ಪದ್ಯ ೯: ಕೃಷ್ಣನ ಆಟವು ಯಾವ ಮಹಾರಥರನ್ನು ಸಂಹರಿಸಿತ್ತು?

ಕ್ರತುಹರನ ಸಮಜೋಳಿ ಗಂಗಾ
ಸುತನ ಜಯಿಸಿದರವರ ತೂಕದ
ವಿತತಬಲರೈ ಭಾವನವರೊಗ್ಗಿದರು ದಿವಿಜರಲಿ
ಅತಿರಥರೊಳಗ್ಗಳೆಯ ರಾಧಾ
ಸುತ ಸುಯೋಧನ ಮಾದ್ರಪತಿಯೀ
ವ್ಯತಿಕರದೊಳೇನಾದರಿದು ಮುರಹರನ ಕೃತಿಯೆಂದ (ಗದಾ ಪರ್ವ, ೯ ಸಂಧಿ, ೯ ಪದ್ಯ)

ತಾತ್ಪರ್ಯ:
ಭೀಷ್ಮರು ಶಿವನಿಗೆ ಸಮಬಲರಾದವರು. ಪಾಂಡವರು ಅವರನ್ನು ಜಯಿಸಿದರು. ಭಾವನವರು (ದ್ರೋಣ) ಭೀಷ್ಮನ ಸರಿಸಮಾನ ಬಲವುಳ್ಳವರಾದರೂ, ದೇವತೆಗಳೊಡನೆ ಸೇರಿದರು. ಅತಿರಥರಲ್ಲಿ ಮಿಕ್ಕನವರಾದ ಕರ್ಣ, ಶಲ್ಯ, ಸುಯೋಧನರು ಈ ಯುದ್ಧದಲ್ಲಿ ಏನಾದರು? ಇಷ್ಟೆಲ್ಲಾ ಕೃಷ್ಣನ ಆಟ.

ಅರ್ಥ:
ಕ್ರತು: ಯಾಗ, ಯಜ್ಞ; ಕ್ರತುಹರ: ಶಿವ; ಸಮಜೋಳಿ: ಸಮಾನ; ಸುತ: ಮಗ; ಜಯಿಸು: ಗೆಲ್ಲು; ತೂಕ: ಭಾರ; ವಿತತ: ವಿಸ್ತಾರವಾದ; ಬಲ: ಶಕ್ತಿ, ಸೈನ್ಯ; ಭಾವ: ಭಾವನೆ; ಒಗ್ಗು: ಗುಂಪು, ಸಮೂಹ, ಸೇರು; ದಿವಿಜ: ದೇವತೆ; ಅತಿರಥ: ಶೂರ, ಪರಾಕ್ರಮಿ; ಅಗ್ಗಳೆ: ಶ್ರೇಷ್ಠ; ರಾಧಾಸುತ: ಕರ್ಣ; ವ್ಯತಿಕರ: ಆಪತ್ತು, ಕೇಡು; ಕೃತಿ: ಕೆಲಸ;

ಪದವಿಂಗಡಣೆ:
ಕ್ರತುಹರನ+ ಸಮಜೋಳಿ +ಗಂಗಾ
ಸುತನ+ ಜಯಿಸಿದರ್+ಅವರ +ತೂಕದ
ವಿತತಬಲರೈ +ಭಾವನವರ್+ಒಗ್ಗಿದರು+ ದಿವಿಜರಲಿ
ಅತಿರಥರೊಳ್+ಅಗ್ಗಳೆಯ +ರಾಧಾ
ಸುತ +ಸುಯೋಧನ +ಮಾದ್ರಪತಿ+ಈ
ವ್ಯತಿಕರದೊಳ್+ಏನಾದರ್+ಇದು +ಮುರಹರನ +ಕೃತಿಯೆಂದ

ಅಚ್ಚರಿ:
(೧) ಶಿವನನ್ನು ಕ್ರತುಹರ (ಯಜ್ಞ ನಾಶಕ) ಎಂದು ಕರೆದಿರುವುದು
(೨) ಸತ್ತರು ಎಂದು ಹೇಳಲು – ಒಗ್ಗಿದರು ದಿವಿಜರಲಿ

ಪದ್ಯ ೨೮: ಯಾರ ಅಪ್ಪಣೆ ಮೇರೆಗೆ ಸೈನ್ಯವು ಪಾಳೆಯಕ್ಕೆ ಹಿಂದಿರುಗಿತು?

ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳ ಸೇನೆಯ ತೆಗೆಸಿದವು ಹೆ
ಗ್ಗಾಳೆ ಮೊಳಗಿದವಾನೆವರೆ ಗಜರಿದವು ಡೌಡೆಗಳು
ಪಾಳಯಕೆ ತಿರುಗಿದರಖಿಲ ಭೂ
ಪಾಲಕರು ಗಂಗಾಸುತನ ಪಾಂ
ಚಾಲಕನ ನೇಮದಲಿ ಕೌರವ ಪಾಂಡುನಂದನರು (ಭೀಷ್ಮ ಪರ್ವ, ೫ ಸಂಧಿ, ೨೮ ಪದ್ಯ)

ತಾತ್ಪರ್ಯ:
ಆ ದಿನದ ಯುದ್ಧವನ್ನು ಕೊನೆಗೊಳಿಸಲು ಭೇರಿಗಳು ಮೊಳಗಿ ಸನ್ನೆ ಮಾಡಿದವು. ನಗಾರಿ ಹೆಗ್ಗಾಳೆಗಳನ್ನೂದಿದರು. ಭೀಷ್ಮ ಧೃಷ್ಟಧ್ಯುಮ್ನರ ಅಪ್ಪಣೆಗನುಸಾರವಾಗಿ ಕೌರವ ಪಾಂಡವರ ಸೈನ್ಯಗಳು ಪಾಳೆಯಕ್ಕೆ ಹಿಂದಿರುಗಿದವು.

ಅರ್ಥ:
ಸೂಳೈಸು: ಧ್ವನಿ ಮಾಡು; ಸನ್ನೆ: ಗುರುತು, ಸಂಕೇತ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಸೇನೆ: ಸೈನ್ಯ; ತೆಗೆಸು: ಹೊರತರು; ಹೆಗ್ಗಾಳೆ: ದೊಡ್ಡ ಕಹಳೆ; ಮೊಳಗು: ಧ್ವನಿ, ಸದ್ದು; ಗಜರು: ಗರ್ಜಿಸು; ಡೌಡೆ: ನಗಾರಿ; ಪಾಳಯ: ಸೀಮೆ; ತಿರುಗು: ಮರಳು; ಅಖಿಲ: ಎಲ್ಲಾ; ಭೂಪಾಲಕ: ರಾಜ; ನೇಮ: ನಿಯಮ; ನಂದನ: ಮಕ್ಕಳು;

ಪದವಿಂಗಡಣೆ:
ಸೂಳವಿಸಿದವು +ಸನ್ನೆಯಲಿ +ನಿ
ಸ್ಸಾಳ +ಸೇನೆಯ+ ತೆಗೆಸಿದವು+ ಹೆ
ಗ್ಗಾಳೆ +ಮೊಳಗಿದವಾನೆವರೆ+ ಗಜರಿದವು+ ಡೌಡೆಗಳು
ಪಾಳಯಕೆ +ತಿರುಗಿದರ್+ಅಖಿಲ +ಭೂ
ಪಾಲಕರು +ಗಂಗಾಸುತನ +ಪಾಂ
ಚಾಲಕನ +ನೇಮದಲಿ +ಕೌರವ +ಪಾಂಡುನಂದನರು

ಅಚ್ಚರಿ:
(೧) ಡೌಡೆ, ಹೆಗ್ಗಾಳೆ, ನಿಸ್ಸಾಳ – ರಣವಾದ್ಯಗಳು

ಪದ್ಯ ೧೮: ಭೀಷ್ಮನನ್ನು ಯಾರು ತಡೆದರು?

ಮೇಲೆ ಹೇಳಿಕೆಯಾಯ್ತು ವರ ಪಾಂ
ಚಾಲರಿಗೆ ಚೈದ್ಯರಿಗೆ ಮತ್ಸ್ಯ ನೃ
ಪಾಲ ಸೃಂಜಯರಾದಿಯಾದಕ್ಷೋಹಿಣೀ ದಳಕೆ
ಸೂಳು ಮಿಗೆ ಗರ್ಜಿಸುವ ಘನ ನಿ
ಸ್ಸಾಳ ಕೋಟಿಯ ಗಡಣದೊಳು ಕೆಂ
ಗೋಲ ಮಳೆಗರೆಯುತ್ತ ಗಂಗಾಸುತನ ಕೆಣಕಿದರು (ಭೀಷ್ಮ ಪರ್ವ, ೫ ಸಂಧಿ, ೧೮ ಪದ್ಯ)

ತಾತ್ಪರ್ಯ:
ಕೂಡಲೇ ಪಾಂಡವ ಸೈನ್ಯದಲ್ಲಿ ಪಾಂಚಾಲ, ಚೈದ್ಯ, ವಿರಾಟ ಸೃಂಜಯ ಮೊದಲಾದವರ ಅಕ್ಷೋಹಿಣೀ ಸೈನ್ಯಗಳಿಗೆ ಭೀಷ್ಮನನ್ನೆದುರಿಸಲು ಆಜ್ಞೆಯಾಯಿತು. ರಣಕಹಳೆ ರಣಭೇರಿಗಳು ಮೊರೆಯಲು, ಅವರೆಲ್ಲರೂ ಕೆಂಪಾದ ಬಾಣಗಳ ಮಳೆ ಸುರಿಸುತ್ತಾ ಭೀಷ್ಮನನ್ನು ತಡೆದರು.

ಅರ್ಥ:
ಹೇಳು: ತಿಳಿಸು; ವರ: ಶ್ರೇಷ್ಠ; ನೃಪಾಲ: ರಾಜ; ಆದಿ: ಮುಂತಾದ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ದಳ: ಸೈನ್ಯ; ಸೂಳು: ಆವೃತ್ತಿ, ಬಾರಿ; ಗರ್ಜಿಸು: ಆರ್ಭಟಿಸು; ಘನ: ಶ್ರೇಷ್ಠ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಕೋಟಿ: ಅಸಂಖ್ಯಾತ; ಗಡಣ: ಗುಂಪು; ಕೆಂಗೋಲು: ಕೆಂಪಾದ ಬಾಣ; ಮಳೆ: ವರ್ಷ; ಸುತ: ಮಗ; ಕೆಣಕು: ರೇಗಿಸು, ಪ್ರಚೋದಿಸು;

ಪದವಿಂಗಡಣೆ:
ಮೇಲೆ +ಹೇಳಿಕೆಯಾಯ್ತು +ವರ +ಪಾಂ
ಚಾಲರಿಗೆ +ಚೈದ್ಯರಿಗೆ+ ಮತ್ಸ್ಯ +ನೃ
ಪಾಲ +ಸೃಂಜಯರಾದಿಯಾದ್+ ಅಕ್ಷೋಹಿಣೀ +ದಳಕೆ
ಸೂಳು +ಮಿಗೆ +ಗರ್ಜಿಸುವ +ಘನ +ನಿ
ಸ್ಸಾಳ +ಕೋಟಿಯ +ಗಡಣದೊಳು +ಕೆಂ
ಗೋಲ +ಮಳೆಗರೆಯುತ್ತ +ಗಂಗಾಸುತನ +ಕೆಣಕಿದರು

ಅಚ್ಚರಿ:
(೧) ಯುದ್ಧದ ವಿವರಣೆ – ಸೂಳು ಮಿಗೆ ಗರ್ಜಿಸುವ ಘನ ನಿಸ್ಸಾಳ ಕೋಟಿಯ ಗಡಣದೊಳು ಕೆಂಗೋಲ ಮಳೆಗರೆಯುತ್ತ

ಪದ್ಯ ೧೪: ಕೌರವರಿಗೆ ಯಾರ ನೇತೃತ್ವ ಅಗತ್ಯವೆಂದು ದ್ರೋಣರು ಹೇಳಿದರು?

ಅವರಿಗಸುರಾಂತಕ ಸಹಾಯನು
ನಿವಗೆ ಗಂಗಾಸುತನ ಬಲವಾ
ಹವವನೀತನ ನೇಮದಲಿ ನೆಗಳುವುದು ನೀತಿಯಿದು
ಅವರಿವರ ಮಾತಿನಲಿ ಫಲವಿ
ಲ್ಲವನಿಪತಿ ಕೇಳೆನಲು ಕಲಶೋ
ದ್ಭವನ ಮತದಲಿ ಬಳಿಕ ಮಣಿದನು ಕೌರವ ರಾಯ (ಭೀಷ್ಮ ಪರ್ವ, ೧ ಸಂಧಿ, ೧೪ ಪದ್ಯ)

ತಾತ್ಪರ್ಯ:
ಪಾಂದವರಿಗೆ ಶ್ರೀಕೃಷ್ಣನ ಸಹಾಯವಿದೆ, ನಿಮಗೆ ಭೀಷ್ಮನ ಬೆಂಬಲವಿದೆ, ಆದುದರಿಂದ ಭೀಷ್ಮನ ಅಪ್ಪಣೆಯಂತೆ ಯುದ್ಧವನ್ನು ಮಾಡಿರಿ, ಅವರಿವರ ಮಾತು ಕೇಳಿದರೆ ಯಾವ ಪ್ರಯೋಜನವೂ ಇಲ್ಲ ಎಂದು ದ್ರೋಣರು ಹೇಳಲು, ಸುಯೋಧನನು ದ್ರೋಣರ ಈ ಮಾತನ್ನು ಒಪ್ಪಿದನು.

ಅರ್ಥ:
ಅಸುರಾಂತಕ: ರಾಕ್ಷಸರ ಯಮ (ಕೃಷ್ಣ); ಸಹಾಯ: ನೆರವು; ಸುತ: ಪುತ್ರ; ಆಹವ: ಯುದ್ಧ; ಬಲ: ಶಕ್ತಿ; ನೇಮ: ನಿಯಮ; ನೆಗಳು: ಆಚರಿಸು; ಫಲ: ಪ್ರಯೋಜನ; ನೀತಿ: ಮಾರ್ಗ ದರ್ಶನ; ಮಾತು: ನುಡಿ; ಅವನಿಪತಿ: ರಾಜ; ಕಲಶೋದ್ಭವ: ಕಲಶದಿಂದ ಜನಿಸಿದ (ದ್ರೋಣ); ಮತ: ವಿಆರ; ಬಳಿಕ: ನಂತರ; ಮಣಿ: ಒಪ್ಪು; ರಾಯ: ರಾಜ;

ಪದವಿಂಗಡಣೆ:
ಅವರಿಗ್+ಅಸುರಾಂತಕ+ ಸಹಾಯನು
ನಿವಗೆ+ ಗಂಗಾಸುತನ +ಬಲವ್
ಆಹವವ್+ಈನೀತನ+ ನೇಮದಲಿ+ ನೆಗಳುವುದು +ನೀತಿಯಿದು
ಅವರಿವರ +ಮಾತಿನಲಿ+ ಫಲವಿಲ್ಲ್
ಅವನಿಪತಿ +ಕೇಳ್+ಎನಲು +ಕಲಶೋ
ದ್ಭವನ +ಮತದಲಿ +ಬಳಿಕ +ಮಣಿದನು +ಕೌರವರಾಯ

ಅಚ್ಚರಿ:
(೧) ಮಾತನ್ನು ಒಪ್ಪಿದನೆಂದು ಹೇಳುವ ಪರಿ – ಕಲಶೋದ್ಭವನ ಮತದಲಿ ಬಳಿಕ ಮಣಿದನು ಕೌರವರಾಯ
(೨) ರಾಯ, ಅವನಿಪತಿ – ಸಮನಾರ್ಥಕ ಪದ
(೩) ದ್ರೋಣರನ್ನು ಕಲಶೋದ್ಭವ, ಕೃಷ್ಣನನ್ನು ಅಸುರಾಂತಕ, ಭೀಷ್ಮರನ್ನು ಗಂಗಾಸುತ ಎಂದು ಕರೆದಿರುವುದು

ಪದ್ಯ ೬೦: ಭೀಷ್ಮರ ರಥವು ಹೇಗಿತ್ತು?

ಅತ್ತಲೈದನೆ ಬಹಳ ಬಲದೊ
ತ್ತೊತ್ತೆಯಲಿ ನಮ್ಮುಭಯ ರಾಯರ
ಮುತ್ತಯನು ತಾನೆನಿಸಿ ಹೂಡಿದ ಬಳಿಯ ತೇಜಿಗಳ
ತೆತ್ತಿಸಿದ ಹೊಂದಾಳ ಸಿಂಧದ
ಸತ್ತಿಗೆಯ ಸಾಲಿನಲಿ ರಿಪುಕುಲ
ಮೃತ್ಯುವಾತನು ವೀರಗಂಗಾಸುತನು ನೋಡೆಂದ (ವಿರಾಟ ಪರ್ವ, ೭ ಸಂಧಿ, ೬೦ ಪದ್ಯ)

ತಾತ್ಪರ್ಯ:
ಅಲ್ಲಿ ನೋಡು ಸೈನ್ಯದ ಮಧ್ಯದಲ್ಲಿ, ನಮಗೂ ಕೌರವರಿಗೂ ಪಿತಾಮಹರಾದ, ಬಿಳಿಯ ಕುದುರೆಗಳ ರಥದಲ್ಲಿರುವವರು ಗಂಗಾಸುತರಾದ ಭೀಷ್ಮರು. ಇವರ ರಥದ ಧ್ವಜದಲ್ಲಿ ಚಿನ್ನವರ್ಣದ ತಾಳದ ಚಿಹ್ನೆಯನ್ನು ನೋಡು. ಇವರು ವೈರಿಗಳ ಪಡೆಗೆ ಮೃತ್ಯುವೆನಿಸಿದ್ದಾರೆ.

ಅರ್ಥ:
ಐದು: ಬಂದು ಸೇರು; ಬಹಳ: ತುಂಬ; ಬಲ: ಸೈನ್ಯ; ಒತ್ತು: ಗುಂಪು, ದಟ್ಟಣೆ; ಉಭಯ: ಎರಡು; ರಾಯ: ರಾಜ; ಮುತ್ತ: ವಯಸ್ಸಾದವನು, ಮುದುಕ; ಹೂಡು: ಅಣಿಗೊಳಿಸು; ಬಿಳಿ: ಶ್ವೇತ; ತೇಜಿ: ಕುದುರೆ; ತೆತ್ತಿಸು: ಜೋಡಿಸು; ಹೊಂದಾಳ: ಚಿನ್ನ ವರ್ಣದ ತಾಳ; ಸಿಂಧ: ಬಾವುಟ; ಸತ್ತಿಗೆ: ಕೊಡೆ, ಛತ್ರಿ; ಸಾಲು: ಗುಂಪು; ರಿಪು: ವೈರಿ; ಕುಲ: ವಂಶ; ಮೃತ್ಯು: ಸಾವು; ವೀರ: ಪರಾಕ್ರಮಿ; ಸುತ: ಮಗ; ನೋಡು: ವೀಕ್ಷಿಸು;

ಪದವಿಂಗಡಣೆ:
ಅತ್ತಲ್+ಐದನೆ +ಬಹಳ+ ಬಲದ್
ಒತ್ತೊತ್ತೆಯಲಿ +ನಮ್ಮುಭಯ +ರಾಯರ
ಮುತ್ತಯನು +ತಾನೆನಿಸಿ +ಹೂಡಿದ +ಬಳಿಯ +ತೇಜಿಗಳ
ತೆತ್ತಿಸಿದ +ಹೊಂದಾಳ +ಸಿಂಧದ
ಸತ್ತಿಗೆಯ +ಸಾಲಿನಲಿ +ರಿಪುಕುಲ
ಮೃತ್ಯುವಾತನು +ವೀರ+ಗಂಗಾಸುತನು +ನೋಡೆಂದ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸಿಂಧದ ಸತ್ತಿಗೆಯ ಸಾಲಿನಲಿ

ಪದ್ಯ ೬೯: ಭೀಷ್ಮನು ಧೃತರಾಷ್ಟ್ರನಿಗೆ ಕೊಟ್ಟ ಉತ್ತರವೇನು?

ಅರಸ ಕೇಳ್ ಧೃತರಾಷ್ಟ್ರ ಭೂಮೀ
ಶ್ವರಗೆ ಬಂದುದು ವಾರ್ತೆ ದುಗುಡದಿ
ಕರೆದು ಗಂಗಾಸುತಗೆ ಹೇಳಿದ ಸುರಗಜದ ಬರವ
ನರನು ಜನಿಸಿಯೆ ಕುರುಕುಲವನು
ದ್ಧರಿಸಿದಪನಿದು ನಮ್ಮ ಪುಣ್ಯವು
ಹರುಷದಿಂದಿದಿರ್ಗೊಂಬೆವೆಂದನು ಭೀಷ್ಮ ನಸುನಗುತ (ಆದಿ ಪರ್ವ, ೨೧ ಸಂಧಿ, ೬೯ ಪದ್ಯ)

ತಾತ್ಪರ್ಯ:
ಐರಾವತವು ಹಸ್ತಿನಾಪುರಕ್ಕೆ ಬರುವ ವಾರ್ತೆ ಧೃತರಾಷ್ಟ್ರನಿಗೆ ತಲುಪಿತು. ಅವನು ದುಃಖಿತನಾಗಿ ಭೀಷ್ಮನನ್ನು ಕರೆಸಿ ಈ ವಿಷಯವನ್ನು ತಿಳಿಸಿದನು. ಭೀಷ್ಮರಿಗೆ ಈ ಸುದ್ದಿ ಆಗಲೆ ತಿಳಿದಿತ್ತು, ಅವರು ಅರ್ಜುನನು ನಮ್ಮ ಕುಲದಲ್ಲಿ ಜನಿಸಿ ನಮ್ಮ ಕುಲವನ್ನೇ ಉದ್ಧರಿಸಿದನು, ಇದು ನಮ್ಮ ಪುಣ್ಯ, ನಾವು ಐರಾವತವನ್ನು ಬರಮಾಡಿಕೊಳ್ಲಲು ಎದುರುನೋಡುತ್ತಿದ್ದೇವೆ ಎಂದನು.

ಅರ್ಥ:
ಅರಸ: ರಾಜ; ಭೂಮಿ: ಧರಿತ್ರಿ, ಅವನಿ; ಭೂಮೀಶ್ವರ: ರಾಜ; ಬಂದುದು: ತಿಳಿ, ಆಗಮಿಸು; ವಾರ್ತೆ: ಸುದ್ದಿ; ದುಗುಡು: ದುಃಖ; ಕರೆದು: ಬರೆಮಾಡು; ಸುತ: ಪುತ್ರ; ಸುರಗಜ: ಐರಾವತ; ಬರವ: ಆಗಮನ; ನರ: ಅರ್ಜುನ; ಜನಿಸು: ಹುಟ್ಟು; ಕುಲ: ವಂಶ; ಉದ್ದರಿಸು: ಮೇಲಕ್ಕೆ ಎತ್ತು; ಪುಣ್ಯ: ಸದಾಚಾರ; ಹರುಷ: ಸಂತೋಷ; ಇದಿರುಗೊಂಬೆ: ಎದುರುನೋಡು; ನಗು: ಸಂತೋಷ;

ಪದವಿಂಗಡಣೆ:
ಅರಸ +ಕೇಳ್ +ಧೃತರಾಷ್ಟ್ರ +ಭೂಮೀ
ಶ್ವರಗೆ +ಬಂದುದು +ವಾರ್ತೆ +ದುಗುಡದಿ
ಕರೆದು +ಗಂಗಾಸುತಗೆ +ಹೇಳಿದ +ಸುರಗಜದ+ ಬರವ
ನರನು +ಜನಿಸಿಯೆ +ಕುರುಕುಲವನ್
ಉದ್ಧರಿಸಿದಪನ್+ಇದು +ನಮ್ಮ +ಪುಣ್ಯವು
ಹರುಷದಿಂದ್+ಇದಿರ್ಗೊಂಬೆ+ವೆಂದನು +ಭೀಷ್ಮ +ನಸುನಗುತ

ಅಚ್ಚರಿ:
(೧) ಅರಸ, ಭೂಮೀಶ್ವರ; ಹರುಷ, ನಗು – ಸಮನಾರ್ಥಕ ಪದ