ಪದ್ಯ ೩೨: ಅಶ್ವತ್ಥಾಮನು ಶಿಖಂಡಿ, ಉತ್ತಮೌಂಜಸನನ್ನು ಹೇಗೆ ಸಂಹರಿಸಿದನು?

ಉರಲ ಹತಿಸಿ ಸೆಳೆಯೆ ಗೋಣಲಿ
ಗುರುಗುರಿಸಲಸು ಜಾರಿದುದು ಬೊ
ಬ್ಬಿರಿದು ಹೊಕ್ಕನು ಕದವನೊದೆದು ಶಿಖಂಡಿಯರಮನೆಯ
ತರಿದನಾತನನುತ್ತ ಮೌಂಜನ
ನರಸಿ ಹೊಯ್ದನು ಹೊಕ್ಕು ಬಾಗಿಲ
ಮುರಿದು ಮೈಯರಿಹಿಸಿ ಯುಧಾಮನ್ಯುವ ವಿದಾರಿಸಿದ (ಗದಾ ಪರ್ವ, ೯ ಸಂಧಿ, ೩೨ ಪದ್ಯ)

ತಾತ್ಪರ್ಯ:
ಉರುಲು ಹಾಕಿ ಎಳೆದೊಡನೆ ಕುತ್ತಿಗೆಯಲ್ಲಿ ಗುರುಗುರು ಸದ್ದು ಬಂದು ಧೃಷ್ಟದ್ಯುಮ್ನನ ಪ್ರಾಣವು ಹಾರಿಹೋಯಿತು. ಶಿಖಂಡಿಯ ಮನೆಯ ಕದವನ್ನು ಒದೆದು ಒಳಹೊಕ್ಕು ಅವನನ್ನು ಕೊಂದನು. ಉತ್ತಮೌಂಜಸನನ್ನು ಹುಡುಕಿ ಕೊಂದು, ಬಾಗಿಲು ಮುರಿದು ಎಚ್ಚರಿಸಿ ಯುಧಾಮನ್ಯುವನ್ನು ಸಾಯಿಸಿದನು.

ಅರ್ಥ:
ಉರಲು: ಪಾಶ, ಜೀರುಗುಣಿಕೆಯ ಹಗ್ಗ; ಹತ್ತಿಸು: ಮೇಲೇರು; ಸೆಳೆ:ಎಳೆತ, ಸೆಳೆತ; ಗೋಣು: ಕಂಠ, ಕುತ್ತಿಗೆ; ಗುರುಗುರಿಸು: ಶಬ್ದವನ್ನು ಸೂಚಿಸುವ ಪರಿ; ಅಸು: ಪ್ರಾಣ; ಜಾರು: ಬೀಳು; ಬೊಬ್ಬಿರಿ: ಗರ್ಜಿಸು; ಹೊಕ್ಕು: ಸೇರು; ಕದ: ಬಾಗಿಲು; ಒದೆ: ನೂಕು; ಶಿಖಂಡಿ: ನಪುಂಸಕ; ಅರಮನೆ: ರಾಜರ ಆಲಯ; ತರಿ: ಕಡಿ, ಕತ್ತರಿಸು; ಅರಸು: ಹುಡುಕು; ಹೊಯ್ದು: ಹೊಡೆ; ಹೊಕ್ಕು: ಸೇರು; ಬಾಗಿಲು: ಕದ; ಮುರಿ: ಸೀಳು; ಮೈಯರಿ: ಎಚ್ಚರಿಸು; ವಿದಾರಿಸು: ನಾಶಮಾಡು;

ಪದವಿಂಗಡಣೆ:
ಉರಲ +ಹತಿಸಿ +ಸೆಳೆಯೆ +ಗೋಣಲಿ
ಗುರುಗುರಿಸಲ್+ಅಸು +ಜಾರಿದುದು +ಬೊ
ಬ್ಬಿರಿದು +ಹೊಕ್ಕನು+ ಕದವನ್+ಒದೆದು +ಶಿಖಂಡಿ+ಅರಮನೆಯ
ತರಿದನ್+ಆತನನ್+ ಉತ್ತಮೌಂಜನನ್
ಅರಸಿ +ಹೊಯ್ದನು +ಹೊಕ್ಕು +ಬಾಗಿಲ
ಮುರಿದು +ಮೈ+ಅರಿಹಿಸಿ +ಯುಧಾಮನ್ಯುವ +ವಿದಾರಿಸಿದ

ಅಚ್ಚರಿ:
(೧) ಸಾಯಿಸಿದನು ಎಂದು ಹೇಳುವ ಪರಿ – ಅಸು ಜಾರಿದುದು, ತರಿ, ಹೊಯ್ದನು, ವಿದಾರಿಸು

ಪದ್ಯ ೪೪: ಶ್ರೀಕೃಷ್ಣನು ಮತ್ತಾರನ್ನು ಬಿಡಾರಕ್ಕೆ ಕಳುಹಿಸಿದನು?

ನಡೆಯಿ ಪಂಚದ್ರೌಪದೇಯರ
ಗಡಣ ಧೃಷ್ಟದ್ಯುಮ್ನ ನಿಳಯಕೆ
ನಡೆ ಯುಧಾಮನ್ಯೂತ್ತಮೌಂಜಸ ಕಲಿ ಶಿಖಂಡಿಗಳು
ತಡೆಯದಿರಿ ಭಟರೇಳಿ ವಾದ್ಯದ
ಗಡೆಬಡಿಗರೀ ಸಕಲಜನ ನೀವ್
ಕಡು ಬಳಲಿದಿರಿ ಹೋಗಿ ಪಾಳೆಯಕೆಂದು ನೃಪ ನುಡಿದ (ಗದಾ ಪರ್ವ, ೮ ಸಂಧಿ, ೪೪ ಪದ್ಯ)

ತಾತ್ಪರ್ಯ:
ಉಪಪಾಂಡವರೇ ನೀವು ಹೊರಡಿರಿ. ಧೃಷ್ಟದ್ಯುಮ್ನ, ನಿನ್ನ ಬಿಡಾರಕ್ಕೆ ಹೋಗು. ಯುಧಾಮನ್ಯು, ಉತ್ತಮೌಜಸ, ಶಿಖಂಡಿಗಳು ತದಮಾಡಬೇಡಿರಿ. ವಾದ್ಯವಾದಕರು, ಪರಿವಾರದವರು ಬಳಲಿದ್ದೀರಿ ಪಾಳೆಯಕ್ಕೆ ಹೋಗಿ ವಿಶ್ರಮಿಸಿರಿ ಎಂದು ಕೃಷ್ಣನು ಹೇಳಿದನು.

ಅರ್ಥ:
ನಡೆ: ತೆರಳು, ಚಲಿಸು; ಗಡಣ: ಗುಂಪು; ನಿಳಯ: ಆಲಯ; ಕಲಿ: ಶೂರ; ತಡೆ: ನಿಲ್ಲಿಸು; ಭಟ: ಸೈನಿಕ; ವಾದ್ಯ: ಸಂಗೀತದ ಸಾಧನ; ಸಕಲ: ಎಲ್ಲಾ; ಕಡು: ಬಹಳ; ಬಳಲು: ಆಯಾಸ; ಹೋಗಿ: ತೆರಳು; ಪಾಳೆಯ: ಬಿಡಾರ; ನೃಪ: ರಾಜ; ನುಡಿ: ಮಾತಾಡು; ಗಡಿಬಡಿಗ: ಗಟ್ಟಿಯಾಗಿ ಶಬ್ದಮಾಡುವವ;

ಪದವಿಂಗಡಣೆ:
ನಡೆಯಿ +ಪಂಚದ್ರೌಪದೇಯರ
ಗಡಣ+ ಧೃಷ್ಟದ್ಯುಮ್ನ+ ನಿಳಯಕೆ
ನಡೆ +ಯುಧಾಮನ್ಯು+ ಉತ್ತಮೌಂಜಸ+ ಕಲಿ+ ಶಿಖಂಡಿಗಳು
ತಡೆಯದಿರಿ +ಭಟರ್+ಏಳಿ +ವಾದ್ಯದ
ಗಡೆಬಡಿಗರೀ +ಸಕಲಜನ +ನೀವ್
ಕಡು+ ಬಳಲಿದಿರಿ +ಹೋಗಿ +ಪಾಳೆಯಕೆಂದು +ನೃಪ +ನುಡಿದ

ಅಚ್ಚರಿ:
(೧) ನಡೆ, ತಡೆ – ಪ್ರಾಸ ಪದಗಳು

ಪದ್ಯ ೪: ಪಾಂಡವರಲ್ಲಿ ಯಾರು ಸರೋವರವನ್ನು ಮುತ್ತಿದರು?

ವರ ಯುಧಾಮನ್ಯೂತ್ತಮೌಂಜಸ
ರಿರಲು ಪಂಚದ್ರೌಪದೀಸುತ
ರರಸ ನಿಮ್ಮ ಯುಯುತ್ಸು ಸೃಂಜಯ ಸೋಮಕಾದಿಗಳು
ಕರಿಗಳೈನೂರೈದು ಸಾವಿರ
ತುರಗಪಯದಳವೆಂಟು ಸಾವಿರ
ವೆರಡು ಸಾವಿರ ರಥವಿದರಿಮೋಹರದ ಪರಿಶೇಷ (ಗದಾ ಪರ್ವ, ೫ ಸಂಧಿ, ೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಪಾಂಡವ ಸೇನೆಯಲ್ಲಿ ಯುಧಾಮನ್ಯು, ಉತ್ತಮೌಜಸ, ಉಪಪಾಂಡವರು, ಯುಯುತ್ಸು, ಸೃಂಜಯ ಸೋಮಕನೇ ಮೊದಲಾದವರೂ, ಐದುನೂರು ಆನೆಗಳೂ, ಐದುಸಾವಿರ ಕುದುರೆಗಳೂ, ಎರಡು ಸಾವಿರ ರಥಗಳೂ, ಎಂಟು ಸಾವಿರ ಕಾಲಾಳುಗಳೂ, ಉಳಿದವರು, ಎಲ್ಲರೂ ದ್ವೈಪಾಯನ ಸರೋವರವನ್ನು ಮುತ್ತಿದರು.

ಅರ್ಥ:
ವರ: ಶ್ರೇಷ್ಠ; ಸುತ: ಮಗ; ಅರಸ: ರಾಜ; ಆದಿ: ಮುಂತಾದ; ಕರಿ: ಆನೆ; ಸಾವಿರ: ಸಹಸ್ರ; ತುರಗ: ಅಶ್ವ; ರಥ: ಬಂಡಿ; ಮೋಹರ: ಯುದ್ಧ; ಪರಿಶೇಷ: ಉಳಿದಿದ್ದು; ಪಯದಳ: ಕಾಲಾಳುಗಳ ಸೈನ್ಯ;

ಪದವಿಂಗಡಣೆ:
ವರ +ಯುಧಾಮನ್ಯ+ಉತ್ತಮೌಂಜಸರ್
ಇರಲು +ಪಂಚ+ದ್ರೌಪದೀ+ಸುತರ್
ಅರಸ +ನಿಮ್ಮ +ಯುಯುತ್ಸು +ಸೃಂಜಯ +ಸೋಮಕಾದಿಗಳು
ಕರಿಗಳ್+ಐನೂರೈದು+ ಸಾವಿರ
ತುರಗ+ಪಯದಳವೆಂಟು +ಸಾವಿರವ್
ಎರಡು +ಸಾವಿರ +ರಥವಿದರಿ+ಮೋಹರದ +ಪರಿಶೇಷ

ಅಚ್ಚರಿ:
(೧) ಸಾವಿರ – ೩ ಬಾರಿ ಪ್ರಯೋಗ

ಪದ್ಯ ೪: ಪಾಂಡವರ ಸೈನ್ಯದಲ್ಲಿ ಎಷ್ಟು ಉಳಿಯಿತು?

ಧರಣಿಪತಿ ಕೇಳ್ ಧರ್ಮಜನ ಮೋ
ಹರದೊಳುಳಿದುದು ತೇರು ಸಾವಿರ
ವೆರಡು ಗಜವೇಳ್ನೊರು ಮಿಕ್ಕುದು ಲಕ್ಕ ಪಾಯದಳ
ತುರಗ ಸಾವಿರವೈದು ಸಾತ್ಯಕಿ
ವರ ಯುಧಾಮನ್ಯೂತ್ತಮೌಂಜಸ
ರುರು ಶಿಖಂಡಿ ದ್ರುಪದಸೂನು ದ್ರೌಪದೀಸುತರು (ಗದಾ ಪರ್ವ, ೩ ಸಂಧಿ, ೪ ಪದ್ಯ)

ತಾತ್ಪರ್ಯ:
ಎಲೈ ರಾಜ ಜನಮೇಜಯ ಕೇಳು, ಪಾಂಡವಸೇನೆಯಲ್ಲಿ ಎರಡು ಸಾವಿರ ರಥಗಳು, ಏಳುನೂರು ಆನೆಗಳು, ಐದುಸಾವಿರ ಕುದುರೆಗಳು, ಒಂದು ಲಕ್ಷ ಕಾಲಾಳುಗಳು. ಸಾತ್ಯಕಿ ಯುಧಾಮನ್ಯು ಉತ್ತಮೌಜಸ, ಶಿಖಂಡಿ, ಧೃಷ್ಟದ್ಯುಮ್ನ, ಉಪಪಾಂಡವರು, ಉಳಿದರು.

ಅರ್ಥ:
ಧರಣಿಪತಿ: ರಾಜ; ಮೋಹರ: ಯುದ್ಧ; ಉಳಿದು: ಮಿಕ್ಕ; ತೇರು: ಬಂಡಿ; ಸಾವಿರ: ಸಹಸ್ರ; ಗಜ: ಆನೆ; ಪಾಯದಳ: ಸೈನಿಕ; ತುರಗ: ಅಶ್ವ; ಉರು: ಶ್ರೇಷ್ಠ; ಸೂನು: ಮಗ; ಸುತ: ಮಗ;

ಪದವಿಂಗಡಣೆ:
ಧರಣಿಪತಿ +ಕೇಳ್ +ಧರ್ಮಜನ +ಮೋ
ಹರದೊಳ್+ಉಳಿದುದು +ತೇರು +ಸಾವಿರವ್
ಎರಡು+ ಗಜವ್+ಏಳ್ನೊರು +ಮಿಕ್ಕುದು +ಲಕ್ಕ +ಪಾಯದಳ
ತುರಗ +ಸಾವಿರವ್+ಐದು +ಸಾತ್ಯಕಿ
ವರ +ಯುಧಾಮನ್ಯು+ಉತ್ತಮೌಂಜಸರ್
ಉರು +ಶಿಖಂಡಿ +ದ್ರುಪದ+ಸೂನು+ ದ್ರೌಪದೀ+ಸುತರು

ಅಚ್ಚರಿ:
(೧) ಸೂನು, ಸುತ – ಸಮಾನಾರ್ಥಕ ಪದ

ಪದ್ಯ ೫೭: ಶಲ್ಯನನ್ನು ಎದುರಿಸಲು ಯಾರು ಮುಂದೆ ಬಂದರು?

ಮಲೆತ ಧೃಷ್ಟದ್ಯುಮ್ನನನು ಭಯ
ಗೊಳಿಸಿ ಸೋಮಕ ಸೃಂಜಯರನ
ಪ್ಪಳಿಸಿದನು ಸಾತ್ಯಕಿ ಯುಧಾಮನ್ಯೂತ್ತಮೌಂಜಸರ
ದಳದೊಳೋಡಿಸಿ ಮುರಿದು ಚಾತು
ರ್ಬಲವ ಸವರಿ ಶಿಖಂಡಿ ನಕುಲರ
ಹೊಲಬುಗೆಡಿಸಿ ಮಹೀಪತಿಯ ಪಡಿಮುಖಕೆ ಮಾರಾಂತ (ಶಲ್ಯ ಪರ್ವ, ೩ ಸಂಧಿ, ೫೭ ಪದ್ಯ)

ತಾತ್ಪರ್ಯ:
ಎದುರು ನಿಂತ ಧೃಷ್ಟದ್ಯುಮ್ನನನ್ನು ಬೆದರಿಸಿ ಸಾತ್ಯಕಿ, ಸೋಮಕ, ಸೃಂಜಯರನ್ನು ಯುಧಾಮನ್ಯು, ಉತ್ತಮೌಜಸರನ್ನು ಓಡಿಸಿ, ಚತುರಂಗ ಸೈನ್ಯವನ್ನು ಸವರಿ ಶಿಖಂಡಿ ನಕುಲರನ್ನು ದಾರಿತಪ್ಪಿಸಿ ಮತ್ತೆ ಧರ್ಮಜನ ಮುಂದೆ ಬಂದು ಹೋರಾಡಲು ಸಿದ್ಧನಾದನು.

ಅರ್ಥ:
ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು; ಭಯ: ಅಂಜಿಕೆ; ಅಪ್ಪಳಿಸು: ತಟ್ಟು, ತಾಗು; ದಳ: ಸೈನ್ಯ; ಓಡು: ಧಾವಿಸು; ಮುರಿ: ಸೀಳು; ಚಾತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ಸವರು: ನಾಶಮಾಡು; ಹೊಲಬು: ರೀತಿ, ಮಾರ್ಗ; ಮಹೀಪತಿ: ರಾಜ; ಪಡಿಮುಖ: ಎದುರು, ಮುಂಭಾಗ; ಮಾರಂತು: ಯುದ್ಧಕ್ಕಾಗಿ ನಿಂತು;

ಪದವಿಂಗಡಣೆ:
ಮಲೆತ +ಧೃಷ್ಟದ್ಯುಮ್ನನನು +ಭಯ
ಗೊಳಿಸಿ +ಸೋಮಕ +ಸೃಂಜಯರನ್
ಅಪ್ಪಳಿಸಿದನು +ಸಾತ್ಯಕಿ +ಯುಧಾಮನ್ಯು+ಉತ್ತಮೌಂಜಸರ
ದಳದೊಳ್+ಓಡಿಸಿ+ ಮುರಿದು +ಚಾತು
ರ್ಬಲವ +ಸವರಿ +ಶಿಖಂಡಿ +ನಕುಲರ
ಹೊಲಬುಗೆಡಿಸಿ+ ಮಹೀಪತಿಯ+ ಪಡಿಮುಖಕೆ +ಮಾರಾಂತ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸೋಮಕ ಸೃಂಜಯರನಪ್ಪಳಿಸಿದನು ಸಾತ್ಯಕಿ

ಪದ್ಯ ೬೫: ದ್ರೋಣನು ಯಾವ ಪರಾಕ್ರಮಿಗಳನ್ನು ಸಾಯಿಸಿದನು?

ತಿರುಗಿ ಭೀಮನನೆಚ್ಚನಿತ್ತಲು
ನರನ ಮಸೆಗಾಣಿಸಿದನರಸನ
ಹೊರೆಯ ಬಿರುದರ ಬಿಸಿಯಲೆಚ್ಚನು ವಾಮದಕ್ಷಿಣವ
ಮರಳಿ ಧೃಷ್ಟದ್ಯುಮ್ನ ಸಾತ್ಯಕಿ
ವರ ಯುಧಾಮನ್ಯೂತ್ತಮೌಂಜಸ
ರರಸುಮಕ್ಕಳ ಹಲಬರನು ಮುರಿಯೆಚ್ಚು ಬೊಬ್ಬಿರಿದ (ದ್ರೋಣ ಪರ್ವ, ೧೮ ಸಂಧಿ, ೬೫ ಪದ್ಯ)

ತಾತ್ಪರ್ಯ:
ಮತ್ತೆ ಭೀಮಾರ್ಜುನರನ್ನು ಬಾಣದಿಂದ ನೋಯಿಸಿ, ಧರ್ಮಜನ ಸುತ್ತಲಿದ್ದ ವೀರರನ್ನು ಎರಡು ಪಕ್ಕೆಗಳಲ್ಲು ರಕ್ತ ಸುರಿಯುವ ಹಾಗೆ ಘಾತಿಸಿದನು. ಧೃಷ್ಟದ್ಯುಮ್ನ, ಸಾತ್ಯಕಿ, ಯುಧಾಮನ್ಯು ಉತ್ತಮೌಂಜಸ, ರಾಜಕುಮಾರರನ್ನು ಮುರಿದು ಅಬ್ಬರಿಸಿದನು.

ಅರ್ಥ:
ತಿರುಗು: ಸುತ್ತು; ಎಚ್ಚು: ಬಾಣ ಪ್ರಯೋಗ ಮಾದು; ನರ: ಅರ್ಜುನ; ಮಸೆ: ಹರಿತವಾದುದು; ಕಾಣಿಸು: ಗೋಚರ; ಅರಸ: ರಾಜ; ಹೊರೆ: ಭಾರ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಬಸಿ: ಒಸರು, ಸ್ರವಿಸು; ವಾಮ: ಎಡಭಾಗ; ದಕ್ಷಿಣ: ಬಲಭಾಗ; ಮರಳು: ಹಿಂದಿರುಗು; ವರ: ಶ್ರೇಷ್ಠ; ಅರಸು: ರಾಜ; ಮಕ್ಕಳು: ಪುತ್ರ; ಹಲಬರು: ಹಲವಾರು; ಮುರಿ: ಸೀಳು; ಬೊಬ್ಬಿರಿ: ಗರ್ಜಿಸು;

ಪದವಿಂಗಡಣೆ:
ತಿರುಗಿ +ಭೀಮನನ್+ಎಚ್ಚನ್+ಇತ್ತಲು
ನರನ +ಮಸೆ+ಕಾಣಿಸಿದನ್+ಅರಸನ
ಹೊರೆಯ +ಬಿರುದರ +ಬಿಸಿಯಲ್+ಎಚ್ಚನು +ವಾಮ+ದಕ್ಷಿಣವ
ಮರಳಿ +ಧೃಷ್ಟದ್ಯುಮ್ನ +ಸಾತ್ಯಕಿ
ವರ +ಯುಧಾಮನ್ಯು+ಉತ್ತಮೌಂಜಸರ್
ಅರಸುಮಕ್ಕಳ+ ಹಲಬರನು +ಮುರಿ +ಎಚ್ಚು +ಬೊಬ್ಬಿರಿದ

ಅಚ್ಚರಿ:
(೧) ಎರಡು ಕಡೆ ಎಂದು ಹೇಳಲು – ಎಚ್ಚನು ವಾಮದಕ್ಷಿಣವ

ಪದ್ಯ ೫೫: ಭೀಮನು ಎಷ್ಟು ಬಾಣಗಳನ್ನು ಬಿಟ್ಟು ಗರ್ಜಿಸಿದನು?

ಎರಡು ಶರದಲಿ ಸಾರಥಿಯ ಹೇ
ರುರವನೆಸೆಯಲು ಘಾಯದಲಿ ತರ
ಹರಿಸದವ ಹಾಯ್ದನು ಯುಧಾಮನ್ಯುವಿನ ಹೊರೆಗಾಗಿ
ಮರಳಿ ಹತ್ತಂಬಿನಲಿ ಭೀಮನ
ಕೆರಳಿಚಿದನಾರಂಬಿನಲಿ ಹ
ನ್ನೆರಡರಲಿ ಹದಿನೆಂಟರಲಿ ಮಗುಳೆಚ್ಚು ಬೊಬ್ಬಿರಿದ (ದ್ರೋಣ ಪರ್ವ, ೧೩ ಸಂಧಿ, ೫೫ ಪದ್ಯ)

ತಾತ್ಪರ್ಯ:
ಬಾಣಗಳಿಂದ ತಬ್ಬಿಬ್ಬಾಗದೆ ಭೀಮನು ಎರಡು ಕವಲಂಬುಗಳಿಂದ ಸಾರಥಿಯನ್ನು ಹೊಡೆದನು. ಆ ನೋವಿನಿಂದ ಸೈರಿಸುವಾಗಲೇ ಯುಧಾಮನ್ಯುವಿನ ರಕ್ಷಣೆಯಲ್ಲಿ ಹೋರಾಟ ಮಾಡಿದನು. ಮತ್ತೆ ಹತ್ತು ಬಾಣಗಳಲ್ಲಿ ಭೀಮನನ್ನು ಕೆರಳಿಸಿ, ಆರು, ಹನ್ನೆರಡು ಮತ್ತು ಹದಿನೆಂಟು ಬಾಣಗಳನ್ನು ಹೊಡೆದು ಗರ್ಜಿಸಿದನು.

ಅರ್ಥ:
ಶರ: ಬಾಣ; ಸಾರಥಿ: ಸೂತ; ಹೇರು: ಹೊರೆ, ಭಾರ; ಎಸೆ: ಹೊರತರು; ಘಾಯ: ಪೆಟ್ಟು; ತರಹರಿಸು: ತಡಮಾಡು, ಸೈರಿಸು; ಹಾಯ್ದು: ಹೊಡೆ; ಮರಳು: ಮತ್ತೆ; ಅಂಬು: ಬಾಣ; ಕೆರಳು: ರೇಗು, ಕೆದರು, ಹರಡು; ಮಗುಳು: ಮತ್ತೆ; ಬೊಬ್ಬಿರಿ: ಗರ್ಜಿಸು; ಹೊರೆ: ರಕ್ಷಣೆ, ಆಶ್ರಯ;

ಪದವಿಂಗಡಣೆ:
ಎರಡು +ಶರದಲಿ +ಸಾರಥಿಯ +ಹೇ
ರುರವನ್+ಎಸೆಯಲು +ಘಾಯದಲಿ +ತರ
ಹರಿಸದವ+ ಹಾಯ್ದನು +ಯುಧಾಮನ್ಯುವಿನ +ಹೊರೆಗಾಗಿ
ಮರಳಿ +ಹತ್ತಂಬಿನಲಿ +ಭೀಮನ
ಕೆರಳಿಚಿದನ್+ಆರಂಬಿನಲಿ +ಹ
ನ್ನೆರಡರಲಿ +ಹದಿನೆಂಟರಲಿ +ಮಗುಳ್+ಎಚ್ಚು +ಬೊಬ್ಬಿರಿದ

ಅಚ್ಚರಿ:
(೧) ಬಾಣಗಳ ಲೆಕ್ಕ – ಆರಂಬಿನಲಿ ಹನ್ನೆರಡರಲಿ ಹದಿನೆಂಟರಲಿ ಮಗುಳೆಚ್ಚು ಬೊಬ್ಬಿರಿದ

ಪದ್ಯ ೨೪: ಅರ್ಜುನನ ಮೇಲೆ ಹೇಗೆ ಪೌರುಷ ತೋರಿದರು?

ಈ ನಕುಳನೀ ಭೀಮನೀ ಪಾಂ
ಚಾಲನೀ ಸಹದೇವನೀ ಭೂ
ಪಾಲನೀ ಸಾತ್ಯಕಿ ಯುಧಾಮನ್ಯೂತ್ತಮೌಂಜಸರು
ಕಾಳೆಗದೊಳಂಗೈಸಲಮ್ಮದೆ
ಬಾಲಕನ ನೂಕಿದಿರಲಾ ನಿ
ಮ್ಮಾಳುತನವನು ತೋರಿದಿರಲಾ ತನ್ನ ಮೇಲೆಂದ (ದ್ರೋಣ ಪರ್ವ, ೮ ಸಂಧಿ, ೨೪ ಪದ್ಯ)

ತಾತ್ಪರ್ಯ:
ಈ ನಕುಲ ಸಹದೇವರು, ಈ ಭೀಮ, ದ್ರುಪದ, ನೀನು ಸಾತ್ಯಕಿ, ಯುಧಾಮನ್ಯು, ಉತ್ತಮೌಜಸರು, ಯುದ್ಧಕ್ಕೆ ನುಗ್ಗಲಾಗದೆ ಈ ಚಿಕ್ಕ ಬಾಲಕನನ್ನು ಮುಂದೆ ದೂಡಿ ನಿಮ್ಮ ಪರಾಕ್ರಮವನ್ನು ನನ್ನ ಮೇಲೆ ತೋರಿದಿರಿ ಎಂದು ಅಳಲನ್ನು ವ್ಯಕ್ತಪಡಿಸಿದನು.

ಅರ್ಥ:
ಭೂಪಾಲ: ರಾಜ; ಕಾಳೆಗ: ಯುದ್ಧ; ಐಸು: ಅಷ್ಟು; ಬಾಲಕ: ಚಿಕ್ಕವ; ನೂಕು: ತಳ್ಳು; ಆಳುತನ: ಪರಾಕ್ರಮ; ತೋರು: ಪ್ರದರ್ಶಿಸು; ಅಂಗೈಸು: ಜತೆಯಾಗು;

ಪದವಿಂಗಡಣೆ:
ಈ +ನಕುಳನ್+ಈ+ ಭೀಮನ್+ಈ+ ಪಾಂ
ಚಾಲನ್+ಈ+ ಸಹದೇವನ್+ಈ+ ಭೂ
ಪಾಲನ್+ಈ+ ಸಾತ್ಯಕಿ +ಯುಧಾಮನ್ಯು+ಉತ್ತಮೌಂಜಸರು
ಕಾಳೆಗದೊಳ್+ಅಂಗೈಸಲಮ್ಮದೆ
ಬಾಲಕನ +ನೂಕಿದಿರಲಾ +ನಿಮ್ಮ್
ಆಳುತನವನು +ತೋರಿದಿರಲಾ +ತನ್ನ +ಮೇಲೆಂದ

ಅಚ್ಚರಿ:
(೧) ನೂಕಿದಿರಲಾ, ತೋರಿದಿರಲಾ – ಪ್ರಾಸ ಪದಗಳು

ಪದ್ಯ ೪೫: ಉಪಪ್ಲವಾಖ್ಯಕ್ಕೆ ಯಾರು ಬಂದು ಸೇರಿದರು?

ಜೋಳಿ ಹರಿದವು ನಿಖಿಳರಾಯರಿ
ಗೋಲೆಯುಡುಗೊರೆಯಿಕ್ಕಿದವು ಪಾಂ
ಚಾಲಪತಿ ಹೊರವಂಟ ಮೂರಕ್ಷೋಣಿ ಬಲಸಹಿತ
ನೀಲನು ಯುಧಾಮನ್ಯು ಸಮರ ಕ
ರಾಳ ದೃಷ್ಟದ್ಯುಮ್ನ ಕೀರ್ತಿವಿ
ಶಾಲ ಧೀರ ಶಿಖಂಡಿ ಸಹಿತಾ ದ್ರುಪದನೈತಂದ (ವಿರಾಟ ಪರ್ವ, ೧೧ ಸಂಧಿ, ೪೫ ಪದ್ಯ)

ತಾತ್ಪರ್ಯ:
ಎಲ್ಲಾ ರಾಜರಿಗೂ ಓಲೆಗಳನ್ನು ಉಡುಗೊರೆಗಳನ್ನು ಪಾಂಡವರು ಕಳಿಸಿದರು. ದ್ರುಪದ ಮಹಾರಾಜನು ನೀಲ, ಯುಧಾಮನ್ಯು, ದೃಷ್ಟಧ್ಯುಮ್ನ ಶಿಖಂಡಿ ಇವರೊಡನೆ ಮೂರು ಅಕ್ಷೋಹಿಣಿ ಸೈನ್ಯಸಹಿತ ಉಪಪ್ಲವಾಖ್ಯಕ್ಕೆ ಬಂದು ಸೇರಿದರು.

ಅರ್ಥ:
ಜೋಳಿ: ಗುಂಪು; ಹರಿ: ಪಸರಿಸು, ಹರಡು; ನಿಖಿಳ: ಎಲ್ಲಾ; ರಾಯ: ರಾಜ; ಓಲೆ: ಪತ್ರ; ಉಡುಗೊರೆ: ಕಾಣಿಕೆ, ಬಳುವಳಿ; ಪಾಂಚಾಲಪತಿ: ದ್ರುಪದ; ಹೊರವಂಟ: ತೆರಳು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಬಲ: ಸೈನ್ಯ; ಸಹಿತ: ಜೊತೆ; ಸಮರ: ಯುದ್ಧ; ಕರಾಳ: ಭಯಂಕರ; ಕೀರ್ತಿ: ಖ್ಯಾತಿ; ವಿಶಾಲ: ತುಂಬ; ಧೀರ: ಪರಾಕ್ರಮಿ; ಸಹಿತ: ಜೊತೆ; ಐತರು: ಬಂದು ಸೇರು;

ಪದವಿಂಗಡಣೆ:
ಜೋಳಿ +ಹರಿದವು +ನಿಖಿಳ+ರಾಯರಿಗ್
ಓಲೆ+ಉಡುಗೊರೆ+ಯಿಕ್ಕಿದವು+ ಪಾಂ
ಚಾಲಪತಿ+ ಹೊರವಂಟ+ ಮೂರ್+ಅಕ್ಷೋಣಿ +ಬಲ+ಸಹಿತ
ನೀಲನು +ಯುಧಾಮನ್ಯು +ಸಮರ+ ಕ
ರಾಳ +ದೃಷ್ಟದ್ಯುಮ್ನ +ಕೀರ್ತಿ+ವಿ
ಶಾಲ +ಧೀರ +ಶಿಖಂಡಿ+ ಸಹಿತ +ಆ+ ದ್ರುಪದನ್+ಐತಂದ

ಅಚ್ಚರಿ:
(೧) ಪಾಂಚಾಲಪತಿ, ದ್ರುಪದ – ಸಮನಾರ್ಥಕ ಪದ

ಪದ್ಯ ೭: ಧರ್ಮಜನ ಸುತ್ತಮುತ್ತ ಯಾರು ಕುಳಿತಿದ್ದರು?

ನಕುಳ ಧೃಷ್ಟದ್ಯುಮ್ನ ಸಹದೇ
ವಕ ಯುಧಾಮನ್ಯುಕನು ಸುತಸೋ
ಮಕ ಶತಾನೀಕ ಪ್ರಬುದ್ಧಕ ಚೀಕಿತಾನಕರು
ಸಕಲ ಕೈಕೆಯ ಮತ್ಸ್ಯಸುತ ಸಾ
ತ್ಯಕಿ ಯುಯುತ್ಸು ಶಿಖಂಡಿ ಪ್ರತಿವಿಂ
ಧ್ಯಕರು ಪಾರ್ಥನನುಪಚರಿಸಿ ಕುಳ್ಳಿರ್ದರಲ್ಲಲ್ಲಿ (ಕರ್ಣ ಪರ್ವ, ೧೬ ಸಂಧಿ, ೭ ಪದ್ಯ)

ತಾತ್ಪರ್ಯ:
ಧರ್ಮಜನ ಆಸುಪಾಸಿನಲ್ಲಿ ನಕುಲ, ಧೃಷ್ಟದ್ಯುಮ್ನ, ಸಹದೇವ, ಯುಧಾಮನ್ಯು, ಸುತಸೋಮ, ಶತಾನೀಕ, ಪ್ರಬುದ್ಧ, ಚೇಕಿತಾನ, ಕೈಕೆಯ, ವಿರಾಟನ ಮಗ, ಸಾತ್ಯಕಿ, ಯುಯುತ್ಸು, ಶಿಖಂಡಿ, ಪ್ರತಿವಿಂಧ್ಯರು ಅರ್ಜುನನನ್ನು ಉಪಚರಿಸಿ ಅಲ್ಲಲ್ಲೇ ಕುಳಿತಿದ್ದರು.

ಅರ್ಥ:
ಸಕಲ: ಎಲ್ಲಾ; ಸುತ: ಮಗ; ಕುಳ್ಳಿರ್ದ: ಆಸೀನರಾಗು;

ಪದವಿಂಗಡಣೆ:
ನಕುಳ +ಧೃಷ್ಟದ್ಯುಮ್ನ +ಸಹದೇ
ವಕ+ ಯುಧಾಮನ್ಯುಕನು+ ಸುತಸೋ
ಮಕ +ಶತಾನೀಕ+ ಪ್ರಬುದ್ಧಕ+ ಚೀಕಿತಾನಕರು
ಸಕಲ +ಕೈಕೆಯ +ಮತ್ಸ್ಯಸುತ +ಸಾ
ತ್ಯಕಿ +ಯುಯುತ್ಸು +ಶಿಖಂಡಿ +ಪ್ರತಿವಿಂ
ಧ್ಯಕರು +ಪಾರ್ಥನನ್+ಉಪಚರಿಸಿ +ಕುಳ್ಳಿರ್ದರ್+ಅಲ್ಲಲ್ಲಿ