ಪದ್ಯ ೧: ಸಂಜಯನು ಯಾರನ್ನು ಹುಡುಕಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಸಂಜಯ ಬಂದು ಕುರುಭೂ
ಪಾಲಕನನರಸಿದನು ಸಂಗರ ರಂಗಭೂಮಿಯಲಿ
ಮೇಲುಸುಯಿಧಾನದ ತುರಂಗಮ
ಜಾಲ ಸಹಿತಗಲದಲಿ ಕುರುಭೂ
ಪಾಲನಾವೆಡೆಯೆನುತ ಬೆಸಗೊಳುತರಸಿದನು ನೃಪನ (ಗದಾ ಪರ್ವ, ೨ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಸಂಜಯನು ರಣರಂಗಕ್ಕೆ ರಕ್ಷಣೆಗಾಗಿ ಬಂದ ಕುದುರೆಗಳೊಡನೆ ರಣರಂಗದ ಉದ್ದಗಲಕ್ಕೂ ಚಲಿಸಿ ದುರ್ಯೋಧನನ ಬಗ್ಗೆ ಕೇಳುತ್ತಾ ಕುರುಪತಿಯನ್ನು ಹುಡುಕಿದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಭೂಪಾಲಕ: ರಾಜ; ಅರಸು: ಹುಡುಕು; ಸಂಗರ: ಯುದ್ಧ; ರಂಗಭೂಮಿ: ಯುದ್ಧಭೂಮಿ, ಕಳ; ಸುಯಿಧಾನ: ರಕ್ಷಣೆ; ತುರಂಗ: ಕುದುರೆ; ಜಾಲ: ಗುಮ್ಫು; ಸಹಿತ: ಜೊತೆ; ಅಗಲ: ವಿಸ್ತಾರ; ಭೂಪಾಲ: ರಾಜ; ಆವೆಡೆ: ಎಲ್ಲಿ; ಬೆಸ: ಕೇಳು; ನೃಪ: ರಾಜ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಸಂಜಯ+ ಬಂದು+ ಕುರುಭೂ
ಪಾಲಕನನ್+ಅರಸಿದನು +ಸಂಗರ +ರಂಗಭೂಮಿಯಲಿ
ಮೇಲುಸುಯಿಧಾನದ +ತುರಂಗಮ
ಜಾಲ +ಸಹಿತ್+ಅಗಲದಲಿ +ಕುರು+ಭೂ
ಪಾಲನ್+ಆವೆಡೆ+ಎನುತ +ಬೆಸಗೊಳುತ್+ಅರಸಿದನು+ ನೃಪನ

ಅಚ್ಚರಿ:
(೧) ಧರಿತ್ರೀಪಾಲ, ಭೂಪಾಲ, ನೃಪ – ಸಮಾನಾರ್ಥಕ ಪದ
(೨) ಕುರುಭೂಪಾಲ – ೨, ೫ ಸಾಲಿನ ಕೊನೆಯ ಪದ

ಪದ್ಯ ೬೩: ಶಕುನಿಯು ಎಷ್ಟು ಸೈನ್ಯದೊಡನೆ ಬಂದನು?

ನೂರು ಗಜವಕ್ಕಾಡಲವನಿಪ
ನೇರಿದನು ವಾರುವನನೆಡದಲಿ
ಜಾರಿದನು ಸೂಠಿಯಲಿ ದುವ್ವಾಳಿಸಿ ತುರಂಗಮವ
ಆರು ಸಾವಿರ ಕುದುರೆ ರಥವೈ
ನೂರು ಗಜಘಟೆ ನೂರು ಮೂವ
ತ್ತಾರು ಸಾವಿರ ಪಾಯದಳದಲಿ ಬಂದನಾ ಶಕುನಿ (ಗದಾ ಪರ್ವ, ೧ ಸಂಧಿ, ೬೩ ಪದ್ಯ)

ತಾತ್ಪರ್ಯ:
ತನ್ನ ಸುತ್ತಲ್ಲಿದ್ದ ನೂರಾನೆಗಳು, ನಷ್ಟಗೊಳ್ಳಲು, ದುರ್ಯೋಧನನು ಒಂದು ಕುದುರೆಯನ್ನೇರಿ ಅದನ್ನು ವೇಗವಾಗಿ ಓಡಿಸುತ್ತಾ ತಪ್ಪಿಸಿಕೊಂಡು ಓಡಿಹೋದನು. ಆಗ ಶಕುನಿಯು ಆರು ಸಾವಿರ ಕುದುರೆಗಳು, ಐನೂರು ರಥಗಳು, ನೂರು ಆನೆಗಳು, ಮೂವತ್ತಾರು ಸಾವಿರ ಕಾಲಾಳುಗಳೊಡನೆ ಬಂದನು.

ಅರ್ಥ:
ನೂರು: ಶತ; ಗಜ: ಆನೆ; ಅಕ್ಕಾಡು: ನಾಶವಾಗು; ಅವನಿಪ: ರಾಜ; ಏರು: ಹತ್ತು; ವಾರುವ: ಕುದುರೆ; ಎಡ: ವಾಮಭಾಗ; ಜಾರು: ಕುಗ್ಗು; ಸೂಠಿ: ವೇಗ; ದುವ್ವಾಳಿಸು: ತೀವ್ರಗತಿ, ಓಡು; ತುರಂಗ: ಕುದುರೆ; ರಥ: ಬಂಡಿ; ಘಟೆ: ಗುಂಪು; ಪಾಯದಳ: ಸೈನಿಕ; ಬಂದು: ಆಗಮಿಸು;

ಪದವಿಂಗಡಣೆ:
ನೂರು +ಗಜವ್+ಅಕ್ಕಾಡಲ್+ ಅವನಿಪನ್
ಏರಿದನು +ವಾರುವನನ್+ಎಡದಲಿ
ಜಾರಿದನು+ ಸೂಠಿಯಲಿ +ದುವ್ವಾಳಿಸಿ +ತುರಂಗಮವ
ಆರು +ಸಾವಿರ +ಕುದುರೆ +ರಥವ್+
ಐನೂರು +ಗಜಘಟೆ +ನೂರು +ಮೂವ
ತ್ತಾರು +ಸಾವಿರ +ಪಾಯದಳದಲಿ +ಬಂದನಾ +ಶಕುನಿ

ಅಚ್ಚರಿ:
(೧) ವಾರುವ, ತುರಂಗ, ಕುದುರೆ – ಸಮಾನಾರ್ಥಕ ಪದ
(೨) ಪಲಾಯನದ ಪರಿ – ಅವನಿಪನೇರಿದನು ವಾರುವನನೆಡದಲಿ ಜಾರಿದನು ಸೂಠಿಯಲಿ ದುವ್ವಾಳಿಸಿ ತುರಂಗಮವ

ಪದ್ಯ ೩೬: ಪಾಂಡವ ಸೈನ್ಯದಲ್ಲಾದ ತೊಂದರೆ ಹೇಗಿತ್ತು?

ಝಳಕೆ ಘೀಳಿಟ್ಟೊರಲಿದವು ಕರಿ
ಕುಳ ತುರಂಗದ ಥಟ್ಟು ಖುರದಲಿ
ನೆಲನ ಹೊಯ್ದವ್ವಳಿಸಿದವು ರಾವುತರನೀಡಾಡಿ
ಬಲು ರಥವನಸಬಡಿದು ಸೂತನ
ನಿಳುಹಿ ಹಯವೋಡಿದವು ಮು
ಮ್ಮುಳಿಸಿ ತನಿಗುದಿಗುದಿದು ಕೋಟಲೆಗೊಂಡುದರಿಸೇನೆ (ದ್ರೋಣ ಪರ್ವ, ೧೯ ಸಂಧಿ, ೩೬ ಪದ್ಯ)

ತಾತ್ಪರ್ಯ:
ನಾರಾಯಣಾಸ್ತ್ರದ ಬೆಂಕಿಯ ತಾಪಕ್ಕೆ ಆನೆಗಳು ಜೋರಾಗಿ ಕಿರುಚಿದವು. ಗೊರಸುಗಳಿಂದ ನೆಲವನಪ್ಪಳಿಸಿ, ರಾವುತರನ್ನು ಕೆಳಕ್ಕೆಸೆದು ಕುದುರೆಗಳು ಆರ್ಭಟಿಸಿದವು. ರಥವು ನೆಲಕ್ಕೆ ಬೀಳುವಂತೆ ಮಾಡಿ, ಸಾರಥಿಯನ್ನು ಲೆಕ್ಕಿಸದೆ ರಥಕ್ಕೆ ಕಟ್ಟಿದ ಕುದುರೆಗಳು ಓಡಿದವು. ಪಾಂಡವ ಸೈನ್ಯ ಕುದಿಕುದಿದು ತೊಂದರೆಯನ್ನು ಅನುಭವಿಸಿದವು.

ಅರ್ಥ:
ಝಳ: ತಾಪ; ಘೀಳಿಡು: ಕಿರುಚು; ಒರಲು: ಕೂಗು; ಕರಿ: ಆನೆ; ಕುಳ: ಗುಂಪು; ತುರಂಗ: ಕುದುರೆ; ಥಟ್ಟು: ಗುಂಪು; ಖುರ: ಕುದುರೆ ದನಕರುಗಳ ಕಾಲಿನ ಗೊರಸು; ನೆಲ: ಭೂಮಿ; ಹೊಯ್ದು: ಹೊಡೆ; ಅವ್ವಳಿಸು: ಆರ್ಭಟಿಸು; ರಾವುತ: ಕುದುರೆ ಸವಾರ; ಈಡಾಡು: ಒಗೆ, ಚೆಲ್ಲು; ಬಲು: ಬಹಳ; ರಥ: ಬಂಡಿ; ಬಡಿ: ಹೊಡೆ; ಅಸಬಡಿ: ಸದೆಬಡಿ; ಸೂತ: ಸಾರಥಿ; ಇಳುಹಿ: ಕೆಳಗಿಳಿಸು; ಹಯ: ಕುದುರೆ; ಓಡು: ಧಾವಿಸು; ಮುಮ್ಮುಳಿಸು: ನಾಶವಾಗು; ತನಿ: ಹೆಚ್ಚಾಗು; ಕುದಿ: ಮರಳು; ಕೋಟಲೆ: ತೊಂದರೆ; ಅರಿ: ವೈರಿ; ಸೇನೆ: ಸೈನ್ಯ;

ಪದವಿಂಗಡಣೆ:
ಝಳಕೆ +ಘೀಳಿಟ್ಟ್+ಒರಲಿದವು +ಕರಿ
ಕುಳ +ತುರಂಗದ +ಥಟ್ಟು +ಖುರದಲಿ
ನೆಲನ +ಹೊಯ್ದ್+ಅವ್ವಳಿಸಿದವು +ರಾವುತರನ್+ಈಡಾಡಿ
ಬಲು +ರಥವನ್+ಅಸಬಡಿದು +ಸೂತನನ್
ಇಳುಹಿ +ಹಯವ್+ಓಡಿದವು +ಮು
ಮ್ಮುಳಿಸಿ +ತನಿ+ಕುದಿಕುದಿದು +ಕೋಟಲೆಗೊಂಡುದ್+ಅರಿಸೇನೆ

ಅಚ್ಚರಿ:
(೧) ತುರಂಗ, ಹಯ; ಕುಳ, ಥಟ್ಟು – ಸಮಾನಾರ್ಥಕ ಪದ
(೨) ಘೀಳಿಡು, ಅವ್ವಳಿಸು, ಒರಲು – ಸಾಮ್ಯಾರ್ಥ ಪದ

ಪದ್ಯ ೩೬: ಪಾಂಚಾಲ ಸೈನ್ಯದಲ್ಲಿ ಎಷ್ಟು ಮಂದಿ ಅಳಿದರು?

ಆರು ಸಾವಿರ ತೇರು ಗಜ ಹದಿ
ನಾರುಸಾವಿರ ಲಕ್ಷ ಕುದುರೆಗ
ಳಾರು ಕೋಟಿ ಪದಾತಿ ಮುಗ್ಗಿತು ಮತ್ತೆ ಸಂದಣಿಸಿ
ಆರು ಲಕ್ಷ ತುರಂಗ ನೃಪರೈ
ನೂರು ಗಜಘಟೆ ಲಕ್ಷ ರಥ ಹದಿ
ಮೂರು ಸಾವಿರವಳಿದುದರಿಪಾಂಚಾಲ ಸೇನೆಯಲಿ (ದ್ರೋಣ ಪರ್ವ, ೧೮ ಸಂಧಿ, ೩೬ ಪದ್ಯ)

ತಾತ್ಪರ್ಯ:
ಆರು ಸಾವಿರ ರಥಗಳು, ಹದಿನಾರು ಸಾವಿರ ಆನೆಗಳು, ಲಕ್ಷ ಕುದುರೆಗಳು, ಆರು ಕೋಟಿ ಕಾಲಾಳುಗಳು ಸತ್ತರು. ಮತ್ತೆ ಸೈನ್ಯವು ಒಂದಾಗಿ ಮುತ್ತಿತು. ಆಗ ಪಾಂಚಾಲ ಸೇನೆಯಲ್ಲಿ ಆರು ಲಕ್ಷ ಕುದುರೆಗಳು, ಐನೂರು ರಾಜರು, ಲಕ್ಷ ಆನೆಗಳು, ಹದಿಮೂರು ಸಾವಿರ ರಥಗಳು ನಿರ್ನಾಮವಾದವು.

ಅರ್ಥ:
ಸಾವಿರ: ಸಹಸ್ರ; ತೇರು: ಬಂಡಿ, ರಥ; ಗಜ: ಆನೆ; ಕುದುರೆ: ಅಶ್ವ; ಪದಾತಿ: ಕಾಲಾಳು; ಮುಗ್ಗು: ಬಾಗು, ಮಣಿ; ಸಂದಣಿ: ಗುಂಪು; ನೃಪ: ರಾಜ; ಗಜಘಟೆ: ಆನೆಗಳ ಗುಂಪು; ರಥ: ಬಂಡಿ; ಅಳಿ: ನಾಶ; ಅರಿ: ವೈರಿ; ಸೇನೆ: ಸೈನ್ಯ;

ಪದವಿಂಗಡಣೆ:
ಆರು +ಸಾವಿರ +ತೇರು +ಗಜ +ಹದಿ
ನಾರು+ಸಾವಿರ +ಲಕ್ಷ +ಕುದುರೆಗಳ್
ಆರು +ಕೋಟಿ +ಪದಾತಿ +ಮುಗ್ಗಿತು +ಮತ್ತೆ +ಸಂದಣಿಸಿ
ಆರು +ಲಕ್ಷ +ತುರಂಗ +ನೃಪರ್
ಐನೂರು +ಗಜಘಟೆ +ಲಕ್ಷ +ರಥ +ಹದಿ
ಮೂರು +ಸಾವಿರವ್+ಅಳಿದುದ್+ಅರಿ+ಪಾಂಚಾಲ +ಸೇನೆಯಲಿ

ಅಚ್ಚರಿ:
(೧) ಆರು, ಹದಿನಾರು; ಮೂರು, ಐನೂರು – ಪ್ರಾಸ ಪದಗಳು
(೨) ನೂರು, ಸಾವಿರ, ಲಕ್ಷ, ಕೋಟಿ – ಸಂಖ್ಯೆಗಳನ್ನು ಎಣಿಸುವ ಪದಗಳು

ಪದ್ಯ ೨೦: ಪಾಂಚಾಲ ಸೈನ್ಯದ ನಷ್ಟವೆಷ್ಟು?

ಕರಿಗಳೈಸಾವಿರ ತುರಂಗಮ
ವೆರಡು ಸಾವಿರವೆಂಟು ಸಾವಿರ
ವರವರೂಥದ ಥಟ್ಟು ಮುರಿದುದು ಲಕ್ಷ ಪಾಯದಳ
ಅರಸುಗಳು ಮೂನೂರು ಪುನರಪಿ
ಕರಿ ತುರಗ ರಥ ಮತ್ತೆ ಮೂವ
ತ್ತೆರಡು ಸಾವಿರವಳಿದುದರಿಪಾಂಚಾಲ ಸೇನೆಯಲಿ (ದ್ರೋಣ ಪರ್ವ, ೧೮ ಸಂಧಿ, ೨೦ ಪದ್ಯ)

ತಾತ್ಪರ್ಯ:
ಐದು ಸಾವಿರ ಆನೆಗಳು, ಎರಡು ಸಾವಿರ ಕುದುರೆಗಳು, ಎಂಟು ಸಾವಿರ ರಥಗಳು, ಲಕ್ಷ ಕಾಲಾಳುಗಳು, ಮುನ್ನೂರು ದೊರೆಗಳು ಮತ್ತೆ ಮೂವತ್ತೆರಡು ಸಾವಿರ ಚತುರಂಗ ಸೈನ್ಯ ಪಾಂಚಾಲ ಸೇನೆಯಲ್ಲಿ ನಾಶವಾಯಿತು.

ಅರ್ಥ:
ಕರಿ: ಆನೆ; ಸಾವಿರ: ಸಹಸ್ರ; ತುರಂಗ: ಅಶ್ವ; ವರ: ಶ್ರೇಷ್ಠ; ವರೂಥ: ರಥ, ಬಂಡಿ; ಥಟ್ಟು: ಗುಂಪು; ಮುರಿ: ಸೀಳು; ಪಾಯದಳ: ಸೈನ್ಯ; ಅರಸು: ರಾಜ; ಪುನರಪಿ: ಮತ್ತೆ; ಅಳಿದು: ಸಾವು; ಅರಿ: ವೈರಿ; ಸೇನೆ: ಸೈನ್ಯ;

ಪದವಿಂಗಡಣೆ:
ಕರಿಗಳ್+ಐಸಾವಿರ +ತುರಂಗಮವ್
ಎರಡು +ಸಾವಿರವ್+ಎಂಟು +ಸಾವಿರ
ವರ+ವರೂಥದ +ಥಟ್ಟು +ಮುರಿದುದು +ಲಕ್ಷ +ಪಾಯದಳ
ಅರಸುಗಳು +ಮೂನೂರು +ಪುನರಪಿ
ಕರಿ +ತುರಗ +ರಥ +ಮತ್ತೆ +ಮೂವ
ತ್ತೆರಡು +ಸಾವಿರವ್+ಅಳಿದುದ್+ಅರಿ+ಪಾಂಚಾಲ +ಸೇನೆಯಲಿ

ಅಚ್ಚರಿ:
(೧) ಸಾವಿರ – ೪ ಬಾರಿ ಪ್ರಯೋಗ

ಪದ್ಯ ೨೧: ಭೀಮನು ಕೌರವ ಸೈನ್ಯವನ್ನು ಹೇಗೆ ಸೀಳಿದನು?

ಎಚ್ಚನುಚ್ಚಳಿಸುವ ತುರಂಗವ
ನೊಚ್ಚತವೆ ಕೊಂದನು ರಥೌಘವ
ನಚ್ಚರಿಯರೊಡನಾಡಿಸಿದನುರವಣಿಪ ಕಾಲಾಳ
ಕಿಚ್ಚುಗಿಡಿಗೆದರುವ ಸಿಳೀಮುಖ
ಕೊಚ್ಚಲಿಭದವಯವವನಮರರಿ
ಗಚ್ಚರಿಯ ತನಿಸೂರೆಬಿಟ್ಟನು ಭೀಮ ಬವರದಲಿ (ದ್ರೋಣ ಪರ್ವ, ೧೨ ಸಂಧಿ, ೨೧ ಪದ್ಯ)

ತಾತ್ಪರ್ಯ:
ಮುಂದೆ ಬಂದ ಕುದುರೆಗಳನ್ನು ಹೊಡೆದು ಒಟ್ಟೊಟ್ಟಾಗಿ ಕೊಂದು, ರಥಗಳನ್ನು ಮುರಿದನು. ಕಾಲಾಳುಗಳನ್ನು ಅಪ್ಸರೆಯರ ತೋಳುಗಳಿಗೆ ಸೇರಿಸಿದನು. ಕಿಚ್ಚು

ಅರ್ಥ:
ಎಚ್ಚು: ಬಾಣ ಪ್ರಯೋಗ ಮಾಡು, ಹೊಡೆ; ಉಚ್ಚಳಿಸು: ಮೇಲೆ ಹಾರು; ತುರಂಗ: ಕುದುರೆ; ಉಚ್ಚಲಿತ: ಮೇಲಕ್ಕೆ ಹಾರು; ಕೊಂದು: ಸಾಯಿಸು; ರಥ: ಬಂಡಿ; ಔಘ: ಗುಂಪು, ಸಮೂಹ; ಅಚ್ಚರಿ: ಆಶ್ಚರ್ಯ; ಒಡನಾಡಿತನ: ಗೆಳೆತನ;ಉರವಣಿಸು: ಹೆಚ್ಚಾಗು; ಕಾಲಾಳು: ಸೈನಿಕರು; ಕಿಚ್ಚು: ಬೆಂಕಿ; ಸಿಳೀಮುಖ: ಬಾಣ, ಸರಳು; ಇಭ: ಆನೆ; ಅವಯವ: ದೇಹದ ಒಂದು ಭಾಗ, ಅಂಗ; ಅಮರ: ದೇವತೆ; ತನಿ: ಸವಿಯಾದುದು; ಬವರ: ಕಾಳಗ, ಯುದ್ಧ;

ಪದವಿಂಗಡಣೆ:
ಎಚ್ಚನ್+ಉಚ್ಚಳಿಸುವ +ತುರಂಗವನ್
ಒಚ್ಚತವೆ +ಕೊಂದನು +ರಥೌಘವನ್
ಅಚ್ಚರಿಯರ್+ಒಡನಾಡಿಸಿದನ್+ಉರವಣಿಪ +ಕಾಲಾಳ
ಕಿಚ್ಚು+ಕಿಡ+ಕೆದರುವ +ಸಿಳೀಮುಖ
ಕೊಚ್ಚಲ್+ಇಭದ್+ಅವಯವವನ್+ಅಮರರಿಗ್
ಅಚ್ಚರಿಯ +ತನಿಸೂರೆಬಿಟ್ಟನು +ಭೀಮ +ಬವರದಲಿ

ಅಚ್ಚರಿ:
(೧) ಸತ್ತರು ಎಂದು ಹೇಳಲು – ಕೊಚ್ಚಲಿಭದವಯವವನಮರರಿಗಚ್ಚರಿಯ ತನಿಸೂರೆಬಿಟ್ಟನು

ಪದ್ಯ ೧: ಅಭಿಮನ್ಯುವು ಹೇಗೆ ಕೌರವ ಸೈನ್ಯವನ್ನು ನಾಶಮಾಡಿದನು?

ಅವಧರಿಸು ಧೃತರಾಶ್ಟ್ರ ನೃಪ ಸೈಂ
ಧವನ ಗೆಲಿದಾ ವ್ಯೂಹ ಭೇದಾ
ಹವವಿಜಯ ವಿಜಯಾತ್ಮಕನ ಕೌತುಕ ರಣೋದಯವ
ತಿವಿದನುರುಬುವ ರಥ ಪದಾತಿಯ
ಕವಿವ ಗರುವ ತುರಂಗಗಳ ಬಲು
ಜವದ ರಥ ಕೋಟ್ಯಾನುಕೋಟಿಯ ಹೊದರ ಹೊಸ ಮೆಳೆಯ (ದ್ರೋಣ ಪರ್ವ, ೫ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಸೈಂಧವನನ್ನು ಗೆದ್ದು ಪದ್ಮವ್ಯೂಹವನ್ನು ಭೇದಿಸಿದ ಅರ್ಜುನನ ಪುತ್ರನಾದ ಅಭಿಮನ್ಯುವಿನ ಯುದ್ಧ ಕೌತಕದ ಕಥೆಯನ್ನು ಕೇಳು. ತನ್ನನ್ನು ಮುತ್ತಿದ ರಥಗಳು, ಪದಾತಿಗಳು, ಕುದುರೆಗಳ ಗುಂಪನ್ನು ಹೊಡೆದುಹಾಕಿದನು.

ಅರ್ಥ:
ಅವಧರಿಸು: ಕೇಳು; ನೃಪ: ರಾಜ; ಗೆಲಿದು: ಜಯಿಸು; ವ್ಯೂಹ: ಗುಂಪು, ಸಮೂಹ; ಭೇದ: ಛಿದ್ರ, ಸೀಳು; ಆಹವ: ಯುದ್ಧ; ವಿಜಯ: ಗೆಲುವು; ಆತ್ಮಕ: ಮಗ; ಕೌತುಕ: ಆಶ್ಚರ್ಯ; ರಣ: ಯುದ್ಧರಂಗ; ಉದಯ: ಹುಟ್ಟು; ತಿವಿದು: ಚುಚ್ಚು; ಉರುಬು: ಅತಿಶಯವಾದ ವೇಗ; ರಥ: ಬಂಡಿ; ಪದಾತಿ: ಕಾಲಾಳು; ಕವಿ: ಆವರಿಸು; ಗರುವ: ಹಿರಿಯ, ಶ್ರೇಷ್ಠ; ತುರಂಗ: ಕುದುರೆ; ಬಲು: ಬಹಳ; ಜವ: ವೇಗ; ಕೋಟಿ: ಲೆಕ್ಕವಿಲ್ಲದಷ್ಟು; ಹೊದರು: ಗುಂಪು, ಸಮೂಹ; ಹೊಸ: ನವೀನ; ಮೆಳೆ: ಗುಂಪು;

ಪದವಿಂಗಡಣೆ:
ಅವಧರಿಸು +ಧೃತರಾಷ್ಟ್ರ +ನೃಪ +ಸೈಂ
ಧವನ +ಗೆಲಿದ್+ಆ +ವ್ಯೂಹ +ಭೇದ
ಆಹವ+ವಿಜಯ +ವಿಜಯಾತ್ಮಕನ +ಕೌತುಕ +ರಣೋದಯವ
ತಿವಿದನ್+ಉರುಬುವ +ರಥ +ಪದಾತಿಯ
ಕವಿವ +ಗರುವ +ತುರಂಗಗಳ +ಬಲು
ಜವದ +ರಥ +ಕೋಟ್ಯಾನುಕೋಟಿಯ +ಹೊದರ +ಹೊಸ +ಮೆಳೆಯ

ಅಚ್ಚರಿ:
(೧) ಅಭಿಮನ್ಯುವನ್ನು ಭೇದಾಹವವಿಜಯ ವಿಜಯಾತ್ಮಕ ಎಂದು ಕರೆದಿರುವುದು

ಪದ್ಯ ೯೬: ರಥಿಕರು ಹೇಗೆ ಹುರಿದುಂಬಿಸುತ್ತಿದ್ದರು?

ಪೂತು ಸಾರಥಿ ಭಾಪು ಮಝರೇ
ಸುತ ಧಿರುಧಿರು ಎನುತ ರಥಿಕ
ವ್ರಾತ ಮಿಗೆ ಬೋಳೈಸಿ ಕೊಂಡರು ಹಯದ ವಾಘೆಗಳ
ಆ ತುರಂಗದ ಖುರಪುಟದ ನವ
ಶಾತಕುಂಭದ ಗಾಲಿಯುರುಬೆಯ
ನಾ ತತುಕ್ಷಣವಾಂಪರಾರೆನೆ ಕವಿದುದುಭಯದೊಳು (ಭೀಷ್ಮ ಪರ್ವ, ೪ ಸಂಧಿ, ೯೬ ಪದ್ಯ)

ತಾತ್ಪರ್ಯ:
ಭಲೇ, ಮಝರೇ, ಭಾಪು, ಸಾರಥಿ ಎಂದು ರಥಿಕರು ಸಾರಥಿಗಳನ್ನು ಹುರಿದುಂಬಿಸುತ್ತಿದ್ದರು. ಬಂಗಾರದ ಗಾಲಿಗಳು ಕುದುರೆಗಳ ಖುರಪುಟದ ವೇಗಕ್ಕನುಸಾರವಾಗಿ ಚಲಿಸಿದವು. ಇವರನ್ನು ತಡೆಯಬಲ್ಲವರಾರು ಎಂದು ಆಶ್ಚರ್ಯಪಡುವಂತೆ ಎರಡು ಸೈನ್ಯಗಳ ರಥಿಕರೂ ಒಬ್ಬರನ್ನೊಬ್ಬರು ತಾಗಿದರು.

ಅರ್ಥ:
ಪೂತು: ಭಲೇ, ಭೇಷ್; ಸಾರಥಿ: ಸೂತ; ಭಾಪು: ಭಲೇ; ಮಝ: ಕೊಂಡಾಟದ ಒಂದು ಮಾತು, ಭಲೇ; ಸೂತ: ಸಾರಥಿ; ಧಿರುಧಿರು: ವೇಗವಾಗಿ; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ವ್ರಾತ: ಗುಂಪು; ಮಿಗೆ: ಅಧಿಕ; ಬೋಳೈಸು: ಸಂತೈಸು, ಸಮಾಧಾನ ಮಾಡು; ಹಯ: ಕುದುರೆ; ವಾಘೆ: ಲಗಾಮು; ತುರಂಗ: ಕುದುರೆ; ಖುರಪುಟ: ಗೊರಸು; ನವ: ಹೊಸ; ಶಾತಕುಂಭ: ಚಿನ್ನ, ಹಿರಣ್ಯ; ಗಾಲಿ: ಚಕ್ರ; ಉರುಬು: ಅತಿಶಯವಾದ ವೇಗ; ಕ್ಷಣ: ಸಮಯ; ಕವಿ: ಆವರಿಸು; ಉಭಯ: ಎರಡು;

ಪದವಿಂಗಡಣೆ:
ಪೂತು +ಸಾರಥಿ+ ಭಾಪು +ಮಝರೇ
ಸುತ +ಧಿರುಧಿರು +ಎನುತ +ರಥಿಕ
ವ್ರಾತ +ಮಿಗೆ +ಬೋಳೈಸಿ +ಕೊಂಡರು +ಹಯದ +ವಾಘೆಗಳ
ಆ +ತುರಂಗದ +ಖುರಪುಟದ +ನವ
ಶಾತಕುಂಭದ +ಗಾಲಿ+ಉರುಬೆಯನ್
ಆ+ ತತುಕ್ಷಣವಾಂಪರ್+ಆರೆನೆ +ಕವಿದುದ್+ಉಭಯದೊಳು

ಅಚ್ಚರಿ:
(೧) ಪೂತು, ಭಾಪು, ಮಝರೇ – ಹುರಿದುಂಬಿಸುವ ಮಾತು

ಪದ್ಯ ೩೮: ಯಾರು ನಿಜವಾದ ಶೂರರು?

ತರುಣಿಯರ ಮುಂದಸ್ತ್ರ ಶಸ್ತ್ರವ
ತಿರುಹಬಹುದುಬ್ಬೇಳಬಹುದ
ಬ್ಬರಿಸಬಹುದೆನಗಾರು ಸರಿ ನಾ ಧೀರನೆನಬಹುದು
ಕರಿತುರಂಗದ ಬಹಳಶಸ್ತ್ರೋ
ತ್ಕರ ಕೃಪಾಣದ ಹರಹಿನಲಿ ಮೊಗ
ದಿರುಹದಿಹ ಕಲಿಯಾರು ಕುಂತೀಸೂನು ಕೇಳೆಂದ (ಭೀಷ್ಮ ಪರ್ವ, ೩ ಸಂಧಿ, ೩೮ ಪದ್ಯ)

ತಾತ್ಪರ್ಯ:
ಅರ್ಜುನಾ ಹೆಂಗಸರ ಮುಂದೆ ಶಸ್ತ್ರಗಳ ವರಸೆಯನ್ನು ತೋರಿಸಿ ಜಂಬಕೊಚ್ಚಿಕೊಳ್ಳಬಹುದು, ನಾನು ಧೀರ ಎಂದು ಹೊಗಳಿಕೊಳ್ಳಬಹುದು, ಆದರೆ ಎದುರು ನಿಂತ ಆನೆ ಕುದುರೆಗಳ ಸೈನ್ಯ, ಶಸ್ತ್ರ ಕತ್ತಿಗಳನ್ನು ಕಂಡು ಹಿಂಜರಿಯದಿರುವವರಾರು ಶೂರನೇ ಅರ್ಜುನ ಎಂದು ಕೃಷ್ಣನು ಹೇಳಿದನು.

ಅರ್ಥ:
ತರುಣಿ: ಹೆಣ್ಣು; ಮುಂದೆ: ಎದುರು; ಅಸ್ತ್ರ: ಆಯುಧ; ತಿರುಹು: ತಿರುಗಿಸು, ವರಸೆಗಳು; ಉಬ್ಬೆಳು: ಜಂಬಕೊಚ್ಚಿಕೋ; ಅಬ್ಬರಿಸು: ಕೂಗು; ಸರಿ: ಸಮಾನ; ಧೀರ: ಶೂರ; ಕರಿ: ಆನೆ; ತುರಂಗ: ಕುದುರೆ; ಬಹಳ: ತುಂಬ; ಶಸ್ತ್ರ: ಆಯುಧ; ಉತ್ಕರ: ಸಮೂಹ; ಕೃಪಾಣ: ಕತ್ತಿ, ಖಡ್ಗ; ಹರಹು: ವಿಸ್ತಾರ, ವೈಶಾಲ್ಯ; ಮೊಗ: ಮುಖ; ತಿರುಹು: ತಿರುಗಿಸು, ಹಿಂದೆ ಸರಿ; ಕಲಿ: ಶೂರ; ಸೂನು: ಮಗ; ಕೇಳು: ಆಲಿಸು;

ಪದವಿಂಗಡಣೆ:
ತರುಣಿಯರ +ಮುಂದ್+ಅಸ್ತ್ರ+ ಶಸ್ತ್ರವ
ತಿರುಹಬಹುದ್+ಉಬ್ಬೇಳಬಹುದ್
ಅಬ್ಬರಿಸಬಹುದ್+ಎನಗಾರು+ ಸರಿ+ ನಾ +ಧೀರನೆನಬಹುದು
ಕರಿ+ತುರಂಗದ +ಬಹಳ+ಶಸ್ತ್ರೋ
ತ್ಕರ +ಕೃಪಾಣದ+ ಹರಹಿನಲಿ +ಮೊಗ
ತಿರುಹದಿಹ+ ಕಲಿಯಾರು +ಕುಂತೀ+ಸೂನು +ಕೇಳೆಂದ

ಅಚ್ಚರಿ:
(೧) ಶೂರನೆಂದು ಸುಲಭದಿ ಹೇಳುವ ಪರಿ – ತರುಣಿಯರ ಮುಂದಸ್ತ್ರ ಶಸ್ತ್ರವತಿರುಹಬಹುದುಬ್ಬೇಳಬಹುದ
ಬ್ಬರಿಸಬಹುದೆನಗಾರು ಸರಿ ನಾ ಧೀರನೆನಬಹುದು

ಪದ್ಯ ೫೨: ದುರ್ಯೋಧನನು ಹೇಗೆ ಯುದ್ಧವನ್ನು ಮಾಡಿದನು?

ಮುತ್ತಿದರಿಬಲ ಜಾಲವನು ನಭ
ಕೊತ್ತಿ ದಿವ್ಯಾಸ್ತ್ರದಲಿ ಸೀಳಿದ
ನೆತ್ತ ಮುರಿದೋಡಿದರೆ ರಥವನು ಹರಿಸಿ ಬೇಗದಲಿ
ಒತ್ತಿ ಹರಿತಹ ರಥತುರಂಗಮ
ಮುತ್ತಿದಿಭಸಂಘಾತವನು ನೃಪ
ನೊತ್ತಿ ಕಡಿದನು ಹಯವ ಗಜರಥವುಳಿದ ಕಾಲಾಳ (ಅರಣ್ಯ ಪರ್ವ, ೨೦ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕೌರವನು ತನ್ನ ಬಲವನ್ನು ತೋರುತ್ತಾ, ಅವನ ಸುತ್ತಾ ಆವರಿಸಿದ್ದ ಶತ್ರು ಸೈನ್ಯವನ್ನು ತನ್ನ ದಿವ್ಯಾಸ್ತ್ರಗಳಿಂದ ಘಾತಿಸಿದನು. ತನ್ನ ರಥವನ್ನು ಶತ್ರುಸೈನ್ಯಗಳ ಮಧ್ಯೆ ವೇಗವಾಗಿ ಹರಿಸಿದನು. ತನ್ನು ಸುತ್ತಲೂ ಆವರಿಸುತ್ತಿದ್ದ ಕುದುರೆ, ಆನೆ, ರಥ, ಕಾಲಾಳುಗಳ ಸೈನ್ಯವನ್ನು ಕತ್ತರಿಸಿ ಹಾಕಿದನು.

ಅರ್ಥ:
ಮುತ್ತು: ಆವರಿಸು; ಅರಿ: ಶತ್ರು; ಬಲ: ಸೈನ್ಯ; ಜಾಲ: ಬಲೆ; ನಭ: ಆಗಸ; ಒತ್ತು: ಆಕ್ರಮಿಸು, ಮುತ್ತು; ದಿವ್ಯಾಸ್ತ್ರ: ಶ್ರೇಷ್ಠವಾದ ಆಯುಧ; ಸೀಳು: ಕತ್ತರಿಸು; ಮುರಿ: ಸೀಳು; ರಥ: ಬಂಡಿ; ಹರಿಸು: ಚಲಿಸು; ಬೇಗ: ವೇಗ; ಹರಿತ: ಚೂಪು; ತುರಂಗ: ಅಶ್ವ, ಕುದುರೆ; ರಥ: ಬಂಡಿ; ಇಭ: ಆನೆ; ಸಂಘಾತ: ಗುಂಪು, ಸಮೂಹ; ಕಡಿ: ಸೀಳು; ಹಯ: ಕುದುರೆ; ಗಜ; ಆನೆ; ಉಳಿದ: ಮಿಕ್ಕ; ಕಾಲಾಳು: ಸೈನ್ಯ;

ಪದವಿಂಗಡಣೆ:
ಮುತ್ತಿದ್+ಅರಿಬಲ+ ಜಾಲವನು +ನಭಕ್
ಒತ್ತಿ +ದಿವ್ಯಾಸ್ತ್ರದಲಿ +ಸೀಳಿದನ್
ಎತ್ತ +ಮುರಿದ್+ಓಡಿದರೆ+ ರಥವನು +ಹರಿಸಿ +ಬೇಗದಲಿ
ಒತ್ತಿ +ಹರಿತಹ +ರಥ+ತುರಂಗಮ
ಮುತ್ತಿದ್+ಇಭ+ಸಂಘಾತವನು +ನೃಪನ್
ಒತ್ತಿ +ಕಡಿದನು +ಹಯವ +ಗಜ+ರಥವ್+ಉಳಿದ +ಕಾಲಾಳ

ಅಚ್ಚರಿ:
(೧) ಇಭ, ಗಜ – ಸಮನಾರ್ಥಕ ಪದ
(೨) ಒತ್ತಿ – ೨,೪, ೬ ಸಾಲಿನ ಮೊದಲ ಪದ