ಪದ್ಯ ೧೫: ಪಾಂಡುವಿನ ಮೇಲೆ ಮನ್ಮಥನ ಪ್ರಭಾವ ಹೇಗಿತ್ತು?

ಕೊಂಬುದೇ ಬಯಲರಿತಗಿರಿತದ
ಡೊಂಬಿನಾಗಮ ನೀತಿಗೀತಿಯ
ಶಂಬರಾರಿಯ ಸಬಳವಲ್ಲಾ ಬೇಗೆ ಮೂಡಿದುದು
ಬೆಂಬಿಡದೆ ಮರಳಿದೊಡೆ ಮರುಮೊನೆ
ಗೊಂಬುದೆಂಬುವೊಲವನಿಪತಿಯೊ
ತ್ತಂಬರದಿ ಹಿಡಿದಬಲೆಯನು ಕೂಡಿದನು ಕಳವಳಿಸಿ (ಆದಿ ಪರ್ವ, ೫ ಸಂಧಿ, ೧೫ ಪದ್ಯ)

ತಾತ್ಪರ್ಯ:
ಅದು ಇನ್ನೇನು ಇಲ್ಲ. ಮನ್ಮಥನ ಈಟಿಯ ಇರಿತ. ಜೊಳ್ಳಾದ ತಿಳುವಳಿಕೆ ಗಿಳುವಳಿಕೆ, ಆಗಮಗಳು, ಡಂಭದಿಂದ ಭೋದಿಸುವ ನೀತಿಗೀತಿಗಳನ್ನು ಅದು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಮನ್ಮಥನ ಆಜ್ಞೆಯನ್ನು ಪಾಲಿಸದೇ ಬಿಟ್ಟರೆ ಅದು ಮತ್ತೆ ನಡದೇ ಬಿಡುವುದಿಲ್ಲ ಎನ್ನುವ ಹಾಗೆ ರಾಜನು ಮಾದ್ರಿಯನ್ನು ಬಟ್ಟೆಯನ್ನು ಬಲಾತ್ಕಾರದಿಂದ ಹಿಡಿದು ಅವಳೊಂದಿಗೆ ಕೂಡಿದನು.

ಅರ್ಥ:
ಕೊಂಬು: ಕೊಲ್ಲು; ಬಯಲು: ವ್ಯರ್ಥವಾದುದು; ಅರಿ: ತಿಳಿ; ಇರಿ: ಚುಚ್ಚು; ಡೊಂಬ: ವಂಚಕ, ಮೋಸಗಾರ; ಆಗಮ: ಬರುವಿಕೆ; ನೀತಿ: ಮಾರ್ಗದರ್ಶನ; ಶಂಬರಾರಿ: ಮನ್ಮಥ; ಸಬಳ: ಈಟಿ, ಭರ್ಜಿ; ಬೇಗೆ: ಬೆಂಕಿ, ಕಿಚ್ಚು, ತಾಪ; ಮೂಡು: ಹೊರಹೊಮ್ಮು; ಬೆಂಬಿಡು: ಹಿಂಬಾಲಿಸು; ಮರಳಿ: ಮತ್ತೆ, ಹಿಂದಿರುಗು; ಮರು: ಎರಡನೆಯ, ದ್ವಿತೀಯ; ಮೊನೆ: ತುದಿ; ಅವನಿಪತಿ: ರಾಜ; ಒತ್ತು: ಬಲವಮ್ತ; ಹಿಡಿ: ಗ್ರಹಿಸು; ಅಬಲೆ: ರಾಣಿ; ಕೂಡು: ಸೇರು; ಕಳವಳ: ಗೊಂದಲ; ಅಂಬರ: ಬಟ್ಟೆ;

ಪದವಿಂಗಡಣೆ:
ಕೊಂಬುದೇ +ಬಯಲರಿತಗ್+ಇರಿತದ
ಡೊಂಬಿನ್+ಆಗಮ +ನೀತಿಗೀತಿಯ
ಶಂಬರಾರಿಯ +ಸಬಳವಲ್ಲಾ +ಬೇಗೆ +ಮೂಡಿದುದು
ಬೆಂಬಿಡದೆ +ಮರಳಿದೊಡೆ +ಮರುಮೊನೆಗ್
ಒಂಬುದೆಂಬುವೊಲ್+ಅವನಿಪತಿ
ಒತ್ತಂಬರದಿ+ ಹಿಡಿದ್+ಅಬಲೆಯನು +ಕೂಡಿದನು +ಕಳವಳಿಸಿ

ಅಚ್ಚರಿ:
(೧) ನೀತಿಗೀತಿ, ಒಂಬುದೆಂಬು – ಜೋಡಿ ಪದಗಳ ಬಳಕೆ
(೨) ಒಂದೇ ಪದವಾಗಿ ರಚನೆ – ಮರುಮೊನೆಗೊಂಬುದೆಂಬುವೊಲವನಿಪತಿಯೊತ್ತಂಬರದಿ

ಪದ್ಯ ೩೭: ದುರ್ಯೋಧನನು ಏನು ಹೇಳುತ್ತಾ ಗದೆಯನ್ನು ತಿರುಗಿಸಿದನು?

ಮಡಿದವನ ಹೊಯ್ಯೆನು ಧನಂಜಯ
ತೊಡು ಮಹಾಸ್ತ್ರವನವನಿಪತಿ ಬಿಲು
ದುಡುಕು ಯಮಳರು ಕೈದುಗೊಳಿ ಸಾತ್ಯಕಿ ಶರಾಸನವ
ಹಿಡಿ ಶಿಖಂಡಿ ದ್ರುಪದಸುತರವ
ಗಡಿಸಿರೈ ನಿಮ್ಮವನ ಹರಿಬಕೆ
ಮಿಡುಕುವಡೆ ಬಹುದೆನುತ ತೂಗಿದನವನಿಪತಿ ಗದೆಯ (ಗದಾ ಪರ್ವ, ೭ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕೌರವನು ಗರ್ಜಿಸುತ್ತಾ, ಸತ್ತು ಹೋದವನನ್ನು ನಾನು ಹೊಡೆಯುವುದಿಲ್ಲ, ಅರ್ಜುನ ಮಹಾಸ್ತ್ರವನ್ನು ಹೂದು, ಧರ್ಮಜ ಬಿಲ್ಲನ್ನು ಹಿಡಿ, ನಕುಲ ಸಹದೇವರು ಆಯುಧಗಳನ್ನು ಹಿದಿಯಲಿ, ಸಾತ್ಯಕಿ ಬಿಲ್ಲನ್ನು ಹಿಡಿ, ಶಿಖಂಡಿ, ಧೃಷ್ಟದ್ಯುಮ್ನರೇ ನನ್ನನ್ನು ಇದಿರಿಸಿ, ನಿಮ್ಮವನ ಸೇಡನ್ನು ತೀರಿಸಲು ಬನ್ನಿ ಎಂದು ಕೌರವನು ಗದೆಯನ್ನು ತಿರುಗಿಸಿದನು.

ಅರ್ಥ:
ಮಡಿ: ಸಾವು; ಹೊಯ್ಯು: ಹೊಡೆ; ತೊಡು: ಹೂಡು; ಮಹಾಸ್ತ್ರ: ಶ್ರೇಷ್ಠವಾದ ಶಸ್ತ್ರ; ಬಿಲು: ಬಿಲ್ಲು, ಚಾಪ; ತುಡುಕು: ಹೋರಾಡು, ಸೆಣಸು; ಯಮಳರು: ಅವಳಿ ಮಕ್ಕಳು; ಕೈದು: ಆಯುಧ; ಶರ: ಬಾಣ; ಶರಾಸನ: ಬಿಲ್ಲು; ಹಿಡಿ: ಗ್ರಹಿಸು; ಸುತ: ಮಗ; ಅವಗಡಿಸು: ಸೋಲಿಸು; ಹರಿಬ: ಕೆಲಸ, ಕಾರ್ಯ; ಮಿಡುಕು: ಅಲುಗಾಟ, ಚಲನೆ; ತೂಗು: ಅಲ್ಲಾಡಿಸು; ಅವನಿಪತಿ: ರಾಜ; ಗದೆ: ಮುದ್ಗರ;

ಪದವಿಂಗಡಣೆ:
ಮಡಿದವನ +ಹೊಯ್ಯೆನು+ ಧನಂಜಯ
ತೊಡು +ಮಹಾಸ್ತ್ರವನ್+ಅವನಿಪತಿ +ಬಿಲು
ದುಡುಕು +ಯಮಳರು +ಕೈದುಗೊಳಿ +ಸಾತ್ಯಕಿ +ಶರಾಸನವ
ಹಿಡಿ +ಶಿಖಂಡಿ +ದ್ರುಪದಸುತರ್+ಅವ
ಗಡಿಸಿರೈ +ನಿಮ್ಮವನ+ ಹರಿಬಕೆ
ಮಿಡುಕುವಡೆ +ಬಹುದೆನುತ +ತೂಗಿದನ್+ಅವನಿಪತಿ +ಗದೆಯ

ಅಚ್ಚರಿ:
(೧) ಬಿಲ್ಲು ಎಂದು ಹೇಳಲು ಶರಾಸನ ಪದದ ಬಳಕೆ

ಪದ್ಯ ೪೮: ಧರ್ಮಜನು ಶತ್ರು ಸೈನ್ಯವನ್ನು ಹೇಗೆ ಸಂಹರಿಸಿದನು?

ಏನು ಹೇಳುವೆನವನಿಪತಿ ಯಮ
ಸೂನುವಿನ ಸುಕ್ಷಾತ್ರವನು ನಿ
ನ್ನಾನೆಗಳನಗ್ಗಳೆಯ ರಾವ್ತರ ರಥಪದಾತಿಗಳ
ಭಾನುಬಿಂಬವ ತಗೆವ ತಮದ ವಿ
ತಾನದಂತಿರೆ ವಿರಸಾಯ್ತು ಶ
ರಾನುಗತಶರಜಾಲ ಜನದ ವಿಡಾಯ್ಲತನವೆಂದ (ಗದಾ ಪರ್ವ, ೧ ಸಂಧಿ, ೪೮ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ, ಧರ್ಮಜನ ಕ್ಷಾತ್ರ ಪೌರುಷವನ್ನು ಹೇಗೆ ತಾನೆ ಹೊಗಳಲಿ? ತನ್ನನ್ನು ಮುತ್ತಿದ ಚತುರಂಗ ಸೈನ್ಯವನ್ನು ಸೂರ್ಯ ಕಿರಣವು ಕತ್ತಲನ್ನೋಡಿಸುವಂತೆ ಲೀಲಾಜಾಲವಾಗಿ ಸಂಹರಿಸಿದನು.

ಅರ್ಥ:
ಹೇಳು: ತಿಳಿಸು; ಅವನಿಪತಿ: ರಾಜ; ಸೂನು: ಮಗ; ಕ್ಷಾತ್ರ: ಕ್ಷತ್ರಿಯ; ಆನೆ: ಪರಾಕ್ರಮಿ; ಅಗ್ಗಳೆ: ಶ್ರೇಷ್ಠತೆ; ರಾವ್ತರು: ಕುದುರೆ ಸವಾರ; ರಥ: ಬಂಡಿ; ಪದಾತಿ: ಕಾಲಾಳು; ಭಾನು: ಸೂರ್ಯ; ಬಿಂಬ: ಪ್ರಕಾಶ; ತಗೆ: ಹೊರತರು; ತಮ: ಅಂಧಕಾರ; ವಿತಾನ: ಹಬ್ಬುವಿಕೆ, ವಿಸ್ತಾರ; ವಿರಸ: ವಿರೋಧ, ಸತ್ವವಿಲ್ಲದ; ಶರ: ಬಾಣ; ಅನುಗತ: ಜೊತೆಯಲ್ಲಿ ಬರುವವನು; ಶರಜಾಲ: ಬಾಣಗಳ ಗುಂಪು; ಜನ: ಮನುಷ್ಯ; ವಿಡಾಯಿ: ಶಕ್ತಿ, ಆಡಂಬರ;

ಪದವಿಂಗಡಣೆ:
ಏನು+ ಹೇಳುವೆನ್+ಅವನಿಪತಿ +ಯಮ
ಸೂನುವಿನ +ಸುಕ್ಷಾತ್ರವನು +ನಿ
ನ್ನಾನೆಗಳನ್+ಅಗ್ಗಳೆಯ +ರಾವ್ತರ +ರಥ+ಪದಾತಿಗಳ
ಭಾನು+ಬಿಂಬವ +ತಗೆವ +ತಮದ +ವಿ
ತಾನದಂತಿರೆ +ವಿರಸಾಯ್ತು +ಶ
ರಾನುಗತ+ಶರಜಾಲ+ ಜನದ+ ವಿಡಾಯ್ಲ+ತನವೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭಾನುಬಿಂಬವ ತಗೆವ ತಮದ ವಿತಾನದಂತಿರೆ
(೨) ಶರ ಪದದ ಬಳಕೆ – ಶರಾನುಗತಶರಜಾಲ

ಪದ್ಯ ೭೫: ಕೌರವನು ಪಾಂಡವರನ್ನು ಹೇಗೆ ಹೊಡೆದನು?

ಥಟ್ಟನೊಡಹೊಯ್ದವನಿಪತಿ ಜಗ
ಜಟ್ಟಿಗಳ ಕೆಣಕಿದನು ನಕುಲನ
ನಟ್ಟಿದನು ಸಹದೇವನಡಹಾಯ್ದರೆ ವಿಭಾಡಿಸಿದ
ಬಿಟ್ಟ ಧೃಷ್ಟದ್ಯುಮ್ನನನು ಹುಡಿ
ಗುಟ್ಟಿದನು ಸಾತ್ಯಕಿಯ ಜೋಡಿನ
ಲೊಟ್ಟಿದನು ಕೂರಂಬುಗಳನುಬ್ಬಿನಲಿ ಕುರುರಾಯ (ಶಲ್ಯ ಪರ್ವ, ೩ ಸಂಧಿ, ೭೫ ಪದ್ಯ)

ತಾತ್ಪರ್ಯ:
ಕೌರವನು ಪಾಂಡವ ಸೇನೆಯನ್ನು ಕೆಳಬೀಳುವಂತೆ ಹೊಡೆದು, ನಕುಲನನ್ನು ಓಡಿಸಿದನು. ಎದುರಾದ ಸಹದೇವನನ್ನು ಶಸ್ತ್ರದಿಂದ ಹೊಡೆದನು. ಧೃಷ್ಟದ್ಯುಮ್ನ, ಸಾತ್ಯಕಿಗಲನ್ನು ಬಾಣಗಳಿಂದ ಘಾತಿಸಿದನು.

ಅರ್ಥ:
ಥಟ್ಟು: ಪಕ್ಕ, ಕಡೆ, ಗುಂಪು; ಹೊಯ್ದು: ಹೊಡೆ; ಅವನಿಪತಿ: ರಾಜ; ಜಗಜಟ್ಟಿ: ಪರಾಕ್ರಮಿ; ಕೆಣಕು: ಪ್ರಚೋದಿಸು; ಅಟ್ಟು: ಬೆನ್ನುಹತ್ತಿ ಹೋಗು; ಅಡಹಾಯ್ದು: ಮಧ್ಯ ಪ್ರವೇಶಿಸಿ ಹೊಡೆ; ವಿಭಾಡಿಸು: ನಾಶಮಾಡು; ಬಿಟ್ಟ: ತೊರೆದ; ಹುಡಿ: ಹಿಟ್ಟು, ಪುಡಿ; ಕುಟ್ಟು: ನಾಶಮಾಡು; ಜೋಡು: ಜೊತೆ; ಕೂರಂಬು: ಹರಿತವಾದ ಬಾಣ; ಒಟ್ಟು: ಕೂಡಿಸು, ರಾಶಿ, ಗುಂಪು;

ಪದವಿಂಗಡಣೆ:
ಥಟ್ಟನ್+ಒಡಹೊಯ್ದ್+ಅವನಿಪತಿ+ ಜಗ
ಜಟ್ಟಿಗಳ +ಕೆಣಕಿದನು +ನಕುಲನನ್
ಅಟ್ಟಿದನು +ಸಹದೇವನ್+ಅಡಹಾಯ್ದರೆ +ವಿಭಾಡಿಸಿದ
ಬಿಟ್ಟ +ಧೃಷ್ಟದ್ಯುಮ್ನನನು+ ಹುಡಿ
ಕುಟ್ಟಿದನು +ಸಾತ್ಯಕಿಯ +ಜೋಡಿನಲ್
ಒಟ್ಟಿದನು +ಕೂರಂಬುಗಳನ್+ಉಬ್ಬಿನಲಿ +ಕುರುರಾಯ

ಅಚ್ಚರಿ:
(೧) ಅಟ್ಟಿದ, ಕುಟ್ಟಿದ, ಒಟ್ಟಿದ – ಪ್ರಾಸ ಪದಗಳು

ಪದ್ಯ ೩೨: ಧರ್ಮಜನು ಶಲ್ಯನಿಗೆ ಏನು ಹೇಳಿದ?

ಮಾವನವರೇ ನಿಮ್ಮ ಹಿಂಸೆಗೆ
ನಾವು ಕಡುಗೆವು ಕ್ಷತ್ರಜಾತಿಯ
ಜೀವನವಲೇ ಕಷ್ಟವಿದು ಕಾರ್ಪಣ್ಯತರವಾಗಿ
ನೀವು ಸೈರಿಸಬೇಕು ನಮ್ಮ ಶ
ರಾವಳಿಯನೆನುತವನಿಪತಿ ಬಾ
ಣಾವಳಿಯ ಕೆದರಿದನು ಸೇನಾಪತಿಯ ಸಮ್ಮುಖಕೆ (ಶಲ್ಯ ಪರ್ವ, ೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ಮಾವನವರೇ, ನಿಮ್ಮ ಹಿಂಸೆಗೆ ನಾವು ಶಕ್ತಿಗುಂದುವುದಿಲ್ಲ. ಕ್ಷತ್ರಿಯರ ಜೀವನವು ಕಷ್ಟತರ, ಕಾರ್ಪಣ್ಯಭರಿತವಾದುದು. ಆದ್ಧರಿಂದ ನಮ್ಮ ಬಾಣಗಳನ್ನು ನೀವು ಸಹಿಸಿಕೊಳ್ಳಬೇಕು ಎಂದು ಯುಧಿಷ್ಠಿರನು ಬಾಣಗಳನ್ನು ಬಿಟ್ಟನು.

ಅರ್ಥ:
ಮಾವ: ತಾಯಿಯ ಸಹೋದರ; ಹಿಂಸೆ: ನೋವು; ಕಡುಗು: ಶಕ್ತಿಗುಂದು; ಕ್ಷತ್ರ: ಕ್ಷತ್ರಿಯ; ಜಾತಿ: ವಂಶ; ಕಷ್ಟ: ನೋವು; ಕಾರ್ಪಣ್ಯ: ಬಡತನ, ದೈನ್ಯ; ಸೈರಿಸು: ತಾಳು, ಸಹಿಸು; ಶರಾವಳಿ: ಬಾಣಗಳ ಗುಂಪು; ಅವನಿಪತಿ: ರಾಜ; ಬಾಣಾ: ಅಂಬು; ಆವಳಿ: ಸಾಲು; ಕೆದರು: ಹರಡು; ಸಮ್ಮುಖ: ಎದುರು;

ಪದವಿಂಗಡಣೆ:
ಮಾವನವರೇ +ನಿಮ್ಮ +ಹಿಂಸೆಗೆ
ನಾವು+ ಕಡುಗೆವು +ಕ್ಷತ್ರ+ಜಾತಿಯ
ಜೀವನವಲೇ +ಕಷ್ಟವಿದು +ಕಾರ್ಪಣ್ಯ+ತರವಾಗಿ
ನೀವು +ಸೈರಿಸಬೇಕು +ನಮ್ಮ +ಶ
ರಾವಳಿಯನ್+ಎನುತ್+ಅವನಿಪತಿ +ಬಾ
ಣಾವಳಿಯ +ಕೆದರಿದನು +ಸೇನಾಪತಿಯ +ಸಮ್ಮುಖಕೆ

ಅಚ್ಚರಿ:
(೧) ಶರಾವಳಿ, ಬಾಣಾವಳಿ – ಸಮಾನಾರ್ಥಕ ಪದ, ಪ್ರಾಸ ಪದ
(೨) ಕ್ಷತ್ರಿಯರ ಜೀವನ – ಕ್ಷತ್ರಜಾತಿಯ ಜೀವನವಲೇ ಕಷ್ಟವಿದು ಕಾರ್ಪಣ್ಯತರವಾಗಿ

ಪದ್ಯ ೩೮: ಕೃಷ್ಣನು ಏಕೆ ನಗುತ್ತಿದ್ದನು?

ತವಕ ತಗ್ಗಿತು ಭಟರ ತಾಳಿಗೆ
ಜವಳಿದೆಗೆದುದು ಮನಕೆ ಭೀತಿಯ
ಗವಸಣಿಗೆ ಘಾಡಿಸಿತು ಜಾಳಿಸಿತದಟರಪಸರಣ
ಸವೆದ ಶೌರ್ಯದ ಘಾಯ ಘಲ್ಲಿಸಿ
ತವಯವದ ಮಡಮುರಿವ ಮೋಹರ
ದವನಿಪತಿಗಳ ನಿಲವ ನೋಡಿದನಸುರರಿಪು ನಗುತ (ದ್ರೋಣ ಪರ್ವ, ೧೫ ಸಂಧಿ, ೩೮ ಪದ್ಯ)

ತಾತ್ಪರ್ಯ:
ಪಾಂಡವ ಯೋದರ ಯುದ್ಧಮಾಡುವ ತವಕ ತಗ್ಗಿತು; ಅಂಗಳುಗಳು ಒಣಗಿದವು, ಮನಸ್ಸಿಗೆ ಭೀತಿಯ ತೆರೆ ಆವರಿಸಿತು. ವೀರರು ಹಿಮ್ಮೆಟ್ಟಿದರು. ಹಗಲು ರಾತ್ರಿ ಶೌರ್ಯದಿಂದ ಹೋರಾಡಿದ ಗಾಯಗಳ ನೋವು ಹೆಚ್ಚಿತು. ಯುದ್ಧಕ್ಕೆ ಬೇಸರಿಸಿದ ರಾಜರು ಬಾಹುಗಳನ್ನು ಇಳಿಬಿಟ್ಟರು. ಇವರೆಲ್ಲರ ಸ್ಥಿತಿಯನ್ನು ಶ್ರೀಕೃಷ್ಣನು ನಗುತ್ತಾ ನೋಡಿದನು.

ಅರ್ಥ:
ತವಕ: ಬಯಕೆ, ಆತುರ; ತಗ್ಗು: ಕಡಿಮೆಯಾಗು; ಭಟ: ಸೈನ್ಯ; ತಾಳು: ಹೊಂದು, ಪಡೆ; ಜವಳಿ: ಬಟ್ಟೆ, ಸೀರೆ, ಪಂಚೆ; ತೆಗೆ: ಹೊರತರು; ಮನ: ಮನಸ್ಸು: ಭೀತಿ: ಭಯ; ಗವಸಣಿಗೆ: ಮುಸುಕು, ಮರೆ; ಘಾಡಿಸು: ವ್ಯಾಪಿಸು; ಜಾಳಿಸು: ಚಲಿಸು, ನಡೆ; ಅದಟ: ಶೂರ, ಪರಾಕ್ರಮಿ; ಪಸರಣ: ಹರಡುವಿಕೆ; ಸವೆ: ಕಡಿಮೆಯಾಗು; ಶೌರ್ಯ: ಪರಾಕ್ರಮ; ಘಾಯ: ಪೆಟ್ಟು; ಘಲ್ಲಿಸು: ಪೀಡಿಸು; ಅವಯವ: ದೇಹ; ಮಡ: ಪಾದದ ಹಿಂಭಾಗ; ಮುರಿ: ಸೀಳು; ಮೋಹರ: ಯುದ್ಧ; ಅವನಿಪತಿ: ರಾಜ; ನಿಲವ: ಸ್ಥಿತಿ; ನೋಡು: ವೀಕ್ಷಿಸು; ಅಸುರರಿಪು: ರಾಕ್ಷಸರ ವೈರಿ (ಕೃಷ್ಣ); ನಗು: ಹರ್ಷ;

ಪದವಿಂಗಡಣೆ:
ತವಕ +ತಗ್ಗಿತು +ಭಟರ +ತಾಳಿಗೆ
ಜವಳಿ+ತೆಗೆದುದು +ಮನಕೆ +ಭೀತಿಯ
ಗವಸಣಿಗೆ +ಘಾಡಿಸಿತು +ಜಾಳಿಸಿತ್+ಅದಟರ+ಪಸರಣ
ಸವೆದ +ಶೌರ್ಯದ +ಘಾಯ +ಘಲ್ಲಿಸಿತ್
ಅವಯವದ +ಮಡಮುರಿವ+ ಮೋಹರದ್
ಅವನಿಪತಿಗಳ +ನಿಲವ +ನೋಡಿದನ್+ಅಸುರರಿಪು +ನಗುತ

ಅಚ್ಚರಿ:
(೧) ರೂಪಕದ ಪ್ರಯೋಗ – ಜವಳಿದೆಗೆದುದು ಮನಕೆ ಭೀತಿಯ

ಪದ್ಯ ೫೧: ಅರ್ಜುನನು ಕೌರವನಿಗೆ ಏನೆಂದು ಉತ್ತರಿಸಿದನು?

ಕಾಲುವೊಳೆಗೇಕವನಿಪತಿ ಹರು
ಗೋಲು ನೀವಿನ್ನರಿಯದಿದ್ದರೆ
ಹೇಳೆವಾತ್ಮಸ್ತುತಿಯ ಮಾಡೆವು ಸಾಕದಂತಿರಲಿ
ಮೇಲುಗವಚವ ನಂಬಿ ನಮ್ಮೊಳು
ಕಾಳೆಗವ ನೀ ಬಯಸಿ ಬಂದೆ ನೃ
ಪಾಲ ಜೋಡಿನ ಬಲದಿ ನಮ್ಮನು ಜಯಸುವೈ ಎಂದ (ದ್ರೋಣ ಪರ್ವ, ೧೦ ಸಂಧಿ, ೫೧ ಪದ್ಯ)

ತಾತ್ಪರ್ಯ:
ಕಾಲಿನಿಂದ ದಾಟಬಹುದಾದ ಹೊಳೆಯನ್ನು ದಾಟಲು ಹರಿಗೋಲೇಕೆ? ನಿಮಗೆ ತಿಳಿಯದಿದ್ದರೆ ನಾವೇನೂ ಹೇಳಲಾಗುವುದಿಲ್ಲ. ನನ್ನನ್ನು ಹೊಗಳಿಕೊಳ್ಳುವುದೂ ಇಲ್ಲ, ಕವಚವನ್ನು ನಂಬಿ ನನ್ನೊಡನೆ ಕಾಳಗವನ್ನು ಮಾಡಲು ಬಂದಿರುವೆ, ಕವಚದ ಬಲದಿಂದ ನನ್ನನ್ನು ಜಯಿಸಬಲ್ಲೆಯಾ ಎಂದು ಅರ್ಜುನನು ಕೇಳಿದನು.

ಅರ್ಥ:
ವೊಳೆ: ಹೋಳೆ; ಅವನಿಪತಿ: ರಾಜ; ಹರಿಗೋಲು: ದೋಣಿ, ದೇಹ; ಅರಿ: ತಿಳಿ; ಆತ್ಮಸ್ತುತಿ: ಹೊಗಳು; ಸಾಕು: ನಿಲ್ಲಿಸು; ಕವಚ: ಉಕ್ಕಿನ ಅಂಗಿ; ನಂಬು: ವಿಶ್ವಾಸವಿಡು; ಕಾಳೆಗ: ಯುದ್ಧ; ಬಯಸು: ಇಚ್ಛಿಸು; ನೃಪಾಲ: ರಾಜ; ಜೋಡು: ಜೊತೆ; ಬಲ: ಶಕ್ತಿ; ಜಯಸು: ಗೆಲ್ಲು;

ಪದವಿಂಗಡಣೆ:
ಕಾಲುವೊಳೆಗೇಕ್+ಅವನಿಪತಿ +ಹರು
ಗೋಲು +ನೀವಿನ್+ಅರಿಯದಿದ್ದರೆ
ಹೇಳೆವ್+ಆತ್ಮಸ್ತುತಿಯ +ಮಾಡೆವು +ಸಾಕ್+ಅದಂತಿರಲಿ
ಮೇಲು+ಕವಚವ +ನಂಬಿ +ನಮ್ಮೊಳು
ಕಾಳೆಗವ +ನೀ +ಬಯಸಿ +ಬಂದೆ +ನೃ
ಪಾಲ +ಜೋಡಿನ +ಬಲದಿ +ನಮ್ಮನು +ಜಯಸುವೈ +ಎಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಾಲುವೊಳೆಗೇಕವನಿಪತಿ ಹರುಗೋಲು

ಪದ್ಯ ೯: ಅಭಿಮನ್ಯುವಿನ ಸ್ಥಿತಿ ಹೇಗಿತ್ತು?

ಮರೆವುತೆಚ್ಚರುತವನಿಪತಿ ಕರೆ
ತರುಣನಾವೆಡೆ ರಾಯಗಜ ಕೇ
ಸರಿಯದಾವೆಡೆ ಕಂದ ಬಾಯೆನುತಪ್ಪಿದನು ಬಯಲ
ಹೊರಳಿದನು ಹುಡಿಯೊಳಗೆ ಸಲೆ ಕಾ
ತರಿಸಿದನು ಮೋಹಾಂಧಕಾರಕೆ
ಕರಣವನು ಕೈಸೂರೆಗೊಟ್ಟನು ನಿಜದೊಳೆಚ್ಚರದೆ (ದ್ರೋಣ ಪರ್ವ, ೭ ಸಂಧಿ, ೯ ಪದ್ಯ)

ತಾತ್ಪರ್ಯ:
ಧರ್ಮಜನು ಎಚ್ಚರು ಮೂರ್ಛೆಗಳಿಗೆ ಒಳಗಾಗಿ ಎಚ್ಚರು ಬಂದಾಗ ಅಭಿಮನ್ಯುವೆಲ್ಲಿ, ಶತ್ರುರಾಜ ಗಜಕೇಸರಿಯೆಲ್ಲಿ ಕಂದಾ ಬಾ, ಎನ್ನುತ್ತಾ ಬಯಲನ್ನಪ್ಪಿಕೊಳ್ಳುತ್ತಿದ್ದನು. ನೆಲದ ಮೇಲೆ ಧೂಳಿನಲ್ಲಿ ಹೊರಳಾಡಿದನು, ಕಾತರಿಸಿದನು, ಮೋಹಕ್ಕೆ ಮನಸ್ಸನ್ನು ಕೈಸೂರೆಗೊಟ್ಟು ಎಚ್ಚರದಲ್ಲೂ ಎಚ್ಚರುದಪ್ಪಿದನು. ನಿಜವನ್ನು ಅರಗಿಸಿಕೊಳ್ಳಲಿಲ್ಲ.

ಅರ್ಥ:
ಮರೆ: ಮೂರ್ಛೆ, ಎಚ್ಚರತಪ್ಪು; ಎಚ್ಚರ: ನಿದ್ರೆಯಿಂದ ಏಳುವುದು; ಅವನಿಪತಿ: ರಾಜ; ಕರೆ: ಬರೆಮಾಡು; ತರುಣ: ಯುವಕ; ರಾಯ: ರಾಜ; ಗಜ: ಆನೆ; ಕೇಸರಿ: ಸಿಂಹ; ಕಂದ: ಮಗು; ಬಾ: ಆಗಮಿಸು; ಅಪ್ಪು: ತಬ್ಬಿಕೋ; ಬಯಲು: ಬರಿದಾದ ಜಾಗ, ಶೂನ್ಯ; ಹೊರಳು: ತಿರುವು, ಬಾಗು; ಹುಡಿ: ಪುಡಿ, ಚೂರ್ಣ; ಸಲೆ: ಒಂದೇ ಸಮನೆ; ಕಾತರ: ಕಳವಳ; ಮೋಹ:ಭ್ರಾಂತಿ, ಭ್ರಮೆ; ಅಂಧಕಾರ: ಕತ್ತಲು; ಕರಣ: ಕೆಲಸ, ಮನಸ್ಸು; ಸೂರೆ: ಕೊಳ್ಳೆ, ಲೂಟಿ; ಎಚ್ಚರ: ಹುಷಾರಾಗಿರುವಿಕೆ

ಪದವಿಂಗಡಣೆ:
ಮರೆವುತ್+ಎಚ್ಚರುತ್+ಅವನಿಪತಿ +ಕರೆ
ತರುಣನ್+ಆವೆಡೆ+ ರಾಯಗಜ+ ಕೇ
ಸರಿಯದ್+ಆವೆಡೆ +ಕಂದ +ಬಾಯೆನುತ್+ಅಪ್ಪಿದನು +ಬಯಲ
ಹೊರಳಿದನು +ಹುಡಿಯೊಳಗೆ+ ಸಲೆ +ಕಾ
ತರಿಸಿದನು +ಮೋಹಾಂಧಕಾರಕೆ
ಕರಣವನು +ಕೈಸೂರೆಗೊಟ್ಟನು +ನಿಜದೊಳ್+ಎಚ್ಚರದೆ

ಅಚ್ಚರಿ:
(೧) ಮರೆ, ಎಚ್ಚರ – ವಿರುದ್ಧ ಸ್ಥಿತಿಗಳು
(೨) ಅಭಿಮನ್ಯುವನ್ನು ಕರೆದ ಪರಿ – ತರುಣನಾವೆಡೆ ರಾಯಗಜ ಕೇಸರಿಯದಾವೆಡೆ ಕಂದ ಬಾಯೆನುತಪ್ಪಿದನು ಬಯಲ

ಪದ್ಯ ೧೪: ಧರ್ಮಜನು ಯಾರನ್ನು ಭೇಟಿಯಾಗಲು ರಾತ್ರಿಯಲ್ಲಿ ಹೊರಟನು?

ಇರುಳು ಗುಪಿತದಲವನಿಪತಿ ಸೋ
ದರರು ಮುರರಿಪು ಸಹಿತ ಬಂದನು
ಸುರನದೀನಂದನನ ಮಂದಿರಕಾಗಿ ವಹಿಲದಲಿ
ಕರೆದು ಪಡಿಹಾರರಿಗೆ ಬಂದುದ
ನರುಹಲವದಿರು ಹೊಕ್ಕು ಸಮಯವ
ನರಿದು ಭೀಷ್ಮಂಗೀ ಹದನ ಬಿನ್ನಹವ ಮಾಡಿದರು (ಭೀಷ್ಮ ಪರ್ವ, ೭ ಸಂಧಿ, ೧೪ ಪದ್ಯ)

ತಾತ್ಪರ್ಯ:
ಆ ರಾತ್ರಿ ಧರ್ಮಜನು ತನ್ನ ತಮ್ಮಂದಿರು ಮತ್ತು ಕೃಷ್ಣನೊಡನೆ ಕೌರವ ಸೈನ್ಯವನ್ನು ಗುಪ್ತವಾಗಿ ಹೊಕ್ಕು ಭೀಷ್ಮನ ಬಿಡಾರಕ್ಕೆ ಬಂದು ಬಾಗಿಲು ಕಾಯುವವನಿಗೆ ತಿಳಿಸಲು, ಅವರು ಒಳಹೊಕ್ಕು ಭೀಷ್ಮನಿಗೆ ಈ ವಿಷಯವನ್ನು ತಿಳಿಸಿದರು.

ಅರ್ಥ:
ಇರುಳು: ರಾತ್ರಿ; ಗುಪಿತ: ಗುಪ್ತ, ರಹಸ್ಯ; ಅವನಿಪತಿ: ರಾಜ; ಸೋದರ: ತಮ್ಮಂದಿರು; ಮುರರಿಪು: ಕೃಷ್ಣ; ಸಹಿತ: ಜೊತೆ; ಬಂದು: ಆಗಮಿಸು; ಸುರನದೀನಂದನ: ಗಂಗಾಪುತ್ರ; ಮಂದಿರ: ಆಲಯ; ವಹಿಲ:ಬೇಗ, ತ್ವರೆ; ಕರೆ: ಬರೆಮಾಡು; ಪಡಿಹಾರ: ಬಾಗಿಲು ಕಾಯುವವನು; ಅರುಹು: ಹೇಳು; ಅವದಿರು: ಅವರು; ಹೊಕ್ಕು: ಸೇರು; ಸಮಯ: ಕಾಲ; ಅರಿ: ತಿಳಿ; ಹದನ: ರೀತಿ, ಸ್ಥಿತಿ; ಬಿನ್ನಹ: ಕೋರಿಕೆ;

ಪದವಿಂಗಡಣೆ:
ಇರುಳು +ಗುಪಿತದಲ್+ಅವನಿಪತಿ +ಸೋ
ದರರು +ಮುರರಿಪು+ ಸಹಿತ +ಬಂದನು
ಸುರನದೀ+ನಂದನನ +ಮಂದಿರಕಾಗಿ +ವಹಿಲದಲಿ
ಕರೆದು+ ಪಡಿಹಾರರಿಗೆ+ ಬಂದುದನ್
ಅರುಹಲ್+ಅವದಿರು +ಹೊಕ್ಕು +ಸಮಯವನ್
ಅರಿದು +ಭೀಷ್ಮಂಗ್+ಈ+ ಹದನ +ಬಿನ್ನಹವ +ಮಾಡಿದರು

ಅಚ್ಚರಿ:
(೧) ಅವನಿಪತಿ, ಮುರರಿಪು, ಸುರನದೀನಂದನ – ಧರ್ಮಜ, ಕೃಷ್ಣ, ಭೀಷ್ಮರನ್ನು ಕರೆದ ಪರಿ

ಪದ್ಯ ೨: ಮಂತ್ರಾಲೋಚನೆಗೆ ಯಾರು ಬಂದರು?

ರವಿಜ ಗುರುಸುತ ಶಲ್ಯ ಕಲಶೋ
ದ್ಭವರು ಸೌಬಲರಾದಿ ಯಾದವ
ರವನಿಪಾಲನ ಕಂಡರಂದೇಕಾಂತ ಭವನದಲಿ
ಅವನಿಪತಿ ಹದನೇನು ರಿಪುಪಾಂ
ಡವರ ಬೀಡಿನ ಗುಪ್ತದನುಮಾ
ನವನು ಚಿತ್ತಯಿಸಿದಿರೆ ಬೆಸಸುವುದೆನಲು ನೃಪ ನುಡಿದ (ಭೀಷ್ಮ ಪರ್ವ, ೧ ಸಂಧಿ, ೨ ಪದ್ಯ)

ತಾತ್ಪರ್ಯ:
ಕರ್ಣ, ಅಶ್ವತ್ಥಾಮ, ಶಲ್ಯ, ದ್ರೋಣ, ಶಕುನಿ, ಯಾದವರಾಜರು ಸೇರಿ ಏಕಾಂತ ಭವನದಲ್ಲಿ ದುರ್ಯೋಧನನನ್ನು ಕಂಡು ದೊರೆಯೇ, ಏನು ವಿಷಯ? ಶತ್ರುಗಳಾದ ಪಾಂಡವರ ಬೀಡಿನಲ್ಲಿ ಏನು ನಡೆಯುತ್ತಿದೆ ಎಂದು ತಿಳಿದಿದ್ದರೆ ನಮಗೆ ಅಪ್ಪಣೆ ಕೊಡಿ ಎನಲು ದುರ್ಯೋಧನನು ಮಾತನಾಡಿದ.

ಅರ್ಥ:
ರವಿಜ: ಸೂರ್ಯಪುತ್ರ (ಕರ್ಣ); ಗುರು: ಆಚಾರ್ಯ; ಸುತ: ಮಗ; ಕಲಶೋದ್ಭವ: ಕಲಶದಿಂದ ಹುಟ್ಟಿದ (ದ್ರೋಣ); ಸೌಬಲ: ಶಕುನಿ; ಆದಿ: ಮುಂತಾದ; ಅವನಿಪಾಲ: ರಾಜ; ಏಕಾಂತ: ಗುಟ್ಟಾದ; ಭವನ: ಮನೆ; ಅವನಿಪತಿ: ರಾಜ; ಹದ: ಸ್ಥಿತಿ; ರಿಪು: ವೈರಿ; ಬೀಡು: ತಂಗುದಾಣ, ಬಿಡಾರ; ಗುಪ್ತ: ರಹಸ್ಯ; ಅನುಮಾನ: ಊಹೆ, ಸಂದೇಹ; ಚಿತ್ತ: ಮನಸ್ಸು; ಚಿತ್ತಯಿಸು: ಕೇಳು; ಬೆಸಸು: ಹೇಳು, ಆಜ್ಞಾಪಿಸು; ನೃಪ: ರಾಜ; ನುಡಿ: ಮಾತಾಡು;

ಪದವಿಂಗಡಣೆ:
ರವಿಜ +ಗುರುಸುತ +ಶಲ್ಯ +ಕಲಶೋ
ದ್ಭವರು +ಸೌಬಲರಾದಿ +ಯಾದವರ್
ಅವನಿಪಾಲನ +ಕಂಡರಂದ್+ ಏಕಾಂತ +ಭವನದಲಿ
ಅವನಿಪತಿ+ ಹದನೇನು +ರಿಪು+ಪಾಂ
ಡವರ +ಬೀಡಿನ +ಗುಪ್ತದ್+ಅನುಮಾ
ನವನು +ಚಿತ್ತಯಿಸಿದಿರೆ +ಬೆಸಸುವುದೆನಲು +ನೃಪ +ನುಡಿದ

ಅಚ್ಚರಿ:
(೧) ಅವನಿಪಾಲ, ಅವನಿಪತಿ, ನೃಪ – ಸಮನಾರ್ಥಕ ಪದ