ಪದ್ಯ ೩೩: ಬಾಣಗಳು ಎಲ್ಲಿ ನಟ್ಟವು?

ತೋಡಿ ನೆಟ್ಟವು ಸೀಸಕವನೊಡೆ
ದೋಡಿದವು ಕವಚದಲಿ ಕುದುರೆಯ
ಜೋಡು ಹಕ್ಕರಿಕೆಯಲಿ ತಳಿತವು ಹಿಳುಕು ಹರಹಿನಲಿ
ಕೂಡೆ ರಥದಲಿ ಸಿಂಧದಲಿ ಮೈ
ಗೂಡಿ ಗಾಲಿಗಳಲಿ ವರೂಥದ
ಲೀಡಿರಿದವಂಬುಗಳು ಕಲಿಮಾದ್ರೇಶನೆಸುಗೆಯಲಿ (ಶಲ್ಯ ಪರ್ವ, ೨ ಸಂಧಿ, ೩೩ ಪದ್ಯ)

ತಾತ್ಪರ್ಯ:
ಧರ್ಮಜನ ಶಿರಸ್ತ್ರಾನದಲ್ಲಿ ಶಲ್ಯನ ಬಾಣಗಳು ನಟ್ಟವು. ಕವಚವನ್ನು ಛಿದ್ರಮಾಡಿದವು. ರಥದ ಕುದುರೆಗಳ ರಕ್ಷಾಕವಚದಲ್ಲಿ ಹೇರಳವಾಗಿ ನಟ್ಟವು. ರಥದಲ್ಲಿ ಧ್ವಜದಲ್ಲಿ ರಥದ ಗಾಲಿಗಳಲ್ಲಿ ಹೇರಳವಾಗಿ ನಟ್ಟವು.

ಅರ್ಥ:
ತೋಡು: ಅಗೆ, ಹಳ್ಳ ಮಾಡು; ನೆಟ್ಟು: ನೆಡು, ಕೂಡಿಸು; ಸೀಸಕ: ಶಿರಸ್ತ್ರಾಣ; ಒಡೆ: ಸೀಳು; ಓಡು: ಧಾವಿಸು; ಕವಚ: ಹೊದಿಕೆ; ಕುದುರೆ: ಅಶ್ವ; ಜೋಡು: ಜೊತೆ; ಹಕ್ಕರಿ: ಆನೆ ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ; ತಳಿತ: ಚಿಗುರಿದ; ಹಿಳುಕು: ಬಾಣದ ಗರಿ; ಹರಹು: ವಿಸ್ತಾರ, ವೈಶಾಲ್ಯ; ಕೂಡೆ: ಜೊತೆ; ರಥ: ಬಂಡಿ; ಸಿಂಧ: ಬಾವುಟ; ಮೈಗೂಡು: ದೃಢವಾಗು, ದೇಹವನ್ನು ಅರ್ಪಿಸು; ಗಾಲಿ: ಚಕ್ರ; ವರೂಥ: ತೇರು, ರಥ; ಅಂಬು: ಬಾಣ; ಕಲಿ: ಶೂರ; ಎಸು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ತೋಡಿ +ನೆಟ್ಟವು +ಸೀಸಕವನ್+ಒಡೆದ್
ಓಡಿದವು +ಕವಚದಲಿ +ಕುದುರೆಯ
ಜೋಡು +ಹಕ್ಕರಿಕೆಯಲಿ +ತಳಿತವು +ಹಿಳುಕು +ಹರಹಿನಲಿ
ಕೂಡೆ+ ರಥದಲಿ+ ಸಿಂಧದಲಿ +ಮೈ
ಗೂಡಿ +ಗಾಲಿಗಳಲಿ +ವರೂಥದಲ್
ಈಡಿರಿದವ್+ಅಂಬುಗಳು +ಕಲಿ+ಮಾದ್ರೇಶನ್+ಎಸುಗೆಯಲಿ

ಅಚ್ಚರಿ:
(೧) ಬಾಣಗಳು ನೆಟ್ಟ ಸ್ಥಳ – ಸೀಸಕ, ಕವಚ, ಹಕ್ಕರಿಕೆ; ರಥ, ಸಿಂಧ, ಗಾಲಿ;

ಪದ್ಯ ೧೫: ಯುದ್ಧದ ತೀವ್ರತೆ ಹೇಗಿತ್ತು?

ರಾವುತರು ಸೆಲ್ಲಿಸಿದರಗ್ಗದ
ಮಾವುತರನಾನೆಗಳ ತುಡುಕಿ ಹ
ಯಾವಳಿಯ ಬೀಸಿದರು ರಥಿಕರು ಹಾಯ್ಸಿದರು ರಥವ
ಆ ವರೂಥವನೇಳನೆಂಟ ಗ
ಜಾವಳಿಗಳಿಟ್ಟವು ಗಜಸ್ಕಂ
ಧಾವಲಂಬವ ಸೆಕ್ಕಿದರು ಸುರಗಿಯಲಿ ಸಮರಥರು (ಶಲ್ಯ ಪರ್ವ, ೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ರಾವುತರು ಮಾವುತರನ್ನು ಈಟಿಗಳಿಂದಿರಿದರು. ರಥಿಕರು ರಥವನ್ನು ನಡೆಸಿ ರಾವುತರನ್ನು ಹೊಡೆದರು. ಆನೆಗಳು ಏಳೆಂಟು ರಥಗಳನ್ನು ಒಂದೇ ಬಾರಿಗೆ ಎತ್ತಿ ಅಪ್ಪಳಿಸಿದವು. ಸಮರಥರು ಖಡ್ಗಗಳಿಂದ ಆನೆಗಳ ಕತ್ತುಗಳ ಮೇಲೆರಗಿದರು.

ಅರ್ಥ:
ರಾವುತ: ಕುದುರೆ ಸವಾರ, ಅಶ್ವಾರೋಹಿ; ಸೆಲ್ಲಹ: ಈಟಿ, ಭರ್ಜಿ; ಅಗ್ಗ: ಶ್ರೇಷ್ಠ; ಮಾವುತ: ಆನೆಗಳನ್ನು ಪಳಗಿಸುವವ; ಆನೆ: ಗಜ; ತುಡುಕು: ಹೋರಾಡು, ಸೆಣಸು; ಹಯ: ಕುದುರೆ; ಆವಳಿ: ಗುಂಪು; ಬೀಸು: ಹರಡು; ರಥಿಕ: ಕುದುರೆ ಸವಾರ; ಹಾಯ್ಸು: ಹೊಡೆ; ರಥ: ಬಂಡಿ; ವರೂಥ: ತೇರು, ರಥ; ಗಜಾವಳಿ: ಆನೆಗಳ ಗುಂಪು; ಸ್ಕಂಧ: ಹೆಗಲು, ಭುಜಾಗ್ರ; ಅವಲಂಬ: ಆಸರೆ; ಸೆಕ್ಕು: ಒಳಸೇರಿಸು, ತುರುಕು; ಸುರಗಿ: ಸಣ್ಣ ಕತ್ತಿ, ಚೂರಿ; ಸಮರಥ: ಪರಾಕ್ರಮಿ;

ಪದವಿಂಗಡಣೆ:
ರಾವುತರು +ಸೆಲ್ಲಿಸಿದರ್+ಅಗ್ಗದ
ಮಾವುತರನ್+ಆನೆಗಳ+ ತುಡುಕಿ +ಹ
ಯಾವಳಿಯ +ಬೀಸಿದರು+ ರಥಿಕರು +ಹಾಯ್ಸಿದರು +ರಥವ
ಆ +ವರೂಥವನ್+ಏಳನೆಂಟ +ಗ
ಜಾವಳಿಗಳ್+ಇಟ್ಟವು +ಗಜ+ಸ್ಕಂ
ಧಾವಲಂಬವ +ಸೆಕ್ಕಿದರು+ ಸುರಗಿಯಲಿ +ಸಮರಥರು

ಅಚ್ಚರಿ:
(೧) ರಾವುತ, ಮಾವುತ; ಹಯಾವಳಿ, ಗಜಾವಳಿ – ಪದಗಳ ಬಳಕೆ
(೨) ಸೆಕ್ಕಿದರು ಸುರಗಿಯಲಿ ಸಮರಥರು – ಸ ಕಾರದ ತ್ರಿವಳಿ ಪದ

ಪದ್ಯ ೨೦: ಪಾಂಚಾಲ ಸೈನ್ಯದ ನಷ್ಟವೆಷ್ಟು?

ಕರಿಗಳೈಸಾವಿರ ತುರಂಗಮ
ವೆರಡು ಸಾವಿರವೆಂಟು ಸಾವಿರ
ವರವರೂಥದ ಥಟ್ಟು ಮುರಿದುದು ಲಕ್ಷ ಪಾಯದಳ
ಅರಸುಗಳು ಮೂನೂರು ಪುನರಪಿ
ಕರಿ ತುರಗ ರಥ ಮತ್ತೆ ಮೂವ
ತ್ತೆರಡು ಸಾವಿರವಳಿದುದರಿಪಾಂಚಾಲ ಸೇನೆಯಲಿ (ದ್ರೋಣ ಪರ್ವ, ೧೮ ಸಂಧಿ, ೨೦ ಪದ್ಯ)

ತಾತ್ಪರ್ಯ:
ಐದು ಸಾವಿರ ಆನೆಗಳು, ಎರಡು ಸಾವಿರ ಕುದುರೆಗಳು, ಎಂಟು ಸಾವಿರ ರಥಗಳು, ಲಕ್ಷ ಕಾಲಾಳುಗಳು, ಮುನ್ನೂರು ದೊರೆಗಳು ಮತ್ತೆ ಮೂವತ್ತೆರಡು ಸಾವಿರ ಚತುರಂಗ ಸೈನ್ಯ ಪಾಂಚಾಲ ಸೇನೆಯಲ್ಲಿ ನಾಶವಾಯಿತು.

ಅರ್ಥ:
ಕರಿ: ಆನೆ; ಸಾವಿರ: ಸಹಸ್ರ; ತುರಂಗ: ಅಶ್ವ; ವರ: ಶ್ರೇಷ್ಠ; ವರೂಥ: ರಥ, ಬಂಡಿ; ಥಟ್ಟು: ಗುಂಪು; ಮುರಿ: ಸೀಳು; ಪಾಯದಳ: ಸೈನ್ಯ; ಅರಸು: ರಾಜ; ಪುನರಪಿ: ಮತ್ತೆ; ಅಳಿದು: ಸಾವು; ಅರಿ: ವೈರಿ; ಸೇನೆ: ಸೈನ್ಯ;

ಪದವಿಂಗಡಣೆ:
ಕರಿಗಳ್+ಐಸಾವಿರ +ತುರಂಗಮವ್
ಎರಡು +ಸಾವಿರವ್+ಎಂಟು +ಸಾವಿರ
ವರ+ವರೂಥದ +ಥಟ್ಟು +ಮುರಿದುದು +ಲಕ್ಷ +ಪಾಯದಳ
ಅರಸುಗಳು +ಮೂನೂರು +ಪುನರಪಿ
ಕರಿ +ತುರಗ +ರಥ +ಮತ್ತೆ +ಮೂವ
ತ್ತೆರಡು +ಸಾವಿರವ್+ಅಳಿದುದ್+ಅರಿ+ಪಾಂಚಾಲ +ಸೇನೆಯಲಿ

ಅಚ್ಚರಿ:
(೧) ಸಾವಿರ – ೪ ಬಾರಿ ಪ್ರಯೋಗ

ಪದ್ಯ ೧೭: ಕೃಷ್ಣನು ಪಾರ್ಥನಿಗೆ ಯಾರ ಆಗಮನದ ಬಗ್ಗೆ ಹೇಳಿದ?

ನಿಜವರೂಥದಲಂದು ಕೌರವ
ವಿಜಯ ಮಾರುತಿ ಹೊಕ್ಕು ರಿಪು ಭೂ
ಭುಜರನರೆಯಟ್ಟಿದನು ಬಹಳಿತ ಸಿಂಹನಾದದಲಿ
ತ್ರಿಜಗ ತಲ್ಲಣಿಸಿದುದು ವರ ವಾ
ರಿಜವಿಲೋಚನ ಕೇಳಿದನು ಪವ
ನಜನ ಪಡಿಬಲ ಬಂದುದೆಮದರುಹಿದನು ಪಾರ್ಥಂಗೆ (ದ್ರೋಣ ಪರ್ವ, ೧೩ ಸಂಧಿ, ೧೭ ಪದ್ಯ)

ತಾತ್ಪರ್ಯ:
ಕೌರವರನ್ನು ಗೆದ್ದ ಭೀಮನು ತನ್ನ ರಥದಲ್ಲಿ ಕುಳಿತು ಸಿಂಹನಾದ ಮಾಡುತ್ತಾ ಶತ್ರುರಾಜರನ್ನರೆಯಟ್ಟಿದನು. ಮೂರು ಲೋಕಗಳೂ ಅವನ ಆರ್ಭಟಕ್ಕೆ ತಲ್ಲಣಿಸಿದವು. ಭೀಮನ ಕೂಗನ್ನು ಶ್ರೀಕೃಷ್ಣನು ಕೇಳಿ, ಭೀಮನ ಸಹಾಯ ಬಂದಿತು ಎಂದು ಅರ್ಜುನನಿಗೆ ಹೇಳಿದನು.

ಅರ್ಥ:
ನಿಜ: ತನ್ನ; ವರೂಥ:ತೇರು, ರಥ; ವಿಜಯ: ಗೆಲುವು; ಮಾರುತಿ: ಹನುಮ; ಹೊಕ್ಕು: ಸೇರು; ರಿಪು: ವೈರಿ; ಭೂಭುಜ: ಅರಸು; ಅಟ್ಟು: ಹಿಂಬಾಲಿಸು; ಬಹಳ: ತುಂಬ; ಸಿಂಹನಾದ: ಗರ್ಜನೆ; ತ್ರಿಜಗ: ಮೂರು ಪ್ರಪಂಚ; ತಲ್ಲಣ: ಅಂಜಿಕೆ, ಭಯ; ವರ: ಶ್ರೇಷ್ಠ; ವಾರಿಜ: ಕಮಲ ವಿಲೋಚನ: ಕಣ್ಣು; ಕೇಳು: ಆಲಿಸು; ಪವನಜ: ವಾಯುಪುತ್ರ (ಭೀಮ); ಪಡಿಬಲ: ಅಗತ್ಯಕ್ಕೆ ಸಹಾಯಕವಾಗಿ ಬರುವ ದೊಡ್ಡಪಡೆ; ಬಂದುದು: ಆಗಮಿಸು; ಅರುಹು: ಹೇಳು, ತಿಳಿಸು;

ಪದವಿಂಗಡಣೆ:
ನಿಜ+ವರೂಥದಲ್+ಅಂದು +ಕೌರವ
ವಿಜಯ +ಮಾರುತಿ +ಹೊಕ್ಕು +ರಿಪು +ಭೂ
ಭುಜರನ್+ಅರೆ+ಅಟ್ಟಿದನು +ಬಹಳಿತ +ಸಿಂಹನಾದದಲಿ
ತ್ರಿಜಗ +ತಲ್ಲಣಿಸಿದುದು +ವರ +ವಾ
ರಿಜ+ವಿಲೋಚನ +ಕೇಳಿದನು +ಪವ
ನಜನ +ಪಡಿಬಲ +ಬಂದುದೆಮದ್+ಅರುಹಿದನು +ಪಾರ್ಥಂಗೆ

ಅಚ್ಚರಿ:
(೧) ಕೃಷ್ಣನನ್ನು ವರ ವಾರಿಜ ವಿಲೋಚನ ಎಂದು ಕರೆದಿರುವುದು

ಪದ್ಯ ೨: ಭೀಮನ ದಾರಿಯನ್ನು ದ್ರೋಣರು ಹೇಗೆ ಗುರುತಿಸಿದರು?

ಇದೆ ಗದಾದಂಡದ ಹತಿಗೆ ಮು
ಗ್ಗಿದ ಮತಂಗ ವರೂಥಚಯವಿ
ಲ್ಲಿದೆ ಶರಾಳಿಯಲತಿರಥರ ಗೋನಾಳಿಗಡಿತವಿದೆ
ಇದೆ ರಥದ ಪದಘಾತದಲಿ ಹೆಣ
ಮೆದೆಯ ಪಾಯದಳೌಘ ಭೀಮನ
ಕದನ ಪಥವಿದೆಯೆನುತ ನಗುತೈತಂದನಾ ದ್ರೋಣ (ದ್ರೋಣ ಪರ್ವ, ೧೩ ಸಂಧಿ, ೨ ಪದ್ಯ)

ತಾತ್ಪರ್ಯ:
ಗದೆಯ ಹೊಡೆತಕ್ಕೆ ಬಿದ್ದ ಆನೆ, ರಥಗಳ ಗುಂಪು ಇಲ್ಲಿದೆ; ಇದೋ ಬಾಣಗಳಿಂದ ಕಡಿದು ಬೀಳಿಸಿದ ಅತಿರಥರ ಕತ್ತುಗಳು, ಹೆಣದ ಮೆದೆಯ ಮೇಲೆ ಹರಿದ ರಥದ ಗುರುತು ಇಲ್ಲಿದೆ. ಆದುದರಿಂದ ಇದೇ ಭೀಮನು ಯುದ್ಧಮಾಡುತ್ತಾ ಹೋದ ದಾರಿ ಎಂದು ದ್ರೋಣನು ನಗುತ್ತಾ ಭೀಮನ ದಾರಿಯಲ್ಲಿ ಮುಂದುವರೆದನು.

ಅರ್ಥ:
ಗದೆ: ಮುದ್ಗರ; ದಂಡ: ಕೋಲು; ಹತಿ: ಪೆಟ್ಟು, ಹೊಡೆತ; ಮುಗ್ಗು: ಬಾಗು, ಮಣಿ; ಮತಂಗ: ಆನೆ; ವರೂಥ: ತೇರು, ರಥ; ಚಯ: ಸಮೂಹ, ರಾಶಿ; ಶರಾಳಿ: ಬಾಣಗಳ ಗುಂಪು; ಅತಿರಥ: ಪರಾಕ್ರಮಿ; ಹೆಣ: ಜೀವವಿಲ್ಲದ ಶರೀರ; ಮೆದೆ: ಹುಲ್ಲಿನ ರಾಶಿ; ಪಾಯದಳ: ಸೈನಿಕ; ಔಘ:ಗುಂಪು, ಸಮೂಹ; ಕದನ: ಯುದ್ಧ; ಪಥ: ದಾರಿ; ನಗು: ಹರ್ಷಿಸು; ಗೋನಾಳಿ: ಕುತ್ತಿಗೆಯ ನಾಳ;ಐತರು: ಬಂದು ಸೇರು;

ಪದವಿಂಗಡಣೆ:
ಇದೆ +ಗದಾದಂಡದ +ಹತಿಗೆ +ಮು
ಗ್ಗಿದ +ಮತಂಗ +ವರೂಥ+ಚಯವ್
ಇಲ್ಲಿದೆ +ಶರಾಳಿಯಲ್+ಅತಿರಥರ+ ಗೋನಾಳಿ+ಕಡಿತವಿದೆ
ಇದೆ +ರಥದ +ಪದಘಾತದಲಿ +ಹೆಣ
ಮೆದೆಯ +ಪಾಯದಳ್+ಔಘ +ಭೀಮನ
ಕದನ +ಪಥವ್+ಇದೆ+ಎನುತ +ನಗುತ್+ಐತಂದನಾ +ದ್ರೋಣ

ಅಚ್ಚರಿ:
(೧) ಶರಾಳಿ, ಗೋನಾಳಿ – ಪ್ರಾಸ ಪದಗಳು

ಪದ್ಯ ೫: ಧರ್ಮಜನ ರಕ್ಷಣೆಗೆ ಯಾರನ್ನು ನೇಮಿಸಲಾಯಿತು?

ಅರನೆಲೆಯ ಸುಯ್ದಾನ ಪಾಂಚಾ
ಲರಿಗೆ ನೇಮಿಸಿತನಿಲತನಯನ
ಬೆರಳ ಸನ್ನೆಗೆ ತೀವಿದಂಬಿನ ತೇರ ಚಾಚಿದರು
ಕರೆದು ತನ್ನ ವಿಶೋಕಗಖಿಳಾ
ಭರಣವನು ಕೊಟ್ಟನು ವರೂಥದ
ಹರಿಗೆ ಹೊಡವಂಟಡರಿದನು ನವ ರತುನಮಯ ರಥವ (ದ್ರೋಣ ಪರ್ವ, ೧೨ ಸಂಧಿ, ೫ ಪದ್ಯ)

ತಾತ್ಪರ್ಯ:
ಧರ್ಮರಾಯನ ಬೀಡಿನ ರಕ್ಷಣೆಗೆ ಪಾಂಚಾಲರನ್ನು ನೇಮಿಸಿದನು. ಭೀಮನು ಸನ್ನೆಗನುಗುಣವಾಗಿ ಬಾಣಗಳು ತುಂಬಿದ ಗಾಡಿಗಳನ್ನು ತಂದೊದಗಿಸಿದರು. ಸಾರಥಿಯಾದ ವಿಶೋಕನನ್ನು ಕರೆದು ಅವನಿಗೆ ಆಭರಣಗಳನ್ನು ಉಡುಗೊರೆಯಾಗಿ ಕೊಟ್ಟು, ರಥದ ಕುದುರೆಗಳಿಗೆ ನಮಸ್ಕರಿಸಿ ಭೀಮನು ರಥವನ್ನೇರಿದನು.

ಅರ್ಥ:
ನೆಲೆ: ಆಶ್ರಯ, ಆಧಾರ; ಸುಯ್ದಾನ: ರಕ್ಷಣೆ, ಕಾಪು; ನೇಮಿಸು: ಅಪ್ಪಣೆ ಮಾಡು; ಅನಿಲತನಯ: ವಾಯುಪುತ್ರ (ಭೀಮ); ಬೆರಳು: ಅಂಗುಲಿ; ಸನ್ನೆ; ಗುರುತು; ತೀವು: ಚುಚ್ಚು; ಅಂಬು: ಬಾಣ; ತೇರು: ಬಂಡಿ; ಚಾಚು: ಹರಡು; ಕರೆ: ಬರೆಮಾಡು; ಅಖಿಳ: ಎಲ್ಲಾ; ಆಭರಣ: ಒಡವೆ; ಕೊಟ್ಟು: ನೀಡು; ವರೂಥ: ತೇರು, ರಥ; ಹರಿ: ಕೃಷ್ಣ; ಅಡರು: ಮೇಲಕ್ಕೆ ಹತ್ತು; ನವ: ಹೊಸ; ರತುನ: ಬೆಲೆಬಾಳುವ ಮಣಿ; ರಥ: ಬಂಡಿ;

ಪದವಿಂಗಡಣೆ:
ಅರನೆಲೆಯ +ಸುಯ್ದಾನ +ಪಾಂಚಾ
ಲರಿಗೆ +ನೇಮಿಸಿತ್+ಅನಿಲತನಯನ
ಬೆರಳ +ಸನ್ನೆಗೆ +ತೀವಿದ್+ಅಂಬಿನ +ತೇರ +ಚಾಚಿದರು
ಕರೆದು +ತನ್ನ +ವಿಶೋಕಗ್+ಅಖಿಳ
ಆಭರಣವನು +ಕೊಟ್ಟನು +ವರೂಥದ
ಹರಿಗೆ+ ಹೊಡವಂಟ್+ಅಡರಿದನು +ನವ +ರತುನಮಯ +ರಥವ

ಅಚ್ಚರಿ:
(೧) ಭೀಮನ ಸಾರಥಿ – ವಿಶೋಕ
(೨) ತೇರು, ರಥ – ಸಮಾನಾಎಥಕ ಪದ
(೩) ರ ಕಾರದ ಜೋಡಿ ಪದ – ರತುನಮಯ ರಥವ

ಪದ್ಯ ೮: ಕೌರವ ಸೈನ್ಯದಲ್ಲಿ ಯಾರ ಕೂಗು ಕೇಳಿಬಂತು?

ಈತನರ್ಜುನನಿತ್ತಲಿದೆ ಪುರು
ಹೂತಸುತನ ವರೂಥವಿದೆ ಕಪಿ
ಕೇತನನ ಬೊಬ್ಬಾಟವಿದೆ ಫಲುಗುಣನ ಶರಜಾಲ
ಈತ ಪಾರ್ಥನು ಹೊಕ್ಕನಿತ್ತಲು
ಶ್ವೇತಹಯನಿತ್ತಲು ಧನಂಜಯ
ನೀತನೆನೆ ಫಲುಗುಣನ ಮಯವಾಯ್ತಖಿಳ ತಳತಂತ್ರ (ದ್ರೋಣ ಪರ್ವ, ೧೦ ಸಂಧಿ, ೮ ಪದ್ಯ)

ತಾತ್ಪರ್ಯ:
ಇವನೇ ಅರ್ಜುನ, ಇಂದ್ರಪುತ್ರನ ರಥ ಇಲ್ಲಿದೆ, ಧ್ವಜದಲ್ಲಿರುವ ಹನುಮಂತನ ಗರ್ಜನೆ ಕೇಳುತ್ತಿದೆ, ಅರ್ಜುನನ ಬಾಣಗಳು ಇಲ್ಲವೇ ಇವನೇ ಅರ್ಜುನ, ಇಲ್ಲಿ ಹೊಕ್ಕ, ಇವನೇ ಶ್ವೇತವಾಹನ! ಧನಂಜಯ ಇಲ್ಲಿದ್ದಾನೆ ಎಂಬ ಆರ್ತನಾದ ಕೇಳುತ್ತಿರಲು ಕೌರವಸೈನ್ಯವು ಅರ್ಜುನಮಯವಾಯಿತು.

ಅರ್ಥ:
ಸುತ: ಮಗ; ಪುರುಹೂತ: ಇಂದ್ರ; ಬೊಬ್ಬೆ: ಕೂಗಾಟ; ಕಪಿ: ಹನುಮ; ಕೇತನ: ಬಾವುಟ; ಶರ: ಬಾಣ; ಜಾಲ: ಗುಂಪು; ಹೊಕ್ಕು: ಸೇರು; ಶ್ವೇತ: ಬಿಳಿ; ಹಯ: ಕುದುರೆ; ತಳ: ಕೆಳಗು;

ಪದವಿಂಗಡಣೆ:
ಈತನ್+ಅರ್ಜುನನ್+ಇತ್ತಲಿದೆ +ಪುರು
ಹೂತ+ಸುತನ +ವರೂಥವಿದೆ +ಕಪಿ
ಕೇತನನ +ಬೊಬ್ಬಾಟವಿದೆ +ಫಲುಗುಣನ +ಶರಜಾಲ
ಈತ +ಪಾರ್ಥನು +ಹೊಕ್ಕನ್+ಇತ್ತಲು
ಶ್ವೇತಹಯನ್+ಇತ್ತಲು +ಧನಂಜಯನ್
ಈತನೆನೆ +ಫಲುಗುಣನ +ಮಯವಾಯ್ತ್+ಅಖಿಳ +ತಳತಂತ್ರ

ಅಚ್ಚರಿ:
(೧) ಅರ್ಜುನನನ್ನು ಕರೆದ ಪರಿ – ಪುರುಹೂತಸುತ, ಕಪಿಕೇತನ, ಫಲುಗುಣ, ಪಾರ್ಥ, ಶ್ವೇತಹಯನ, ಧನಂಜಯ

ಪದ್ಯ ೨: ಅಭಿಮನ್ಯುವಿನ ವೇಗವು ಹೇಗಿತ್ತು?

ಹರಿಯ ಚಕ್ರ ವರೂಥ ಚಕ್ರದೊ
ಳುರವಣಿಪ ತೇಜಿಗಳ ಕಡುಹಿನ
ಖುರನ ಹೊಯ್ಲಲಿ ವಿಲಯಪವನನ ಗರಿಯ ಗಾಳಿಯಲಿ
ಹರನ ನಯನಜ್ವಾಲೆ ಪಾರ್ಥಿಯ
ಸರಳ ಕಿಡಿಯಲಿ ಪಲ್ಲಟಿಸೆ ಸಂ
ಗರದೊಳಗೆ ಸೈವರಿದು ಸದೆದನು ಸಕಲ ಸೈನಿಕರ (ದ್ರೋಣ ಪರ್ವ, ೫ ಸಂಧಿ, ೨ ಪದ್ಯ)

ತಾತ್ಪರ್ಯ:
ಹರಿಸುದರ್ಶನ ಚಕ್ರವು ಅಭಿಮನ್ಯುವಿನ ರಥದ ಚಕ್ರಗಳಲ್ಲಿ ಮತ್ತು ರಥಾಶ್ವಗಳ ಗೊರಸುಗಳ ಹೊಯ್ಲಿನಲ್ಲಿ, ಪ್ರಳಯ ಕಾಲದ ವಾಯುವಿನ ಜೋರು ಅವನ ಬಾಣಗಳ ಗರಿಗಳ ಗಾಳಿಯಲ್ಲಿ, ಶಿವನ ಹಣೆಗಣ್ಣಿನ ಕಿಡಿಯು ಅವನ ಬಾಣಗಳಿಂದ ಹೊರಟ ಕಿಡಿಗಳಲ್ಲಿ ಸೇರಿಕೊಂಡವು. ಅಭಿಮನ್ಯುವು ವ್ಯೂಹವನ್ನು ಹೊಕ್ಕು ಸಕಲ ಸೈನಿಕರನ್ನೂ ಸಂಹರಿಸಿದನು.

ಅರ್ಥ:
ಹರಿ: ಕೃಷ್ಣ; ಚಕ್ರ: ಗಾಲಿ; ವರೂಥ: ತೇರು, ರಥ; ಉರವಣೆ: ಆತುರ, ಅವಸರ; ತೇಜಿ:ಕುದುರೆ; ಕಡು: ವಿಶೇಷ, ಅಧಿಕ; ಖುರ: ಕುದುರೆ ದನಕರುಗಳ ಕಾಲಿನ ಗೊರಸು, ಕೊಳಗು; ಹೊಯ್ಲು: ಏಟು, ಹೊಡೆತ; ವಿಲಯ: ನಾಶ, ಪ್ರಳಯ; ಪವನ: ವಾಯು; ಗರಿ: ರೆಕ್ಕೆ; ಗಾಳಿ: ವಾಯು; ಹರ: ಶಂಕರ; ನಯನ: ಕಣ್ಣು; ಜ್ವಾಲೆ: ಬೆಂಕಿ; ಪಾರ್ಥಿ: ಅರ್ಜುನನ ಮಗ; ಸರಳ: ಬಾಣ; ಕಿಡಿ: ಬೆಂಕಿ; ಪಲ್ಲಟ: ಮಾರ್ಪಾಟು; ಸಂಗರ: ಯುದ್ಧ; ಸೈವರಿ: ನೇರವಾಗಿ ಸಾಗು, ಮುಂದಕ್ಕೆ ಹೋಗು; ಸದೆ: ಕೊಲ್ಲು; ಸಕಲ: ಎಲ್ಲಾ; ಸೈನಿಕ: ಕಾಲಾಳು;

ಪದವಿಂಗಡಣೆ:
ಹರಿಯ +ಚಕ್ರ +ವರೂಥ +ಚಕ್ರದೊಳ್
ಉರವಣಿಪ +ತೇಜಿಗಳ +ಕಡುಹಿನ
ಖುರನ +ಹೊಯ್ಲಲಿ +ವಿಲಯ+ಪವನನ +ಗರಿಯ +ಗಾಳಿಯಲಿ
ಹರನ +ನಯನ+ಜ್ವಾಲೆ +ಪಾರ್ಥಿಯ
ಸರಳ +ಕಿಡಿಯಲಿ +ಪಲ್ಲಟಿಸೆ +ಸಂ
ಗರದೊಳಗೆ +ಸೈವರಿದು +ಸದೆದನು+ ಸಕಲ+ ಸೈನಿಕರ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹರಿಯ ಚಕ್ರ ವರೂಥ ಚಕ್ರದೊಳ್, ವಿಲಯಪವನನ ಗರಿಯ ಗಾಳಿಯಲಿ, ಹರನ ನಯನಜ್ವಾಲೆ ಪಾರ್ಥಿಯ ಸರಳ ಕಿಡಿಯಲಿ

ಪದ್ಯ ೨: ಪಾಂಡವರು ಹೇಗೆ ಸನ್ನದ್ಧರಾದರು?

ನರನ ರಥ ಕುಣಿದುದು ಯುಧಿಷ್ಠಿರ
ನುರು ವರೂಥ ಸಗಾಢದೊಳು ಚೀ
ತ್ಕರಿಸಿತನಿಲಾತ್ಮಜನ ಸ್ಯಂದನ ಮುಂದುವರಿಯುತಿರೆ
ಭರದಿ ಮಾದ್ರೀಸುತರ ತೇರುಗ
ಳುರವಣಿಸಲಭಿಮನ್ಯು ಸಾತ್ಯಕಿ
ಯಿರದೆ ಕೈಕೊಳಲಾಯಿತಿತ್ತಲು ಕದನಕುದ್ಯೋಗ (ಭೀಷ್ಮ ಪರ್ವ, ೫ ಸಂಧಿ, ೨ ಪದ್ಯ)

ತಾತ್ಪರ್ಯ:
ಅರ್ಜುನ, ಧರ್ಮಜ, ಭೀಮ, ನಕುಲ, ಸಹದೇವರು ಇವರ ರಥಗಳು ಮುಂದುವರಿಯಲು ಸಾತ್ಯಕಿ, ಅಭಿಮನ್ಯುಗಳೂ ಯುದ್ಧಸನ್ನದ್ಧರಾಗಿ ಹೊರಟರು.

ಅರ್ಥ:
ನರ: ಅರ್ಜುನ; ರಥ: ಬಂಡಿ; ಕುಣಿ: ನರ್ತಿಸು; ಉರು: ಶ್ರೇಷ್ಠ; ವರೂಥ: ತೇರು, ರಥ; ಸಗಾಢ: ಹೆಚ್ಚಾದ, ಅತಿಶಯವಾದ; ಚೀತ್ಕರಿಸು: ಗಟ್ಟಿಯಾಗಿ ಅರಚು, ಆರ್ತನಾದ ಮಾಡು; ಆತ್ಮಜ: ಮಗ; ಸ್ಯಂದ: ಸ್ರವಿಸುವಿಕೆ; ಮುಂದುವರಿ: ಮುನ್ನುಗ್ಗು; ಭರದಿ: ರಭಸ, ವೇಗ; ಸುತ: ಮಕ್ಕಳು; ತೇರು: ಬಂಡಿ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಕದನ: ಯುದ್ಧ; ಉದ್ಯೋಗ: ಕಾರ್ಯ, ಕೆಲಸ; ಅನಿಲ: ವಾಯು;

ಪದವಿಂಗಡಣೆ:
ನರನ +ರಥ +ಕುಣಿದುದು +ಯುಧಿಷ್ಠಿರನ್
ಉರು +ವರೂಥ +ಸಗಾಢದೊಳು +ಚೀ
ತ್ಕರಿಸಿತ್+ಅನಿಲ್+ಆತ್ಮಜನ +ಸ್ಯಂದನ +ಮುಂದುವರಿಯುತಿರೆ
ಭರದಿ+ ಮಾದ್ರೀಸುತರ+ ತೇರುಗಳ್
ಉರವಣಿಸಲ್+ಅಭಿಮನ್ಯು +ಸಾತ್ಯಕಿ
ಯಿರದೆ +ಕೈಕೊಳಲಾಯಿತ್+ಇತ್ತಲು+ ಕದನಕ್+ಉದ್ಯೋಗ

ಅಚ್ಚರಿ:
(೧) ತೇರುಗಳು ಮುಂದುವರೆದುದನ್ನು ತಿಳಿಸಲು ಬಳಸಿದ ಪದಗಳು – ಕುಣಿ, ಚೀತ್ಕರಿಸು, ಸ್ಯಂದ, ಉರವಣಿಸು

ಪದ್ಯ ೧೮: ಅರ್ಜುನನು ಹೇಗೆ ಕಂಡನು?

ಆತನೆಡವಂಕದಲಿ ಹನುಮನ
ಕೇತನದ ಗರುವಾಯಿಯಲಿ ನವ
ಶಾತಕುಂಭವರೂಥದಲಿ ನೆರೆ ತೀವಿದಸ್ತ್ರದಲಿ
ನೂತನಾಶ್ವನಿಕಾಯ ಖುರಪುಟ
ಧೂತಧೂಳೀಪಟಲವಿಹಿತ ನಿ
ಶಾತಘನ ಜಯಯುವತಿವಿಟನರ್ಜುನನ ನೋಡೆಂದ (ಭೀಷ್ಮ ಪರ್ವ, ೨ ಸಂಧಿ, ೧೮ ಪದ್ಯ)

ತಾತ್ಪರ್ಯ:
ಧರ್ಮಜನ ಎಡಭಾಗದಲ್ಲಿ ಹನುಮನ ಧ್ವಜವನ್ನು ಕಟ್ಟಿರುವ, ಬಂಗಾರದ ರಥದಲ್ಲಿ ಶಸ್ತ್ರ ಸನ್ನಾಹದಿಂದಿರುವವನು ಅರ್ಜುನ. ಅವನ ರಥಕ್ಕೆ ದಿವ್ಯಾಶ್ವಗಳ ಖುರಪುಟದಿಂದೆದ್ದ ಧೂಳು ಆವರಿಸಿದೆ, ಮಹಾ ಜಯಯುವತಿಯನ್ನು ಕಾಮಿಸುವವನಾದ ಅರ್ಜುನನನ್ನು ನೋಡು ಎಂದು ಭೀಷ್ಮರು ಹೇಳಿದರು.

ಅರ್ಥ:
ಎಡ: ವಾಮಭಾಗ; ಅಂಕ: ಸ್ಥಳ; ಕೇತನ: ಬಾವುಟ; ಗರುವಾಯಿ: ಠೀವಿ; ನವ: ಹೊಸ; ಶಾತಕುಂಭ: ಚಿನ್ನ, ಹೊನ್ನು; ವರೂಥ: ತೇರು, ರಥ; ನೆರೆ: ಗುಂಪು; ತೀವು: ತುಂಬು; ಅಸ್ತ್ರ: ಶಸ್ತ್ರ, ಆಯುಧ; ನೂತನ: ಹೊಸ; ಅಶ್ವ: ಕುದುರೆ; ನಿಕಾಯ: ಗುಂಪು; ಖುರಪುಟ: ಗೊರಸು; ಧೂತ: ನಿವಾರಣೆ; ಧೂಳೀಪಟಲ: ಧೂಳಿನ ಸಮೂಹ; ವಿಹಿತ: ಹೊಂದಿಸಿದ; ನಿಶಾತಘನ: ತೀವ್ರವಾದ ಮೋಡ; ಜಯ: ಗೆಲುವು; ಯುವತಿ: ಹೆಣ್ಣು; ವಿಟ: ಕಾಮುಕ;

ಪದವಿಂಗಡಣೆ:
ಆತನ್+ಎಡವ್+ಅಂಕದಲಿ +ಹನುಮನ
ಕೇತನದ +ಗರುವಾಯಿಯಲಿ +ನವ
ಶಾತಕುಂಭ+ವರೂಥದಲಿ +ನೆರೆ +ತೀವಿದ್+ಅಸ್ತ್ರದಲಿ
ನೂತನ+ಅಶ್ವ+ನಿಕಾಯ +ಖುರಪುಟ
ಧೂತ+ಧೂಳೀಪಟಲ+ವಿಹಿತ +ನಿ
ಶಾತಘನ +ಜಯ+ಯುವತಿ+ವಿಟನ್+ಅರ್ಜುನನ +ನೋಡೆಂದ

ಅಚ್ಚರಿ:
(೧) ಅರ್ಜುನನನ್ನು ಕರೆದ ಪರಿ – ನಿಶಾತಘನ ಜಯಯುವತಿವಿಟ
(೨) ಅರ್ಜುನನ ಗುರುತನ್ನು ತೋರುವ ಪರಿ – ಹನುಮನ ಕೇತನದ ಗರುವಾಯಿಯಲಿ ನವ
ಶಾತಕುಂಭವರೂಥದಲಿ ನೆರೆ ತೀವಿದಸ್ತ್ರದಲಿ