ಪದ್ಯ ೫೧: ಅರ್ಜುನನು ಹೇಗೆ ಕರ್ಣನ ಎದುರು ನಿಂತನು?

ಅರಸ ಕೇಳೈ ಸಿಡಿಲಗರ್ಜನೆ
ಗುರವಣಿಪ ಕೇಸರಿಯವೊಲು ಕೃಪ
ಗುರುಸುತರ ಬಿಸುಟಿತ್ತ ಹಾಯ್ದನು ಹಗೆಯ ಸಮ್ಮುಖಕೆ
ತಿರುಪು ಸದರವು ನಿನಗೆ ಗತಿಕಾ
ಹುರ ಕಣಾವಳಿ ಕಂಠಗತ ಬಾ
ಹಿರನು ನೀನೆಲೆ ಕರ್ಣ ಫಡ ಹೋಗೆನುತ ತೆಗೆದೆಚ್ಚ (ಕರ್ಣ ಪರ್ವ, ೨೪ ಸಂಧಿ, ೫೧ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಯಾವ ರೀತಿ ಸಿಡಿಲ ಗರ್ಜನೆಗೆ ಪ್ರತಿಯಾಗಿ ಸಿಂಹವು ಕೂಗುವುದೋ ಆ ರೀತಿ ಅರ್ಜುನನು ಕೃಪ ಅಶ್ವತ್ಥಾಮರನ್ನು ಬಿಟ್ಟು ಕರ್ಣನ ಸಮ್ಮುಖಕ್ಕೆ ಬಂದನು. ನಾನು ತಿರುಗಿ ಬಂದುದು ಸದರವೆಂದು ತಿಳಿಯದಿರು, ಕೋಪದಿಂದ ಬರುವ ಬಾಣಗಳು ನಿನ್ನ ಕಂಠಕ್ಕೆರಗುತ್ತವೆ, ಛಿ ಕರ್ಣ ನೀನು ಹೊರಗಿನವನೆಂದು ಅರ್ಜುನನು ಬಾಣಗಳನ್ನು ಬಿಟ್ಟನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಸಿಡಿಲು: ಚಿಮ್ಮು, ಸಿಡಿ; ಗರ್ಜನೆ: ಆರ್ಭಟ; ಉರವಣಿ:ಆಧಿಕ್ಯ, ಅಬ್ಬರ; ಕೇಸರಿ: ಸಿಂಹ; ಬಿಸುಟು: ಬಿಟ್ಟು; ಹಾಯ್ದು: ಚಿಮ್ಮು; ಹಗೆ: ವೈರಿ; ಸಮ್ಮುಖ: ಎದುರು; ತಿರುಪು: ಸುತ್ತುವುದು, ತಿರುಗಾಟ; ಸದರ: ಸಲಿಗೆ, ಸಸಾರ; ಗತಿ: ಸ್ಥಿತಿ; ಕಾಹುರ: ಆವೇಶ, ಸೊಕ್ಕು, ಕೋಪ; ಕಣೆ: ಬಾಣ; ಆವಳಿ: ಗುಂಪು, ಸಾಲು; ಕಂಠ: ಕೊರಳು; ಬಾಹಿರ: ಹೊರಗಿನವ; ಫಡ; ತಿರಸ್ಕಾರದ ಮಾತು; ಹೋಗು: ತೊಲಗು; ತೆಗೆ: ಹೊರಗೆ ತರು; ಎಚ್ಚ: ಬಾಣಬಿಡು;

ಪದವಿಂಗಡಣೆ:
ಅರಸ +ಕೇಳೈ +ಸಿಡಿಲ+ಗರ್ಜನೆಗ್
ಉರವಣಿಪ +ಕೇಸರಿಯವೊಲು +ಕೃಪ
ಗುರುಸುತರ+ ಬಿಸುಟ್+ಇತ್ತ +ಹಾಯ್ದನು +ಹಗೆಯ +ಸಮ್ಮುಖಕೆ
ತಿರುಪು +ಸದರವು+ ನಿನಗೆ+ ಗತಿ+ಕಾ
ಹುರ+ ಕಣಾವಳಿ+ ಕಂಠಗತ+ ಬಾ
ಹಿರನು +ನೀನ್+ಎಲೆ +ಕರ್ಣ +ಫಡ+ ಹೋಗೆನುತ +ತೆಗೆದೆಚ್ಚ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಾಹುರ ಕಣಾವಳಿ ಕಂಠಗತ
(೨) ಉಪಮಾನದ ಪ್ರಯೋಗ – ಸಿಡಿಲಗರ್ಜನೆಗುರವಣಿಪ ಕೇಸರಿಯವೊಲು