ಪದ್ಯ ೫೦: ರಥದ ಸುತ್ತಲ್ಲಿದ್ದವರೇಕೆ ಆಶ್ಚರ್ಯ ಪಟ್ಟರು?

ಧ್ವಜದ ಹಲಗೆಯನೊದೆದು ಹಾಯ್ದನು
ನಿಜನಿವಾಸಕೆ ಹನುಮ ಧೂಮ
ಧ್ವಜನಮಯವಾದುದು ರಥಾಶ್ವರಥಾಮ್ಗರಾಜಿಯಲಿ
ವಿಜಯ ಭೀಮಾದಿಗಳು ಕಂಡ
ಕ್ಕಜದೊಳಾಕಸ್ಮಿಕದ ಕಿಚ್ಚಿನ
ಗಜಬಜವಿದೇನೆನುತ ನೆರೆ ಬೆಚ್ಚಿದರು ಭೀತಿಯಲಿ (ಗದಾ ಪರ್ವ, ೮ ಸಂಧಿ, ೫೦ ಪದ್ಯ)

ತಾತ್ಪರ್ಯ:
ಹನುಮಮ್ತನು ಧ್ವಜದ ಹಲಗೆಯನ್ನು ಬಿಟ್ಟು ಹಾರಿ ತನ್ನ ನೆಲೆಗೆ ಹೋದನು. ರಥಾಶ್ವ, ಗಾಲಿಗಳು ಹೊಗೆಯಿಂದ ಮುಚ್ಚಿದವು. ಅರ್ಜುನ ಭೀಮ ಮೊದಲಾದವರು ಅತಿ ಆಶ್ಚರ್ಯದಿಂದ ಇದೇನು ಬೆಂಕಿಯ ಆಕಸ್ಮಿಕ ಎಂದು ಹೆದರಿದರು.

ಅರ್ಥ:
ಧ್ವಜ: ಬಾವುಟ; ಹಲಗೆ: ಪಲಗೆ, ಮರ; ಒದೆ: ನೂಕು; ಹಾಯ್ದು: ಹಾರು; ನಿವಾಸ: ಆಲಯ; ಧೂಮ: ಹೊಗೆ; ರಥ: ಬಂಡಿ; ಅಶ್ವ: ಕುದುರೆ; ಅಂಗ: ಭಾಗ; ರಾಜಿ: ಗುಂಪು, ಸಮೂಹ; ವಿಜಯ: ಅರ್ಜುನ, ಗೆಲುವು; ಆದಿ: ಮುಂತಾದ; ಕಂಡು: ನೋಡು; ಅಕ್ಕಜ: ಆಶ್ಚರ್ಯ; ಆಕಸ್ಮಿಕ: ಅನಿರೀಕ್ಷಿತವಾದ; ಕಿಚ್ಚು: ಬೆಂಕಿ; ಗಜಬಜ: ಗೊಂದಲ; ನೆರೆ: ಗುಂಪು; ಬೆಚ್ಚು: ಹೆದರು; ಭೀತಿ: ಭಯ;

ಪದವಿಂಗಡಣೆ:
ಧ್ವಜದ+ ಹಲಗೆಯನ್+ಒದೆದು +ಹಾಯ್ದನು
ನಿಜ+ನಿವಾಸಕೆ +ಹನುಮ +ಧೂಮ
ಧ್ವಜನಮಯವಾದುದು +ರಥ+ಅಶ್ವ+ರಥಾಂಗ+ರಾಜಿಯಲಿ
ವಿಜಯ +ಭೀಮಾದಿಗಳು +ಕಂಡ್
ಅಕ್ಕಜದೊಳ್+ಆಕಸ್ಮಿಕದ +ಕಿಚ್ಚಿನ
ಗಜಬಜವಿದೇನ್+ಎನುತ +ನೆರೆ +ಬೆಚ್ಚಿದರು +ಭೀತಿಯಲಿ

ಅಚ್ಚರಿ:
(೧) ಅರ್ಜುನನನ್ನು ವಿಜಯ ಎಂದು ಕರೆದಿರುವುದು
(೨) ಧ್ವಜ, ಗಜಬಜ, ನಿಜ – ಪ್ರಾಸ ಪದಗಳು

ಪದ್ಯ ೩೪: ಕುರುಪತಿಯು ಯಾರ ಮೇಲೆ ಮತ್ತೆ ಯುದ್ಧಮಾಡಲು ಮುಂದಾದನು?

ಓಡಿದವರಲ್ಲಲ್ಲಿ ಧೈರ್ಯವ
ಮಾಡಿ ಹರಿಹಂಚಾದ ಸುಭಟರು
ಕೂಡಿಕೊಂಡುದು ನೂರು ಮದದಾನೆಯಲಿ ಕುರುಪತಿಯ
ಓಡಲೇಕಿನ್ನೊಂದು ಹಲಗೆಯ
ನಾಡಿ ನೋಡುವೆನೆಂಬವೊಲು ಕೈ
ಮಾಡಿದನು ಕುರುರಾಯನಾ ಸಹದೇವನಿದಿರಿನಲಿ (ಗದಾ ಪರ್ವ, ೨ ಸಂಧಿ, ೩೪ ಪದ್ಯ)

ತಾತ್ಪರ್ಯ:
ಶಕುನಿಯ ದಳದಲ್ಲಿ ಓಡಿಹೋಗಿ ಬದುಕಿದವರು, ಧೈರ್ಯವನ್ನು ಮಾಡಿ ಒಂದುಗೂಡಿ ನೂರು ಆನೆಗಳೊಡನೆ ಕೌರವನನ್ನು ಕೂಡಿಕೊಂಡಿತು. ಕೌರವನು ಏಕೆ ಓಡಿಹೋಗಲಿ, ಇನ್ನೊಂದು ಹಲಗೆ ಆಟವಾಡೋಣ ಎನ್ನುವಂತೆ ಸಹದೇವನ ಮೇಲೆ ಆಕ್ರಮಣ ಮಾಡಿದನು.

ಅರ್ಥ:
ಓಡು: ಧಾವಿಸು; ಧೈರ್ಯ: ಎದೆಗಾರಿಕೆ, ಕೆಚ್ಚು; ಹರಿಹಂಚು: ಚದುರಿದ; ಸುಭಟ: ಸೈನಿಕ; ಕೂಡು: ಜೊತೆಯಾಗು, ಸೇರು; ನೂರು: ಶತ; ಮದದಾನೆ: ಮತ್ತಿನಿಂದ ಕೂಡಿದ ಗಜ; ಹಲಗೆ: ಪಲಗೆ, ಮರ, ಜೂಜಿನ ಒಂದು ಆಟ; ನೋಡು: ವೀಕ್ಷಿಸು; ಕೈಮಾಡು: ಹೋರಾಡು; ಇದಿರು: ಎದುರು;

ಪದವಿಂಗಡಣೆ:
ಓಡಿದವರ್+ಅಲ್ಲಲ್ಲಿ +ಧೈರ್ಯವ
ಮಾಡಿ +ಹರಿಹಂಚಾದ +ಸುಭಟರು
ಕೂಡಿಕೊಂಡುದು +ನೂರು +ಮದದಾನೆಯಲಿ +ಕುರುಪತಿಯ
ಓಡಲೇಕಿನ್ನೊಂದು +ಹಲಗೆಯನ್
ಆಡಿ +ನೋಡುವೆನೆಂಬವೊಲು +ಕೈ
ಮಾಡಿದನು +ಕುರುರಾಯನ್+ಆ+ ಸಹದೇವನ್+ ಇದಿರಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಓಡಲೇಕಿನ್ನೊಂದು ಹಲಗೆಯನಾಡಿ ನೋಡುವೆನೆಂಬವೊಲು ಕೈ ಮಾಡಿದನು ಕುರುರಾಯ
(೨) ಕುರುಪತಿ, ಕುರುರಾಯ – ದುರ್ಯೋಧನನನ್ನು ಕರೆದ ಪರಿ

ಪದ್ಯ ೮: ಕುರುಸೇನೆಯು ಹೇಗೆ ಯುದ್ಧವನ್ನು ಮಾಡಿತು?

ಸುತ್ತುವಲಗೆಯ ಮೇಲೆ ಕಣೆಗಳ
ತೆತ್ತಿಸಿದರೀಚಿನಲಿ ಸಬಳಿಗ
ರೆತ್ತಿದರು ರಾವುತರು ಕೀಲಿಸಿದರು ರಥಧ್ವಜವ
ಮುತ್ತಿದವು ಗಜಸೇನೆ ಪಾರ್ಥನ
ತೆತ್ತಿಗರ ಬರಹೇಳು ವೇಢೆಯ
ಕಿತ್ತು ಮಗುಚುವರಾರೆನುತ ಮುಸುಕಿತ್ತು ಕುರುಸೇನೆ (ಗದಾ ಪರ್ವ, ೧ ಸಂಧಿ, ೮ ಪದ್ಯ)

ತಾತ್ಪರ್ಯ:
ಸುತ್ತು ಗುರಾಣಿಗಳ ಮೇಲೆ ಬಾಣಗಳನ್ನು ಬಿಟ್ಟರು. ಈಟಿಗಳಿಂದ ಇರಿದರು. ರಾವುತರು ರಥಧ್ವಜವನ್ನು ಹೊಡೆದರು. ಆನೆಗಳ ಸೇನೆ ಮುತ್ತಿತು. ಈ ಮುತ್ತಿಗೆಯನ್ನು ಬಿಡಿಸಿ ಅರ್ಜುನನನ್ನು ರಕ್ಷಿಸುವವರಿದ್ದರೆ ಕರೆ ಎಂದು ಕುರುಸೇನೆ ಆರ್ಭಟಿಸಿತು.

ಅರ್ಥ:
ಹಲಗೆ: ಒಂದು ಬಗೆಯ ಗುರಾಣಿ; ಸುತ್ತು: ಬಳಸು; ಕಣೆ: ಬಾಣ; ತೆತ್ತಿಸು: ಜೋಡಿಸು, ಕೂಡಿಸು; ಈಚೆ: ಹೊರಗೆ; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು; ಎತ್ತು: ಮೇಲೆ ತರು; ರಾವುತ: ಕುದುರೆ ಸವಾರ, ಅಶ್ವಾರೋಹಿ; ಕೀಲಿಸು: ಜೋಡಿಸು; ರಥ: ಬಂಡಿ; ಧ್ವಜ: ಬಾವುಟ; ಮುತ್ತು: ಆವರಿಸು; ಗಜ: ಆನೆ; ಸೇನೆ: ಸೈನ್ಯ; ಬರಹೇಳು: ಆಗಮಿಸು; ವೇಢೆಯ: ಹಯಮಂಡಲ; ಕಿತ್ತು: ಕತ್ತರಿಸು; ಮಗುಚು: ಹಿಂದಿರುಗು, ಮರಳು; ಮುಸುಕು: ಹೊದಿಕೆ;

ಪದವಿಂಗಡಣೆ:
ಸುತ್ತು+ಹಲಗೆಯ +ಮೇಲೆ +ಕಣೆಗಳ
ತೆತ್ತಿಸಿದರ್+ಈಚಿನಲಿ +ಸಬಳಿಗರ್
ಎತ್ತಿದರು +ರಾವುತರು +ಕೀಲಿಸಿದರು +ರಥ+ಧ್ವಜವ
ಮುತ್ತಿದವು +ಗಜಸೇನೆ +ಪಾರ್ಥನ
ತೆತ್ತಿಗರ +ಬರಹೇಳು +ವೇಢೆಯ
ಕಿತ್ತು +ಮಗುಚುವರಾರ್+ಎನುತ +ಮುಸುಕಿತ್ತು +ಕುರುಸೇನೆ

ಅಚ್ಚರಿ:
(೧) ಹಲಗೆ, ಕಣೆ, ಸಬಳಿ – ಆಯುಧಗಳ ಹೆಸರು

ಪದ್ಯ ೫: ಯುದ್ಧರಂಗವು ಹೇಗೆ ತೋರಿತು?

ಕಡಿದು ಬೀಳುವ ಕೈದುಗಳನರೆ
ಗಡಿದು ಜೋಲುವ ಜೋಡುಗಳ ನೆರೆ
ಸಿಡಿದು ಹಾರುವ ಸೀಸಕದ ನುಗ್ಗಾದ ಹಲಗೆಗಳ
ಉಡಿದ ಸಿಂಧದ ನೆಲಕೆ ಹರಹಿದ
ಕೊಡೆಯ ಚಮರದ ತಾರು ಥಟ್ಟಿಗೆ
ಕೆಡೆದ ಚಾತುರ್ಬಲವನಭಿವರ್ಣಿಸುವನಾರೆಂದ (ದ್ರೋಣ ಪರ್ವ, ೧೮ ಸಂಧಿ, ೫ ಪದ್ಯ)

ತಾತ್ಪರ್ಯ:
ತುಂಡಾಗಿ ಬಿದ್ದ ಆಯುಧಗಳು, ಅರೆ ತುಂಡಾಗಿ ಜೋಲುವ ಕವಚಗಳು, ಸಿಡಿದು ಹಾರುವ ಸೀಸಕಗಳು, ಪುಡಿಪುಡಿಯಾದ ಗುರಾಣಿಗಳು, ಮುರಿದ ಧ್ವಜದಂಡಗಳು, ನೆಲಕ್ಕೆ ಬಿದ್ದ ಛತ್ರಿಗಳು, ಚಾಮರಗಳು, ತಂಡ ತಂಡಗಳಾಗಿ ಬಿದ್ದ ಚತುರಂಗ ಸೈನ್ಯಗಳು ರಣರಂಗದಲ್ಲಿ ಕಾಣಿಸಿದವು. ಅದನ್ನು ಯಾರು ತಾನೆ ವರ್ಣಿಸುವವರು ಎಂದು ಸಂಜಯನು ವಿವರಿಸಿದನು.

ಅರ್ಥ:
ಕಡಿ: ಸೀಳು; ಬೀಳು: ಕುಸಿ; ಕೈದು: ಆಯುಧ; ಅರೆ: ಅರ್ಧ; ಜೋಲು: ತೂಗಾದು; ಜೋಡು: ಜೊತೆ; ನೆರೆ: ಗುಂಪು; ಸಿಡಿ: ಸೀಳು; ಹಾರು: ಲಂಘಿಸು; ಸೀಸಕ: ಶಿರಸ್ತ್ರಾಣ; ನುಗ್ಗು: ತಳ್ಳು; ಹಲಗೆ: ಗುರಾಣಿ; ಉಡಿ: ಮುರಿ, ತುಂಡು ಮಾಡು; ಸಿಂಧ:ಬಾವುಟ; ನೆಲ: ಭೂಮಿ; ಹರಹು: ವಿಸ್ತಾರ, ವೈಶಾಲ್ಯ; ಕೊಡೆ: ಛತ್ರಿ; ಚಮರ: ಚಾಮರ; ತಾರು: ಸೊರಗು; ಥಟ್ಟು: ಗುಂಪು; ಕೆಡೆ: ಬೀಳು, ಕುಸಿ; ಚಾತುರ್ಬಲ: ಚತುರಂಗ ಬಲ; ಅಭಿವರ್ಣಿಸು: ವಿಸ್ತಾರವಾಗಿ ಹೇಳು;

ಪದವಿಂಗಡಣೆ:
ಕಡಿದು +ಬೀಳುವ +ಕೈದುಗಳನ್+ಅರೆ
ಕಡಿದು +ಜೋಲುವ +ಜೋಡುಗಳ +ನೆರೆ
ಸಿಡಿದು +ಹಾರುವ +ಸೀಸಕದ +ನುಗ್ಗಾದ +ಹಲಗೆಗಳ
ಉಡಿದ +ಸಿಂಧದ +ನೆಲಕೆ +ಹರಹಿದ
ಕೊಡೆಯ +ಚಮರದ +ತಾರು +ಥಟ್ಟಿಗೆ
ಕೆಡೆದ +ಚಾತುರ್ಬಲವನ್+ಅಭಿವರ್ಣಿಸುವನ್+ಆರೆಂದ

ಅಚ್ಚರಿ:
(೧) ಕಡಿದು, ಸಿಡಿದು; ಉಡಿದ, ಕಡೆದ – ಪ್ರಾಸ ಪದ
(೨) ಕೈದು, ಜೋದು, ಸೀಸಕ, ಹಲಗೆ, ಸಿಂಧ, ಕೊಡೆ, ಚಮರ – ರಥಿಕರ ಬಳಿಯಿರುವ ಸಾಧನಗಳು

ಪದ್ಯ ೫೮: ಕರ್ಣನು ಭೀಮನ ಮೇಲೆ ಹೇಗೆ ಗರ್ಜಿಸಿದನು?

ಆರಿ ಬೊಬ್ಬಿರಿದೆಚ್ಚನಲಿಲಕು
ಮಾರಕನ ಖಂಡೆಯವನೊಂದೇ
ಕುರಲಗಿನಲಿ ಕಡಿದು ಬಿಸುಟನು ಹಿಡಿದ ಹಲಗೆಯನು
ಆರುಭಟೆಯಲಿ ಭೀಮ ಕಾವವ
ರಾರು ಕರೆಯಾ ಕರ್ಣ ಕೊಲುವಡ
ದಾರು ಫಡ ಹಿಂದಿಕ್ಕಿ ಕೊಂಬವರೆನುತ ಗರ್ಜಿಸಿದ (ದ್ರೋಣ ಪರ್ವ, ೧೩ ಸಂಧಿ, ೫೮ ಪದ್ಯ)

ತಾತ್ಪರ್ಯ:
ಕರ್ಣನು ಮಹಾಧ್ವನಿಯಿಂದ ಗರ್ಜಿಸಿ, ಭೀಮನ ಖಡ್ಗವನ್ನು ಗುರಾಣಿಯನ್ನು ಒಂದೇ ಬಾಣದಿಂದ ತುಂಡುಮಾಡಿ ಮಹಾ ಆರ್ಭಟದಿಂದ ಭೀಮಾ ನಿನ್ನನ್ನು ಕಾಯುವವರು ಯಾರು? ಅವರನ್ನು ಕರೆ, ಕರ್ಣನು ಕೊಲ್ಲುವಾಗ ಹಿಂದಿಟ್ಟುಕೊಂಡು ಕಾಪಾಡುವವರು ಯಾರು ಎಂದು ಗರ್ಜಿಸಿದನು.

ಅರ್ಥ:
ಬೊಬ್ಬಿರಿ: ಗರ್ಜಿಸು; ಎಚ್ಚು: ಬಾಣ ಪ್ರಯೋಗ ಮಾಡು; ಅನಿಲಕುಮಾರ: ವಾಯುಪುತ್ರ (ಭೀಮ); ಖಂಡ: ತುಂಡು, ಚೂರು; ಕೂರಲಗು: ಚೂಪಾದ ಬಾಣ; ಕಡಿ: ಸೀಳು; ಬಿಸುಟು: ಹೊರಹಾಕು; ಹಿಡಿ: ಗ್ರಹಿಸು; ಹಲಗೆ: ಒಂದು ಬಗೆಯ ಗುರಾಣಿ; ಆರುಭಟೆ: ಆರ್ಭಟ, ಗರ್ಜನೆ; ಕಾವು: ರಕ್ಷಿಸು; ಕರೆ: ಬರೆಮಾದು; ಕೊಲು: ಸಾಯಿಸು; ಫಡ: ತಿರಸ್ಕಾರದ ಮಾತು; ಗರ್ಜಿಸು: ಆರ್ಭಟಿಸು; ಕೊಂಬು: ಆಶ್ರಯ; ಗರ್ಜಿಸು: ಆರ್ಭಟಿಸು;

ಪದವಿಂಗಡಣೆ:
ಆರಿ+ ಬೊಬ್ಬಿರಿದ್+ಎಚ್ಚನ್+ಅನಿಲ+ಕು
ಮಾರಕನ +ಖಂಡೆಯವನ್+ಒಂದೇ
ಕುರಲಗಿನಲಿ +ಕಡಿದು +ಬಿಸುಟನು +ಹಿಡಿದ +ಹಲಗೆಯನು
ಆರುಭಟೆಯಲಿ +ಭೀಮ +ಕಾವವ
ರಾರು +ಕರೆ+ಆ +ಕರ್ಣ +ಕೊಲುವಡದ್
ಆರು+ ಫಡ+ ಹಿಂದಿಕ್ಕಿ +ಕೊಂಬವರ್+ಎನುತ +ಗರ್ಜಿಸಿದ

ಅಚ್ಚರಿ:
(೧) ಆರು ಪದದ ಬಳಕೆ – ೪-೬ ಸಾಲಿನ ಮೊದಲ ಪದ

ಪದ್ಯ ೫೨: ಕರ್ಣನೇಕೆ ಸಂನ್ಯಾಸ ತ್ಯಾಗ ಮಾಡುವೆನೆಂದು ಹೇಳಿದನು?

ಎಲವೆಲವೊ ಕಲಿಯಾಗು ಮಾರುತಿ
ಗೆಲಿದನೆಂದಿರಬೇಡ ಸೋಲದ
ಗೆಲವಿನುದಯ ಮುಹೂರ್ತವಶ ಮೈಗುಡದೆ ಕಾದುವುದು
ಛಲವದುಳ್ಳಡೆ ಸಾಕು ನೀನೀ
ಹಲಗೆಯಲಿ ಹೊಕ್ಕಾಡಿ ಮರಳಿದು
ತಲೆವೆರಸಿ ನೀ ಹೋದಡಸ್ತ್ರತ್ಯಾಗ ತನಗೆಂದ (ದ್ರೋಣ ಪರ್ವ, ೧೩ ಸಂಧಿ, ೫೨ ಪದ್ಯ)

ತಾತ್ಪರ್ಯ:
ಎಲವೋ ಎಲವೋ ಭೀಮ, ಕಲಿಯಾಗು, ಗೆದ್ದೆನೆಂದು ಸುಮ್ಮನಿರಬೇಡ. ಯುದ್ಧದಲ್ಲಿ ಗೆಲುವು ಸೋಲುಗಳು ಆ ಮುಹೂರ್ತದ ಲಕ್ಷಣ. ಛಲದಿಂದ ನಿನ್ನ ದೇಹವನ್ನು ಒಡ್ಡದೆ ಯುದ್ಧಮಾಡಿದರೆ ಸಾಕು, ಈ ಬಾರಿ ನೀನು ಯುದ್ಧದಲ್ಲಿ ನೀನು ತಲೆಯೊಡನೆ ಹಿಂದಿರುಗಿದ್ದೇ ಆದರೆ ನಾನು ಅಸ್ತ್ರ ಸಂನ್ಯಾಸ ಮಾಡುತ್ತೇನೆ ಎಂದು ಕರ್ಣನು ಹೇಳಿದನು.

ಅರ್ಥ:
ಕಲಿ: ಶೂರ; ಮಾರುತಿ: ಭೀಮ; ಗೆಲಿ: ಜಯಿಸು; ಸೋಲು: ಪರಾಭವ; ಉದಯ: ಹುಟ್ತು; ಮುಹೂರ್ತ: ಒಳ್ಳೆಯ ಸಮಯ; ಮೈಗುಡು: ದೃಢವಾಗು; ಕಾದು: ಹೋರಾಡು; ಛಲ: ದೃಢ ನಿಶ್ಚಯ; ಹಲಗೆ: ಒಂದು ಬಗೆಯ ಗುರಾಣಿ; ಹೊಕ್ಕು: ಸೇರು; ಮರಳು: ಹಿಂದಿರುಗು; ತಲೆ: ಶಿರ; ಹೋದ: ತೆರಳು; ಅಸ್ತ್ರ: ಶಸ್ತ್ರ, ಆಯುಧ; ತ್ಯಾಗ: ತೊರೆ;

ಪದವಿಂಗಡಣೆ:
ಎಲವ್+ಎಲವೊ +ಕಲಿಯಾಗು +ಮಾರುತಿ
ಗೆಲಿದನ್+ಎಂದಿರಬೇಡ +ಸೋಲದ
ಗೆಲವಿನ್+ಉದಯ +ಮುಹೂರ್ತವಶ +ಮೈಗುಡದೆ +ಕಾದುವುದು
ಛಲವದುಳ್ಳಡೆ ಸಾಕು ನೀನ್+ಈ
ಹಲಗೆಯಲಿ +ಹೊಕ್ಕಾಡಿ +ಮರಳಿದು
ತಲೆ+ವೆರಸಿ+ ನೀ +ಹೋದಡ್+ಅಸ್ತ್ರತ್ಯಾಗ +ತನಗೆಂದ

ಅಚ್ಚರಿ:
(೧) ಕರ್ಣನ ಧೀರತನದ ಮಾತು – ಸೋಲದ ಗೆಲವಿನುದಯ ಮುಹೂರ್ತವಶ ಮೈಗುಡದೆ ಕಾದುವುದು

ಪದ್ಯ ೩೭: ಭೀಮನು ಕರ್ಣನನ್ನು ಹೇಗೆ ಹೀಯಾಳಿಸಿದನು?

ಲುಳಿಯಲೊಲೆದಿದಿರಾಗಿ ತಾಗಿದ
ಬಲುಕಣೆಯ ಕರವಾಳನಿಕ್ಕಡಿ
ಗಳೆದು ಹಲಗೆಯನೆಂಟು ಕಡಿ ಮಾಡಿದನು ಕಲಿಭೀಮ
ತೊಲಗು ಬಾಹಿರ ಮತ್ತೆ ಸಾರಥಿ
ಬಿಲು ರಥವನನುಮಾಡು ಪಾರ್ಥಗೆ
ಕಳದ ಮೀಸಲು ಕೊಲ್ಲೆನೆಲವೋ ಕರ್ಣ ಹೋಗೆಂದ (ದ್ರೋಣ ಪರ್ವ, ೧೩ ಸಂಧಿ, ೩೭ ಪದ್ಯ)

ತಾತ್ಪರ್ಯ:
ವೇಗದಿಂದ ಇದಿರಾಗಿ ಕರ್ಣನು ಕಾದಲೆಂದು ಹಿಡಿದು ಬಂದ ಕತ್ತಿಯನ್ನು ಭೀಮನು ಎರಡು ತುಂಡಾಗಿ ಕತ್ತರಿಸಿ, ಗುರಾಣಿಯನ್ನು ಎಂಟು ತುಂಡು ಮಾಡಿದನು. ಎಲವೋ ಬಾಹಿರ, ಹೀನ ಕುಲದವನೇ, ಮತ್ತೆ ಹೋಗಿ ರಥ, ಸಾರಥಿ, ಬಿಲ್ಲು ಬಾಣಗಳನ್ನು ಜೋಡಿಸಿಕೊಂಡು ಯುದ್ಧಕ್ಕೆ ಬಾ, ನೀನು ಅರ್ಜುನನಿಗಾಗಿ ತೆಗೆದಿಟ್ಟ ಮೀಸಲು, ನಿನ್ನನ್ನು ನಾನು ಕೊಲ್ಲುವುದಿಲ್ಲ, ನೀನು ತೆರಳು ಎಂದು ಭೀಮನು ಕರ್ಣನನ್ನು ಹಂಗಿಸಿದನು.

ಅರ್ಥ:
ಲುಳಿ: ರಭಸ, ವೇಗ; ಇದಿರು: ಎದುರು; ತಾಗು: ಮುಟ್ಟು; ಕಣೆ: ಬಾಣ; ಕರವಾಳ: ಕತ್ತಿ; ಇಕ್ಕಡಿ: ಎರಡು ತುಂಡು; ಹಲಗೆ: ಒಂದು ಬಗೆಯ ಗುರಾಣಿ; ಕಡಿ: ಕತ್ತರಿಸು; ಕಲಿ: ಶೂರ; ತೊಲಗು: ಹೊರಡು; ಬಾಹಿರ: ಹೊರಗೆ; ಸಾರಥಿ: ಸೂತ; ಬಿಲು: ಧನಸ್ಸು; ರಥ: ಬಂಡಿ; ಅನುವು: ಅವಕಾಶ; ಕಳ: ರಣರಂಗ; ಮೀಸಲು: ಮುಡಿಪು; ಕೊಲ್ಲು: ಸಾಯಿಸು; ಹೋಗು: ತೆರಳು;

ಪದವಿಂಗಡಣೆ:
ಲುಳಿಯಲೊಲೆದ್+ಇದಿರಾಗಿ +ತಾಗಿದ
ಬಲು+ಕಣೆಯ +ಕರವಾಳನ್+ಇಕ್ಕಡಿ
ಕಳೆದು +ಹಲಗೆಯನ್+ಎಂಟು +ಕಡಿ +ಮಾಡಿದನು +ಕಲಿಭೀಮ
ತೊಲಗು +ಬಾಹಿರ +ಮತ್ತೆ +ಸಾರಥಿ
ಬಿಲು +ರಥವನ್+ಅನುಮಾಡು +ಪಾರ್ಥಗೆ
ಕಳದ+ ಮೀಸಲು +ಕೊಲ್ಲೆನ್+ಎಲವೋ +ಕರ್ಣ +ಹೋಗೆಂದ

ಅಚ್ಚರಿ:
(೧) ಕರ್ಣನನ್ನು ಹಂಗಿಸುವ ಪರಿ – ತೊಲಗು ಬಾಹಿರ, ಪಾರ್ಥಗೆ ಕಳದ ಮೀಸಲು ಕೊಲ್ಲೆನೆಲವೋ ಕರ್ಣ ಹೋಗೆಂದ

ಪದ್ಯ ೪೯: ಕುರುಕ್ಷೇತ್ರವನ್ನು ಯಾವುದಕ್ಕೆ ಅರ್ಜುನನು ಹೋಲಿಸಿದನು?

ಎಲವೊ ಕೌರವ ಹಿಂದೆ ವಂಚಿಸಿ
ಕಳವಿನಲಿ ಜೂಜಾಡಿ ರಾಜ್ಯವ
ಗೆಲಿದ ಗರ್ವವನುಗುಳು ಸಮರ ದ್ಯೋತಕೇಳಿಯಲಿ
ಹಲಗೆಯೈ ಕುರುಭೂಮಿ ಕೌರವ
ಕುಲದ ತಲೆ ಸಾರಿಗಳು ನೆರೆಯಲಿ
ಗೆಲಲು ಬಂದೆನು ಕೊಳ್ಳು ಹಾಸಂಗಿಗಳನೆನುತೆಚ್ಚ (ದ್ರೋಣ ಪರ್ವ, ೧೦ ಸಂಧಿ, ೪೯ ಪದ್ಯ)

ತಾತ್ಪರ್ಯ:
ಅರ್ಜುನನು ಉತ್ತರಿಸುತ್ತಾ, ಎಲವೋ ಕೌರವ, ಹಿಂದೆ ಮೋಸದ ಕಳ್ಳಜೂಜನ್ನಾಡಿ ಗೆದ್ದ ಗರ್ವವನ್ನು ಉಗುಳು, ಈಗ ಕುರುಕ್ಷೇತ್ರವೇ ಪಗಡೆಯ ಹಾಸು, ಕೌರವ ಕುಲದವರ ತಲೆಗಳೇ ಕಾಯಿಗಳು, ಅವೆಲ್ಲ ಬಂದು ನಿಲ್ಲಲಿ, ಕಡಿದು ಹಾಕುತ್ತೇನೆ, ಇದೋ ದಾಳವನ್ನುರುಳಿಸಿದ್ದೇನೆ ಎಂದು ಹೇಳುತ್ತಾ ಅರ್ಜುನನು ಬಾಣಗಳನ್ನು ಬಿಟ್ಟನು.

ಅರ್ಥ:
ಹಿಂದೆ: ಪುರಾತನ, ಕಳೆದ; ವಂಚನೆ: ಮೋಸ; ಕಳ: ರಣರಂಗ; ರಾಜ್ಯ: ರಾಷ್ಟ್ರ; ಗೆಲಿ: ಜಯಿಸು; ಗರ್ವ: ಅಹಂಕಾರ; ಉಗುಳು: ಹೊರಹಾಕು; ಸಮರ: ಯುದ್ಧ; ದ್ಯೋತ:ಹೊಳಪು; ಕೇಳಿ: ಕ್ರೀಡೆ; ಹಲಗೆ: ಪಲಗೆ, ಅಗಲವಾದ ಹಾಗೂ ತೆಳುವಾದ ಸೀಳು; ತಲೆ: ಶಿರ; ಕುಲ: ವಂಶ; ಸಾರಿ: ಕಾಯಿ; ನೆರೆ; ಗುಂಪು; ಹಾಸಂಗಿ: ಜೂಜಿನ ದಾಳ, ಲೆತ್ತ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಎಲವೊ +ಕೌರವ +ಹಿಂದೆ +ವಂಚಿಸಿ
ಕಳವಿನಲಿ +ಜೂಜಾಡಿ +ರಾಜ್ಯವ
ಗೆಲಿದ +ಗರ್ವವನ್+ಉಗುಳು +ಸಮರ+ ದ್ಯೋತ+ಕೇಳಿಯಲಿ
ಹಲಗೆಯೈ +ಕುರುಭೂಮಿ +ಕೌರವ
ಕುಲದ +ತಲೆ +ಸಾರಿಗಳು +ನೆರೆಯಲಿ
ಗೆಲಲು +ಬಂದೆನು +ಕೊಳ್ಳು +ಹಾಸಂಗಿಗಳನ್+ಎನುತ್+ಎಚ್ಚ

ಅಚ್ಚರಿ:
(೧) ಕುರುಕ್ಷೇತ್ರವನ್ನು ಪಗಡೆಗೆ ಹೋಲಿಸಿದ ಪರಿ – ಹಲಗೆಯೈ ಕುರುಭೂಮಿ ಕೌರವ ಕುಲದ ತಲೆ ಸಾರಿಗಳು

ಪದ್ಯ ೨೭: ಷಡುರಥರ ಪರಿಸ್ಥಿತಿ ಹೇಗಾಯಿತು?

ಹರಿದು ಬಿದ್ದವು ಜೋಡು ಮೆಯ್ಯಲಿ
ಮುರಿದವಗಣಿತ ಬಾಣದೇರಿನೊ
ಳೊರೆದ ರಕುತದ ಧಾರೆ ನಾದಿತು ರಥದ ಹಲಗೆಗಳ
ಅರಿವು ಮರೆದಪಕೀರ್ತಿನಾರಿಯ
ಸೆರಗ ಹಿಡಿದರು ಹೇಳಲೇನದ
ನರಿಯೆನೇಕಾಂತದಲಿ ಕರ್ಣನ ಕರೆದನಾ ದ್ರೋಣ (ದ್ರೋಣ ಪರ್ವ, ೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ಆರು ರಥಿಕರ ಕವಚಗಳು ಹರಿದು ಕೆಳಕ್ಕೆ ಬಿದ್ದವು. ಬಾನಗಳು ಮೈಗೆನೆಟ್ತು ರಕ್ತ ಸುರಿದು ರಥದ ಹಲಗೆಗಳು ತೊಯ್ದವು. ಅಪಕೀರ್ತಿ ಎಂಬ ಹೆಂಗಸಿನ ಸೆರಗು ಹಿಡಿದರು. ರಾಜ ನಾನು ನಿಮಗೆ ಹೇಗೆ ಹೇಳಲೆಂದು ತಿಳಿಯುತ್ತಿಲ್ಲ, ದ್ರೋಣನು ಕರ್ಣನನ್ನು ಕರೆದು ಏಕಾಂತದಲ್ಲಿ ಹೀಗೆಂದು ಹೇಳಿದನು.

ಅರ್ಥ:
ಹರಿ: ಕತ್ತರಿಸು; ಬಿದ್ದು: ಬೀಳು; ಜೋಡು: ಜೊತೆ; ಮೆಯ್ಯಲಿ: ದೇಹದಲ್ಲಿ; ಮುರಿ:ಸೀಳು; ಅಗಣಿತ: ಎಣಿಕೆಗೆ ಮೀರಿದ; ಬಾಣ: ಸರಳು; ಏರು: ಹೆಚು; ಒರೆ: ಸವರು; ರಕುತ: ನೆತ್ತರು; ಧಾರೆ: ವರ್ಷ; ನಾದು: ಕಲಸು; ರಥ: ಬಂಡಿ; ಹಲಗೆ: ಮರಗಳ ಅಗಲವಾದ ಸೀಳು; ಅರಿ: ತಿಳಿ; ಮರೆ: ಜ್ಞಾಪಕದಿಂದ ದೂರವಾಗು; ಅಪಕೀರ್ತಿ: ಅಪಯಶಸ್ಸು; ನಾರಿ: ಹೆಣ್ಣು; ಸೆರಗು: ಉತ್ತರೀಯ; ಹಿಡಿ: ಗ್ರಹಿಸು; ಅರಿ: ತಿಳಿ; ಏಕಾಂತ: ಒಬ್ಬನೇ; ಕರೆ: ಬರೆಮಾಡು;

ಪದವಿಂಗಡಣೆ:
ಹರಿದು+ ಬಿದ್ದವು +ಜೋಡು +ಮೆಯ್ಯಲಿ
ಮುರಿದವ್+ಅಗಣಿತ +ಬಾಣದ್+ಏರಿನೊಳ್
ಒರೆದ +ರಕುತದ +ಧಾರೆ +ನಾದಿತು +ರಥದ +ಹಲಗೆಗಳ
ಅರಿವು +ಮರೆದ್+ಅಪಕೀರ್ತಿನಾರಿಯ
ಸೆರಗ+ ಹಿಡಿದರು +ಹೇಳಲೇನದನ್
ಅರಿಯೆನ್+ಏಕಾಂತದಲಿ +ಕರ್ಣನ +ಕರೆದನಾ +ದ್ರೋಣ

ಅಚ್ಚರಿ:
(೧) ಸೋತರು ಎಂದು ಹೇಳುವ ಪರಿ – ಅರಿವು ಮರೆದಪಕೀರ್ತಿನಾರಿಯಸೆರಗ ಹಿಡಿದರು

ಪದ್ಯ ೧೫: ಸೈನ್ಯವನ್ನು ಹೇಗೆ ಸಜ್ಜುಮಾಡಿದನು?

ನೆರೆದ ನಿಜಸೇನಾಧಿಪರ ಸಂ
ವರಣೆಗಳ ನೋಡಿದನು ನೀಡಿದ
ನರಿಬಿರುದ ಮಂಡಳಿಕರಿಗೆ ಕಾಳೆಗದ ವೀಳೆಯವ
ಹರಿಗೆ ಹಲಗೆ ಕೃಪಾಣ ತೋಮರ
ಪರಶು ಕಕ್ಕಡೆ ಕೊಂತ ಮುದ್ಗರ
ಸುರಗಿಯತಿಬಳ ಪಾಯ್ದಳವ ನಿರಿಸಿದನು ವಳಯದಲಿ (ದ್ರೋಣ ಪರ್ವ, ೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಮಹಾಶೂರನಾದ ಶತ್ರುಭಯಂಕರರಾದ ಮಂಡಳಿಕರ ಸೇನೆಗಳನ್ನು ನಿರೀಕ್ಷಿಸಿ ದ್ರೋಣನು ಅವರಿಗೆ ರಣವೀಳೆಯವನ್ನು ಕೊಟ್ಟನು. ಗುರಾಣಿ, ಕತ್ತಿ, ತೋಮರ, ಗಂಡುಕೊಡಲಿ, ಕಕ್ಕಡೆ, ಕುಂತ, ಮುದ್ಗರ, ಸುರಗಿಗಳನ್ನು ಹಿಡಿದ ಕಾಲಾಳುಗಳನ್ನು ವೃತ್ತಾಕಾರವಾಗಿ ನಿಲ್ಲಿಸಿದನು.

ಅರ್ಥ:
ನೆರೆದ: ಸೇರಿದ; ಸೇನಾಧಿಪ: ಸೇನೆಯ ಮುಖ್ಯಸ್ಥ; ಸಂವರಣೆ: ಶೇಖರಣೆ, ಸಜ್ಜು; ನೋಡು: ವೀಕ್ಷಿಸು; ನೀಡು: ಕೊಡು; ಅರಿಬಿರುದ: ಶತ್ರುಭಯಂಕರ; ಮಂಡಳಿಕ: ಸಾಮಂತ ರಾಜ; ಕಾಳೆಗ: ಯುದ್ಧ; ವೀಳೆ: ಆಮಂತ್ರಣ, ತಾಂಬೂಲ; ಹರಿಗೆ: ಪ್ರವಹಿಸು; ಹಲಗೆ: ಗುರಾಣಿ; ಕೃಪಾಣು: ಒಂದು ಬಗೆಯ ಆಯುಧ; ತೋಮರ: ಈಟಿಯಂತಹ ಒಂದು ಬಗೆಯ ಆಯುಧ; ಪರಶು: ಕೊಡಲಿ, ಕುಠಾರ; ಕಕ್ಕಡ: ದೀವಟಿಗೆ, ಪಂಜು; ಕುಂತ: ಈಟಿ, ಭರ್ಜಿ; ಮುದ್ಗರ: ಗದೆ; ಸುರಗಿ: ಸಣ್ಣ ಕತ್ತಿ, ಚೂರಿ; ಅತಿಬಲ: ಪರಾಕ್ರಮ; ಪಾಯ್ದಳ: ಸೈನ್ಯ; ಇರಿಸು: ಸಜ್ಜುಮಾಡು; ವಳಯ: ವರ್ತುಲ, ಪರಿಧಿ;

ಪದವಿಂಗಡಣೆ:
ನೆರೆದ +ನಿಜಸೇನಾಧಿಪರ+ ಸಂ
ವರಣೆಗಳ +ನೋಡಿದನು +ನೀಡಿದನ್
ಅರಿಬಿರುದ +ಮಂಡಳಿಕರಿಗೆ +ಕಾಳೆಗದ +ವೀಳೆಯವ
ಹರಿಗೆ +ಹಲಗೆ +ಕೃಪಾಣ +ತೋಮರ
ಪರಶು +ಕಕ್ಕಡೆ +ಕೊಂತ +ಮುದ್ಗರ
ಸುರಗಿ+ಅತಿಬಳ +ಪಾಯ್ದಳವ +ನಿರಿಸಿದನು +ವಳಯದಲಿ

ಅಚ್ಚರಿ:
(೧) ಆಯುಧಗಳ ಹೆಸರು – ಹಲಗೆ, ಕೃಪಾಣ, ತೋಮರ, ಪರಶು, ಕಕ್ಕಡ, ಕುಂತ, ಮುದ್ಗರ, ಸುರಗಿ