ಪದ್ಯ ೬: ಶಿರಸ್ತ್ರಾಣದ ಮಣಿಗಳು ಹೇಗೆ ಸಿಡಿದವು?

ತಿವಿದನವನಿಪನನಿಲತನುಜನ
ಕವಚ ಬಿರಿದುದು ಕಯ್ಯೊಡನೆ ರಣ
ದವಕಿ ಕೈದೋರಿದನು ಕೌರವನ್ರ್ಪನ ವಕ್ಷದಲಿ
ಸವಗ ಸೀಳಿತು ಮರಳಿ ಹೊಯ್ದನು
ಪವನಜನ ಸೀಸಕದ ವರಮಣಿ
ನಿವಹ ಸಿಡಿದವು ಸಿಡಿಲು ಮೆಟ್ಟಿದ ಮೇರುಗಿರಿಯಂತೆ (ಗದಾ ಪರ್ವ, ೭ ಸಂಧಿ, ೬ ಪದ್ಯ)

ತಾತ್ಪರ್ಯ:
ಕೌರವನು ಗದೆಯಿಂದ ತಿವಿಯಲು ಭೀಮನ ಕವಚ ಒಡೆಯಿತು. ಭೀಮನು ಆ ಕ್ಷಣದಲ್ಲೇ ಯುದ್ಧದ ತವಕದಿಂದ ಕೌರವನ ಎದೆಗೆ ಹೊಡೆಯಲು ಅವನ ಕವಚ ಸೀಳಿತು. ಕೌರವನು ಮತ್ತೆ ಭೀಮನ ತಲೆಗೆ ಹೊಯ್ಯಲು ಶಿರಸ್ತ್ರಾಣದ ಮಣಿಗಳು, ಸಿಡಿಲು ಹೊಡೆದ ಮೇರುಪರ್ವತದ ಶಿಖರದಂತೆ ಸಿಡಿದವು.

ಅರ್ಥ:
ತಿವಿ: ಚುಚ್ಚು; ಅವನಿಪ: ರಾಜ; ಅನಿಲ: ವಾಯು; ತನುಜ: ಮಗ; ಕವಚ: ಉಕ್ಕಿನ ಅಂಗಿ, ಕಂಚುಕ, ರಕ್ಷೆ; ಬಿರಿ: ಬಿರುಕು, ಸೀಳು; ಒಡಣೆ: ಕೂಡಲೆ; ರಣ: ಯುದ್ಧರಂಗ; ತವಕ: ಆತುರ, ತ್ವರೆ; ವಕ್ಷ: ಎದೆ; ನೃಪ: ರಾಜ; ಸವಗ: ಕವಚ; ಸೀಳು: ಬಿರುಕು; ಮರಳಿ: ಪುನಃ, ಮತ್ತೆ; ಹೊಯ್ದು: ಹೊಡೆ; ಪವನಜ: ಭೀಮ; ಸೀಸಕ: ಶಿರಸ್ತ್ರಾಣ; ವರಮಣಿ: ಶ್ರೇಷ್ಠವಾದ ರತ್ನ; ನಿವಹ: ಗುಂಪು; ಸಿಡಿ: ಚೆಲ್ಲು; ಸಿಡಿಲು: ಅಶನಿ; ಮೆಟ್ಟು: ತುಳಿ; ಮೇರುಗಿರಿ: ಎತ್ತರವಾದ ಬೆಟ್ಟ;

ಪದವಿಂಗಡಣೆ:
ತಿವಿದನ್+ಅವನಿಪನ್+ಅನಿಲ+ತನುಜನ
ಕವಚ +ಬಿರಿದುದು +ಕಯ್ಯೊಡನೆ +ರಣ
ತವಕಿ +ಕೈದೋರಿದನು +ಕೌರವನೃಪನ +ವಕ್ಷದಲಿ
ಸವಗ +ಸೀಳಿತು +ಮರಳಿ +ಹೊಯ್ದನು
ಪವನಜನ+ ಸೀಸಕದ +ವರಮಣಿ
ನಿವಹ +ಸಿಡಿದವು +ಸಿಡಿಲು +ಮೆಟ್ಟಿದ+ ಮೇರುಗಿರಿಯಂತೆ

ಅಚ್ಚರಿ:
(೧) ಒಂದೇ ಪದವಾಗಿ ರಚನೆ – ತಿವಿದನವನಿಪನನಿಲತನುಜನ
(೨) ಪವನಜ, ಅನಿಲತನುಜ – ಭೀಮನನ್ನು ಕರೆದ ಪರಿ
(೩) ಉಪಮಾನದ ಪ್ರಯೋಗ – ಸೀಸಕದ ವರಮಣಿ ನಿವಹ ಸಿಡಿದವು ಸಿಡಿಲು ಮೆಟ್ಟಿದ ಮೇರುಗಿರಿಯಂತೆ

ಪದ್ಯ ೩೯: ಕೌರವನ ಮುಂದೆ ಧರ್ಮಜನು ಏನನ್ನು ಮುಂದಿಟ್ಟನು?

ಅರಸ ತೊಡು ಕವಚವನು ಚಾಮೀ
ಕರ ಪರಿಷ್ಕೃತ ವಜ್ರಮಯ ಬಂ
ಧುರದ ಸೀಸಕವಿದೆ ದುಕೂಲವರಾನುಲೇಪನವ
ಪರಿಹರಿಸಬೇಡೊಲವಿನಲಿ ಪತಿ
ಕರಿಸೆನುತ ಪೆಟ್ಟಿಗೆಯ ಮುಚ್ಚಳ
ತೆರೆದು ಮುಂದಿರಿಸಿದನು ಸೌಹಾರ್ದದಲಿ ಯಮಸೂನು (ಗದಾ ಪರ್ವ, ೫ ಸಂಧಿ, ೩೯ ಪದ್ಯ)

ತಾತ್ಪರ್ಯ:
ಧರ್ಮಜನು ಪ್ರೀತಿ ಸೌಜನ್ಯದಿಂದ, ಎಲೈ ಕೌರವ, ಬಂಗಾರದ ಕವಚವನ್ನೂ, ವಜ್ರ ಖಚಿತವಾದ ಸುಂದರವಾದ ಸೀಸಕವನ್ನು ಧರಿಸು. ಒಳ್ಳೆಯ ಬಟ್ಟೆ ಅನುಲೇಪನಗಳು ನಿನಗಾಗಿ ಸಿದ್ಧವಾಗಿವೆ, ಬೇಡವೆಂದು ತಿರಸ್ಕರಿಸಬೇಡ ಎನ್ನುತ್ತಾ ಪೆಟ್ಟಿಗೆಯ ಮುಚ್ಚಳವನ್ನು ತೆರೆದು ದುರ್ಯೋಧನನ ಮುಂದಿಟ್ಟನು.

ಅರ್ಥ:
ಅರಸ: ರಾಜ; ತೊಡು: ಧರಿಸು; ಕವಚ: ಹೊದಿಕೆ, ಉಕ್ಕಿನ ಅಂಗಿ; ಚಾಮೀಕರ: ಬಂಗಾರ, ಚಿನ್ನ; ಪರಿಷ್ಕೃತ: ಶೋಧಿಸಿದ; ವಜ್ರ: ಬೆಲೆಬಾಳುವ ಹರಳು; ಬಂಧುರ: ಸುಂದರವಾದ; ಸೀಸಕ: ಟೊಪ್ಪಿಗೆ, ಶಿರಸ್ತ್ರಾಣ; ದುಕೂಲ: ರೇಷ್ಮೆ ಬಟ್ಟೆ; ಅನುಲೇಪ: ಬಳಿಯುವಿಕೆ; ಪರಿಹರಿಸು: ನಿವಾರಿಸು; ಒಲವು: ಪ್ರೀತಿ; ಪತಿಕರಿಸು: ಸ್ವೀಕರಿಸು; ಪೆಟ್ಟಿಗೆ: ಡಬ್ಬ; ಮುಚ್ಚಳ: ಛಾವಣಿ, ಸೂರು; ತೆರೆ: ಬಿಚ್ಚುವಿಕೆ; ಮುಂದಿರಿಸು: ಮುಂದೆ ತೋರು; ಸೌಹಾರ್ದ: ಸೌಜನ್ಯ; ಸೂನು: ಮಗ; ಯಮ: ಜವ;

ಪದವಿಂಗಡಣೆ:
ಅರಸ+ ತೊಡು +ಕವಚವನು+ ಚಾಮೀ
ಕರ +ಪರಿಷ್ಕೃತ +ವಜ್ರಮಯ +ಬಂ
ಧುರದ +ಸೀಸಕವಿದೆ+ ದುಕೂಲವರ+ಅನುಲೇಪನವ
ಪರಿಹರಿಸಬೇಡ್+ಒಲವಿನಲಿ +ಪತಿ
ಕರಿಸೆನುತ+ ಪೆಟ್ಟಿಗೆಯ +ಮುಚ್ಚಳ
ತೆರೆದು +ಮುಂದಿರಿಸಿದನು +ಸೌಹಾರ್ದದಲಿ +ಯಮಸೂನು

ಅಚ್ಚರಿ:
(೧) ಸೌಹಾರ್ದ, ಒಲವು – ಸಾಮ್ಯಾರ್ಥ ಪದ
(೨) ಕವಚದ ಶ್ರೇಷ್ಠತೆ – ಚಾಮೀಕರ ಪರಿಷ್ಕೃತ ವಜ್ರಮಯ ಬಂಧುರದ ಸೀಸಕ

ಪದ್ಯ ೪೪: ಧರ್ಮಜನು ಶಲ್ಯನ ಮೇಲೆ ಎಷ್ಟು ಬಾಣಗಳನ್ನು ಬಿಟ್ಟನು?

ಸರಳ ಮುರಿಯೆಸಲಾ ಸರಳ ಕ
ತ್ತರಿಸಿ ಹತ್ತಂಬಿನಲಿ ರಾಯನ
ಬರಿಯ ಕವಚವ ಹರಿಯಲೆಚ್ಚನು ಮುರು ಬಾಣದಲಿ
ಶಿರದ ಸೀಸಕವನು ನಿಘಾತದ
ಲೆರಡು ಶರದಲಿ ಮತ್ತೆ ಭೂಪತಿ
ಯುರವನಗುಳಿದನೆಂಟರಲಿ ಮಗುಳೆಚ್ಚು ಬೊಬ್ಬಿರಿದ (ಶಲ್ಯ ಪರ್ವ, ೩ ಸಂಧಿ, ೪೪ ಪದ್ಯ)

ತಾತ್ಪರ್ಯ:
ಧರ್ಮಜನು ಶಲ್ಯನ ಬಾಣವನ್ನು ಕತ್ತರಿಸಿಕಾಹಲು, ಶಲ್ಯನು ಹತ್ತು ಬಾಣಗಳಿಂದ ಧರ್ಮಜನ ಕವಚವನ್ನು, ಮೂರು ಬಾಣಗಳಿಂದ ಸೀಸಕವನ್ನು ಮುರಿದು, ಎರಡು ಮತ್ತೆ ಹತ್ತು ಬಾಣಗಳಿಂದ ಧರ್ಮಜನ ಎದೆಗೆ ಹೊದೆದು ಗರ್ಜಿಸಿದನು.

ಅರ್ಥ:
ಸರಳ: ಬಾಣ; ಮುರಿ: ಸೀಳು; ಕತ್ತರಿಸು: ಕಡಿ; ಹತ್ತು: ದಶ; ಅಂಬು: ಬಾಣ; ರಾಯ: ರಾಜ; ಬರಿ: ಕೇವಲ, ಪಕ್ಕ, ಬದಿ; ಕವಚ: ಹೊದಿಕೆ, ಉಕ್ಕಿನ ಅಂಗಿ; ಹರಿ: ಸೀಳು; ಎಚ್ಚು: ಬಾಣ ಪ್ರಯೋಗ ಮಾದು; ಬಾಣ: ಅಂಬು; ಶಿರ: ತಲೆ; ಸೀಸಕ: ಶಿರಸ್ತ್ರಾಣ; ನಿಘಾತ: ಹೊಡೆತ, ಕೊಲೆ; ಶರ: ಬಾಣ; ಭೂಪತಿ: ರಾಜ; ಉರ: ಎದೆ; ಉಗುಳು: ಹೊರಹಾಕು; ಮಗುಳು: ಮತ್ತೆ; ಎಚ್ಚು: ಬಾಣ ಪ್ರಯೋಗ ಮಾಡು; ಬೊಬ್ಬಿರಿ: ಗರ್ಜಿಸು;

ಪದವಿಂಗಡಣೆ:
ಸರಳ +ಮುರಿ+ಎಸಲ್+ಆ +ಸರಳ +ಕ
ತ್ತರಿಸಿ + ಹತ್ತ್+ಅಂಬಿನಲಿ +ರಾಯನ
ಬರಿಯ +ಕವಚವ+ ಹರಿಯಲ್+ಎಚ್ಚನು +ಮೂರು +ಬಾಣದಲಿ
ಶಿರದ +ಸೀಸಕವನು+ ನಿಘಾತದಲ್
ಎರಡು +ಶರದಲಿ+ ಮತ್ತೆ +ಭೂಪತಿ
ಉರವನ್+ಉಗುಳಿದನ್+ಎಂಟರಲಿ +ಮಗುಳ್+ಎಚ್ಚು +ಬೊಬ್ಬಿರಿದ

ಅಚ್ಚರಿ:
(೧) ಸರಳ, ಅಂಬು, ಬಾಣ, ಶರ; ಎಸು, ಎಚ್ಚು – ಸಮಾನಾರ್ಥಕ ಪದ

ಪದ್ಯ ೩೩: ಬಾಣಗಳು ಎಲ್ಲಿ ನಟ್ಟವು?

ತೋಡಿ ನೆಟ್ಟವು ಸೀಸಕವನೊಡೆ
ದೋಡಿದವು ಕವಚದಲಿ ಕುದುರೆಯ
ಜೋಡು ಹಕ್ಕರಿಕೆಯಲಿ ತಳಿತವು ಹಿಳುಕು ಹರಹಿನಲಿ
ಕೂಡೆ ರಥದಲಿ ಸಿಂಧದಲಿ ಮೈ
ಗೂಡಿ ಗಾಲಿಗಳಲಿ ವರೂಥದ
ಲೀಡಿರಿದವಂಬುಗಳು ಕಲಿಮಾದ್ರೇಶನೆಸುಗೆಯಲಿ (ಶಲ್ಯ ಪರ್ವ, ೨ ಸಂಧಿ, ೩೩ ಪದ್ಯ)

ತಾತ್ಪರ್ಯ:
ಧರ್ಮಜನ ಶಿರಸ್ತ್ರಾನದಲ್ಲಿ ಶಲ್ಯನ ಬಾಣಗಳು ನಟ್ಟವು. ಕವಚವನ್ನು ಛಿದ್ರಮಾಡಿದವು. ರಥದ ಕುದುರೆಗಳ ರಕ್ಷಾಕವಚದಲ್ಲಿ ಹೇರಳವಾಗಿ ನಟ್ಟವು. ರಥದಲ್ಲಿ ಧ್ವಜದಲ್ಲಿ ರಥದ ಗಾಲಿಗಳಲ್ಲಿ ಹೇರಳವಾಗಿ ನಟ್ಟವು.

ಅರ್ಥ:
ತೋಡು: ಅಗೆ, ಹಳ್ಳ ಮಾಡು; ನೆಟ್ಟು: ನೆಡು, ಕೂಡಿಸು; ಸೀಸಕ: ಶಿರಸ್ತ್ರಾಣ; ಒಡೆ: ಸೀಳು; ಓಡು: ಧಾವಿಸು; ಕವಚ: ಹೊದಿಕೆ; ಕುದುರೆ: ಅಶ್ವ; ಜೋಡು: ಜೊತೆ; ಹಕ್ಕರಿ: ಆನೆ ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ; ತಳಿತ: ಚಿಗುರಿದ; ಹಿಳುಕು: ಬಾಣದ ಗರಿ; ಹರಹು: ವಿಸ್ತಾರ, ವೈಶಾಲ್ಯ; ಕೂಡೆ: ಜೊತೆ; ರಥ: ಬಂಡಿ; ಸಿಂಧ: ಬಾವುಟ; ಮೈಗೂಡು: ದೃಢವಾಗು, ದೇಹವನ್ನು ಅರ್ಪಿಸು; ಗಾಲಿ: ಚಕ್ರ; ವರೂಥ: ತೇರು, ರಥ; ಅಂಬು: ಬಾಣ; ಕಲಿ: ಶೂರ; ಎಸು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ತೋಡಿ +ನೆಟ್ಟವು +ಸೀಸಕವನ್+ಒಡೆದ್
ಓಡಿದವು +ಕವಚದಲಿ +ಕುದುರೆಯ
ಜೋಡು +ಹಕ್ಕರಿಕೆಯಲಿ +ತಳಿತವು +ಹಿಳುಕು +ಹರಹಿನಲಿ
ಕೂಡೆ+ ರಥದಲಿ+ ಸಿಂಧದಲಿ +ಮೈ
ಗೂಡಿ +ಗಾಲಿಗಳಲಿ +ವರೂಥದಲ್
ಈಡಿರಿದವ್+ಅಂಬುಗಳು +ಕಲಿ+ಮಾದ್ರೇಶನ್+ಎಸುಗೆಯಲಿ

ಅಚ್ಚರಿ:
(೧) ಬಾಣಗಳು ನೆಟ್ಟ ಸ್ಥಳ – ಸೀಸಕ, ಕವಚ, ಹಕ್ಕರಿಕೆ; ರಥ, ಸಿಂಧ, ಗಾಲಿ;

ಪದ್ಯ ೩೧: ಕೃಷ್ಣನು ಗಜಬಜವನ್ನು ಹೇಗೆ ನಿಲಿಸಿದನು?

ಬೇರೆ ತಮಗೊಂದಾಳುತನವುರಿ
ಸೂರೆಗೊಳುತಿದೆ ಜಗವನಿತ್ತಲು
ಕೌರಿಡುವ ಕಾಲಾಗ್ನಿಯಿದೆ ಕಬ್ಬೊಗೆಯ ಕವಚದಲಿ
ತೋರಲಾಪರೆ ಬಾಹು ಸತ್ವವ
ತೋರಿರೈ ದಿಟ ಪಂಥದೋಲೆಯ
ಕಾರರಹಿರೆನುತಸುರರಿಪು ಗಜಬಜವ ನಿಲಿಸಿದನು (ದ್ರೋಣ ಪರ್ವ, ೧೯ ಸಂಧಿ, ೩೧ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಮಾತನಾಡುತ್ತಾ, ನಿಮ್ಮ ಪ್ರತಿಷ್ಠೆ ಈಗಲ್ಲ. ನಾರಾಯಣಾಸ್ತ್ರದ ಉರಿ ಜಗತ್ತನ್ನೂ ನಮ್ಮನ್ನೂ ಸುಟ್ಟು ಸೂರೆಗೊಳ್ಳಲು ಮುನ್ನುಗ್ಗುತ್ತಿದೆ. ಅದರ ಸುತ್ತಲೂ ಕರಿಹೊಗೆಯ ಕವಚವಿದೆ. ನಿಮ್ಮ ತೋಳ್ಬಲವನ್ನು ಅಸ್ತ್ರದೆದುರು ತೋರಿಸಿರಿ. ಪಂಥಕಟ್ಟುವ ಯೋಧರೇನೋ ನೀವು ನಿಜ ಆದರೆ ಅದನ್ನು ಅಸ್ತ್ರದೆದುರು ತೋರಿಸಿರಿ ಎಂದು ಗೊಂದಲವನ್ನು ನಿಲ್ಲಿಸಿದನು.

ಅರ್ಥ:
ಬೇರೆ: ಅನ್ಯ; ಆಳುತನ: ಪರಾಕ್ರಮ; ಉರಿ: ಬೆಂಕಿ; ಸೂರೆ: ಕೊಳ್ಳೆ; ಜಗ: ಪ್ರಪಂಚ; ಕೌರು: ಸುಟ್ಟವಾಸನೆ, ಕೆಟ್ಟ ನಾತ; ಕಾಲಾಗ್ನಿ:ಪ್ರಳಯಕಾಲದ ಬೆಂಕಿ; ಕಬ್ಬೊಗೆ: ದಟ್ಟವಾದ ಹೊಗೆ; ಕವಚ: ಹೊದಿಕೆ; ತೋರು: ಗೋಚರಿಸು; ಬಾಹು: ಭುಜ; ಸತ್ವ: ಶಕ್ತಿ, ಸಾರ; ದಿಟ: ಸತ್ಯ; ಪಂಥ: ಪ್ರತಿಜ್ಞೆ, ಶಪಥ; ಓಲೆಯಕಾರ: ಸೇವಕ; ಅಸುರರಿಪು: ಕೃಷ್ಣ; ಗಜಬಜ: ಗೊಂದಲ; ನಿಲಿಸು: ತಡೆ;

ಪದವಿಂಗಡಣೆ:
ಬೇರೆ +ತಮಗೊಂದ್+ ಆಳುತನವ್+ಉರಿ
ಸೂರೆಗೊಳುತಿದೆ+ ಜಗವನ್+ಇತ್ತಲು
ಕೌರಿಡುವ +ಕಾಲಾಗ್ನಿಯಿದೆ +ಕಬ್ಬೊಗೆಯ +ಕವಚದಲಿ
ತೋರಲಾಪರೆ +ಬಾಹು +ಸತ್ವವ
ತೋರಿರೈ +ದಿಟ +ಪಂಥದ್+ಓಲೆಯ
ಕಾರರಹಿರ್+ಎನುತ್+ಅಸುರರಿಪು +ಗಜಬಜವ +ನಿಲಿಸಿದನು

ಅಚ್ಚರಿ:
(೧) ಕ ಕಾರದ ಸಾಲು ಪದ – ಕೌರಿಡುವ ಕಾಲಾಗ್ನಿಯಿದೆ ಕಬ್ಬೊಗೆಯ ಕವಚದಲಿ

ಪದ್ಯ ೧೯: ದ್ರೋಣರ ಎದುರಿನಲ್ಲಿ ಏನನ್ನು ಸೇರಿಸಲಾಯಿತು?

ಎಣಿಸಲರಿಯೆನು ಬಂಡಿಗಳು ಸಂ
ದಣಿಸಿದವು ಹಕ್ಕರಿಕೆಗಳ ಹ
ಲ್ಲಣದ ಕವಚದ ಸೀಸಕದ ಜೋಡುಗಳ ರೆಂಚೆಗಳ
ಮಣಿಮಯದ ಮೋಹಳದ ಹಿರಿಯು
ಬ್ಬಣದ ಸಬಲದ ಶೂಲ ಸುರಗಿಯ
ಕಣೆಯ ಹೊರೆ ಚಾಚಿದವು ಕಟಕಾಚಾರ್ಯನಿದಿರಿನಲಿ (ದ್ರೋಣ ಪರ್ವ, ೧೫ ಸಂಧಿ, ೧೯ ಪದ್ಯ)

ತಾತ್ಪರ್ಯ:
ಎಷ್ಟು ಬಂಡಿಗಳು ಸೇರಿದವು, ಹಕ್ಕರಿಕೆ, ಹಲ್ಲಣ, ಕವಚ, ಶಿರಸ್ತ್ರಾನ, ಜೋಡುಗಳು, ಆನೆಯ ರಕ್ಷಾಕವಚಗಳು, ಹಿಡಿಕೆಯಿರುವ ಲಾಳವಿಂಡಿಗೆಗಳು, ಸಬಳ, ಶೂಲ, ಸುರಗಿ, ಬಾಣಗಳನ್ನು ಹೊರೆಕಟ್ಟಿ ಬಂಡಿಗಳಲ್ಲಿಟ್ಟರು ಎಂಬ ಎಣಿಕೆಯೇ ಸಿಗಲಿಲ್ಲ, ಇವೆಲ್ಲವೂ ದ್ರೋಣರ ಎದುರಿನಲ್ಲಿ ಸೇರಿಸಲಾಯಿತು.

ಅರ್ಥ:
ಎಣಿಸು: ಲೆಕ್ಕ ಹಾಕು; ಅರಿ: ತಿಳಿ; ಬಂಡಿ: ರಥ; ಸಂದಣಿಸು: ಗುಂಪುಗೂಡು; ಹಕ್ಕರಿಕೆ: ದಂಶನ, ಆನೆ ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ; ಹಲ್ಲಣ: ಪಲ್ಲಣ, ಜೀನು, ತಡಿ; ಕವಚ: ಉಕ್ಕಿನ ಅಂಗಿ; ಸೀಸಕ: ಶಿರಸ್ತ್ರಾಣ; ಜೋಡು: ಜೊತೆ; ರೆಂಚೆ: ಆನೆ, ಕುದುರೆಗಳ ಪಕ್ಕರಕ್ಕೆ; ಮಣಿ: ಬೆಲೆಬಾಳುವ ರತ್ನ; ಮೋಹಳ: ಆಕರ್ಷಕ; ಹಿರಿ: ದೊಡ್ಡ; ಉಬ್ಬಣ: ಚೂಪಾದ ಆಯುಧ; ಸಬಳ: ಈಟಿ; ಶೂಲ: ಚೂಪಾದ ತುದಿಯುಳ್ಳ ಒಂದು ಬಗೆಯ ಆಯುಧ, ತ್ರಿಶೂಲ; ಸುರಗಿ: ಸಣ್ಣ ಕತ್ತಿ, ಚೂರಿ; ಕಣೆ: ಬಾಣ; ಹೊರೆ: ಭಾರ; ಚಾಚು: ಹರಡು; ಕಟಕ: ಸೈನ್ಯ ; ಆಚಾರ್ಯ: ಗುರು; ಇದಿರು: ಎದುರು;

ಪದವಿಂಗಡಣೆ:
ಎಣಿಸಲ್+ಅರಿಯೆನು +ಬಂಡಿಗಳು +ಸಂ
ದಣಿಸಿದವು +ಹಕ್ಕರಿಕೆಗಳ+ ಹ
ಲ್ಲಣದ +ಕವಚದ +ಸೀಸಕದ +ಜೋಡುಗಳ +ರೆಂಚೆಗಳ
ಮಣಿಮಯದ +ಮೋಹಳದ +ಹಿರಿಯು
ಬ್ಬಣದ+ ಸಬಳದ +ಶೂಲ +ಸುರಗಿಯ
ಕಣೆಯ +ಹೊರೆ +ಚಾಚಿದವು +ಕಟಕಾಚಾರ್ಯನ್+ಇದಿರಿನಲಿ

ಅಚ್ಚರಿ:
(೧) ಯುದ್ಧದ ಸಾಮಗ್ರಿಗಳನ್ನು ವಿವರಿಸುವ ಪದಗಳು – ಬಂಡಿ, ಹಕ್ಕರಿಕೆ, ಕವಚ, ಸೀಸಕ, ಸಬಳ, ಶೂಲ, ಸುರಗಿ

ಪದ್ಯ ೫೬: ಅರ್ಜುನನು ಏನೆಂದು ಯೋಚಿಸಿದನು?

ಕವಚವಿದೆ ಸರ್ವಾಂಗದಲಿ ನೃಪ
ನವಯವಕೆ ಕೇಡಿಲ್ಲ ಕೆಲಬಲ
ದವರು ನೆರೆ ಕೈಮಾಡುತಿದೆ ಕರ್ಣಾದಿನಾಯಕರು
ರವಿಯ ಕೈಗಳನಸ್ತಗಿರಿಯಾ
ನುವವೊಲಿದೆ ಮುನಿದಿವನ ಕೊಂದರೆ
ಪವನಜನ ಕೊಂದವನು ಹದನೇನೆಂದು ಚಿಂತಿಸಿದ (ದ್ರೋಣ ಪರ್ವ, ೧೦ ಸಂಧಿ, ೫೬ ಪದ್ಯ)

ತಾತ್ಪರ್ಯ:
ದುರ್ಯೋಧನನ ಸರ್ವಾಂಗಗಳಲ್ಲೂ ಕವಚವಿದೆ. ಅವಕ್ಕೆ ತೊಂದರೆಯಿಲ್ಲ. ಕರ್ಣನೇ ಮೊದಲಾದವರೂ ನನ್ನ ಮೇಲೆ ಮುತ್ತಿ ಬರುತ್ತಿದ್ದಾರೆ, ಸೂರ್ಯನ ಕಿರಣಗಳು ಅಸ್ತಗಿರಿಯನ್ನು ಮುಟ್ಟುವ ಹಾಗಿವೆ. ಸಿಟ್ಟಾಗಿ ಇವನನ್ನು ಕೊಲ್ಲಲೂ ಬರುವಂತಿಲ್ಲ, ಇವನನ್ನು ಕೊಂದರೆ ಭೀಮನ ಪ್ರತಿಜ್ಞೆಯನ್ನು ಕೊಂದಂತಾಗುತ್ತದೆ ಏನು ಮಾಡಲಿ ಎಂದು ಅರ್ಜುನನು ಯೋಚಿಸಿದನು.

ಅರ್ಥ:
ಕವಚ: ಹೊದಿಕೆ, ಉಕ್ಕಿನ ಅಂಗಿ; ಸರ್ವಾಂಗ: ಎಲ್ಲಾ ದೇಹದ ಭಾಗ, ಅವಯವ; ನೃಪ: ರಾಜ; ಅವಯವ: ದೇಹದ ಒಂದು ಭಾಗ, ಅಂಗ; ಕೇಡು: ನಾಶ, ಹಾಳು; ಕೆಲಬಲ: ಅಕ್ಕಪಕ್ಕ, ಎಡಬಲ; ನೆರೆ: ಗುಂಪು; ಕೈ: ಹಸ್ತ; ಆದಿ: ಮುಂತಾದ; ನಾಯಕ: ಒಡೆಯ; ರವಿ: ಸೂರ್ಯ; ಅಸ್ತ: ಮುಳುಗಿಹೋದ; ಗಿರಿ: ಬೆಟ್ಟ; ಆನು: ಆಶ್ರಯಿಸು; ಒಲಿ: ಪ್ರೀತಿ; ಮುನಿ: ಕೋಪ; ಕೊಂದು: ಕೊಲ್ಲು; ಪವನಜ: ವಾಯುಪುತ್ರ; ಹದ: ಸ್ಥಿತಿ; ಚಿಂತಿಸು: ಯೋಚಿಸು;

ಪದವಿಂಗಡಣೆ:
ಕವಚವಿದೆ +ಸರ್ವಾಂಗದಲಿ +ನೃಪನ್
ಅವಯವಕೆ +ಕೇಡಿಲ್ಲ +ಕೆಲಬಲ
ದವರು +ನೆರೆ +ಕೈಮಾಡುತಿದೆ+ ಕರ್ಣಾದಿ+ನಾಯಕರು
ರವಿಯ +ಕೈಗಳನ್+ಅಸ್ತಗಿರಿ+ಆ
ನುವವೊಲಿದೆ+ ಮುನಿದ್+ಇವನ+ ಕೊಂದರೆ
ಪವನಜನ+ ಕೊಂದವನು+ ಹದನೇನೆಂದು +ಚಿಂತಿಸಿದ

ಅಚ್ಚರಿ:
(೧) ದಿನದ ಅಂತ್ಯ ಎಂದು ತಿಳಿಸುವ ಪರಿ – ರವಿಯ ಕೈಗಳನಸ್ತಗಿರಿಯಾನುವವೊಲಿದೆ

ಪದ್ಯ ೫೧: ಅರ್ಜುನನು ಕೌರವನಿಗೆ ಏನೆಂದು ಉತ್ತರಿಸಿದನು?

ಕಾಲುವೊಳೆಗೇಕವನಿಪತಿ ಹರು
ಗೋಲು ನೀವಿನ್ನರಿಯದಿದ್ದರೆ
ಹೇಳೆವಾತ್ಮಸ್ತುತಿಯ ಮಾಡೆವು ಸಾಕದಂತಿರಲಿ
ಮೇಲುಗವಚವ ನಂಬಿ ನಮ್ಮೊಳು
ಕಾಳೆಗವ ನೀ ಬಯಸಿ ಬಂದೆ ನೃ
ಪಾಲ ಜೋಡಿನ ಬಲದಿ ನಮ್ಮನು ಜಯಸುವೈ ಎಂದ (ದ್ರೋಣ ಪರ್ವ, ೧೦ ಸಂಧಿ, ೫೧ ಪದ್ಯ)

ತಾತ್ಪರ್ಯ:
ಕಾಲಿನಿಂದ ದಾಟಬಹುದಾದ ಹೊಳೆಯನ್ನು ದಾಟಲು ಹರಿಗೋಲೇಕೆ? ನಿಮಗೆ ತಿಳಿಯದಿದ್ದರೆ ನಾವೇನೂ ಹೇಳಲಾಗುವುದಿಲ್ಲ. ನನ್ನನ್ನು ಹೊಗಳಿಕೊಳ್ಳುವುದೂ ಇಲ್ಲ, ಕವಚವನ್ನು ನಂಬಿ ನನ್ನೊಡನೆ ಕಾಳಗವನ್ನು ಮಾಡಲು ಬಂದಿರುವೆ, ಕವಚದ ಬಲದಿಂದ ನನ್ನನ್ನು ಜಯಿಸಬಲ್ಲೆಯಾ ಎಂದು ಅರ್ಜುನನು ಕೇಳಿದನು.

ಅರ್ಥ:
ವೊಳೆ: ಹೋಳೆ; ಅವನಿಪತಿ: ರಾಜ; ಹರಿಗೋಲು: ದೋಣಿ, ದೇಹ; ಅರಿ: ತಿಳಿ; ಆತ್ಮಸ್ತುತಿ: ಹೊಗಳು; ಸಾಕು: ನಿಲ್ಲಿಸು; ಕವಚ: ಉಕ್ಕಿನ ಅಂಗಿ; ನಂಬು: ವಿಶ್ವಾಸವಿಡು; ಕಾಳೆಗ: ಯುದ್ಧ; ಬಯಸು: ಇಚ್ಛಿಸು; ನೃಪಾಲ: ರಾಜ; ಜೋಡು: ಜೊತೆ; ಬಲ: ಶಕ್ತಿ; ಜಯಸು: ಗೆಲ್ಲು;

ಪದವಿಂಗಡಣೆ:
ಕಾಲುವೊಳೆಗೇಕ್+ಅವನಿಪತಿ +ಹರು
ಗೋಲು +ನೀವಿನ್+ಅರಿಯದಿದ್ದರೆ
ಹೇಳೆವ್+ಆತ್ಮಸ್ತುತಿಯ +ಮಾಡೆವು +ಸಾಕ್+ಅದಂತಿರಲಿ
ಮೇಲು+ಕವಚವ +ನಂಬಿ +ನಮ್ಮೊಳು
ಕಾಳೆಗವ +ನೀ +ಬಯಸಿ +ಬಂದೆ +ನೃ
ಪಾಲ +ಜೋಡಿನ +ಬಲದಿ +ನಮ್ಮನು +ಜಯಸುವೈ +ಎಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಾಲುವೊಳೆಗೇಕವನಿಪತಿ ಹರುಗೋಲು

ಪದ್ಯ ೪೮: ಕೌರವನು ಯಾವ ಸಾಗರದಿಂದ ಅರ್ಜುನನನ್ನು ಆವರಿಸಿದನು?

ನರ ಸುರಾಸುರರಿದನು ಭೇದಿಸ
ಲರಿದು ಕೈಕೊಳ್ಳೆಂದು ಮಂತ್ರಿಸಿ
ಬರಿಗೆ ಕವಚವ ಕಟ್ಟಿದನು ಕೌರವ ಮಹೀಪತಿಗೆ
ಗುರುವಿನಂಘ್ರಿಯೊಳೆರಗಿ ಮರಳಿದು
ಧುರವ ಹೊಕ್ಕನು ಶಕ್ರತನುಜನ
ಕರೆದು ಮೂದಲಿಸಿದನು ತುಳುಕಿದನಂಬಿನಂಬುಧಿಯ (ದ್ರೋಣ ಪರ್ವ, ೧೦ ಸಂಧಿ, ೪೮ ಪದ್ಯ)

ತಾತ್ಪರ್ಯ:
ಮನುಷ್ಯರು, ದೇವತೆಗಳು, ಅಸುರರು ಇದನ್ನು ಭೇದಿಸಲಾರರು. ಇದನ್ನು ತೆಗೆದುಕೋ, ಎಂದು ದ್ರೋನನು ದುರ್ಯೋಧನನಿಗೆ ಕವಚವನ್ನು ಕಟ್ಟಿದನು. ದುರ್ಯೋಧನನು ಗುರುವಿಗೆ ವಂದಿಸಿ, ಅರ್ಜುನನನ್ನು ಕರೆದು ಮೂದಲಿಸಿ ಬಾಣಗಳ ಸಾಗರವನ್ನು ಅರ್ಜುನನ ಎದುರು ನಿರ್ಮಿಸಿದನು.

ಅರ್ಥ:
ನರ: ಅರ್ಜುನ; ಸುರಾಸುರ: ದೇವತೆಗಳು ಮತ್ತು ರಾಕ್ಷಸ; ಭೇಧಿಸು: ಒಡೆಯುವುದು; ಅರಿ: ತಿಳಿ; ಕೊಳ್ಳು: ಹಿಡಿ; ಮಂತ್ರ: ದೇವತಾರ್ಚನೆಯ ಪದಗಳು; ಕವಚ: ಹೊದಿಕೆ, ಉಕ್ಕಿನ ಅಂಗಿ; ಕಟ್ಟು: ಬಂಧಿಸು; ಮಹೀಪತಿ: ರಾಜ; ಗುರು: ಆಚಾರ್ಯ; ಅಂಘ್ರಿ: ಪಾದ; ಎರಗು: ನಮಸ್ಕರಿಸು; ಮರಳು: ಹಿಂದಿರುಗು; ಧುರ: ಯುದ್ಧ, ಕಾಳಗ; ಹೊಕ್ಕು: ಸೇರು; ಶಕ್ರ: ಇಂದ್ರ; ತನುಜ: ಮಗ; ಕರೆ: ಬರೆಮಾಡು; ಮೂದಲಿಸು: ಹಂಗಿಸು; ತುಳುಕು: ತುಂಬಿ ಹೊರಸೂಸು; ಅಂಬು: ಬಾಣ; ಅಂಬುಧಿ: ಸಾಗರ;

ಪದವಿಂಗಡಣೆ:
ನರ +ಸುರ+ಅಸುರರ್+ಇದನು +ಭೇದಿಸಲ್
ಅರಿದು +ಕೈಕೊಳ್ಳೆಂದು +ಮಂತ್ರಿಸಿ
ಬರಿಗೆ +ಕವಚವ +ಕಟ್ಟಿದನು +ಕೌರವ +ಮಹೀಪತಿಗೆ
ಗುರುವಿನ್+ಅಂಘ್ರಿಯೊಳ್+ಎರಗಿ +ಮರಳಿದು
ಧುರವ+ ಹೊಕ್ಕನು +ಶಕ್ರ+ತನುಜನ
ಕರೆದು +ಮೂದಲಿಸಿದನು +ತುಳುಕಿದನ್+ಅಂಬಿನ್+ಅಂಬುಧಿಯ

ಅಚ್ಚರಿ:
(೧) ಬಾಣಗಳ ಸಾಗರ ಎಂದು ಕರೆದ ಪರಿ – ತುಳುಕಿದನಂಬಿನಂಬುಧಿಯ
(೨) ಅರ್ಜುನನನ್ನು ಶಕ್ರತನುಜ ಎಂದು ಕರೆದ ಪರಿ

ಪದ್ಯ ೪೬: ದ್ರೋಣನು ಕೌರವನಿಗೆ ಏನು ಕೊಟ್ಟನು?

ಆದಡೆಲೆ ಭೂಪಾಲ ನರನೊಳು
ಕಾದಲೀಶಂಗರಿದು ನೀನಿದಿ
ರಾದಡಪಜವಾಗದಿದ್ದರೆ ನಮ್ಮ ಪುಣ್ಯವದು
ಕಾದಲಾಪರೆ ಮಗನೆ ಪರರಿಗೆ
ಭೇದಿಸುವರಳವಲ್ಲ ಕವಚವ
ನಾದಿಯದು ಕೊಳ್ಳೆಂದು ಕೊಟ್ಟನು ಗವಸಣಿಗೆದೆಗೆದು (ದ್ರೋಣ ಪರ್ವ, ೧೦ ಸಂಧಿ, ೪೬ ಪದ್ಯ)

ತಾತ್ಪರ್ಯ:
ದ್ರೋಣನು ಉತ್ತರಿಸುತ್ತಾ, ದೊರೆಯೇ, ಅರ್ಜುನನೊಡನೆ ಕಾದಲು ಶಿವನಿಗೂ ಆಗುವುದಿಲ್ಲ, ನಿನಗೆ ಸೋಲಾಗದಿದ್ದರೆ ನಮ್ಮ ಪುಣ್ಯ, ಇಷ್ಟು ಹೇಳಿದರೂ ನೀನು ಕಾದಲು ಹೊರಟರೆ, ಈ ಅನಾದಿಯಾದ ಕವಾವನ್ನು ತೆಗೆದುಕೋ, ಇದನ್ನು ಮುರಿಯಲು ಬೇರಾರಿಗೂ ಸಾಧ್ಯವಿಲ್ಲ ಎಂದು ಹೇಳಿ ಮುಚ್ಚಿದ್ದ ಗವಸಣಿಗೆಯನ್ನು ತೆಗೆದು ದುರ್ಯೋಧನನಿಗೆ ಕವಚವನ್ನು ಕೊಟ್ಟನು.

ಅರ್ಥ:
ಭೂಪಾಲ: ರಾಜ; ನರ: ಅರ್ಜುನ; ಕಾದು: ಹೋರಾಡು; ಈಶ: ಶಿವ; ಅರಿ: ತಿಳಿ; ಇದಿರು: ಎದುರು; ಅಪಜ: ಸೋಲು; ಪುಣ್ಯ: ಸದಾಚಾರ; ಮಗ: ಸುತ; ಪರರು: ಅನ್ಯರು; ಭೇದಿಸು: ಛಿದ್ರಪಡಿಸು; ಕವಚ: ಹೊದಿಕೆ; ಅನಾದಿ: ಮೊದಲು ಕೊನೆಯಿಲ್ಲದ; ಕೊಳ್ಳು: ಪಡೆ; ಕೊಡು: ನೀಡು; ಗವಸಣಿಗೆ: ಆನೆಯ ಹೊದಿಕೆ;

ಪದವಿಂಗಡಣೆ:
ಆದಡ್+ಎಲೆ+ ಭೂಪಾಲ +ನರನೊಳು
ಕಾದಲ್+ಈಶಂಗ್+ಅರಿದು +ನೀನ್+ಇದಿ
ರಾದಡ್+ಅಪಜವಾಗದಿದ್ದರೆ +ನಮ್ಮ +ಪುಣ್ಯವದು
ಕಾದಲಾಪರೆ +ಮಗನೆ +ಪರರಿಗೆ
ಭೇದಿಸುವರಳವಲ್ಲ +ಕವಚವ್
ಅನಾದಿಯದು +ಕೊಳ್ಳೆಂದು +ಕೊಟ್ಟನು +ಗವಸಣಿಗೆ+ತೆಗೆದು

ಅಚ್ಚರಿ:
(೧) ಅರ್ಜುನನ ಪರಾಕ್ರಮ – ನರನೊಳುಕಾದಲೀಶಂಗರಿದು