ಪದ್ಯ ೪: ಪಾಂಡವರಲ್ಲಿ ಯಾರು ಸರೋವರವನ್ನು ಮುತ್ತಿದರು?

ವರ ಯುಧಾಮನ್ಯೂತ್ತಮೌಂಜಸ
ರಿರಲು ಪಂಚದ್ರೌಪದೀಸುತ
ರರಸ ನಿಮ್ಮ ಯುಯುತ್ಸು ಸೃಂಜಯ ಸೋಮಕಾದಿಗಳು
ಕರಿಗಳೈನೂರೈದು ಸಾವಿರ
ತುರಗಪಯದಳವೆಂಟು ಸಾವಿರ
ವೆರಡು ಸಾವಿರ ರಥವಿದರಿಮೋಹರದ ಪರಿಶೇಷ (ಗದಾ ಪರ್ವ, ೫ ಸಂಧಿ, ೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಪಾಂಡವ ಸೇನೆಯಲ್ಲಿ ಯುಧಾಮನ್ಯು, ಉತ್ತಮೌಜಸ, ಉಪಪಾಂಡವರು, ಯುಯುತ್ಸು, ಸೃಂಜಯ ಸೋಮಕನೇ ಮೊದಲಾದವರೂ, ಐದುನೂರು ಆನೆಗಳೂ, ಐದುಸಾವಿರ ಕುದುರೆಗಳೂ, ಎರಡು ಸಾವಿರ ರಥಗಳೂ, ಎಂಟು ಸಾವಿರ ಕಾಲಾಳುಗಳೂ, ಉಳಿದವರು, ಎಲ್ಲರೂ ದ್ವೈಪಾಯನ ಸರೋವರವನ್ನು ಮುತ್ತಿದರು.

ಅರ್ಥ:
ವರ: ಶ್ರೇಷ್ಠ; ಸುತ: ಮಗ; ಅರಸ: ರಾಜ; ಆದಿ: ಮುಂತಾದ; ಕರಿ: ಆನೆ; ಸಾವಿರ: ಸಹಸ್ರ; ತುರಗ: ಅಶ್ವ; ರಥ: ಬಂಡಿ; ಮೋಹರ: ಯುದ್ಧ; ಪರಿಶೇಷ: ಉಳಿದಿದ್ದು; ಪಯದಳ: ಕಾಲಾಳುಗಳ ಸೈನ್ಯ;

ಪದವಿಂಗಡಣೆ:
ವರ +ಯುಧಾಮನ್ಯ+ಉತ್ತಮೌಂಜಸರ್
ಇರಲು +ಪಂಚ+ದ್ರೌಪದೀ+ಸುತರ್
ಅರಸ +ನಿಮ್ಮ +ಯುಯುತ್ಸು +ಸೃಂಜಯ +ಸೋಮಕಾದಿಗಳು
ಕರಿಗಳ್+ಐನೂರೈದು+ ಸಾವಿರ
ತುರಗ+ಪಯದಳವೆಂಟು +ಸಾವಿರವ್
ಎರಡು +ಸಾವಿರ +ರಥವಿದರಿ+ಮೋಹರದ +ಪರಿಶೇಷ

ಅಚ್ಚರಿ:
(೧) ಸಾವಿರ – ೩ ಬಾರಿ ಪ್ರಯೋಗ

ಪದ್ಯ ೩೩: ಕುರುಸೇನೆಯ ಸ್ಥಿತಿ ಏನಾಯಿತು?

ಹರಿಬದಲಿ ಹೊಕ್ಕೆರಡು ಸಾವಿರ
ತುರಗ ಬಿದ್ದವು ನೂರು ಮದಸಿಂ
ಧುರಕೆ ಗಂಧನವಾಯ್ತು ಪಯದಳವೆಂಟು ಸಾವಿರದ
ಬರಹ ತೊಡೆದುದು ನೂರು ರಥ ರಿಪು
ಶರದೊಳಕ್ಕಾಡಿತು ವಿಡಂಬದ
ಕುರುಬಲಾಂಬುಧಿ ಕೂಡೆ ಬರತುದು ನೃಪತಿ ಕೇಳೆಂದ (ಗದಾ ಪರ್ವ, ೨ ಸಂಧಿ, ೩೩ ಪದ್ಯ)

ತಾತ್ಪರ್ಯ:
ಎಲೈ ರಾಜ ಧೃತರಾಷ್ಟ್ರನೇ ಕೇಳು, ಸಹದೇವನ ಮೇಲೆ ನುಗ್ಗಿದ ಎರಡುಸಾವಿರ ಕುದುರೆಗಳು, ನುರು ಆನೆಗಳು, ಎಂಟು ಸಾವಿರ ಕಾಲಾಳುಗಳು ಮಡಿದರು. ನೂರು ರಥಗಳು ಮುರಿದವು. ಕುರುಸೇನಾ ಸಮುದ್ರವು ಬತ್ತಿಹೋಯಿತು.

ಅರ್ಥ:
ಹರಿಬ: ಕೆಲಸ, ಕಾರ್ಯ; ಹೊಕ್ಕು: ಸೇರು; ಸಾವಿರ: ಸಹಸ್ರ; ತುರಗ: ಕುದುರೆ; ಬಿದ್ದು: ಬೀಳು, ಕುಸಿ; ನೂರು: ಶತ; ಮದ: ಅಹಂಕಾರ; ಸಿಂಧುರ: ಆನೆ, ಗಜ; ಗಂಧನ: ಅಳಿವು, ಕೊಲೆ; ಪಯದಳ: ಕಾಲಾಳು; ಬರ: ಕ್ಷಾಮ; ತೊಡೆ: ಬಳಿ, ಸವರು; ರಥ: ಬಂಡಿ; ರಿಪು: ವೈರಿ; ಶರ: ಬಾಣ; ವಿಡಂಬ: ಅನುಸರಣೆ; ಅಂಬುಧಿ: ಸಾಗರ; ಕೂಡೆ: ತಕ್ಷಣ; ಬರತುದು: ಬತ್ತಿಹೋಗು; ನೃಪತಿ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಹರಿಬದಲಿ +ಹೊಕ್ಕ್+ಎರಡು +ಸಾವಿರ
ತುರಗ +ಬಿದ್ದವು +ನೂರು +ಮದ+ಸಿಂ
ಧುರಕೆ+ ಗಂಧನವಾಯ್ತು +ಪಯದಳವೆಂಟು +ಸಾವಿರದ
ಬರಹ +ತೊಡೆದುದು +ನೂರು +ರಥ +ರಿಪು
ಶರದೊಳಕ್+ಆಡಿತು +ವಿಡಂಬದ
ಕುರುಬಲಾಂಬುಧಿ +ಕೂಡೆ +ಬರತುದು +ನೃಪತಿ+ ಕೇಳೆಂದ

ಅಚ್ಚರಿ:
(೧) ಮಡಿದುದು ಎಂದು ಹೇಳಲು – ನೂರು ಮದಸಿಂಧುರಕೆ ಗಂಧನವಾಯ್ತು

ಪದ್ಯ ೪೧: ರಣರಂಗವು ಯಾವುದರಿಂದ ತುಂಬಿತು?

ಬಿರುದಪಾಡಿನ ಭಾಷೆಗಳ ನಿ
ಷ್ಠುರದ ನುಡಿಗಳ ರಾಜವರ್ಗದ
ಮರಳುದಲೆಯನೆ ಕಾಣೆನರ್ಜುನನಾಹವಾಗ್ರದಲಿ
ಹರಿವ ರಕುತದ ತಳಿತ ಖಂಡದ
ಶಿರದ ಹರಹಿನ ಕುಣಿವ ಮುಂಡದ
ಕರಿ ತುರಗ ಪಯದಳದ ಹೆನಮಯವಾಯ್ತು ರಣಭೂಮಿ (ಗದಾ ಪರ್ವ, ೧ ಸಂಧಿ, ೪೧ ಪದ್ಯ)

ತಾತ್ಪರ್ಯ:
ನಮ್ಮವರ ಸವಾಲಿನ ಪ್ರತಿಜ್ಞೆಗಳು, ನಿಷ್ಠುರ ನುಡಿಗಳು ನಡೆಯಲಿಲ್ಲ. ರಾಜರ ತಲೆಗಳು ಹಿಂದಿರುಗಿ ಬರಲಿಲ್ಲ. ಅರ್ಜುನನ ಹೊಡೆತದಿಂದ ರಕ್ತ ಹರಿಯಿತು, ಮಾಂಸಖಂಡಗಳು ಕಂಡವು. ತಲೆಗಳು ಸುತ್ತಲೂ ಬಿದ್ದವು. ಮುಂಡಗಳು ಕುಣಿದವು. ರಣಭೂಮಿಯು ಚತುರಂಗದ ಹೆಣಗಳಿಂದ ತುಂಬಿದವು.

ಅರ್ಥ:
ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು, ಸ್ಪರ್ಧೆಗೆ ನೀಡುವ ಆಹ್ವಾನ, ಸವಾಲು; ಪಾಡು: ಪಂಥ, ಪ್ರತಿಜ್ಞೆ, ಶಪಥ; ಭಾಷೆ: ನುಡಿ; ನಿಷ್ಠುರ: ಕಠಿಣವಾದ; ನುಡಿ: ಮಾತು; ರಾಜ: ನೃಪ; ವರ್ಗ: ಗುಂಪು; ಮರಳು: ಹಿಂದಕ್ಕೆ ಬರು, ಹಿಂತಿರುಗು; ಕಾಣು: ತೋರು; ಆಹವ: ಯುದ್ಧ; ಅಗ್ರ: ಮುಂದೆ; ಹರಿ: ಚಲಿಸು; ರಕುತ: ನೆತ್ತರು; ತಳಿತ: ಚಿಗುರಿದ; ಖಂಡ: ತುಂಡು, ಚೂರು; ಶಿರ: ತಲೆ; ಹರಹು: ವಿಸ್ತಾರ, ವೈಶಾಲ್ಯ; ಕುಣಿ: ನರ್ತಿಸು; ಮುಂಡ: ತಲೆಯಿಲ್ಲದ ದೇಹ; ಕರಿ: ಆನೆ; ತುರಗ: ಕುದುರೆ; ಪಯದಳ: ಕಾಲಾಳು; ಹೆಣ: ಜೀವ ವಿಲ್ಲದ ಶರೀರ; ರಣಭೂಮಿ: ಯುದ್ಧರಂಗ;

ಪದವಿಂಗಡಣೆ:
ಬಿರುದಪಾಡಿನ+ ಭಾಷೆಗಳ +ನಿ
ಷ್ಠುರದ +ನುಡಿಗಳ+ ರಾಜವರ್ಗದ
ಮರಳು+ತಲೆಯನೆ +ಕಾಣೆನ್+ಅರ್ಜುನನ್+ಆಹವ+ಅಗ್ರದಲಿ
ಹರಿವ +ರಕುತದ +ತಳಿತ +ಖಂಡದ
ಶಿರದ+ ಹರಹಿನ+ ಕುಣಿವ +ಮುಂಡದ
ಕರಿ +ತುರಗ +ಪಯದಳದ +ಹೆಣಮಯವಾಯ್ತು +ರಣಭೂಮಿ

ಅಚ್ಚರಿ:
(೧) ರಣರಂಗದ ಚಿತ್ರಣ – ಹರಿವ ರಕುತದ ತಳಿತ ಖಂಡದ ಶಿರದ ಹರಹಿನ ಕುಣಿವ ಮುಂಡದ

ಪದ್ಯ ೩೭: ಅರ್ಜುನನು ಯಾರನ್ನು ಕಡಿದಟ್ಟಿದನು?

ಮುಂಕುಡಿಯ ಹಿಡಿದಾನೆಗಳನೆಡ
ವಂಕಕೌಕಿದ ರಥಚಯವ ಬಲ
ವಂಕಕೊತ್ತಿದ ರಾವುತರನುಬ್ಬೆದ್ದ ಪಯದಳವ
ಶಂಕೆಯನು ನಾ ಕಾಣೆ ಬಲನೆಡ
ವಂಕವನು ತರಿದೊಟ್ಟಿದನು ಮಾ
ರಂಕ ನಿಲುವುದೆ ಪಾರ್ಥ ಮುನಿದಡೆ ಭೂಪ ಕೇಳೆಂದ (ಗದಾ ಪರ್ವ, ೧ ಸಂಧಿ, ೩೭ ಪದ್ಯ)

ತಾತ್ಪರ್ಯ:
ಎಲೈ ರಾಜನೇ ಕೇಳು, ಅರ್ಜುನನು ಕೆರಳಿದರೆ ಇದಿರಾಳಿಗಳು ಗೆಲ್ಲಲು ಸಾಧ್ಯವೇ? ಮುಂದೆ ಬಂದ ಆನೆಗಳು, ಎಡಕ್ಕೆ ಮುತ್ತಿದ ರಥಗಳು, ಬಲಕ್ಕೆ ಆಕ್ರಮಿಸಿದ ರಾವುತರು, ಸಿಡಿದೆದ್ದ ಕಾಲಾಳುಗಳು ಎಲ್ಲವನ್ನೂ ನಿಶ್ಯಂಕೆಯಿಂದ ಅವನು ಕಡಿದೊಟ್ಟಿದನು.

ಅರ್ಥ:
ಮುಂಕುಡಿ: ಮುಂದೆ; ಹಿಡಿ: ಗ್ರಹಿಸು; ಆನೆ: ಗಜ; ಎಡವಂಕ: ವಾಮಭಾಗ; ಔಕು: ಒತ್ತು, ಹಿಚುಕು; ರಥ: ಬಂಡಿ; ಚಯ: ಗುಂಪು; ಬಲವಂಕ: ಬಲಭಾಗ; ಒತ್ತು: ಮುತ್ತು; ರಾವುತ: ಕುದುರೆಸವಾರ; ಉಬ್ಬೆದ್ದ: ಹೆಚ್ಚಾಗು; ಪಯದಳ: ಕಾಲಾಳು; ಶಂಕೆ: ಅನುಮಾನ; ಕಾಣು: ತೋರು; ಬಲ: ಸೈನ್ಯ; ತರಿ: ಸೀಳು; ಒಟ್ಟು: ರಾಶಿ, ಗುಂಪು; ಮಾರಂಕ: ಪ್ರತಿಯುದ್ಧ; ನಿಲುವು: ಇರುವಿಕೆ, ಸ್ಥಿತಿ; ಮುನಿ: ಕೋಪ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಮುಂಕುಡಿಯ+ ಹಿಡಿದ್+ಆನೆಗಳನ್+ಎಡ
ವಂಕಕ್+ಔಕಿದ +ರಥಚಯವ +ಬಲ
ವಂಕಕ್+ಒತ್ತಿದ +ರಾವುತರನ್+ಉಬ್ಬೆದ್ದ+ ಪಯದಳವ
ಶಂಕೆಯನು +ನಾ +ಕಾಣೆ +ಬಲನ್+ಎಡ
ವಂಕವನು +ತರಿದೊಟ್ಟಿದನು +ಮಾ
ರಂಕ +ನಿಲುವುದೆ +ಪಾರ್ಥ +ಮುನಿದಡೆ+ ಭೂಪ +ಕೇಳೆಂದ

ಅಚ್ಚರಿ:
(೧) ಎಡವಂಕ, ಬಲವಂಕ – ವಿರುದ್ಧ ಪದಗಳು

ಪದ್ಯ ೪೫: ಶಲ್ಯನು ವೈರಿಸೈನ್ಯವನ್ನು ಹೇಗೆ ನಾಶಮಾಡಿದನು?

ಕಡಿದು ಬಿಸುಟನು ತಲೆವರಿಗೆಗಳ
ಲಡಸಿದಾ ಪಯದಳವನೊಗ್ಗಿನ
ತುಡುಕುಗುದುರೆಯ ಖುರವ ತರಿದನು ನಗದ ನಾಟಕದ
ಗಡಣದಾನೆಯ ಥಟ್ಟನುಪ್ಪರ
ಗುಡಿಯ ರಥವಾಜಿಗಳ ರುಧಿರದ
ಕಡಲೊಳದ್ದಿದನುದ್ದಿದನು ಮಾರ್ಬಲದ ಗರ್ವಿತರ (ಶಲ್ಯ ಪರ್ವ, ೨ ಸಂಧಿ, ೪೫ ಪದ್ಯ)

ತಾತ್ಪರ್ಯ:
ತಲೆವರಿಗೆ ಹಿಡಿದ ಪದಾತಿದಳವನ್ನು ಶಲ್ಯನು ಕಡಿದು ಬಿಸುಟನು. ಮುತ್ತಿದ ಕುದುರೆಗಳ ಕಾಲ್ಗೊರಸುಗಳನ್ನು ಕತ್ತರಿಸಿದನು. ಬೆಟ್ಟದಂತಹ ಆನೆಗಳನ್ನೂ, ರಥದ ಕುದುರೆಗಳನ್ನೂ, ಶತ್ರುಸೈನಿಕರನ್ನು ರಕ್ತದ ಕಡಲಿನಲ್ಲಿ ಮುಳುಗಿಸು ನಾಶಮಾಡಿದನು.

ಅರ್ಥ:
ಕಡಿ: ಸೀಳು; ಬಿಸುಟು: ಹೊರಹಾಕು; ತಲೆವರಿಗೆ: ಗುರಾಣಿ; ಅಡಸು: ಬಿಗಿಯಾಗಿ ಒತ್ತು, ಚುಚ್ಚು; ಪಯದಳ: ಕಾಲಾಳು; ಒಗ್ಗು: ಗುಂಪು, ಸಮೂಹ; ತುಡುಕು: ಹೋರಾಡು, ಸೆಣಸು; ಕುದುರೆ: ಅಶ್ವ; ಖುರ: ಕುದುರೆ ದನಕರುಗಳ ಕಾಲಿನ ಗೊರಸು; ತರಿ: ಕಡಿ, ಕತ್ತರಿಸು; ನಗ: ಬೆಟ್ಟ; ನಾಟಕ: ತೋರಿಕೆ; ಗಡಣ: ಕೂಡಿಸುವಿಕೆ, ಸೇರಿಸುವಿಕೆ; ಆನೆ: ಕರಿ; ಥಟ್ಟು: ಗುಂಪು; ಉಪ್ಪರ: ಅತಿಶಯ; ಕುಡಿ: ತುದಿ, ಕೊನೆ; ರಥ: ಬಂಡಿ; ವಾಜಿ: ಕುದುರೆ; ರುಧಿರ: ರಕ್ತ; ಕಡಲು: ಸಾಗರ; ಅದ್ದು: ತೋಯು; ಉದ್ದು: ಒರಸು, ಅಳಿಸು; ಮಾರ್ಬಲ: ಶತ್ರು ಸೈನ್ಯ; ಗರ್ವಿತ: ಸೊಕ್ಕಿದ;

ಪದವಿಂಗಡಣೆ:
ಕಡಿದು+ ಬಿಸುಟನು +ತಲೆವರಿಗೆಗಳಲ್
ಅಡಸಿದಾ +ಪಯದಳವನ್+ಒಗ್ಗಿನ
ತುಡುಕು+ಕುದುರೆಯ +ಖುರವ +ತರಿದನು +ನಗದ +ನಾಟಕದ
ಗಡಣದ್+ಆನೆಯ +ಥಟ್ಟನ್+ಉಪ್ಪರ
ಕುಡಿಯ +ರಥವಾಜಿಗಳ +ರುಧಿರದ
ಕಡಲೊಳ್+ಅದ್ದಿದನ್+ಉದ್ದಿದನು +ಮಾರ್ಬಲದ +ಗರ್ವಿತರ

ಅಚ್ಚರಿ:
(೧) ರಣರಂಗದ ಚಿತ್ರಣ – ರುಧಿರದಕಡಲೊಳದ್ದಿದನುದ್ದಿದನು ಮಾರ್ಬಲದ ಗರ್ವಿತರ

ಪದ್ಯ ೪೯: ಭೂಮಿಯು ಯಾವುದರಿಂದ ತುಂಬಿ ಹೋಯಿತು?

ಹಯಕೆ ಹಯ ರಥ ರಥಕೆ ಪಯದಳ
ಪಯದಳಕೆ ಗಜಸೇನೆ ಗಜಸೇ
ನೆಯಲಿ ಭಾಷೆಯ ಭಟರು ಭಾಷೆಯ ಭಾರ ಗಡಣದಲಿ
ನಿಯತ ಚಾತುರ್ಬಲವೆರಡು ನಿ
ರ್ಭಯದಲೊದಗಿತು ಮಕುಟಮಸ್ತಕ
ಮಯ ಮಹೀತಳವೆನಲು ಹಳಚಿದು ಹೊಯ್ದುದುಭಯಬಲ (ದ್ರೋಣ ಪರ್ವ, ೧೫ ಸಂಧಿ, ೪೯ ಪದ್ಯ)

ತಾತ್ಪರ್ಯ:
ಕುದುರೆಗಳು ಕುದುರೆಗಳನ್ನು, ರಥಗಳು ರಥಗಳನ್ನು, ಕಾಲಾಳುಗಳು ಕಾಲಾಳುಗಳನ್ನು ಗಜಸೈನ್ಯವು ಗಜಸೈನ್ಯವನ್ನು ಶಪಥಮಾಡಿದವರು ಶಪಥಮಾಡಿದವರನ್ನು ಹೀಗೆ ಎರಡು ಕಡೆಯ ಸೈನ್ಯಗಳೂ ಪರಸ್ಪರವಾಗಿ ಹೊಯ್ದು ಹೋರಾಡಿದವು. ರಾಜರ ಕಿರೀಟಗಳಿಂದ ಭೂಮಿ ತುಂಬಿ ಹೋಯಿತು.

ಅರ್ಥ:
ಹಯ: ಕುದುರೆ; ರಥ: ಬಂಡಿ; ಪಯದಳ: ಸೈನಿಕ; ಗಜ: ಆನೆ; ಸೇನೆ: ಸೈನ್ಯ; ಭಾಷೆ: ನುಡಿ, ಶಪಥ; ಭಟ: ಪರಾಕ್ರಮಿ; ಭಾರ: ಹೊರೆ; ಗಡಣ: ಗುಂಪು; ನಿಯತ: ನಿಶ್ಚಿತವಾದ, ಸ್ಥಿರವಾದ; ಚಾತುರ್ಬಲ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ನಿರ್ಭಯ: ನಿರ್ಭೀತಿ, ಧೈರ್ಯ; ಒದಗು: ಲಭ್ಯ, ದೊರೆತುದು; ಮಕುಟ: ಕಿರೀಟ; ಮಸ್ತಕ: ಶಿರ; ಮಹೀತಳ: ಭೂಮಿ; ಹಳಚು: ತಾಗು, ಬಡಿ; ಹೊಯ್ದು: ಹೊಡೆ; ಉಭಯ: ಎರಡು; ಬಲ: ಸೈನ್ಯ;

ಪದವಿಂಗಡಣೆ:
ಹಯಕೆ +ಹಯ +ರಥ+ ರಥಕೆ +ಪಯದಳ
ಪಯದಳಕೆ +ಗಜಸೇನೆ +ಗಜಸೇ
ನೆಯಲಿ +ಭಾಷೆಯ +ಭಟರು +ಭಾಷೆಯ+ ಭಾರ +ಗಡಣದಲಿ
ನಿಯತ +ಚಾತುರ್ಬಲವ್+ಎರಡು +ನಿ
ರ್ಭಯದಲ್+ಒದಗಿತು+ ಮಕುಟ+ಮಸ್ತಕ
ಮಯ +ಮಹೀತಳವೆನಲು +ಹಳಚಿದು+ ಹೊಯ್ದುದ್+ಉಭಯಬಲ

ಅಚ್ಚರಿ:
(೧) ಜೋಡಿ ಪದಗಳ ಬಳಕೆ – ಹಯಕೆ ಹಯ ರಥ ರಥಕೆ ಪಯದಳ ಪಯದಳಕೆ ಗಜಸೇನೆ ಗಜಸೇನೆಯಲಿ ಭಾಷೆಯ ಭಟರು ಭಾಷೆಯ

ಪದ್ಯ ೮: ಭೀಮನ ಸೈನ್ಯವು ಹೇಗೆ ಮುಂದುವರೆಯಿತು?

ಕೆಲಕೆ ಹೊಳೆದವು ಕಡುಗುದುರೆ ನೆಲ
ನಳುಕೆ ನಡೆದವು ದಂತಿ ದೆಸೆಗಳ
ಹೊಲಿಗೆ ಹರಿಯದೆ ಮಾಣವೆನೆ ಹೊಕ್ಕವು ರಥಾನೀಕ
ತಳಪಟದ ತುಂಬಿತ್ತು ಪಯದಳ
ವುಲಿವ ಕಹಳೆಯ ಚಂಬುಕನ ಕಳ
ಕಳಿಕೆ ಮಿಗೆ ಕೈಕೊಂಡುದನಿಲಕುಮಾರಕನ ಸೇನೆ (ದ್ರೋಣ ಪರ್ವ, ೧೨ ಸಂಧಿ, ೮ ಪದ್ಯ)

ತಾತ್ಪರ್ಯ:
ಪಕ್ಕದಲ್ಲಿ ಕುದುರೆಗಳು ಶೋಭಿಸಿದವು ಆನೆಗಳು ನೆಲವು ಅಳುಕುವಂತೆ ಮುಂದುವರೆದವು. ಭೂಮಿಯ ಹೊಲಿಗೆ ಹರಿಯುವುದೆಂಬಂತೆ ರಥಗಲು ಹರಿದವು. ಯುದ್ಧರಂಗವನ್ನು ಕಾಲುದಳ ತುಂಬಿತು, ಚಂಬುಕ ಕಹಳೆಗಳು ಮೊರೆದವು. ಭೀಮನ ಸೈನ್ಯವು ಮಹಾಶಬ್ದ ಮಾಡುತ್ತಾ ಹೊರಟಿತು.

ಅರ್ಥ:
ಕೆಲ: ಪಕ್ಕ; ಹೊಳೆ: ಪ್ರಕಾಶಿಸು; ಕಡು: ಬಹಳ; ಕುದುರೆ: ಅಶ್ವ; ನೆಲ: ಭುಮಿ; ಅಳುಕು: ನಡುಗು; ನಡೆ: ಚಲಿಸು; ದಂತಿ: ಆನೆ; ದೆಸೆ: ದಿಕ್ಕು; ಹೊಲಿ:ಹೆಣೆ; ಹರಿ: ಸೀಳು; ಮಾಣು: ನಿಲ್ಲಿಸು; ಹೊಕ್ಕು: ಸೇರು; ರಥ: ಬಂಡಿ; ಅನೀಕ: ಗುಂಪು, ಸೈನ್ಯ; ತಳಪಟ: ಸೋಲು; ತುಂಬು: ಭರ್ತಿ; ಪಯದಳ: ಕಾಲಾಳು, ಸೈನಿಕ; ಉಲಿ: ಧ್ವನಿ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಚಂಬಕ: ಕಹಳೆ ವಾದ್ಯ; ಕಳಕಳಿ:ಆಸ್ಥೆ, ಆಸಕ್ತಿ; ಮಿಗೆ: ಹೆಚ್ಚು; ಅನಿಲಕುಮಾರ: ವಾಯು ಪುತ್ರ (ಭೀಮ); ಸೇನೆ: ಸೈನ್ಯ;

ಪದವಿಂಗಡಣೆ:
ಕೆಲಕೆ +ಹೊಳೆದವು +ಕಡು+ಕುದುರೆ +ನೆಲನ್
ಅಳುಕೆ +ನಡೆದವು +ದಂತಿ +ದೆಸೆಗಳ
ಹೊಲಿಗೆ +ಹರಿಯದೆ +ಮಾಣವ್+ಎನೆ +ಹೊಕ್ಕವು +ರಥಾನೀಕ
ತಳಪಟದ +ತುಂಬಿತ್ತು +ಪಯದಳ
ವುಲಿವ+ ಕಹಳೆಯ +ಚಂಬುಕನ +ಕಳ
ಕಳಿಕೆ +ಮಿಗೆ +ಕೈಕೊಂಡುದ್+ಅನಿಲಕುಮಾರಕನ+ ಸೇನೆ

ಅಚ್ಚರಿ:
(೧) ರೂಪಕದ ಪ್ರಯೋಗ – ದಂತಿ ದೆಸೆಗಳ ಹೊಲಿಗೆ ಹರಿಯದೆ ಮಾಣವೆನೆ ಹೊಕ್ಕವು ರಥಾನೀಕ

ಪದ್ಯ ೨೦: ಗಿರಿಗಳೇಕೆ ಸಡಲಿದವು?

ಏನ ಹೇಳುವೆನದನು ನೃಪ ತವ
ಸೂನುವಿನ ಮೋಹರದೊಳಳ್ಳಿರಿ
ವಾನೆಗಳನುಪ್ಪರಿಸಿ ಗಗನವ ಮೊಗೆವ ಕುದುರೆಗಳ
ಆ ನೃಪರ ರಥ ವಾಜಿಗಳ ಗಿರಿ
ಸಾನು ಸಡಿಲಲು ಜಡಿವ ಭೇರಿ
ಧ್ವಾನವನು ಪಯದಳದ ಸುಭಟರ ಸಿಂಹಗರ್ಜನೆಯ (ದ್ರೋಣ ಪರ್ವ, ೪ ಸಂಧಿ, ೨೦ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ನಾನು ಏನೆಂದು ಹೇಳಲಿ, ನಿನ್ನ ಮಗನ ಸೈನ್ಯದಲ್ಲಿ ಆನೆಗಳ ಬೃಂಹಿತ, ಕುದುರೆಗಳ ಹೇಶಾರವ, ರಾಜರ ರಥಗಳು ಆನೆಗಳ ಮಹಾಶಬ್ದವನ್ನು ಮಾಡಿದವು. ಭೇರಿಯ ಬಡಿತ, ಕಾಲಾಳುಗಳ ಗರ್ಜನೆಯಿಂದ ಗಿರಿಗಳು ಸಡಲಿದವು.

ಅರ್ಥ:
ಹೇಳು: ತಿಳಿಸು; ನೃಪ: ರಾಜ; ಸೂನು: ಮಗ; ಮೋಹರ: ಯುದ್ಧ; ಇರಿ: ಚುಚ್ಚು; ಅಳ್ಳಿರಿ: ನಡುಗಿಸು; ಆನೆ: ಗಜ; ಉಪ್ಪರಿಸು: ಎತ್ತರ, ಅತಿಶಯ; ಗಗನ: ಅಂಬರ; ಮೊಗೆ:ಬಾಚು, ಗೋರು, ನುಂಗು; ಕುದುರೆ: ಅಶ್ವ; ರಥ: ಬಂಡಿ; ವಾಜಿ: ಕುದುರೆ; ಗಿರಿ: ಬೆಟ್ಟ; ಸಾನು: ಬೆಟ್ಟದ ಮೇಲಿನ ಸಮತಲವಾದ ಪ್ರದೇಶ, ಪ್ರಸ್ಥಭೂಮಿ; ಸಡಿಲ: ಬಿಗಿಯಿಲ್ಲದಿರುವುದು; ಜಡಿ: ಬೆದರಿಕೆ, ಹೆದರಿಕೆ; ಭೇರಿ: ನಗಾರಿ, ದುಂದುಭಿ; ಧ್ವಾನ:ಧ್ವನಿ, ಶಬ್ದ, ನಾದ; ಪಯದಳ: ಸೈನಿಕ, ಕಾಲಾಳು; ಸಿಂಹ: ಕೇಸರಿ; ಗರ್ಜನೆ: ಆರ್ಭಟ;

ಪದವಿಂಗಡಣೆ:
ಏನ +ಹೇಳುವೆನ್+ಅದನು +ನೃಪ +ತವ
ಸೂನುವಿನ +ಮೋಹರದೊಳ್+ಅಳ್ಳಿರಿವ್
ಆನೆಗಳನ್+ಉಪ್ಪರಿಸಿ +ಗಗನವ +ಮೊಗೆವ +ಕುದುರೆಗಳ
ಆ +ನೃಪರ +ರಥ +ವಾಜಿಗಳ +ಗಿರಿ
ಸಾನು +ಸಡಿಲಲು +ಜಡಿವ +ಭೇರಿ
ಧ್ವಾನವನು +ಪಯದಳದ +ಸುಭಟರ +ಸಿಂಹ+ಗರ್ಜನೆಯ

ಅಚ್ಚರಿ:
(೧)ಕೂಗಿನ ತೀವ್ರತೆ – ನೃಪರ ರಥ ವಾಜಿಗಳ ಗಿರಿಸಾನು ಸಡಿಲಲು; ಗಗನವ ಮೊಗೆವ ಕುದುರೆಗಳ;
(೨) ವಾಜಿ, ಕುದುರೆ – ಸಮಾನಾರ್ಥಕ ಪದ