ಪದ್ಯ ೮: ಗೂಢಾಚಾರರು ಏನೆಂದು ಹೇಳಿದರು?

ಮುರಿದು ಬರುತಿದೆ ಸೇನೆ ಸಾಕೀ
ಪರಿಯ ಸೈರಣೆ ನಿಮ್ಮ ಮಾವನ
ಕುರಿದರಿಗೆ ಖತಿಗೊಂಡು ಕಾದಿ ವಿರಾಟ ಕೈಕೆಯರು
ತುರುಗಿದರು ತೆತ್ತೀಸರಲಿ ತೆಗೆ
ಮರೆಯ ಮಾತೇ ವಿಜಯಲಕ್ಷ್ಮಿಯ
ಸೆರಗ ಹಿಡಿದನು ದ್ರೋಣನೆಂದರು ಚರರು ಭೂಪತಿಗೆ (ದ್ರೋಣ ಪರ್ವ, ೧೮ ಸಂಧಿ, ೮ ಪದ್ಯ)

ತಾತ್ಪರ್ಯ:
ರಣರಂಗದಿಂದ ಅರಸನ ನೆಲೆಗೆ ಬಂದ ದೂತರು, ಜೀಆ, ದ್ರೋಣನು ನಿಮ್ಮ ಮಾವನನ್ನು ಕುರಿಯಂತೆ ಕಡಿದು ಹಾಕಿದನು. ಇದರಿಂದ ಕೋಪಗೊಂಡ ವಿರಾಟನು, ಕೇಕೆಯನೂ ದ್ರೋಣನೊಡನೆ ಕಾದಿ ದೇವತೆಗಳ ಲೋಕಕ್ಕೆ ಹೋದರು. ಮರೆ ಮುಚ್ಚಿನ ಮಾತೇಕೆ, ದ್ರೋಣನು ವಿಜಯಲಕ್ಷ್ಮಿಯ ಸೆರಗನ್ನುಹಿಡಿದೆಳೆದನು ಎಂದು ಧರ್ಮಜನಿಗೆ ಹೇಳಿದರು.

ಅರ್ಥ:
ಮುರಿ: ಸೀಳು; ಬರುತಿದೆ: ಆಗಮಿಸು; ಸೇನೆ: ಸೈನ್ಯ; ಸಾಕು: ನಿಲ್ಲು; ಪರಿ: ರೀತಿ; ಸೈರಣೆ: ತಾಳ್ಮೆ; ಮಾವ: ಹೆಂಡತಿಯ ತಂದೆ; ಕುರಿ: ಮೇಷ; ಖತಿ: ಕೋಪ; ಕಾದು: ಹೋರಾದು; ತುರುಗು: ಹೆಚ್ಚಾಗು, ಅಧಿಕವಾಗು; ತೆತ್ತು: ತಿರಿಚು, ಸುತ್ತು; ತೆಗೆ: ಹೊರತರು; ಮರೆ: ಮುಚ್ಚು; ಮಾತು: ವಾಣಿ; ವಿಜಯ: ಗೆಲುವು; ಸೆರಗು: ಬಟ್ಟೆ, ಉತ್ತರೀಯ; ಹಿಡಿ: ಗ್ರಹಿಸು; ಚರ: ಗೂಢಚಾರ, ಸೇವಕ; ಭೂಪತಿ: ರಾಜ;

ಪದವಿಂಗಡಣೆ:
ಮುರಿದು +ಬರುತಿದೆ +ಸೇನೆ +ಸಾಕ್+ಈ
ಪರಿಯ +ಸೈರಣೆ +ನಿಮ್ಮ +ಮಾವನ
ಕುರಿದರಿಗೆ+ ಖತಿಗೊಂಡು +ಕಾದಿ +ವಿರಾಟ +ಕೈಕೆಯರು
ತುರುಗಿದರು +ತೆತ್ತೀಸರಲಿ +ತೆಗೆ
ಮರೆಯ +ಮಾತೇ +ವಿಜಯಲಕ್ಷ್ಮಿಯ
ಸೆರಗ+ ಹಿಡಿದನು +ದ್ರೋಣನ್+ಎಂದರು +ಚರರು+ ಭೂಪತಿಗೆ

ಅಚ್ಚರಿ:
(೧) ದ್ರುಪದನನ್ನು ಕೊಂದ ಪರಿ – ನಿಮ್ಮ ಮಾವನ ಕುರಿದರಿಗೆ
(೨) ಜಯವನ್ನು ಸಮೀಪಿಸಿದ ಎಂದು ಹೇಳುವ ಪರಿ – ವಿಜಯಲಕ್ಷ್ಮಿಯ ಸೆರಗ ಹಿಡಿದನು ದ್ರೋಣನೆಂದರು ಚರರು ಭೂಪತಿಗೆ

ಪದ್ಯ ೪೩: ಯುದ್ಧದಲ್ಲಿ ನಾಶವಾದ ಸೈನ್ಯವೆಷ್ಟು?

ಅರಸು ಮಕ್ಕಳು ಮತ್ಸ್ಯ ಪಾಂಚಾ
ಲರಲಿ ಕೈಕೆಯ ಚೈದ್ಯ ಯಾದವ
ತುರುಕ ಬರ್ಬರ ಗೌಳ ಮಾಗಧ ಪಾರಿಯಾತ್ರರಲಿ
ಉರುಳಿತೊಂದೇ ಲಕ್ಷವುಳಿದೀ
ಕರಿ ವರೂಥ ಪದಾತಿ ತುರಗವ
ನರಸ ಲೆಕ್ಕಿಸಲಾರು ಬಲ್ಲರು ವೈರಿ ಸೇನೆಯಲಿ (ದ್ರೋಣ ಪರ್ವ, ೧೭ ಸಂಧಿ, ೪೩ ಪದ್ಯ)

ತಾತ್ಪರ್ಯ:
ಎಲೈ ರಾಜ ಧೃತರಾಷ್ಟ್ರ ಕೇಳು, ರಾಜನ ಮಕ್ಕಳು, ಮತ್ಸ್ಯ, ಪಾಂಚಾಲ, ಕೈಕೆಯ, ಚೈದ್ಯ, ಯಾದವ, ತುರುಕ, ಬರ್ಬರ, ಗೌಳ, ಮಾಗಧ, ಪಾರಿಯಾತ್ರ ರಾಜರೆಲ್ಲರು ಸೋಲನಪ್ಪಿದರು. ಒಂದು ಲಕ್ಷದಷ್ಟು ಸೈನ್ಯವು ನಾಶವಾಯಿತು, ಉಳಿದ ಚತುರಂಗ ಸೈನ್ಯದ ಆನೆ, ಕುದುರೆ, ರಥ, ಕಾಲಾಳುಗಳು ಎಷ್ಟು ನಾಶವಾಯಿತೆಂದು ವೈರಿ ಸೈನ್ಯದಲ್ಲಿ ಯಾರು ತಾನೆ ಬಲ್ಲರು ಎಂದು ಸಂಜಯನು ವಿವರಿಸಿದನು.

ಅರ್ಥ:
ಅರಸು: ರಾಜ; ಮಕ್ಕಳು: ಸುತರು; ಉರುಳು: ಬೀಳು; ಉಳಿದ: ಮಿಕ್ಕ; ಕರಿ: ಆನೆ; ವರೂಥ: ತೇರು, ರಥ; ಪದಾತಿ: ಸೈನಿಕ; ತುರಗ: ಅಶ್ವ; ಅರಸ: ರಾಜ; ಲೆಕ್ಕಿಸು: ಗಮನಿಸು; ಬಲ್ಲರು: ತಿಳಿದವ; ವೈರಿ: ಶತ್ರು; ಸೇನೆ: ಸೈನ್ಯ;

ಪದವಿಂಗಡಣೆ:
ಅರಸು +ಮಕ್ಕಳು +ಮತ್ಸ್ಯ +ಪಾಂಚಾ
ಲರಲಿ +ಕೈಕೆಯ +ಚೈದ್ಯ +ಯಾದವ
ತುರುಕ+ ಬರ್ಬರ +ಗೌಳ +ಮಾಗಧ +ಪಾರಿಯಾತ್ರರಲಿ
ಉರುಳಿತೊಂದೇ +ಲಕ್ಷವುಳಿದ್
ಈ+ ಕರಿ +ವರೂಥ +ಪದಾತಿ +ತುರಗವನ್
ಅರಸ +ಲೆಕ್ಕಿಸಲಾರು +ಬಲ್ಲರು +ವೈರಿ +ಸೇನೆಯಲಿ

ಅಚ್ಚರಿ:
(೧) ರಾಜಮನೆತನಗಳ ಹೆಸರು – ಮತ್ಸ್ಯ, ಪಾಂಚಾಲ, ಕೈಕೆಯ, ಚೈದ್ಯ, ಯಾದವ, ತುರುಕ, ಬರ್ಬರ, ಗೌಳ ಮಾಗಧ, ಪಾರಿಯಾತ್ರ

ಪದ್ಯ ೩೨: ದ್ರೋಣನು ಪಾಂಡವ ಸೈನಿಕರಿಗೆ ಏನು ಹೇಳಿದ?

ಇರುಳುಗಳ್ಳನ ಕೂಡೆ ಸೇರಿದ
ಮರುಳಿನಂತಿರೆ ನೀವು ರಣದಲಿ
ತರಿಸಿಕೊಂಬಿರಿ ಹಾಯ್ದರವದಿರು ನಿಮ್ಮನೆಡೆಯೊಡ್ಡಿ
ಮರಳಿರೈ ಕೈಕೆಯರು ಮತ್ಸ್ಯರು
ಬಿರುದ ಸೃಂಜಯರಕಟಕಟ ಖೂ
ಳರು ವೃಥಾ ನಿಮಗೇಕೆ ಸಾವೆನುತಿರ್ದನಾ ದ್ರೋಣ (ದ್ರೋಣ ಪರ್ವ, ೧೭ ಸಂಧಿ, ೩೨ ಪದ್ಯ)

ತಾತ್ಪರ್ಯ:
ಇರುಳುಗಳ್ಳನ ಜೊತೆ ಸೇರಿಕೊಂಡ ಹುಚ್ಚರು ನೀವು. ಯುದ್ಧದಲ್ಲಿ ಸಾವನ್ನು ತಲೆಯ ಮೇಲೆಳೆದುಕೊಳ್ಳುತ್ತೀರಿ. ನಿಮ್ಮನ್ನು ಮುಂದಕ್ಕೆ ದಬ್ಬಿ ಅವರು ಎತ್ತಲೋ ಹೋದರು. ಕೈಕೆಯರೇ ಮತ್ಸ್ಯರೇ ಸೃಂಜಯರೇ ಎಂಥಾ ಮೂರ್ಖರು ನೀವು, ನಿಮಗೇಕೆ ವೃಥಾ ಸಾವು ಎಂದು ದ್ರೋಣನು ಹೇಳಿದನು.

ಅರ್ಥ:
ಇರುಳು: ರಾತ್ರಿ; ಕಳ್ಳ: ಚೋರ; ಕೂಡೆ: ಜೊತೆ; ಸೇರು: ಕೂಡು; ಮರುಳು: ಹುಚ್ಚು; ರಣ: ಯುದ್ಧ; ತರಿಸು: ಬರೆಮಾಡು; ಹಾಯ್ದು: ಹೊಡೆ; ಅಡೆ: ಅಡ್ಡ; ಒಡ್ಡು: ಪ್ರತಿಭಟಿಸು; ಮರಳು: ಹಿಂದಿರುಗು; ಬಿರುದು: ಗೌರವ ಸೂಚಕದ ಪದ; ಅಕಟ: ಅಯ್ಯೋ; ಖೂಳ: ದುಷ್ಟ; ವೃಥ: ಸುಮ್ಮನೆ; ಸಾವು: ಮರಣ;

ಪದವಿಂಗಡಣೆ:
ಇರುಳು+ಕಳ್ಳನ +ಕೂಡೆ +ಸೇರಿದ
ಮರುಳಿನಂತಿರೆ+ ನೀವು +ರಣದಲಿ
ತರಿಸಿಕೊಂಬಿರಿ +ಹಾಯ್ದರ್+ಅವದಿರು +ನಿಮ್ಮನ್+ಎಡೆಯೊಡ್ಡಿ
ಮರಳಿರೈ +ಕೈಕೆಯರು +ಮತ್ಸ್ಯರು
ಬಿರುದ+ ಸೃಂಜಯರ್+ಅಕಟಕಟ+ ಖೂ
ಳರು +ವೃಥಾ +ನಿಮಗೇಕೆ+ ಸಾವೆನುತಿರ್ದನಾ +ದ್ರೋಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಇರುಳುಗಳ್ಳನ ಕೂಡೆ ಸೇರಿದಮರುಳಿನಂತಿರೆ

ಪದ್ಯ ೩೪: ಅರ್ಜುನನು ಮಹಾಸ್ತ್ರವನ್ನು ಎಲ್ಲಿ ಪಠಿಸಿದನು?

ಕರೆದು ಸಾತ್ಯಕಿ ಭೀಮನನು ನೃಪ
ವರನ ಸುಯ್ದಾನದಲಿ ನಿಲಿಸಿದ
ನರಿಬಲಕೆ ನೂಕಿದನು ಕೈಕೆಯ ಚೈದ್ಯ ಸೃಂಜಯರ
ಮುರಮಥನನೊಡಗೂಡಿ ನಿಜ ಮೋ
ಹರವನಂದೈನೂರು ಬಿಲ್ಲಿಂ
ತರಕೆ ತೊಲಗಿ ಮಹಾಸ್ತ್ರಮಂತ್ರವ ಜಪಿಸಿದನು ಪಾರ್ಥ (ದ್ರೋಣ ಪರ್ವ, ೯ ಸಂಧಿ, ೩೪ ಪದ್ಯ)

ತಾತ್ಪರ್ಯ:
ಅರ್ಜುನನು ಸಾತ್ಯಕಿ ಭೀಮರನ್ನು ಕರೆದು ದೊರೆಯನ್ನು ರಕ್ಷಿಸಲು ನಿಲಿಸಿದನು. ಕೈಕೆಯ ಚೈದ್ಯ ಸೃಂಜಯರ ಸೈನ್ಯಗಳನ್ನು ಶತ್ರು ಸೈನ್ಯವನ್ನೆದುರಿಸಲು ಕಳಿಸಿದನು. ಅರ್ಜುನನು ಸೈನ್ಯದಿಂದ ಐದು ನೂರು ಬಿಲ್ಲುಗಳ ದೂರ ಹೋಗಿ ಮಹಾಸ್ತ್ರ ಮಂತ್ರವನ್ನು ಜಪಿಸಿದನು.

ಅರ್ಥ:
ಕರೆದು: ಬರೆಮಾಡು; ನೃಪ: ರಾಜ; ವರ: ಶ್ರೇಷ್ಠ; ಸುಯ್ದಾನ: ರಕ್ಷಣೆ; ನಿಲಿಸು: ಸ್ಥಿತವಾಗಿರು; ಅರಿ: ವೈರಿ; ಬಲ; ಸೈನ್ಯ; ನೂಕು: ತಳ್ಳು; ಮುರಮಥನ: ಕೃಷ್ಣ; ಒಡಗೂಡು: ಜೊತೆ; ಮೋಹರ: ಯುದ್ಧ; ಅಂತರ: ದೂರ; ತೊಲಗು: ಹೋಗು; ಅಸ್ತ್ರ: ಶಸ್ತ್ರ, ಆಯುಧ; ಜಪಿಸು: ಪಠಿಸು, ಮಂತ್ರಿಸು;

ಪದವಿಂಗಡಣೆ:
ಕರೆದು +ಸಾತ್ಯಕಿ +ಭೀಮನನು +ನೃಪ
ವರನ +ಸುಯ್ದಾನದಲಿ +ನಿಲಿಸಿದನ್
ಅರಿಬಲಕೆ +ನೂಕಿದನು +ಕೈಕೆಯ +ಚೈದ್ಯ +ಸೃಂಜಯರ
ಮುರಮಥನನ್+ಒಡಗೂಡಿ +ನಿಜ +ಮೋ
ಹರವನಂದ್+ಐನೂರು +ಬಿಲ್ಲಂ
ತರಕೆ+ ತೊಲಗಿ +ಮಹಾಸ್ತ್ರಮಂತ್ರವ +ಜಪಿಸಿದನು +ಪಾರ್ಥ

ಪದ್ಯ ೩೦: ಪಾಂಡವರ ಜೊತೆ ಯಾವ ರಾಜರು ಬಂದರು?

ಅರಸನೆಡವಂಕದಲಿ ಮತ್ಸ್ಯರು
ಬಿರುದ ಕೈಕೆಯ ಚೈದ್ಯ ಕೇರಳ
ಮರು ಯವನ ಸಂವೀರ ಕೌಸಲ ಪಾಂಡ್ಯ ಮಾಗಧರು
ಧರಣಿಪನ ಬಲವಂಕದಲಿ ಮೋ
ಹರಿಸಿ ಪಾಂಚಾಲಕರು ಚೂಣಿಯೊ
ಳುರವಣಿಸಿದರು ನಕುಲ ಸಾತ್ಯಕಿ ಭೀಮನಂದನರು (ದ್ರೋಣ ಪರ್ವ, ೯ ಸಂಧಿ, ೩೦ ಪದ್ಯ)

ತಾತ್ಪರ್ಯ:
ಧರ್ಮಜನ ಎಡಭಾಗದಲ್ಲಿ ಮತ್ಸ್ಯ, ಕೈಕೆಯ ಚೈದ್ಯ ಕೇರಳ ಯವನ ಸಂವೀರ, ಕೌಸಲ ಪಂಡ್ಯ ಮಾಗಧ ರಾಜರೂ, ಬಲದಲ್ಲಿ ಪಾಂಚಾಲರೂ ಯುದ್ಧಾಸಕ್ತರಾಗಿ ಬರುತ್ತಿದ್ದರು. ಇವರೊಡನೆ ನಕುಲ ಸಾತ್ಯಕಿ ಘಟೋತ್ಕಚರೂ ಬಂದರು.

ಅರ್ಥ:
ಅರಸ: ರಾಜ; ಎಡ: ವಾಮಭಾಗ; ಅಂಕ: ಭಾಗ; ಬಿರು: ಗಟ್ಟಿಯಾದುದು; ಧರಣಿಪ: ರಾಜ; ಬಲ: ದಕ್ಷಿಣ ಪಾರ್ಶ್ವ; ಮೋಹರ: ಸೈನ್ಯ, ದಂಡು; ಚೂಣಿ: ಮೊದಲು, ಕೊನೆ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ನಂದನ: ಮಗ;

ಪದವಿಂಗಡಣೆ:
ಅರಸನ್+ಎಡವಂಕದಲಿ +ಮತ್ಸ್ಯರು
ಬಿರುದ +ಕೈಕೆಯ +ಚೈದ್ಯ +ಕೇರಳ
ಮರು +ಯವನ +ಸಂವೀರ +ಕೌಸಲ+ ಪಾಂಡ್ಯ +ಮಾಗಧರು
ಧರಣಿಪನ +ಬಲವಂಕದಲಿ +ಮೋ
ಹರಿಸಿ +ಪಾಂಚಾಲಕರು +ಚೂಣಿಯೊಳ್
ಉರವಣಿಸಿದರು +ನಕುಲ +ಸಾತ್ಯಕಿ +ಭೀಮನಂದನರು

ಅಚ್ಚರಿ:
(೧) ಪಾಂಡವರ ಪಕ್ಷದಲ್ಲಿದ್ದ ರಾಜರು – ಮತ್ಸ್ಯ, ಕೈಕೆಯ, ಚೈದ್ಯ, ಕೇರಳ, ಯವನ, ಸಂವೀರ, ಕೌಸಲ ಪಾಂಡ್ಯ, ಮಾಗಧ

ಪದ್ಯ ೩೦: ಯಾವ ರಾಜರು ವ್ಯೂಹವನ್ನು ಭೇದಿಸಲು ಮುಂದಾದರು?

ಉರವಣಿಸಿದರು ನಕುಲ ಸಾತ್ಯಕಿ
ವರ ವಿರಾಟ ದ್ರುಪದ ಕೈಕೆಯ
ಬಿರುದ ಧೃಷ್ಟದ್ಯುಮ್ನ ಕುಂತೀಭೋಜ ಮೊದಲಾಗಿ
ಧರಣಿಪರು ಥಟ್ಟೈಸಿ ರಿಪು ಮೋ
ಹರಕೆ ಕವಿದುದು ಕಾದಿ ದುರ್ಗವ
ಮುರಿಯಲರಿಯದೆ ಮುರಿವುತಿದ್ದುದು ಬಸಿವ ರಕ್ತದಲಿ (ದ್ರೋಣ ಪರ್ವ, ೪ ಸಂಧಿ, ೩೦ ಪದ್ಯ)

ತಾತ್ಪರ್ಯ:
ನಕುಲ, ಸಾತ್ಯಕಿ, ವಿರಾಟ, ದ್ರುಪದ, ಕೈಕೆಯ, ಧೃಷ್ಟದ್ಯುಮ್ನ, ಕುಂತೀಭೋಜ ಮೊದಲಾದ ರಾಜರು ಒಂದಾಗಿ ಶತ್ರುಸೈನ್ಯವನ್ನು ಭೇದಿಸಲಾಗದೆ ರಕ್ತ ಬಸಿಯುತ್ತಿರಲು ಹಿಂದಿರುಗಿದರು.

ಅರ್ಥ:
ಉರವಣಿಸು: ಉತ್ಸಾಹದಿಂದಿರು, ಆತುರಿಸು; ವರ: ಶ್ರೇಷ್ಠ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಮೊದಲಾದ: ಮುಂತಾದ; ಧರಣಿಪ: ರಾಜ; ಥಟ್ಟು: ಗುಂಪು; ರಿಪು: ವೈರಿ; ಮೋಹರ: ಯುದ್ಧ; ಕವಿ: ಆವರಿಸು; ಕಾದು: ಹೋರಾಡು; ದುರ್ಗ: ಪ್ರವೇಶಿಸಲು ಅಶಕ್ಯವಾದುದು; ಮುರಿ: ಸೀಳು; ಅರಿ: ತಿಳಿ; ಬಸಿ: ಒಸರು, ಸ್ರವಿಸು; ರಕ್ತ: ನೆತ್ತರು;

ಪದವಿಂಗಡಣೆ:
ಉರವಣಿಸಿದರು +ನಕುಲ +ಸಾತ್ಯಕಿ
ವರ+ ವಿರಾಟ +ದ್ರುಪದ +ಕೈಕೆಯ
ಬಿರುದ +ಧೃಷ್ಟದ್ಯುಮ್ನ +ಕುಂತೀಭೋಜ +ಮೊದಲಾಗಿ
ಧರಣಿಪರು +ಥಟ್ಟೈಸಿ +ರಿಪು +ಮೋ
ಹರಕೆ +ಕವಿದುದು +ಕಾದಿ +ದುರ್ಗವ
ಮುರಿಯಲ್+ಅರಿಯದೆ +ಮುರಿವುತಿದ್ದುದು +ಬಸಿವ +ರಕ್ತದಲಿ

ಅಚ್ಚರಿ:
(೧) ಮುರಿ ಪದದ ಬಳಕೆ – ದುರ್ಗವ ಮುರಿಯಲರಿಯದೆ ಮುರಿವುತಿದ್ದುದು ಬಸಿವ ರಕ್ತದಲಿ

ಪದ್ಯ ೨೪: ಸುಪ್ರತೀಕ ಗಜವು ಯಾರನ್ನು ಕೊಡಹಿ ಹಾಕಿತು?

ಸೆಳೆವಿಡಿದು ತುರುಗಾಹಿ ಪಶು ಸಂ
ಕುಲವ ತೆವರುವವೋಲು ವಾಯಸ
ಕುಲವನೊಂದೇ ಗೂಗೆ ಹೊಯ್ದರೆಯಟ್ಟುವಂದದಲಿ
ಬಲುಕಣಿಗಳಿವದಿರನು ಕರಿ ಮುಂ
ಕೊಳಿಸಿ ಕೆಡಹಿತು ಯವನ ಕೌಸಲ
ಬಲವ ಕೈಕೆಯ ಮಗಧ ಭೂಪರ ಕೊಡಹಿ ಹಾಯಿಕಿತು (ದ್ರೋಣ ಪರ್ವ, ೩ ಸಂಧಿ, ೨೪ ಪದ್ಯ)

ತಾತ್ಪರ್ಯ:
ದನಕಾಯುವವರು ಕೋಲಿನಿಂದ ದನಗಲನ್ನು ಹೊಡೆಯುವ ಹಾಗೆ, ಕಾಗೆಗಳ ಗುಂಪನ್ನು ಒಂದೇ ಒಂದು ಗೂಬೆ ಬೆನ್ನುಹತ್ತಿ ಘಾತಿಸುವಂತೆ, ಬಲವಂತರನ್ನು ಸುಪ್ರತೀಕ ಗಜವು ಹೊಡೆದು ಕೆಡಹಿತು. ಯವನ, ಕೋಸಲ,ಕೇಕೆಯ, ಮಾಗಧ ರಾಜರನ್ನು ಕೊಡವಿ ಹಾಕಿತು.

ಅರ್ಥ:
ಸೆಳೆ: ಎಳೆತ, ಸೆಳೆತ; ತುರು: ಆಕಳು; ಪಶು: ಪ್ರಾಣಿ; ಸಂಕುಲ: ಗುಂಪು; ತೆವರು: ಅಟ್ಟು, ಓಡಿಸು; ವಾಯಸ: ಕಾಗೆ; ಕುಲ: ವಂಶ; ಗೂಗೆ: ಗೂಬೆ; ಹೊಯ್ದು: ಹೊಡೆ; ಅಟ್ಟು: ಬೆನ್ನಟ್ಟುವಿಕೆ; ಬಲುಕಣಿ: ದೊಡ್ಡ ಹಗ್ಗ; ಇವದಿರು: ಇಷ್ಟು ಜನ; ಕರಿ: ಆನೆ; ಮುಂಕೊಳು: ಮುಂದೆ ಬಂದು; ಕೆಡಹು: ಬೀಳಿಸು; ಬಲ: ಸೈನ್ಯ; ಭೂಪ: ರಾಜ; ಕೊಡಹು: ಬೀಳಿಸು;

ಪದವಿಂಗಡಣೆ:
ಸೆಳೆವಿಡಿದು+ ತುರುಗಾಹಿ +ಪಶು +ಸಂ
ಕುಲವ +ತೆವರುವವೋಲು +ವಾಯಸ
ಕುಲವನ್+ಒಂದೇ +ಗೂಗೆ +ಹೊಯ್ದರೆ+ಅಟ್ಟುವಂದದಲಿ
ಬಲುಕಣಿಗಳ್+ಇವದಿರನು+ ಕರಿ+ ಮುಂ
ಕೊಳಿಸಿ +ಕೆಡಹಿತು +ಯವನ +ಕೌಸಲ
ಬಲವ +ಕೈಕೆಯ+ ಮಗಧ+ ಭೂಪರ+ ಕೊಡಹಿ +ಹಾಯಿಕಿತು

ಅಚ್ಚರಿ:
(೧) ಉಪಮಾನದ ಪ್ರಯೋಗ – ಸೆಳೆವಿಡಿದು ತುರುಗಾಹಿ ಪಶು ಸಂಕುಲವ ತೆವರುವವೋಲು; ವಾಯಸ
ಕುಲವನೊಂದೇ ಗೂಗೆ ಹೊಯ್ದರೆಯಟ್ಟುವಂದದಲಿ

ಪದ್ಯ ೨೧: ಭೀಮನ ಸಹಾಯಕ್ಕೆ ಯಾರು ಬಂದರು?

ಕರಿ ಬಲುಹು ಕಲಿ ಭೀಮಸೇನನು
ದುರುಳನಿನ್ನೇನಹನೆನುತ ಮೋ
ಹರಿಸಿ ಕವಿದುದು ಮತ್ಸ್ಯ ಸೃಂಜಯ ಪಂಚಕೈಕೆಯರು
ತಿರುವಿಗಂಬನು ತೊಡಚಿ ಸಾತ್ಯಕಿ
ನರನ ಮಗ ಹೈಡಿಂಬ ಯವನೇ
ಶ್ವರರು ಧೃಷ್ಟದ್ಯುಮ್ನ ಮೊದಲಾಗೈದಿದರು ಗಜವ (ದ್ರೋಣ ಪರ್ವ, ೩ ಸಂಧಿ, ೨೧ ಪದ್ಯ)

ತಾತ್ಪರ್ಯ:
ಈ ಆನೆಯ ಸತ್ವವು ಬಲು ಹೆಚ್ಚಿನದು, ಭೀಮನು ಮೂಮ್ದರಿಯದೆ ಹೋರಾಡುವವನು. ಇವನು ಏನಾಗುವನೋ ಏನೋ ಎಂದುಕೊಂಡು ಅವನ ಸಹಾಯಕ್ಕೆ ವಿರಾಟ, ಕೈಕೆಯರು ಬಂದರು. ಬಿಲ್ಲಿಗೆ ಬಾಣವನ್ನು ಹೂಡಿ ಸಾತ್ಯಕಿಯು, ಅಭಿಮನ್ಯು, ಘಟೋತ್ಕಚ, ಯವನರಾಜರು, ಧೃಷ್ಟದ್ಯುಮ್ನ ಮೊದಲಾದವರು ಸುಪ್ರತೀಕಗಜದತ್ತ ಬಂದರು.

ಅರ್ಥ:
ಕರಿ: ಆನೆ; ಬಲುಹು: ಶಕ್ತಿ; ಕಲಿ: ಶೂರ; ದುರುಳ: ದುಷ್ಟ; ಮೋಹರ: ಸೈನ್ಯ, ದಂಡು, ಯುದ್ಧ; ಕವಿ: ಆವರಿಸು; ತಿರುವು: ಬಾಗು, ಬಿಲ್ಲಿನ ಹಗ್ಗ, ಹೆದೆ, ಮೌರ್ವಿ; ಅಂಬು: ಬಾಣ; ತೊಡಚು: ಹೂಡು; ನರ: ಅರ್ಜುನ; ಮಗ: ಸುತ; ಹೈಡಿಂಬ: ಘಟೋತ್ಕಚ; ಮೊದಲಾದ: ಮುಂತಾದ; ಐದು: ಬಂದುಸೇರು; ಗಜ: ಆನೆ;

ಪದವಿಂಗಡಣೆ:
ಕರಿ +ಬಲುಹು +ಕಲಿ +ಭೀಮಸೇನನು
ದುರುಳನ್+ಇನ್ನೇನಹನ್+ಎನುತ +ಮೋ
ಹರಿಸಿ +ಕವಿದುದು +ಮತ್ಸ್ಯ +ಸೃಂಜಯ +ಪಂಚ+ಕೈಕೆಯರು
ತಿರುವಿಗ್+ಅಂಬನು +ತೊಡಚಿ +ಸಾತ್ಯಕಿ
ನರನ +ಮಗ +ಹೈಡಿಂಬ +ಯವನೇ
ಶ್ವರರು +ಧೃಷ್ಟದ್ಯುಮ್ನ +ಮೊದಲಾಗ್+ಐದಿದರು +ಗಜವ

ಅಚ್ಚರಿ:
(೧) ಕರಿ, ಕಲಿ – ಪದಗಳ ಬಲಕೆ
(೨) ಬಾಣವನ್ನು ಹೂಡು ಎಂದು ಹೇಳುವ ಪರಿ – ತಿರುವಿಗಂಬನು ತೊಡಚಿ

ಪದ್ಯ ೫೯: ಪಾಂಡವರಲ್ಲಿದ ಪರಾಕ್ರಮಿಗಳ ಸ್ಥಿತಿ ಹೇಗಾಯಿತು?

ಘಾಯವಡೆದನು ದ್ರುಪದ ಮತ್ಸ್ಯನ
ಬಾಯಳೊಕ್ಕುದು ರಕುತ ಕೈಕೆಯ
ರಾಯುಧಂಗಳನೊಪ್ಪಿಸಿದರಿಳಿದೋಡಿದರು ರಥವ
ಸಾಯಲಾದನು ಧೃಷ್ಟಕೇತು ವಿ
ಡಾಯಿಗೆಟ್ಟನು ಭೋಜನಿತ್ತಲು
ರಾಯನಲ್ಲಿಗೆ ರಥವ ದುವ್ವಾಳಿಸಿದನಾ ದ್ರೋಣ (ದ್ರೋಣ ಪರ್ವ, ೨ ಸಂಧಿ, ೫೯ ಪದ್ಯ)

ತಾತ್ಪರ್ಯ:
ದ್ರುಪದನು ಗಾಯಗೊಂಡನು. ವಿರಾಟನ ಬಾಯಲ್ಲಿ ರಕ್ತ ಸುರಿಯಿತು. ಕೈಕೆಯರು ಆಯುಧಗಳನ್ನು ಕೆಳಗಿಟ್ಟು ರಥಗಳನ್ನಿಳಿದೋಡಿದರು. ಧೃಷ್ಟಕೇತುವು ಸಾಯುವ ಹಾಗಾದ ಕುಂತೀಭೋಜನು ಅಂದಗೆಟ್ಟನು. ದ್ರೋಣನು ಧರ್ಮಜನ ಕಡೆಗೆ ರಥವನ್ನು ವೇಗವಾಗಿ ಓಡಿಸಿದನು.

ಅರ್ಥ:
ಘಾಯ: ಪೆಟ್ಟು; ಉಕ್ಕು: ಹೊರಹೊಮ್ಮು; ರಕುತ: ನೆತ್ತರು; ಆಯುಧ: ಶಸ್ತ್ರ; ಇಳಿ: ಬಾಗು; ಓಡು: ಧಾವಿಸು; ರಥ: ಬಂಡಿ; ಸಾಯು: ಮರಣ ಹೊಂದು; ವಿಡಾಯಿ: ಶಕ್ತಿ, ಆಡಂಬರ; ಕೆಟ್ಟು: ಹಾಳು; ಭೋಜನ: ಊಟ; ರಾಯ: ರಾಜ; ದುವ್ವಾಳಿ: ತೀವ್ರಗತಿ, ವೇಗವಾದ ನಡೆ;

ಪದವಿಂಗಡಣೆ:

ಘಾಯವಡೆದನು+ ದ್ರುಪದ +ಮತ್ಸ್ಯನ
ಬಾಯಳ್+ಉಕ್ಕುದು +ರಕುತ +ಕೈಕೆಯರ್
ಆಯುಧಂಗಳನ್+ಒಪ್ಪಿಸಿದರ್+ಇಳಿದ್+ಓಡಿದರು+ ರಥವ
ಸಾಯಲಾದನು +ಧೃಷ್ಟಕೇತು +ವಿ
ಡಾಯಿ+ಕೆಟ್ಟನು +ಭೋಜನ್+ಇತ್ತಲು
ರಾಯನಲ್ಲಿಗೆ +ರಥವ +ದುವ್ವಾಳಿಸಿದನ್+ಆ +ದ್ರೋಣ

ಪದ್ಯ ೨೦: ವೃಷಸೇನನನ್ನು ತಡೆಯಲು ಯಾರು ಮುಂದಾದರು?

ಶಿವಶಿವಾ ಸಹದೇವ ನಕುಲರ
ಬವರ ಮುರಿದುದು ಬಿಡದೆ ಬಳಿಯಲಿ
ಪವನಜನ ತುಡುಕಿದನು ನೂಕಲಿ ಸರ್ವದಳವೆನುತ
ತವತವಗೆ ಸುತಸೋಮಕಾದಿಗ
ಳವಗಡಿಸಿದರು ಮತ್ಸ್ಯಕೈಕೆಯ
ನಿವಹ ಸಾತ್ಯಕಿ ಚೀಕಿತಾನರು ಕವಿದರುರವಣಿಸಿ (ಕರ್ಣ ಪರ್ವ, ೨೦ ಸಂಧಿ, ೨೦ ಪದ್ಯ)

ತಾತ್ಪರ್ಯ:
ಶಿವ ಶಿವಾ ವೃಷಸೇತುವಿನೊಡನೆ ನಕುಲ ಸಹದೇವರು ಸೋತರು, ಮತ್ತೆ ಆತನು ಭೀಮನನ್ನು ಹುಡುಕಿಕೊಂಡು ಹೋಗುತ್ತಿದ್ದಾನೆ, ಎಲ್ಲಾ ಸೈನ್ಯವು ವೈರಿಯನ್ನು ಮುತ್ತಲಿ ಎನ್ನುತ್ತಾ ಸುತಸೋಮ, ಮತ್ಸ್ಯ, ಕೈಕೆಯ, ಸಾತ್ಯಕಿ ಚೀಕಿತಾನರು ನುಗ್ಗಿ ವೃಷಸೇನನನ್ನು ತಡೆದರು.

ಅರ್ಥ:
ಶಿವಶಿವಾ: ಭಗವಂತ; ಬವರ: ಕಾಳಗ, ಯುದ್ಧ; ಮುರಿ: ಸೀಳು; ಬಿಡದೆ: ತಡೆಯಿಲ್ಲದೆ; ಬಳಿ: ಹತ್ತಿರ; ಪವನಜ: ವಾಯುಪುತ್ರ (ಭೀಮ); ತುಡುಕು: ಬೇಗನೆ ಹಿಡಿ, ಮುನ್ನುಗ್ಗು; ನೂಕು: ತಳ್ಳು; ಸರ್ವ: ಎಲ್ಲಾ; ದಳ: ಸೈನ್ಯ; ತವತವಗೆ: ಅವರವರಲ್ಲಿ; ಆದಿ: ಮುಂತಾದ; ಅವಗಡಿಸು: ಅಪಮಾನಿಸು, ಸೋಲಿಸು; ನಿವಹ: ಗುಂಪು; ಕವಿ: ಆವರಿಸು, ಮುತ್ತು; ಉರವಣೆ: ರಭಸ, ಆತುರ;

ಪದವಿಂಗಡಣೆ:
ಶಿವಶಿವಾ +ಸಹದೇವ +ನಕುಲರ
ಬವರ +ಮುರಿದುದು+ ಬಿಡದೆ+ ಬಳಿಯಲಿ
ಪವನಜನ+ ತುಡುಕಿದನು +ನೂಕಲಿ +ಸರ್ವದಳವೆನುತ
ತವತವಗೆ+ ಸುತಸೋಮಕ+ಆದಿಗಳ್
ಅವಗಡಿಸಿದರು +ಮತ್ಸ್ಯ+ಕೈಕೆಯ
ನಿವಹ +ಸಾತ್ಯಕಿ +ಚೀಕಿತಾನರು+ ಕವಿದರ್+ಉರವಣಿಸಿ

ಅಚ್ಚರಿ:
(೧) ಸುತಸೋಮ, ಮತ್ಸ್ಯ, ಕೈಕೆಯ, ಸಾತ್ಯಕಿ, ಚೀಕಿತಾನ – ವೃಷಸೇನನನ್ನು ಆವರಿಸಿದ ಸೈನ್ಯ