ಪದ್ಯ ೩೩: ಬಾಣಗಳು ಎಲ್ಲಿ ನಟ್ಟವು?

ತೋಡಿ ನೆಟ್ಟವು ಸೀಸಕವನೊಡೆ
ದೋಡಿದವು ಕವಚದಲಿ ಕುದುರೆಯ
ಜೋಡು ಹಕ್ಕರಿಕೆಯಲಿ ತಳಿತವು ಹಿಳುಕು ಹರಹಿನಲಿ
ಕೂಡೆ ರಥದಲಿ ಸಿಂಧದಲಿ ಮೈ
ಗೂಡಿ ಗಾಲಿಗಳಲಿ ವರೂಥದ
ಲೀಡಿರಿದವಂಬುಗಳು ಕಲಿಮಾದ್ರೇಶನೆಸುಗೆಯಲಿ (ಶಲ್ಯ ಪರ್ವ, ೨ ಸಂಧಿ, ೩೩ ಪದ್ಯ)

ತಾತ್ಪರ್ಯ:
ಧರ್ಮಜನ ಶಿರಸ್ತ್ರಾನದಲ್ಲಿ ಶಲ್ಯನ ಬಾಣಗಳು ನಟ್ಟವು. ಕವಚವನ್ನು ಛಿದ್ರಮಾಡಿದವು. ರಥದ ಕುದುರೆಗಳ ರಕ್ಷಾಕವಚದಲ್ಲಿ ಹೇರಳವಾಗಿ ನಟ್ಟವು. ರಥದಲ್ಲಿ ಧ್ವಜದಲ್ಲಿ ರಥದ ಗಾಲಿಗಳಲ್ಲಿ ಹೇರಳವಾಗಿ ನಟ್ಟವು.

ಅರ್ಥ:
ತೋಡು: ಅಗೆ, ಹಳ್ಳ ಮಾಡು; ನೆಟ್ಟು: ನೆಡು, ಕೂಡಿಸು; ಸೀಸಕ: ಶಿರಸ್ತ್ರಾಣ; ಒಡೆ: ಸೀಳು; ಓಡು: ಧಾವಿಸು; ಕವಚ: ಹೊದಿಕೆ; ಕುದುರೆ: ಅಶ್ವ; ಜೋಡು: ಜೊತೆ; ಹಕ್ಕರಿ: ಆನೆ ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ; ತಳಿತ: ಚಿಗುರಿದ; ಹಿಳುಕು: ಬಾಣದ ಗರಿ; ಹರಹು: ವಿಸ್ತಾರ, ವೈಶಾಲ್ಯ; ಕೂಡೆ: ಜೊತೆ; ರಥ: ಬಂಡಿ; ಸಿಂಧ: ಬಾವುಟ; ಮೈಗೂಡು: ದೃಢವಾಗು, ದೇಹವನ್ನು ಅರ್ಪಿಸು; ಗಾಲಿ: ಚಕ್ರ; ವರೂಥ: ತೇರು, ರಥ; ಅಂಬು: ಬಾಣ; ಕಲಿ: ಶೂರ; ಎಸು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ತೋಡಿ +ನೆಟ್ಟವು +ಸೀಸಕವನ್+ಒಡೆದ್
ಓಡಿದವು +ಕವಚದಲಿ +ಕುದುರೆಯ
ಜೋಡು +ಹಕ್ಕರಿಕೆಯಲಿ +ತಳಿತವು +ಹಿಳುಕು +ಹರಹಿನಲಿ
ಕೂಡೆ+ ರಥದಲಿ+ ಸಿಂಧದಲಿ +ಮೈ
ಗೂಡಿ +ಗಾಲಿಗಳಲಿ +ವರೂಥದಲ್
ಈಡಿರಿದವ್+ಅಂಬುಗಳು +ಕಲಿ+ಮಾದ್ರೇಶನ್+ಎಸುಗೆಯಲಿ

ಅಚ್ಚರಿ:
(೧) ಬಾಣಗಳು ನೆಟ್ಟ ಸ್ಥಳ – ಸೀಸಕ, ಕವಚ, ಹಕ್ಕರಿಕೆ; ರಥ, ಸಿಂಧ, ಗಾಲಿ;

ಪದ್ಯ ೫: ದ್ರೋಣನ ಸಾರಥಿ ಯಾರ ಬಳಿಗೆ ರಥವನ್ನು ತಿರುಗಿಸಿದನು?

ಕಡಿಕುಗಳನಾಯ್ದರಸಿ ರಥದೊಳು
ಗುಡಿಸಿ ಸಿಂಧವನೆತ್ತಿ ಸಾರಥಿ
ತುಡುಕಿ ವಾಘೆಯ ಮುರುಹಿ ಮರಳಿಚಿ ರಥದ ಕುದುರೆಗಳ
ತಡೆಯದಶ್ವತ್ಥಾಮನಲ್ಲಿಗೆ
ನಡೆದು ಬರುತಿರೆ ಕಂಡು ಮನದಲಿ
ಕಡು ನಿರೋಧವ ಹಿಡಿದು ಚಿಂತಿಸುತಿರ್ದನಾ ದ್ರೌಣಿ (ದ್ರೋಣ ಪರ್ವ, ೧೯ ಸಂಧಿ, ೫ ಪದ್ಯ)

ತಾತ್ಪರ್ಯ:
ದ್ರೋಣನ ದೇಹದ ತುಂಡುಗಳನ್ನಾಯ್ದು, ರಥವನ್ನು ಗುಡಿಸಿ, ಧ್ವಜವನ್ನೆತ್ತಿ ಕಟ್ಟಿ, ಸಾರಥಿಯು ರಥದ ಕುದುರೆಗಳನ್ನು ಹಿಂದಕ್ಕೆ ತಿರುಗಿಸಿ ತಕ್ಷಣವೇ ಅಶ್ವತ್ಥಾಮನ ಬಳಿಗೆ ಹೋದನು. ಅವನ ಆಗಮನವನ್ನು ನೋಡಿ ಅಶ್ವತ್ಥಾಮನು ಅತಿಶಯ ವ್ಯಥೆಯಿಂದ ಹೀಗೆಂದು ಚಿಂತಿಸಿದನು.

ಅರ್ಥ:
ಕಡಿಕು: ತುಂಡು; ಆಯ್ದು: ಆರಿಸು; ರಥ: ಬಂದಿ; ಗುಡಿಸು: ಕಸವನ್ನು ಬಳಿ; ಸಿಂಧ: ಪತಾಕೆ, ಬಾವುಟ; ಸಾರಥಿ: ಸೂತ; ತುಡುಕು: ಹೋರಾಡು, ಸೆಣಸು; ವಾಘೆ: ಲಗಾಮು; ಮುರುಹು: ತಿರುಗಿಸು; ಮರಳಿ: ಮತ್ತೆ; ಕುದುರೆ: ಅಶ್ವ; ತಡೆ: ನಿಲ್ಲಿಸು; ನಡೆ: ಚಲಿಸು; ಬರುತಿರೆ: ಆಗಮಿಸು; ಕಂಡು: ನೋಡು; ಮನ: ಮನಸ್ಸು; ಕಡು: ತುಂಬ; ನಿರೋಧ: ಪ್ರತಿಬಂಧ, ನಿರಾಶ; ಹಿಡಿ: ಗ್ರಹಿಸು; ಚಿಂತಿಸು: ಯೋಚಿಸು; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ಕಡಿಕುಗಳನ್+ಆಯ್ದ್+ಅರಸಿ +ರಥದೊಳು
ಗುಡಿಸಿ +ಸಿಂಧವನೆತ್ತಿ +ಸಾರಥಿ
ತುಡುಕಿ +ವಾಘೆಯ +ಮುರುಹಿ +ಮರಳಿಚಿ +ರಥದ +ಕುದುರೆಗಳ
ತಡೆಯದ್+ಅಶ್ವತ್ಥಾಮನಲ್ಲಿಗೆ
ನಡೆದು +ಬರುತಿರೆ +ಕಂಡು +ಮನದಲಿ
ಕಡು +ನಿರೋಧವ +ಹಿಡಿದು +ಚಿಂತಿಸುತಿರ್ದನಾ +ದ್ರೌಣಿ

ಅಚ್ಚರಿ:
(೧) ಅಶ್ವತ್ಥಾಮನನ್ನು ದ್ರೌಣಿ ಎಂದು ಕರೆದಿರುವುದು

ಪದ್ಯ ೫: ಯುದ್ಧರಂಗವು ಹೇಗೆ ತೋರಿತು?

ಕಡಿದು ಬೀಳುವ ಕೈದುಗಳನರೆ
ಗಡಿದು ಜೋಲುವ ಜೋಡುಗಳ ನೆರೆ
ಸಿಡಿದು ಹಾರುವ ಸೀಸಕದ ನುಗ್ಗಾದ ಹಲಗೆಗಳ
ಉಡಿದ ಸಿಂಧದ ನೆಲಕೆ ಹರಹಿದ
ಕೊಡೆಯ ಚಮರದ ತಾರು ಥಟ್ಟಿಗೆ
ಕೆಡೆದ ಚಾತುರ್ಬಲವನಭಿವರ್ಣಿಸುವನಾರೆಂದ (ದ್ರೋಣ ಪರ್ವ, ೧೮ ಸಂಧಿ, ೫ ಪದ್ಯ)

ತಾತ್ಪರ್ಯ:
ತುಂಡಾಗಿ ಬಿದ್ದ ಆಯುಧಗಳು, ಅರೆ ತುಂಡಾಗಿ ಜೋಲುವ ಕವಚಗಳು, ಸಿಡಿದು ಹಾರುವ ಸೀಸಕಗಳು, ಪುಡಿಪುಡಿಯಾದ ಗುರಾಣಿಗಳು, ಮುರಿದ ಧ್ವಜದಂಡಗಳು, ನೆಲಕ್ಕೆ ಬಿದ್ದ ಛತ್ರಿಗಳು, ಚಾಮರಗಳು, ತಂಡ ತಂಡಗಳಾಗಿ ಬಿದ್ದ ಚತುರಂಗ ಸೈನ್ಯಗಳು ರಣರಂಗದಲ್ಲಿ ಕಾಣಿಸಿದವು. ಅದನ್ನು ಯಾರು ತಾನೆ ವರ್ಣಿಸುವವರು ಎಂದು ಸಂಜಯನು ವಿವರಿಸಿದನು.

ಅರ್ಥ:
ಕಡಿ: ಸೀಳು; ಬೀಳು: ಕುಸಿ; ಕೈದು: ಆಯುಧ; ಅರೆ: ಅರ್ಧ; ಜೋಲು: ತೂಗಾದು; ಜೋಡು: ಜೊತೆ; ನೆರೆ: ಗುಂಪು; ಸಿಡಿ: ಸೀಳು; ಹಾರು: ಲಂಘಿಸು; ಸೀಸಕ: ಶಿರಸ್ತ್ರಾಣ; ನುಗ್ಗು: ತಳ್ಳು; ಹಲಗೆ: ಗುರಾಣಿ; ಉಡಿ: ಮುರಿ, ತುಂಡು ಮಾಡು; ಸಿಂಧ:ಬಾವುಟ; ನೆಲ: ಭೂಮಿ; ಹರಹು: ವಿಸ್ತಾರ, ವೈಶಾಲ್ಯ; ಕೊಡೆ: ಛತ್ರಿ; ಚಮರ: ಚಾಮರ; ತಾರು: ಸೊರಗು; ಥಟ್ಟು: ಗುಂಪು; ಕೆಡೆ: ಬೀಳು, ಕುಸಿ; ಚಾತುರ್ಬಲ: ಚತುರಂಗ ಬಲ; ಅಭಿವರ್ಣಿಸು: ವಿಸ್ತಾರವಾಗಿ ಹೇಳು;

ಪದವಿಂಗಡಣೆ:
ಕಡಿದು +ಬೀಳುವ +ಕೈದುಗಳನ್+ಅರೆ
ಕಡಿದು +ಜೋಲುವ +ಜೋಡುಗಳ +ನೆರೆ
ಸಿಡಿದು +ಹಾರುವ +ಸೀಸಕದ +ನುಗ್ಗಾದ +ಹಲಗೆಗಳ
ಉಡಿದ +ಸಿಂಧದ +ನೆಲಕೆ +ಹರಹಿದ
ಕೊಡೆಯ +ಚಮರದ +ತಾರು +ಥಟ್ಟಿಗೆ
ಕೆಡೆದ +ಚಾತುರ್ಬಲವನ್+ಅಭಿವರ್ಣಿಸುವನ್+ಆರೆಂದ

ಅಚ್ಚರಿ:
(೧) ಕಡಿದು, ಸಿಡಿದು; ಉಡಿದ, ಕಡೆದ – ಪ್ರಾಸ ಪದ
(೨) ಕೈದು, ಜೋದು, ಸೀಸಕ, ಹಲಗೆ, ಸಿಂಧ, ಕೊಡೆ, ಚಮರ – ರಥಿಕರ ಬಳಿಯಿರುವ ಸಾಧನಗಳು

ಪದ್ಯ ೩೬: ಕರ್ಣನೇಕೆ ಭೂಮಿಗಿಳಿದು ಯುದ್ಧ ಮಾಡಿದನು?

ತರಹರಿಸು ಬಿಲುಗಾರನಾದರೆ
ಪರಿಹರಿಸಿಕೊಳ್ಳೆನುತ ಪವನಜ
ಬಿರುಗಣೆಯಲಿರದೆಚ್ಚನಹಿತನ ಧನುವ ಸಾರಥಿಯ
ತುರಗವನು ಸಿಂಧವನು ಮಾರ್ಗಣ
ವೆರಡರಲಿ ನುಗ್ಗೊತ್ತೆ ರಥದಿಂ
ಧರಣಿಗಿಳಿದನು ಕರ್ಣ ಕೊಂಡನು ಹಲಗೆ ಖಂಡೆಯವ (ದ್ರೋಣ ಪರ್ವ, ೧೩ ಸಂಧಿ, ೩೬ ಪದ್ಯ)

ತಾತ್ಪರ್ಯ:
ನೀನು ಬಿಲ್ಲುಗಾರನೇ ಆದರೆ, ಸ್ವಲ್ಪ ಸಹಿಸು, ನನ್ನ ಬಾಣಗಳನ್ನು ನಿವಾರಿಸಿಕೋ ಎನ್ನುತ್ತಾ ಭೀಮನು ಕರ್ಣನ ಧನುಸ್ಸು, ಸಾರಥಿ, ಕುದುರೆಗಳು, ಧ್ವಜಗಳನ್ನು ಎರಡು ಬಾಣಗಳಿಂದ ಕಡಿದು ಹಾಕಲು, ಕರ್ಣನು ಭೂಮಿಗಿಳಿದು ಕತ್ತಿ ಗುರಾಣಿಗಳನ್ನು ಹಿಡಿದು ಯುದ್ಧಮಾಡಲು ನಿಂತನು.

ಅರ್ಥ:
ತರಹರಿಸು: ಕಳವಳಿಸು, ಸೈರಿಸು; ಬಿಲುಗಾರ: ಧನುರ್ಧರ; ಪರಿಹರಿಸು: ನಿವಾರಿಸು; ಪವನಜ: ವಾಯುಪುತ್ರ; ಕಣೆ: ಬಾಣ; ಎಚ್ಚು: ಬಾಣ ಪ್ರಯೋಗ ಮಾಡು; ಧನು: ಬಿಲ್ಲು; ಸಾರಥಿ: ಸೂತ; ತುರಗ: ಅಶ್ವ; ಸಿಂಧ: ಪತಾಕೆ, ಬಾವುಟ; ಮಾರ್ಗಣ: ಬಾಣ; ನುಗ್ಗು: ತಳ್ಳು; ಒತ್ತು: ಮುತ್ತು; ರಥ: ಬಂಡಿ; ಧರಣಿ: ಭೂಮಿ; ಇಳಿ: ಕುಸಿ; ಕೊಂಡು: ಧರಿಸು; ಹಲಗೆ: ಒಂದು ಬಗೆಯ ಗುರಾಣಿ; ಖಂಡೆಯ: ಕತ್ತಿ, ಖಡ್ಗ;

ಪದವಿಂಗಡಣೆ:
ತರಹರಿಸು +ಬಿಲುಗಾರನಾದರೆ
ಪರಿಹರಿಸಿಕೊಳ್ಳೆನುತ +ಪವನಜ
ಬಿರುಗಣೆಯಲಿರದ್+ಎಚ್ಚನ್+ಅಹಿತನ +ಧನುವ +ಸಾರಥಿಯ
ತುರಗವನು +ಸಿಂಧವನು +ಮಾರ್ಗಣವ್
ಎರಡರಲಿ +ನುಗ್ಗೊತ್ತೆ +ರಥದಿಂ
ಧರಣಿಗಿಳಿದನು +ಕರ್ಣ +ಕೊಂಡನು+ ಹಲಗೆ+ ಖಂಡೆಯವ

ಅಚ್ಚರಿ:
(೧) ಬಿಲು, ಧನು; ಕಣೆ, ಮಾರ್ಗಣ – ಸಮಾನಾರ್ಥಕ ಪದ

ಪದ್ಯ ೫೦: ಭಗದತ್ತನು ಅರ್ಜುನನ ಮೇಲೆ ಹೇಗೆ ಆಕ್ರಮಣ ಮಾಡಿದನು?

ನರನ ಶರಜಾಲವನು ಖಂಡಿಸಿ
ಸುರಿದನಂಬನು ಕೃಷ್ಣರಾಯನ
ಸಿರಿಯೊಡಲ ಸೋಂಕಿದವು ನೂಕಿದವಂಬು ಗರಿ ಸಹಿತ
ನ್ರನ ಕುದುರೆಯ ಮೇಲೆ ಸಿಂಧದ
ಹರಿಯ ತನುವಿನ ಮೇಲೆ ತಳಿತವು
ಶರನಿಕರ ಬಿಡದೆಚ್ಚನಾ ಭಗದತ್ತನರ್ಜುನನ (ದ್ರೋಣ ಪರ್ವ, ೩ ಸಂಧಿ, ೫೦ ಪದ್ಯ)

ತಾತ್ಪರ್ಯ:
ಭಗದತ್ತನು ಅರ್ಜುನನ ಬಾಣಗಳನ್ನು ಕಡಿದು ಬಾಣಗಳ ಮಳೆಯನ್ನು ಸುರಿಸಿದನು. ಅವನ ಬಾಣಗಳು ಶ್ರೀ ಕೃಷ್ಣನ ದೇಹದಲ್ಲಿ ನಟ್ಟವು. ಕುದುರೆಗಳ ದೇಹದಲ್ಲಿ ಗರಿಸಹಿತ ನುಗ್ಗಿದವು. ಬಾವುಟದಲ್ಲಿದ್ದ ಹನುಮಂತನಿಗೂ ನಟ್ಟವು. ಭಗದತ್ತನು ಮತ್ತೆ ಮತ್ತೆ ಅರ್ಜುನನನ್ನು ಹೊಡೆದನು.

ಅರ್ಥ:
ನರ: ಅರ್ಜುನ; ಶರಜಾಲ: ಬಾಣಗಳ ಗುಂಪು; ಖಂಡಿಸು: ನಾಶಪಡಿಸು; ಸುರಿ: ಹರಡು ಅಂಬು: ಬಾಣ; ರಾಯ: ರಾಜ; ಸಿರಿ: ಶ್ರೇಷ್ಠ, ಐಶ್ವರ್ಯ; ಒಡಲು: ದೇಹ; ಸೋಂಕು: ತಾಗು; ನೂಕು: ತಳ್ಳು; ಗರಿ: ಬಾಣದ ಹಿಂಭಾಗ; ಸಹಿತ: ಜೊತೆ; ಕುದುರೆ: ಅಶ್ವ; ಸಿಂಧ: ಬಾವುಟ; ಹರಿ: ಕೋತಿ, ಹನುಮ; ತನು: ದೇಹ; ತಳಿತ: ಚಿಗುರಿದ; ಶರ: ಬಾಣ; ನಿಕರ: ಗುಂಪು; ಬಿಡು: ತೆರಳು; ಎಚ್ಚು: ಬಾಣ ಪ್ರಯೋಗ;

ಪದವಿಂಗಡಣೆ:
ನರನ+ ಶರಜಾಲವನು +ಖಂಡಿಸಿ
ಸುರಿದನ್+ಅಂಬನು +ಕೃಷ್ಣರಾಯನ
ಸಿರಿ+ಒಡಲ +ಸೋಂಕಿದವು +ನೂಕಿದವ್+ಅಂಬು +ಗರಿ +ಸಹಿತ
ನರನ+ ಕುದುರೆಯ+ ಮೇಲೆ +ಸಿಂಧದ
ಹರಿಯ +ತನುವಿನ +ಮೇಲೆ +ತಳಿತವು
ಶರ+ನಿಕರ+ ಬಿಡದ್+ಎಚ್ಚನಾ +ಭಗದತ್ತನ್+ಅರ್ಜುನನ

ಅಚ್ಚರಿ:
(೧) ಶರಜಾಲ, ಶರನಿಕರ, ಅಂಬು – ಸಮಾನಾರ್ಥಕ ಪದ
(೨) ನರನ – ೧, ೪ ಸಾಲಿನ ಮೊದಲ ಪದ

ಪದ್ಯ ೫೬: ಪಾಂಡವರ ಸೈನ್ಯದ ಸ್ಥಿತಿ ಏನಾಯಿತು?

ನರರ ಕಡಿಯಾನೆಗಳ ಕಡಿಯಲಿ
ಬೆರಸಿದವು ತೇಜಿಗಳ ಕರುಳಲಿ
ಕರಿಘಟೆಯ ಕರುಳುಗಳು ತೊಡಕಿದವುಡಿದ ತೇರುಗಳು
ಜರಿದ ಜೋಡಿನೊಳೊಂದಿದವು ಕ
ತ್ತರಿಸಿದಾಯುಧ ಕಡಿದ ಸಿಂಧದ
ಹೊರಳಿಯಲಿ ಹೂಳಿದವು ನಿಮಿಷ ಪಾಂಡು ಸೇನೆಯಲಿ (ದ್ರೋಣ ಪರ್ವ, ೨ ಸಂಧಿ, ೫೬ ಪದ್ಯ)

ತಾತ್ಪರ್ಯ:
ದ್ರೋಣನ ಬಾಣಗಳಿಂದ ಮನುಷ್ಯರ ಮಾಂಸಖಂಡಗಳಲ್ಲಿ ಆನೆಗಳು ತುಂಡುಗಳ ಸೇರಿ ಹೋದವು. ಆನೆಯ ಕರುಳುಗಳು ಕುದುರೆಯ ಕರುಳುಗಳಲ್ಲಿ ಸಿಕ್ಕಿದವು. ಮುರಿದ ತೇರುಗಳು ಆನೆಗಳ ಕವಚಗಳಲ್ಲಿ ಬೆರೆತವು. ತುಂಡಾದ ಶತ್ರುಗಳ ಬಾಣಗಳು ಮುರಿದ ಧ್ವಜಗಲಲ್ಲಿ ಹೂತು ಹೋದವು. ಒಂದು ನಿಮಿಷದಲ್ಲಿ ಆಂಡವರ ಸೇನೆ ದುರ್ಗತಿಗೀಡಾಯಿತು.

ಅರ್ಥ:
ನರ: ಮನುಷ್ಯ; ಕಡಿ: ಸೀಳು; ಆನೆ: ಗಜ; ಬೆರಸು: ಜೊತೆಗೂಡಿಸು, ಕಲಸು; ತೇಜಿ: ಕುದುರೆ; ಕರುಳು: ಪಚನಾಂಗ; ಕರಿಘಟೆ: ಆನೆಯ ಗುಂಪು; ಕರುಳು: ಪಚನಾಂಗ; ತೊಡಕು: ಸಿಕ್ಕು, ಗೋಜು; ಉಡಿ: ಮುರಿ, ತುಂಡು ಮಾಡು; ತೇರು: ರಥ; ಜರಿ: ಅಳುಕು, ಹಿಂಜರಿ, ಪತನವಾಗು; ಜೋಡು: ಜೊತೆ, ಜೋಡಿ; ಕತ್ತರಿಸು: ತುಂಡು ಮಾದು; ಆಯುಧ: ಶಸ್ತ್ರ; ಕಡಿ: ಕತ್ತರಿಸು; ಸಿಂಧ: ಒಂದು ಬಗೆ ಪತಾಕೆ, ಬಾವುಟ; ಹೊರಳಿ: ಗುಂಪು; ಹೂಳು: ಹೂತು ಹಾಕು; ನಿಮಿಷ: ಕ್ಷಣಮಾತ್ರ; ಸೇನೆ: ಸೈನ್ಯ;

ಪದವಿಂಗಡಣೆ:
ನರರ+ ಕಡಿ+ಆನೆಗಳ +ಕಡಿಯಲಿ
ಬೆರಸಿದವು+ ತೇಜಿಗಳ+ ಕರುಳಲಿ
ಕರಿ+ಘಟೆಯ +ಕರುಳುಗಳು +ತೊಡಕಿದವ್+ಉಡಿದ +ತೇರುಗಳು
ಜರಿದ+ ಜೋಡಿನೊಳ್+ಒಂದಿದವು+ ಕ
ತ್ತರಿಸಿದ್+ಆಯುಧ +ಕಡಿ+ದ ಸಿಂಧದ
ಹೊರಳಿಯಲಿ +ಹೂಳಿದವು+ ನಿಮಿಷ+ ಪಾಂಡು +ಸೇನೆಯಲಿ

ಅಚ್ಚರಿ:
(೧) ಆನೆ, ಕರಿ – ಸಮಾನಾರ್ಥಕ ಪದ
(೨) ಯುದ್ಧದ ಚಿತ್ರಣ – ನರರ ಕಡಿಯಾನೆಗಳ ಕಡಿಯಲಿ ಬೆರಸಿದವು

ಪದ್ಯ ೨೦: ದ್ರೋಣನು ರಣರಂಗವನ್ನು ಹೇಗೆ ಹೊಕ್ಕನು?

ಬಳಿಯ ಸುಮಹಾರಥರ ರಾಜಾ
ವಳಿಯ ಚಮರಚ್ಛತ್ರ ಪಾಳಿಯ
ಸೆಳೆದಡಾಯುಧ ಹೆಗಲ ತೆಕ್ಕೆಯ ರಾಯ ರಾವುತರ
ಹೊಳೆವ ಹೇಮದ ರಥಕೆ ಹೂಡಿದ
ತಿಲಕಗುದುರೆಯ ನೆಗಹಿ ನಿಗುರುವ
ಕಳಶ ಸಿಂಧದ ದ್ರೋಣ ಹೊಕ್ಕನು ಕಾಳೆಗದ ಕಳನ (ದ್ರೋಣ ಪರ್ವ, ೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ಸುತ್ತಲೂ ಮಹಾರಥರು, ಮಕುಟಧಾರಿಗಳಾದ ರಾಜರ ಗುಂಪು, ಅವರ ಸುತ್ತ ಚಾಮರ, ಛತ್ರಧಾರರು, ದಟ್ಟವಾಗಿ ಬರುವ ರಾಯ, ರಾವುತರು, ಇರಲು, ಬಂಗಾರದ ರಥಕ್ಕೆ ಕಟ್ಟಿದ ಶ್ರೇಷ್ಠವಾದ ಕುದುರೆಗಳು ತವಕದಿಂದ ನುಗ್ಗುತ್ತಿರಲು, ಕಲಶಧ್ವಜನಾದ ದ್ರೋಣನು ಯುದ್ಧರಂಗಕ್ಕೆ ಹೊಕ್ಕನು.

ಅರ್ಥ:
ಬಳಿ: ಹತ್ತಿರ; ಮಹಾರಥ: ಪರಾಕ್ರಮಿ; ರಾಜಾವಳಿ: ರಾಜರ ಗುಂಪು; ಚಮರ: ಚಾಮರ; ಛತ್ರ: ಕೊಡೆ; ಪಾಳಿ: ಸರದಿ, ಸಾಲು; ಸೆಳೆ: ಜಗ್ಗು, ಎಳೆ; ಆಯುಧ: ಶಸ್ತ್ರ; ಹೆಗಲು: ಭುಜ; ತೆಕ್ಕೆ: ಅಪ್ಪುಗೆ, ಆಲಿಂಗನ; ರಾಯ: ರಾಜ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಹೊಳೆ: ಪ್ರಕಾಶ; ಹೇಮ: ಚಿನ್ನ; ರಥ: ಬಂಡಿ; ಹೂಡು: ಅಣಿಗೊಳಿಸು; ತಿಲಕ: ಶ್ರೇಷ್ಠ; ಕುದುರೆ: ಅಶ್ವ; ನೆಗಹು: ಮೇಲೆತ್ತು; ನಿಗುರು: ಚಾಚಿರುವಿಕೆ; ಕಳಶ: ಕುಂಭ; ಸಿಂಧ: ಬಾವುಟ; ಹೊಕ್ಕು: ಸೇರು; ಕಾಳೆಗ: ಯುದ್ಧ; ಕಳ: ರಣರಂಗ

ಪದವಿಂಗಡಣೆ:
ಬಳಿಯ +ಸುಮಹಾರಥರ+ ರಾಜಾ
ವಳಿಯ +ಚಮರ+ಚ್ಛತ್ರ +ಪಾಳಿಯ
ಸೆಳೆದಡ್+ಆಯುಧ +ಹೆಗಲ +ತೆಕ್ಕೆಯ +ರಾಯ +ರಾವುತರ
ಹೊಳೆವ +ಹೇಮದ +ರಥಕೆ +ಹೂಡಿದ
ತಿಲಕ+ಕುದುರೆಯ +ನೆಗಹಿ +ನಿಗುರುವ
ಕಳಶ +ಸಿಂಧದ +ದ್ರೋಣ +ಹೊಕ್ಕನು +ಕಾಳೆಗದ +ಕಳನ

ಅಚ್ಚರಿ:
(೧) ದ್ರೋಣನ ಆಗಮನ – ಹೊಳೆವ ಹೇಮದ ರಥಕೆ ಹೂಡಿದ ತಿಲಕಗುದುರೆಯ ನೆಗಹಿ ನಿಗುರುವ
ಕಳಶ ಸಿಂಧದ ದ್ರೋಣ ಹೊಕ್ಕನು ಕಾಳೆಗದ ಕಳನ

ಪದ್ಯ ೬೪: ಕೌರವ ಸೈನ್ಯದ ದುಃಸ್ಥಿತಿಯನ್ನು ಯಾರು ಕಂಡರು?

ಒಟ್ಟಿದವು ಕೈದುಗಳು ಸತ್ತಿಗೆ
ಬೆಟ್ಟವಾದವು ಸಿಂಧಸೆಳೆಗಳು
ನಟ್ಟಡವಿ ಪವಡಿಸಿದ ತೆರನಾದುದು ರಣಾಗ್ರದಲಿ
ಥಟ್ಟು ಮುರಿದುದು ಕೂಡೆ ತೆರೆ ಸಾ
ಲಿಟ್ಟ ಸಾಗರದಂತೆ ರಾಯಘ
ರಟ್ಟ ಕಂಡನು ಕೌರವೇಶ್ವರ ಸಕಲ ಮೋಹರವ (ಭೀಷ್ಮ ಪರ್ವ, ೮ ಸಂಧಿ, ೬೪ ಪದ್ಯ)

ತಾತ್ಪರ್ಯ:
ಶಸ್ತ್ರಾಸ್ತ್ರಗಳೂ, ಧ್ವಜಗಳೂ ಬೆಟ್ಟದಮ್ತೆ ಬಿದ್ದವು. ರಣರಂಗವು ಮರಗಿಡಗಳು ಮಲಗಿದ ಅಡವಿಯಂತೆ ಕಾಣುತ್ತಿತ್ತು. ಸೈನ್ಯವು ಚಲ್ಲಾಪಿಲ್ಲಿಯಾಯಿತು. ಹಿಮ್ಮೆಟ್ಟುವ ಸೈನ್ಯವು ಸಮುದ್ರದ ತೆರೆಗಳಂತೆ ತೋರಿತು. ತನ್ನ ಸಮಸ್ತ ಸೈನ್ಯದ ದುಃಸ್ಥಿತಿಯನ್ನು ಕೌರವನು ನೋಡಿದನು.

ಅರ್ಥ:
ಒಟ್ಟು: ಗುಂಪು; ಕೈದು: ಆಯುಧ; ಸತ್ತಿಗೆ: ಕೊಡೆ, ಛತ್ರಿ; ಬೆಟ್ಟ: ಗಿರಿ; ಸಿಂಧ: ಒಂದು ಬಗೆ ಪತಾಕೆ, ಬಾವುಟ; ಸೆಳೆ: ಜಗ್ಗು, ಎಳೆ; ಅಡವಿ: ಕಾಡು; ಪವಡಿಸು: ಮಲಗು; ತೆರ: ಪದ್ಧತಿ, ತರಹ; ರಣಾಗ್ರ: ಯುದ್ಧದ ಮುಂಭಾಗ; ಥಟ್ಟು: ಗುಂಪು; ಮುರಿ: ಸೀಳು; ಕೂಡೆ: ಜೊತೆ; ತೆರೆ: ತೆಗೆ, ಬಿಚ್ಚು; ಸಾಲು: ಆವಳಿ, ಗುಂಪು; ಸಾಗರ: ಅಂಬುಧಿ, ಸಮುದ್ರ; ರಾಯ: ರಾಜ; ಅಘ: ಪಾಪ; ಕಂಡು: ತೋರು; ಸಕಲ: ಎಲ್ಲಾ; ಮೋಹರ: ಯುದ್ಧ;

ಪದವಿಂಗಡಣೆ:
ಒಟ್ಟಿದವು +ಕೈದುಗಳು +ಸತ್ತಿಗೆ
ಬೆಟ್ಟವಾದವು +ಸಿಂಧ+ಸೆಳೆಗಳು
ನಟ್ಟಡವಿ +ಪವಡಿಸಿದ+ ತೆರನಾದುದು +ರಣಾಗ್ರದಲಿ
ಥಟ್ಟು +ಮುರಿದುದು +ಕೂಡೆ +ತೆರೆ +ಸಾ
ಲಿಟ್ಟ +ಸಾಗರದಂತೆ +ರಾಯಘ
ರಟ್ಟ +ಕಂಡನು +ಕೌರವೇಶ್ವರ +ಸಕಲ +ಮೋಹರವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಒಟ್ಟಿದವು ಕೈದುಗಳು ಸತ್ತಿಗೆ ಬೆಟ್ಟವಾದವು; ಥಟ್ಟು ಮುರಿದುದು ಕೂಡೆ ತೆರೆ ಸಾಲಿಟ್ಟ ಸಾಗರದಂತೆ

ಪದ್ಯ ೬೦: ಭೀಷ್ಮರ ರಥವು ಹೇಗಿತ್ತು?

ಅತ್ತಲೈದನೆ ಬಹಳ ಬಲದೊ
ತ್ತೊತ್ತೆಯಲಿ ನಮ್ಮುಭಯ ರಾಯರ
ಮುತ್ತಯನು ತಾನೆನಿಸಿ ಹೂಡಿದ ಬಳಿಯ ತೇಜಿಗಳ
ತೆತ್ತಿಸಿದ ಹೊಂದಾಳ ಸಿಂಧದ
ಸತ್ತಿಗೆಯ ಸಾಲಿನಲಿ ರಿಪುಕುಲ
ಮೃತ್ಯುವಾತನು ವೀರಗಂಗಾಸುತನು ನೋಡೆಂದ (ವಿರಾಟ ಪರ್ವ, ೭ ಸಂಧಿ, ೬೦ ಪದ್ಯ)

ತಾತ್ಪರ್ಯ:
ಅಲ್ಲಿ ನೋಡು ಸೈನ್ಯದ ಮಧ್ಯದಲ್ಲಿ, ನಮಗೂ ಕೌರವರಿಗೂ ಪಿತಾಮಹರಾದ, ಬಿಳಿಯ ಕುದುರೆಗಳ ರಥದಲ್ಲಿರುವವರು ಗಂಗಾಸುತರಾದ ಭೀಷ್ಮರು. ಇವರ ರಥದ ಧ್ವಜದಲ್ಲಿ ಚಿನ್ನವರ್ಣದ ತಾಳದ ಚಿಹ್ನೆಯನ್ನು ನೋಡು. ಇವರು ವೈರಿಗಳ ಪಡೆಗೆ ಮೃತ್ಯುವೆನಿಸಿದ್ದಾರೆ.

ಅರ್ಥ:
ಐದು: ಬಂದು ಸೇರು; ಬಹಳ: ತುಂಬ; ಬಲ: ಸೈನ್ಯ; ಒತ್ತು: ಗುಂಪು, ದಟ್ಟಣೆ; ಉಭಯ: ಎರಡು; ರಾಯ: ರಾಜ; ಮುತ್ತ: ವಯಸ್ಸಾದವನು, ಮುದುಕ; ಹೂಡು: ಅಣಿಗೊಳಿಸು; ಬಿಳಿ: ಶ್ವೇತ; ತೇಜಿ: ಕುದುರೆ; ತೆತ್ತಿಸು: ಜೋಡಿಸು; ಹೊಂದಾಳ: ಚಿನ್ನ ವರ್ಣದ ತಾಳ; ಸಿಂಧ: ಬಾವುಟ; ಸತ್ತಿಗೆ: ಕೊಡೆ, ಛತ್ರಿ; ಸಾಲು: ಗುಂಪು; ರಿಪು: ವೈರಿ; ಕುಲ: ವಂಶ; ಮೃತ್ಯು: ಸಾವು; ವೀರ: ಪರಾಕ್ರಮಿ; ಸುತ: ಮಗ; ನೋಡು: ವೀಕ್ಷಿಸು;

ಪದವಿಂಗಡಣೆ:
ಅತ್ತಲ್+ಐದನೆ +ಬಹಳ+ ಬಲದ್
ಒತ್ತೊತ್ತೆಯಲಿ +ನಮ್ಮುಭಯ +ರಾಯರ
ಮುತ್ತಯನು +ತಾನೆನಿಸಿ +ಹೂಡಿದ +ಬಳಿಯ +ತೇಜಿಗಳ
ತೆತ್ತಿಸಿದ +ಹೊಂದಾಳ +ಸಿಂಧದ
ಸತ್ತಿಗೆಯ +ಸಾಲಿನಲಿ +ರಿಪುಕುಲ
ಮೃತ್ಯುವಾತನು +ವೀರ+ಗಂಗಾಸುತನು +ನೋಡೆಂದ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸಿಂಧದ ಸತ್ತಿಗೆಯ ಸಾಲಿನಲಿ

ಪದ್ಯ ೧೪: ಕರ್ಣನ ಬಾಣ ಯಾರ ಕವಚವನ್ನು ಸೀಳಿತು?

ಏನ ಹೇಳುವೆನರಸ ಕೇಳ್ ನಿ
ನ್ನಾನೆಯಗ್ಗಳಿಕೆಯನು ಮುಂದಣ
ದಾನವಾಂತಕನುರವನೆಚ್ಚನು ಜೋಡನೊಡೆಬಗಿದು
ಆ ನಿರೂಢಿಯ ಹಯದ ಘಾಯವ
ನೇನನೆಂಬೆನು ಜೀಯ ಸಿಂಧದ
ವಾನರನ ವೇದನೆಯ ಗಣನೆಯನರಿಯೆ ನಾನೆಂದ (ಕರ್ಣ ಪರ್ವ, ೨೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ನಿನ್ನ ಬಲಶಾಲಿಯಾದ ಕರ್ಣನ ಯುದ್ಧ ಕೌಶಲವನ್ನು ಏನೆಂದು ಹೇಳಲಿ, ಕರ್ಣನು ಕೃಷ್ಣನ ಕವಚವನ್ನು ಸೀಳಿ ಎದೆಯು ಗಾಯವಾಗುವಂತೆ ಬಾಣ ಪ್ರಯೋಗ ಮಾಡಿದನು. ಅರ್ಜುನನ ರಥದ ದಿವ್ಯಾಶ್ವಗಳೂ ಗಾಯಗೊಂಡವು. ಬಾವುಟದಲ್ಲಿದ್ದ ಹನುಮನ ವೇದನೆಯೆಷ್ಟೆಂದು ನಾನು ಹೇಗೆ ತಾನೆ ಹೇಳಲಿ ಎಂದು ಸಂಜಯನು ಹೇಳಿದನು.

ಅರ್ಥ:
ಹೇಳು: ತಿಳಿಸು; ಅರಸ: ರಾಜ; ಕೇಳ್: ಆಲಿಸು; ಆನೆ: ಬಲಶಾಲಿ; ಅಗ್ಗಳಿಕೆ: ಶ್ರೇಷ್ಠತೆ, ಹೆಚ್ಚುಗಾರಿಕೆ; ಮುಂದಣ: ಮುಂದೆ; ದಾನವ: ರಾಕ್ಷಸ; ಅಂತಕ: ಯಮ; ದಾನವಾಂತಕ: ಕೃಷ್ಣ; ಎಚ್ಚು: ಬಾಣ; ಜೋಡ: ಕವಚ, ಅಂಗರಕ್ಷೆ; ಬಗಿ: ಸೀಳು; ನಿರೂಢಿ: ವಿಶೇಷ ರೂಢಿಯಾದ; ಹಯ: ಕುದುರೆ; ಘಾಯ: ಪೆಟ್ಟು; ಜೀಯ: ಒಡೆಯ; ಸಿಂಧ: ಬಾವುಟ, ಪತಾಕೆ; ವಾನರ: ಹನುಮ; ವೇದನೆ: ನೋವು; ಗಣನೆ: ಲೆಕ್ಕ; ಅರಿ: ತಿಳಿ; ಉರ: ಎದೆ, ವಕ್ಷಸ್ಥಳ;

ಪದವಿಂಗಡಣೆ:
ಏನ +ಹೇಳುವೆನ್+ಅರಸ +ಕೇಳ್ +ನಿನ್
ಆನೆ+ಅಗ್ಗಳಿಕೆಯನು +ಮುಂದಣ
ದಾನವಾಂತಕನ್+ಉರವನ್+ಎಚ್ಚನು +ಜೋಡನ್+ಒಡೆಬಗಿದು
ಆ +ನಿರೂಢಿಯ +ಹಯದ +ಘಾಯವನ್
ಏನನೆಂಬೆನು +ಜೀಯ +ಸಿಂಧದ
ವಾನರನ +ವೇದನೆಯ +ಗಣನೆಯನ್+ಅರಿಯೆ +ನಾನೆಂದ

ಅಚ್ಚರಿ:
(೧) ಕರ್ಣನ ಪರಾಕ್ರಮವನ್ನು ತಿಳಿಸುವ ಪದ್ಯ – ದಾನವಾಂತಕನುರವನೆಚ್ಚನು ಜೋಡನೊಡೆಬಗಿದು
(೨) ಏನ ಹೇಳುವೆ, ಏನನೆಂಬೆನು – ಸಾಮ್ಯಾರ್ಥ ಪದಗಳು