ಪದ್ಯ ೬೯: ಶಲ್ಯನ ನಂತರ ಯಾರು ಯುದ್ಧಕ್ಕೆ ಬಂದರು?

ಅಹಹ ಸೇನಾಪತಿಯ ಮಗ್ಗುಲು
ಮಹಿಗೆ ಬಿದ್ದುದು ಬೆಚ್ಚಿತೀಚೆಯ
ಬಹಳಬಲರಿನ್ನಾರು ಕುರುಸೇನಾಧುರಂಧರರು
ಮಿಹಿರಸುತ ಗುರು ಭೀಷ್ಮರಲಿ ಸ
ನ್ನಿಹಿತನಾದನು ಶಲ್ಯನೆನೆ ಕಿಂ
ಗಹನವೀ ರಣವೆನುತ ಶಲ್ಯಾನುಜನು ಮಾರಾಂತ (ಶಲ್ಯ ಪರ್ವ, ೩ ಸಂಧಿ, ೬೯ ಪದ್ಯ)

ತಾತ್ಪರ್ಯ:
ಅಯ್ಯೋ ಸೇನಾಪತಿಯು ಭೂಮಿಗೆ ಮಗ್ಗುಲಾಗಿ ಬಿದ್ದುಬಿಟ್ಟನು. ಅವನ ನಂತರ ಕುರುಸೇನೆಯಲ್ಲಿ ಯುದ್ಧ ಧುರಂಧರರು ಇನ್ನಾರಿದ್ದಾರೆ. ಕರ್ಣ, ದ್ರೋಣ, ಭೀಷ್ಮರ ಜೊತೆ ಶಲ್ಯನು ಸೇರಿದನು ಎನ್ನಲು, ಇದೇನು ಮಹಾ ಎಂದು ಶಲ್ಯನ ತಮ್ಮನು ಯುದ್ಧಕ್ಕೆ ಬಂದನು.

ಅರ್ಥ:
ಸೇನಾಪತಿ: ದಳಪತಿ; ಮಗ್ಗುಲು: ಪಕ್ಕ, ಪಾರ್ಶ್ವ; ಮಹಿ: ಭೂಮಿ; ಬಿದ್ದು: ಬೀಳು; ಬೆಚ್ಚು: ಹೆದರು; ಬಹಳ: ತುಂಬ; ಬಲ: ಸೈನ್ಯ; ಧುರಂಧರ: ಪರಾಕ್ರಮಿ; ಮಿಹಿರ: ಸೂರ್ಯ; ಸುತ: ಮಗ; ಗುರು: ಆಚಾರ್ಯ; ಸನ್ನಿಹಿತ: ಹತ್ತಿರ; ಕಿಂಗಹನ: ಏನು ಮಹಾಕಷ್ಟ; ರಣ: ಯುದ್ಧ; ಅನುಜ: ತಮ್ಮ; ಮಾರಾಂತು: ಯುದ್ಧಕ್ಕೆ ನಿಂತು;

ಪದವಿಂಗಡಣೆ:
ಅಹಹ +ಸೇನಾಪತಿಯ +ಮಗ್ಗುಲು
ಮಹಿಗೆ +ಬಿದ್ದುದು +ಬೆಚ್ಚಿತ್+ಈಚೆಯ
ಬಹಳಬಲರ್+ಇನ್ನಾರು +ಕುರುಸೇನಾ+ಧುರಂಧರರು
ಮಿಹಿರಸುತ +ಗುರು +ಭೀಷ್ಮರಲಿ +ಸ
ನ್ನಿಹಿತನಾದನು +ಶಲ್ಯನ್+ಎನೆ +ಕಿಂ
ಗಹನವೀ +ರಣವೆನುತ +ಶಲ್ಯ+ಅನುಜನು +ಮಾರಾಂತ

ಅಚ್ಚರಿ:
(೧) ಅತೀವ ಆತ್ಮವಿಶ್ವಾಸ – ಕಿಂಗಹನವೀ ರಣವೆನುತ ಶಲ್ಯಾನುಜನು ಮಾರಾಂತ
(೨) ಶಲ್ಯನು ಸತ್ತನು ಎಂದು ಹೇಳುವ ಪರಿ – ಮಿಹಿರಸುತ ಗುರು ಭೀಷ್ಮರಲಿ ಸನ್ನಿಹಿತನಾದನು ಶಲ್ಯನ್

ಪದ್ಯ ೩೨: ಧರ್ಮಜನು ಶಲ್ಯನಿಗೆ ಏನು ಹೇಳಿದ?

ಮಾವನವರೇ ನಿಮ್ಮ ಹಿಂಸೆಗೆ
ನಾವು ಕಡುಗೆವು ಕ್ಷತ್ರಜಾತಿಯ
ಜೀವನವಲೇ ಕಷ್ಟವಿದು ಕಾರ್ಪಣ್ಯತರವಾಗಿ
ನೀವು ಸೈರಿಸಬೇಕು ನಮ್ಮ ಶ
ರಾವಳಿಯನೆನುತವನಿಪತಿ ಬಾ
ಣಾವಳಿಯ ಕೆದರಿದನು ಸೇನಾಪತಿಯ ಸಮ್ಮುಖಕೆ (ಶಲ್ಯ ಪರ್ವ, ೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ಮಾವನವರೇ, ನಿಮ್ಮ ಹಿಂಸೆಗೆ ನಾವು ಶಕ್ತಿಗುಂದುವುದಿಲ್ಲ. ಕ್ಷತ್ರಿಯರ ಜೀವನವು ಕಷ್ಟತರ, ಕಾರ್ಪಣ್ಯಭರಿತವಾದುದು. ಆದ್ಧರಿಂದ ನಮ್ಮ ಬಾಣಗಳನ್ನು ನೀವು ಸಹಿಸಿಕೊಳ್ಳಬೇಕು ಎಂದು ಯುಧಿಷ್ಠಿರನು ಬಾಣಗಳನ್ನು ಬಿಟ್ಟನು.

ಅರ್ಥ:
ಮಾವ: ತಾಯಿಯ ಸಹೋದರ; ಹಿಂಸೆ: ನೋವು; ಕಡುಗು: ಶಕ್ತಿಗುಂದು; ಕ್ಷತ್ರ: ಕ್ಷತ್ರಿಯ; ಜಾತಿ: ವಂಶ; ಕಷ್ಟ: ನೋವು; ಕಾರ್ಪಣ್ಯ: ಬಡತನ, ದೈನ್ಯ; ಸೈರಿಸು: ತಾಳು, ಸಹಿಸು; ಶರಾವಳಿ: ಬಾಣಗಳ ಗುಂಪು; ಅವನಿಪತಿ: ರಾಜ; ಬಾಣಾ: ಅಂಬು; ಆವಳಿ: ಸಾಲು; ಕೆದರು: ಹರಡು; ಸಮ್ಮುಖ: ಎದುರು;

ಪದವಿಂಗಡಣೆ:
ಮಾವನವರೇ +ನಿಮ್ಮ +ಹಿಂಸೆಗೆ
ನಾವು+ ಕಡುಗೆವು +ಕ್ಷತ್ರ+ಜಾತಿಯ
ಜೀವನವಲೇ +ಕಷ್ಟವಿದು +ಕಾರ್ಪಣ್ಯ+ತರವಾಗಿ
ನೀವು +ಸೈರಿಸಬೇಕು +ನಮ್ಮ +ಶ
ರಾವಳಿಯನ್+ಎನುತ್+ಅವನಿಪತಿ +ಬಾ
ಣಾವಳಿಯ +ಕೆದರಿದನು +ಸೇನಾಪತಿಯ +ಸಮ್ಮುಖಕೆ

ಅಚ್ಚರಿ:
(೧) ಶರಾವಳಿ, ಬಾಣಾವಳಿ – ಸಮಾನಾರ್ಥಕ ಪದ, ಪ್ರಾಸ ಪದ
(೨) ಕ್ಷತ್ರಿಯರ ಜೀವನ – ಕ್ಷತ್ರಜಾತಿಯ ಜೀವನವಲೇ ಕಷ್ಟವಿದು ಕಾರ್ಪಣ್ಯತರವಾಗಿ

ಪದ್ಯ ೧೭: ದ್ರೋಣನು ಸಾರಥಿಗೆ ಯಾರ ಬಗ್ಗೆ ಹೇಳಿದನು?

ಈತ ಸೇನಾಪತಿ ಕಣಾ ತಾ
ನೀತನೈವರ ಮೈದುನನು ವಿ
ಖ್ಯಾತನಿವ ಪಾಂಚಾಲಕುಲದಲಿ ದ್ರುಪದತನುಜನಿವ
ಈತ ಸಾತ್ಯಕಿ ಯಾದವರ ಕುಲ
ದಾತನೀತ ಶಿಖಂಡಿ ಮೊದಲಾ
ದೀತಗಳು ನೆರೆ ಖರೆಯರೆಂದನು ನಗುತ ಸಾರಥಿಗೆ (ದ್ರೋಣ ಪರ್ವ, ೧೮ ಸಂಧಿ, ೧೭ ಪದ್ಯ)

ತಾತ್ಪರ್ಯ:
ಹೀಗೆಂದು ದ್ರೋಣನು ಸಾರಥಿಗೆ ಕೈಗೆ ಚಪ್ಪಾಳೆಯಿಟ್ಟು, ನಕ್ಕು, ಇವನು ಪಾಂಡವ ಸೇನಾಪತಿ, ಇವನು ಪಾಂಡವರ ಮೈದುನ, ದ್ರುಪದನ ಮಗ, ಪಾಂಚಾಲರಲ್ಲಿ ಪ್ರಖ್ಯಾತ, ಇವನು ಯಾದವರ ಕುಲದ ಸಾತ್ಯಕಿ, ಇವನು ಶಿಖಂಡಿ ಇವರೆಲ್ಲಾ ಮಹಾವೀರರು, ಆಡಿದ ಮಾತನ್ನು ನಡೆಸುವವರ್ ಎಂದು ಸಾರಥಿಗೆ ಹೇಳಿದನು.

ಅರ್ಥ:
ಸೇನಾಪತಿ: ಸೇನೆಯ ಮುಖ್ಯಸ್ಥ; ಮೈದುನ: ಗಂಡ ಅಥವ ಹೆಂಡತಿಯ ತಮ್ಮ; ವಿಖ್ಯಾತ: ಪ್ರಸಿದ್ಧ; ಕುಲ: ವಂಶ; ತನುಜ: ಮಗ; ಖರೆ: ನಿಜ; ನಗು: ಸಂತಸ; ಸಾರಥಿ: ಸೂತ; ನೆರೆ: ಗುಂಪು;

ಪದವಿಂಗಡಣೆ:
ಈತ+ ಸೇನಾಪತಿ +ಕಣಾ +ತಾನ್
ಈತನ್+ಐವರ +ಮೈದುನನು +ವಿ
ಖ್ಯಾತನ್+ಇವ +ಪಾಂಚಾಲ+ಕುಲದಲಿ +ದ್ರುಪದ+ತನುಜನಿವ
ಈತ +ಸಾತ್ಯಕಿ +ಯಾದವರ +ಕುಲ
ದಾತನ್+ಈತ +ಶಿಖಂಡಿ +ಮೊದಲಾ
ದೀತಗಳು +ನೆರೆ +ಖರೆಯರೆಂದನು +ನಗುತ +ಸಾರಥಿಗೆ

ಅಚ್ಚರಿ:
(೧) ಧೃಷ್ಟದ್ಯುಮ್ನನನ್ನು ಕರೆದ ಪರಿ – ಈತನೈವರ ಮೈದುನನು ವಿಖ್ಯಾತನಿವ ಪಾಂಚಾಲಕುಲದಲಿ ದ್ರುಪದತನುಜನಿವ

ಪದ್ಯ ೩೪: ಕರ್ಣನು ಯಾರನ್ನು ಸೇನಾಪತಿಯನ್ನಾಗಿ ಮಾಡಲು ಸೂಚಿಸಿದನು?

ಇನ್ನು ಸೇನಾಪತಿಯದಾರೈ
ನಿನ್ನ ಮತವೇನುದಯವಾಗದ
ಮುನ್ನ ಬವರವ ಹಿಡಿಯಬೇಹುದು ವೈರಿ ರಾಯರಲಿ
ಎನ್ನು ನಿನ್ನಭಿಮತವನೆನೆ ಸಂ
ಪನ್ನ ಭುಜಬಲ ದ್ರೋಣನಿರಲಾ
ರಿನ್ನು ಸೇನಾಪತಿಗಳೆಂದನು ಭೂಪತಿಗೆ ಕರ್ಣ (ದ್ರೋಣ ಪರ್ವ, ೧ ಸಂಧಿ, ೩೪ ಪದ್ಯ
)

ತಾತ್ಪರ್ಯ:
ಎಲೈ ಕರ್ಣ, ಸೂರ್ಯೋದಯವಾಗುವ ಮೊದಲೇ ಯುದ್ಧವನ್ನಾರಂಭಿಸಬೇಕು, ಅದಕ್ಕೆ ಮೊದಲು ಸೇನಾಧಿಪತಿ ಯಾರೆಂದು ನಿರ್ಧರಿಸಬೇಕು, ನಿನ್ನ ಅಭಿಪ್ರಾಯವೇನು ಎಂದು ಕೇಳಲು, ಮಹಾಭುಜಬಲಶಾಲಿಯಾದ ದ್ರೋಣನಿರಲು ಇನ್ನಾರು ಸೇನಾಧಿಪತಿಗಳಾಗಲು ಸಾಧ್ಯ ಎಂದು ಹೇಳಿದನು.

ಅರ್ಥ:
ಸೇನಾಪತಿ: ಸೇನೆಯ ಒಡೆಯ; ಮತ: ವಿಚಾರ; ಉದಯ: ಹುಟ್ತು; ಮುನ್ನ: ಮೊದಲು; ಬವರ: ಯುದ್ಧ; ಹಿಡಿ: ಗ್ರಹಿಸು; ವೈರಿ: ಹಗೆ; ರಾಯ: ರಾಜ; ಅಭಿಮತ: ವಿಚಾರ; ಸಂಪನ್ನ: ಸಜ್ಜನ; ಭುಜಬಲ: ಪರಾಕ್ರಮಿ; ಭೂಪತಿ: ರಾಜ;

ಪದವಿಂಗಡಣೆ:
ಇನ್ನು +ಸೇನಾಪತಿಯದ್+ಆರೈ
ನಿನ್ನ+ ಮತವೇನ್+ಉದಯವಾಗದ
ಮುನ್ನ +ಬವರವ +ಹಿಡಿಯಬೇಹುದು +ವೈರಿ +ರಾಯರಲಿ
ಎನ್ನು +ನಿನ್ನ್+ಅಭಿಮತವನ್+ಎನೆ +ಸಂ
ಪನ್ನ +ಭುಜಬಲ+ ದ್ರೋಣನಿರಲ್+ಆ
ರಿನ್ನು +ಸೇನಾಪತಿಗಳ್+ಎಂದನು +ಭೂಪತಿಗೆ +ಕರ್ಣ

ಅಚ್ಚರಿ:
(೧) ಭೂಪತಿ, ರಾಯ – ಸಮಾನಾರ್ಥಕ ಪದ
(೨) ಸೇನಾಪತಿ – ೧, ೬ ಸಾಲಿನ ೨ ಪದ
(೩) ದ್ರೋಣರನ್ನು ಕರೆದ ಪರಿ – ಸಂಪನ್ನ ಭುಜಬಲ ದ್ರೋಣ

ಪದ್ಯ ೨೭: ಭೀಷ್ಮನು ಯಾರ ಎದುರು ರಥವನ್ನು ನಿಲ್ಲಿಸಲು ಹೇಳಿದನು?

ಸಕಲ ದೆಸೆಯಲಿ ಮುರಿದು ಬಹ ನಾ
ಯಕರ ಕಂಡನು ಪಾರ್ಥನಸುರಾಂ
ತಕಗೆ ತೋರಿದನಕಟ ನೋಡಿದಿರೆಮ್ಮವರ ವಿಧಿಯ
ನಕುಲನಿಲ್ಲಾ ಭೀಮನೋ ಸಾ
ತ್ಯಕಿಯೊ ಸೇನಾಪತಿಯೊ ಕಟಕಟ
ವಿಕಳರೋಡಿದರೋಡಲಿದಿರಿಗೆ ರಥವ ಹರಿಸೆಂದ (ಭೀಷ್ಮ ಪರ್ವ, ೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ಎಲ್ಲಾ ದಿಕ್ಕುಗಳಿಂದಲೂ ಓಡಿ ಬರುತ್ತಿದ್ದ ತಮ್ಮ ಸೈನ್ಯವನ್ನು ಅರ್ಜುನನು ನೋಡಿ ಶ್ರೀಕೃಷ್ಣನಿಗೆ ತೋರಿಸೆ, ನಮ್ಮವರ ವಿಧಿಯನ್ನು ನೋಡಿದೆಯಾ? ನಕುಲ, ಭೀಮ, ಸಾತ್ಯಕಿ, ಧೃಷ್ಟದ್ಯುಮ್ನರು ಅಲ್ಲಿಲ್ಲವೇ ಅಥವಾ ಭ್ರಮೆಗೊಂಡು ಓಡಿ ಹೋದರೇ? ಕೃಷ್ಣಾ ಭೀಷ್ಮನೆದುರಿಗೆ ರಥವನ್ನು ನಿಲ್ಲಿಸು ಎಂದು ಹೇಳಿದನು.

ಅರ್ಥ:
ಸಕಲ: ಎಲ್ಲಾ; ದೆಸೆ: ದಿಕ್ಕು; ಮುರಿ: ಸೀಳು; ಬಹ: ಬಹಳ; ನಾಯಕ: ಒಡೆಯ; ಕಂಡು: ನೋಡು; ಅಸುರ: ರಾಕ್ಷಸ; ಅಂತಕ: ಯಮ; ತೋರು: ಗೋಚರಿಸು; ಅಕಟ: ಅಯ್ಯೋ; ನೋಡು: ವೀಕ್ಷಿಸು; ವಿಧಿ: ನಿಯಮ; ಕಟಕಟ: ಅಯ್ಯಯ್ಯೋ; ವಿಕಳ: ಭ್ರಮೆ, ಭ್ರಾಂತಿ; ಓಡು: ಧಾವಿಸು; ಇದಿರು: ಎದುರು; ರಥ: ಬಂಡಿ; ಹರಿಸು: ಚಲಿಸು;

ಪದವಿಂಗಡಣೆ:
ಸಕಲ+ ದೆಸೆಯಲಿ +ಮುರಿದು +ಬಹ +ನಾ
ಯಕರ +ಕಂಡನು +ಪಾರ್ಥನ್+ಅಸುರಾಂ
ತಕಗೆ +ತೋರಿದನ್+ಅಕಟ +ನೋಡಿದಿರ್+ಎಮ್ಮವರ +ವಿಧಿಯ
ನಕುಲನ್+ಇಲ್ಲಾ +ಭೀಮನೋ +ಸಾ
ತ್ಯಕಿಯೊ +ಸೇನಾಪತಿಯೊ +ಕಟಕಟ
ವಿಕಳರ್+ಓಡಿದರ್+ಓಡಲ್+ಇದಿರಿಗೆ +ರಥವ+ ಹರಿಸೆಂದ

ಅಚ್ಚರಿ:
(೧) ಅಕಟ, ಕಟಕಟ – ಪದಗಳ ಬಳಕೆ
(೨) ವಿಕಳರೋಡಿದರೋಡಲಿದಿರಿಗೆ – ಪದದ ಬಳಕೆ

ಪದ್ಯ ೧೧: ಕೌರವಸೇನೆಯು ಹೇಗೆ ಯುದ್ಧ ಸನ್ನದ್ಧವಾಯಿತು?

ವೀರ ಸೇನಾಪತಿಯ ಸನ್ನೆಗೆ
ಭೂರಿಬಲ ಹಬ್ಬಿದುದು ದಿಕ್ಕುಗ
ಳೋರೆ ಹಿಗ್ಗಿದವಮಮ ತಗ್ಗಿದರಹಿಪ ಕೂರುಮರು
ಚಾರು ಚಾಮರ ಸಿಂಧ ಸತ್ತಿಗೆ
ಯೋರಣದ ಕಲ್ಪಾಂತ ಮೇಘದ
ಭಾರಣೆಯನೊಟ್ಟೈಸಿ ಥಟ್ಟಯಿಸಿತ್ತು ಕುರುಸೇನೆ (ಭೀಷ್ಮ ಪರ್ವ, ೮ ಸಂಧಿ, ೧೧ ಪದ್ಯ)

ತಾತ್ಪರ್ಯ:
ಭೀಷ್ಮನು ಸನ್ನೆ ಮಾಡಿದೊಡನೆ ಸೈನ್ಯವು ದಿಕ್ಕು ದಿಕ್ಕಿಗೆ ಚದುರಿ ನಿಲ್ಲಲು ದಿಕ್ಕಿನ ಮೂಲೆಗಳೇ ಹಿಗ್ಗಿದವು. ಆದಿಶೇಷ ಕೂರ್ಮರು ಕುಸಿದರು. ಚಾಮರ, ಧ್ವಜ, ಛತ್ರಗಳು, ಕಲ್ಪಾಂತ ಮೇಘದಂತೆ ಕಾಣುತ್ತಿದ್ದವು. ಕೌರವ ಸೇನೆಯು ಯುದ್ಧ ಸನ್ನದ್ಧವಾಯಿತು.

ಅರ್ಥ:
ವೀರ: ಶೂರ, ಪರಾಕ್ರಮ; ಸೇನಾಪತಿ: ಸೈನ್ಯದ ಮುಖ್ಯಸ್ಥ; ಸನ್ನೆ: ಗುರುತು, ಚಿಹ್ನೆ; ಭೂರಿ: ಹೆಚ್ಚು; ಬಲ: ಸೈನ್ಯ; ಹಬ್ಬು: ಹರಡು; ದಿಕ್ಕು: ದಿಶೆ; ಓರೆ: ಡೊಂಕು; ಹಿಗ್ಗು: ಸಂತೋಷ, ಆನಂದ; ತಗ್ಗು: ಕುಗ್ಗು, ಕುಸಿ; ಅಹಿಪ: ಆಧಿಶೇಷ; ಕೂರುಮ: ಕೂರ್ಮ, ಆಮೆ; ಚಾರು: ಸುಂದರ; ಚಾಮರ: ಚಮರ, ಬಾಲದಲ್ಲಿ ಉದ್ದವಾದ ಕೂದಲುಳ್ಳ ಒಂದು ಮೃಗ; ಸಿಂಧ: ಒಂದು ಬಗೆ ಪತಾಕೆ, ಬಾವುಟ; ಸತ್ತಿಗೆ: ಕೊಡೆ, ಛತ್ರಿ; ಓರಣ: ಕ್ರಮ, ಸಾಲು; ಕಲ್ಪಾಂತ: ಪ್ರಳಯ; ಮೇಘ: ಮೋಡ; ಭಾರಣೆ: ಮಹಿಮೆ, ಗೌರವ; ಒಟ್ಟೈಸು: ಒಟ್ಟಾಗಿ ಸೇರಿಸು; ಥಟ್ಟು: ಪಕ್ಕ, ಕಡೆ;

ಪದವಿಂಗಡಣೆ:
ವೀರ +ಸೇನಾಪತಿಯ +ಸನ್ನೆಗೆ
ಭೂರಿಬಲ +ಹಬ್ಬಿದುದು +ದಿಕ್ಕುಗಳ್
ಓರೆ +ಹಿಗ್ಗಿದವ್+ಅಮಮ +ತಗ್ಗಿದರ್+ಅಹಿಪ+ ಕೂರುಮರು
ಚಾರು +ಚಾಮರ +ಸಿಂಧ +ಸತ್ತಿಗೆ
ಓರಣದ +ಕಲ್ಪಾಂತ +ಮೇಘದ
ಭಾರಣೆಯನ್+ಒಟ್ಟೈಸಿ +ಥಟ್ಟಯಿಸಿತ್ತು +ಕುರುಸೇನೆ

ಅಚ್ಚರಿ:
(೧) ಜೋಡಿ ಅಕ್ಷರದ ಬಳಕೆ – ಚಾರು ಚಾಮರ ಸಿಂಧ ಸತ್ತಿಗೆ

ಪದ್ಯ ೮೮: ಸೇನಾಧಿಪತಿಯ ಲಕ್ಷಣಗಳೇನು?

ತುರಗ ಗಜ ಭಟರಳವರಿವ ಸಂ
ಗರ ಮಹೋತ್ಸಾಹಕನ ಜಿತ ಶ್ರಮ
ನರಿ ಕಟಕ ಭೇದಕನ ನಾನಾಯುಧ ವಿಶಾರದನ
ಭರಿತ ಧೈರ್ಯನ ಪತಿಹಿತನ ಸಂ
ಗರ ಸದಾರನನೂ ರ್ಧ್ವರೋಮನ
ನಿರದೆ ಸೇನಾಪತಿಯ ಮಾಡುವುದರಸ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೮೮ ಪದ್ಯ)

ತಾತ್ಪರ್ಯ:
ಸೇನಾಪತಿಯ ಲಕ್ಷಣವನ್ನು ಇಲ್ಲಿ ವಿದುರ ತಿಳಿಸಿದ್ದಾರೆ. ಕುದುರೆ, ಆನೆ, ಯೋಧರ ಶಕ್ತಿ ಮಿತಗಳನ್ನು ಅರಿತವನೂ, ಯುದ್ಧದಲ್ಲಿ ಅತ್ಯುತ್ಸಾಹವುಳ್ಳವನೂ, ಆಯಾಸವನ್ನು ಗೆಲ್ಲಬಲ್ಲವನೂ, ಶತ್ರು ಸೈನ್ಯವನ್ನು ಭೇಧಿಸಬಲ್ಲವನೂ, ನಾನಾ ಆಯುಧಗಳ ಪ್ರಯೋಗದಲ್ಲಿ ಪರಿಣತಿ ಹೊಂದಿರುವವನೂ, ಧೈರ್ಯಶಾಲಿಯೂ, ತನ್ನ ರಾಜನಿಗೆ ಹಿತವನ್ನುಂಟುಮಾಡುವವನೂ, ಯುದ್ಧವನ್ನು ಸದಾ ಜೊತೆಯಲ್ಲಿಟ್ಟು ಕೊಳ್ಳಬಲ್ಲವನೂ, ನಿಮಿರಿನಂತೆ ಕೂದಲುಗಳುಳ್ಳುವವನೂ (ನೇರವಾದ ಕೂದಲು, ಪ್ರೇರಿತನಾದವ) ಸೇನಾಧಿಪತಿಯಾಗಿ ನೇಮಿಸಿಕೊಳ್ಳುವುದು ಒಳೆತೆಂದು ವಿದುರ ಧೃತರಾಷ್ಟ್ರನಿಗೆ ಹೇಳಿದ.

ಅರ್ಥ:
ತುರಗ: ಕುದುರೆ; ಗಜ: ಆನೆ; ಭಟ: ಸೈನ್ಯ; ಅರಿ: ತಿಳಿ; ಸಂಗರ: ಯುದ್ಧ; ಮಹಾ: ದೊಡ್ಡ; ಉತ್ಸಾಹ: ಸಂಭ್ರಮ, ಚೈತನ್ಯ; ಜಿತ:ಗೆಲ್ಲಲ್ಪಟ್ಟ; ಶ್ರಮ: ಆಯಾಸ,ದಣಿವು; ಅರಿ: ತಿಳಿ; ಕಟಕ:ಸೈನ್ಯ, ಗುಂಪು; ಭೇದಕ: ಸೀಳುವ; ನಾನಾ: ಹಲವಾರು; ಆಯುಧ: ಶಸ್ತ್ರ; ವಿಶಾರದ: ಪರಿಣತ; ಭರಿತ: ತುಂಬಿದ; ಧೈರ್ಯ: ಶೌರ್ಯ; ಪತಿಹಿತ: ಸ್ವಾಮಿಹಿತ; ಹಿತ: ಒಳ್ಳೆಯದು, ಪ್ರಿಯಕರವಾದುದು; ಸದಾರ: ಊರ್ಧ್ವ: ಮೇಲ್ಭಾಗ ; ರೋಮ: ಕೂದಲು; ಸೇನಾಪತಿ: ದಂಡನಾಯಕ; ಅರಸ: ರಾಜ;

ಪದವಿಂಗಡಣೆ:
ತುರಗ +ಗಜ +ಭಟರಳವ್+ ಅರಿವ +ಸಂ
ಗರ +ಮಹೋತ್ಸಾಹಕನ + ಜಿತ +ಶ್ರಮನ್
ಅರಿ +ಕಟಕ +ಭೇದಕನ +ನಾನಾ+ಆಯುಧ +ವಿಶಾರದನ
ಭರಿತ +ಧೈರ್ಯನ+ ಪತಿಹಿತನ +ಸಂ
ಗರ +ಸದಾರನನ್ +ಊರ್ಧ್ವ +ರೋಮನ
ನಿರದೆ + ಸೇನಾಪತಿಯ +ಮಾಡುವುದ್+ಅರಸ +ಕೇಳೆಂದ

ಅಚ್ಚರಿ:
(೧) ಸಂಗರ – ೧, ೪ ಸಾಲಿನ ಕೊನೆಯ ಪದ
(೨) ಸೇನಾಧಿಪತಿಯ ೯ ಗುಣಗಳನ್ನು ವರ್ಣಿಸುವ ಪದ್ಯ