ಪದ್ಯ ೨೭: ಅಶ್ವತ್ಥಾಮನು ಧೃಷ್ಟ್ರದ್ಯುಮನನ ಕೋಣೆಯನ್ನು ಹೇಗೆ ಹೊಕ್ಕನು?

ಎಂದು ರಾಯನ ಗುಡಿಯ ಗೂಢದ
ಮಂದಿರದ ಬಲವಂಕವೀಧಿಯ
ಮಂದೆ ಧೃಷ್ಟದ್ಯುಮ್ನನರಮನೆಗಾಗಿ ವಹಿಲದಲಿ
ಬಂದು ಬಾಗಿಲ ಮುರಿದು ಕಾಹಿನ
ಮಂದಿಯನು ನಿಡುನಿದ್ರೆಗೈಸಿದ
ನಂದು ಮಿಣ್ಣನೆ ಹೊಕ್ಕನಾತನ ಸೆಜ್ಜೆಯೋವರಿಯ (ಗದಾ ಪರ್ವ, ೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ಹೀಗೆಂದುಕೊಂಡ ಅಶ್ವತ್ಥಾಮನು ಅರಮನೆಯ ಬಲಭಾಗದ ಬೀದಿಯಲ್ಲಿ ಮುಂದುವರೆದು, ಧೃಷ್ಟದ್ಯುಮ್ನನ ಅರಮನೆಗೆ ಬಂದು, ಬಾಗಿಲನ್ನು ಮುರಿದು ಕಾವಲುಗಾರನನ್ನು ಸಾಯಿಸಿ (ಶಾಶ್ವತವಾಗಿ ನಿದ್ರಿಸುವಂತೆ ಮಾಡಿ, ಅವನು ಮಲಗುವ ಕೋಣೆಯನ್ನು ಮೆಲ್ಲನೆ ಹೊಕ್ಕನು.

ಅರ್ಥ:
ರಾಯ: ರಾಜ; ಗುಡಿ: ಆಲಯ; ಗೂಢ: ಗುಟ್ಟು, ರಹಸ್ಯ; ಮಂದಿರ: ಆಲಯ; ಬಲವಂಕ: ಬಲಭಾಗ; ವೀಧಿ: ಬೀದಿ, ಮಾರ್ಗ, ದಾರಿ; ಮುಂದೆ: ಎದುರು; ಅರಮನೆ: ರಾಜರ ಆಲಯ; ವಹಿಲ: ಬೇಗ, ತ್ವರೆ; ಬಂದು: ಆಗಮಿಸು; ಬಾಗಿಲು: ಕದ; ಮುರಿ: ಸೀಳು; ಕಾಹು: ರಕ್ಷಿಸು; ಕಾಹಿನ ಮಂದಿ: ಕಾವಲುಗಾರ; ನಿಡುನಿದ್ರೆ: ಶಾಶ್ವತವಾಗಿ ನಿದ್ರಿಸು (ಸಾಯಿಸು); ಮಿಣ್ಣನೆ: ಮೆಲ್ಲನೆ; ಹೊಕ್ಕು: ಸೇರು; ಸೆಜ್ಜೆ: ಶಯ್ಯೆ, ಹಾಸಿಗೆ; ಓವರಿ: ಒಳಮನೆ, ಕೋಣೆ;

ಪದವಿಂಗಡಣೆ:
ಎಂದು +ರಾಯನ +ಗುಡಿಯ +ಗೂಢದ
ಮಂದಿರದ +ಬಲವಂಕ+ವೀಧಿಯ
ಮಂದೆ +ಧೃಷ್ಟದ್ಯುಮ್ನನ್+ಅರಮನೆಗಾಗಿ+ ವಹಿಲದಲಿ
ಬಂದು +ಬಾಗಿಲ +ಮುರಿದು +ಕಾಹಿನ
ಮಂದಿಯನು +ನಿಡುನಿದ್ರೆಗ್+ಐಸಿದನ್
ಅಂದು +ಮಿಣ್ಣ+ನೆ ಹೊಕ್ಕನ್+ಆತನ +ಸೆಜ್ಜೆ+ಓವರಿಯ

ಅಚ್ಚರಿ:
(೧) ಸಾಯಿಸಿದನು ಎಂದು ಹೇಳುವ ಪರಿ – ಕಾಹಿನ ಮಂದಿಯನು ನಿಡುನಿದ್ರೆಗೈಸಿದನಂದು
(೨) ಎಂದು, ಬಂದು, ಅಂದು – ಪ್ರಾಸ ಪದಗಳು
(೩) ಮಂದಿರ, ಅರಮನೆ – ಸಾಮ್ಯಾರ್ಥ ಪದಗಳು

ಪದ್ಯ ೫೪: ಭೀಮ ದುರ್ಯೋಧನರ ಯುದ್ಧವನ್ನು ನೋಡಲು ಯಾರು ಬಂದರು?

ಗದೆಯ ಕೊಂಡನು ಕೌರವೇಂದ್ರನ
ನಿದಿರುಗೊಂಡನು ಭೀಮ ಬಲವಂ
ಕದಲಿ ವಾಮಾಂಗದಲಿ ಬಳಸಿದರಗ್ರಜಾನುಜರು
ಕದನಭೂಮಿಯ ಬಿಡೆಯರಿದು ನಿಂ
ದುದು ಚತುರ್ಬಲ ಸುತ್ತಿ ಗಗನದೊ
ಳೊದಗಿದುದು ಸುರನಿಕರ ತೀವಿ ವಿಮಾನವೀಥಿಯಲಿ (ಗದಾ ಪರ್ವ, ೫ ಸಂಧಿ, ೫೪ ಪದ್ಯ)

ತಾತ್ಪರ್ಯ:
ಭೀಮನು ಗದೆಯನ್ನು ಹಿಡಿದುಕೊಂಡು ಯುದ್ಧಕ್ಕೆ ಸಿದ್ಧನಾಗಿ ನಿಂತನು. ಅಣ್ಣತಮ್ಮಂದಿರು ಪಕ್ಕದಲ್ಲಿ ನಿಂತರು. ಯುದ್ಧದ ಅಂಕಣವನ್ನು ತಿಳಿದು ಚತುರಂಗ ಸೈನ್ಯವು ಸುತ್ತಲೂ ನಿಂತಿತು. ಆಕಾಶದಲ್ಲಿ ದೇವತೆಗಳು ವಿಮಾನಗಳಲ್ಲಿ ನೆರೆದರು.

ಅರ್ಥ:
ಗದೆ: ಮುದ್ಗರ; ಕೊಂಡು: ಪಡೆದು; ಇದಿರು: ಎದುರು; ಬಲ: ದಕ್ಷಿಣಭಾಗ; ವಾಮ: ಎಡಭಾಗ; ಬಳಸು: ಆವರಿಸುವಿಕೆ; ಅಗ್ರಜ: ಅಣ್ಣ; ಅನುಜ: ತಮ್ಮ; ಕದನ: ಯುದ್ಧ; ಭೂಮಿ: ಅವನಿ; ಬಿಡೆ: ತೊರೆ; ಅರಿ: ತಿಳಿ; ನಿಂದು: ನಿಲ್ಲು; ಚತುರ್ಬಲ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಸುತ್ತು: ತಿರುಗು; ಗಗನ: ಆಗಸ; ಒದಗು: ಲಭ್ಯ, ದೊರೆತುದು; ಸುರ: ದೇವತೆ; ನಿಕರ: ಗುಂಪು; ತೀವಿ: ಚುಚ್ಚು; ವಿಮಾನವೀಥಿ: ಆಗಸ ಮಾರ್ಗ;

ಪದವಿಂಗಡಣೆ:
ಗದೆಯ +ಕೊಂಡನು +ಕೌರವೇಂದ್ರನನ್
ಇದಿರುಗೊಂಡನು +ಭೀಮ +ಬಲವಂ
ಕದಲಿ +ವಾಮಾಂಗದಲಿ +ಬಳಸಿದರ್+ಅಗ್ರಜ+ಅನುಜರು
ಕದನಭೂಮಿಯ +ಬಿಡೆಯರಿದು +ನಿಂ
ದುದು +ಚತುರ್ಬಲ +ಸುತ್ತಿ+ ಗಗನದೊಳ್
ಒದಗಿದುದು +ಸುರನಿಕರ+ ತೀವಿ +ವಿಮಾನವೀಥಿಯಲಿ

ಅಚ್ಚರಿ:
(೧) ಬಲವಂಕ, ವಾಮಾಂಕ – ವಿರುದ್ಧ ಪದಗಳು
(೨) ಆಗಸ ಎಂದು ಹೇಳಲು – ವಿಮಾನವೀಥಿ ಪದದ ಬಳಕೆ

ಪದ್ಯ ೩೯: ಭೀಮನು ಆನೆಗಳ ಮೇಲೆ ಹೇಗೆ ಆಕ್ರಮಣ ಮಾಡಿದನು?

ಮೆಟ್ಟಿದನು ಬಲವಂಕವನು ಹೊರ
ಗಟ್ಟಿದನು ವಾಮದ ಗಜಂಗಳ
ನಿಟ್ಟನೊಂದರೊಳೊಂದನಪ್ಪಳಿಸಿದನು ಪರಿಘದಲಿ
ಘಟ್ಟಿಸಿದನೊಗ್ಗಿನ ಗಜಂಗಳ
ಥಟ್ಟುಗೆಡಹಿದನಮಮ ಹೆಣಸಾ
ಲಿಟ್ಟವೈ ಕುರುನೃಪನ ನೂರಾನೆಗಳು ನಿಮಿಷದಲಿ (ಗದಾ ಪರ್ವ, ೨ ಸಂಧಿ, ೩೯ ಪದ್ಯ)

ತಾತ್ಪರ್ಯ:
ಎಡದಲ್ಲಿ ಬಲದಲ್ಲಿ ಕಾಲಲ್ಲಿ ಮೆಟ್ಟಿ ಗದೆಯಿಂದ ಅಪ್ಪಳಿಸಿ ಆನೆಗಳೆಲ್ಲವನ್ನೂ ಕೆಳಕ್ಕೆ ಕೆಡವಿದನು. ಕೌರವನ ನೂರು ಆನೆಗಳ ಹೆಣಗಳು ನಿಮಿಷ ಮಾತ್ರದಲ್ಲಿ ಸಾಲುಸಾಲಾಗಿ ಬಿದ್ದವು.

ಅರ್ಥ:
ಮೆಟ್ಟು: ತುಳಿ; ಬಲವಂಕ: ಬಲಭಾಗ; ಹೊರಗಟ್ಟು: ಬಿಸಾಡು, ನೂಕು; ವಾಮ: ಎಡಭಾಗ; ಗಜ: ಆನೆ; ಅಪ್ಪಳಿಸು: ತಟ್ಟು, ತಾಗು; ಪರಿಘ: ಗದೆ; ಘಟ್ಟಿಸು: ಹೊಡೆ, ಅಪ್ಪಳಿಸು; ಒಗ್ಗು: ಗುಂಪು, ಸಮೂಹ; ಥಟ್ಟು: ಗುಂಪು; ಕೆಡಹು: ನಾಹ್ಸ; ಅಮಮ: ಅಬ್ಬಬ್ಬಾ; ಹೆಣ: ಜೀವವಿಲ್ಲದ ಶರೀರ; ಸಾಲು: ಆವಳಿ; ನೃಪ: ರಾಜ; ನಿಮಿಷ: ಕ್ಷಣ;

ಪದವಿಂಗಡಣೆ:
ಮೆಟ್ಟಿದನು+ ಬಲವಂಕವನು+ ಹೊರ
ಗಟ್ಟಿದನು +ವಾಮದ +ಗಜಂಗಳನ್
ಇಟ್ಟನ್+ಒಂದರೊಳ್+ಒಂದನ್+ಅಪ್ಪಳಿಸಿದನು +ಪರಿಘದಲಿ
ಘಟ್ಟಿಸಿದನ್+ಒಗ್ಗಿನ +ಗಜಂಗಳ
ಥಟ್ಟು+ಕೆಡಹಿದನ್+ಅಮಮ +ಹೆಣ+ಸಾ
ಲಿಟ್ಟವೈ +ಕುರುನೃಪನ+ ನೂರಾನೆಗಳು +ನಿಮಿಷದಲಿ

ಅಚ್ಚರಿ:
(೧) ಮೆಟ್ಟಿದನು, ಅಟ್ಟಿದನು – ಪದಗಳ ಬಳಕೆ
(೨) ಆಶ್ಚರ್ಯವನ್ನು ಸೂಚಿಸುವ ಪರಿ – ಘಟ್ಟಿಸಿದನೊಗ್ಗಿನ ಗಜಂಗಳ ಥಟ್ಟುಗೆಡಹಿದನಮಮ ಹೆಣಸಾ
ಲಿಟ್ಟವೈ

ಪದ್ಯ ೩೭: ಅರ್ಜುನನು ಯಾರನ್ನು ಕಡಿದಟ್ಟಿದನು?

ಮುಂಕುಡಿಯ ಹಿಡಿದಾನೆಗಳನೆಡ
ವಂಕಕೌಕಿದ ರಥಚಯವ ಬಲ
ವಂಕಕೊತ್ತಿದ ರಾವುತರನುಬ್ಬೆದ್ದ ಪಯದಳವ
ಶಂಕೆಯನು ನಾ ಕಾಣೆ ಬಲನೆಡ
ವಂಕವನು ತರಿದೊಟ್ಟಿದನು ಮಾ
ರಂಕ ನಿಲುವುದೆ ಪಾರ್ಥ ಮುನಿದಡೆ ಭೂಪ ಕೇಳೆಂದ (ಗದಾ ಪರ್ವ, ೧ ಸಂಧಿ, ೩೭ ಪದ್ಯ)

ತಾತ್ಪರ್ಯ:
ಎಲೈ ರಾಜನೇ ಕೇಳು, ಅರ್ಜುನನು ಕೆರಳಿದರೆ ಇದಿರಾಳಿಗಳು ಗೆಲ್ಲಲು ಸಾಧ್ಯವೇ? ಮುಂದೆ ಬಂದ ಆನೆಗಳು, ಎಡಕ್ಕೆ ಮುತ್ತಿದ ರಥಗಳು, ಬಲಕ್ಕೆ ಆಕ್ರಮಿಸಿದ ರಾವುತರು, ಸಿಡಿದೆದ್ದ ಕಾಲಾಳುಗಳು ಎಲ್ಲವನ್ನೂ ನಿಶ್ಯಂಕೆಯಿಂದ ಅವನು ಕಡಿದೊಟ್ಟಿದನು.

ಅರ್ಥ:
ಮುಂಕುಡಿ: ಮುಂದೆ; ಹಿಡಿ: ಗ್ರಹಿಸು; ಆನೆ: ಗಜ; ಎಡವಂಕ: ವಾಮಭಾಗ; ಔಕು: ಒತ್ತು, ಹಿಚುಕು; ರಥ: ಬಂಡಿ; ಚಯ: ಗುಂಪು; ಬಲವಂಕ: ಬಲಭಾಗ; ಒತ್ತು: ಮುತ್ತು; ರಾವುತ: ಕುದುರೆಸವಾರ; ಉಬ್ಬೆದ್ದ: ಹೆಚ್ಚಾಗು; ಪಯದಳ: ಕಾಲಾಳು; ಶಂಕೆ: ಅನುಮಾನ; ಕಾಣು: ತೋರು; ಬಲ: ಸೈನ್ಯ; ತರಿ: ಸೀಳು; ಒಟ್ಟು: ರಾಶಿ, ಗುಂಪು; ಮಾರಂಕ: ಪ್ರತಿಯುದ್ಧ; ನಿಲುವು: ಇರುವಿಕೆ, ಸ್ಥಿತಿ; ಮುನಿ: ಕೋಪ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಮುಂಕುಡಿಯ+ ಹಿಡಿದ್+ಆನೆಗಳನ್+ಎಡ
ವಂಕಕ್+ಔಕಿದ +ರಥಚಯವ +ಬಲ
ವಂಕಕ್+ಒತ್ತಿದ +ರಾವುತರನ್+ಉಬ್ಬೆದ್ದ+ ಪಯದಳವ
ಶಂಕೆಯನು +ನಾ +ಕಾಣೆ +ಬಲನ್+ಎಡ
ವಂಕವನು +ತರಿದೊಟ್ಟಿದನು +ಮಾ
ರಂಕ +ನಿಲುವುದೆ +ಪಾರ್ಥ +ಮುನಿದಡೆ+ ಭೂಪ +ಕೇಳೆಂದ

ಅಚ್ಚರಿ:
(೧) ಎಡವಂಕ, ಬಲವಂಕ – ವಿರುದ್ಧ ಪದಗಳು

ಪದ್ಯ ೨: ಭೀಮನ ಜೊತೆ ಯಾರು ಹೋರಾಡಿದರು?

ಕೆದರಿದನು ಕಲಿಭೀಮ ಬಲವಂ
ಕದಲಿ ಸಾತ್ಯಕಿ ನಕುಲರೆಡವಂ
ಕದಲಿ ಚೂಣಿಗೆ ಚಿಮ್ಮಿದರು ಪಾಂಚಾಲನಾಯಕರು
ಮದಮುಖರನಿಕ್ಕಿದನು ಬಾಣೌ
ಘದಲಿ ಫಲುಗುಣನೊಂದು ಕಡೆಯಲಿ
ಸದೆದು ಸವರಿದರೊಂದು ಕಡೆಯಲಿ ದ್ರೌಪದೀಸುತರು (ಶಲ್ಯ ಪರ್ವ, ೩ ಸಂಧಿ, ೨ ಪದ್ಯ)

ತಾತ್ಪರ್ಯ:
ಭೀಮನು ಅಣ್ಣನ ಬಲಭಾಗದಲ್ಲಿ ವೈರಿಗಳನ್ನು ಬಡಿಯುತ್ತಿರಲು, ಸಾತ್ಯಕಿ ನಕುಲರು ಎಡಪಕ್ಕದಲ್ಲಿ ಹೋರಾಡಿದರು. ಪಾಂಚಾಲ ಸೇನೆ ಧರ್ಮಜನ ಮುಂದಿತ್ತು, ಒಂದು ಕಡೆ ಅರ್ಜುನನೂ ಮತ್ತೊಂದು ಕಡೆ ಉಪಪಾಂಡವರೂ ವೈರಿಗಳನ್ನು ಕಡಿದುರುಳಿಸಿದರು.

ಅರ್ಥ:
ಕೆದರು: ಹರಡು; ಕಲಿ: ಶೂರ; ಬಲ: ದಕ್ಷಿಣ ಭಾಗ; ಅಂಕ: ಕಾಳಗ ಇತ್ಯಾದಿಗಳು ನಡೆಯುವ ಸ್ಥಳ; ಎಡ: ವಾಮಭಾಗ; ಚೂಣಿ: ಮುಂಭಾಗ; ಚಿಮ್ಮು: ಹೊರಹೊಮ್ಮು; ನಾಯಕ: ಒಡೆಯ; ಮದ: ಅಹಂಕಾರ; ಮುಖ: ಆನನ; ಇಕ್ಕು: ಇರಿಸು, ಇಡು; ಬಾಣ: ಶರ; ಔಘ: ಗುಂಪು, ಸಮೂಹ; ಕಡೆ: ಭಾಗ; ಸದೆ: ಕುಟ್ಟು, ಪುಡಿಮಾಡು; ಸವರು: ನಾಶಮಾಡು; ಕಡೆ: ಭಾಗ; ಸುತ: ಮಗ;

ಪದವಿಂಗಡಣೆ:
ಕೆದರಿದನು +ಕಲಿಭೀಮ +ಬಲವಂ
ಕದಲಿ +ಸಾತ್ಯಕಿ +ನಕುಲರ್+ಎಡವಂ
ಕದಲಿ +ಚೂಣಿಗೆ +ಚಿಮ್ಮಿದರು +ಪಾಂಚಾಲ+ನಾಯಕರು
ಮದಮುಖರನ್+ಇಕ್ಕಿದನು+ ಬಾಣೌ
ಘದಲಿ+ ಫಲುಗುಣನೊಂದು +ಕಡೆಯಲಿ
ಸದೆದು +ಸವರಿದರ್+ಒಂದು +ಕಡೆಯಲಿ+ ದ್ರೌಪದೀ+ಸುತರು

ಅಚ್ಚರಿ:
(೧) ಬಲವಂಕ, ಎಡವಂಕ – ವಿರುದ್ಧ ಪದಗಳು
(೨) ಶೂರರನ್ನು ಸಾಯಿಸಿದರು ಎಂದು ಹೇಳುವ ಪರಿ – ಮದಮುಖರನಿಕ್ಕಿದನು
(೩) ಕಡೆಯಲಿ – ೫,೬ ಸಾಲಿನ ೩ನೇ ಪದ

ಪದ್ಯ ೧೨: ಪಾಂಡವರ ಗುಂಪಿನಲ್ಲಿದ್ದ ಪರಾಕ್ರಮಿಗಳಾರು?

ಅರಸನೆಡವಂಕದಲಿ ಸಾತ್ಯಕಿ
ನರ ನಕುಲ ಸಹದೇವ ಸೋಮಕ
ವರ ಯುಧಾಮನ್ಯುತ್ತಮೌಜಸ ಸೃಂಜಯಾದಿಗಳು
ನೆರೆದುದಾ ಬಲವಂಕದಲಿ ತನು
ಜರು ವೃಕೋದರ ದ್ರುಪದಸುತ ದು
ರ್ಧರ ಶಿಖಂಡಿ ಪ್ರಮುಖ ಘನಪಾಂಚಾಲ ಪರಿವಾರ (ಶಲ್ಯ ಪರ್ವ, ೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ಧರ್ಮಜನ ಎಡದಲ್ಲಿ ಸಾತ್ಯಕಿ ಅರ್ಜುನ, ನಕುಲ, ಸಹದೇವ ಸೋಮಕ, ಯುಧಾಮನ್ಯು, ಉತ್ತಮೌಜಸ, ಸೃಂಜಯರೇ ಮೊದಲಾದವರಿದ್ದರು. ಬಲಭಾಗದಲ್ಲಿ ಉಪಪಾಂಡವರು, ಭೀಮ ಧೃಷ್ಟದ್ಯುಮ್ನ, ಶಿಖಂಡಿ ಮತ್ತು ಉಳಿದ ಪಾಂಚಾಲರು ಇದ್ದರು.

ಅರ್ಥ:
ಅರಸ: ರಾಜ; ವಂಕ: ಬದಿ, ಮಗ್ಗುಲು; ನರ: ಅರ್ಜುನ; ಆದಿ: ಮುಂತಾದ; ನೆರೆ: ಗುಂಪು; ಬಲ: ದಕ್ಷಿಣ; ಎಡ: ವಾಮ; ತನುಜ: ಮಕ್ಕಳು; ಸುತ: ಮಗ; ಘನ: ಶ್ರೇಷ್ಠ; ಪರಿವಾರ: ಪರಿಜನ;

ಪದವಿಂಗಡಣೆ:
ಅರಸನ್+ಎಡವಂಕದಲಿ +ಸಾತ್ಯಕಿ
ನರ +ನಕುಲ +ಸಹದೇವ +ಸೋಮಕ
ವರ+ ಯುಧಾಮನ್ಯ+ಉತ್ತಮೌಜಸ+ ಸೃಂಜ+ಆದಿಗಳು
ನೆರೆದುದಾ +ಬಲವಂಕದಲಿ +ತನು
ಜರು +ವೃಕೋದರ +ದ್ರುಪದ+ಸುತ +ದು
ರ್ಧರ +ಶಿಖಂಡಿ +ಪ್ರಮುಖ +ಘನ+ಪಾಂಚಾಲ +ಪರಿವಾರ

ಅಚ್ಚರಿ:
(೧) ಎಡವಂಕ, ಬಲವಂಕ – ವಿರುದ್ಧ ಪದ
(೨) ಜೋಡಿ ಅಕ್ಷರದ ಪದ – ನರ, ನಕುಲ; ಸಹದೇವ ಸೋಮಕ

ಪದ್ಯ ೩೦: ಪಾಂಡವರ ಜೊತೆ ಯಾವ ರಾಜರು ಬಂದರು?

ಅರಸನೆಡವಂಕದಲಿ ಮತ್ಸ್ಯರು
ಬಿರುದ ಕೈಕೆಯ ಚೈದ್ಯ ಕೇರಳ
ಮರು ಯವನ ಸಂವೀರ ಕೌಸಲ ಪಾಂಡ್ಯ ಮಾಗಧರು
ಧರಣಿಪನ ಬಲವಂಕದಲಿ ಮೋ
ಹರಿಸಿ ಪಾಂಚಾಲಕರು ಚೂಣಿಯೊ
ಳುರವಣಿಸಿದರು ನಕುಲ ಸಾತ್ಯಕಿ ಭೀಮನಂದನರು (ದ್ರೋಣ ಪರ್ವ, ೯ ಸಂಧಿ, ೩೦ ಪದ್ಯ)

ತಾತ್ಪರ್ಯ:
ಧರ್ಮಜನ ಎಡಭಾಗದಲ್ಲಿ ಮತ್ಸ್ಯ, ಕೈಕೆಯ ಚೈದ್ಯ ಕೇರಳ ಯವನ ಸಂವೀರ, ಕೌಸಲ ಪಂಡ್ಯ ಮಾಗಧ ರಾಜರೂ, ಬಲದಲ್ಲಿ ಪಾಂಚಾಲರೂ ಯುದ್ಧಾಸಕ್ತರಾಗಿ ಬರುತ್ತಿದ್ದರು. ಇವರೊಡನೆ ನಕುಲ ಸಾತ್ಯಕಿ ಘಟೋತ್ಕಚರೂ ಬಂದರು.

ಅರ್ಥ:
ಅರಸ: ರಾಜ; ಎಡ: ವಾಮಭಾಗ; ಅಂಕ: ಭಾಗ; ಬಿರು: ಗಟ್ಟಿಯಾದುದು; ಧರಣಿಪ: ರಾಜ; ಬಲ: ದಕ್ಷಿಣ ಪಾರ್ಶ್ವ; ಮೋಹರ: ಸೈನ್ಯ, ದಂಡು; ಚೂಣಿ: ಮೊದಲು, ಕೊನೆ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ನಂದನ: ಮಗ;

ಪದವಿಂಗಡಣೆ:
ಅರಸನ್+ಎಡವಂಕದಲಿ +ಮತ್ಸ್ಯರು
ಬಿರುದ +ಕೈಕೆಯ +ಚೈದ್ಯ +ಕೇರಳ
ಮರು +ಯವನ +ಸಂವೀರ +ಕೌಸಲ+ ಪಾಂಡ್ಯ +ಮಾಗಧರು
ಧರಣಿಪನ +ಬಲವಂಕದಲಿ +ಮೋ
ಹರಿಸಿ +ಪಾಂಚಾಲಕರು +ಚೂಣಿಯೊಳ್
ಉರವಣಿಸಿದರು +ನಕುಲ +ಸಾತ್ಯಕಿ +ಭೀಮನಂದನರು

ಅಚ್ಚರಿ:
(೧) ಪಾಂಡವರ ಪಕ್ಷದಲ್ಲಿದ್ದ ರಾಜರು – ಮತ್ಸ್ಯ, ಕೈಕೆಯ, ಚೈದ್ಯ, ಕೇರಳ, ಯವನ, ಸಂವೀರ, ಕೌಸಲ ಪಾಂಡ್ಯ, ಮಾಗಧ

ಪದ್ಯ ೩೦: ಯಾರು ರಣವನ್ನು ತ್ಯಜಿಸಿದರು?

ಹಿಂದಣಿಗೆ ತಿರುಗಿದನು ಭಾಸ್ಕರ
ನಂದನನು ಬಲವಂಕದಲಿ ಗುರು
ನಂದನನು ಕೃಪ ಶಲ್ಯ ವಾಮದೊಳಿದಿರಲಾ ದ್ರೋಣ
ನಿಂದು ಕದನವ ಕೆಣಕಿದರು ರಿಪು
ಬಂದಿಕಾರನೊಳೇರ ಸೂರೆಗೆ
ಬಂದು ಬಸಿವುತ ಹೋದರನಿಬರು ಬೈದು ರವಿಸುತನ (ದ್ರೋಣ ಪರ್ವ, ೬ ಸಂಧಿ, ೩೦ ಪದ್ಯ)

ತಾತ್ಪರ್ಯ:
ದ್ರೋಣನು ಹೇಳಿದಂತೆ ಕರ್ಣನು ಅಭಿಮನ್ಯುವಿನ ಹಿಂಬದಿಗೆ ಹೋದನು, ಕೃಪ ಶಲ್ಯರು ಅವನ ಎಡಕ್ಕೆ ನಿಂತರು, ಬಲಭಾಗದಲ್ಲಿ ಅಶ್ವತ್ಥಾಮ, ದ್ರೋಣನು ಮುಂಭಾಗದಲ್ಲಿ ನಿಂತನು. ಇವರು ಯುದ್ಧಾರಂಭವನ್ನು ಮಾಡಿ ಅಭಿಮನ್ಯುವಿನಿಂದ ಗಾಯಗೊಂಡು ರಕ್ತ ಸುರಿಯುತ್ತಿರಲು ಕರ್ಣನನ್ನು ಬೈಯುತ್ತಾ ರಣವನ್ನು ತ್ಯಜಿಸಿದರು.

ಅರ್ಥ:
ಹಿಂದಣಿ: ಹಿಂಭಾಗ; ತಿರುಗು: ವೃತ್ತಾಕಾರವಾಗಿ ಚಲಿಸು, ಸುತ್ತು; ಭಾಸ್ಕರ: ಸೂರ್ಯ; ನಂದನ: ಮಗ; ಬಲವಂಕ: ದಕ್ಷಿಣ ಭಾಗ; ಗುರು: ಆಚಾರ್ಯ; ನಂದನ: ಮಗ; ವಾಮ: ಎಡ; ಇದಿರು: ಎದುರು; ಕದನ: ಯುದ್ಧ; ಕೆಣಕು: ಪ್ರಚೋದಿಸು, ರೇಗಿಸು; ರಿಪು: ವೈರಿ; ಸೂರೆ: ಸುಲಿಗೆ, ಲೂಟಿ; ಬಂದು: ಆಗಮಿಸು; ಬಸಿ: ಒಸರು, ಸ್ರವಿಸು; ಹೋಗು: ತ್ಯಜಿಸು; ಅನಿಬರು: ಅಷ್ಟು ಜನ; ಬೈದು: ತೆಗಳು; ರವಿಸುತ: ಸೂರ್ಯನ ಮಗ (ಕರ್ಣ);

ಪದವಿಂಗಡಣೆ:
ಹಿಂದಣಿಗೆ +ತಿರುಗಿದನು +ಭಾಸ್ಕರ
ನಂದನನು+ ಬಲವಂಕದಲಿ +ಗುರು
ನಂದನನು +ಕೃಪ +ಶಲ್ಯ +ವಾಮದೊಳ್+ಇದಿರಲ್+ಆ+ ದ್ರೋಣ
ನಿಂದು +ಕದನವ +ಕೆಣಕಿದರು +ರಿಪು
ಬಂದಿಕಾರನೊಳ್+ಏರ +ಸೂರೆಗೆ
ಬಂದು +ಬಸಿವುತ+ ಹೋದರ್+ಅನಿಬರು +ಬೈದು +ರವಿಸುತನ

ಅಚ್ಚರಿ:
(೧) ಭಾಸ್ಕರ ನಂದನ, ರವಿಸುತ – ಕರ್ಣನನ್ನು ಕರೆದ ಪರಿ
(೨) ನಂದನ, ಸುತ – ಸಮಾನಾರ್ಥಕ ಪದ
(೩) ಭಾಸ್ಕರ ನಂದನ, ಗುರು ನಂದನ – ಪದಗಳ ಬಳಕೆ

ಪದ್ಯ ೬೨: ದುರ್ಯೊಧನನ ಪಕ್ಕದಲ್ಲಿ ಯಾವ ರಾಜರಿದ್ದರು?

ಅವನ ಬಲವಂಕದಲಿ ನಿಂದವ
ನವನು ಭೂರಿಶ್ರವನು ಭಾರಿಯ
ಭುವನಪತಿಯೆಡವಂಕದಲಿ ನಿಂದವ ಜಯದ್ರಥನು
ತವತವಗೆ ಬಲುಗೈಗಳೆನಿಸುವ
ಶಿವನನೊಸಲಂದದಲಿ ಮೆರೆವವ
ರವನಿಪಾಲರು ಮಕುಟವರ್ಧನರವರ ನೋಡೆಂದ (ವಿರಾಟ ಪರ್ವ, ೭ ಸಂಧಿ, ೬೨ ಪದ್ಯ)

ತಾತ್ಪರ್ಯ:
ದುರ್ಯೋಧನನ ಬಲಭಾಗದಲ್ಲಿ ಭೂರಿಶ್ರವ, ಎಡಭಾಗದಲ್ಲಿ ಜಯದ್ರಥರಿದ್ದಾರೆ, ಪರಾಕ್ರಮ ಶಾಲಿಗಳಾಗಿ ಶಿವನ ಹಣೆಗಣ್ಣಿನಂತೆ (ಅಗ್ನಿಯಷ್ಟು ಪ್ರಖರರಾದ) ಇರುವ ಅನೇಕ ರಾಜರು ಅಲ್ಲಿದ್ದಾರೆ ನೋಡು ಎಂದು ಅರ್ಜುನನು ಉತ್ತರನಿಗೆ ತೋರಿಸಿದನು.

ಅರ್ಥ:
ಬಲವಂಕ: ಬಲಭಾಗ; ನಿಂದವ: ನಿಂತಿರುವ; ಭಾರಿ: ದೊಡ್ಡ; ಭುವನಪತಿ: ರಾಜ; ಭುವನ: ಭೂಮಿ; ಎಡವಂಕ: ಎಡಭಾಗ; ಶಿವ: ಶಂಕರ; ನೊಸಲು: ಹಣೆ; ಮೆರೆ: ಪ್ರಕಾಶಿಸು, ಹೊಳೆ; ಅವನಿಪಾಲ: ರಾಜ; ಮಕುಟ: ಕಿರೀಟ; ನೋಡು: ವೀಕ್ಷಿಸು;

ಪದವಿಂಗಡಣೆ:
ಅವನ +ಬಲವಂಕದಲಿ +ನಿಂದವನ್
ಅವನು +ಭೂರಿಶ್ರವನು+ ಭಾರಿಯ
ಭುವನಪತಿ+ಎಡವಂಕದಲಿ +ನಿಂದವ +ಜಯದ್ರಥನು
ತವತವಗೆ +ಬಲುಗೈಗಳ್+ಎನಿಸುವ
ಶಿವನ+ನೊಸಲಂದದಲಿ +ಮೆರೆವವರ್
ಅವನಿಪಾಲರು +ಮಕುಟವರ್ಧನರ್+ಅವರ+ ನೋಡೆಂದ

ಅಚ್ಚರಿ:
(೧) ಭ ಕಾರದ ತ್ರಿವಳಿ ಪದ – ಭೂರಿಶ್ರವನು ಭಾರಿಯ ಭುವನಪತಿ
(೨) ಉಪಮಾನದ ಪ್ರಯೋಗ – ಶಿವನನೊಸಲಂದದಲಿ ಮೆರೆವವರವನಿಪಾಲರು

ಪದ್ಯ ೩೭: ಗಂಧರ್ವರ ಸೈನ್ಯವು ಕರ್ಣನ ಮೇಲೆ ಹೇಗೆ ಎರಗಿದರು?

ಸವೆದವಿನಸುತನಂಬು ಖೇಚರ
ನವಗಡಿಸಿ ಕವಿದೆಚ್ಚನೀತನ
ಸವಗ ಸೀಸಕ ಜೋಡು ತೊಟ್ಟವು ಸರಳ ಜೋಡುಗಳ
ಕವಿದುದೆಡ ಬಲವಂಕದಲಿ ಸುರ
ನಿವಹ ಸೂಟಿಯ ಸರಳ ಸೋನೆಯ
ಲವಗಡಿಸಿತಡಿಗಡಿಗೆ ಕರ್ಣನ ರಥದ ವಾಜಿಗಳು (ಅರಣ್ಯ ಪರ್ವ, ೨೦ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕರ್ಣನ ಬಾಣಗಳು ತೀರಿದವು. ಚಿತ್ರಸೇನನ ಬಾಣಗಳ ಬಿರುಸು ಹೆಚ್ಚಿತು. ಕರ್ಣನ ಕವಚ, ಶಿರಸ್ತ್ರಾಣ ಪಾದರಕ್ಷೆಗಳು ಗಂಧರ್ವನ ಬಾಣಗಳಿಗೆ ತುತ್ತಾದವು. ಗಂಧರ್ವರು ಕರ್ಣನ ಸುತ್ತಮುತ್ತ ಮುತ್ತಿ ಮೇಲೆ ಬಿದ್ದರು. ಕರ್ಣನ ರಥದ ಕುದುರೆಗಳು ಅಡಿಗಡಿಗೆ ನೊಂದವು.

ಅರ್ಥ:
ಸವೆ: ತೀರು; ಇನಸುತ: ಸೂರ್ಯನ ಮಗ (ಕರ್ಣ); ಅಂಬು: ಬಾಣ; ಖೇಚರ: ಗಂಧರ್ವ; ಅವಗಡಿಸು: ಕಡೆಗಣಿಸು; ಕವಿ: ಆವರಿಸು; ಎಚ್ಚು: ಬಾಣ ಪ್ರಯೋಗಿಸು; ಸವಗ: ಕವಚ; ಸೀಸಕ: ಶಿರಸ್ತ್ರಾಣ; ಜೋಡು: ಪಾದರಕ್ಷೆ; ತೊಟ್ಟು: ಕಂತೆ, ತೆಕ್ಕೆ; ಸರಳ: ಬಾಣ; ಜೋಡು: ಜೊತೆ; ಎಡಬಲ: ಎಲ್ಲಾ ಕಡೆ; ಅಂಕ: ಯುದ್ಧ; ಸುರ: ದೇವತೆಗಳು; ನಿವಹ: ಗುಂಪು; ಸೂಟಿ: ವೇಗ, ರಭಸ; ಸರಳ: ಬಾಣ; ಸೋನೆ: ಮಳೆ, ವೃಷ್ಟಿ; ಅವಗಡಿಸು: ಕಡೆಗಣಿಸು; ರಥ: ಬಂಡಿ; ವಾಜಿ: ಕುದುರೆ;

ಪದವಿಂಗಡಣೆ:
ಸವೆದವ್+ಇನಸುತನ್+ಅಂಬು+ ಖೇಚರನ್
ಅವಗಡಿಸಿ+ ಕವಿದ್+ಎಚ್ಚನ್+ಈತನ
ಸವಗ+ ಸೀಸಕ+ ಜೋಡು +ತೊಟ್ಟವು +ಸರಳ+ ಜೋಡುಗಳ
ಕವಿದುದ್+ಎಡ+ ಬಲವಂಕದಲಿ+ ಸುರ
ನಿವಹ+ ಸೂಟಿಯ +ಸರಳ +ಸೋನೆಯಲ್
ಅವಗಡಿಸಿತ್+ಅಡಿಗಡಿಗೆ +ಕರ್ಣನ +ರಥದ +ವಾಜಿಗಳು

ಅಚ್ಚರಿ:
(೧) ಸ ಕಾರದ ಸಾಲು ಪದಗಳು – ಸುರನಿವಹ ಸೂಟಿಯ ಸರಳ ಸೋನೆಯಲವಗಡಿಸಿತಡಿಗಡಿಗೆ
(೨) ಇನಸುತ, ಕರ್ಣ – ಕರ್ಣನನ್ನು ಕರೆದ ಪರಿ