ಪದ್ಯ ೬೭: ವಸುದೇವನು ಪಾಂಡುವಿಗೆ ಏನನ್ನು ಕಳುಹಿಸಿದನು?

ಕರಿತುರಗ ನಿಕರವನು ಕಲಭೃ
ತ್ಯರ ವಿಲಾಸಿನಿಯರನು ರತ್ನಾ
ಭರಣ ವಸನ ಹಿರಣ್ಯ ಗೋಮಹಿಷಾದಿ ವಸ್ತುಗಳ
ತರಿಸಿದನು ಕಶ್ಯಪನು ಯದು ರಾ
ಯರ ಪುರೋಹಿತನಲ್ಲಿಗಾತನ
ಪರುಠವಿಸಿ ಕಳುಹಿದನು ಪಾಂಡುನೃಪಗೆ ವಸುದೇವ (ಆದಿ ಪರ್ವ, ೪ ಸಂಧಿ, ೬೭ ಪದ್ಯ)

ತಾತ್ಪರ್ಯ:
ವಸುದೇವನು ತನ್ನ ತಂಗಿಗೆ ಮಕ್ಕಳಾದುದನ್ನು ಕೇಳಿ, ಆನೆಗಳು, ಕುದುರೆಗಳು, ಭೃತ್ಯರು, ದಾಸಿಯರು, ಉತ್ತಮವಾದ ವಸ್ತ್ರ, ರತ್ನಾಭರಣ, ಚಿನ್ನ, ಗೋವು, ಎಮ್ಮೆ ಮುಂತಾದವುಗಳನ್ನು ತರಿಸಿದನು. ಯದುರಾಯರ ಪುರೋಹಿತರಾದ ಕಶ್ಯಪನುನ್ನು ಬರೆಮಾಡಿ, ಅವರೊಡನೆ ಪಾಂಡುಮಹಾರಾಜನಿಗೆ ಇವೆಲ್ಲವನ್ನು ಉಡುಗೊರೆಯಾಗಿ ಕಳಿಸಿದನು.

ಅರ್ಥ:
ಕರಿ: ಆನೆ; ತುರಗ: ಅಶ್ವ, ಕುದುರೆ; ನಿಕರ: ಗುಂಪು; ಭೃತ್ಯ: ಆಳು, ಸೇವಕ; ವಿಲಾಸಿನಿ: ದಾಸಿ; ರತ್ನ: ಬೆಲೆಬಾಳುವ ಮಣಿ; ಆಭರಣ: ಒಡವೆ; ವಸನ: ಬಟ್ಟೆ; ಹಿರಣ್ಯ: ಚಿನ್ನ; ಗೋ: ಗೋವು; ಮಹಿಷ: ಎಮ್ಮೆ; ಆದಿ: ಮುಂತಾದ; ವಸ್ತು: ಸಾಮಗ್ರಿ; ತರಿಸು: ಬರೆಮಾಡು; ರಾಯ: ರಾಜ; ಪುರೋಹಿತ: ವೇದೋಕ್ತ ವಿಧಿ, ಧಾರ್ಮಿಕ ವ್ರತ, ಶುಭಕಾರ್ಯಗಳನ್ನು ಮಾಡಿಸುವವನು; ಪರುಠವಿಸು: ಸಿದ್ಧಗೊಳಿಸು; ಕಳುಹು: ಬೀಳ್ಕೊಡು; ನೃಪ: ರಾಜ;

ಪದವಿಂಗಡಣೆ:
ಕರಿ+ತುರಗ+ ನಿಕರವನು +ಕಲ+ಭೃ
ತ್ಯರ+ ವಿಲಾಸಿನಿಯರನು +ರತ್ನಾ
ಭರಣ+ ವಸನ+ ಹಿರಣ್ಯ +ಗೋ+ಮಹಿಷಾದಿ +ವಸ್ತುಗಳ
ತರಿಸಿದನು +ಕಶ್ಯಪನು +ಯದು +ರಾ
ಯರ +ಪುರೋಹಿತನ್+ಅಲ್ಲಿಗ್ +ಆತನ
ಪರುಠವಿಸಿ +ಕಳುಹಿದನು +ಪಾಂಡು+ನೃಪಗೆ +ವಸುದೇವ

ಪದ್ಯ ೬: ನಾರಿಯರ ದುಃಖವನ್ನು ಹೇಗೆ ಹೊರಹಾಕಿದರು?

ಹರಿದರಗಲಕೆ ನಾರಿಯರು ಕುರು
ಧರಣಿಯಲಿ ತಂತಮ್ಮ ಪತಿಗಳ
ಕರಿಗಳಲಿ ತುರಗದಲಿ ರಥದಲಿ ಕಂಡರಲ್ಲಲಿ
ಶಿರವ ಮುಂಡಾಡಿದರು ಹೆಣನಲಿ
ಹೊರಳಿದರು ವಿವಿಧ ಪ್ರಳಾಪದ
ಪರಿಠವವನೆಂತರಿದರೋ ವರ್ಣಿಸುವಡರಿದೆಂದ (ಗದಾ ಪರ್ವ, ೧೨ ಸಂಧಿ, ೬ ಪದ್ಯ)

ತಾತ್ಪರ್ಯ:
ಸ್ತ್ರೀಯರು ರಣರಂಗದ ಉದ್ದಗಲಕ್ಕೂ ಹೋಗಿ ತಮ್ಮ ಪತಿಗಳನ್ನು ಆನೆ, ಕುದುರೆ, ರಥಗಳ ಮಧ್ಯೆ ಹುದುಕಿ ಅವರ ತಲೆಗಲನ್ನು ನೇವರಿಸಿ ಅವರ ಹೆಣಗಲ ಮೇಲೆ ಹೊರಳಿ, ನಾನಾ ಪ್ರಕಾರದಿಂದ ದುಃಖವನ್ನು ಹೊರಹಾಕುತ್ತಿದ್ದರು. ಈ ಪ್ರಲಾಪವನ್ನು ಅವರು ಹೇಗೆ ಕಲಿತರೋ ಏನೋ ನಾನು ತಿಳಿಯೆ.

ಅರ್ಥ:
ಹರಿದು: ಚಲಿಸು, ಪ್ರವಹಿಸು; ಅಗಲ: ದೂರ, ವಿಸ್ತಾರ; ನಾರಿ: ಹೆಣ್ಣು; ಧರಣಿ: ಭೂಮಿ; ಪತಿ: ಯಜಮಾನ; ಕರಿ: ಆನೆ; ತುರಗ: ಅಶ್ವ; ರಥ: ಬಂಡಿ; ಕಂಡು: ನೋಡು; ಶಿರ: ತಲೆ; ಮುಂಡಾಡು: ಮುದ್ದಾಡು, ಪ್ರೀತಿಸು; ಹೆಣ: ಜೀವವಿಲ್ಲದ ಶರೀರ; ಹೊರಳು: ಉರುಳಾಡು; ವಿವಿಧ: ಹಲವಾರು; ಪ್ರಳಾಪ: ಕೂಗು, ಆಕ್ರಂದನ; ಪರಿಠವ: ಹಬ್ಬುವಿಕೆ; ಅರಿ: ತಿಳಿ; ವರ್ಣಿಸು: ವಿವರಿಸು;

ಪದವಿಂಗಡಣೆ:
ಹರಿದರ್+ಅಗಲಕೆ +ನಾರಿಯರು +ಕುರು
ಧರಣಿಯಲಿ +ತಂತಮ್ಮ+ ಪತಿಗಳ
ಕರಿಗಳಲಿ +ತುರಗದಲಿ +ರಥದಲಿ +ಕಂಡರ್+ಅಲ್ಲಲಿ
ಶಿರವ +ಮುಂಡಾಡಿದರು +ಹೆಣನಲಿ
ಹೊರಳಿದರು +ವಿವಿಧ +ಪ್ರಳಾಪದ
ಪರಿಠವವನೆಂತ್+ಅರಿದರೋ +ವರ್ಣಿಸುವಡ್+ಅರಿದೆಂದ

ಅಚ್ಚರಿ:
(೧) ದುಃಖವನ್ನು ತೋರ್ಪಡಿಸುವ ಪರಿ – ಶಿರವ ಮುಂಡಾದಿದರು ಹೆಣನಲಿ ಹೊರಳಿದರು ವಿವಿಧ ಪ್ರಳಾಪದ ಪರಿಠವವ
(೨) ಕುರುಕ್ಷೇತ್ರ ಎಂದು ಹೇಳಲು – ಕುರುಧರಣಿ ಪದದ ಬಳಕೆ

ಪದ್ಯ ೫೪: ಕೌರವನನ್ನು ಹುಡುಕಲು ಯಾರು ಎಲ್ಲಿಗೆ ಹೋದರು?

ಭರದಲಿವರು ನೃಪಾಲನಡಗಿದ
ಸರಸಿಗೈತಂದಿಳಿದು ತಡಿಯಲಿ
ತುರಗವನು ಬಿಡಿಸಿದರು ಸಾರಥಿ ಹೊರಿಸಿದನು ಕೊಳನ
ತ್ವರಿತದಲಿ ಶೌಚಾಚಮನ ವಿ
ಸ್ತರಣ ಸಂಧ್ಯಾವಂದನಾದಿಯ
ವಿರಚಿಸಿದರರಸಿದರು ಕೊಳನಲಿ ಕೌರವೇಶ್ವರನ (ಗದಾ ಪರ್ವ, ೮ ಸಂಧಿ, ೫೪ ಪದ್ಯ)

ತಾತ್ಪರ್ಯ:
ಕೃಪ, ಅಶ್ವತ್ಥಾಮ ಮತ್ತು ಕೃತವರ್ಮರು ಬಹುಬೇಗ ದ್ವೈಪಾಯನ ಸರೋವರಕ್ಕೆ ಬಂದು ತಮ್ಮ ಕುದುರೆಗಳಿಂದ ಇಳಿದು, ರಥದ ಕುದುರೆಗಳನ್ನು ಬಿಚ್ಚಿಸಿ ಸಾರಥಿಗಳು ಅವನ್ನು ಕೊಳಕ್ಕಿಸಿದನು. ಮೂವರೂ ಶೌಚ, ಆಚಮನ, ಸಂಧ್ಯಾವಂದನೆಗಳನ್ನು ಮಾಡಿ ಕೌರವನನ್ನು ಹುಡುಕಿದರು.

ಅರ್ಥ:
ಭರ: ವೇಗ; ನೃಪಾಲ: ರಾಜ; ಅಡಗು: ಅವಿತುಕೊಳ್ಳು; ಸರಸಿ: ಸರೋವರ; ಐತಂದು: ಬಂದು ಸೇರಿ; ಇಳಿ: ಕೆಳಕ್ಕೆ ಹೋಗು, ಜಾರು; ತಡಿ: ತಟ, ದಡ; ತುರಗ: ಅಶ್ವ; ಬಿಡಿಸು: ಸಡಲಿಸು, ಬಿಚ್ಚು; ಹೊಗಿಸು: ತೆರಳು; ಕೊಳ: ಸರೋವರ; ತ್ವರಿತ: ಬೇಗ; ಶೌಚ: ನೈರ್ಮಲ್ಯ, ಪರಿಶುದ್ಧತೆ, ಮೂತ್ರ ವಿಸರ್ಜನೆ; ಆಚಮನ: ಅಂಗೈಯಲ್ಲಿ ನೀರನ್ನು ಹಾಕಿಕೊಂಡು ಕುಡಿಯುವುದು; ವಿಸ್ತರಣ: ಹರಡು; ಸಂಧ್ಯಾವಂದನ: ಸಂಧ್ಯಾ ಕಾಲದಲ್ಲಿ ಭಗವಂತನ ಧ್ಯಾನ, ಸಂಧ್ಯಾನ; ವಿರಚಿಸು: ಕಟ್ಟು, ನಿರ್ಮಿಸು; ಅರಸು: ಹುಡುಕು;

ಪದವಿಂಗಡಣೆ:
ಭರದಲ್+ಇವರು +ನೃಪಾಲನ್+ಅಡಗಿದ
ಸರಸಿಗ್+ಐತಂದ್+ಇಳಿದು+ ತಡಿಯಲಿ
ತುರಗವನು +ಬಿಡಿಸಿದರು +ಸಾರಥಿ +ಹೊರಿಸಿದನು +ಕೊಳನ
ತ್ವರಿತದಲಿ +ಶೌಚ+ಆಚಮನ +ವಿ
ಸ್ತರಣ +ಸಂಧ್ಯಾವಂದನಾದಿಯ
ವಿರಚಿಸಿದರ್+ಅರಸಿದರು +ಕೊಳನಲಿ +ಕೌರವೇಶ್ವರನ

ಅಚ್ಚರಿ:
(೧)ಭರ, ತ್ವರಿತ – ಸಮಾನಾರ್ಥಕ ಪದ

ಪದ್ಯ ೪೭: ಕುದುರೆಗಳನ್ನು ಹೇಗೆ ಸಂತೈಸಿದರು?

ಸೂತನಿಳಿದನು ಮುನ್ನ ರಥವನು
ಭೂತಳಾಧಿಪನಿಳಿದನಶ್ವ
ವ್ರಾತವನು ಕಡಿಯಣದ ನೇಣಲಿ ತೆಗೆದು ಬಂಧಿಸಿದ
ವಾತಜನ ಸಾತ್ಯಕಿಯ ಯಮಳರ
ಸೂತರಿಳಿದರು ಮುನ್ನ ತುರಗವ
ನಾತಗಳು ಸಂತೈಸಿದರು ಸಂಗರಪರಿಶ್ರಮವ (ಗದಾ ಪರ್ವ, ೮ ಸಂಧಿ, ೪೭ ಪದ್ಯ)

ತಾತ್ಪರ್ಯ:
ಯುಧಿಷ್ಠಿರನ ಸೂತನು ರಥವನ್ನಿಳಿದು ಕುದುರೆಗಳನ್ನು ಬಿಚ್ಚಿ ಲಾಯದಲ್ಲಿ ಕಟ್ಟಿದನು. ಸೂತನ ಬಳಿಕ ಧರ್ಮಜನೂ ಇಳಿದನು. ಇದರಂತೆ ಭೀಮ, ನಕುಲ ಸಹದೇವರು ಸಾತ್ಯಕಿ ಇವರ ಸೂತರಿಳಿದ ಮೇಲೆ ಅವರೂ ಇಳಿದರು. ಕುದುರೆಗಳಿಗಾದ ಸಂಗ್ರಾಮ ಆಯಾಸಕ್ಕೆ ಉಪಶಮನ ಮಾಡಿ ಸಂತೈಸಿದರು.

ಅರ್ಥ:
ಸೂತ: ಸಾರಥಿ; ಇಳಿ: ಕೆಳಕ್ಕೆ ಬಂದು; ಮುನ್ನ: ಮೊದಲು; ರಥ: ಬಂಡಿ; ಭೂತಳ: ಭೂಮಿ; ಅಧಿಪ: ರಾಜ; ಅಶ್ವ: ಕುದುರೆ; ವ್ರಾತ: ಗುಂಪು; ಕಡಿ: ಹತ್ತಿ ನೂಲಿನ ನೀಳವಾದ ಸುರುಳಿ, ಲಡಿ; ನೇಣು: ಹಗ್ಗ, ಹುರಿ; ತೆಗೆ: ಈಚೆಗೆ ತರು, ಹೊರತರು; ಬಂಧಿಸು: ಜೋಡಿಸು; ವಾತಜ: ವಾಯುಪುತ್ರ (ಭೀಮ); ಯಮಳ: ಅವಳಿ ಮಕ್ಕಳು; ಸಂತೈಸು: ಸಮಾಧಾನ ಪಡಿಸು; ಸಂಗರ: ಯುದ್ಧ; ಪರಿಶ್ರಮ: ಆಯಾಸ;

ಪದವಿಂಗಡಣೆ:
ಸೂತನ್+ಇಳಿದನು +ಮುನ್ನ+ ರಥವನು
ಭೂತಳಾಧಿಪನ್+ಇಳಿದನ್+ಅಶ್ವ
ವ್ರಾತವನು +ಕಡಿಯಣದ +ನೇಣಲಿ +ತೆಗೆದು +ಬಂಧಿಸಿದ
ವಾತಜನ +ಸಾತ್ಯಕಿಯ +ಯಮಳರ
ಸೂತರ್+ಇಳಿದರು +ಮುನ್ನ +ತುರಗವ
ನಾತಗಳು+ ಸಂತೈಸಿದರು +ಸಂಗರ+ಪರಿಶ್ರಮವ

ಅಚ್ಚರಿ:
(೧) ಅಶ್ವ, ತುರಗ – ಸಮಾನಾರ್ಥಕ ಪದ
(೨) ಭೀಮನನ್ನು ವಾತಜ ಎಂದು ಕರೆದಿರುವುದು
(೩) ವಾತ, ವ್ರಾತ – ಪದಗಳ ಬಳಕೆ

ಪದ್ಯ ೪೩: ಶ್ರೀಕೃಷ್ಣನು ಪಾಂಡವ ಸೇನೆಗೆ ಯಾವ ಅಪ್ಪಣೆಯನ್ನು ನೀಡಿದನು?

ಗರುವ ಸುಭಟರು ಘಾಸಿಯಾದಿರಿ
ತುರಗ ಗಜ ಬಳಲಿದವು ಸೂರ್ಯನ
ತುರಗ ಬಿಡುತದೆ ಪಶ್ಚಿಮಾದ್ರಿಯ ತಡಿಯ ತಪ್ಪಲಲಿ
ತ್ವರಿತದಲಿ ಪಾಂಚಾಲ ಸೃಂಜಯ
ಧರಣಿಪರು ನೀವ್ ಹೋಗಿ ನಿದ್ರೆಯೊ
ಳಿರುಳ ನೂಕುವುದೆಂದು ನುಡಿದನು ದೈತ್ಯರಿಪು ನಗುತ (ಗದಾ ಪರ್ವ, ೮ ಸಂಧಿ, ೪೩ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಅಲ್ಲಿ ಸೇರಿದ್ದ ಪಾಂಡವಸೇನೆಗೆ, ವೀರರಾದ ಸುಭಟರು ಯುದ್ಧದಲ್ಲಿ ನೊಂದು ಬಳಲಿರುವಿರಿ. ಸೂರ್ಯನ ಕುದುರೆಗಳು ಪಶ್ಚಿಮ ಬೆಟ್ಟದ ತಪ್ಪಲಲ್ಲಿ ನಿಂತಿವೆ. ಪಾಂಚಾಲರೂ ಸೃಂಜಯರೂ ನಿಮ್ಮ ಸೇನೆಯೊಂದಿಗೆ ಪಾಳೆಯಕ್ಕೆ ಹೋಗಿ ನಿದ್ರಿಸಿರಿ ಎಂದು ಅಪ್ಪಣೆಯನ್ನು ನೀಡಿದನು.

ಅರ್ಥ:
ಗರುವ: ಹಿರಿಯ, ಶ್ರೇಷ್ಠ; ಸುಭಟ: ಪರಾಕ್ರಮಿ; ಘಾಸಿ: ದಣಿವು, ತೊಂದರೆ; ತುರಗ: ಕುದುರೆ; ಗಜ: ಆನೆ; ಬಳಲು: ಆಯಾಸಗೊಳ್ಳು; ಸೂರ್ಯ: ರವಿ; ಬಿಡು: ತೆರಳು; ಅದ್ರಿ: ಬೆಟ್ಟ; ತಡಿ: ದಡ, ತೀರ; ತಪ್ಪಲು: ಬೆಟ್ಟದ ಪಕ್ಕದ ಪ್ರದೇಶ; ತ್ವರಿತ: ಬೇಗ; ಧರಣಿಪ: ರಾಜ; ಹೋಗು: ತೆರಳು; ನಿದ್ರೆ: ಶಯನ; ಇರುಳು: ರಾತ್ರಿ; ನೂಕು: ತಳ್ಳು; ನುಡಿ: ಮಾತಾಡು; ದೈತ್ಯರಿಪು: ರಾಕ್ಷಸರ ವೈರಿ (ಕೃಷ್ಣ); ನಗು: ಹರ್ಷ;

ಪದವಿಂಗಡಣೆ:
ಗರುವ +ಸುಭಟರು +ಘಾಸಿಯಾದಿರಿ
ತುರಗ+ ಗಜ +ಬಳಲಿದವು +ಸೂರ್ಯನ
ತುರಗ +ಬಿಡುತದೆ +ಪಶ್ಚಿಮಾದ್ರಿಯ +ತಡಿಯ +ತಪ್ಪಲಲಿ
ತ್ವರಿತದಲಿ +ಪಾಂಚಾಲ +ಸೃಂಜಯ
ಧರಣಿಪರು +ನೀವ್ +ಹೋಗಿ +ನಿದ್ರೆಯೊಳ್
ಇರುಳ +ನೂಕುವುದೆಂದು+ ನುಡಿದನು +ದೈತ್ಯರಿಪು +ನಗುತ

ಅಚ್ಚರಿ:
(೧) ತುರಗ – ೨, ೩ ಸಾಲಿನ ಮೊದಲ ಪದ
(೨) ಸಂಜೆಯಾಯಿತು ಎಂದು ಹೇಳಲು – ಸೂರ್ಯನ ತುರಗ ಬಿಡುತದೆ ಪಶ್ಚಿಮಾದ್ರಿಯ ತಡಿಯ ತಪ್ಪಲಲಿ

ಪದ್ಯ ೪: ಪಾಂಡವರಲ್ಲಿ ಯಾರು ಸರೋವರವನ್ನು ಮುತ್ತಿದರು?

ವರ ಯುಧಾಮನ್ಯೂತ್ತಮೌಂಜಸ
ರಿರಲು ಪಂಚದ್ರೌಪದೀಸುತ
ರರಸ ನಿಮ್ಮ ಯುಯುತ್ಸು ಸೃಂಜಯ ಸೋಮಕಾದಿಗಳು
ಕರಿಗಳೈನೂರೈದು ಸಾವಿರ
ತುರಗಪಯದಳವೆಂಟು ಸಾವಿರ
ವೆರಡು ಸಾವಿರ ರಥವಿದರಿಮೋಹರದ ಪರಿಶೇಷ (ಗದಾ ಪರ್ವ, ೫ ಸಂಧಿ, ೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಪಾಂಡವ ಸೇನೆಯಲ್ಲಿ ಯುಧಾಮನ್ಯು, ಉತ್ತಮೌಜಸ, ಉಪಪಾಂಡವರು, ಯುಯುತ್ಸು, ಸೃಂಜಯ ಸೋಮಕನೇ ಮೊದಲಾದವರೂ, ಐದುನೂರು ಆನೆಗಳೂ, ಐದುಸಾವಿರ ಕುದುರೆಗಳೂ, ಎರಡು ಸಾವಿರ ರಥಗಳೂ, ಎಂಟು ಸಾವಿರ ಕಾಲಾಳುಗಳೂ, ಉಳಿದವರು, ಎಲ್ಲರೂ ದ್ವೈಪಾಯನ ಸರೋವರವನ್ನು ಮುತ್ತಿದರು.

ಅರ್ಥ:
ವರ: ಶ್ರೇಷ್ಠ; ಸುತ: ಮಗ; ಅರಸ: ರಾಜ; ಆದಿ: ಮುಂತಾದ; ಕರಿ: ಆನೆ; ಸಾವಿರ: ಸಹಸ್ರ; ತುರಗ: ಅಶ್ವ; ರಥ: ಬಂಡಿ; ಮೋಹರ: ಯುದ್ಧ; ಪರಿಶೇಷ: ಉಳಿದಿದ್ದು; ಪಯದಳ: ಕಾಲಾಳುಗಳ ಸೈನ್ಯ;

ಪದವಿಂಗಡಣೆ:
ವರ +ಯುಧಾಮನ್ಯ+ಉತ್ತಮೌಂಜಸರ್
ಇರಲು +ಪಂಚ+ದ್ರೌಪದೀ+ಸುತರ್
ಅರಸ +ನಿಮ್ಮ +ಯುಯುತ್ಸು +ಸೃಂಜಯ +ಸೋಮಕಾದಿಗಳು
ಕರಿಗಳ್+ಐನೂರೈದು+ ಸಾವಿರ
ತುರಗ+ಪಯದಳವೆಂಟು +ಸಾವಿರವ್
ಎರಡು +ಸಾವಿರ +ರಥವಿದರಿ+ಮೋಹರದ +ಪರಿಶೇಷ

ಅಚ್ಚರಿ:
(೧) ಸಾವಿರ – ೩ ಬಾರಿ ಪ್ರಯೋಗ

ಪದ್ಯ ೨೯: ಶಕುನಿ ನಕುಲರ ಯುದ್ಧವು ಹೇಗಿತ್ತು?

ಎಸಲು ಸಹದೇವಾಸ್ತ್ರವನು ಖಂ
ಡಿಸಿ ಶರೌಘದಿನಹಿತವೀರನ
ಮುಸುಕಿದನು ಮೊನೆಗಣೆಗಳೀಡಿರಿದವು ರಥಾಗ್ರದಲಿ
ಕುಸುರಿದರಿದತಿರಥನ ಬಾಣ
ಪ್ರಸರವನು ರಥ ತುರಗವನು ಭಯ
ರಸದೊಳದ್ದಿದನುದ್ದಿದನು ಸಹದೇವ ಸೌಬಲನ (ಗದಾ ಪರ್ವ, ೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ಶಕುನಿಯು ನಕುಲನ ಬಾಣಗಳನ್ನು ಕತ್ತರಿಸಿ ನಕುಲನನ್ನು ಬಾಣಗಳಿಂದ ಮುಚ್ಚಿದನು. ಶಕುನಿಯ ಬಾಣಗಳು ಸಹದೇವನ ರಥದ ಅಗ್ರಭಾಗದಲ್ಲಿ ತುಂಬಿದವು. ಪ್ರತಿಯಾಗಿ ಸಹದೇವನು ಶಕುನಿಯ ಬಾಣಗಳನ್ನು ಕತ್ತರಿಸಿ ಅವನ ರಥದ ಕುದುರೆಗಳನ್ನೂ ಅವನನ್ನೂ ಬಾಣಗಳಿಂದ ಪೀಡಿಸಿದನು.

ಅರ್ಥ:
ಎಸಲು: ಬಾಣ ಪ್ರಯೋಗ ಮಾಡು; ಅಸ್ತ್ರ: ಶಸ್ತ್ರ, ಆಯುಧ; ಖಂಡಿಸು: ಮುರಿ, ಸೀಳು; ಶರ: ಬಾಣ; ಔಘ: ಗುಂಪು; ಅಹಿತ: ವೈರಿ; ಮುಸುಕು: ಹೊದಿಕೆ; ಯೋನಿ; ಮೊನೆ: ತುದಿ, ಕೊನೆ; ಕಣೆ: ಬಾಣ; ಈಡಾಡು: ಚೆಲ್ಲು; ರಥ: ಬಂಡಿ; ಅಗ್ರ: ಮುಂಭಾಗ; ಕುಸುರಿ: ತುಂಡು; ಅತಿರಥ: ಪರಾಕ್ರಮಿ; ಬಾಣ: ಅಂಬು; ಪ್ರಸರ: ವಿಸ್ತಾರ, ಹರಹು; ರಥ: ಬಂಡಿ; ತುರಗ: ಅಶ್ವ; ಭಯ: ಅಂಜಿಕೆ; ಅದ್ದು: ತೋಯು; ಸೌಬಲ: ಶಕುನಿ; ಉದ್ದು: ಒರಸು, ಅಳಿಸು;

ಪದವಿಂಗಡಣೆ:
ಎಸಲು+ ಸಹದೇವ+ಅಸ್ತ್ರವನು +ಖಂ
ಡಿಸಿ +ಶರೌಘದಿನ್+ಅಹಿತ+ವೀರನ
ಮುಸುಕಿದನು +ಮೊನೆ+ಕಣೆಗಳ್+ಈಡಿರಿದವು +ರಥಾಗ್ರದಲಿ
ಕುಸುರಿದರಿದ್+ಅತಿರಥನ +ಬಾಣ
ಪ್ರಸರವನು +ರಥ +ತುರಗವನು +ಭಯ
ರಸದೊಳ್+ಅದ್ದಿದನ್+ಉದ್ದಿದನು +ಸಹದೇವ +ಸೌಬಲನ

ಅಚ್ಚರಿ:
(೧) ವೀರ, ಅತಿರಥ; ಬಾಣ, ಶರ – ಸಮಾನಾರ್ಥಕ ಪದ
(೨) ಅದ್ದಿದನ್, ಉದ್ದಿದನ್ – ಪ್ರಾಸ ಪದಗಳು

ಪದ್ಯ ೩೯: ಯಮನ ನಗರಿಗೆ ಎಷ್ಟು ಮಂದಿ ಹೋದರು?

ಕರಿಘಟೆಗಳೈನೂರು ರಥ ಸಾ
ವಿರದ ಮೂನೂರೆರಡು ಸಾವಿರ
ತುರಗದಳವೆಂಬತ್ತು ಸಾವಿರ ವಿಗಡ ಪಾಯದಳ
ತೆರಳಿತಂತಕಪುರಿಗೆ ಪುನರಪಿ
ತುರಗ ಸಾವಿರ ನೂರು ರಥ ಮದ
ಕರಿಗಳಿನ್ನೂರೆಂಟು ಸಾವಿರಗಣಿತ ಪಾಯದಳ (ಗದಾ ಪರ್ವ, ೧ ಸಂಧಿ, ೩೯ ಪದ್ಯ)

ತಾತ್ಪರ್ಯ:
ಐನೂರು ಆನೆಗಲೂ, ಸಾವಿರದ ಮುನ್ನೂರೆರಡು ರಥಗಳು, ಎಂಬತ್ತು ಸಾವಿರ ಕಾಲಾಳುಗಳು, ಯಮನಗರಿಗೆ ಹೋದರು. ಮತ್ತೆ ಸಾವಿರ ಕುದುರೆಗಳು, ನೂರು ರಥಗಳು ಇನ್ನೂರೆಂಟು ಆನೆಗಳು, ಲೆಕ್ಕವಿಲ್ಲದಷ್ಟು ಕಾಲಾಳುಗಳು ಅಲ್ಲಿಗೇ ಹೋದರು.

ಅರ್ಥ:
ಕರಿಘಟೆ: ಆನೆಗಳ ಗುಂಪು; ರಥ: ಬಂಡಿ; ಸಾವಿರ: ಸಹಸ್ರ; ತುರಗ: ಅಶ್ವ, ಕುದುರೆ; ವಿಗಡ: ಶೌರ್ಯ, ಪರಾಕ್ರಮ; ಪಾಯದಳ: ಕಾಲಾಳು; ತೆರಳು: ಗಮಿಸು; ಅಂತಕಪುರ: ಯಮನ ಊರು, ನರಕ; ಪುನರಪಿ: ಮತ್ತೆ; ಮದ: ಮತ್ತು, ಅಮಲು; ಅಗಣಿತ: ಲೆಕ್ಕವಿಲ್ಲದ; ಪಾಯದಳ: ಕಾಲಾಳು;

ಪದವಿಂಗಡಣೆ:
ಕರಿಘಟೆಗಳ್+ಐನೂರು +ರಥ+ ಸಾ
ವಿರದ +ಮೂನೂರೆರಡು +ಸಾವಿರ
ತುರಗದಳವ್+ಎಂಬತ್ತು +ಸಾವಿರ +ವಿಗಡ +ಪಾಯದಳ
ತೆರಳಿತ್+ಅಂತಕಪುರಿಗೆ +ಪುನರಪಿ
ತುರಗ +ಸಾವಿರ +ನೂರು +ರಥ +ಮದ
ಕರಿಗಳ್+ಇನ್ನೂರೆಂಟು +ಸಾವಿರ್+ಅಗಣಿತ +ಪಾಯದಳ

ಅಚ್ಚರಿ:
(೧) ಕರಿ, ತುರಗ, ಪಾಯದಳ – ೧,೬; ೩,೫ ಸಾಲಿನ ಮೊದಲ ಪದ; ೩, ೬ ಸಾಲಿನ ಕೊನೆ ಪದ

ಪದ್ಯ ೩: ದ್ರೋಣನ ಆಕ್ರಮಣ ಹೇಗಿತ್ತು?

ಬಿಲ್ಲನೊದರಿಸಿ ವೈರಿಭಟರಿಗೆ
ಚೆಲ್ಲಿದನು ಭೀತಿಯನು ಬರಸಿಡಿ
ಲೆಲ್ಲಿ ತುಡುಕುವುದಾರು ಬಲ್ಲರು ದ್ರೋಣನುರವಣೆಯ
ಘಲ್ಲಣೆಯ ಖುರಪುಟದ ತುರಗದ
ಹಲ್ಲಣೆಯ ಹೇಷಿತಕೆ ಹಗೆಯೆದೆ
ಝಲ್ಲೆನಲು ಕಣೆ ಜಾಡಿ ಕವಿದುದು ಕಟಕದಗಲದಲಿ (ದ್ರೋಣ ಪರ್ವ, ೧೮ ಸಂಧಿ, ೩ ಪದ್ಯ)

ತಾತ್ಪರ್ಯ:
ದ್ರೋಣನು ಧನುಷ್ಟಂಕಾರ ಮಾಡಿ, ವೈರಿಗಳ ಮನಸ್ಸಿಗೆ ಭಯವನ್ನುಂಟು ಮಾಡಿದನು. ಬರಸಿಡಿಲು ಎಲ್ಲಿ ಬಡಿಯುತ್ತದೆಯೆಂದಾರು ಹೇಳಬಲ್ಲರೇ? ದ್ರೋಣನು ಎಲ್ಲಿ ಆಕ್ರಮಣ ಮಾಡುವನೋ ಎನ್ನುವುದೂ ಹಾಗೆಯೇ, ದ್ರೋಣನ ರಥದ ಕುದುರೆಗಳ ಖುರಪುಟದ ಸದ್ದು, ಕುದುರೆಗಳ ಹೇಷಾರವಗಳಿಂದ ಶತ್ರುಗಳ ಎದೆ ಝಲ್ಲೆಂದಿತು. ದ್ರೋಣನ ಬಾಣಗಳು ಪಾಂಡವರ ಸೈನ್ಯದಗಲಕ್ಕೂ ಕಾಣಿಸಿದವು.

ಅರ್ಥ:
ಬಿಲ್ಲು: ಚಾಪ; ಒದರು: ಕೊಡಹು; ವೈರಿ: ಶತ್ರು; ಭಟ: ಸೈನಿಕ; ಚೆಲ್ಲು: ಹರಡು; ಭೀತಿ: ಭಯ; ಬರಸಿಡಿಲು: ಅನಿರೀಕ್ಷಿತವಾದ ಆಘಾತ; ತುಡುಕು: ಹೋರಾಡು, ಸೆಣಸು; ಬಲ್ಲರು: ತಿಳಿದವ; ಉರವಣೆ: ಆತುರ, ಅವಸರ; ಘಲ್ಲಣೆ: ಘಲ್ ಎಂಬ ಶಬ್ದ; ಖುರಪುಟ: ಗೊರಸು; ತುರಗ: ಅಶ್ವ; ಹಲ್ಲಣ: ಜೀನು, ತಡಿ, ಕಾರ್ಯ; ಹೇಷಿತ: ಕುದುರೆಯ ಕೂಗು, ಹೇಷಾರವ; ಹಗೆ: ವೈರಿ; ಎದೆ: ಹೃದಯ; ಝಲ್ಲ್: ಶಬ್ದವನ್ನು ವಿವರಿಸುವ ಪದ; ಕಣೆ: ಬಾಣ; ಜಾಡು: ನಡೆದು; ಕವಿ: ಆವರಿಸು; ಕಟಕ: ಸೈನ್ಯ; ಅಗಲ: ವಿಸ್ತಾರ;

ಪದವಿಂಗಡಣೆ:
ಬಿಲ್ಲನ್+ಒದರಿಸಿ +ವೈರಿ+ಭಟರಿಗೆ
ಚೆಲ್ಲಿದನು +ಭೀತಿಯನು +ಬರಸಿಡಿಲ್
ಎಲ್ಲಿ +ತುಡುಕುವುದ್+ಆರು +ಬಲ್ಲರು +ದ್ರೋಣನ್+ಉರವಣೆಯ
ಘಲ್ಲಣೆಯ +ಖುರಪುಟದ +ತುರಗದ
ಹಲ್ಲಣೆಯ +ಹೇಷಿತಕೆ +ಹಗೆ+ಎದೆ
ಝಲ್ಲೆನಲು+ ಕಣೆ +ಜಾಡಿ +ಕವಿದುದು +ಕಟಕದ್+ಅಗಲದಲಿ

ಅಚ್ಚರಿ:
(೧) ಭಯವನ್ನು ಹುಟ್ಟಿಸುವ ಪರಿ – ಬಿಲ್ಲನೊದರಿಸಿ ವೈರಿಭಟರಿಗೆ ಚೆಲ್ಲಿದನು ಭೀತಿಯನು

ಪದ್ಯ ೫೪: ಕರ್ಣನು ಹೇಗೆ ಭೀಮನ ರಥವನ್ನು ಕಡಿದನು?

ಆದಡೆಲವೊ ದುರಾತ್ಮ ಮಾರುತಿ
ವಾದದಲಿ ಫಲವೇನು ಬಲ್ಲರೆ
ಕಾದುಕೊಳ್ಳಾ ಸಾಕು ಕಡುಸಾಹಸಿಕ ಗಡ ನೀನು
ಹೋದೆ ಹೋಗಿನ್ನೆನುತ ಕಣಿಹದಿ
ನೈದರಲಿ ಕೆಡಹಿದನು ತುರಗವ
ನೈದುಬಾಣದಲೆಚ್ಚು ಕಡಿದೀಡಾಡಿದನು ರಥವ (ದ್ರೋಣ ಪರ್ವ, ೧೩ ಸಂಧಿ, ೫೪ ಪದ್ಯ)

ತಾತ್ಪರ್ಯ:
ಕರ್ಣನು ಉತ್ತರಿಸುತ್ತಾ, ಹಾಗಾದರೆ ಎಲವೋ, ದುರಾತ್ಮ ನಿನ್ನೊಡನೆ ವಾದ ಮಾಡಿ ಫಲವೇನು ನಿನಗೆ ಅದು ಗೊತ್ತಿದ್ದರೆ ನಿನ್ನನ್ನು ಕಾಪಾಡಿಕೋ, ನೀನು ಅತಿ ಸಾಹಸಿಯಲ್ಲವೇ? ನೀನೂ ಹೋದೆ ಎಂದು ತಿಳಿದುಕೋ, ಇದೋ ಹೋಗು, ಎಂದು ಹದಿನೈದು ಬಾಣಗಳಿಂದ ಭೀಮನ ರಥವನ್ನು ಕುದುರೆಗಳನ್ನು ಕಡಿದು ಹಾಕಿದನು.

ಅರ್ಥ:
ದುರಾತ್ಮ: ದುಷ್ಟ; ಮಾರುತಿ: ವಾಯುಪುತ್ರ; ವಾದ: ಮಾತು, ಸಂಭಾಷಣೆ; ಫಲ: ಪ್ರಯೋಜನ; ಬಲ್ಲ: ತಿಳಿ; ಕಾದು: ಹೋರಾಟ, ಯುದ್ಧ; ಸಾಕು: ನಿಲ್ಲು; ಕಡು: ಬಹಳ; ಸಾಹಸಿ: ಪರಾಕ್ರಮಿ; ಗಡ: ಅಲ್ಲವೆ; ಹೋಗು: ತೆರಳು; ಕಣಿ: ನೋಟ; ಕೆಡಹು: ತಳ್ಳು; ತುರಗ: ಅಶ್ವ; ಬಾಣ: ಸರಳು; ಎಚ್ಚು: ಬಾಣ ಪ್ರಯೋಗ ಮಾಡು; ಕಡಿ: ಸೀಳು; ಈಡಾಡು: ಒಗೆ, ಚೆಲ್ಲು; ರಥ: ಬಂಡಿ;

ಪದವಿಂಗಡಣೆ:
ಆದಡ್+ಎಲವೊ +ದುರಾತ್ಮ +ಮಾರುತಿ
ವಾದದಲಿ +ಫಲವೇನು +ಬಲ್ಲರೆ
ಕಾದುಕೊಳ್ಳಾ +ಸಾಕು +ಕಡು+ಸಾಹಸಿಕ +ಗಡ +ನೀನು
ಹೋದೆ +ಹೋಗಿನ್ನೆನುತ +ಕಣಿಹದಿನ್
ಐದರಲಿ +ಕೆಡಹಿದನು +ತುರಗವನ್
ಐದು+ಬಾಣದಲ್+ಎಚ್ಚು +ಕಡಿದ್+ಈಡಾಡಿದನು +ರಥವ

ಅಚ್ಚರಿ:
(೧) ಭೀಮನನ್ನು ಬಯ್ಯುವ ಪರಿ – ಎಲವೊ ದುರಾತ್ಮ ಮಾರುತಿ ವಾದದಲಿ ಫಲವೇನು