ಪದ್ಯ ೬೪: ಧರ್ಮಜನು ಗಾಂಧಾರಿಗೆ ತನ್ನನ್ನು ಶಪಿಸೆಂದು ಏಕೆ ಹೇಳಿದನು?

ಧರಣಿಪತಿ ಕೇಳ್ ಸುಬಲಜೆಯ ನಿ
ಷ್ಠುರದ ನುಡಿಯಲಿ ನಡುಗಿ ಭೂಪತಿ
ಕರವ ಮುಗಿದತಿವಿನಯಭರದಲಿ ಬಾಗಿ ಭೀತಿಯಲಿ
ಕರುಣಿಸೌ ಗಾಂಧಾರಿ ನಿರ್ಮಳ
ಕುರುಕುಲಾನ್ವಯಜನನಿ ಕೋಪ
ಸ್ಫುರಣದಲಿ ಶಪಿಸೆನಗೆ ಶಾಪಾರುಹನು ತಾನೆಂದ (ಗದಾ ಪರ್ವ, ೧೧ ಸಂಧಿ, ೬೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಗಾಂಧಾರಿಯ ನಿಷ್ಠುರದ ಮಾತುಗಳನ್ನು ಕೇಳಿ ಧರ್ಮಜನು ನಡನಡುಗಿ, ಕೈಮುಗಿದು ಅತಿಶಯ ವಿನಯದಿಂದ, ಗಾಂಧಾರಿ, ಕರುಣಿಸು, ನೀನು ಕುರುವಂಶದ ತಾಯಿ, ಕೋಪಗೊಂಡಿರುವೆ, ಶಾಪರ್ಹನಾದ ನನ್ನನ್ನು ಶಪಿಸು ಎಂದು ಬೇಡಿಕೊಂಡನು.

ಅರ್ಥ:
ಧರಣಿಪತಿ: ರಾಜ; ಕೇಳ್: ಆಲಿಸು; ಸುಬಲಜೆ: ಗಾಂಧಾರಿ; ನಿಷ್ಠುರ: ಕಠಿಣ, ಒರಟಾದ; ನುಡಿ: ಮಾತು; ನಡುಗು: ಕಂಪಿಸು, ಹೆದರು; ಭೂಪತಿ: ರಾಜ; ಕರ: ಕೈ, ಹಸ್ತ; ಮುಗಿದು: ನಮಸ್ಕರಿಸು; ವಿನಯ: ಒಳ್ಳೆಯತನ, ಸೌಜನ್ಯ; ಬಾಗಿ: ಎರಗು; ಭೀತಿ: ಭಯ; ಕರುಣೆ: ದಯೆ; ನಿರ್ಮಳ: ಶುದ್ಧ; ಅನ್ವಯ: ವಂಶ; ಕೋಪ: ಖತಿ; ಸ್ಫುರಣ: ನಡುಗುವುದು, ಕಂಪನ; ಶಪಿಸು: ನಿಷ್ಠುರದ ನುಡಿ; ಅರುಹ: ಅರ್ಹ;

ಪದವಿಂಗಡಣೆ:
ಧರಣಿಪತಿ+ ಕೇಳ್ +ಸುಬಲಜೆಯ +ನಿ
ಷ್ಠುರದ +ನುಡಿಯಲಿ +ನಡುಗಿ +ಭೂಪತಿ
ಕರವ+ ಮುಗಿದ್+ಅತಿ+ವಿನಯಭರದಲಿ +ಬಾಗಿ +ಭೀತಿಯಲಿ
ಕರುಣಿಸೌ +ಗಾಂಧಾರಿ +ನಿರ್ಮಳ
ಕುರುಕುಲ+ಅನ್ವಯ+ಜನನಿ +ಕೋಪ
ಸ್ಫುರಣದಲಿ+ ಶಪಿಸೆನಗೆ +ಶಾಪಾರುಹನು +ತಾನೆಂದ

ಅಚ್ಚರಿ:
(೧) ನ ಕಾರದ ತ್ರಿವಳಿ ಪದ – ನಿಷ್ಠುರದ ನುಡಿಯಲಿ ನಡುಗಿ
(೨) ಗಾಂಧಾರಿಯನ್ನು ಕರೆದ ಪರಿ – ನಿರ್ಮಳ ಕುರುಕುಲಾನ್ವಯಜನನಿ, ಸುಬಲಜೆ

ಪದ್ಯ ೫೩: ಪಾಂಡವರು ಗಾಂಧಾರಿಯನ್ನು ಹೇಗೆ ಕಂಡರು?

ಹರಿ ವಿದುರ ಪಾರಾಶರಾತ್ಮಜ
ವರ ಮಹೀಪತಿ ಭೀಮ ಮಾದ್ರೇ
ಯರು ಧನಂಜಯ ಸಹಿತ ಬಂದರು ಬಹಳ ವಿನಯದಲಿ
ಚರಣದಲಿ ಮೈಯ್ಯಿಕ್ಕಿದರೆ ನೃಪ
ವರನ ನೆಗಹಿದಳನಿಲಸುತ ಸಿತ
ತುರಗ ಮಾದ್ರೀಸುತರು ಪದಕೆರಗಿದರು ಭೀತಿಯಲಿ (ಗದಾ ಪರ್ವ, ೧೧ ಸಂಧಿ, ೫೩ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣ, ವಿದುರ, ವ್ಯಾಸ, ಧರ್ಮಜ, ಭೀಮಾರ್ಜುನ, ನಕುಲ, ಸಹದೇವರು ಗಾಂಧಾರಿಯ ಬಳಿಗೆ ಬಮ್ದರು. ಧರ್ಮಜನು ವಿನಯದಿಂದ ನಮಸ್ಕರಿಸಲು ಗಾಂಧಾರಿಯು ಅವನನ್ನು ಮೇಲಕ್ಕೆತ್ತಿದಳು. ಉಳಿದ ಪಾಂಡವರು ಭೀತಿಯಿಂದ ನಮಸ್ಕರಿಸಿದರು.

ಅರ್ಥ:
ಹರಿ: ಕೃಷ್ಣ; ಪರಾಶರಾತ್ಮಜ: ವೇದವ್ಯಾಸ; ವರ: ಶ್ರೇಷ್ಠ; ಮಹೀಪತಿ: ರಾಜ; ವಿನಯ: ಒಳ್ಳೆಯತನ, ಸೌಜನ್ಯ; ಚರಣ: ಪಾದ; ಮೆಯ್ಯಿಕ್ಕು: ನಮಸ್ಕರಿಸು; ನೃಪ: ರಾಜ; ನೆಗಹು: ಅಪ್ಪಿಕೊಳ್ಳು; ಅನಿಲಸುತ: ಭೀಮ; ಸಿತ: ಬಿಳಿ; ತುರಗ: ಕುದುರೆ; ಸಿತತುರಗ: ಅರ್ಜುನ; ಪದ: ಚರಣ; ಎರಗು: ನಮಸ್ಕರಿಸು; ಭೀತಿ: ಭಯ;

ಪದವಿಂಗಡಣೆ:
ಹರಿ +ವಿದುರ +ಪಾರಾಶರಾತ್ಮಜ
ವರ+ ಮಹೀಪತಿ+ ಭೀಮ +ಮಾದ್ರೇ
ಯರು +ಧನಂಜಯ +ಸಹಿತ +ಬಂದರು +ಬಹಳ +ವಿನಯದಲಿ
ಚರಣದಲಿ +ಮೈಯ್ಯಿಕ್ಕಿದರೆ +ನೃಪ
ವರನ +ನೆಗಹಿದಳ್+ಅನಿಲಸುತ +ಸಿತ
ತುರಗ+ ಮಾದ್ರೀಸುತರು +ಪದಕ್+ಎರಗಿದರು+ ಭೀತಿಯಲಿ

ಅಚ್ಚರಿ:
(೧) ಅರ್ಜುನನನ್ನು ಸಿತತುರಗ ಎಂದು ಕರೆದಿರುವುದು
(೨) ಚರಣ, ಪದ; ಮೆಯ್ಯಿಕ್ಕು, ಎರಗು – ಸಮಾನಾರ್ಥಕ ಪದಗಳು

ಪದ್ಯ ೪೪: ಅರ್ಜುನನು ಕೃಷ್ಣನಲ್ಲಿ ಏನು ಬೇಡಿದನು?

ನೀವು ಮೊದಲಲಿ ಬೆಸಸಿದಿರಿ ಮಾ
ಯಾವಿಗಳ ಮಾಯೆಯಲಿ ಗೆಲುವುದು
ದೈವಕೃತಿಯಿದು ರಾಜಮಂತ್ರದ ಸಾರತರವೆಂದು
ಈ ವಿರೋಧಿಯ ಧರ್ಮಗತಿ ಸಂ
ಭಾವವನು ಕರ್ತವ್ಯಭಾವವ
ನೀವು ಬಲ್ಲಿರಿಯೆಂದನರ್ಜುನದೇವ ವಿನಯದಲಿ (ಗದಾ ಪರ್ವ, ೭ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅರ್ಜುನನು, ಮಾಯಾವಿಗಳನ್ನು ಮಾಯೆಯಿಂದಲೇ ಗೆಲ್ಲಬೇಕೆಮ್ದು ನೀವು ಮೊದಲೇ ಹೇಳಿದ್ದೀರಿ, ಇದೇ ರಾಜ ನೀತಿಯ ಸಾರತರ ಮಾರ್ಗ, ಇದು ದೈವ ಸಮ್ಮತವೆಂದು ಹೇಳಿದ್ದೀರಿ, ವೈರಿಯ ಧರ್ಮದ ಬಲವೇನು? ಈಗ ನಮ್ಮ ಕರ್ತವ್ಯವೇನು? ಎಲ್ಲವನ್ನೂ ನೀವೇ ಬಲ್ಲಿರಿ ಎಂದು ವಿನಯದಿಂದ ಹೇಳಿದನು.

ಅರ್ಥ:
ಮೊದಲು: ಮುಂಚೆ; ಬೆಸಸು: ಹೇಳು; ಮಾಯ: ಗಾರುಡಿ, ಇಂದ್ರಜಾಲ; ಗೆಲುವು: ಜಯ; ದೈವ: ಭಗವಂತ; ಕೃತಿ: ಕಾರ್ಯ; ರಾಜ: ನೃಪ; ಮಂತ್ರ: ವಿಚಾರ; ಸಾರ: ಶಕ್ತಿ, ಸತ್ವ; ವಿರೋಧಿ: ವೈರಿ; ಧರ್ಮ: ಧಾರಣೆ ಮಾದಿದುದು; ಗತಿ: ವೇಗ; ಸಂಭಾವ: ಯೋಗ್ಯವಾದ; ಕರ್ತವ್ಯ: ಕೆಲಸ; ಬಲ್ಲಿರಿ: ತಿಳಿದಿವುರಿವಿ; ವಿನಯ: ಒಳ್ಳೆಯತನ, ಸೌಜನ್ಯ;

ಪದವಿಂಗಡಣೆ:
ನೀವು+ ಮೊದಲಲಿ +ಬೆಸಸಿದಿರಿ +ಮಾ
ಯಾವಿಗಳ+ ಮಾಯೆಯಲಿ +ಗೆಲುವುದು
ದೈವಕೃತಿಯಿದು +ರಾಜಮಂತ್ರದ+ ಸಾರತರವೆಂದು
ಈ +ವಿರೋಧಿಯ +ಧರ್ಮಗತಿ +ಸಂ
ಭಾವವನು +ಕರ್ತವ್ಯಭಾವವ
ನೀವು +ಬಲ್ಲಿರಿ+ಎಂದನ್+ಅರ್ಜುನದೇವ +ವಿನಯದಲಿ

ಅಚ್ಚರಿ:
(೧) ರಾಜನೀತಿ: ಮಾಯಾವಿಗಳ ಮಾಯೆಯಲಿ ಗೆಲುವುದು

ಪದ್ಯ ೮: ದ್ರೊಣನು ಭೀಮನಿಗೆ ಏನು ಹೇಳಿದನು?

ಅನಿಲಸುತ ಫಡ ಮರಳು ಠಕ್ಕಿನ
ವಿನಯವೇ ನಮ್ಮೊಡನೆ ಕೌರವ
ನನುಜರನು ಕೆಡೆಹೊಯ್ದ ಗರ್ವದ ಗಿರಿಯನಿಳಿಯೆನುತ
ಕನಲಿ ಕಿಡಿ ಸುರಿವಂಬ ತೆಗೆದು
ಬ್ಬಿನಲಿ ಕವಿದೆಸುತಿರೆ ವೃಕೋದರ
ನನಿತುಶರವನು ಕಡಿದು ಬಿನ್ನಹ ಮಾಡಿದನು ನಗುತ (ದ್ರೋಣ ಪರ್ವ, ೧೩ ಸಂಧಿ, ೮ ಪದ್ಯ)

ತಾತ್ಪರ್ಯ:
ಭೀಮ, ಛೇ, ಮೋಸದ ವಿನಯವನ್ನು ನಮ್ಮೊಡನೆ ತೋರಿಸುವೆಯಾ? ಕೌರವನ ತಮ್ಮಂದಿರನ್ನು ಕೊಂದ ಗರ್ವದ ಗಿರಿಯನ್ನಿಳಿದು ಮರಳಿ ಹೋಗು ಎನ್ನುತ್ತಾ ದ್ರೋಣನು ಕಿಡಿ ಸುರಿಯುವ ಬಾಣಗಳನ್ನು ಮೇಲೆ ಮೇಲೆ ಬಿಡಲು, ಭೀಮನು ಆ ಬಾಣಗಳನ್ನು ಕಡಿದು ನಗುತ್ತಾ ಬಿನ್ನಹ ಮಾಡಿದನು.

ಅರ್ಥ:
ಅನಿಲಸುತ: ವಾಯುಪುತ್ರ (ಭೀಮ); ಫಡ: ತಿರಸ್ಕಾರದ ಮಾತು; ಮರಳು: ಹಿಂದಿರುಗು; ಠಕ್ಕು: ಮೋಸ; ವಿನಯ: ಒಳ್ಳೆಯತನ, ಸೌಜನ್ಯ; ಅನುಜ: ಮಗ; ಹೊಯ್ದು: ಹೊಡೆ; ಗರ್ವ: ಅಹಂಕಾರ; ಗಿರಿ: ಬೆಟ್ಟ; ಇಳಿ: ಕೆಳಗೆ ನಡೆ; ಕನಲು: ಬೆಂಕಿ, ಉರಿ; ಕಿಡಿ: ಬೆಂಕಿ; ಸುರಿ: ವರ್ಷಿಸು; ಅಂಬು: ಬಾಣ; ತೆಗೆ: ಹೊರತರು; ಉಬ್ಬು: ಹಿಗ್ಗು; ಕವಿದು: ಆವರಿಸು; ವೃಕೋದರ: ಭೀಮ; ಶರ: ಬಾಣ; ಕಡಿ: ಸೀಳು; ಬಿನ್ನಹ: ಕೋರಿಕೆ; ನಗು: ಹರ್ಷ;

ಪದವಿಂಗಡಣೆ:
ಅನಿಲಸುತ +ಫಡ +ಮರಳು +ಠಕ್ಕಿನ
ವಿನಯವೇ +ನಮ್ಮೊಡನೆ +ಕೌರವನ್
ಅನುಜರನು +ಕೆಡೆಹೊಯ್ದ +ಗರ್ವದ +ಗಿರಿಯನ್+ಇಳಿಯೆನುತ
ಕನಲಿ +ಕಿಡಿ+ ಸುರಿವಂಬ+ ತೆಗೆದ್
ಉಬ್ಬಿನಲಿ +ಕವಿದೆಸುತಿರೆ+ ವೃಕೋದರನ್
ಅನಿತು+ಶರವನು+ ಕಡಿದು +ಬಿನ್ನಹ +ಮಾಡಿದನು +ನಗುತ

ಅಚ್ಚರಿ:
(೧) ಅನಿಲಸುತ, ವೃಕೋದರ – ಭೀಮನನ್ನು ಕರೆದ ಪರಿ

ಪದ್ಯ ೭: ಭೀಮನು ದ್ರೋಣರಿಗೆ ಏನೆಂದು ಹೇಳಿದನು?

ತಿರುಗಿನೋಡಿದನಸ್ತ್ರ ಶಿಕ್ಷಾ
ಗುರುವ ಕಂಡನು ಮನದೊಳಾತನ
ಚರಣಕಭಿನಮಿಸಿದನು ನುಡಿದನು ವಿನಯಪರನಾಗಿ
ಗುರುವೆ ಬಿಜಯಂಗೈದ ಹದನನು
ಕರುಣಿಸೈ ಕಾಳೆಗದ ಭಾರಿಯ
ಭರವಸದಲಾನಿದ್ದೆನೆಂದನು ನಗುತ ಕಲಿಭೀಮ (ದ್ರೋಣ ಪರ್ವ, ೧೩ ಸಂಧಿ, ೭ ಪದ್ಯ)

ತಾತ್ಪರ್ಯ:
ಭೀಮನು ತಿರುಗಿ ನೋಡಿ ಅಸ್ತ್ರ ಶಿಕ್ಷಣವನ್ನು ಕೊಟ್ಟ ದ್ರೋಣನನ್ನು ಕಂಡು ಮನಸ್ಸಿನಲ್ಲೇ ನಮಸ್ಕರಿಸಿದನು. ವಿನಯದಿಮ್ದ ನಗುತ್ತಾ, ಗುರುವೇ ನೀವು ಆಗಮಿಸಿದ ಕಾರಣವೇನು? ಕರುಣೆಯಿಂದ ತಿಳಿಸಿರಿ, ನಾನಾದರೋ ಭಯಂಕರವಾದ ಮಹಾಯುದ್ಧದಲ್ಲಿ ಮುಳುಗಿದ್ದೆ ಎಂದು ಹೇಳಿದನು.

ಅರ್ಥ:
ತಿರುಗು: ಸುತ್ತು; ನೋಡು: ವೀಕ್ಷಿಸು; ಅಸ್ತ್ರ: ಶಸ್ತ್ರ; ಶಿಕ್ಷ: ವಿದ್ಯೆ; ಗುರು: ಆಚಾರ್ಯ; ಕಂಡು: ನೋಡು; ಮನ: ಮನಸ್ಸು, ಚಿತ್ತ; ಚರಣ: ಪಾದ; ಅಭಿನಮಿಸು: ಎರಗು, ನಮಸ್ಕರಿಸು; ನುಡಿ: ಮಾತಾಡು; ವಿನಯ: ಸಜ್ಜನಿಕೆ; ಬಿಜಯಂಗೈ; ದಯಮಾಡಿಸು; ಹದ: ಸ್ಥಿತಿ; ಕರುಣೆ: ದಯೆ; ಕಾಳೆಗ: ಯುದ್ಧ; ಭಾರಿ: ದೊಡ್ಡ; ಭರ: ವೇಗ, ಹೊರೆ; ನಗು: ಹರ್ಷ;

ಪದವಿಂಗಡಣೆ:
ತಿರುಗಿ+ನೋಡಿದನ್+ಅಸ್ತ್ರ +ಶಿಕ್ಷಾ
ಗುರುವ +ಕಂಡನು +ಮನದೊಳ್+ಆತನ
ಚರಣಕ್+ಅಭಿನಮಿಸಿದನು +ನುಡಿದನು +ವಿನಯ+ಪರನಾಗಿ
ಗುರುವೆ +ಬಿಜಯಂಗೈದ+ ಹದನನು
ಕರುಣಿಸೈ +ಕಾಳೆಗದ+ ಭಾರಿಯ
ಭರವಸದಲ್+ಆನಿದ್ದೆನ್+ಎಂದನು +ನಗುತ +ಕಲಿ+ಭೀಮ

ಅಚ್ಚರಿ:
(೧) ದ್ರೋಣರಿಗೆ ನಮಿಸಿದ ಪರಿ – ಮನದೊಳಾತನಚರಣಕಭಿನಮಿಸಿದನು

ಪದ್ಯ ೧೬: ದ್ರೋಣರು ತಮ್ಮ ಹಿರಿಮೆಯನ್ನು ಭೀಮನೆದುರು ಹೇಗೆ ಹೇಳಿದರು?

ಫಡ ಫಡೆಲವೋ ಭೀಮ ಬಣಗುಗ
ಳೊಡನೆ ಸರಿಗಂಡೆನ್ನ ಬಗೆಯದೆ
ಕಡುಗುವೈ ಕಾಳೆಗಕೆ ತಪ್ಪೇನಾದಡನುವಾಗು
ಒಡಲನೀವೆನು ವಿನಯದೆಡೆಗವ
ಗಡಿಸಿದರೆ ಕೊಲುವೆನು ರಿಪುವ್ರಜ
ಮೃಡನರಿಯಾ ದ್ರೋಣ ತಾನೆನುತೆಚ್ಚನನಿಲಜನ (ದ್ರೋಣ ಪರ್ವ, ೧೨ ಸಂಧಿ, ೧೬ ಪದ್ಯ)

ತಾತ್ಪರ್ಯ:
ದ್ರೋಣನು ಭೀಮನಿಗುತ್ತರಿಸುತ್ತಾ, ಎಲವೋ ಭೀಮ, ಕೈಲಾಗದ ಕ್ಷುಲ್ಲಕರಿಗೆ ನಾನು ಸಮವೆಂದು ತಿಳಿದು ವಿಚಾರಿಸದೆ ಯುದ್ಧಕ್ಕೆ ಬರುವೆಯಾ? ತಪ್ಪೇನು, ಸಿದ್ಧನಾಗು, ವಿನಯಕ್ಕೆ ನನ್ನ ದೇಹವನ್ನೇ ಕೊಡುತ್ತೇನೆ, ಪ್ರತಿಭಟಿಸಿದರೆ ಕೊಲ್ಲುತ್ತೇನೆ, ಶತ್ರುಗಳಿಗೆ ರುದ್ರನಾದ ದ್ರೋಣ ನಾನು ಎಂದು ಭೀಮನ ಮೇಲೆ ಬಾಣಗಳನ್ನು ಬಿಟ್ಟನು.

ಅರ್ಥ:
ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಬಣಗು: ಅಲ್ಪವ್ಯಕ್ತಿ; ಕಂಡು: ನೋಡು; ಬಗೆ: ತಿಳಿ; ಕಡುಗು: ಶಕ್ತಿಗುಂದು; ಕಾಳೆಗ: ಯುದ್ಧ; ಅನುವು: ರೀತಿ, ಅವಕಾಶ; ಒಡಲು: ದೇಹ; ವಿನಯ: ಸೌಜನ್ಯ; ಅವಗಡಿಸು: ಕಡೆಗಣಿಸು; ಕೊಲು: ಸಾಯಿಸು; ರಿಪು: ವೈರಿ; ವ್ರಜ: ಗುಂಪು; ಮೃಡ: ಶಿವ; ಅರಿ: ತಿಳಿ; ಎಚ್ಚು: ಬಾಣ ಪ್ರಯೋಗ ಮಾಡು; ಅನಿಲಜ: ವಾಯುಪುತ್ರ (ಭೀಮ);

ಪದವಿಂಗಡಣೆ:
ಫಡ +ಫಡ+ಎಲವೋ +ಭೀಮ +ಬಣಗುಗಳ್
ಒಡನೆ +ಸರಿಕಂಡ್+ಎನ್ನ +ಬಗೆಯದೆ
ಕಡುಗುವೈ +ಕಾಳೆಗಕೆ +ತಪ್ಪೇನ್+ಆದಡ್+ಅನುವಾಗು
ಒಡಲನ್+ಈವೆನು +ವಿನಯದೆಡೆಗ್+ಅವ
ಗಡಿಸಿದರೆ +ಕೊಲುವೆನು +ರಿಪು+ವ್ರಜ
ಮೃಡನರಿಯಾ +ದ್ರೋಣ +ತಾನೆನುತ್+ಎಚ್ಚನ್+ಅನಿಲಜನ

ಅಚ್ಚರಿ:
(೧) ದ್ರೋಣರು ತಮ್ಮನ್ನು ಹೊಗಳಿಕೊಂಡ ಪರಿ – ರಿಪುವ್ರಜ ಮೃಡನರಿಯಾ ದ್ರೋಣ ತಾನ್

ಪದ್ಯ ೭: ಸಾತ್ಯಕಿಯು ದ್ರೋಣರನ್ನು ಏನೆಂದು ವರ್ಣಿಸಿದನು?

ನಿಂದು ಕಾದುವ ಮನವೊ ಮೇಣು ಪು
ರಂದರಾತ್ಮಜನಂತೆ ಭಯದಲಿ
ವಂದಿಸಿಯೆ ಬೀಳ್ಕೊಂಬ ಮನವೋ ಹೇಳು ನಿಶ್ಚಯವ
ಎಂದಡಾಲಿಸಿ ನಗುತ ಸಾತ್ಯಕಿ
ಯೆಂದನವಧರಿಸೈ ಗುರೋರಪಿ
ಯೆಂದು ನೀ ಗುರುವೆಂದು ತಲೆವಾಗಿದನು ವಿನಯದಲಿ (ದ್ರೋಣ ಪರ್ವ, ೧೧ ಸಂಧಿ, ೭ ಪದ್ಯ)

ತಾತ್ಪರ್ಯ:
ನನ್ನೊಡನೆ ನಿಂದು ಕಾದಬೇಕೆಂಬ ಮನಸ್ಸೇ? ಅರ್ಜುನನಂತೆ ಭಯದಿಂದ ನಮಸ್ಕರಿಸಿ ಹೋಗುವ ಮನಸ್ಸೋ? ನಿಶ್ಚಯಮಾಡಿಕೊಂಡು ಹೇಳು ಎಂದು ದ್ರೋಣರು ಹೇಳಲು, ಅದನ್ನು ಕೇಳಿದ ಸಾತ್ಯಕಿಯು ನಕ್ಕು, ಕೇಳುವವನಾಗು, ನೀಣು ಗುರುಗಳಲ್ಲಿ ಗುರುವೇ ಆಗಿರುವೆ ಎಂದು ವಿನಯದಿಂದ ತಲೆ ಬಾಗಿದನು.

ಅರ್ಥ:
ನಿಂದು: ನಿಲ್ಲು; ಕಾದು: ಹೋರಾದು; ಮನ: ಮನಸ್ಸು; ಮೇಣ್: ಅಥವ; ಪುರಂದರ: ಇಂದ್ರ; ಆತ್ಮಜ: ಮಗ; ಭಯ: ಅಂಜಿಕೆ; ವಂದಿಸು: ನಮಸ್ಕರಿಸು; ಬೀಳ್ಕೊಡು: ತೆರಳು; ಮನ: ಮನಸ್ಸು; ಹೇಳು: ತಿಳಿಸು; ನಿಶ್ಚಯ: ನಿರ್ಧಾರ; ಆಲಿಸು: ಕೇಳು ನಗು: ಹರ್ಷ; ಅವಧರಿಸು: ಮನಸ್ಸಿಟ್ಟು ಕೇಳು; ಗುರು: ಆಚಾರ್ಯ; ತಲೆ: ಶಿರ; ಬಾಗು: ಎರಗು; ವಿನಯ: ಒಳ್ಳೆಯತನ, ಸೌಜನ್ಯ;

ಪದವಿಂಗಡಣೆ:
ನಿಂದು +ಕಾದುವ +ಮನವೊ +ಮೇಣು +ಪು
ರಂದರಾತ್ಮಜನಂತೆ +ಭಯದಲಿ
ವಂದಿಸಿಯೆ +ಬೀಳ್ಕೊಂಬ +ಮನವೋ +ಹೇಳು +ನಿಶ್ಚಯವ
ಎಂದಡ್+ಆಲಿಸಿ +ನಗುತ +ಸಾತ್ಯಕಿ
ಎಂದನ್+ ಅವಧರಿಸೈ+ ಗುರೋರಪಿ
ಯೆಂದು +ನೀ +ಗುರುವೆಂದು+ ತಲೆವಾಗಿದನು +ವಿನಯದಲಿ

ಅಚ್ಚರಿ:
(೧) ಅರ್ಜುನನನ್ನು ಕರೆದ ಪರಿ – ಪುರಂದರಾತ್ಮಜ
(೨) ದ್ರೋಣರಿಗೆ ವಂದಿಸಿದ ಪರಿ – ಗುರೋರಪಿ ಯೆಂದು ನೀ ಗುರುವೆಂದು ತಲೆವಾಗಿದನು ವಿನಯದಲಿ

ಪದ್ಯ ೪೮: ಅರ್ಜುನನು ದ್ರೋಣರಲ್ಲಿ ಏನು ಬೇಡಿದನು?

ಇಳುಹಿದನು ಗಾಂಡಿವವನುರು ಬ
ತ್ತಳಿಕೆಯನು ಕಳಚಿದನು ರಥದಿಂ
ದಿಳಿದು ಮೈಯಿಕ್ಕಿದನು ದ್ರೋಣನ ಚರಣಕಮಲದಲಿ
ತಿಳಿಯಲೆಮ್ಮೈವರಿಗೆ ಜೀವನ
ದುಳಿವು ನಿನ್ನದು ನಿನ್ನ ಮಕ್ಕಳ
ಸಲಹು ಮೇಣ್ ಕೊಲ್ಲೆನುತ ನುಡಿದನು ವಿನಯದಲಿ ಪಾರ್ಥ (ದ್ರೋಣ ಪರ್ವ, ೯ ಸಂಧಿ, ೪೮ ಪದ್ಯ)

ತಾತ್ಪರ್ಯ:
ಅರ್ಜುನನು ಆ ಕೂಡಲೇ ಗಾಂಡೀವವನ್ನು ಬತ್ತಳಿಕೆಯನ್ನೂ ಕೆಳಗಿಟ್ಟು ರಥದಿಂದಿಳಿದು ದ್ರೋಣನ ಬಳಿಗೆ ಹೋಗಿ ಅವನ ಪಾದ ಕಮಲಗಳಿಗೆ ನಮಸ್ಕರಿಸಿ, ನಮ್ಮೈವರ ಜೀವವನ್ನು ಉಳಿಸುವವರು ನೀವೇ, ನಾವು ನಿನ್ನ ಮಕ್ಕಳಿದ್ದಂತೆ, ನಿನ್ನ ಮಕ್ಕಳನ್ನು ನೀನು ಉಳಿಸು ಅಥವ ಕೊಲ್ಲು ಎಂದು ಬೇಡಿದನು.

ಅರ್ಥ:
ಇಳುಹು: ಕೆಳಗಿಡು; ಉರು: ಹೆಚ್ಚು; ಬತ್ತಳಿಕೆ: ಬಾಣಗಳನ್ನಿಡುವ ಕೋಶ, ತೂಣೀರ; ಕಳಚು: ತೆಗೆದಿಡು; ರಥ: ಬಂಡಿ; ಇಳಿ: ಕೆಳಕ್ಕೆ ಬಾ; ಮೈಯಿಕ್ಕು: ನಮಸ್ಕರಿಸು; ಚರಣ: ಪಾದ; ಕಮಲ: ತಾವರೆ; ತಿಳಿ: ಅರಿವು; ಜೀವನ: ಪ್ರಾಣ; ಉಳಿವು: ಬದುಕುವಿಕೆ, ಜೀವನ; ಮಕ್ಕಳು: ಪುತ್ರರು; ಸಲಹು: ಕಾಪಾಡು; ಮೇಣ್: ಅಥವ; ಕೊಲ್ಲು: ಸಾಯಿಸು; ನುಡಿ: ಮಾತಾಡು; ವಿನಯ: ಸೌಜನ್ಯ;

ಪದವಿಂಗಡಣೆ:
ಇಳುಹಿದನು +ಗಾಂಡಿವವನ್+ಉರು +ಬ
ತ್ತಳಿಕೆಯನು +ಕಳಚಿದನು +ರಥದಿಂದ್
ಇಳಿದು +ಮೈಯಿಕ್ಕಿದನು +ದ್ರೋಣನ +ಚರಣ+ಕಮಲದಲಿ
ತಿಳಿಯಲ್+ಎಮ್ಮೈವರಿಗೆ+ ಜೀವನದ್
ಉಳಿವು +ನಿನ್ನದು +ನಿನ್ನ +ಮಕ್ಕಳ
ಸಲಹು +ಮೇಣ್ +ಕೊಲ್ಲೆನುತ +ನುಡಿದನು +ವಿನಯದಲಿ +ಪಾರ್ಥ

ಅಚ್ಚರಿ:
(೧) ನಮಸ್ಕರಿಸಿದನು ಎಂದು ಹೇಳಲು – ಮೈಯಿಕ್ಕಿದನು ದ್ರೋಣನ ಚರಣಕಮಲದಲಿ

ಪದ್ಯ ೧೫: ಅಭಿಮನ್ಯು ಯಾವುದರಿಂದ ಮಾತನಾಡಲು ಹೇಳಿದನು?

ವಿನಯವೇಕಿದು ನಿಮ್ಮ ಭುಜಬಲ
ದನುವ ಬಲ್ಲೆನು ನಿಮ್ಮ ಕೈ ಮೈ
ತನದ ಹವಣನು ಕಾಬೆನೆನ್ನೊಳು ಸೆಣಸಿ ಜಯಿಸಿದರೆ
ಧನುವ ಹಿಡಿಯೆನು ಸಾಕು ಡೊಂಬಿನ
ಬಿನುಗು ನುಡಿಯಂತಿರಲಿ ಬಲ್ಲಡೆ
ಮೊನೆಗಣೆಯಲೇ ಮಾತನಾಡೆಂದೆಚ್ಚನಭಿಮನ್ಯು (ದ್ರೋಣ ಪರ್ವ, ೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ಈ ವಿನಯದ ಮಾತೇಕೆ? ನಿಮ್ಮ ಭುಜಬಲದ ಸಾಮರ್ಥ್ಯವು ನನಗೆ ಗೊತ್ತು. ನನ್ನೊಡನೆ ಕಾದಿ ಗೆದ್ದರೆ ನಿಮ್ಮ ಸತ್ವವು ಕಂಡೀತು, ನೀವು ನನ್ನನ್ನು ಗೆದ್ದರೆ ನಾನು ಮತ್ತೆ ಬಿಲ್ಲನ್ನೇ ಹಿಡಿಯುವುದಿಲ್ಲ. ಕೆಲಸಕ್ಕೆ ಬಾರದ ಮಾತು ಸಾಕು, ಗೊತ್ತಿದ್ದರೆ ಬಾಣಗಳಿಂದಲೇ ಮಾತಾಡಿರಿ ಎನ್ನುತ್ತಾ ಅಭಿಮನ್ಯು ಬಾಣಗಳನ್ನು ಬಿಟ್ಟನು.

ಅರ್ಥ:
ವಿನಯ: ಒಳ್ಳೆಯತನ, ಸೌಜನ್ಯ; ಭುಜಬಲ: ಪರಾಕ್ರಮ; ಅನುವು: ಸೊಗಸು; ಬಲ್ಲೆ: ತಿಳಿದಿರುವೆ; ಹವಣ: ಮಿತಿ, ಅಳತೆ; ಕಾಬೆ: ನೋಡು, ತಿಳಿ; ಸೆಣಸು: ಹೋರಾಡು; ಜಯಿಸು: ಗೆಲ್ಲು; ಧನು: ಬಿಲ್ಲು; ಹಿಡಿ: ಗ್ರಹಿಸು; ಸಾಕು: ತಡೆ, ನಿಲ್ಲು; ಡೊಂಬಿ: ಮೋಸ, ವಂಚನೆ, ಕಾಳಗ; ಬಿನುಗು: ಅಲ್ಪವಾದ; ನುಡಿ: ಮಾತು; ಬಲ್ಲೆ: ತಿಳಿ; ಮೊನೆ: ತುದಿ, ಕೊನೆ; ಕಣೆ: ಬಾಣ; ಮಾತು: ವಾಣಿ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ವಿನಯವೇಕಿದು +ನಿಮ್ಮ +ಭುಜಬಲದ್
ಅನುವ +ಬಲ್ಲೆನು +ನಿಮ್ಮ +ಕೈ +ಮೈ
ತನದ +ಹವಣನು +ಕಾಬೆನ್+ಎನ್ನೊಳು +ಸೆಣಸಿ +ಜಯಿಸಿದರೆ
ಧನುವ +ಹಿಡಿಯೆನು +ಸಾಕು +ಡೊಂಬಿನ
ಬಿನುಗು +ನುಡಿಯಂತಿರಲಿ +ಬಲ್ಲಡೆ
ಮೊನೆ+ಕಣೆಯಲೇ +ಮಾತನಾಡೆಂದ್+ಎಚ್ಚನ್+ಅಭಿಮನ್ಯು

ಅಚ್ಚರಿ:
(೧) ಅಭಿಮನ್ಯುವಿನ ಪ್ರಮಾಣ – ಎನ್ನೊಳು ಸೆಣಸಿ ಜಯಿಸಿದರೆ ಧನುವ ಹಿಡಿಯೆನು ಸಾಕು ಡೊಂಬಿನ
ಬಿನುಗು ನುಡಿಯಂತಿರಲಿ

ಪದ್ಯ ೧೫: ಭೀಷ್ಮನು ಕೃಷ್ಣನನ್ನು ಹೇಗೆ ಬರೆಮಾಡಿಕೊಂಡನು?

ಬಂದನೇ ಧರ್ಮಜನು ಮುರರಿಪು
ತಂದನೇ ಕೌರವರನಕಟಾ
ಕೊಂದನೇ ಶಿವಶಿವಯೆನುತ ಮೌನದಲಿ ಮುಳುಗಿರ್ದು
ಮಂದಿಯನು ಹೊರಗಿರಿಸಿ ಬರಹೇ
ಳೆಂದರಾಗಲೆ ಕೃಷ್ಣ ಕೊಂತೀ
ನಂದನರು ಬರಲಿದಿರುವಂದನು ಭೀಷ್ಮ ವಿನಯದಲಿ (ಭೀಷ್ಮ ಪರ್ವ, ೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೀಷ್ಮನು ಕಾವಲುಗಾರರಿಂದ ಈ ಸುದ್ದಿಯನ್ನು ಕೇಳಿ ತನ್ನ ಮನಸ್ಸಿನಲ್ಲಿ, ಧರ್ಮಜನು ಬಂದನೇ? ಶ್ರೀಕೃಷ್ಣನು ಪಾಂಡವರನ್ನು ಕರೆ ತಂದನೇ? ಕೌರವರನ್ನು ಕೊಂದನೇ! ಶಿವ ಶಿವಾ ಎಂದು ಸ್ವಲ್ಪ ಹೊತ್ತು ಸುಮ್ಮನಿದ್ದು, ಉಳಿದವರೆಲ್ಲರನ್ನು ಹೊರಗಿಟ್ಟು ಶ್ರೀಕೃಷ್ಣ ಮತ್ತು ಪಾಂಡವರನ್ನು ಮಾತ್ರ ಒಳಕ್ಕೆ ಕಳಿಸಿರಿ ಎನಲು, ಅವರು ಒಳಕ್ಕೆ ಹೋಗಲು ವಿನಯದಿಂದ ಶ್ರೀಕೃಷ್ಣನನ್ನು ಎದುರುಗೊಂಡನು.

ಅರ್ಥ:
ಬಂದು: ಆಗಮಿಸು; ಮುರರಿಪು: ಕೃಷ್ಣ; ಅಕಟಾ: ಅಯ್ಯೋ; ಕೊಂದು: ಕೊಲ್ಲು, ಸಾಯಿಸು; ಮೌನ: ಮಾತನಾಡದಿರುವಿಕೆ; ಮುಳುಗು: ಮರೆಯಾಗು, ಒಳಸೇರು; ಮಂದಿ: ಜನರು; ಹೊರಗೆ: ಆಚೆ; ಬರಹೇಳು: ಒಳಗೆ ಕರೆದು; ನಂದನ: ಮಕ್ಕಳು; ಬರಲು: ಆಗಮಿಸಲು; ಇದಿರು: ಎದುರು; ವಿನಯ: ಆದರ, ವಿಶ್ವಾಸ;

ಪದವಿಂಗಡಣೆ:
ಬಂದನೇ +ಧರ್ಮಜನು +ಮುರರಿಪು
ತಂದನೇ +ಕೌರವರನ್+ಅಕಟಾ
ಕೊಂದನೇ +ಶಿವಶಿವಯೆನುತ +ಮೌನದಲಿ +ಮುಳುಗಿರ್ದು
ಮಂದಿಯನು +ಹೊರಗಿರಿಸಿ+ ಬರಹೇ
ಳೆಂದರ್+ಆಗಲೆ+ ಕೃಷ್ಣ +ಕೊಂತೀ
ನಂದನರು+ ಬರಲ್+ಇದಿರುವಂದನು +ಭೀಷ್ಮ +ವಿನಯದಲಿ

ಅಚ್ಚರಿ:
(೧) ಬಂದನೇ, ತಂದನೇ, ಕೊಂದನೇ – ಪ್ರಾಸ ಪದಗಳು
(೨) ಮ ಕಾರದ ತ್ರಿವಳಿ ಪದ – ಮೌನದಲಿ ಮುಳುಗಿರ್ದು ಮಂದಿಯನು