ಪದ್ಯ ೩೨: ದ್ರೋಣನ ಮೇಲೆ ಹೇಗೆ ಆಕ್ರಮಣವಾಯಿತು?

ಮೇಲೆ ಬಿದ್ದುದು ಮುಳಿಸಿನಲಿ ಪಾಂ
ಚಾಲರಾಯನ ಥಟ್ಟು ನಿಶಿತ ಶ
ರಾಳಿಯಲಿ ಹೂಳಿದನು ಧೃಷ್ಟದ್ಯುಮ್ನನಂಬರವ
ಬಾಲಕರಲೇ ಖಡ್ಗಧಾರೆಯ
ಮೇಲೆ ಮೋಹಿದ ಮಧುವ ಸವಿಯಲಿ
ನಾಲಗೆಯಲಿವರೊಲ್ಲರೆಂದನು ನಗುತ ಕಲಿದ್ರೋಣ (ದ್ರೋಣ ಪರ್ವ, ೧೮ ಸಂಧಿ, ೩೨ ಪದ್ಯ)

ತಾತ್ಪರ್ಯ:
ಪಾಂಚಾಲ ಸೈನ್ಯವು ದ್ರೋಣನ ಮೇಲೆ ಹಲ್ಲೆ ಮಾಡಿತು, ಧೃಷ್ಟದ್ಯುಮ್ನನು ಆಕಾಶ ತುಂಬುವಂತೆ ಬಾಣಗಳನ್ನು ಬಿಟ್ಟನು. ದ್ರೋಣನು ಎಷ್ಟೇ ಆಗಲಿ, ಇವರು ಬಾಲಕರು, ಖಡ್ಗದ ಅಲಗಿಗೆ ಹಚ್ಚಿದ ಜೇನುತುಪ್ಪವನ್ನು ನಾಲಗೆಯಲ್ಲಿ ನೆಕ್ಕಲಿ, ಇವರು ಸುಮ್ಮನಿರುವವರಲ್ಲ ಎಂದನು.

ಅರ್ಥ:
ಬಿದ್ದು: ಬೀಳು, ಕುಸಿ; ಮುಳಿಸು: ಕೋಪ; ರಾಯ: ರಾಜ; ಥಟ್ಟು: ಗುಂಪು; ನಿಶಿತ: ಹರಿತವಾದುದು; ಶರಾಳಿ: ಬಾಣಗಳ ಗುಂಪು; ಹೂಳು: ಹೂತು ಹಾಕು; ಅಂಬರ: ಆಕಾಶ; ಬಾಲಕ: ಮಗು; ಖಡ್ಗ: ಕತ್ತಿ; ಧಾರೆ: ಮಳೆ; ಮೋಹ: ಮೈ ಮರೆಯುವಿಕೆ ಎಚ್ಚರ ತಪ್ಪುವಿಕೆ; ಮಧು: ಜೇನು; ಸವಿ: ಸಿಹಿ; ನಾಲಗೆ: ಜಿಹ್ವೆ; ಒಲ್ಲೆ: ಬೇಡ; ನಗು: ಹರ್ಷ; ಕಲಿ: ಶೂರ;

ಪದವಿಂಗಡಣೆ:
ಮೇಲೆ +ಬಿದ್ದುದು +ಮುಳಿಸಿನಲಿ +ಪಾಂ
ಚಾಲರಾಯನ +ಥಟ್ಟು +ನಿಶಿತ +ಶ
ರಾಳಿಯಲಿ +ಹೂಳಿದನು +ಧೃಷ್ಟದ್ಯುಮ್ನನ್+ಅಂಬರವ
ಬಾಲಕರಲೇ+ ಖಡ್ಗಧಾರೆಯ
ಮೇಲೆ +ಮೋಹಿದ +ಮಧುವ +ಸವಿಯಲಿ
ನಾಲಗೆಯಲ್+ಇವರ್+ಒಲ್ಲರೆಂದನು +ನಗುತ +ಕಲಿದ್ರೋಣ

ಅಚ್ಚರಿ:
(೧) ರೂಪಕದ ಪ್ರಯೋಗ – ಬಾಲಕರಲೇ ಖಡ್ಗಧಾರೆಯ ಮೇಲೆ ಮೋಹಿದ ಮಧುವ ಸವಿಯಲಿ ನಾಲಗೆಯಲಿವರೊಲ್ಲರೆಂದನು

ಪದ್ಯ ೫೦: ಘಟೋತ್ಕಚನು ಹೇಗೆ ಯುದ್ದಕ್ಕೆ ಧುಮುಕಿದನು?

ಕೌರವನ ತಳತಂತ್ರ ಕಟಕಾ
ಚಾರಿಯನ ಕಾಹಿನಲಿ ರಿಪುಪರಿ
ವಾರ ನಿಂದುದು ಭೀಮಸೇನನ ಸುತನ ಬಳಸಿನಲಿ
ಆರಿದನು ಜಗ ನಡುಗೆ ಬೊಬ್ಬೆಯ
ಭಾರದಲಿ ವೈರಿಗಳ ಬಲಸಂ
ಹಾರ ರುದ್ರನು ಕಲಿಘಟೋತ್ಕಚ ಹೊಕ್ಕನಾಹವವ (ದ್ರೋಣ ಪರ್ವ, ೧೫ ಸಂಧಿ, ೫೦ ಪದ್ಯ)

ತಾತ್ಪರ್ಯ:
ದ್ರೋಣನ ರಕ್ಷಣೆಯಲ್ಲಿ ಕೌರವ ಸೈನ್ಯವೂ, ಘಟೋತ್ಕಚನ ಆಶ್ರಯದಲ್ಲಿ ಪಾಂಡವರ ಸೈನ್ಯವೂ ಹೋರಾಡಿದವು. ಘಟೋತ್ಕದನು ಜಗತ್ತು ನಡುಗುವಂತೆ ಬೊಬ್ಬಿರಿದನು. ವೈರಿ ಸೈನ್ಯ ಸಂಹಾರ ಮಾಡಲು ರುದ್ರನಮ್ತೆ ಯುದ್ಧಕ್ಕಿಳಿದನು.

ಅರ್ಥ:
ತಳತಂತ್ರ: ಕೈಕೆಳಗಿನ ಸೈನ್ಯ; ಕಟಕ: ಗುಂಪು, ಸೈನ್ಯ; ಕಟಕಾಚಾರಿ: ಸೇನಾಧಿಪತಿ; ಕಾಹಿ: ರಕ್ಷಣೆ; ರಿಪು: ವೈರಿ; ಪರಿವಾರ: ಸಂಬಂಧಿಕ; ಸುತ: ಮಗ; ಬಳಸು: ಆವರಿಸು; ಜಗ: ಪ್ರಪಂಚ; ನಡುಗು: ಅಲುಗಾಡಿಸು; ಬೊಬ್ಬೆ: ಗರ್ಜನೆ; ಭಾರ: ಹೊರೆ; ವೈರಿ: ಶತ್ರು; ಬಲ: ಸೈನ್ಯ; ಸಂಹಾರ: ನಾಶ, ಕೊನೆ; ರುದ್ರ: ಈಶ್ವರನ ರೂಪ; ಕಲಿ: ಶೂರ; ಹೊಕ್ಕು: ಸೇರು; ಆಹವ: ಯುದ್ಧ;

ಪದವಿಂಗಡಣೆ:
ಕೌರವನ +ತಳತಂತ್ರ +ಕಟಕಾ
ಚಾರಿಯನ +ಕಾಹಿನಲಿ +ರಿಪು+ಪರಿ
ವಾರ +ನಿಂದುದು +ಭೀಮಸೇನನ +ಸುತನ +ಬಳಸಿನಲಿ
ಆರಿದನು +ಜಗ +ನಡುಗೆ +ಬೊಬ್ಬೆಯ
ಭಾರದಲಿ +ವೈರಿಗಳ +ಬಲ+ಸಂ
ಹಾರ +ರುದ್ರನು +ಕಲಿ+ಘಟೋತ್ಕಚ +ಹೊಕ್ಕನ್+ಆಹವವ

ಅಚ್ಚರಿ:
(೧) ದ್ರೋಣರನ್ನು ಕಟಕಾಚಾರಿ ಎಂದು ಕರೆದಿರುವುದು
(೨) ರಿಪು, ವೈರಿ – ಸಮಾನಾರ್ಥಕ ಪದ

ಪದ್ಯ ೫೨: ಕರ್ಣನೇಕೆ ಸಂನ್ಯಾಸ ತ್ಯಾಗ ಮಾಡುವೆನೆಂದು ಹೇಳಿದನು?

ಎಲವೆಲವೊ ಕಲಿಯಾಗು ಮಾರುತಿ
ಗೆಲಿದನೆಂದಿರಬೇಡ ಸೋಲದ
ಗೆಲವಿನುದಯ ಮುಹೂರ್ತವಶ ಮೈಗುಡದೆ ಕಾದುವುದು
ಛಲವದುಳ್ಳಡೆ ಸಾಕು ನೀನೀ
ಹಲಗೆಯಲಿ ಹೊಕ್ಕಾಡಿ ಮರಳಿದು
ತಲೆವೆರಸಿ ನೀ ಹೋದಡಸ್ತ್ರತ್ಯಾಗ ತನಗೆಂದ (ದ್ರೋಣ ಪರ್ವ, ೧೩ ಸಂಧಿ, ೫೨ ಪದ್ಯ)

ತಾತ್ಪರ್ಯ:
ಎಲವೋ ಎಲವೋ ಭೀಮ, ಕಲಿಯಾಗು, ಗೆದ್ದೆನೆಂದು ಸುಮ್ಮನಿರಬೇಡ. ಯುದ್ಧದಲ್ಲಿ ಗೆಲುವು ಸೋಲುಗಳು ಆ ಮುಹೂರ್ತದ ಲಕ್ಷಣ. ಛಲದಿಂದ ನಿನ್ನ ದೇಹವನ್ನು ಒಡ್ಡದೆ ಯುದ್ಧಮಾಡಿದರೆ ಸಾಕು, ಈ ಬಾರಿ ನೀನು ಯುದ್ಧದಲ್ಲಿ ನೀನು ತಲೆಯೊಡನೆ ಹಿಂದಿರುಗಿದ್ದೇ ಆದರೆ ನಾನು ಅಸ್ತ್ರ ಸಂನ್ಯಾಸ ಮಾಡುತ್ತೇನೆ ಎಂದು ಕರ್ಣನು ಹೇಳಿದನು.

ಅರ್ಥ:
ಕಲಿ: ಶೂರ; ಮಾರುತಿ: ಭೀಮ; ಗೆಲಿ: ಜಯಿಸು; ಸೋಲು: ಪರಾಭವ; ಉದಯ: ಹುಟ್ತು; ಮುಹೂರ್ತ: ಒಳ್ಳೆಯ ಸಮಯ; ಮೈಗುಡು: ದೃಢವಾಗು; ಕಾದು: ಹೋರಾಡು; ಛಲ: ದೃಢ ನಿಶ್ಚಯ; ಹಲಗೆ: ಒಂದು ಬಗೆಯ ಗುರಾಣಿ; ಹೊಕ್ಕು: ಸೇರು; ಮರಳು: ಹಿಂದಿರುಗು; ತಲೆ: ಶಿರ; ಹೋದ: ತೆರಳು; ಅಸ್ತ್ರ: ಶಸ್ತ್ರ, ಆಯುಧ; ತ್ಯಾಗ: ತೊರೆ;

ಪದವಿಂಗಡಣೆ:
ಎಲವ್+ಎಲವೊ +ಕಲಿಯಾಗು +ಮಾರುತಿ
ಗೆಲಿದನ್+ಎಂದಿರಬೇಡ +ಸೋಲದ
ಗೆಲವಿನ್+ಉದಯ +ಮುಹೂರ್ತವಶ +ಮೈಗುಡದೆ +ಕಾದುವುದು
ಛಲವದುಳ್ಳಡೆ ಸಾಕು ನೀನ್+ಈ
ಹಲಗೆಯಲಿ +ಹೊಕ್ಕಾಡಿ +ಮರಳಿದು
ತಲೆ+ವೆರಸಿ+ ನೀ +ಹೋದಡ್+ಅಸ್ತ್ರತ್ಯಾಗ +ತನಗೆಂದ

ಅಚ್ಚರಿ:
(೧) ಕರ್ಣನ ಧೀರತನದ ಮಾತು – ಸೋಲದ ಗೆಲವಿನುದಯ ಮುಹೂರ್ತವಶ ಮೈಗುಡದೆ ಕಾದುವುದು

ಪದ್ಯ ೩೨: ಭೀಮನು ವಿಶೋಕನಿಗೆ ಯಾರ ಪರಾಕ್ರಮವನ್ನು ನೋಡಲು ಹೇಳಿದನು?

ಫಡ ತೊಲಗು ಪವಮಾನಸುತ ನಿ
ನ್ನೊಡಲನೀ ಶಾಕಿನಿಯ ಬಳಗಕೆ
ಬಡಿಸುವೆನು ಬದುಕುವರೆ ಹಿಮ್ಮೆಟ್ಟೆನುತ ಬಳಿಸಲಿಸೆ
ಕಡುನುಡಿಗೆ ಮೆಚ್ಚಿದನು ಹಿಂದಕೆ
ಮಿಡುಕುವವನೇ ಕರ್ಣನೀತನ
ಕಡುಹ ನೋಡು ವಿಶೋಕ ಎಂದನು ನಗುತ ಕಲಿಭೀಮ (ದ್ರೋಣ ಪರ್ವ, ೧೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ಕರ್ಣನು ಮಾತನಾಡುತ್ತಾ, ಭೀಮ ಸುಮ್ಮನೇ ತೊಲಗು, ನಿನ್ನ ದೇಹವನ್ನು ಶಾಕಿನಿಯರ ಬಳಗಕ್ಕೆ ತಿನ್ನಿಸುತ್ತೇನೆ. ಬದುಕಲು ಬಯಸಿದರೆ ಹಿಮ್ಮೆಟ್ಟು ಎನ್ನುತ್ತಾ ಭೀಮನ ಬಳಿಗೆ ಬರಲು, ಭೀಮನು ಮೆಚ್ಚಿ, ವಿಶೋಕ ಕರ್ಣನ ಪರಾಕ್ರಮವನ್ನು ನೋಡು ಎಂದು ನಗುತ್ತಾ ಹೇಳಿದನು.

ಅರ್ಥ:
ಫಡ: ತಿರಸ್ಕಾರದ ಮಾತು; ಪವಮಾನ: ವಾಯು; ಸುತ: ಪುತ್ರ; ಒಡಲು: ದೇಹ; ಶಾಕಿನಿ: ಒಂದು ಕ್ಷುದ್ರ ದೇವತೆ; ಬಳಗ: ಗುಂಪು; ಬಡಿಸು: ನೀಡು; ಬದುಕು: ಜೀವಿಸು; ಹಿಮ್ಮೆಟ್ಟು: ಹಿಂದೆ ಸರಿ; ಬಳಿ: ಹತ್ತಿರ; ಸಲಿಸು: ಪೂರೈಸು; ಕಡು: ಖಡು, ನಿರ್ಧಿಷ್ಟ; ನುಡಿ: ಮಾತು; ಮೆಚ್ಚು: ಒಲುಮೆ, ಪ್ರೀತಿ, ಇಷ್ಟ; ಹಿಂದಕೆ: ಹಿಂಭಾಗ; ಮಿಡುಕು: ಅಲುಗಾಟ, ಚಲನೆ; ಕಡುಹು: ಸಾಹಸ; ನೋಡು: ವೀಕ್ಷಿಸು; ನಗು: ಹರ್ಷಿಸು; ಕಲಿ: ಶೂರ;

ಪದವಿಂಗಡಣೆ:
ಫಡ +ತೊಲಗು +ಪವಮಾನಸುತ +ನಿ
ನ್ನೊಡಲನ್+ಈ+ ಶಾಕಿನಿಯ +ಬಳಗಕೆ
ಬಡಿಸುವೆನು +ಬದುಕುವರೆ +ಹಿಮ್ಮೆಟ್ಟೆನುತ +ಬಳಿಸಲಿಸೆ
ಕಡುನುಡಿಗೆ +ಮೆಚ್ಚಿದನು +ಹಿಂದಕೆ
ಮಿಡುಕುವವನೇ+ ಕರ್ಣನ್+ಈತನ
ಕಡುಹ +ನೋಡು +ವಿಶೋಕ +ಎಂದನು +ನಗುತ+ ಕಲಿಭೀಮ

ಅಚ್ಚರಿ:
(೧) ಭೀಮನನ್ನು ಬಯ್ಯುವ ಪರಿ – ಫಡ ತೊಲಗು ಪವಮಾನಸುತ ನಿನ್ನೊಡಲನೀ ಶಾಕಿನಿಯ ಬಳಗಕೆ
ಬಡಿಸುವೆನು

ಪದ್ಯ ೩: ಅರ್ಜುನನು ತನ್ನ ಆಯುಧಗಳನ್ನು ಯಾವಾಗ ಪೂಜಿಸಿದನು?

ಒಡನೆ ಗಜರವ ವಾದ್ಯದಲಿ ಕೆಂ
ಪಡರಿದೋಗರಸಹಿತ ಭೂತಕೆ
ಬಡಿಸಿದರು ಮಾಂತ್ರಿಕರು ಬಲಿಗೆದರಿದರು ದೆಸೆದೆಸೆಗೆ
ತೊಡವು ವಸನಾದಿಗಳಲೊಪ್ಪಂ
ಬಡುವ ಬಲಿಯನು ಹರಿಯೊಳರ್ಪಿಸಿ
ನಡುವಿರುಳು ಕಲಿಪಾರ್ಥನರ್ಚಿಸಿದನು ನಿಜಾಯುಧವ (ದ್ರೋಣ ಪರ್ವ, ೯ ಸಂಧಿ, ೩ ಪದ್ಯ)

ತಾತ್ಪರ್ಯ:
ವಾದ್ಯಗಳು ಮೊಳಗುತ್ತಿರಲು, ಕೆಂಪು ಬಣ್ಣದ ಅನ್ನದಿಂದ ಮಾಂತ್ರಿಕರು ಭೂತಗಳಿಗೆ ದಿಗ್ಬಲೆಯನ್ನು ಕೊಟ್ಟರು. ಆಹಾರ ವಸ್ತ್ರಗಳಿಂದ ಕೂಡಿದ ಬಲಿಯನ್ನು ಶ್ರೀಕೃಷ್ಣನಿಗರ್ಪಿಸಿ ನಡುರಾತ್ರಿಯಲ್ಲಿ ಅರ್ಜುನನು ತನ್ನ ಆಯುಧಗಳನ್ನು ಪೂಜಿಸಿದನು.

ಅರ್ಥ:
ಒಡನೆ: ಕೂಡಲೆ; ಗಜ: ಆನೆ, ದೊಡ್ಡ; ರವ: ಧ್ವನಿ; ವಾದ್ಯ: ಸಂಗೀತದ ಸಾಧನ; ಕೆಂಪು: ರಕ್ತವರ್ಣ; ಓಗರ: ಊಟ; ಸಹಿತ: ಜೊತೆ; ಭೂತ: ದೆವ್ವ; ಬಡಿಸು: ಉಣಬಡಿಸು; ಮಾಂತ್ರಿಕ: ಮಾಟಮಾಡುವವ; ಬಲಿ: ಕಾಣಿಕೆ; ಕೆದರು: ಹರಡು; ದೆಸೆ: ದಿಕ್ಕು; ತೊಡವು: ಆಭರಣ, ತೊಡಿಗೆ; ವಸನ: ದೇಹ; ವಸ್ತ್ರ, ಉಡುಗೆ; ಒಪ್ಪು: ಸಮ್ಮತಿಸು; ಹರಿ: ವಿಷ್ಣು; ಅರ್ಪಿಸು: ನೀಡು; ನಡುವಿರುಳು: ನಡುರಾತ್ರಿ; ಕಲಿ: ಶೂರ; ಅರ್ಚಿಸು: ಪೂಜಿಸು; ಆಯುಧ: ಶಸ್ತ್ರ;

ಪದವಿಂಗಡಣೆ:
ಒಡನೆ +ಗಜರವ +ವಾದ್ಯದಲಿ +ಕೆಂಪ್
ಅಡರಿದ್+ಓಗರ+ಸಹಿತ +ಭೂತಕೆ
ಬಡಿಸಿದರು +ಮಾಂತ್ರಿಕರು +ಬಲಿಗೆದರಿದರು +ದೆಸೆದೆಸೆಗೆ
ತೊಡವು +ವಸನಾದಿಗಳಲ್+ಒಪ್ಪಂ
ಬಡುವ +ಬಲಿಯನು +ಹರಿಯೊಳ್+ಅರ್ಪಿಸಿ
ನಡುವಿರುಳು +ಕಲಿ+ಪಾರ್ಥನ್+ಅರ್ಚಿಸಿದನು +ನಿಜಾಯುಧವ

ಅಚ್ಚರಿ:
(೧) ದೊಡ್ಡ ಶಬ್ದ ಎಂದು ಹೇಳಲು – ಗಜರವ ಪದದ ಬಳಕೆ

ಪದ್ಯ ೩೮: ದುರ್ಯೋಧನನು ದ್ರೋಣರನ್ನು ಹೇಗೆ ಹಂಗಿಸಿದನು?

ವೀರರಂಗವನೆತ್ತ ಬಲ್ಲರು
ಹಾರುವರು ಬೆಳದಿಂಗಳಿನ ಬಿರು
ಸಾರ ಸುಡುವುದು ಕೈದು ಹಿಡಿದರೆ ಕಲಿಗಳೇ ದ್ವಿಜರು
ವೈರಿಭಟನಿವ ಮಗುವಲಾ ಮನ
ವಾರೆ ಕಾದಲು ಲಕ್ಷ್ಯವಿಲ್ಲೀ
ಯೂರುಗರ ಬೈದೇನು ಫಲವೆಂದರಸ ಹೊರವಂಟ (ದ್ರೋಣ ಪರ್ವ, ೫ ಸಂಧಿ, ೩೮ ಪದ್ಯ)

ತಾತ್ಪರ್ಯ:
ವೀರರ ರೀತಿಯನ್ನು ಈ ಬ್ರಾಹ್ಮಣರು ಹೇಗೆತಾನೆ ಬಲ್ಲರು? ಬೆಳದಿಂಗಳ ಬಿರುಸು ಯಾರನ್ನು ಸುಟ್ಟೀತು? ಶಸ್ತ್ರವನ್ನು ಹಿಡಿದ ಮಾತ್ರಕ್ಕೆ ಬ್ರಾಹ್ಮಣರು ವೀರರಾದಾರೇ? ಶತ್ರುವು ಬಾಲಕ, ಮನಸಾರೆ ಯುದ್ಧಮಾಡಲು ಆಗುತ್ತಿಲ್ಲ, ಈ ಮೂಢರನ್ನು ಬೈದು ಫಲವೇನೆಂದು ಹೇಳಿ ಕೌರವನು ಹೊರ ನಡೆದನು.

ಅರ್ಥ:
ವೀರ: ಶೂರ; ಅಂಗ: ರೀತಿ; ಬಲ್ಲರು: ತಿಳಿ; ಹಾರು: ಬ್ರಾಹ್ಮಣ; ಬೆಳದಿಂಗಳು: ಹುಣ್ಣಿಮೆ; ಬಿರುಸು: ಒರಟು, ಕಠಿಣ; ಸುಡು: ದಹಿಸು; ಕೈದು: ಆಯುಧ; ಹಿಡಿ: ಗ್ರಹಿಸು; ಕಲಿ: ಶೂರ; ದ್ವಿಜ: ಬ್ರಾಹ್ಮಣ; ವೈರಿ: ಶತ್ರು; ಭಟ: ಸೈನಿಕ; ಮಗು: ಕುಮಾರ, ಚಿಕ್ಕವ; ಮನ: ಮನಸ್ಸು; ಕಾದು: ಹೋರಾಡು; ಲಕ್ಷ್ಯ: ಗಮನ; ಊರುಗ: ದಡ್ಡ, ಮೂಢ; ಬೈದು: ಜರಿದು; ಫಲ: ಪ್ರಯೋಜನ; ಅರಸ: ರಾಜ; ಹೊರವಂಟ: ತೆರಳು;

ಪದವಿಂಗಡಣೆ:
ವೀರಗ್+ಅಂಗವನ್+ಎತ್ತ +ಬಲ್ಲರು
ಹಾರುವರು +ಬೆಳದಿಂಗಳಿನ+ ಬಿರು
ಸಾರ +ಸುಡುವುದು +ಕೈದು +ಹಿಡಿದರೆ +ಕಲಿಗಳೇ+ ದ್ವಿಜರು
ವೈರಿಭಟನ್+ಇವ+ ಮಗುವಲಾ +ಮನ
ವಾರೆ+ ಕಾದಲು +ಲಕ್ಷ್ಯವಿಲ್+ಈ
ಊರುಗರ +ಬೈದೇನು +ಫಲವೆಂದ್+ಅರಸ +ಹೊರವಂಟ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬೆಳದಿಂಗಳಿನ ಬಿರುಸಾರ ಸುಡುವುದು; ಕೈದು ಹಿಡಿದರೆ ಕಲಿಗಳೇ ದ್ವಿಜರು

ಪದ್ಯ ೨೫: ಭೀಷ್ಮರು ಕರ್ಣನಿಗೆ ಏನೆಂದು ಹೇಳಿದರು?

ತನುಜ ತಪ್ಪೇನದಕೆ ಕಾಳೆಗ
ವೆನಗೆ ತನಗೆನಬೇಕು ವೀರರು
ಮನದ ಕಲಿತನದುಬ್ಬುಗೊಬ್ಬಿನಲೆಂಬರಿದಕೇನು
ಮನದೊಳಗೆ ಖತಿಯಿಲ್ಲ ದುರಿಯೋ
ಧನ ನೃಪತಿಯೋಪಾದಿ ನೀ ಬೇ
ರೆನಗೆ ಲೋಗನೆ ಕಂದ ಕದನವ ಜಯಿಸು ಹೋಗೆಂದ (ದ್ರೋಣ ಪರ್ವ, ೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ಭೀಷ್ಮನು ಕರ್ಣನನ್ನು ಪ್ರೀತಿಯಿಂದ ನೋಡುತ್ತಾ, ಮಗನೇ ನೀನು ಆಡಿದುದರಲ್ಲಿ ತಪ್ಪೇನೂ ಇಲ್ಲ, ಕಾಳಗ ನನ್ನದು ತನ್ನದು ಎಂದು ವೀರರು ಮುಂದಾಗಬೇಕು, ವೀರರಾದವರು ಪರಾಕ್ರಮದ ಆಧಿಕ್ಯದಿಂದ ಕೆಲವು ಮೀರಿದ ಮಾತನಾದುತ್ತಾರೆ, ಅದರಲ್ಲೇನು ತಪ್ಪಿಲ್ಲ. ನನಗೆ ನಿನ್ನ ಮೇಲೆ ಕೋಪವಿಲ್ಲ. ನನಗೆ ನೀನು ದುರ್ಯೋಧನನಿದ್ದಂತೆ, ನೀನೇನು ಯಾರೋ ಬೇರೆಯವನಲ್ಲ, ಮಗೂ ಯುದ್ಧದಲ್ಲಿ ಜಯಸಿ, ಹೊರಡು ಎಂದು ಭೀಷ್ಮರು ಹೇಳಿದರು.

ಅರ್ಥ:
ತನುಜ: ಮಗ; ತಪ್ಪು: ಸರಿಯಲ್ಲದ; ಕಾಳೆಗ: ಯುದ್ಧ; ವೀರ: ಶೂರ, ಪರಾಕ್ರಮಿ; ಮನ: ಮನಸ್ಸು; ಕಲಿ: ಶೂರ; ಉಬ್ಬುಗೆ: ಹೆಚ್ಚಾಗು; ಮನ: ಮನಸ್ಸು; ಖತಿ: ಕೋಪ; ನೃಪ: ರಾಜ; ಲೋಗ: ಮನುಷ್ಯ; ಕಂದ: ಮಗು; ಕದನ: ಯುದ್ಧ; ಜಯಿಸು: ಗೆಲ್ಲು; ಹೋಗು: ತೆರಳು;

ಪದವಿಂಗಡಣೆ:
ತನುಜ +ತಪ್ಪೇನ್+ಅದಕೆ+ ಕಾಳೆಗವ್
ಎನಗೆ +ತನಗ್+ಎನಬೇಕು +ವೀರರು
ಮನದ +ಕಲಿತನದ್+ಉಬ್ಬುಗೊಬ್ಬಿನಲ್+ಎಂಬರ್+ಇದಕೇನು
ಮನದೊಳಗೆ +ಖತಿಯಿಲ್ಲ +ದುರಿಯೋ
ಧನ+ ನೃಪತಿಯೋಪಾದಿ +ನೀ +ಬೇರ್
ಎನಗೆ+ ಲೋಗನೆ+ ಕಂದ +ಕದನವ+ ಜಯಿಸು +ಹೋಗೆಂದ

ಅಚ್ಚರಿ:
(೧) ಎನಗೆ ತನಗೆ; ಉಬ್ಬುಗೊಬ್ಬು – ಜೋಡಿ ಪದಗಳು

ಪದ್ಯ ೩೮: ಅಶ್ವತ್ಥಾಮನು ಸೈನಿಕರಿಗೆ ಏನು ಹೇಳಿದ?

ತ್ರಾಣ ಕೋಮಲವಾಯ್ತು ತೆಗೆಯಲಿ
ದ್ರೋಣನಾವೆಡೆ ಪಾಯದಳ ಬಿಡು
ಹೂಣಿಗರ ಬರಹೇಳು ಬಾಣದ ಬಂಡಿ ಸಾವಿರವ
ಶೋಣಿತದ ಸಾಗರದಿನವನಿಯ
ಕಾಣೆ ಹೂಳಲಿ ಪಾದರಜದಲಿ
ಕೇಣಿಗೊಂಡನು ವೈರಿಸೇನೆಯನಮಮ ಕಲಿ ಪಾರ್ಥ (ಭೀಷ್ಮ ಪರ್ವ, ೮ ಸಂಧಿ, ೩೮ ಪದ್ಯ)

ತಾತ್ಪರ್ಯ:
ದ್ರೋಣನು ಆಯಾಸಗೊಂಡಿರಲು, ಅಶ್ವತ್ಥಾಮನು ತಂದೆಯು ತ್ರಾನಗುಂದಿದ್ದಾನೆ, ಅವನನ್ನು ತೆಗೀಸಿ, ಕಾಲಾಳುಗಳನ್ನು ಮುಂದೆ ಬಿಡಿ, ಸಾವಿರ ಬಾಣದ ಬಂಡಿಗಳನ್ನೂ, ವೀರರನ್ನೂ ಬರಹೇಳಿ, ರಕ್ತ ಸಾಗರದಲ್ಲಿ ಭೂಮಿಯೇ ಕಾಣುತ್ತಿಲ್ಲ, ನಮ್ಮ ಸೈನ್ಯದ ಕಾಲು ತುಳಿತದಿಂದೆದ್ದ ಧೂಳು ಆ ರಕ್ತವನ್ನು ಕುಡಿಯಲಿ, ಅಬ್ಬ, ಅರ್ಜುನನು ಸಂಹಾರ ಮಾಡಲು ಶತ್ರು ಸೈನ್ಯದ ಗೆಳೆಯರನ್ನು ತೆಗೆದುಕೊಂಡಿದ್ದಾನೆ ಎಂದು ನುಡಿದನು.

ಅರ್ಥ:
ತ್ರಾಣ: ಕಾಪು, ರಕ್ಷಣೆ; ಕೋಮಲ: ಮೃದು; ತೆಗೆ: ಹೊರತರು; ಪಾಯದಳ: ಸೈನಿಕ; ಬಿಡು: ತೊರೆ; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ; ಬರಹೇಳು: ಆಗಮಿಸು; ಬಾಣ: ಅಂಬು; ಬಂಡಿ: ರಥ; ಸಾವಿರ: ಸಹಸ್ರ; ಶೋಣಿತ: ರಕ್ತ; ಸಾಗರ: ಸಮುದ್ರ; ಅವನಿ: ಭೂಮಿ; ಕಾಣೆ: ತೋರದು; ಹೂಳು: ಮುಚ್ಚು; ಪಾದ: ಚರಣ; ರಜ: ಧೂಳು; ಕೇಣಿ: ಮೈತ್ರಿ, ಗೆಳೆತನ; ವೈರಿ: ಶತ್ರು; ಸೇನೆ: ಸೈನ್ಯ; ಅಮಮ: ಅಬ್ಬಬ್ಬ; ಕಲಿ: ಶೂರ;

ಪದವಿಂಗಡಣೆ:
ತ್ರಾಣ +ಕೋಮಲವಾಯ್ತು +ತೆಗೆಯಲಿ
ದ್ರೋಣನ್+ಆವೆಡೆ +ಪಾಯದಳ +ಬಿಡು
ಹೂಣಿಗರ +ಬರಹೇಳು +ಬಾಣದ +ಬಂಡಿ +ಸಾವಿರವ
ಶೋಣಿತದ +ಸಾಗರದಿನ್+ಅವನಿಯ
ಕಾಣೆ +ಹೂಳಲಿ +ಪಾದ+ರಜದಲಿ
ಕೇಣಿ+ಕೊಂಡನು +ವೈರಿ+ಸೇನೆಯನ್+ಅಮಮ +ಕಲಿ +ಪಾರ್ಥ

ಅಚ್ಚರಿ:
(೧) ಯುದ್ಧದ ತೀವ್ರತೆ – ಶೋಣಿತದ ಸಾಗರದಿನವನಿಯ ಕಾಣೆ

ಪದ್ಯ ೩೮: ಯಾರು ನಿಜವಾದ ಶೂರರು?

ತರುಣಿಯರ ಮುಂದಸ್ತ್ರ ಶಸ್ತ್ರವ
ತಿರುಹಬಹುದುಬ್ಬೇಳಬಹುದ
ಬ್ಬರಿಸಬಹುದೆನಗಾರು ಸರಿ ನಾ ಧೀರನೆನಬಹುದು
ಕರಿತುರಂಗದ ಬಹಳಶಸ್ತ್ರೋ
ತ್ಕರ ಕೃಪಾಣದ ಹರಹಿನಲಿ ಮೊಗ
ದಿರುಹದಿಹ ಕಲಿಯಾರು ಕುಂತೀಸೂನು ಕೇಳೆಂದ (ಭೀಷ್ಮ ಪರ್ವ, ೩ ಸಂಧಿ, ೩೮ ಪದ್ಯ)

ತಾತ್ಪರ್ಯ:
ಅರ್ಜುನಾ ಹೆಂಗಸರ ಮುಂದೆ ಶಸ್ತ್ರಗಳ ವರಸೆಯನ್ನು ತೋರಿಸಿ ಜಂಬಕೊಚ್ಚಿಕೊಳ್ಳಬಹುದು, ನಾನು ಧೀರ ಎಂದು ಹೊಗಳಿಕೊಳ್ಳಬಹುದು, ಆದರೆ ಎದುರು ನಿಂತ ಆನೆ ಕುದುರೆಗಳ ಸೈನ್ಯ, ಶಸ್ತ್ರ ಕತ್ತಿಗಳನ್ನು ಕಂಡು ಹಿಂಜರಿಯದಿರುವವರಾರು ಶೂರನೇ ಅರ್ಜುನ ಎಂದು ಕೃಷ್ಣನು ಹೇಳಿದನು.

ಅರ್ಥ:
ತರುಣಿ: ಹೆಣ್ಣು; ಮುಂದೆ: ಎದುರು; ಅಸ್ತ್ರ: ಆಯುಧ; ತಿರುಹು: ತಿರುಗಿಸು, ವರಸೆಗಳು; ಉಬ್ಬೆಳು: ಜಂಬಕೊಚ್ಚಿಕೋ; ಅಬ್ಬರಿಸು: ಕೂಗು; ಸರಿ: ಸಮಾನ; ಧೀರ: ಶೂರ; ಕರಿ: ಆನೆ; ತುರಂಗ: ಕುದುರೆ; ಬಹಳ: ತುಂಬ; ಶಸ್ತ್ರ: ಆಯುಧ; ಉತ್ಕರ: ಸಮೂಹ; ಕೃಪಾಣ: ಕತ್ತಿ, ಖಡ್ಗ; ಹರಹು: ವಿಸ್ತಾರ, ವೈಶಾಲ್ಯ; ಮೊಗ: ಮುಖ; ತಿರುಹು: ತಿರುಗಿಸು, ಹಿಂದೆ ಸರಿ; ಕಲಿ: ಶೂರ; ಸೂನು: ಮಗ; ಕೇಳು: ಆಲಿಸು;

ಪದವಿಂಗಡಣೆ:
ತರುಣಿಯರ +ಮುಂದ್+ಅಸ್ತ್ರ+ ಶಸ್ತ್ರವ
ತಿರುಹಬಹುದ್+ಉಬ್ಬೇಳಬಹುದ್
ಅಬ್ಬರಿಸಬಹುದ್+ಎನಗಾರು+ ಸರಿ+ ನಾ +ಧೀರನೆನಬಹುದು
ಕರಿ+ತುರಂಗದ +ಬಹಳ+ಶಸ್ತ್ರೋ
ತ್ಕರ +ಕೃಪಾಣದ+ ಹರಹಿನಲಿ +ಮೊಗ
ತಿರುಹದಿಹ+ ಕಲಿಯಾರು +ಕುಂತೀ+ಸೂನು +ಕೇಳೆಂದ

ಅಚ್ಚರಿ:
(೧) ಶೂರನೆಂದು ಸುಲಭದಿ ಹೇಳುವ ಪರಿ – ತರುಣಿಯರ ಮುಂದಸ್ತ್ರ ಶಸ್ತ್ರವತಿರುಹಬಹುದುಬ್ಬೇಳಬಹುದ
ಬ್ಬರಿಸಬಹುದೆನಗಾರು ಸರಿ ನಾ ಧೀರನೆನಬಹುದು

ಪದ್ಯ ೪೭: ಅರ್ಜುನನು ದುರ್ಯೋಧನನನ್ನು ಹೇಗೆ ಮೂದಲಿಸಿದನು?

ಚೆಲ್ಲಿ ಹೋಯಿತು ಕೆಲಕೆ ಕೆಲಬರು
ಬಿಲ್ಲ ಬಿರುಕೋಲುಗಳ ಬಿಸುಟರು
ಗಲ್ಲೆಗೆಡೆದರು ಕೆಲರು ಪಾರ್ಥನ ಕೋಲ ತೋಹಿನಲಿ
ಮೆಲ್ಲಮೆಲ್ಲನೆ ಸರಿವ ಕೌರವ
ಮಲ್ಲನನು ಕಂಡಟ್ಟಿದನು ತುರು
ಗಳ್ಳ ಹೋಗದಿರೆನುತ ಮೂದಲಿಸಿದನು ಕಲಿಪಾರ್ಥ (ವಿರಾಟ ಪರ್ವ, ೮ ಸಂಧಿ, ೪೭ ಪದ್ಯ)

ತಾತ್ಪರ್ಯ:
ಹಲವರು ಚೆಲ್ಲಾಪಿಲ್ಲಿಯಾಗಿ ಓಡಿದರು, ಇನ್ನು ಕೆಲವರು ಬಿಲ್ಲು ಬಾಣಗಳನ್ನು ಕೆಳಕ್ಕೆ ಕೈ ಬಿಟ್ಟರು. ಪಾರ್ಥನ ಬಾಣಗಳ ಗುರಿಗೆ ಹಲವರು ಒಟ್ಟೊಟ್ಟಾಗಿ ಬಿದ್ದರು. ದುರ್ಯೋಧನನು ಇಂತಹ ಸ್ಥಿತಿಯನ್ನೆದುರಿಸಲಾರದೆ ಮೆಲ್ಲನೆ ಜರಿಹೋಗಲು ಯತ್ನಿಸುವುದನ್ನು ಕಂಡು, ಅರ್ಜುನನು, ಎಲವೋ ಗೋವುಗಳ ಕಳ್ಳ, ಓಡಬೇಡ ನಿಲ್ಲು ಎಂದು ಹಂಗಿಸಿದನು.

ಅರ್ಥ:
ಚೆಲ್ಲು: ಹರಡು; ಕೆಲ: ಪಕ್ಕ; ಕೆಲಬರು: ಸ್ವಲ್ಪ ಜನ; ಬಿಲ್ಲು: ಚಾಪ; ಬಿರುಕು: ಸೀಳು; ಕೋಲು: ಬಾಣ; ಬಿಸುಟು: ಹೊರಹಾಕು; ಗಲ್ಲೆಗೆಡೆ: ರಾಶಿಯಾಗಿ ಬೀಳು; ತೋಹು: ಗುಂಪು; ಮೆಲ್ಲನೆ: ನಿಧಾನ; ಸರಿ: ಹೋಗು, ಗಮಿಸು; ಮಲ್ಲ: ಜಟ್ಟಿ; ಕಂಡು: ನೋಡು; ಅಟ್ಟು: ಬೆನ್ನುಹತ್ತಿ ಹೋಗು, ಓಡಿಸು; ತುರು: ಆಕಳು; ಕಳ್ಳ: ಚೋರ; ಹೋಗು: ತೆರಳು; ಮೂದಲಿಸು: ಹಂಗಿಸು; ಕಲಿ: ಶೂರ;

ಪದವಿಂಗಡಣೆ:
ಚೆಲ್ಲಿ +ಹೋಯಿತು +ಕೆಲಕೆ +ಕೆಲಬರು
ಬಿಲ್ಲ +ಬಿರು+ಕೋಲುಗಳ+ ಬಿಸುಟರು
ಗಲ್ಲೆಗೆಡೆದರು+ ಕೆಲರು+ ಪಾರ್ಥನ+ ಕೋಲ +ತೋಹಿನಲಿ
ಮೆಲ್ಲಮೆಲ್ಲನೆ+ ಸರಿವ +ಕೌರವ
ಮಲ್ಲನನು +ಕಂಡ್+ಅಟ್ಟಿದನು +ತುರು
ಕಳ್ಳ +ಹೋಗದಿರೆನುತ+ ಮೂದಲಿಸಿದನು+ ಕಲಿಪಾರ್ಥ

ಅಚ್ಚರಿ:
(೧) ದುರ್ಯೋಧನನನ್ನು ಕೌರವಮಲ್ಲ ಎಂದು ಕರೆದಿರುವುದು
(೨) ದುರ್ಯೋಧನನನ್ನು ಬಯ್ಯುವ ಪರಿ – ತುರುಗಳ್ಳ ಹೋಗದಿರೆನುತ ಮೂದಲಿಸಿದನು ಕಲಿಪಾರ್ಥ