ಪದ್ಯ ೬೪: ಧರ್ಮಜನು ಗಾಂಧಾರಿಗೆ ತನ್ನನ್ನು ಶಪಿಸೆಂದು ಏಕೆ ಹೇಳಿದನು?

ಧರಣಿಪತಿ ಕೇಳ್ ಸುಬಲಜೆಯ ನಿ
ಷ್ಠುರದ ನುಡಿಯಲಿ ನಡುಗಿ ಭೂಪತಿ
ಕರವ ಮುಗಿದತಿವಿನಯಭರದಲಿ ಬಾಗಿ ಭೀತಿಯಲಿ
ಕರುಣಿಸೌ ಗಾಂಧಾರಿ ನಿರ್ಮಳ
ಕುರುಕುಲಾನ್ವಯಜನನಿ ಕೋಪ
ಸ್ಫುರಣದಲಿ ಶಪಿಸೆನಗೆ ಶಾಪಾರುಹನು ತಾನೆಂದ (ಗದಾ ಪರ್ವ, ೧೧ ಸಂಧಿ, ೬೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಗಾಂಧಾರಿಯ ನಿಷ್ಠುರದ ಮಾತುಗಳನ್ನು ಕೇಳಿ ಧರ್ಮಜನು ನಡನಡುಗಿ, ಕೈಮುಗಿದು ಅತಿಶಯ ವಿನಯದಿಂದ, ಗಾಂಧಾರಿ, ಕರುಣಿಸು, ನೀನು ಕುರುವಂಶದ ತಾಯಿ, ಕೋಪಗೊಂಡಿರುವೆ, ಶಾಪರ್ಹನಾದ ನನ್ನನ್ನು ಶಪಿಸು ಎಂದು ಬೇಡಿಕೊಂಡನು.

ಅರ್ಥ:
ಧರಣಿಪತಿ: ರಾಜ; ಕೇಳ್: ಆಲಿಸು; ಸುಬಲಜೆ: ಗಾಂಧಾರಿ; ನಿಷ್ಠುರ: ಕಠಿಣ, ಒರಟಾದ; ನುಡಿ: ಮಾತು; ನಡುಗು: ಕಂಪಿಸು, ಹೆದರು; ಭೂಪತಿ: ರಾಜ; ಕರ: ಕೈ, ಹಸ್ತ; ಮುಗಿದು: ನಮಸ್ಕರಿಸು; ವಿನಯ: ಒಳ್ಳೆಯತನ, ಸೌಜನ್ಯ; ಬಾಗಿ: ಎರಗು; ಭೀತಿ: ಭಯ; ಕರುಣೆ: ದಯೆ; ನಿರ್ಮಳ: ಶುದ್ಧ; ಅನ್ವಯ: ವಂಶ; ಕೋಪ: ಖತಿ; ಸ್ಫುರಣ: ನಡುಗುವುದು, ಕಂಪನ; ಶಪಿಸು: ನಿಷ್ಠುರದ ನುಡಿ; ಅರುಹ: ಅರ್ಹ;

ಪದವಿಂಗಡಣೆ:
ಧರಣಿಪತಿ+ ಕೇಳ್ +ಸುಬಲಜೆಯ +ನಿ
ಷ್ಠುರದ +ನುಡಿಯಲಿ +ನಡುಗಿ +ಭೂಪತಿ
ಕರವ+ ಮುಗಿದ್+ಅತಿ+ವಿನಯಭರದಲಿ +ಬಾಗಿ +ಭೀತಿಯಲಿ
ಕರುಣಿಸೌ +ಗಾಂಧಾರಿ +ನಿರ್ಮಳ
ಕುರುಕುಲ+ಅನ್ವಯ+ಜನನಿ +ಕೋಪ
ಸ್ಫುರಣದಲಿ+ ಶಪಿಸೆನಗೆ +ಶಾಪಾರುಹನು +ತಾನೆಂದ

ಅಚ್ಚರಿ:
(೧) ನ ಕಾರದ ತ್ರಿವಳಿ ಪದ – ನಿಷ್ಠುರದ ನುಡಿಯಲಿ ನಡುಗಿ
(೨) ಗಾಂಧಾರಿಯನ್ನು ಕರೆದ ಪರಿ – ನಿರ್ಮಳ ಕುರುಕುಲಾನ್ವಯಜನನಿ, ಸುಬಲಜೆ

ಪದ್ಯ ೪೧: ರಣರಂಗವು ಯಾವುದರಿಂದ ತುಂಬಿತು?

ಬಿರುದಪಾಡಿನ ಭಾಷೆಗಳ ನಿ
ಷ್ಠುರದ ನುಡಿಗಳ ರಾಜವರ್ಗದ
ಮರಳುದಲೆಯನೆ ಕಾಣೆನರ್ಜುನನಾಹವಾಗ್ರದಲಿ
ಹರಿವ ರಕುತದ ತಳಿತ ಖಂಡದ
ಶಿರದ ಹರಹಿನ ಕುಣಿವ ಮುಂಡದ
ಕರಿ ತುರಗ ಪಯದಳದ ಹೆನಮಯವಾಯ್ತು ರಣಭೂಮಿ (ಗದಾ ಪರ್ವ, ೧ ಸಂಧಿ, ೪೧ ಪದ್ಯ)

ತಾತ್ಪರ್ಯ:
ನಮ್ಮವರ ಸವಾಲಿನ ಪ್ರತಿಜ್ಞೆಗಳು, ನಿಷ್ಠುರ ನುಡಿಗಳು ನಡೆಯಲಿಲ್ಲ. ರಾಜರ ತಲೆಗಳು ಹಿಂದಿರುಗಿ ಬರಲಿಲ್ಲ. ಅರ್ಜುನನ ಹೊಡೆತದಿಂದ ರಕ್ತ ಹರಿಯಿತು, ಮಾಂಸಖಂಡಗಳು ಕಂಡವು. ತಲೆಗಳು ಸುತ್ತಲೂ ಬಿದ್ದವು. ಮುಂಡಗಳು ಕುಣಿದವು. ರಣಭೂಮಿಯು ಚತುರಂಗದ ಹೆಣಗಳಿಂದ ತುಂಬಿದವು.

ಅರ್ಥ:
ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು, ಸ್ಪರ್ಧೆಗೆ ನೀಡುವ ಆಹ್ವಾನ, ಸವಾಲು; ಪಾಡು: ಪಂಥ, ಪ್ರತಿಜ್ಞೆ, ಶಪಥ; ಭಾಷೆ: ನುಡಿ; ನಿಷ್ಠುರ: ಕಠಿಣವಾದ; ನುಡಿ: ಮಾತು; ರಾಜ: ನೃಪ; ವರ್ಗ: ಗುಂಪು; ಮರಳು: ಹಿಂದಕ್ಕೆ ಬರು, ಹಿಂತಿರುಗು; ಕಾಣು: ತೋರು; ಆಹವ: ಯುದ್ಧ; ಅಗ್ರ: ಮುಂದೆ; ಹರಿ: ಚಲಿಸು; ರಕುತ: ನೆತ್ತರು; ತಳಿತ: ಚಿಗುರಿದ; ಖಂಡ: ತುಂಡು, ಚೂರು; ಶಿರ: ತಲೆ; ಹರಹು: ವಿಸ್ತಾರ, ವೈಶಾಲ್ಯ; ಕುಣಿ: ನರ್ತಿಸು; ಮುಂಡ: ತಲೆಯಿಲ್ಲದ ದೇಹ; ಕರಿ: ಆನೆ; ತುರಗ: ಕುದುರೆ; ಪಯದಳ: ಕಾಲಾಳು; ಹೆಣ: ಜೀವ ವಿಲ್ಲದ ಶರೀರ; ರಣಭೂಮಿ: ಯುದ್ಧರಂಗ;

ಪದವಿಂಗಡಣೆ:
ಬಿರುದಪಾಡಿನ+ ಭಾಷೆಗಳ +ನಿ
ಷ್ಠುರದ +ನುಡಿಗಳ+ ರಾಜವರ್ಗದ
ಮರಳು+ತಲೆಯನೆ +ಕಾಣೆನ್+ಅರ್ಜುನನ್+ಆಹವ+ಅಗ್ರದಲಿ
ಹರಿವ +ರಕುತದ +ತಳಿತ +ಖಂಡದ
ಶಿರದ+ ಹರಹಿನ+ ಕುಣಿವ +ಮುಂಡದ
ಕರಿ +ತುರಗ +ಪಯದಳದ +ಹೆಣಮಯವಾಯ್ತು +ರಣಭೂಮಿ

ಅಚ್ಚರಿ:
(೧) ರಣರಂಗದ ಚಿತ್ರಣ – ಹರಿವ ರಕುತದ ತಳಿತ ಖಂಡದ ಶಿರದ ಹರಹಿನ ಕುಣಿವ ಮುಂಡದ

ಪದ್ಯ ೪೮: ಭೀಮನು ಯಾರನ್ನು ಯಮನ ಕೈಗೆ ನೀಡಿದನು?

ದ್ರುಮ ವಿಕರ್ಣ ಸುಷೇಣ ಚಾರು
ಕ್ರಮ ವಿವಿತ್ಸುಕ ವಜ್ರಬಾಹುಕ
ದಮನ ದೀರ್ಘೋದರ ಮಹೋದರ ಕುಂಡದಾರುಕನ
ಯಮನ ಕೈಯೆಡೆಗೊಟ್ಟು ಘನವಿ
ಕ್ರಮದ ಸಿರಿ ಹೊದರೇಳೆ ಜಯವಿ
ಕ್ರಮದೊಳಬ್ಬರಿಸಿದನು ನಿಷ್ಠುರ ಸಿಂಹನಾದದಲಿ (ದ್ರೋಣ ಪರ್ವ, ೧೩ ಸಂಧಿ, ೪೮ ಪದ್ಯ)

ತಾತ್ಪರ್ಯ:
ದ್ರುಮ, ವಿಕರ್ಣ, ಸುಷೇಣ, ಚಾರುಕ್ರಮ, ವಿವಿತ್ಸುಕ, ವಜ್ರಬಾಹುಕ, ದಮನ, ದೀರ್ಘೋದರ, ಮಹೋದರ, ಕುಂಡದಾರುಕರನ್ನು ಯಮನ ಕೈಗೆ ಕೊಟ್ಟು, ವಿಕ್ರಮದ ಸಿರಿ ದಟ್ಟವಾಗಲು, ಭೀಮನು ನಿಷ್ಠುರ ಸಿಂಹನಾದದಿಂದ ಅಬ್ಬರಿಸಿದನು.

ಅರ್ಥ:
ಯಮ: ಜವ; ಘನ: ಶ್ರೇಷ್ಠ; ವಿಕ್ರಮ: ಗತಿ, ಗಮನ; ಸಿರಿ: ಐಶ್ವರ್ಯ; ಹೊದರು: ಅತಿಥಿ; ಗುಂಪು; ಜಯ: ಗೆಲುವು; ಅಬ್ಬರಿಸು: ಗರ್ಜಿಸು; ನಿಷ್ಠುರ: ಕಠೋರ; ಸಿಂಹ: ಕೇಸರಿ; ನಾದ: ಶಬ್ದ;

ಪದವಿಂಗಡಣೆ:
ದ್ರುಮ +ವಿಕರ್ಣ +ಸುಷೇಣ +ಚಾರು
ಕ್ರಮ +ವಿವಿತ್ಸುಕ +ವಜ್ರಬಾಹುಕ
ದಮನ +ದೀರ್ಘೋದರ +ಮಹೋದರ +ಕುಂಡದಾರುಕನ
ಯಮನ +ಕೈಯೆಡೆಗೊಟ್ಟು +ಘನ+ವಿ
ಕ್ರಮದ +ಸಿರಿ +ಹೊದರೇಳೆ+ ಜಯ+ವಿ
ಕ್ರಮದೊಳ್+ಅಬ್ಬರಿಸಿದನು +ನಿಷ್ಠುರ +ಸಿಂಹನಾದದಲಿ

ಅಚ್ಚರಿ:
(೧) ಘನವಿಕ್ರಮ, ಜಯವಿಕ್ರಮ – ಪದಗಳ ಬಳಕೆ

ಪದ್ಯ ೩೭: ಅರ್ಜುನನ ಗಾಂಡಿವ ಮಿಡಿತವು ಯಾವ ಪ್ರಭಾವ ಭೀರಿತು?

ದೇವದತ್ತವ ಮೊಳಗಿದನು ಗಾಂ
ಡೀವಿ ಚಾಪವ ಮಿಡಿದ ನಿಷ್ಠುರ
ರಾವ ತಿವಿದುದು ಜರಿದವಡಕಿಲು ಜಗದ ಜೋಡಿಗಳ
ರಾವು ಫಲುಗುಣಯೆನುತ ಪಾರ್ಥನ
ಭಾವ ಕುಡಿ ಚಮ್ಮಟಿಗೆಯಲಿ ತುರ
ಗಾವಳಿಯನದುಹಿದನು ಸುಳಿಸಿದನಾಹವಕೆ ರಥವ (ದ್ರೋಣ ಪರ್ವ, ೯ ಸಂಧಿ, ೩೭ ಪದ್ಯ)

ತಾತ್ಪರ್ಯ:
ಅರ್ಜುನನು ದೇವದತ್ತ ಶಂಖವನ್ನೂದಿದನು, ಗಾಂಡೀವದ ಹೆದೆಯನ್ನು ಮಿಡಿಯಲು ಅವಉಗಳ ನಿಷ್ಠುರ ಶಬ್ದಕ್ಕೆ ಹದಿನಾಲ್ಕು ಲೋಕಗಳ ಅಡಕಿಲು ಸಡಿಲಿತು. ಶ್ರೀಕೃಷ್ಣನು ಭಲೇ ಅರ್ಜುನ, ಎನ್ನುತ್ತಾ ಚಮ್ಮಟಿಗೆಯಿಂದ ಕುದುರೆಗಳನ್ನು ತಿವಿದು ರಥವನ್ನು ಯುದ್ಧಕ್ಕೆ ಸುಳಿಸಿದನು.

ಅರ್ಥ:
ಮೊಳಗು: ಹೊರಹೊಮ್ಮು; ಚಾಪ: ಬಿಲ್ಲು; ಮಿಡಿ: ನುಡಿಸು, ಸ್ಪಂದಿಸುವಂತೆ ಮಾಡು; ನಿಷ್ಠುರ: ಕಠಿಣವಾದುದು; ರವ: ಶಬ್ದ; ತಿವಿ: ಚುಚ್ಚು; ಜರಿ: ಅಳುಕು; ಅಡಕಿಲು: ತುಂಬು, ಒಳಸೇರಿಸು; ಜಗ: ಪ್ರಪಂಚ; ಜೋಡು: ಜೊತೆ, ಜೋಡಿ; ರಾವು: ಒಂದು ಕೊಂಡಾಟದ ನುಡಿ, ಭಲೇ; ಭಾವ: ಗಂಡನ ಅಣ್ಣ; ಕುಡಿ: ತುದಿ, ಕೊನೆ; ಚಮ್ಮಟಿಗೆ: ಚಾವಟಿ, ಬಾರುಕೋಲು; ತುರಗ: ಕುದುರೆ, ಅಶ್ವ; ಆವಳಿ: ಸಾಲು; ಅದುಹು: ಚುಚ್ಚು; ಸುಳಿಸು: ಸುತ್ತುವಂತೆ ಮಾಡು, ತಿರುಗಿಸು; ಆಹವ: ಯುದ್ಧ; ರಥ: ಬಂಡಿ;

ಪದವಿಂಗಡಣೆ:
ದೇವದತ್ತವ +ಮೊಳಗಿದನು +ಗಾಂ
ಡೀವಿ +ಚಾಪವ +ಮಿಡಿದ +ನಿಷ್ಠುರ
ರಾವ +ತಿವಿದುದು +ಜರಿದವ್+ಅಡಕಿಲು +ಜಗದ +ಜೋಡಿಗಳ
ರಾವು +ಫಲುಗುಣ+ಎನುತ +ಪಾರ್ಥನ
ಭಾವ +ಕುಡಿ +ಚಮ್ಮಟಿಗೆಯಲಿ +ತುರ
ಗಾವಳಿಯನ್+ಅದುಹಿದನು +ಸುಳಿಸಿದನ್+ಆಹವಕೆ +ರಥವ

ಅಚ್ಚರಿ:
(೧) ಕೃಷ್ಣನನ್ನು ಪಾರ್ಥನ ಭಾವ ಎಂದು ಕರೆದಿರುವುದು

ಪದ್ಯ ೧೨: ಕೃಷ್ಣನು ಕರ್ಣನನ್ನು ಕೊಲ್ಲಲ್ಲು ಏನುಪಾಯ ಮಾಡಿದ?

ಕರಗುವರೆ ನೀ ಸಾರು ಭೀಮನ
ಕರೆದು ಕೊಲಿಸುವೆನೀತನನು ನಿ
ಷ್ಠುರನಲಾ ನೀನೆನ್ನದಿರು ತೆಗೆ ನಿನ್ನ ತನ್ನಿಂದ
ಹರಿಯದೇ ಹಗೆ ನಮ್ಮ ಚಕ್ರದ
ಲರಿಭಟನ ಮುರಿವೆನು ಯುಧಿಷ್ಥಿರ
ನರಸುತನವದು ನಿಲಲಿ ನೀನಂಜುವರೆ ಸಾರೆಂದ (ಕರ್ಣ ಪರ್ವ, ೨೭ ಸಂಧಿ, ೧೨ ಪದ್ಯ)

ತಾತ್ಪರ್ಯ:
ಕರ್ಣನಿಗೆ ನೀನು ಕರಗುವೆಯಾ? ನಾನು ಬೇಡವೆನ್ನುವುದಿಲ್ಲ, ಭೀಮನನ್ನು ಕರೆಸಿ ಕೊಲ್ಲಿಸುತ್ತೇನೆ, ನೀನೇಕೆ ಇಷ್ಟು ನಿಷ್ಠುರನಾಗಿರುವೆ ಎನ್ನಬೇಡ. ಕರ್ಣನನ್ನು ಕೊಲ್ಲಲು ನನ್ನಿಂದ ನಿನ್ನಿಂದ ನನ್ನಿಂದ ಆಗುವುದಿಲ್ಲವೇ? ಬೇಡ, ಸುದರ್ಶನ ಚಕ್ರದಿಂದ ಕರ್ಣನನ್ನು ಸಂಹರಿಸುತ್ತೇನೆ. ಯುಧಿಷ್ಠಿರನ ಚಕ್ರವರ್ತಿ ಪದವಿ ನಿಲ್ಲಲಿ, ನೀನು ಹೆದರುವುದಾದರೆ ನೀನು ಹೋಗು ಎಂದು ಕೃಷ್ಣನು ಅರ್ಜುನನಿಗೆ ಹೇಳಿದ

ಅರ್ಥ:
ಕರಗು: ಕನಿಕರ ಪಡು; ಸಾರು: ಹತ್ತಿರಕ್ಕೆ ಬರು, ಘೋಷಿಸು; ಕರೆ: ಬರೆಮಾಡಿ; ಕೊಲಿಸು: ಸಾಯಿಸುತ್ತೇನೆ; ನಿಷ್ಠುರ: ಕಠಿಣವಾದುದು, ಒರಟು; ತೆಗೆ: ಹೊರತರು; ಹರಿ: ಕಡಿ, ಕತ್ತರಿಸು; ಹಗೆ: ವೈರ; ಚಕ್ರ: ಸುದರ್ಶನ ಚಕ್ರ; ಅರಿ: ವೈರಿ; ಭಟ: ಪರಾಕ್ರಮ; ಮುರಿ: ಸೀಳು; ಅರಸು: ರಾಜ; ನಿಲು: ನಿಲ್ಲು, ಸುಮ್ಮನಿರು; ಅಂಜು: ಹೆದರು;

ಪದವಿಂಗಡಣೆ:
ಕರಗುವರೆ +ನೀ +ಸಾರು +ಭೀಮನ
ಕರೆದು +ಕೊಲಿಸುವೆನ್+ಈತನನು +ನಿ
ಷ್ಠುರನಲಾ+ ನೀನ್+ಎನ್ನದಿರು +ತೆಗೆ +ನಿನ್ನ +ತನ್ನಿಂದ
ಹರಿಯದೇ +ಹಗೆ+ ನಮ್ಮ +ಚಕ್ರದಲ್
ಅರಿಭಟನ+ ಮುರಿವೆನು +ಯುಧಿಷ್ಥಿರನ್
ಅರಸುತನವದು +ನಿಲಲಿ +ನೀನಂಜುವರೆ+ ಸಾರೆಂದ

ಅಚ್ಚರಿ:
(೧) ಕೃಷ್ಣನ ದೃಢ ನಿರ್ಣಯ – ಭೀಮನ ಕರೆದು ಕೊಲಿಸುವೆ; ನಮ್ಮ ಚಕ್ರದಲರಿಭಟನ ಮುರಿವೆನು