ಪದ್ಯ ೧೬: ವೈರಿಪಡೆಯವರು ಹೇಗೆ ಹಿಂದಿರುಗಿದರು?

ಮರಳಿ ವಾಘೆಯ ಕೊಂಡು ರಾವ್ತರು
ತಿರುಗಿದರು ಹಮ್ಮುಗೆಯ ನೇಣ್ಗಳ
ಹರಿದು ಹಕ್ಕರಿಕೆಗಳ ಬಿಸುಟರು ಹಾಯ್ಕಿ ಖಂಡೆಯವ
ಬಿರುದ ಸಂಭಾಳಿಸುವ ಭಟ್ಟರ
ನಿರಿದರಾರೋಹಕರು ಕರಿಗಳ
ತಿರುಹಿ ಗುಳ ರೆಂಚೆಗಳ ಕೊಯ್ದೀಡಾಡಿದರು ನೆಲಕೆ (ಗದಾ ಪರ್ವ, ೧ ಸಂಧಿ, ೧೬ ಪದ್ಯ)

ತಾತ್ಪರ್ಯ:
ಕುದುರೆಗಳ ಮೇಲಿದ್ದ ರಾವುತರು ಹಿಂದಕ್ಕೆ ಹೋದರು. ಹಗ್ಗಗಳನ್ನು ಕತ್ತರಿಸಿ ಕುದುರೆಯ ಕವಚಗಳನ್ನು ಕತ್ತಿಯೀಮ್ದ ಹರಿದು ಹಾಕಿದರು. ಜೋದರು ತಮ್ಮ ಬಿರುದನ್ನು ಹೊಗಳುವ ವಂದಿಗಳನ್ನಿರಿದರು. ಆನೆಗಳನ್ನು ಹಿಂದಕ್ಕೆ ತಿರುಗಿಸಿ ಅದಕ್ಕೆ ಹೊದ್ದಿಸಿದ ಗುಳ ರೆಂಚೆಗಳನ್ನು ಕೊಯ್ದೆಸೆದರು.

ಅರ್ಥ:
ಮರಳು: ಮತ್ತೆ, ಹಿಂದಿರುಗು; ವಾಘೆ: ಲಗಾಮು; ಕೊಂಡು: ಪಡೆದು; ರಾವುತ: ಕುದುರೆ ಸವಾರ, ಅಶ್ವಾರೋಹಿ; ತಿರುಗು: ಸುತ್ತು; ಹಮ್ಮುಗೆ: ಹಗ್ಗ, ಪಾಶ; ನೇಣು: ಹಗ್ಗ, ಹುರಿ; ಹರಿ: ಸೀಳು; ಹಕ್ಕರಿಕೆ: ದಂಶನ, ಆನೆ ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ; ಬಿಸುಟು: ಹೊರಹಾಕು; ಹಾಯ್ಕು: ಬೀಸು, ಕೆಡೆಯಿಸು; ಖಂಡೆಯ: ಕತ್ತಿ, ಖಡ್ಗ; ಬಿರುದು: ಗೌರವ ಸೂಚಕ ಹೆಸರು; ಸಂಭಾಳಿಸು: ಸರಿದೂಗಿಸು; ಭಟ್ಟ: ಸೈನಿಕ; ಇರಿ: ಸೀಳು; ಆರೋಹಕ: ಮೇಲೇರುವವ; ಕರಿ: ಆನೆ; ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ರೆಂಚೆ: ಆನೆ, ಕುದುರೆಗಳ ಪಕ್ಕರಕ್ಕೆ; ಕೊಯ್ದು: ಸೀಳು; ಈಡಾಡು: ಹರಡು; ನೆಲ: ಭೂಮಿ;

ಪದವಿಂಗಡಣೆ:
ಮರಳಿ +ವಾಘೆಯ +ಕೊಂಡು +ರಾವ್ತರು
ತಿರುಗಿದರು +ಹಮ್ಮುಗೆಯ +ನೇಣ್ಗಳ
ಹರಿದು +ಹಕ್ಕರಿಕೆಗಳ +ಬಿಸುಟರು +ಹಾಯ್ಕಿ +ಖಂಡೆಯವ
ಬಿರುದ +ಸಂಭಾಳಿಸುವ +ಭಟ್ಟರನ್
ಇರಿದರ್+ಆರೋಹಕರು +ಕರಿಗಳ
ತಿರುಹಿ +ಗುಳ +ರೆಂಚೆಗಳ +ಕೊಯ್ದ್+ಈಡಾಡಿದರು +ನೆಲಕೆ

ಅಚ್ಚರಿ:
(೧) ಪರಾಕ್ರಮಿ ಎಂದು ಹೇಳುವ ಪರಿ – ಬಿರುದ ಸಂಭಾಳಿಸುವ ಭಟ್ಟ

ಪದ್ಯ ೪೨: ಕೃಷ್ಣನು ಭೀಮನಿಗೆ ಏನು ಮಾಡಲು ಹೇಳಿದನು?

ಇವರೊಳುಂಟೇ ಕೈದುವೊತ್ತವ
ರವರನರಸುವೆನೆನುತ ಬರಲಾ
ಪವನಸುತನನು ಥಟ್ಟಿಸಿದನಾ ದನುಜರಿಪು ಮುಳಿದು
ಅವನಿಗಿಳಿದೀಡಾಡಿ ಕಳೆ ಕೈ
ದುವನು ತಾ ಮೊದಲಾಗಿ ನಿಂದಂ
ದವನು ನೋಡೆನಲನಿಲಸುತ ನಸುನಗುತಲಿಂತೆಂದ (ದ್ರೋಣ ಪರ್ವ, ೧೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ಎದುರಿನಲ್ಲಿ ಎಲ್ಲರೂ ಶಸ್ತ್ರವನ್ನು ತ್ಯಜಿಸಿರುವುದನ್ನು ಕಂಡ ನಾರಾಯಣಾಸ್ತ್ರವು, ಶಸ್ತ್ರವನ್ನು ಹಿಡಿದವರನ್ನು ಹುಡುಕುತ್ತಾ ಬರುತ್ತಿತ್ತು. ಆಗ ಕೃಷ್ಣನು ಭೀಮನಿಗೆ ಕೋಪದಿಂದ, ತನ್ನ ಕೈಯಲ್ಲಿರುವ ಆಯುಧವನ್ನು ಭೂಮಿಗೆ ಎಸೆದು ನನ್ನನ್ನೇ ನೋಡೆಂದು ಹೇಳಲು ಭೀಮನು ನಗುತ್ತಾ ಹೀಗೆ ಉತ್ತರಿಸಿದನು.

ಅರ್ಥ:
ಕೈದು: ಶಸ್ತ್ರ; ಒತ್ತ: ಹಿಡಿದ; ಅಸರು: ಹುಡುಕು; ಬರಲು: ಆಗಮಿಸು; ಪವನಸುತ: ಭೀಮ; ಸುತ: ಮಗ; ಥಟ್ಟು: ಪಕ್ಕ, ಕಡೆ, ಗುಂಪು; ದನುಜರಿಪು: ಕೃಷ್ಣ; ಮುಳಿ: ಸಿಟ್ಟು, ಕೋಪ; ಅವನಿ: ಭೂಮಿ; ಈಡಾಡು: ಕಿತ್ತು, ಒಗೆ, ಚೆಲ್ಲು; ಕಳೆ: ಬೀಡು, ತೊರೆ; ಕೈದು: ಆಯುಧ; ಮೊದಲು: ಮುಂಚೆ; ನಿಂದು: ನಿಲ್ಲು; ನೋಡು: ವೀಕ್ಷಿಸು; ಅನಿಲಸುತ: ಭೀಮ; ನಸುನಗು: ಹಸನ್ಮುಖ;

ಪದವಿಂಗಡಣೆ:
ಇವರೊಳ್+ಉಂಟೇ +ಕೈದು+ ವೊತ್ತವರ್
ಅವರನ್+ಅರಸುವೆನ್+ಎನುತ +ಬರಲ್+ಆ
ಪವನಸುತನನು+ ಥಟ್ಟಿಸಿದನಾ +ದನುಜರಿಪು+ ಮುಳಿದು
ಅವನಿಗ್+ಇಳಿದ್+ಈಡಾಡಿ +ಕಳೆ +ಕೈ
ದುವನು +ತಾ +ಮೊದಲಾಗಿ +ನಿಂದಂದ್
ಅವನು+ ನೋಡೆನಲ್+ಅನಿಲಸುತ +ನಸುನಗುತಲ್+ಇಂತೆಂದ

ಅಚ್ಚರಿ:
(೧) ಪವನಸುತ, ಅನಿಲಸುತ – ಭೀಮನನ್ನು ಕರೆದ ಪರಿ

ಪದ್ಯ ೩೬: ಪಾಂಡವ ಸೈನ್ಯದಲ್ಲಾದ ತೊಂದರೆ ಹೇಗಿತ್ತು?

ಝಳಕೆ ಘೀಳಿಟ್ಟೊರಲಿದವು ಕರಿ
ಕುಳ ತುರಂಗದ ಥಟ್ಟು ಖುರದಲಿ
ನೆಲನ ಹೊಯ್ದವ್ವಳಿಸಿದವು ರಾವುತರನೀಡಾಡಿ
ಬಲು ರಥವನಸಬಡಿದು ಸೂತನ
ನಿಳುಹಿ ಹಯವೋಡಿದವು ಮು
ಮ್ಮುಳಿಸಿ ತನಿಗುದಿಗುದಿದು ಕೋಟಲೆಗೊಂಡುದರಿಸೇನೆ (ದ್ರೋಣ ಪರ್ವ, ೧೯ ಸಂಧಿ, ೩೬ ಪದ್ಯ)

ತಾತ್ಪರ್ಯ:
ನಾರಾಯಣಾಸ್ತ್ರದ ಬೆಂಕಿಯ ತಾಪಕ್ಕೆ ಆನೆಗಳು ಜೋರಾಗಿ ಕಿರುಚಿದವು. ಗೊರಸುಗಳಿಂದ ನೆಲವನಪ್ಪಳಿಸಿ, ರಾವುತರನ್ನು ಕೆಳಕ್ಕೆಸೆದು ಕುದುರೆಗಳು ಆರ್ಭಟಿಸಿದವು. ರಥವು ನೆಲಕ್ಕೆ ಬೀಳುವಂತೆ ಮಾಡಿ, ಸಾರಥಿಯನ್ನು ಲೆಕ್ಕಿಸದೆ ರಥಕ್ಕೆ ಕಟ್ಟಿದ ಕುದುರೆಗಳು ಓಡಿದವು. ಪಾಂಡವ ಸೈನ್ಯ ಕುದಿಕುದಿದು ತೊಂದರೆಯನ್ನು ಅನುಭವಿಸಿದವು.

ಅರ್ಥ:
ಝಳ: ತಾಪ; ಘೀಳಿಡು: ಕಿರುಚು; ಒರಲು: ಕೂಗು; ಕರಿ: ಆನೆ; ಕುಳ: ಗುಂಪು; ತುರಂಗ: ಕುದುರೆ; ಥಟ್ಟು: ಗುಂಪು; ಖುರ: ಕುದುರೆ ದನಕರುಗಳ ಕಾಲಿನ ಗೊರಸು; ನೆಲ: ಭೂಮಿ; ಹೊಯ್ದು: ಹೊಡೆ; ಅವ್ವಳಿಸು: ಆರ್ಭಟಿಸು; ರಾವುತ: ಕುದುರೆ ಸವಾರ; ಈಡಾಡು: ಒಗೆ, ಚೆಲ್ಲು; ಬಲು: ಬಹಳ; ರಥ: ಬಂಡಿ; ಬಡಿ: ಹೊಡೆ; ಅಸಬಡಿ: ಸದೆಬಡಿ; ಸೂತ: ಸಾರಥಿ; ಇಳುಹಿ: ಕೆಳಗಿಳಿಸು; ಹಯ: ಕುದುರೆ; ಓಡು: ಧಾವಿಸು; ಮುಮ್ಮುಳಿಸು: ನಾಶವಾಗು; ತನಿ: ಹೆಚ್ಚಾಗು; ಕುದಿ: ಮರಳು; ಕೋಟಲೆ: ತೊಂದರೆ; ಅರಿ: ವೈರಿ; ಸೇನೆ: ಸೈನ್ಯ;

ಪದವಿಂಗಡಣೆ:
ಝಳಕೆ +ಘೀಳಿಟ್ಟ್+ಒರಲಿದವು +ಕರಿ
ಕುಳ +ತುರಂಗದ +ಥಟ್ಟು +ಖುರದಲಿ
ನೆಲನ +ಹೊಯ್ದ್+ಅವ್ವಳಿಸಿದವು +ರಾವುತರನ್+ಈಡಾಡಿ
ಬಲು +ರಥವನ್+ಅಸಬಡಿದು +ಸೂತನನ್
ಇಳುಹಿ +ಹಯವ್+ಓಡಿದವು +ಮು
ಮ್ಮುಳಿಸಿ +ತನಿ+ಕುದಿಕುದಿದು +ಕೋಟಲೆಗೊಂಡುದ್+ಅರಿಸೇನೆ

ಅಚ್ಚರಿ:
(೧) ತುರಂಗ, ಹಯ; ಕುಳ, ಥಟ್ಟು – ಸಮಾನಾರ್ಥಕ ಪದ
(೨) ಘೀಳಿಡು, ಅವ್ವಳಿಸು, ಒರಲು – ಸಾಮ್ಯಾರ್ಥ ಪದ

ಪದ್ಯ ೫೪: ಕರ್ಣನು ಹೇಗೆ ಭೀಮನ ರಥವನ್ನು ಕಡಿದನು?

ಆದಡೆಲವೊ ದುರಾತ್ಮ ಮಾರುತಿ
ವಾದದಲಿ ಫಲವೇನು ಬಲ್ಲರೆ
ಕಾದುಕೊಳ್ಳಾ ಸಾಕು ಕಡುಸಾಹಸಿಕ ಗಡ ನೀನು
ಹೋದೆ ಹೋಗಿನ್ನೆನುತ ಕಣಿಹದಿ
ನೈದರಲಿ ಕೆಡಹಿದನು ತುರಗವ
ನೈದುಬಾಣದಲೆಚ್ಚು ಕಡಿದೀಡಾಡಿದನು ರಥವ (ದ್ರೋಣ ಪರ್ವ, ೧೩ ಸಂಧಿ, ೫೪ ಪದ್ಯ)

ತಾತ್ಪರ್ಯ:
ಕರ್ಣನು ಉತ್ತರಿಸುತ್ತಾ, ಹಾಗಾದರೆ ಎಲವೋ, ದುರಾತ್ಮ ನಿನ್ನೊಡನೆ ವಾದ ಮಾಡಿ ಫಲವೇನು ನಿನಗೆ ಅದು ಗೊತ್ತಿದ್ದರೆ ನಿನ್ನನ್ನು ಕಾಪಾಡಿಕೋ, ನೀನು ಅತಿ ಸಾಹಸಿಯಲ್ಲವೇ? ನೀನೂ ಹೋದೆ ಎಂದು ತಿಳಿದುಕೋ, ಇದೋ ಹೋಗು, ಎಂದು ಹದಿನೈದು ಬಾಣಗಳಿಂದ ಭೀಮನ ರಥವನ್ನು ಕುದುರೆಗಳನ್ನು ಕಡಿದು ಹಾಕಿದನು.

ಅರ್ಥ:
ದುರಾತ್ಮ: ದುಷ್ಟ; ಮಾರುತಿ: ವಾಯುಪುತ್ರ; ವಾದ: ಮಾತು, ಸಂಭಾಷಣೆ; ಫಲ: ಪ್ರಯೋಜನ; ಬಲ್ಲ: ತಿಳಿ; ಕಾದು: ಹೋರಾಟ, ಯುದ್ಧ; ಸಾಕು: ನಿಲ್ಲು; ಕಡು: ಬಹಳ; ಸಾಹಸಿ: ಪರಾಕ್ರಮಿ; ಗಡ: ಅಲ್ಲವೆ; ಹೋಗು: ತೆರಳು; ಕಣಿ: ನೋಟ; ಕೆಡಹು: ತಳ್ಳು; ತುರಗ: ಅಶ್ವ; ಬಾಣ: ಸರಳು; ಎಚ್ಚು: ಬಾಣ ಪ್ರಯೋಗ ಮಾಡು; ಕಡಿ: ಸೀಳು; ಈಡಾಡು: ಒಗೆ, ಚೆಲ್ಲು; ರಥ: ಬಂಡಿ;

ಪದವಿಂಗಡಣೆ:
ಆದಡ್+ಎಲವೊ +ದುರಾತ್ಮ +ಮಾರುತಿ
ವಾದದಲಿ +ಫಲವೇನು +ಬಲ್ಲರೆ
ಕಾದುಕೊಳ್ಳಾ +ಸಾಕು +ಕಡು+ಸಾಹಸಿಕ +ಗಡ +ನೀನು
ಹೋದೆ +ಹೋಗಿನ್ನೆನುತ +ಕಣಿಹದಿನ್
ಐದರಲಿ +ಕೆಡಹಿದನು +ತುರಗವನ್
ಐದು+ಬಾಣದಲ್+ಎಚ್ಚು +ಕಡಿದ್+ಈಡಾಡಿದನು +ರಥವ

ಅಚ್ಚರಿ:
(೧) ಭೀಮನನ್ನು ಬಯ್ಯುವ ಪರಿ – ಎಲವೊ ದುರಾತ್ಮ ಮಾರುತಿ ವಾದದಲಿ ಫಲವೇನು

ಪದ್ಯ ೨೪: ದುರ್ಯೋಧನನೇಕೆ ನಿಟ್ಟುಸಿರು ಬಿಟ್ಟನು?

ದಯವನತ್ತಲು ತಿದ್ದಿ ನಮ್ಮನು
ಭಯ ಮಹಾಬ್ಧಿಯೊಳದ್ದಿ ಸಮರದ
ಜಯವನವರಿಗೆ ಮಾಡಿ ನಮ್ಮಭಿಮತವ ನೀಡಾಡಿ
ನಯವ ನೀವೊಡ್ಡುವರೆ ನಿಮ್ಮನು
ನಿಯಮಿಸುವರಾರುಂಟು ಭಾಗ್ಯೋ
ದಯವಿಹೀನನು ತಾನೆನುತ ಕುರುರಾಯ ಬಿಸುಸುಯ್ದ (ಭೀಷ್ಮ ಪರ್ವ, ೧ ಸಂಧಿ, ೨೪ ಪದ್ಯ)

ತಾತ್ಪರ್ಯ:
ದುರ್ಯೋಧನನು ಭೀಷ್ಮರ ಮಾತಿಗೆ ಉತ್ತರಿಸುತ್ತಾ, ನಿಮ್ಮ ದಯೆಯು ಪಾಂಡವರ ಕಡೆಗಿದೆ, ನಮ್ಮನ್ನು ಮಹಾಭಯದ ಸಾಗರದಲ್ಲಿ ಮುಳುಗಿಸುತ್ತೀರಿ, ಯುದ್ಧದಲ್ಲಿ ಅವರೇ ಗೆಲ್ಲುವರೆಂದು ಹೇಳುತ್ತೀರಿ, ನಮ್ಮ ಅಭಿಮತವನ್ನು ಕೆಳಕ್ಕೆಸೆಯುತ್ತೀರಿ, ಇಂತಹ ನೀತಿಯನ್ನು ನೀವು ಮುಂದೊಡ್ಡಿದರೆ, ನಿಮಗೆ ಆಜ್ಞೆ ಮಾಡುವ ಶಕ್ತರು ಯಾರು ಇಲ್ಲ, ಒಟ್ಟಿನಲ್ಲಿ ನನ್ನ ಭಾಗ್ಯೋದಯವನ್ನು ಕಾಣುವುದು ನನ್ನ ಹಣೆಯಲ್ಲಿ ಬರೆದಿಲ್ಲ, ಎಂದು ನಿಟ್ಟುಸಿರು ಬಿಟ್ಟನು.

ಅರ್ಥ:
ದಯ: ಕರುಣೆ; ತಿದ್ದು: ಸರಿಪಡಿಸು; ಭಯ: ದಿಗಿಲು, ಅಂಜಿಕೆ; ಮಹಾಬ್ಧಿ: ದೊಡ್ಡ ಸಾಗರ; ಅದ್ದು: ತೋಯ್ದು; ಸಮರ: ಯುದ್ಧ; ಜಯ: ಗೆಲುವು; ಅಭಿಮತ: ಅಭಿಪ್ರಾಯ; ಈಡಾಡು: ಕಿತ್ತು, ಚೆಲ್ಲು; ನಯ: ನುಣುಪು, ಮೃದುತ್ವ, ಸೊಗಸು; ಒಡ್ಡು: ಅರ್ಪಿಸು; ನಿಯಮ: ಕಟ್ಟುಪಾಡು; ಭಾಗ್ಯ: ಶುಭ, ಮಂಗಳ; ಉದಯ: ಹುಟ್ತು; ವಿಹೀನ: ತ್ಯಜಿಸಿದ, ಬಿಟ್ಟ; ಬಿಸುಸುಯ್: ನಿಟ್ಟುಸಿರು;

ಪದವಿಂಗಡಣೆ:
ದಯವನ್+ಅತ್ತಲು +ತಿದ್ದಿ +ನಮ್ಮನು
ಭಯ +ಮಹಾಬ್ಧಿಯೊಳ್+ಅದ್ದಿ +ಸಮರದ
ಜಯವನ್+ಅವರಿಗೆ+ ಮಾಡಿ +ನಮ್ಮಭಿಮತವನ್+ಈಡಾಡಿ
ನಯವ +ನೀವೊಡ್ಡುವರೆ +ನಿಮ್ಮನು
ನಿಯಮಿಸುವರ್+ಆರುಂಟು +ಭಾಗ್ಯೋ
ದಯವಿಹೀನನು+ ತಾನೆನುತ +ಕುರುರಾಯ +ಬಿಸುಸುಯ್ದ

ಅಚ್ಚರಿ:
(೧) ನ ಕಾರದ ಸಾಲು ಪದ – ನಮ್ಮಭಿಮತವ ನೀಡಾಡಿನಯವ ನೀವೊಡ್ಡುವರೆ ನಿಮ್ಮನು ನಿಯಮಿಸುವರಾರುಂಟು

ಪದ್ಯ ೪೮: ಕರ್ಣನು ಹೇಗೆ ಯುದ್ಧಕ್ಕೆ ಮರುಳಿದನು?

ನೋಡಿದನು ಕೆಲಬಲನನುಗಿದೀ
ಡಾಡಿದನು ನಟ್ಟಂಬುಗಳ ಹರಿ
ಜೋಡಬಿಟ್ಟನು ತೊಳೆದನಂಗೋಪಾಂಗ ಶೋಣಿತವ
ಕೂಡೆ ಕಸ್ತುರಿಗಂಧದಲಿ ಮುಳು
ಗಾಡಿ ದಿವ್ಯದುಕೂಲದಲಿ ಮೈ
ಗೂಡಿ ಮೆರೆದನು ಕರ್ಣನನುಪಮ ತೀವ್ರತೇಜದಲಿ (ಕರ್ಣ ಪರ್ವ, ೨೪ ಸಂಧಿ, ೪೮ ಪದ್ಯ)

ತಾತ್ಪರ್ಯ:
ಕರ್ಣನು ತನ್ನ ಮೂರ್ಛೆಯಿಂದ ಎಚ್ಚೆತ್ತು, ಅಕ್ಕಪಕ್ಕದಲ್ಲಿ ತನ್ನ ಸೈನ್ಯವನ್ನು ನೋಡಿ, ತನ್ನ ಮೈಗೆ ನೆಟ್ಟಿದ ಬಾಣಗಳನ್ನು ಕಿತ್ತು, ಹರಿದ ಕವಚವನ್ನು ತೆಗೆದುಕಾಕಿ, ಅಂಗೋಪಾಂಗಗಳಿಗೆ ಅಂಟಿದ್ದ ರಕ್ತವನ್ನು ತೊಳೆದು, ಕಸ್ತೂರಿ ಗಂಧವನ್ನು ಲೇಪಿಸಿಕೊಂಡು, ಹೊಸ ಬಟ್ಟೆಯನ್ನುಟ್ಟು ತೇಜಸ್ಸಿನಿಂದ ಕರ್ಣನು ಹೊಳೆದನು.

ಅರ್ಥ:
ನೋಡು: ವೀಕ್ಷಿಸು; ಕೆಲ: ಸ್ವಲ್ಪ; ಬಲ: ಸೈನ್ಯ; ಉಗಿದು: ಹೊರಹಾಕು; ಈಡಾಡು: ಕಿತ್ತು, ಒಗೆ, ಚೆಲ್ಲು; ನಟ್ಟ: ಚುಚ್ಚಿದ; ಅಂಬು: ಬಾಣ; ಹರಿ: ಸೀಳಿದ; ಜೋಡು: ಕವಚ; ಬಿಟ್ಟನು: ತೊರೆ; ತೊಳೆ: ಸ್ವಚ್ಛಗೊಳಿಸು; ಅಂಗೋಪಾಂಗ: ಅಂಗಗಳು; ಶೋಣಿತ: ರಕ್ತ; ಕೂಡು: ಸೇರು ; ಕಸ್ತುರಿ: ಸುಗಂಧ ದ್ರವ್ಯ; ಗಂಧ: ಚಂದನ; ಮುಳುಗು: ತೋಯು; ದಿವ್ಯ: ಶ್ರೇಷ್ಠ; ದುಕೂಲ: ಬಟ್ಟೆ; ಮೈಗೂಡಿ: ತೊಟ್ಟು; ಮೆರೆ: ಹೊಳೆ, ಅನುಪಮ: ಹೋಲಿಕೆಗೆ ಮೀರಿದ; ತೀವ್ರ: ಹೆಚ್ಚಾದ, ಅಧಿಕ; ತೇಜ: ಕಾಂತಿ;

ಪದವಿಂಗಡಣೆ:
ನೋಡಿದನು+ ಕೆಲಬಲನನ್+ಉಗಿದ್
ಈಡಾಡಿದನು +ನಟ್ಟ್+ಅಂಬುಗಳ+ ಹರಿ
ಜೋಡ+ಬಿಟ್ಟನು +ತೊಳೆದನ್+ಅಂಗೋಪಾಂಗ +ಶೋಣಿತವ
ಕೂಡೆ +ಕಸ್ತುರಿ+ಗಂಧದಲಿ+ ಮುಳು
ಗಾಡಿ +ದಿವ್ಯ+ದುಕೂಲದಲಿ +ಮೈ
ಗೂಡಿ +ಮೆರೆದನು +ಕರ್ಣನನ್+ಅನುಪಮ +ತೀವ್ರ+ತೇಜದಲಿ

ಅಚ್ಚರಿ:
(೧) ನೋಡಿ, ಈಡಾಡಿ, ಮೈಗೂಡಿ, ಮುಳುಗಾಡಿ – ಪ್ರಾಸ ಪದಗಳು

ಪದ್ಯ ೧೭: ಭೀಮನು ಕ್ಷೇಮಧೂರ್ತನನ್ನು ಹೇಗೆ ಆಕ್ರಮಣ ಮಾಡಿದನು?

ಮೇಲುವಾಯ್ದಾರೋಹಕರ ಹಿಂ
ಗಾಲ ಹಿಡಿದೀಡಾಡಿ ರಿಪುಗಜ
ಜಾಲದೊಳಗೊಂದಾನೆಯನು ತಾನೇರಿ ಬೊಬ್ಬಿರಿದು
ಘೀಳಿಡುವ ಕರಿ ಕೆದರಲಂಕುಶ
ವಾಳೆ ನೆತ್ತಿಯನಗೆದು ದಂತಿಯ
ತೂಳಿಸಿದನಾ ಕ್ಷೇಮಧೂರ್ತಿಯ ಗಜದ ಸಮ್ಮುಖಕೆ (ಕರ್ಣ ಪರ್ವ, ೨ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಮನು ತನ್ನ ಮೇಲೆ ಆಕ್ರಮಣ ಮಾಡಿದ ಯೋಧರ ಕಾಲನ್ನು ಹಿಡಿದೆಸೆದನು. ತಾನೂ ಒಂದು ಆನೆಯನ್ನು ಹತ್ತಿ ಗರ್ಜಿಸಿ, ಆನೆಯು ಘೀಳಿಡಲು ಅಂಕುಶದಿಂದ ಅದರ ನೆತ್ತಿಯನ್ನೊತ್ತಿ ಕ್ಷೇಮಧೂರ್ತಿಯ ಆನೆಯ ಮುಂದೆ ಅದನ್ನು ತಂದು ನಿಲ್ಲಿಸಿದನು.

ಅರ್ಥ:
ಮೇಲೆ: ಎತ್ತರದ ಜಾಗ; ಆರೋಹಕ: ಮೇಲೆ ಕುಳಿತಿರುವ; ಹಿಂಗಾಲ: ಹಿಂಬದಿಯ ಕಾಲು; ಹಿಡಿ: ಬಂಧಿಸಿ; ಈಡಾಡಿ: ಸುತ್ತಾಡಿ, ಆಚೆಯಿಂದ ಈಚೆಗೆ ಸುತ್ತಿಸು; ರಿಪು: ವೈರಿ; ಗಜ: ಆನೆ; ಜಾಲ: ಬಲೆ, ಕಪಟ; ಆನೆ: ಗಜ; ಬೊಬ್ಬೆ: ಗರ್ಜನೆ; ಘೀಳು: ಆನೆಯ ಶಬ್ದ, ಜೋರಾಗಿ ಕೂಗು; ಕರಿ: ಆನೆ; ಕೆದರು: ಹರಡು, ಚೆಲ್ಲಾಪಿಲ್ಲಿ; ಅಂಕುಶ: ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ; ನೆತ್ತಿ: ಶಿರ; ಅಗೆ: ಬಗಿ; ದಂತಿ: ಆನೆ; ತೂಳು: ಹೊಡೆ, ತಳ್ಳು; ಗಜ: ಆನೆ; ಸಮ್ಮುಖ: ಎದುರು;

ಪದವಿಂಗಡಣೆ:
ಮೇಲುವಾಯ್ದ್+ಆರೋಹಕರ+ ಹಿಂ
ಗಾಲ +ಹಿಡಿದ್+ಈಡಾಡಿ +ರಿಪುಗಜ
ಜಾಲದೊಳಗ್+ಒಂದ್+ಆನೆಯನು +ತಾನೇರಿ +ಬೊಬ್ಬಿರಿದು
ಘೀಳಿಡುವ +ಕರಿ +ಕೆದರಲ್+ಅಂಕುಶ
ವಾಳೆ +ನೆತ್ತಿಯನ್+ಅಗೆದು+ ದಂತಿಯ
ತೂಳಿಸಿದನಾ +ಕ್ಷೇಮಧೂರ್ತಿಯ +ಗಜದ+ ಸಮ್ಮುಖಕೆ

ಅಚ್ಚರಿ:
(೧) ಕರಿ, ಗಜ, ದಂತಿ, ಆನೆ – ಸಮನಾರ್ಥಕ ಪದ
(೨) ಹಿಡಿದು, ಈಡಾಡಿ, ಬೊಬ್ಬಿರಿದು, ಅಗೆದು, ತೂಳಿಸು – ಹೋರಾಟವನ್ನು ತಿಳಿಸುವ ಶಬ್ದಗಳು

ಪದ್ಯ ೧೨: ಆನೆಗಳು ಯುದ್ಧರಂಗದಲ್ಲಿ ಯಾವ ರೀತಿ ಹೋರಾಡಿದವು?

ನೀಡಿ ಬರಿಕೈಗಳಲಿ ಸೆಳೆದೀ
ಡಾಡಿದವು ಬಂಡಿಗಳನೌಕಿದ
ಕೋಡ ಕೈಯಲಿ ಸಬಳಿಗರ ಸೀಳಿದವು ದೆಸೆದೆಸೆಗೆ
ಹೂಡು ಜಂತ್ರದ ಜತ್ತರಟ್ಟವ
ನಾಡಲೇತಕೆ ಹಿಂದಣೊಡ್ಡನು
ಝಾಡಿಸಿದವೀ ಕ್ಷೇಮಧೂರ್ತಿನೃಪಾಲನಾನೆಗಳು (ಕರ್ಣ ಪರ್ವ, ೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ಕ್ಷೇಮಧೂರ್ತಿಯ ಆನೆಗಳು ಸೊಂಡಿಲನ್ನು ಚಾಚಿ ಆಯುಧದ ಬಂಡಿಗಳನ್ನು ಎಸೆದವು. ದಂತಗಳಿಂದ ಸಬಳ ಹೊತ್ತವರನ್ನು ಸೀಳಿದವು. ಹೂಡಿದ ಜತ್ತರಟ್ಟದ ಯಂತ್ರಗಳು ಕಾಣದಂತಾದವು. ಮುಂಚೂಣಿಯನ್ನು ಮುರಿದು ಹಿಂದಿನ ಸೇನೆಯನ್ನು ಝಾಡಿಸಿದವು.

ಅರ್ಥ:
ನೀಡು: ಕೊಡು; ಬರಿ: ಕೇವಲ; ಕೈ: ಕರ, ಹಸ್ತ; ಸೆಳೆದು: ಹತ್ತಿರ ಕರೆದು; ಈಡಾಡು: ಬಿಸಾಡು; ಬಂಡಿ: ರಥ; ಔಕು: ಒತ್ತು, ಹಿಸುಕು; ಕೋಡ: ದಂತ; ಕೈ: ಹಸ್ತ; ಸಬಳ: ಈಟಿ; ಸೀಳು: ಚೂರುಮಾಡು, ಮುರಿ; ದೆಸೆ: ದಿಕ್ಕು; ಹೂಡು: ಹೆದೆಯೇರಿಸು; ಜಂತ್ರ: ಯಂತ್ರ; ಜತ್ತರಟ್ಟ: ಯುದ್ಧದಲ್ಲಿ ಬಳಸುತ್ತಿದ್ದ ಒಂದು ಬಗೆಯ ಯಂತ್ರ; ಝಾಡಿಸು: ಒದೆ; ನೃಪ: ರಾಜ; ಆನೆ: ಗಜ; ಹಿಂದಣೊಡ್ಡನು: ಕಾಣದಂತಾಗು;

ಪದವಿಂಗಡಣೆ:
ನೀಡಿ +ಬರಿಕೈಗಳಲಿ +ಸೆಳೆದ್
ಈಡಾಡಿದವು +ಬಂಡಿಗಳನ್+ಔಕಿದ
ಕೋಡ +ಕೈಯಲಿ +ಸಬಳಿಗರ +ಸೀಳಿದವು +ದೆಸೆದೆಸೆಗೆ
ಹೂಡು +ಜಂತ್ರದ +ಜತ್ತರಟ್ಟವನ್
ಆಡಲೇತಕೆ +ಹಿಂದಣೊಡ್ಡನು
ಝಾಡಿಸಿದವೀ +ಕ್ಷೇಮಧೂರ್ತಿ+ನೃಪಾಲನ್+ಆನೆಗಳು

ಅಚ್ಚರಿ:
(೧) ಜೋಡಿ ಪದಗಳು – ಕೋಡ ಕೈಯಲಿ; ಸಬಳಿಗರ ಸೀಳಿದವು; ಜಂತ್ರದ ಜತ್ತರಟ್ಟವ
(೨) ಈಡಾಡಿ, ಔಕು, ಸೀಳು, ಝಾಡಿಸು – ಯುದ್ಧವನ್ನು ವಿವರಿಸುವ ಪದಗಳು

ಪದ್ಯ ೫೦: ಭೀಮನ ಪರಾಕ್ರಮ ಎಂತಹದು?

ಸಿಡಿಲು ಕುರಿಗಳನುರುಬಿ ತಿವಿವಂ
ತೆಡಬಲನನೊಡೆಹಾಯ್ದು ಪಲ್ಲವ
ಗೊಡೆಯ ಮುರಿದೀಡಾಡಿ ಬಿರುದಿನ ಹಳವಿಗೆಯ ಕಡಿದು
ತೊಡೆಯ ಖಂಡಿಸಿ ನಿನ್ನ ಮಕುಟವ
ಹುಡಿಯೊಳೊರಸದೆ ಬರಿದೆ ಬಿಡುವನೆ
ಜಡಿದನಾದಡೆ ಭೀಮನಾತನ ಬಲುಹ ನೀನರಿಯಾ (ಉದ್ಯೋಗ ಪರ್ವ, ೯ ಸಂಧಿ, ೫೦ ಪದ್ಯ)

ತಾತ್ಪರ್ಯ:
ಆಗಸದ ಮೋಡಗಳಿಂದ ಹೊರಹೊಮ್ಮಿದ ಸಿಡಿಲು ಭೂಮಿಯ ಮೇಲೆ ಕುರಿಗಳನ್ನು ಸುಟ್ಟು ಕೊಲ್ಲುವಹಾಗೆ ನಿನ್ನ ಎರಡು ಬದಿಯಲ್ಲಿರುವವರನ್ನು ಸಂಹರಿಸಿ, ಶ್ವೇತಚೈತ್ರವನು ಮುರಿದು, ಧ್ವಜದಂಡವನು ತುಂಡುಮಾದಿ, ನಿನ್ನ ತೊಡೆಗಳನ್ನು ಮುರಿದು, ನಿನ್ನ ಕಿರೀಟವನ್ನು ಮಣ್ಣಿನಲ್ಲಿ ತುಳಿದು ತಿಕ್ಕದೆ ಭೀಮನು ನಿನ್ನನ್ನು ಹಾಗೆಯೇ ಬಿಡುವನೆ? ಅವನ ಬಲವನ್ನು ನೀನು ತಿಳಿಯೆಯಾ ಎಂದು ಕೃಷ್ಣನು ದುರ್ಯೋಧನನನ್ನು ಕೇಳಿದನು.

ಅರ್ಥ:
ಸಿಡಿಲು: ಚಿಮ್ಮು, ಸಿಡಿ, ಅಶನಿ; ಕುರಿ:ಮೇಷ; ಉರುಬು: ಮೇಲೆ ಬೀಳು; ತಿವಿ: ಚುಚ್ಚು; ಎಡಬಲ: ಎರಡೂ ಬದಿ; ಒಡೆ: ಹೊಡೆತ; ಹಾಯಿಸು: ಸೇರಿಸು; ಪಲ್ಲವ: ಅಂಕುರ, ಮೊಳಕೆ; ಒಡೆಯ: ರಾಜ; ಮುರಿ: ಸೀಳು; ಈಡಾಡು: ತಿರುಗಿಸು; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಹಳವಿಗೆ: ಬಾವುಟ; ಕಡಿ: ತುಂಡು ಮಾಡು; ತೊಡೆ: ಊರು; ಖಂಡಿಸು: ಸೀಳು, ಚೂರುಮಾಡು; ಮಕುಟ: ಕಿರೀಟ; ಹುಡಿ: ಮಣ್ಣು; ಒರಸು: ಸಾರಿಸು, ಅಳಿಸು; ಬರಿ:ಸುಮ್ಮನೆ; ಬಿಡು: ಅನಿರ್ಬಂಧತೆ; ಜಡಿ:ಹೆದರಿಕೆ, ಹೊಡೆತ; ಬಲುಹ: ಬಲ, ಶೌರ್ಯ; ಅರಿ: ತಿಳಿ;

ಪದವಿಂಗಡಣೆ:
ಸಿಡಿಲು +ಕುರಿಗಳನ್+ಉರುಬಿ +ತಿವಿವಂತ್
ಎಡಬಲನನ್+ಒಡೆಹಾಯ್ದು +ಪಲ್ಲವಗ್
ಒಡೆಯ +ಮುರಿದ್+ಈಡಾಡಿ +ಬಿರುದಿನ+ ಹಳವಿಗೆಯ+ ಕಡಿದು
ತೊಡೆಯ +ಖಂಡಿಸಿ+ ನಿನ್ನ +ಮಕುಟವ
ಹುಡಿಯೊಳ್+ಒರಸದೆ +ಬರಿದೆ+ ಬಿಡುವನೆ
ಜಡಿದನಾದಡೆ+ ಭೀಮನ್+ಆತನ +ಬಲುಹ +ನೀನರಿಯಾ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಿಡಿಲು ಕುರಿಗಳನುರುಬಿ ತಿವಿವಂತ್
(೨) ಭೀಮನು ಯುದ್ಧದಲ್ಲೇನು ಮಾಡುವನು? ಎಡಬಲನನೊಡೆಹಾಯ್ದು, ಪಲ್ಲವ
ಗೊಡೆಯ ಮುರಿದೀಡಾಡಿ, ಬಿರುದಿನ ಹಳವಿಗೆಯ ಕಡಿದು, ತೊಡೆಯ ಖಂಡಿಸಿ, ನಿನ್ನ ಮಕುಟವ
ಹುಡಿಯೊಳೊರಸದೆ