಎಚ್ಚರತಪ್ಪು; ಉರು: ಹೆಚ್ಚಾದ, ಅತಿದೊಡ್ಡ; ಖದ್ಯೋತ: ಸೂರ್ಯ; ಮಂಡಲ: ವರ್ತುಲಾಕಾರ; ಅರಸ: ರಾಜ; ಎರಗು: ಬಾಗು; ಅನಿಲಸುತ: ಭೀಮ; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಕಳಚು: ಸಡಲಿಸು; ಕ್ಷಣ: ಸಮಯದ ಪ್ರಮಾಣ; ಅಬ್ಬರಿಸು: ಗರ್ಜಿಸು; ಹೊಯ್ದು: ಹೊಡೆ; ನೃಪ: ರಾಜ; ಕಂಧರ: ಕೊರಳು;

ಪದವಿಂಗಡಣೆ:
ಧರಣಿಪತಿ +ಕೇಳ್ +ಭೀಮಸೇನನ
ಧರಧುರದ +ಹೊಯ್ಲುಗಳ +ಗದೆಯಲಿ
ಹೊರಳಿ+ಕಿಡಿ +ಝೊಂಪಿಸಿದುವ್+ಉರು +ಖದ್ಯೋತ +ಮಂಡಲವ
ಅರಸನ್+ಎರಗಿದಡ್+ಅನಿಲಸುತ +ಪೈ
ಸರಿಸಿ+ ಕಳಚಿದನಾ +ಕ್ಷಣದೊಳ್
ಅಬ್ಬರಿಸಿ+ ಹೊಯ್ದನು+ ಭೀಮ +ಕೌರವ+ನೃಪನ +ಕಂಧರವ

ಅಚ್ಚರಿ:
(೧) ರೂಪಕದ ಪ್ರಯೋಗ – ಗದೆಯಲಿ ಹೊರಳಿಗಿಡಿ ಝೊಂಪಿಸಿದುವುರು ಖದ್ಯೋತ ಮಂಡಲವ

ಪದ್ಯ ೫೧: ಅಭಿಮನ್ಯುವು ಕರ್ಣನನ್ನು ಹೇಗೆ ಹಿಂದಕ್ಕಟ್ಟಿದನು?

ಕರದ ಕರವಾಲುಡಿಯೆ ಬಿಡೆ ಹ
ಲ್ಮೊರೆದು ಭರದಲಿ ಗದೆಯ ಕೊಂಡ
ಬ್ಬರಿಸಿ ಕೋಪದಲಗಿದು ಹರಿಗೆಯ ಹಿಡಿದು ಮುಂದಣಿಗೆ
ಅರರೆ ಸಮ್ಮುಖವಾಗೆನುತ ಸಂ
ಗರದೊಳುರವಣಿಸಿದನು ಕರ್ಣನ
ತೆರಳಿಚಿದನೈನೂರು ಹಜ್ಜೆಯಲಿಂದ್ರಸುತ ಸೂನು (ದ್ರೋಣ ಪರ್ವ, ೬ ಸಂಧಿ, ೫೧ ಪದ್ಯ)

ತಾತ್ಪರ್ಯ:
ಕೈಯಲ್ಲಿದ್ದ ಖಡ್ಗವು ತುಂಡಾಗಿ ಬೀಳಲು, ಹಲ್ಲುಕಡಿದು ಅಭಿಮನ್ಯುವು ರಭಸದಿಂದ ಗದೆಯನ್ನು ಹಿಡಿದು ಕೋಪದಿಂದ ಗುರಾಣಿಯನ್ನು ಹಿಡಿದು ಎದುರಿಗೆ ಬಾ ಎಂದು ಕೂಗಿ ಕರ್ಣನನ್ನು ಅಪ್ಪಳಿಸಿ ಐನೂರು ಹೆಜ್ಜೆಯಷ್ಟು ಹಿಂದಕ್ಕಟ್ಟಿದನು.

ಅರ್ಥ:
ಕರ: ಕೈ, ಹಸ್ತ; ಕರವಾಳ: ಕತ್ತಿ; ಉಡಿ: ಮುರಿ; ಬಿಡು: ತೊರೆ; ಹಲ್ಲು: ದಂತ; ಮೊರೆ: ಗರ್ಜಿಸು, ಅಬ್ಬರಿಸು; ಭರ: ವೇಗ; ಗದೆ: ಮುದ್ಗರ; ಕೊಂಡು: ಧರಿಸು, ಪಡೆ; ಅಬ್ಬರಿಸು: ಗರ್ಜಿಸು; ಕೋಪ: ಖತಿ; ಅಗಿ: ಕಚ್ಚು; ಹರಿಗೆ: ತಲೆಪೆರಿಗೆ, ಗುರಾಣಿ; ಹಿಡಿ: ಗ್ರಹಿಸು; ಮುಂದಣಿ: ಮುಂಭಾಗ; ಅರರೆ: ಅಬ್ಬಾ; ಸಮ್ಮುಖ: ಎದುರು; ಸಂಗರ: ಯುದ್ಧ; ಉರವಣಿಸು: ಆತುರಿಸು; ತೆರಳು: ಹೋಗು; ಹಜ್ಜೆ: ಪಾದ; ಸುತ: ಮಗ; ಸೂನು: ಮಗ;

ಪದವಿಂಗಡಣೆ:
ಕರದ +ಕರವಾಲ್+ಉಡಿಯೆ +ಬಿಡೆ +ಹಲ್
ಮೊರೆದು +ಭರದಲಿ +ಗದೆಯ +ಕೊಂಡ್
ಅಬ್ಬರಿಸಿ +ಕೋಪದಲ್+ಅಗಿದು +ಹರಿಗೆಯ +ಹಿಡಿದು +ಮುಂದಣಿಗೆ
ಅರರೆ+ ಸಮ್ಮುಖವಾಗೆನುತ +ಸಂ
ಗರದೊಳ್+ಉರವಣಿಸಿದನು +ಕರ್ಣನ
ತೆರಳಿಚಿದನ್+ಐನೂರು +ಹಜ್ಜೆಯಲ್+ಇಂದ್ರಸುತ+ ಸೂನು

ಅಚ್ಚರಿ:
(೧) ಅಭಿಮನ್ಯುವನ್ನು ಇಂದ್ರಸುತ ಸೂನು ಎಂದು ಕರೆದಿರುವುದು
(೨) ಅಭಿಮನ್ಯುವಿನ ಶೌರ್ಯ – ಅರರೆ ಸಮ್ಮುಖವಾಗೆನುತ ಸಂಗರದೊಳುರವಣಿಸಿದನು ಕರ್ಣನ
ತೆರಳಿಚಿದನೈನೂರು ಹಜ್ಜೆಯಲ್

ಪದ್ಯ ೫೫: ಕರ್ಣನ ತೇರು ಯಾವುದರಿಂದ ಒದ್ದೆಯಾಯಿತು?

ಸುರಪನಂಕುಶವೌಕಿದರೆ ಮೆ
ಯ್ಯರಿಯದೈರಾವತಕೆ ಕಬ್ಬಿನ
ಲಿರಿದರಂಜಿಕೆಯುಂಟೆ ನಿನ್ನಯ ಕಣೆಗಳೌಕಿದರೆ
ತೆರಳುವನೆ ಅಭಿಮನ್ಯುವೆನುತ
ಬ್ಬರಿಸಿ ಕರ್ಣನ ಕಾಯವನು ಹುಗಿ
ಲಿರಿದನೆಂಟಂಬಿನಲಿ ತೋದುದು ತೇರು ರಕ್ತದಲಿ (ದ್ರೋಣ ಪರ್ವ, ೫ ಸಂಧಿ, ೫೫ ಪದ್ಯ)

ತಾತ್ಪರ್ಯ:
ಅಭಿಮನ್ಯುವು ದೇವೇಂದ್ರನ ಅಂಕುಶದ ತಿವಿತವನ್ನು ಲೆಕ್ಕಿಸಿದ ಐರಾವತವು ಕಬ್ಬಿನಿಂದ ಇರಿದರೆ ಹೆದರೀತೇ? ನಿನ್ನ ಬಾಣಗಳನ್ನು ನಾನು ಲೆಕ್ಕಿಸುವನೇ? ಎಂದು ಅಭಿಮನ್ಯುವು ಎಂಟು ಬಾಣಗಳಿಂದ ಕರ್ಣನ ಮೈಯ್ಯಲ್ಲಿ ಹುಗಿಲುಹಾಕಿದನು. ಕರ್ಣನ ರಥವು ರಕ್ತದಿಂದ ತೋಯ್ದು ಹೋಯಿತು.

ಅರ್ಥ:
ಸುರಪ: ಇಂದ್ರ; ಅಂಕುಶ: ಹಿಡಿತ, ಹತೋಟಿ; ಔಕು: ನೂಕು, ತಳ್ಳು; ಅರಿ: ತಿಳಿ; ಕಬ್ಬು: ಇಕ್ಷುದಂಡ; ಇರಿ: ಚುಚ್ಚು; ಅಂಜಿಕೆ: ಹೆದರಿಕೆ; ಕಣೆ:ಬಾಣ; ತೆರಳು: ಹಿಂದಿರುಗು ಅಬ್ಬರಿಸು: ಗರ್ಜಿಸು; ಕಾಯ: ದೇಹ; ಹುಗಿ: ಹುದುಗಿಸು; ಅಂಬು: ಬಾಣ; ತೋದು: ಒದ್ದೆಯಾಗು; ತೇರು: ರಥ; ರಕ್ತ: ನೆತ್ತರು;

ಪದವಿಂಗಡಣೆ:
ಸುರಪನ್+ಅಂಕುಶವ್+ಔಕಿದರೆ+ ಮೆಯ್ಯ
ಅರಿಯದ್+ಐರಾವತಕೆ+ ಕಬ್ಬಿನಲ್
ಇರಿದರ್+ಅಂಜಿಕೆಯುಂಟೆ +ನಿನ್ನಯ +ಕಣೆಗಳ್+ಔಕಿದರೆ
ತೆರಳುವನೆ +ಅಭಿಮನ್ಯುವ್+ಎನುತ್
ಅಬ್ಬರಿಸಿ +ಕರ್ಣನ +ಕಾಯವನು +ಹುಗಿಲ್
ಇರಿದನ್+ಎಂಟ್+ಅಂಬಿನಲಿ +ತೋದುದು +ತೇರು +ರಕ್ತದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸುರಪನಂಕುಶವೌಕಿದರೆ ಮೆಯ್ಯರಿಯದೈರಾವತಕೆ ಕಬ್ಬಿನಲಿರಿದರಂಜಿಕೆಯುಂಟೆ

ಪದ್ಯ ೪೫: ಭೀಷ್ಮನ ಬಿಲ್ಲನ್ನು ಯಾರು ಕತ್ತರಿಸಿದರು?

ಎರಡು ಶರದಲಿ ನರನು ಭೀಷ್ಮನ
ಕರದ ಕಾರ್ಮುಕ ದಂಡವನು ಕ
ತ್ತರಿಸಿದನು ಕೈಯೊಡನೆ ಕೊಂಡನು ಭೀಷ್ಮ ಹೊಸ ಧನುವ
ಸರಳ ಸೂಟಿಯ ತೋರಿಸಿದಡ
ಬ್ಬರಿಸಿ ಫಲುಗುಣನೈದು ಬಾಣದ
ಲರಿ ಭಟನ ಚಾಪವನು ಕಡಿ ಮೂರಾಗಿ ಖಂಡಿಸಿದ (ಭೀಷ್ಮ ಪರ್ವ, ೯ ಸಂಧಿ, ೪೫ ಪದ್ಯ)

ತಾತ್ಪರ್ಯ:
ಅರ್ಜುನನು ಎರಡು ಬಾಣಗಳಿಂದ ಭೀಷ್ಮನ ಬಿಲ್ಲನ್ನು ಕತ್ತರಿಸಿದನು. ಭೀಷ್ಮನು ಅತಿ ವೇಗದಿಂದ ಹೊಸ ಬಿಲ್ಲನ್ನು ಹಿಡಿದು ಅರ್ಜುನನನ್ನು ಘಾತಿಸಿದನು. ಅರ್ಜುನನು ಭೀಷ್ಮನ ಬಿಲ್ಲನ್ನು ಮೂರು ತುಂಡುಗಳಾಗುವಂತೆ ಕತ್ತರಿಸಿದನು.

ಅರ್ಥ:
ಶರ: ಬಾಣ; ನರ: ಅರ್ಜುನ; ಕರ: ಹಸ್ತ; ಕಾರ್ಮುಕ: ಬಿಲ್ಲು; ದಂಡ: ಕೋಲು; ಕತ್ತರಿಸು: ಸೀಳು, ಚೂರು ಮಾಡು; ಕೊಂಡು: ಧರಿಸು; ಹೊಸ: ನವೀನ; ಧನು: ಬಿಲ್ಲು; ಸರಳ: ಬಾಣ; ಸೂಟಿ: ವೇಗ, ರಭಸ; ತೋರಿಸು: ಪ್ರದರ್ಶಿಸು; ಅಬ್ಬರಿಸು: ಗರ್ಜಿಸು; ಬಾಣ: ಸರಳು; ಅರಿ: ವೈರಿ; ಭಟ: ಶೂರ; ಚಾಪ: ಬಿಲ್ಲು; ಕಡಿ: ಕತ್ತರಿಸು; ಖಂಡಿಸು: ಕಡಿ, ಕತ್ತರಿಸು;

ಪದವಿಂಗಡಣೆ:
ಎರಡು+ ಶರದಲಿ +ನರನು +ಭೀಷ್ಮನ
ಕರದ +ಕಾರ್ಮುಕ +ದಂಡವನು +ಕ
ತ್ತರಿಸಿದನು +ಕೈಯೊಡನೆ +ಕೊಂಡನು +ಭೀಷ್ಮ +ಹೊಸ +ಧನುವ
ಸರಳ +ಸೂಟಿಯ +ತೋರಿಸಿದಡ್
ಅಬ್ಬರಿಸಿ +ಫಲುಗುಣನ್+ಐದು +ಬಾಣದಲ್
ಅರಿ +ಭಟನ +ಚಾಪವನು +ಕಡಿ +ಮೂರಾಗಿ +ಖಂಡಿಸಿದ

ಅಚ್ಚರಿ:
(೧) ಶರ, ಬಾಣ; ಚಾಪ, ಕಾರ್ಮುಕ, ಧನು – ಸಮಾನಾರ್ಥಕ ಪದಗಳು
(೨) ಕ ಕಾರದ ತ್ರಿವಳಿ ಪದ – ಕತ್ತರಿಸಿದನು ಕೈಯೊಡನೆ ಕೊಂಡನು

ಪದ್ಯ ೪೩: ಯುದ್ಧದಲ್ಲಿ ಯಾವ ಶಬ್ದ ಕೇಳಿತು?

ನೆಲನ ಗೆಲಿದಬ್ಬರಿಸಿ ಚಾಚಿದ
ತಲೆವರಿಗೆ ತೆರಳದೆ ಸುಘಾಯದ
ಬಲದ ಬೆಳೆಸಿರಿವಂತರನು ಕರೆಕರೆದು ಮೂದಲಿಸಿ
ಥಳಿಥಳಿಲು ಛಟಛಟಲು ಖಣಿಖಟಿ
ಲುಲುಹು ಮಿಗೆ ದನಿ ಮೆರೆಯ ರಿಪುಗಳ
ಗೆಲುವೆವೆಂದುರವಣಿಸಿ ಹೊಯ್ದಾಡಿದರು ರಣದೊಳಗೆ (ಭೀಷ್ಮ ಪರ್ವ, ೪ ಸಂಧಿ, ೪೩ ಪದ್ಯ)

ತಾತ್ಪರ್ಯ:
ರಣರಂಗದಲ್ಲಿ ಬಂದು ನಿಂತು, ಮರಣಕ್ಕೆ ಹೆದರದೆ, ವಿರೋಧಿ ವೀರರನ್ನು ಕರೆದು ಮೂದಲಿಸಿ, ಯುದ್ಧಮಾಡಲು ಥಳಿಥಳಿಲು, ಛಟಛಟಿಲು, ಖಣಿಖಣಿಖಟಿಲೆಂಬ ಸದ್ದು ಹರಡಿತು.

ಅರ್ಥ:
ನೆಲ: ಭೂಮಿ; ಗೆಲಿದು: ಜಯಿಸಿ; ಚಾಚು: ಹರಡು; ತಲೆ: ಶಿರ; ತೆರಳು: ಹೋಗು; ಸುಘಾಯ: ಅತಿಶಯವಾದ ಪೆಟ್ಟು; ಬಲ: ಶಕ್ತಿ, ಸೈನ್ಯ; ಬೆಳೆಸಿರಿ: ಬೆಳೆದ ಸಂಪತ್ತು; ಕರೆ: ಬರೆಮಾಡು; ಮೂದಲಿಸು: ಹಂಗಿಸು; ಉಲುಹು: ಶಬ್ದ; ಮಿಗೆ: ಅಧಿಕ; ದನಿ: ಶಬ್ದ; ಮೆರೆ: ಶೋಭಿಸು; ರಿಪು: ವೈರಿ; ಗೆಲುವು: ಜಯ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಹೊಯ್ದಾಡು: ಹೋರಾಡು; ರಣ: ಯುದ್ಧ;

ಪದವಿಂಗಡಣೆ:
ನೆಲನ +ಗೆಲಿದ್+ಅಬ್ಬರಿಸಿ +ಚಾಚಿದ
ತಲೆವರಿಗೆ+ ತೆರಳದೆ +ಸುಘಾಯದ
ಬಲದ +ಬೆಳೆಸಿರಿವಂತರನು+ ಕರೆಕರೆದು+ ಮೂದಲಿಸಿ
ಥಳಿಥಳಿಲು +ಛಟಛಟಲು +ಖಣಿಖಟಿಲ್
ಉಲುಹು +ಮಿಗೆ +ದನಿ +ಮೆರೆಯ +ರಿಪುಗಳ
ಗೆಲುವೆವೆಂದ್+ಉರವಣಿಸಿ+ ಹೊಯ್ದಾಡಿದರು +ರಣದೊಳಗೆ

ಅಚ್ಚರಿ:
(೧) ಶಬ್ದಗಳನ್ನು ವಿವರಿಸುವ ಪರಿ – ಥಳಿಥಳಿಲು ಛಟಛಟಲು ಖಣಿಖಟಿಲುಲುಹು ಮಿಗೆ ದನಿ ಮೆರೆಯ

ಪದ್ಯ ೨೯: ವೀರರು ಯಾರ ಅರಮನೆಯನ್ನು ಸೇರಿದರು?

ಕರೆಕರೆದು ಮೂದಲಿಸಿ ಕಡುಹಿನ
ದುರುಳರುಬ್ಬಿನ ಮೇಲೆ ಹೊಕ್ಕ
ಬ್ಬರಿಸಿ ಹೊಯಿದರು ಕಾದಿಕೊಂಡರು ಕಾಲನರಮನೆಯ
ಕರುಳುಗಿಯೆ ತಲೆ ಸಿಡಿಯೆ ನಿಟ್ಟೆಲು
ಮರಿಯೆ ಮೂಳೆಗಳುದಿರೆ ಶೋಣಿತ
ಸುರಿಯೆ ಕಾಳಿಜ ಕೆದರೆ ತುಂಡಿಸಿ ಖಂಡ ಬೆಂಡೇಳೆ (ಭೀಷ್ಮ ಪರ್ವ, ೪ ಸಂಧಿ, ೨೯ ಪದ್ಯ)

ತಾತ್ಪರ್ಯ:
ಎದುರಾಳಿಗಳನ್ನು ಮೂದಲಿಸಿ ಕರೆದು, ಗರ್ಜಿಸಿ ಅವರನ್ನು ಹೊಯ್ದರು, ಕತ್ತಿಗಳ ವೀರರು ಯುದ್ಧಮಾಡಿ ಯಮನ ಅರಮನೆಯನ್ನು ಪಡೆದರು. ಅವರ ಕರುಳುಗಳು ಹೊರಬಂದವು, ತಲೆಗಳು ಸಿಡಿದವು, ಎಲುಬುಗಳು ಮುರಿದು ಕೆಳಕ್ಕುದುರಿದವು. ರಕ್ತ ನೆಣಗಳು ಸುರಿದವು, ತುಂಡಾದ ಮಾಂಸ ಬೆಂಡೆದ್ದವು.

ಅರ್ಥ:
ಕರೆ: ಬರೆಮಾಡು; ಮೂದಲಿಸು: ಹಂಗಿಸು; ಕಡುಹು: ಪರಾಕ್ರಮ; ದುರುಳ: ದುಷ್ಟ; ಹೊಕ್ಕು: ಸೇರು; ಉಬ್ಬರಿಸು: ಅತಿಶಯ, ಹೆಚ್ಚಳ; ಹೊಯ್ದು: ಹೊಡೆ; ಕಾದು: ಹೋರಾಡು; ಕಾಲ: ಯಮ; ಅರಮನೆ: ರಾಜರ ಆಲಯ; ಕರುಳು: ಪಚನಾಂಗ; ಉಗಿ: ಹೊರಹಾಕು; ತಲೆ: ಶಿರ; ಸಿಡಿ: ಹೋಳಾಗು; ನಿಟ್ಟೆಲುಬು: ನೇರವಾದ ಮೂಳೆ; ಮೂಳೆ: ಎಲುಬು; ಉದಿರು: ಕೆಳಗೆ ಬೀಳು; ಶೋಣಿತ: ರಕ್ತ; ಸುರಿ: ಹೊರಹೊಮ್ಮು; ಕಾಳಿಜ: ಪಿತ್ತಾಶಯ; ಕೆದರು: ಹರಡು; ತುಂಡಿಸು: ಚೂರುಮಾಡು; ಬೆಂಡು: ತಿರುಳಿಲ್ಲದುದು, ಪೊಳ್ಳು;

ಪದವಿಂಗಡಣೆ:
ಕರೆಕರೆದು +ಮೂದಲಿಸಿ +ಕಡುಹಿನ
ದುರುಳರ್+ಉಬ್ಬಿನ +ಮೇಲೆ +ಹೊಕ್ಕ್
ಅಬ್ಬರಿಸಿ +ಹೊಯಿದರು +ಕಾದಿಕೊಂಡರು+ ಕಾಲನ್+ಅರಮನೆಯ
ಕರುಳ್+ಉಗಿಯೆ+ತಲೆ +ಸಿಡಿಯೆ +ನಿಟ್ಟೆಲು
ಮರಿಯೆ +ಮೂಳೆಗಳ್+ಉದಿರೆ +ಶೋಣಿತ
ಸುರಿಯೆ +ಕಾಳಿಜ +ಕೆದರೆ +ತುಂಡಿಸಿ +ಖಂಡ +ಬೆಂಡೇಳೆ

ಅಚ್ಚರಿ:
(೧) ಸಿಡಿಯೆ, ಮರಿಯೆ, ಉದಿರೆ, ಸುರಿಯೆ, ದೆಕರೆ – ಎ ಕಾರಾಂತ್ಯ ಪ್ರಾಸ ಪದಗಳು
(೨) ಸತ್ತರು ಎಂದು ಹೇಳಲು – ಹೊಯಿದರು ಕಾದಿಕೊಂಡರು ಕಾಲನರಮನೆಯ

ಪದ್ಯ ೧೬: ಬಾಣಗಳು ಹೇಗೆ ದಿಕ್ಕುಗಳನ್ನು ತುಂಬಿದವು?

ಉರಗಬಲದುರವಣೆಯೊ ವಾರಿದ
ತರುಗಳುಪಶಾಖೆಗಳೊ ಕಾಲನ
ಹರವರಿಯೊ ಹೆಬ್ಬೆಳೆಸ ಮುತ್ತುವ ವಿಹಗಸಂತತಿಯೊ
ತರಣಿ ತಲ್ಲಣಿಸಿದನು ಹೊಗರಲ
ಗುರವಣಿಸಿ ಹೊದರೆದ್ದು ಹಿಳುಕ
ಬ್ಬರಿಸಿ ಗಬ್ಬರಿಸಿದುವು ದಿಗುತಟವನು ಶರವ್ರಾತ (ಭೀಷ್ಮ ಪರ್ವ, ೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಸರ್ಪ ಸೈನ್ಯದ ರಭಸವೋ, ಮೇಘವೃಕ್ಷಗಳ ಕೊಂಬೆಗಳೋ, ಯಮನ ಪರಿವಾರವೋ, ಬೆಳಸಿಗೆ ಮುತ್ತುವ ಹಕ್ಕಿಗಳ ಹಿಂಡೋ, ಎಂಬಂತೆ, ಬಾಣಗಳು ಅಬ್ಬರಿಸಿ ಮುತ್ತಲು ಸೂರ್ಯನೇ ಬೆದರಿದನು. ಬಾಣಗಳು ದಿಕ್ಕುಗಳನ್ನು ತುಂಬಿದವು.

ಅರ್ಥ:
ಉರಗ: ಸರ್ಪ; ಬಲ: ಸೈನ್ಯ; ಉರವಣೆ: ಆತುರ, ಅವಸರ; ವಾರಿದ: ಮೋಡ; ತರು: ಮರ, ವೃಕ್ಷ; ಶಾಖೆ: ಮರದ ಕೊಂಬೆ; ಕಾಲ: ಯಮ; ಹರವರಿ: ನೆಲೆ, ನಿವಾಸ; ಹೆಬ್ಬೆಳೆಸು: ಫಲವತ್ತಾದ ಬೆಳೆ; ಮುತ್ತು: ಆವರಿಸು; ವಿಹಗ: ಪಕ್ಷಿ; ಸಂತತಿ: ವಂಶ, ಪೀಳಿಗೆ; ತರಣಿ: ಸೂರ್ಯ; ತಲ್ಲಣ: ಅಂಜಿಕೆ, ಭಯ; ಹೊಗರು: ಪ್ರಕಾಶ; ಅಲಗು: ಆಯುಧಗಳ ಹರಿತವಾದ ಅಂಚು; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಹೊದರು: ತೊಡಕು, ತೊಂದರೆ; ಹಿಳುಕು: ಬಾಣದ ಹಿಂಭಾಗ; ಅಬ್ಬರಿಸು: ಜೋರಾಗಿ ಕೂಗು; ಗಬ್ಬರಿಸು: ಆವರಿಸು; ದಿಗುತಟ: ದಿಕ್ಕುಗಳು; ಶರ: ಬಾಣ; ವ್ರಾತ: ಗುಂಪು;

ಪದವಿಂಗಡಣೆ:
ಉರಗ+ಬಲದ್+ ಉರವಣೆಯೊ+ ವಾರಿದ
ತರುಗಳ್+ಉಪಶಾಖೆಗಳೊ +ಕಾಲನ
ಹರವರಿಯೊ +ಹೆಬ್ಬೆಳೆಸ+ ಮುತ್ತುವ +ವಿಹಗ+ಸಂತತಿಯೊ
ತರಣಿ +ತಲ್ಲಣಿಸಿದನು+ ಹೊಗರ್+ಅಲಗ್
ಉರವಣಿಸಿ +ಹೊದರೆದ್ದು +ಹಿಳುಕ್
ಅಬ್ಬರಿಸಿ+ ಗಬ್ಬರಿಸಿದುವು +ದಿಗುತಟವನು +ಶರ+ವ್ರಾತ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉರಗಬಲದುರವಣೆಯೊ ವಾರಿದತರುಗಳುಪಶಾಖೆಗಳೊ ಕಾಲನ
ಹರವರಿಯೊ ಹೆಬ್ಬೆಳೆಸ ಮುತ್ತುವ ವಿಹಗಸಂತತಿಯೊ
(೨) ಅಬ್ಬರಿಸಿ, ಗಬ್ಬರಿಸಿ – ಪ್ರಾಸ ಪದಗಳು

ಪದ್ಯ ೩೬: ಅರ್ಜುನ ಬಾಣಗಳ ಪ್ರಭಾವ ಹೇಗಿತ್ತು?

ಬೊಬ್ಬಿರಿದು ನರನೆಸಲು ಕಣೆಗಳು
ಹಬ್ಬಿದವು ಹುರಿಗೊಂಡು ಹೂಣಿಗ
ರೊಬ್ಬುಳಿಯ ಹರೆಗಡಿದು ಕರಿಗಳ ಹೊದರ ಮೆದೆಗೆಡಹಿ
ತೆಬ್ಬನೊದೆದುರೆ ಬಳಿಕ ಗರಿ ಮೊರೆ
ದಬ್ಬರಿಸಿ ಕಬ್ಬಕ್ಕಿ ಗಗನವ
ಹಬ್ಬಿದಂತಿರೆ ಮಸಗಿದವು ಫಲುಗುಣನ ಶರಜಾಲ (ವಿರಾಟ ಪರ್ವ, ೮ ಸಂಧಿ, ೩೬ ಪದ್ಯ)

ತಾತ್ಪರ್ಯ:
ಅರ್ಜುನನು ಗರ್ಜಿಸಿ ಬಿಟ್ಟ ಬಾಣಗಳು ಕಬ್ಬಕ್ಕಿಗಳಂತೆ ಕೌರಾ ಸೈನ್ಯವನ್ನು ಆವರಿಸಿ ಆಕಾಶವನ್ನು ತುಂಬಿದವು. ವೀರರನ್ನು ಕಡಿದು ಹಾಕಿ, ಆನೆಗಳ ಗುಂಪುಗಳನ್ನು ಕೊಂದು ಮೆದೆಮಾಡಿ, ಗಾಂಡಿವದ್ದ ಹೆದೆಯಿಂದ ಚಿಮ್ಮಿ ಆಕಾಶವನ್ನಾವರಿಸಿದವು.

ಅರ್ಥ:
ಬೊಬ್ಬಿರಿದು: ಗರ್ಜಿಸು, ಆರ್ಭಟ; ನರ: ಅರ್ಜುನ; ಎಸೆ: ಬಾಣ ಬಿಡು; ಕಣೆ: ಬಾಣ; ಹಬ್ಬು: ಆವರಿಸು; ಹುರಿ: ಉತ್ಸಾಹ, ಹುರುಪು; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ; ಒಬ್ಬುಳಿ: ಗುಂಪು, ಸಮೂಹ; ಹರೆ: ವ್ಯಾಪಿಸು, ವಿಸ್ತರಿಸು, ಚದುರು; ಕಡಿ: ಸೀಳು; ಕರಿ: ಆನೆ; ಹೊದರು: ಪೊದೆ, ಹಿಂಡಲು; ಮೆದೆ: ಹುಲ್ಲಿನ ರಾಶಿ; ಕೆಡಹು: ಕಡಿ, ಸೀಳು; ತೆಬ್ಬು: ಬಿಲ್ಲಿನ ತಿರುವು; ಒದೆ: ನೂಕು; ಬಳಿಕ: ನಂತರ; ಗರಿ: ಬಾಣದ ಹಿಂಭಾಗ; ಮೊರೆ: ಗೋಳಾಟ, ಹುಯ್ಯಲು; ಅಬ್ಬರಿಸು: ಗರ್ಜಿಸು; ಕಬ್ಬಕ್ಕಿ: ಕರಿಯ ಹಕ್ಕಿ; ಗಗನ: ಆಗಸ; ಹಬ್ಬು: ಹರಡು, ಆವರಿಸು; ಮಸಗು: ಹರಡು; ಕೆರಳು; ತಿಕ್ಕು; ಶರ: ಬಾಣ; ಜಾಲ: ಗುಂಪು;

ಪದವಿಂಗಡಣೆ:
ಬೊಬ್ಬಿರಿದು+ ನರನ್+ಎಸಲು+ ಕಣೆಗಳು
ಹಬ್ಬಿದವು+ ಹುರಿಗೊಂಡು +ಹೂಣಿಗರ್
ಒಬ್ಬುಳಿಯ +ಹರೆ+ಕಡಿದು +ಕರಿಗಳ+ ಹೊದರ +ಮೆದೆ+ಕೆಡಹಿ
ತೆಬ್ಬನ್+ಒದೆದುರೆ +ಬಳಿಕ +ಗರಿ+ ಮೊರೆದ್
ಅಬ್ಬರಿಸಿ +ಕಬ್ಬಕ್ಕಿ +ಗಗನವ
ಹಬ್ಬಿದಂತಿರೆ +ಮಸಗಿದವು+ ಫಲುಗುಣನ +ಶರ+ಜಾಲ

ಅಚ್ಚರಿ:
(೧) ಹ ಕಾರದ ಸಾಲು ಪದಗಳು – ಹಬ್ಬಿದವು ಹುರಿಗೊಂಡು ಹೂಣಿಗರೊಬ್ಬುಳಿಯ ಹರೆಗಡಿದು
(೨) ಉಪಮಾನದ ಪ್ರಯೋಗ – ಕಬ್ಬಕ್ಕಿ ಗಗನವ ಹಬ್ಬಿದಂತಿರೆ ಮಸಗಿದವು ಫಲುಗುಣನ ಶರಜಾಲ

ಪದ್ಯ ೩೫: ಕುರುಸೈನ್ಯವು ಏನೆಂದು ಅಬ್ಬರಿಸಿತು?

ಮರಳಿ ಹೊಡೆ ಹಿಂಡಾಕಳನು ಗೋ
ವರನು ಬಿಡು ಹೆಡಗೈಯ ಕೊಯ್ ನ
ಮ್ಮರಸ ನಯದಪ್ಪಿದನು ತುರುಸೆರೆವಿಡಿವರೇ ನೃಪರು
ಕೊರಳ ಕಡಿತಕೆ ಹೊಕ್ಕ ಹಗೆವನ
ಸರಳಿಗುಸಿರನು ತೆರದಿರೆಂದ
ಬ್ಬರಿಸಿ ಕುರುಬಲ ಬಾಯಬಿಟ್ಟುದು ರಾಯನಿದಿರಿನೊಳು (ವಿರಾಟ ಪರ್ವ, ೮ ಸಂಧಿ, ೩೫ ಪದ್ಯ)

ತಾತ್ಪರ್ಯ:
ಕೌರವ ಸೈನ್ಯವು ಅರ್ಜುನನ ಧಾಳಿಗೆ ಬೆದರಿ, ಗೋವುಗಳ ಹಿಂಡನ್ನು ಹಿಂದಕ್ಕೆ ಹೊಡೆಯಿರಿ, ಗೋಪಾಲಕರ ಹೆಡಗೈಕಟ್ಟುಗಳನ್ನು ಕತ್ತರಿಸಿ ಹಾಕಿರಿ, ನಮ್ಮ ರಾಜನು ನೀತಿಯನ್ನು ಬಿಟ್ಟು ಗೋವುಗಳನ್ನು ಸೆರೆಹಿಡಿದಿದ್ದಾನೆ, ಹೀಗೆ ರಾಜರು ಮಾಡಬಹುದೇ ನಮ್ಮ ಕೊರಳುಗಳನ್ನು ಕಡಿಯಲು ಬಂದ ಶತ್ರುವಿಗೆ ಪ್ರಾಣವನ್ನು ಕೊಡಬೇಡಿರಿ ಎಂದು ಬಾಯ್ಬಾಯಿ ಬಿಟ್ಟು ಕೂಗಿದರು.

ಅರ್ಥ:
ಮರಳಿ: ಮತ್ತೆ; ಹೊಡೆ: ಏಟು, ಹೊಡೆತ; ಹಿಂಡು: ಗುಂಪು; ಆಕಳ: ಹಸು; ಗೋವರ: ಆಕಳು, ಗೋವು; ಬಿಡು: ತೊರೆ; ಹೆಡಗೈ: ಕೈ ಹಿಂಭಾಗ; ಕೊಯ್: ಸೀಳೂ; ಅರಸ: ರಾಜ; ನಯ: ಶಾಸ್ತ್ರ ರಾಜನೀತಿ; ತುರು: ಆಕಳು; ಸೆರೆ: ಬಂಧನ; ನೃಪ: ರಾಜ; ಕೊರಳು: ಗಂಟಲು; ಕಡಿತ: ಕತ್ತರಿಸು; ಹೊಕ್ಕು: ಸೇರು; ಹಗೆ: ವೈರತನ; ಸರಳ: ಬಾನ: ಉಸಿರು: ಜೀವ; ತೆರದಿರಿ: ಕೊಡಬೇಡಿರಿ; ಅಬ್ಬರಿಸು: ಗರ್ಜಿಸು; ಕುರುಬಲ: ಕುರು ಸೈನ್ಯ; ಇದಿರು: ಎದುರು;

ಪದವಿಂಗಡಣೆ:
ಮರಳಿ +ಹೊಡೆ +ಹಿಂಡ್+ಆಕಳನು +ಗೋ
ವರನು +ಬಿಡು +ಹೆಡಗೈಯ +ಕೊಯ್ +ನ
ಮ್ಮರಸ +ನಯದಪ್ಪಿದನು +ತುರು+ಸೆರೆವಿಡಿವರೇ+ ನೃಪರು
ಕೊರಳ+ ಕಡಿತಕೆ +ಹೊಕ್ಕ +ಹಗೆವನ
ಸರಳಿಗ್+ಉಸಿರನು +ತೆರದಿರೆಂದ್
ಅಬ್ಬರಿಸಿ +ಕುರುಬಲ+ ಬಾಯಬಿಟ್ಟುದು+ ರಾಯನ್+ಇದಿರಿನೊಳು

ಅಚ್ಚರಿ:
(೧) ಗೋ, ತುರು, ಆಕಳು; ರಾಯ, ಅರಸ, ನೃಪ – ಸಮನಾರ್ಥಕ ಪದಗಳು