ಪದ್ಯ ೧೪: ನಾರಾಯಣಾಸ್ತ್ರವು ಹೇಗೆ ತೋರಿತು?

ದನುಜಹರ ಮಂತ್ರವನು ಮನದಲಿ
ನೆನೆದು ಕೈ ನೀಡಿದನು ತುದಿಯಂ
ಬಿನಲಿ ತುರುಗಿದ ಕಿಡಿಯ ಬಿರುಕೇಸರಿಯ ಧಾಳಿಗಳ
ತನಿವೊಗರ ಬಲುವೊಗೆಯ ಹೊರಳಿಯ
ಕನಕರಸ ರೇಖಾವಳಿಯ ಮೈ
ಮಿನುಗುಗಳ ಹೊಂಗರಿಯ ನಾರಾಯಣ ಮಹಾಶರಕೆ (ದ್ರೋಣ ಪರ್ವ, ೧೯ ಸಂಧಿ, ೧೪ ಪದ್ಯ)

ತಾತ್ಪರ್ಯ:
ನಾರಾಯಣಾಸ್ತ್ರ ಮಮ್ತ್ರವನ್ನು ಮನಸ್ಸಿನಲ್ಲಿ ಜಪಿಸಿ, ತುದಿಯಿಂದ ಕಿಡಿಯುಗುಳುವ, ಕೆಂಪನೆಯ ಜ್ವಾಲೆಗಳು ಹೊರಹೊಮ್ಮುವ, ದಟ್ಟವಾಗಿ ಹೊಗೆ ಹಬ್ಬುವ, ಕನಕರೇಖೆಗಳಿಂದ ಕೂಡಿದ ನಾರಾಯಣಾಸ್ತ್ರಕ್ಕೆ ಅಶ್ವತ್ಥಾಮನು ಕೈನೀಡಿದನು.

ಅರ್ಥ:
ದನುಜ: ದಾನವ; ಹರ: ನಾಶ; ಮಂತ್ರ: ದೇವತಾ ಸ್ತುತಿ; ಮನ: ಮನಸ್ಸು; ನೆನೆ: ಜ್ಞಾಪಿಸು; ಕೈ: ಹಸ್ತ; ನೀಡು: ಒಡ್ಡು; ತುದಿ: ಅಗ್ರ; ಅಂಬು: ಬಾಣ; ತುರುಗು: ಸಂದಣಿ, ದಟ್ಟಣೆ; ಕಿಡಿ: ಬೆಂಕಿ; ಬಿರು: ಗಟ್ಟಿ; ಕೇಸರಿ: ಕೆಂಪು ಬಣ್ಣ; ಧಾಳಿ: ಲಗ್ಗೆ, ಮುತ್ತಿಗೆ; ತನಿ: ಚೆನ್ನಾಗಿ ಬೆಳೆದುದು; ತನಿವೊಗರು: ಹೆಚ್ಚಾದ ಕಾಂತಿ; ಬಲು: ಬಹಳ; ಹೊಗೆ: ಧೂಮ; ಹೊರಳಿ: ಗುಂಪು; ಕನಕ: ಚಿನ್ನ; ರಸ: ಸಾರ; ರೇಖೆ: ಗೆರೆ, ಗೀಟು; ಆವಳಿ: ಗುಂಪು; ಮೈ: ದೇಹ; ಮಿನುಗು: ಪ್ರಕಾಶ; ಹೊಂಗರಿ: ಚಿನ್ನದ ಗರಿ; ಮಹಾ: ಶ್ರೇಷ್ಠ; ಶರ: ಬಾಣ;

ಪದವಿಂಗಡಣೆ:
ದನುಜಹರ +ಮಂತ್ರವನು +ಮನದಲಿ
ನೆನೆದು +ಕೈ +ನೀಡಿದನು+ ತುದಿ+
ಅಂಬಿನಲಿ +ತುರುಗಿದ +ಕಿಡಿಯ +ಬಿರು+ಕೇಸರಿಯ +ಧಾಳಿಗಳ
ತನಿವೊಗರ+ ಬಲು+ವೊಗೆಯ +ಹೊರಳಿಯ
ಕನಕರಸ +ರೇಖಾವಳಿಯ +ಮೈ
ಮಿನುಗುಗಳ +ಹೊಂಗರಿಯ+ ನಾರಾಯಣ +ಮಹಾಶರಕೆ

ಅಚ್ಚರಿ:
(೧) ನಾರಾಯಣ ಎಂದು ಹೇಳಲು ದನುಜಹರ ಪದದ ಬಳಕೆ
(೨) ವೊಗರ, ವೊಗೆಯ – ಪದಗಳ ಬಳಕೆ

ಪದ್ಯ ೧೨: ದೇವತೆಗಳೇಕೆ ಭಯಗೊಂಡರು?

ನೊಂದ ಜವನೋ ಜಗವನುರುಹಲು
ಬಂದ ಶಿವನೋ ಕಂಬದಿಂದೊಗೆ
ತಂದ ರೌದ್ರಾಟೋಪ ಮಾನವರೂಪ ಕೇಸರಿಯೊ
ತಂದೆಯಳಲಿಗನಿರವು ವಿಶ್ವವ
ನೊಂದು ನಿಮಿಷಕೆ ಸುಡುವುದೋ ಹಾ
ಯೆಂದುದಮರಾನೀಕವಲೆ ಭೂಪಾಲ ಕೇಳೆಂದ (ದ್ರೋಣ ಪರ್ವ, ೧೯ ಸಂಧಿ, ೧೨ ಪದ್ಯ)

ತಾತ್ಪರ್ಯ:
ಎಲೈ ರಾಜನೇ ಕೇಳು, ಅಶ್ವತ್ಥಾಮನು ಅತೀವ ಕೋಪಗೊಂಡನು. ನೊಂದ ಯಮನೋ, ಲೋಕವನ್ನು ಸುಡಲೆಂದು ಬಂದ ಶಿವನೋ, ಕಂಬದಿಂದ ಹೊರಬಮ್ದ ರೌದ್ರಾಟೋಪದ ನರಸಿಂಹನೋ, ತಂದೆಯ ಮರಣದ ಅಳಲಿನಿಂದ ಮರುಗಿ ಕೋಪಗೊಂಡ ಅಶ್ವತ್ಥಾಮನ ಆಟೊಪವು ಒಂದೇ ನಿಮಿಷಕ್ಕೆ ವಿಶ್ವವನ್ನು ಸುಡುವುದೋ ಏನೋ ಎಂದು ದೇವತೆಗಳು ಭಯಗೊಂಡರು.

ಅರ್ಥ:
ನೊಂದು: ನೋವು; ಜವ: ಯಮ; ಜಗ: ಪ್ರಪಂಚ; ಉರುಹು: ಸುಡು, ತಾಪಗೊಳಿಸು; ಶಿವ: ಶಂಕರ; ಬಂದ: ಆಗಮಿಸು; ಕಂಬ: ಮಾಡಿನ ಆಧಾರಕ್ಕೆ ನಿಲ್ಲಿಸುವ ಮರ ಕಲ್ಲು; ಒಗೆ: ಹೊರಬಂದ; ರೌದ್ರ: ಭಯಂಕರ; ಮಾನವ: ಮನುಷ್ಯ; ಕೇಸರಿ: ಸಿಂಹ; ತಂದೆ: ಪಿತ; ಅಳಲು: ದುಃಖಿಸು; ನಿಮಿಷ:ಕ್ಷಣ; ಸುಡು: ದಹಿಸು; ಅಮರ: ದೇವತೆ; ಆನೀಕ: ಸಮೂಹ; ಭೂಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ನೊಂದ +ಜವನೋ +ಜಗವನ್+ಉರುಹಲು
ಬಂದ +ಶಿವನೋ +ಕಂಬದಿಂದ್+ಒಗೆ
ತಂದ +ರೌದ್ರಾಟೋಪ +ಮಾನವರೂಪ +ಕೇಸರಿಯೊ
ತಂದೆ+ಅಳಲಿಗನ್+ಇರವು +ವಿಶ್ವವನ್
ಒಂದು +ನಿಮಿಷಕೆ +ಸುಡುವುದೋ +ಹಾ
ಎಂದುದ್+ಅಮರಾನೀಕವಲೆ +ಭೂಪಾಲ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೊಂದ ಜವನೋ ಜಗವನುರುಹಲು ಬಂದ ಶಿವನೋ ಕಂಬದಿಂದೊಗೆ
ತಂದ ರೌದ್ರಾಟೋಪ ಮಾನವರೂಪ ಕೇಸರಿಯೊ

ಪದ್ಯ ೯: ಅಭಿಮನ್ಯುವಿನ ಸ್ಥಿತಿ ಹೇಗಿತ್ತು?

ಮರೆವುತೆಚ್ಚರುತವನಿಪತಿ ಕರೆ
ತರುಣನಾವೆಡೆ ರಾಯಗಜ ಕೇ
ಸರಿಯದಾವೆಡೆ ಕಂದ ಬಾಯೆನುತಪ್ಪಿದನು ಬಯಲ
ಹೊರಳಿದನು ಹುಡಿಯೊಳಗೆ ಸಲೆ ಕಾ
ತರಿಸಿದನು ಮೋಹಾಂಧಕಾರಕೆ
ಕರಣವನು ಕೈಸೂರೆಗೊಟ್ಟನು ನಿಜದೊಳೆಚ್ಚರದೆ (ದ್ರೋಣ ಪರ್ವ, ೭ ಸಂಧಿ, ೯ ಪದ್ಯ)

ತಾತ್ಪರ್ಯ:
ಧರ್ಮಜನು ಎಚ್ಚರು ಮೂರ್ಛೆಗಳಿಗೆ ಒಳಗಾಗಿ ಎಚ್ಚರು ಬಂದಾಗ ಅಭಿಮನ್ಯುವೆಲ್ಲಿ, ಶತ್ರುರಾಜ ಗಜಕೇಸರಿಯೆಲ್ಲಿ ಕಂದಾ ಬಾ, ಎನ್ನುತ್ತಾ ಬಯಲನ್ನಪ್ಪಿಕೊಳ್ಳುತ್ತಿದ್ದನು. ನೆಲದ ಮೇಲೆ ಧೂಳಿನಲ್ಲಿ ಹೊರಳಾಡಿದನು, ಕಾತರಿಸಿದನು, ಮೋಹಕ್ಕೆ ಮನಸ್ಸನ್ನು ಕೈಸೂರೆಗೊಟ್ಟು ಎಚ್ಚರದಲ್ಲೂ ಎಚ್ಚರುದಪ್ಪಿದನು. ನಿಜವನ್ನು ಅರಗಿಸಿಕೊಳ್ಳಲಿಲ್ಲ.

ಅರ್ಥ:
ಮರೆ: ಮೂರ್ಛೆ, ಎಚ್ಚರತಪ್ಪು; ಎಚ್ಚರ: ನಿದ್ರೆಯಿಂದ ಏಳುವುದು; ಅವನಿಪತಿ: ರಾಜ; ಕರೆ: ಬರೆಮಾಡು; ತರುಣ: ಯುವಕ; ರಾಯ: ರಾಜ; ಗಜ: ಆನೆ; ಕೇಸರಿ: ಸಿಂಹ; ಕಂದ: ಮಗು; ಬಾ: ಆಗಮಿಸು; ಅಪ್ಪು: ತಬ್ಬಿಕೋ; ಬಯಲು: ಬರಿದಾದ ಜಾಗ, ಶೂನ್ಯ; ಹೊರಳು: ತಿರುವು, ಬಾಗು; ಹುಡಿ: ಪುಡಿ, ಚೂರ್ಣ; ಸಲೆ: ಒಂದೇ ಸಮನೆ; ಕಾತರ: ಕಳವಳ; ಮೋಹ:ಭ್ರಾಂತಿ, ಭ್ರಮೆ; ಅಂಧಕಾರ: ಕತ್ತಲು; ಕರಣ: ಕೆಲಸ, ಮನಸ್ಸು; ಸೂರೆ: ಕೊಳ್ಳೆ, ಲೂಟಿ; ಎಚ್ಚರ: ಹುಷಾರಾಗಿರುವಿಕೆ

ಪದವಿಂಗಡಣೆ:
ಮರೆವುತ್+ಎಚ್ಚರುತ್+ಅವನಿಪತಿ +ಕರೆ
ತರುಣನ್+ಆವೆಡೆ+ ರಾಯಗಜ+ ಕೇ
ಸರಿಯದ್+ಆವೆಡೆ +ಕಂದ +ಬಾಯೆನುತ್+ಅಪ್ಪಿದನು +ಬಯಲ
ಹೊರಳಿದನು +ಹುಡಿಯೊಳಗೆ+ ಸಲೆ +ಕಾ
ತರಿಸಿದನು +ಮೋಹಾಂಧಕಾರಕೆ
ಕರಣವನು +ಕೈಸೂರೆಗೊಟ್ಟನು +ನಿಜದೊಳ್+ಎಚ್ಚರದೆ

ಅಚ್ಚರಿ:
(೧) ಮರೆ, ಎಚ್ಚರ – ವಿರುದ್ಧ ಸ್ಥಿತಿಗಳು
(೨) ಅಭಿಮನ್ಯುವನ್ನು ಕರೆದ ಪರಿ – ತರುಣನಾವೆಡೆ ರಾಯಗಜ ಕೇಸರಿಯದಾವೆಡೆ ಕಂದ ಬಾಯೆನುತಪ್ಪಿದನು ಬಯಲ

ಪದ್ಯ ೫೦: ಅಭಿಮನ್ಯುವಿನ ಕತ್ತಿಯನ್ನು ಯಾರು ತುಂಡು ಮಾಡಿದರು?

ಎಳೆಯ ರವಿ ರಶ್ಮಿಗಳು ರಕ್ತೋ
ತ್ಪಲದೊಳಗೆ ಹೊಳೆವಂತೆ ಹೊನ್ನರೆ
ಬಳೆದ ಹಿಳುಕನೆ ಕಾಣಲಾದುದು ಭಟನ ಕಾಯದಲಿ
ಒಲೆದು ಕೇಸರಿ ಹೊಯ್ವವೋಲ
ವ್ವಳಿಸಿ ಕರ್ಣನ ಹಯ ರಥವನ
ಪ್ಪಳಿಸಿ ಮರಳುವ ಲಾಗಿನಲಿ ಖಂಡೆಯವ ಖಂಡಿಸಿದ (ದ್ರೋಣ ಪರ್ವ, ೬ ಸಂಧಿ, ೫೦ ಪದ್ಯ)

ತಾತ್ಪರ್ಯ:
ಕೆಂದಾವರೆಯಲ್ಲಿ ಉದಯಸೂರ್ಯನ ಕಿರಣಗಳು ಹೊಳೆಯುವಂತೆ ಚಿನ್ನದಿಂದ ಅರ್ಧಲೇಪಿಸಿದ ಬಾಣಗಳೇ ಅಭಿಮನ್ಯುವಿನ ಮೈಯಲ್ಲಿ ಕಾಣಿಸಿದವು. ಅಭಿಮನ್ಯುವು ಸಿಂಹದಂತೆ ಹಾರಿ, ಕೂಗಿ ಕರ್ಣನ ಕುದುರೆ ರಥಗಳನ್ನು ಅಪ್ಪಳಿಸಿ ಹಿಂದಿರುವುಗಾವ ಅಭಿಮನ್ಯುವಿನ ಖಡ್ಗವನ್ನು ಕರ್ಣನು ತುಂಡು ಮಾಡಿದನು.

ಅರ್ಥ:
ಎಳೆಯ: ಚಿಕ್ಕ; ರವಿ: ಸೂರ್ಯ; ರಶ್ಮಿ: ಕಿರಣ; ರಕ್ತ: ನೆತ್ತರು; ಉತ್ಪಲ: ಕನ್ನೈದಿಲೆ; ಹೊಳೆ: ಪ್ರಕಾಶ; ಹೊನ್ನ: ಚಿನ್ನ; ಅರೆ: ಅರ್ಧ; ಬಳಿ: ಲೇಪನ; ಹಿಳುಕು: ಬಾಣದ ಗರಿ; ಕಾಣು: ತೋರು; ಭಟ: ಸೈನಿಕ; ಕಾಯ: ದೇಹ; ಒಲೆ: ತೂಗಾಡು; ಕೇಸರಿ: ಸಿಂಹ; ಹೊಯ್ವು: ಹಾರು; ಅವ್ವಳಿಸು: ಅಪ್ಪಳಿಸು; ಹಯ: ಕುದುರೆ; ರಥ: ಬಂಡಿ; ಅಪ್ಪಳಿಸು: ತಟ್ಟು, ತಾಗು; ಮರಳು: ಹಿಂದಿರುಗು; ಲಾಗು: ನೆಗೆಯುವಿಕೆ; ಖಂಡೆಯ: ಕತ್ತಿ; ಖಂಡ: ತುಂಡು;

ಪದವಿಂಗಡಣೆ:
ಎಳೆಯ +ರವಿ +ರಶ್ಮಿಗಳು +ರಕ್ತ
ಉತ್ಪಲದೊಳಗೆ +ಹೊಳೆವಂತೆ +ಹೊನ್ನ್+ಅರೆ
ಬಳೆದ +ಹಿಳುಕನೆ+ ಕಾಣಲಾದುದು +ಭಟನ +ಕಾಯದಲಿ
ಒಲೆದು +ಕೇಸರಿ +ಹೊಯ್ವವೋಲ್
ಅವ್ವಳಿಸಿ +ಕರ್ಣನ +ಹಯ +ರಥವನ್
ಅಪ್ಪಳಿಸಿ +ಮರಳುವ +ಲಾಗಿನಲಿ +ಖಂಡೆಯವ +ಖಂಡಿಸಿದ

ಅಚ್ಚರಿ:
(೧) ಖ ಕಾರದ ಜೋಡಿ ಪದ – ಖಂಡೆಯವ ಖಂಡಿಸಿದ
(೨) ಉಪಮಾನದ ಪ್ರಯೋಗ – ಎಳೆಯ ರವಿ ರಶ್ಮಿಗಳು ರಕ್ತೋತ್ಪಲದೊಳಗೆ ಹೊಳೆವಂತೆ
(೩) ಅವ್ವಳಿಸಿ, ಅಪ್ಪಳಿಸಿ – ಪ್ರಾಸ ಪದಗಳು

ಪದ್ಯ ೭: ಪಾಂಡವರ ಸೈನ್ಯದ ಸ್ಥಿತಿಯನ್ನು ಧರ್ಮಜನು ಹೇಗೆ ವರ್ಣಿಸಿದನು?

ನೆರೆವಣೆಗೆಗುಂದಿತ್ತು ಬಲ ಕೈ
ಮರೆದರದಟರು ಬಿರುದ ಭಟರಿಗೆ
ಬೆರಗು ಬಲಿದುದು ಹೂಣಿಗರ ಹೋರಟೆಗಳಳುಕಿದವು
ಸೆರೆ ಸುಗಿದ ಹುಲಿಯಂತೆ ಬರಿಕೈ
ಮುರಿದ ಮದಗಜದಂತೆ ಚಿತ್ರದ
ಲುರುವ ಕೇಸರಿಯಂತೆ ಮೆರೆದಿದೆ ನಮ್ಮ ಬಲವೆಂದ (ಭೀಷ್ಮ ಪರ್ವ, ೭ ಸಂಧಿ, ೭ ಪದ್ಯ)

ತಾತ್ಪರ್ಯ:
ನಮ್ಮ ಸೈನ್ಯ ನಿತ್ರಾಣಗೊಂಡಿದೆ, ವೀರರ ಬಾಹುಬಲ ಉಡುಗಿದೆ, ಶೂರಯೋಧರು ಸೋಲುಂಡು ಬೆರಗಾಗಿದ್ದಾರೆ, ನುಗ್ಗಿ ಕಾದಿ ಹೋರಾಟ ಮಾಡುವ ಧೀರರು ಅಳುಕಿದ್ದಾರೆ, ಹೆದರಿ ಹಿಮ್ಮೆಟ್ಟಿದ ಹುಲಿಯಂತೆ ಸೊಂಡಿಲು ಮುರಿದ ಆನೆಯಂತೆ ಚಿತ್ರದ ಸಿಂಹದಂತೆ ನಮ್ಮ ಸೈನ್ಯದ ಪಾಡಾಗಿದೆ ಎಂದು ಧರ್ಮಜನು ಕೃಷ್ಣನಿಗೆ ಹೇಳಿದನು.

ಅರ್ಥ:
ನೆರೆ: ಪಕ್ಕ, ಪಾರ್ಶ್ವ, ಜೊತೆಗೂಡು; ಕುಂದು: ನಿತ್ರಾಣ; ಅದಟು: ಪರಾಕ್ರಮ; ಬಿರುದು: ಗೌರವ ಸೂಚಕ ಹೆಸರು; ಭಟ: ಸೈನಿಕ; ಬೆರಗು: ವಿಸ್ಮಯ, ಸೋಜಿಗ; ಬಲಿದು: ಸಮರ್ಥವಾಗಿ; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ; ಹೋರಟೆ: ಕಾಳಗ, ಯುದ್ಧ; ಅಳುಕು: ಹೆದರಿಕೆ; ಸೆರೆ: ಬಂಧನ; ಸುಗಿ: ಭಯ, ಹೆದರಿಕೆ; ಹುಲಿ: ವ್ಯಾಘ್ರ; ಕೈ: ಹಸ್ತ; ಮುರಿ: ಸೀಳು; ಗಜ: ಆನೆ; ಮದ: ಮತ್ತು, ಅಮಲು; ಉರು: ವಿಶೇಷವಾದ; ಕೇಸರಿ: ಸಿಂಹ; ಮೆರೆ: ಹೊಳೆ, ಪ್ರಕಾಶಿಸು; ಬಲ: ಶಕ್ತಿ, ಸೈನ್ಯ;

ಪದವಿಂಗಡಣೆ:
ನೆರೆವಣೆಗೆ+ಕುಂದಿತ್ತು +ಬಲ +ಕೈ
ಮರೆದರ್+ಅದಟರು +ಬಿರುದ+ ಭಟರಿಗೆ
ಬೆರಗು+ ಬಲಿದುದು +ಹೂಣಿಗರ+ ಹೋರಟೆಗಳ್+ಅಳುಕಿದವು
ಸೆರೆ +ಸುಗಿದ +ಹುಲಿಯಂತೆ +ಬರಿ+ಕೈ
ಮುರಿದ +ಮದಗಜದಂತೆ +ಚಿತ್ರದಲ್
ಉರುವ +ಕೇಸರಿಯಂತೆ +ಮೆರೆದಿದೆ +ನಮ್ಮ +ಬಲವೆಂದ

ಅಚ್ಚರಿ:
(೧) ಬ ಕಾರದ ಸಾಲು ಪದ – ಬಿರುದ ಭಟರಿಗೆ ಬೆರಗು ಬಲಿದುದು
(೨) ಉಪಮಾನದ ಪ್ರಯೋಗ – ಸೆರೆ ಸುಗಿದ ಹುಲಿಯಂತೆ ಬರಿಕೈ ಮುರಿದ ಮದಗಜದಂತೆ ಚಿತ್ರದಲುರುವ ಕೇಸರಿಯಂತೆ ಮೆರೆದಿದೆ ನಮ್ಮ ಬಲವೆಂದ

ಪದ್ಯ ೬: ಕರ್ಣನು ದುರ್ಯೋಧನನಿಗೆ ಏನು ಹೇಳಿದ?

ನೆರೆದ ದೊದ್ದೆಯ ನೊರೆಸಬಹುದೇ
ನರಿದು ಜೀಯ ವಿರೋಧಿರಾಯರ
ನೆರವಿ ತಾನೇಗುವುದು ಗಹನವೆ ನಿನ್ನ ವೀರರಿಗೆ
ಕರಿಗಳಿಗೆ ಪ್ರತ್ಯೇಕವಿವೆ ಕೇ
ಸರಿಗಳೆಮ್ಮನು ಕಳುಹು ನಿಮ್ಮಡಿ
ಪರಿಮಿತಕೆ ಬರಲಾವ ಭಾರವಿದೆಂದನಾ ಕರ್ಣ (ಭೀಷ್ಮ ಪರ್ವ, ೧ ಸಂಧಿ, ೬ ಪದ್ಯ)

ತಾತ್ಪರ್ಯ:
ಯುದ್ಧಕ್ಕೆ ಬಂದ ಕ್ಷುಲ್ಲಕರನ್ನು ಒರೆಸಿ ಹಾಕುವುದೇನು ಕಷ್ಟ? ನಿನ್ನ ವೀರರೆದುರಿನಲ್ಲಿ ವಿರೋಧಿ ರಾಜರ ದಲವು ಏನು ಮಾಡೀತು? ಶತ್ರುಗಳೆಂಬ ಆನೆಗಳಿಗೆ ಸಿಂಹಗಳು ಬೇರೆ ಬೇರೆ ಇವೆ, ನಮ್ಮನ್ನು ಕಳಿಸಿಬಿಡು, ಈ ಯುದ್ಧವು ನಿನ್ನವರೆಗೆ ಬರುವ ಸಾಧ್ಯತೆಯಿಲ್ಲ ಇದೇನು ದೊಡ್ಡ ಕೆಲಸ ಎಂದು ಕರ್ಣನು ಹೇಳಿದನು.

ಅರ್ಥ:
ನೆರೆ: ಸಮೀಪ, ಹತ್ತಿರ, ಜೊತೆ; ದೊದೆ: ಗುಂಪು, ಸಮೂಹ; ಒರಸು: ನಾಶಮಾಡು; ಅರಿ: ತಿಳಿ; ಜೀಯ: ಒಡೆಯ; ವಿರೋಧಿ: ಶತ್ರು; ರಾಯ: ರಾಜ; ನೆರವಿ: ಅತಿಶಯತೆ, ಗುಂಪು; ಗಹನ: ದಟ್ಟವಾದ; ವೀರ: ಪರಾಕ್ರಮಿ; ಕರಿ: ಆನೆ; ಪ್ರತ್ಯೇಕ: ಬೇರೆ; ಕೇಸರಿ: ಸಿಂಹ; ಕಳುಹು: ಕಳಿಸು; ನಿಮ್ಮಡಿ: ನಿಮ್ಮ ಪಾದ; ಪರಿಮಿತ: ಸ್ವಲ್ಪ; ಬರಲು: ಆಗಮಿಸು; ಭಾರ:ಹೊರೆ, ತೂಕ;

ಪದವಿಂಗಡಣೆ:
ನೆರೆದ +ದೊದ್ದೆಯನ್ + ಒರೆಸಬಹುದೇನ್
ಅರಿದು +ಜೀಯ +ವಿರೋಧಿ+ರಾಯರ
ನೆರವಿ+ ತಾನೇಗುವುದು +ಗಹನವೆ +ನಿನ್ನ +ವೀರರಿಗೆ
ಕರಿಗಳಿಗೆ +ಪ್ರತ್ಯೇಕವಿವೆ+ ಕೇ
ಸರಿಗಳ್+ ಎಮ್ಮನು +ಕಳುಹು +ನಿಮ್ಮಡಿ
ಪರಿಮಿತಕೆ +ಬರಲಾವ +ಭಾರವಿದೆಂದನಾ +ಕರ್ಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕರಿಗಳಿಗೆ ಪ್ರತ್ಯೇಕವಿವೆ ಕೇಸರಿಗಳೆಮ್ಮನು ಕಳುಹು ನಿಮ್ಮಡಿ ಪರಿಮಿತಕೆ ಬರಲಾವ ಭಾರವಿದೆಂದನಾ ಕರ್ಣ

ಪದ್ಯ ೯೧: ಕೀಚಕನು ಮತ್ತೆ ಹೇಗೆ ಭೀಮನ ಮೇಲೆ ಎರಗಿದನು?

ಅರಿಯ ಮುಷ್ಟಿಯ ಗಾಯದಲಿ ತಲೆ
ಬಿರಿಯೆ ತನು ಡೆಂಡಣಿಸಿ ಕಂಗಳು
ತಿರುಗಿ ಜೋಲಿದು ಮೆಲ್ಲಮೆಲ್ಲನೆಯಸುವ ಪಸರಿಸುತ
ಕೆರಳಿ ಕರಿ ಕೇಸರಿಯ ಹೊಯ್ದರೆ
ತಿರುಗುವಂತಿರೆ ಭೀಮಸೇನನ
ಬರಿಯ ತಿವಿದನು ಬೀಳೆನುತ ಖಳರಾಯ ಹಲುಮೊರೆದ (ವಿರಾಟ ಪರ್ವ, ೩ ಸಂಧಿ, ೯೧ ಪದ್ಯ)

ತಾತ್ಪರ್ಯ:
ಶತ್ರುವಿನ ಮುಷ್ಟಿಯ ಪೆಟ್ಟಿಗೆ ಕೀಚಕನ ತಲೆ ಬಿರಿಯಿತು, ಅವನ ದೇಹ ತರತರನೆ ನಡುಗಿತು, ಕಣ್ಣುಗಳು ತಿರುಗಿ ಅಲ್ಲಾಡುತ್ತಿದ್ದವು, ಆದರೂ ಕಿಚಕನು ನಿಧಾನವಾಗಿ ಶಕ್ತಿಯನ್ನು ತಂದುಕೊಂಡು, ಆನೆಯು ಸಿಂಹವನ್ನು ಹೊಡೆಯಲೆತ್ನಿಸುವ ಪರಿ ಹಲ್ಲುಕಡಿದ್ಯ್ ಬೀಳು ಎಂದು ಕೂಗುತ್ತಾ ಭೀಮನನ್ನು ತಿವಿದನು.

ಅರ್ಥ:
ಅರಿ: ವೈರಿ; ಮುಷ್ಟಿ: ಮುಚ್ಚಿದ ಅಂಗೈ; ಗಾಯ: ಪೆಟ್ಟು; ತಲೆ: ಶಿರ; ಬಿರಿ: ಬಿರುಕು, ಸೀಳು; ತನು: ದೇಹ; ಡೆಂಡಣಿಸು: ಕಂಪಿಸು; ಕಂಗಳು: ನಯನ; ತಿರುಗು: ವೃತ್ತಾಕಾರವಾಗಿ ಚಲಿಸು, ಸುತ್ತು; ಜೋಲು: ಅಲ್ಲಾಡು; ಮೆಲ್ಲನೆ: ನಿಧಾನ; ಅಸು: ಪ್ರಾಣ; ಪಸರಿಸು: ಹರಡು; ಕೆರಳು: ಕೆದರು, ಹರಡು; ಕರಿ: ಆನೆ; ಕೇಸರಿ: ಸಿಂಹ; ಹೊಯ್ದು: ಹೊಡೆ; ತಿರುಗು: ದಿಕ್ಕನ್ನು ಬದಲಾಯಿಸು; ಬರಿ:ಪಕ್ಕ, ಬದಿ; ತಿವಿ: ಚುಚು; ಬೀಳು: ಕೆಳಕ್ಕೆ – ಕೆಡೆ; ಖಳ: ದುಷ್ಟ; ರಾಯ: ರಾಜ; ಹಲುಮೊರೆ: ಹಲ್ಲನ್ನು ಕಡಿದು;

ಪದವಿಂಗಡಣೆ:
ಅರಿಯ +ಮುಷ್ಟಿಯ +ಗಾಯದಲಿ +ತಲೆ
ಬಿರಿಯೆ +ತನು +ಡೆಂಡಣಿಸಿ+ ಕಂಗಳು
ತಿರುಗಿ +ಜೋಲಿದು +ಮೆಲ್ಲಮೆಲ್ಲನೆ+ಅಸುವ +ಪಸರಿಸುತ
ಕೆರಳಿ+ ಕರಿ+ ಕೇಸರಿಯ +ಹೊಯ್ದರೆ
ತಿರುಗುವಂತಿರೆ+ ಭೀಮಸೇನನ
ಬರಿಯ +ತಿವಿದನು +ಬೀಳೆನುತ+ ಖಳರಾಯ +ಹಲುಮೊರೆದ

ಅಚ್ಚರಿ:
(೧) ಅರಿ, ಖಳರಾಯ – ಕೀಚಕನನ್ನು ಕರೆದ ಪರಿ
(೨) ಉಪಮಾನದ ಪ್ರಯೋಗ – ಕೆರಳಿ ಕರಿ ಕೇಸರಿಯ ಹೊಯ್ದರೆ ತಿರುಗುವಂತಿರೆ

ಪದ್ಯ ೧೬: ಬೇಡನು ಭೀಮನಿಗೆ ಏನೆಂದು ಹೇಳಿದನು?

ಇದೆ ಮಹಾಕಾಂತಾರವತಿ ದೂ
ರದಲಿ ವೃಕ ಶಾರ್ದೂಲ ಕೇಸರಿ
ಕದಲಿ ಕಳಭಕ್ರೋಢ ಶಿಖಿಲೂಲಾಯ ಸಾರಂಗ
ಮದದ ರಹಿಯಲಿ ಮಾನಿಸರು ಸೋಂ
ಕಿದರೆ ಸೆಡೆಯವು ಹೊಲನ ಹೊದರಿ
ಕ್ಕಿದವು ದೀಹದ ಹಿಂಡಿನಂತಿದೆ ಜೀಯ ಚಿತ್ತೈಸು (ಅರಣ್ಯ ಪರ್ವ, ೧೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಅತಿ ದೂರದಲ್ಲಿ ಒಂದು ಮಹಾರಣ್ಯವಿದೆ. ಅಲ್ಲಿ ತೋಳ, ಹುಲಿ, ಸಿಂಹ, ಜಿಂಕೆ, ಆನೆಯ ಮರಿಗಳು, ಕಪಿ, ನವಿಲು, ಕಾಡುಕೋಣ, ಸಾರಂಗಗಳು ಮದಿಸಿ ಮನುಷ್ಯರು ಹೋದರೂ ಬೆದರುವುದಿಲ್ಲ ಹೊಲಗಳ ಮೇಲೆ ಬಿದ್ದು ಸಾಕಿದ ಜಿಂಕೆ, ಆಡು ಮೊದಲಾದವುಗಳಂತೆ ಹಾಳುಮಾದುತ್ತಿವೆ, ಜೀಯಾ ಇದನ್ನು ಮನಸ್ಸಿಗೆ ತಂದುಕೋ ಎಂದು ಅವನು ಭೀಮನಿಗೆ ಹೇಳಿದನು.

ಅರ್ಥ:
ಮಹಾ: ದೊಡ್ಡ; ಕಾಂತಾರ: ಅಡವಿ, ಅರಣ್ಯ; ಅತಿ: ಬಹಳ; ದೂರ: ಅಂತರ; ವೃಕ: ತೋಳ; ಶಾರ್ದೂಲ: ಹುಲಿ; ಕೇಸರಿ: ಸಿಂಹ; ಕದಲಿ: ಜಿಂಕೆ; ಕಳಭ: ಆನೆಮರಿ; ಲೂಲಾಯ: ಕೋಣ; ಸಾರಂಗ: ಜಿಂಕೆ; ಕ್ರೋಡ: ಹಂದಿ; ಮದ: ಸೊಕ್ಕು; ರಹಿ: ದಾರಿ, ಮಾರ್ಗ; ಮಾನಿಸ: ಮನುಷ್ಯ; ಸೋಂಕು: ಮುಟ್ಟುವಿಕೆ, ಸ್ಪರ್ಶ; ಸೆಡೆ: ಗರ್ವಿಸು, ಅಹಂಕರಿಸು; ಹೊಲ: ಸ್ಥಳ, ಪ್ರದೇಶ; ಹೊದರು: ತೊಡಕು, ತೊಂದರೆ ; ಇಕ್ಕು: ಇರಿಸು, ಇಡು; ದೀಹ: ಬೇಟೆಗೆ ಉಪಯೋಗಿಸಲು ಪಳಗಿಸಿದ ಪ್ರಾಣಿ, ಸೆಳೆ; ಹಿಂಡು: ಗುಂಪು, ಸಮೂಹ; ಜೀಯ: ಒಡೆಯ; ಚಿತ್ತೈಸು: ಗಮನವಿಟ್ಟು ಕೇಳು;

ಪದವಿಂಗಡಣೆ:
ಇದೆ+ ಮಹಾಕಾಂತಾರವ್+ಅತಿ +ದೂ
ರದಲಿ +ವೃಕ +ಶಾರ್ದೂಲ +ಕೇಸರಿ
ಕದಲಿ+ ಕಳಭ+ಕ್ರೋಢ+ ಶಿಖಿ+ಲೂಲಾಯ +ಸಾರಂಗ
ಮದದ +ರಹಿಯಲಿ +ಮಾನಿಸರು +ಸೋಂ
ಕಿದರೆ +ಸೆಡೆಯವು +ಹೊಲನ +ಹೊದರ್
ಇಕ್ಕಿದವು +ದೀಹದ+ ಹಿಂಡಿನಂತಿದೆ+ ಜೀಯ +ಚಿತ್ತೈಸು

ಅಚ್ಚರಿ:
(೧) ಪ್ರಾಣಿಗಳನ್ನು ಹೆಸರಿಸುವ ಪರಿ – ವೃಕ, ಶಾರ್ದೂಲ, ಕೇಸರಿ, ಕದಲಿ, ಕಳಭ, ಕ್ರೋಢ ಶಿಖಿ, ಲೂಲಾಯ, ಸಾರಂಗ

ಪದ್ಯ ೧೧: ಭೀಮನ ಬೇಟೆಯಾಡುವ ಪರಿ ಹೇಗಿತ್ತು?

ಕೊಡಹಿ ಬಿಸುಟನು ಕೇಸರಿಯ ಕಾ
ಲ್ವಿಡಿದು ಸೀಳಿದ ಕರಿಗಳನು ಬೆಂ
ಬಿಡದೆ ಹಿಡಿದಪ್ಪಳಿಸಿದನು ಶಾರ್ದೂಲ ಹೆಬ್ಬುಲಿಯ
ಅಡಗೆಡಹಿ ಪೆರ್ಮರಿ ವರಾಹನ
ಮಡದಲುರೆ ಘಟ್ಟಿಸಿ ವಿನೋದದಿ
ನಡೆಯೆ ಧರೆ ಕಂಪಿಸಿತು ಬಸವಳಿದುದು ಕಿರಾತಚಯ (ಅರಣ್ಯ ಪರ್ವ, ೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಭೀಮನು ಸಿಂಹವನ್ನು ಕೊಂದು ಬಿಸಾಕಿದನು. ಆನೆಗಳ ಕಾಲು ಹಿಡಿದು ಸೀಳಿದನು, ಬೆನ್ನು ಹತ್ತಿ ಹುಲಿಗಳನ್ನು ಹಿಡಿದಪ್ಪಳಿಸಿದನು. ಕಾಡು ಹಂದಿಯ ಮರಿಗಳನ್ನು ಕೆಡವಿ ಪಾದಗಳಿಂದ ತುಳಿದು ಮುಂದುವರೆದನು. ಅವನ ಜೊತೆ ಬೇಟೆಗೆ ಹೋಗಿದ್ದ ಕಿರಾತಕರು ಆಯಾಸಗೊಂಡರು.

ಅರ್ಥ:
ಕೊಡಹಿ: ಸಾಯಿಸಿ; ಬಿಸುಟು: ಎಸೆ, ಹೊರಹಾಕು; ಕೇಸರಿ: ಸಿಂಹ; ಕಾಲು: ಪಾದ; ಹಿಡಿದು: ಬಂಧಿಸು; ಸೀಳು: ಚೂರು, ತುಂಡು; ಕರಿ: ಆನೆ; ಬೆಂಬಿಡು:ಹಿಂಬಾಲಿಸದಿರು; ಹಿಡಿದು: ಗ್ರಹಿಸು, ಬಂಧಿಸು; ಅಪ್ಪಳಿಸು: ತಟ್ಟು, ತಾಗು; ಶಾರ್ದೂಲ: ಹುಲಿ; ಹೆಬ್ಬುಲಿ: ದೊಡ್ಡದಾದ ವ್ಯಾಘ್ರ; ಅಡ: ಅಡ್ಡ, ಮಧ್ಯ; ಕೆಡಹು: ಬೀಳಿಸು; ಮರಿ: ಚಿಕ್ಕ; ವರಾಹ: ಹಂದಿ; ಮಡ: ಹಿಮ್ಮಡಿ; ಉರೆ: ಅತಿಶಯವಾಗಿ; ಘಟ್ಟಿಸು: ಹೊಡೆ, ಅಪ್ಪಳಿಸು; ವಿನೋದ: ಸಂತಸ; ನಡೆ: ಚಲಿಸು; ಧರೆ: ಭೂಮಿ; ಕಂಪಿಸು: ಅಲ್ಲಾಡು; ಬಸವಳಿ:ಆಯಾಸ; ಕಿರಾತ: ಬೇಡ; ಚಯ: ಗುಂಪು;

ಪದವಿಂಗಡಣೆ:
ಕೊಡಹಿ+ ಬಿಸುಟನು +ಕೇಸರಿಯ +ಕಾಲ್
ಹಿಡಿದು +ಸೀಳಿದ +ಕರಿಗಳನು +ಬೆಂ
ಬಿಡದೆ +ಹಿಡಿದ್+ಅಪ್ಪಳಿಸಿದನು +ಶಾರ್ದೂಲ +ಹೆಬ್ಬುಲಿಯ
ಅಡ+ಕೆಡಹಿ +ಪೆರ್ಮರಿ +ವರಾಹನ
ಮಡದಲ್+ಉರೆ +ಘಟ್ಟಿಸಿ +ವಿನೋದದಿ
ನಡೆಯೆ +ಧರೆ +ಕಂಪಿಸಿತು +ಬಸವಳಿದುದು +ಕಿರಾತಚಯ

ಅಚ್ಚರಿ:
(೧) ಭೀಮನ ಬೇಟೆಯ ಪರಿ – ಕೊಡಹಿ ಬಿಸುಟನು ಕೇಸರಿಯ, ಕಾಲ್ವಿಡಿದು ಸೀಳಿದ ಕರಿಗಳನು, ಬೆಂಬಿಡದೆ ಹಿಡಿದಪ್ಪಳಿಸಿದನು ಶಾರ್ದೂಲ ಹೆಬ್ಬುಲಿಯ, ವಿನೋದದಿ ನಡೆಯೆ ಧರೆ ಕಂಪಿಸಿತು

ಪದ್ಯ ೫೧: ಅರ್ಜುನನು ಹೇಗೆ ಕರ್ಣನ ಎದುರು ನಿಂತನು?

ಅರಸ ಕೇಳೈ ಸಿಡಿಲಗರ್ಜನೆ
ಗುರವಣಿಪ ಕೇಸರಿಯವೊಲು ಕೃಪ
ಗುರುಸುತರ ಬಿಸುಟಿತ್ತ ಹಾಯ್ದನು ಹಗೆಯ ಸಮ್ಮುಖಕೆ
ತಿರುಪು ಸದರವು ನಿನಗೆ ಗತಿಕಾ
ಹುರ ಕಣಾವಳಿ ಕಂಠಗತ ಬಾ
ಹಿರನು ನೀನೆಲೆ ಕರ್ಣ ಫಡ ಹೋಗೆನುತ ತೆಗೆದೆಚ್ಚ (ಕರ್ಣ ಪರ್ವ, ೨೪ ಸಂಧಿ, ೫೧ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಯಾವ ರೀತಿ ಸಿಡಿಲ ಗರ್ಜನೆಗೆ ಪ್ರತಿಯಾಗಿ ಸಿಂಹವು ಕೂಗುವುದೋ ಆ ರೀತಿ ಅರ್ಜುನನು ಕೃಪ ಅಶ್ವತ್ಥಾಮರನ್ನು ಬಿಟ್ಟು ಕರ್ಣನ ಸಮ್ಮುಖಕ್ಕೆ ಬಂದನು. ನಾನು ತಿರುಗಿ ಬಂದುದು ಸದರವೆಂದು ತಿಳಿಯದಿರು, ಕೋಪದಿಂದ ಬರುವ ಬಾಣಗಳು ನಿನ್ನ ಕಂಠಕ್ಕೆರಗುತ್ತವೆ, ಛಿ ಕರ್ಣ ನೀನು ಹೊರಗಿನವನೆಂದು ಅರ್ಜುನನು ಬಾಣಗಳನ್ನು ಬಿಟ್ಟನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಸಿಡಿಲು: ಚಿಮ್ಮು, ಸಿಡಿ; ಗರ್ಜನೆ: ಆರ್ಭಟ; ಉರವಣಿ:ಆಧಿಕ್ಯ, ಅಬ್ಬರ; ಕೇಸರಿ: ಸಿಂಹ; ಬಿಸುಟು: ಬಿಟ್ಟು; ಹಾಯ್ದು: ಚಿಮ್ಮು; ಹಗೆ: ವೈರಿ; ಸಮ್ಮುಖ: ಎದುರು; ತಿರುಪು: ಸುತ್ತುವುದು, ತಿರುಗಾಟ; ಸದರ: ಸಲಿಗೆ, ಸಸಾರ; ಗತಿ: ಸ್ಥಿತಿ; ಕಾಹುರ: ಆವೇಶ, ಸೊಕ್ಕು, ಕೋಪ; ಕಣೆ: ಬಾಣ; ಆವಳಿ: ಗುಂಪು, ಸಾಲು; ಕಂಠ: ಕೊರಳು; ಬಾಹಿರ: ಹೊರಗಿನವ; ಫಡ; ತಿರಸ್ಕಾರದ ಮಾತು; ಹೋಗು: ತೊಲಗು; ತೆಗೆ: ಹೊರಗೆ ತರು; ಎಚ್ಚ: ಬಾಣಬಿಡು;

ಪದವಿಂಗಡಣೆ:
ಅರಸ +ಕೇಳೈ +ಸಿಡಿಲ+ಗರ್ಜನೆಗ್
ಉರವಣಿಪ +ಕೇಸರಿಯವೊಲು +ಕೃಪ
ಗುರುಸುತರ+ ಬಿಸುಟ್+ಇತ್ತ +ಹಾಯ್ದನು +ಹಗೆಯ +ಸಮ್ಮುಖಕೆ
ತಿರುಪು +ಸದರವು+ ನಿನಗೆ+ ಗತಿ+ಕಾ
ಹುರ+ ಕಣಾವಳಿ+ ಕಂಠಗತ+ ಬಾ
ಹಿರನು +ನೀನ್+ಎಲೆ +ಕರ್ಣ +ಫಡ+ ಹೋಗೆನುತ +ತೆಗೆದೆಚ್ಚ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಾಹುರ ಕಣಾವಳಿ ಕಂಠಗತ
(೨) ಉಪಮಾನದ ಪ್ರಯೋಗ – ಸಿಡಿಲಗರ್ಜನೆಗುರವಣಿಪ ಕೇಸರಿಯವೊಲು