ಪದ್ಯ ೪: ಪಾಂಡವರ ಸೈನ್ಯದಲ್ಲಿ ಎಷ್ಟು ಉಳಿಯಿತು?

ಧರಣಿಪತಿ ಕೇಳ್ ಧರ್ಮಜನ ಮೋ
ಹರದೊಳುಳಿದುದು ತೇರು ಸಾವಿರ
ವೆರಡು ಗಜವೇಳ್ನೊರು ಮಿಕ್ಕುದು ಲಕ್ಕ ಪಾಯದಳ
ತುರಗ ಸಾವಿರವೈದು ಸಾತ್ಯಕಿ
ವರ ಯುಧಾಮನ್ಯೂತ್ತಮೌಂಜಸ
ರುರು ಶಿಖಂಡಿ ದ್ರುಪದಸೂನು ದ್ರೌಪದೀಸುತರು (ಗದಾ ಪರ್ವ, ೩ ಸಂಧಿ, ೪ ಪದ್ಯ)

ತಾತ್ಪರ್ಯ:
ಎಲೈ ರಾಜ ಜನಮೇಜಯ ಕೇಳು, ಪಾಂಡವಸೇನೆಯಲ್ಲಿ ಎರಡು ಸಾವಿರ ರಥಗಳು, ಏಳುನೂರು ಆನೆಗಳು, ಐದುಸಾವಿರ ಕುದುರೆಗಳು, ಒಂದು ಲಕ್ಷ ಕಾಲಾಳುಗಳು. ಸಾತ್ಯಕಿ ಯುಧಾಮನ್ಯು ಉತ್ತಮೌಜಸ, ಶಿಖಂಡಿ, ಧೃಷ್ಟದ್ಯುಮ್ನ, ಉಪಪಾಂಡವರು, ಉಳಿದರು.

ಅರ್ಥ:
ಧರಣಿಪತಿ: ರಾಜ; ಮೋಹರ: ಯುದ್ಧ; ಉಳಿದು: ಮಿಕ್ಕ; ತೇರು: ಬಂಡಿ; ಸಾವಿರ: ಸಹಸ್ರ; ಗಜ: ಆನೆ; ಪಾಯದಳ: ಸೈನಿಕ; ತುರಗ: ಅಶ್ವ; ಉರು: ಶ್ರೇಷ್ಠ; ಸೂನು: ಮಗ; ಸುತ: ಮಗ;

ಪದವಿಂಗಡಣೆ:
ಧರಣಿಪತಿ +ಕೇಳ್ +ಧರ್ಮಜನ +ಮೋ
ಹರದೊಳ್+ಉಳಿದುದು +ತೇರು +ಸಾವಿರವ್
ಎರಡು+ ಗಜವ್+ಏಳ್ನೊರು +ಮಿಕ್ಕುದು +ಲಕ್ಕ +ಪಾಯದಳ
ತುರಗ +ಸಾವಿರವ್+ಐದು +ಸಾತ್ಯಕಿ
ವರ +ಯುಧಾಮನ್ಯು+ಉತ್ತಮೌಂಜಸರ್
ಉರು +ಶಿಖಂಡಿ +ದ್ರುಪದ+ಸೂನು+ ದ್ರೌಪದೀ+ಸುತರು

ಅಚ್ಚರಿ:
(೧) ಸೂನು, ಸುತ – ಸಮಾನಾರ್ಥಕ ಪದ

ಪದ್ಯ ೧೭: ಸೈನ್ಯವು ಅರ್ಜುನನನ್ನು ಹೇಗೆ ಮುತ್ತಿತು?

ಮುತ್ತಿದವು ರಥವೇಳನೂರರು
ವತ್ತು ಹಯವೈನೂರು ಸಾವಿರ
ಮತ್ತಗಜವಿಪ್ಪತ್ತು ಸಾವಿರ ಪಾಯದಳ ಸಹಿತ
ತೆತ್ತಿಸಿದವಂಬುರವಣಿಸಿ ದೂ
ಹತ್ತಿ ಹೊಳೆದವು ಸಮರದಲಿ ಮುಖ
ಕೆತ್ತುದೆನೆ ಕೈದುಗಳ ರುಚಿ ವೇಢೈಸಿತರ್ಜುನನ (ಗದಾ ಪರ್ವ, ೨ ಸಂಧಿ, ೧೭ ಪದ್ಯ)

ತಾತ್ಪರ್ಯ:
ಏಳುನೂರರವತ್ತು ರಥಗಳು, ಐನೂರು ಕುದುರೆಗಳು, ಸಾವಿರ ಆನೆಗಳು, ಇಪ್ಪತ್ತು ಸಾವಿರ ಕಾಲಾಳುಗಳು, ಅರ್ಜುನನನ್ನು ಮುತ್ತಿ ಬಾಣಗಳನ್ನು ಬಿಟ್ಟರು. ಖಡ್ಗಗಳನ್ನು ಝಳುಪಿಸಿದರು. ಮುಖವನ್ನೇ ಕೆತ್ತಿದವೋ ಎಂಬಂತೆ ವೈರಿಗಳ ಶಸ್ತ್ರಗಳು ಅರ್ಜುನನನ್ನು ಮುತ್ತಿದವು.

ಅರ್ಥ:
ಮುತ್ತು: ಆವರಿಸು; ನೂರು: ಶತ; ಹಯ: ಕುದುರೆ; ಸಾವಿರ: ಸಹಸ್ರ; ಮತ್ತ: ಅಮಲು; ಗಜ: ಆನೆ; ಪಾಯದಳ: ಸೈನಿಕ; ಸಹಿತ: ಜೊತೆ; ತೆತ್ತು: ಕೂಡಿಸು; ಅಂಬು: ಬಾಣ; ಉರವಣೆ: ಆತುರ, ಅವಸರ; ದೂಹತ್ತಿ: ಎರಡುಕಡೆ ಚೂಪಾದ ಕತ್ತಿ; ಹೊಳೆ: ಪ್ರಕಾಶ; ಸಮರ: ಯುದ್ಧ; ಮುಖ: ಆನನ; ಕೈದು: ಆಯುಧ; ರುಚಿ: ಆಸ್ವಾದ, ಸವಿ; ವೇಡೈಸು: ಸುತ್ತುವರಿ;

ಪದವಿಂಗಡಣೆ:
ಮುತ್ತಿದವು +ರಥವ್+ಏಳನೂರ್+ಅರು
ವತ್ತು +ಹಯವ್+ಐನೂರು +ಸಾವಿರ
ಮತ್ತಗಜವ್+ಇಪ್ಪತ್ತು +ಸಾವಿರ +ಪಾಯದಳ +ಸಹಿತ
ತೆತ್ತಿಸಿದವಂಬ್+ಉರವಣಿಸಿ +ದೂ
ಹತ್ತಿ +ಹೊಳೆದವು +ಸಮರದಲಿ +ಮುಖ
ಕೆತ್ತುದೆನೆ +ಕೈದುಗಳ +ರುಚಿ +ವೇಢೈಸಿತ್+ಅರ್ಜುನನ

ಅಚ್ಚರಿ:
(೧) ಮುತ್ತಿ, ತೆತ್ತಿ, ದೂಹತ್ತಿ – ಪ್ರಾಸ ಪದ

ಪದ್ಯ ೬೩: ಶಕುನಿಯು ಎಷ್ಟು ಸೈನ್ಯದೊಡನೆ ಬಂದನು?

ನೂರು ಗಜವಕ್ಕಾಡಲವನಿಪ
ನೇರಿದನು ವಾರುವನನೆಡದಲಿ
ಜಾರಿದನು ಸೂಠಿಯಲಿ ದುವ್ವಾಳಿಸಿ ತುರಂಗಮವ
ಆರು ಸಾವಿರ ಕುದುರೆ ರಥವೈ
ನೂರು ಗಜಘಟೆ ನೂರು ಮೂವ
ತ್ತಾರು ಸಾವಿರ ಪಾಯದಳದಲಿ ಬಂದನಾ ಶಕುನಿ (ಗದಾ ಪರ್ವ, ೧ ಸಂಧಿ, ೬೩ ಪದ್ಯ)

ತಾತ್ಪರ್ಯ:
ತನ್ನ ಸುತ್ತಲ್ಲಿದ್ದ ನೂರಾನೆಗಳು, ನಷ್ಟಗೊಳ್ಳಲು, ದುರ್ಯೋಧನನು ಒಂದು ಕುದುರೆಯನ್ನೇರಿ ಅದನ್ನು ವೇಗವಾಗಿ ಓಡಿಸುತ್ತಾ ತಪ್ಪಿಸಿಕೊಂಡು ಓಡಿಹೋದನು. ಆಗ ಶಕುನಿಯು ಆರು ಸಾವಿರ ಕುದುರೆಗಳು, ಐನೂರು ರಥಗಳು, ನೂರು ಆನೆಗಳು, ಮೂವತ್ತಾರು ಸಾವಿರ ಕಾಲಾಳುಗಳೊಡನೆ ಬಂದನು.

ಅರ್ಥ:
ನೂರು: ಶತ; ಗಜ: ಆನೆ; ಅಕ್ಕಾಡು: ನಾಶವಾಗು; ಅವನಿಪ: ರಾಜ; ಏರು: ಹತ್ತು; ವಾರುವ: ಕುದುರೆ; ಎಡ: ವಾಮಭಾಗ; ಜಾರು: ಕುಗ್ಗು; ಸೂಠಿ: ವೇಗ; ದುವ್ವಾಳಿಸು: ತೀವ್ರಗತಿ, ಓಡು; ತುರಂಗ: ಕುದುರೆ; ರಥ: ಬಂಡಿ; ಘಟೆ: ಗುಂಪು; ಪಾಯದಳ: ಸೈನಿಕ; ಬಂದು: ಆಗಮಿಸು;

ಪದವಿಂಗಡಣೆ:
ನೂರು +ಗಜವ್+ಅಕ್ಕಾಡಲ್+ ಅವನಿಪನ್
ಏರಿದನು +ವಾರುವನನ್+ಎಡದಲಿ
ಜಾರಿದನು+ ಸೂಠಿಯಲಿ +ದುವ್ವಾಳಿಸಿ +ತುರಂಗಮವ
ಆರು +ಸಾವಿರ +ಕುದುರೆ +ರಥವ್+
ಐನೂರು +ಗಜಘಟೆ +ನೂರು +ಮೂವ
ತ್ತಾರು +ಸಾವಿರ +ಪಾಯದಳದಲಿ +ಬಂದನಾ +ಶಕುನಿ

ಅಚ್ಚರಿ:
(೧) ವಾರುವ, ತುರಂಗ, ಕುದುರೆ – ಸಮಾನಾರ್ಥಕ ಪದ
(೨) ಪಲಾಯನದ ಪರಿ – ಅವನಿಪನೇರಿದನು ವಾರುವನನೆಡದಲಿ ಜಾರಿದನು ಸೂಠಿಯಲಿ ದುವ್ವಾಳಿಸಿ ತುರಂಗಮವ

ಪದ್ಯ ೫೧: ಕೌರವನೇಕೆ ಕಳವಳಿಸಿದನು?

ಉಳಿಗಡಿಯ ನಾನೂರು ಕುದುರೆಗ
ಳಳಿದವರಸನ ಶರಹತಿಗೆ ಮು
ಮ್ಮುಳಿತವಾದುದು ಹತ್ತು ಸಾವಿರ ವಿಗಡ ಪಾಯದಳ
ಕಳಚಿ ಕೆಡೆದವು ನೂರು ರಥ ವೆ
ಗ್ಗಳೆಯತನವರಿರಾಯರಲಿ ಹೆ
ಕ್ಕಳಿಸೆ ಕಳವಳಿಸಿದನು ಕೌರವರಾಯ ಖಾತಿಯಲಿ (ಗದಾ ಪರ್ವ, ೧ ಸಂಧಿ, ೫೧ ಪದ್ಯ)

ತಾತ್ಪರ್ಯ:
ಉಳಿದ ನಾನೂರು ಕುದುರೆಗಳು ಧರ್ಮಜನ ಬಾಣದ ಹೊಡೆತಕ್ಕೆ ಅಳಿದವು. ಹತ್ತು ಸಾವಿರ ಕಾಲಾಳುಗಳು ಮದಿದರು, ನೂರು ರಥಗಳು ಕಳಚಿ ಬಿದ್ದವು. ಶತ್ರುರಾಜನ ಪರಾಕ್ರಮದ ಹೆಚ್ಚಳಕ್ಕೆ ಕೌರವನು ಕೋಪಗೊಂಡು ಕಳವಳಿಸಿದನು.

ಅರ್ಥ:
ಉಳಿ: ಮಿಕ್ಕ; ಕಡಿ: ಸೀಳು; ಕುದುರೆ: ಅಶ್ವ; ಅಳಿ: ನಾಶ; ಅರಸ: ರಾಜ; ಶರ: ಬಾಣ; ಹತಿ: ಪೆಟ್ಟು, ಹೊಡೆತ; ಮುಮ್ಮುಳಿತ: ರೂಪಗೆಟ್ಟು ನಾಶವಾಗು; ಸಾವಿರ: ಸಹಸ್ರ; ವಿಗಡ: ಶೌರ್ಯ, ಪರಾಕ್ರಮ; ಪಾಯದಳ: ಕಾಲಾಳು; ಕಳಚು: ಬೇರ್ಪಡಿಸು; ಕೆಡೆ: ಸೀಳು; ರಥ: ಬಂಡಿ; ವೆಗ್ಗಳ: ಶ್ರೇಷ್ಠ; ರಾಯ: ರಾಜ; ಹೆಕ್ಕಳಿಸು: ಅಧಿಕವಾಗು, ಹೆಚ್ಚಾಗು; ಕಳವಳ: ಗೊಂದಲ; ಖಾತಿ: ಕೋಪ;

ಪದವಿಂಗಡಣೆ:
ಉಳಿಗಡಿಯ +ನಾನೂರು +ಕುದುರೆಗಳ್
ಅಳಿದವ್+ಅರಸನ +ಶರಹತಿಗೆ +ಮು
ಮ್ಮುಳಿತವಾದುದು +ಹತ್ತು +ಸಾವಿರ+ ವಿಗಡ +ಪಾಯದಳ
ಕಳಚಿ +ಕೆಡೆದವು +ನೂರು +ರಥ +ವೆ
ಗ್ಗಳೆಯತನವ್+ಅರಿ+ರಾಯರಲಿ +ಹೆ
ಕ್ಕಳಿಸೆ +ಕಳವಳಿಸಿದನು +ಕೌರವರಾಯ +ಖಾತಿಯಲಿ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಳವಳಿಸಿದನು ಕೌರವರಾಯ ಖಾತಿಯಲಿ

ಪದ್ಯ ೪೬: ಸೈನ್ಯದವರು ಹೇಗೆ ಮುತ್ತಿಗೆ ಹಾಕಿದರು?

ಇತ್ತ ಪಡಿಬಲವಾಗಿ ಸಾವಿರ
ಮತ್ತಗಜಘಟೆ ಕೌರವೇಂದ್ರನ
ತೆತ್ತಿಗರು ತೂಳಿದರು ಪಾಂಚಾಲಪ್ರಬುದ್ಧಕರ
ಹತ್ತುಸಾವಿರ ಪಾಯದಳ ಹೊಗ
ರೆತ್ತಿದಲಗಿನ ಹೊಳಹಿನಂತಿರೆ
ಮುತ್ತಿತವನೀಪತಿಯ ಮೋಹರದೆರಡು ಬಾಹೆಯಲಿ (ಗದಾ ಪರ್ವ, ೧ ಸಂಧಿ, ೪೬ ಪದ್ಯ)

ತಾತ್ಪರ್ಯ:
ಇತ್ತ ಕೌರವನ ಆಶ್ರಿತರಾದ ಒಂದು ಸಾವಿರ ಆನೆಗಳ ಮೇಲಿದ್ದ ಜೋದರು ಪಾಂಚಾಲರನ್ನು ಪ್ರಬುದ್ಧಕರನ್ನು ಒತ್ತಿದರು. ಹತ್ತು ಸಾವಿರ ಪದಾತಿಗಳು ಹೊಳೆ ಹೊಳೆಯುವ ಅಲಗಿನಹಾಗೆ ರಾಜನ ಎರಡು ಪಕ್ಕದಲ್ಲೂ ಮುತ್ತಿದರು.

ಅರ್ಥ:
ಪಡಿಬಲ: ವೈರಿ ಸೇನೆ; ಸಾವಿರ: ಸಹಸ್ರ; ಮತ್ತ: ಅಮಲು, ಮದ; ಗಜಘಟೆ: ಆನೆಯ ಗುಂಪು; ತೆತ್ತು: ಕುಂದಣಿಸು, ಕೂಡಿಸು; ತೂಳು: ಆಕ್ರಮಣ; ಪಾಯದಳ: ಕಾಲಾಳು, ಸೈನಿಕ; ಹೊಗರು: ಕಾಂತಿ, ಪ್ರಕಾಶ; ಅಲಗು: ಆಯುಧದ ಮೊನೆ, ಕತ್ತಿ; ಹೊಳಹು: ಪ್ರಕಾಶ; ಮುತ್ತು: ಆವರಿಸು; ಅವನೀಪತಿ: ರಾಜ; ಮೋಹರ: ಯುದ್ಧ; ಬಾಹೆ: ಪಕ್ಕ, ಪಾರ್ಶ್ವ;

ಪದವಿಂಗಡಣೆ:
ಇತ್ತ+ ಪಡಿಬಲವಾಗಿ +ಸಾವಿರ
ಮತ್ತ+ಗಜ+ಘಟೆ +ಕೌರವೇಂದ್ರನ
ತೆತ್ತಿಗರು +ತೂಳಿದರು+ ಪಾಂಚಾಲ+ಪ್ರಬುದ್ಧಕರ
ಹತ್ತುಸಾವಿರ +ಪಾಯದಳ+ ಹೊಗರ್
ಎತ್ತಿದ್+ಅಲಗಿನ +ಹೊಳಹಿನಂತಿರೆ
ಮುತ್ತಿತ್+ಅವನೀಪತಿಯ +ಮೋಹರದ್+ಎರಡು +ಬಾಹೆಯಲಿ

ಅಚ್ಚರಿ:
(೧) ಇತ್ತ, ಮತ್ತ; ತೆತ್ತಿ, ಎತ್ತಿ, ಮುತ್ತಿ – ಪ್ರಾಸ ಪದಗಳು

ಪದ್ಯ ೪೦: ಅರ್ಜುನನ ಮೇಲೆ ಯಾರು ಎರಗಿದರು?

ಮತ್ತೆ ಮೇಲೊಡಗವಿದ ನೂರರು
ವತ್ತು ಗಜ ರಥಯೂಥ ನೂರಿ
ಪ್ಪತ್ತು ಮೂನೂರಶ್ವಚಯ ಸಾವಿರದ ನಾನೂರು
ಪತ್ತಿ ಮರಳೈವತ್ತು ಗಜ ಮೂ
ವತ್ತು ರಥವಿನ್ನೂರು ಹಯವರು
ವತ್ತು ನಾನೂರಿಂದ ಮೇಲಾಯ್ತುಳಿದ ಪಾಯದಳ (ಗದಾ ಪರ್ವ, ೧ ಸಂಧಿ, ೪೦ ಪದ್ಯ)

ತಾತ್ಪರ್ಯ:
ಮತ್ತೆ ಮೇಲೆ ಬಿದ್ದ ಣೂರರುವತ್ತು ಆನೆಗಳು, ನೂರಿಪ್ಪತ್ತು ರಥಗಳು, ಮುನ್ನೂರು ಕುದುರೆಗಳು ಮತ್ತೆ ಐವತ್ತು ಆನೆಗಳು, ಮೂವತ್ತು ರಥಗಳು, ಇನ್ನೂರು ಕುದುರೆಗಳು, ನಾನೂರಕ್ಕೂ ಹೆಚ್ಚು ಕಾಲಾಳುಗಳು ಅರ್ಜುನನ ಮೇಲೆ ಬಿದ್ದರು.

ಅರ್ಥ:
ಒಡಗವಿ: ತಕ್ಷಣವೇ ಮುತ್ತಿಗೆ ಹಾಕು; ನೂರು: ಶತ; ಗಜ: ಆನೆ; ರಥ: ಬಂಡಿ; ಯೂಥ: ಗುಂಪು, ಹಿಂಡು, ಸೈನ್ಯ; ಅಶ್ವ: ಕುದುರೆ; ಚಯ: ಗುಂಪು; ಪತ್ತಿ: ಕಾಲಾಳು; ಮರಳು: ಹಿಂದಿರುಗು; ಉಳಿದ: ಮಿಕ್ಕ; ಪಾಯದಳ: ಕಾಲಾಳು;

ಪದವಿಂಗಡಣೆ:
ಮತ್ತೆ +ಮೇಲ್+ಒಡ+ಕವಿದ +ನೂರ್
ಅರುವತ್ತು +ಗಜ +ರಥಯೂಥ +ನೂರಿ
ಪ್ಪತ್ತು +ಮೂನೂರ್+ಅಶ್ವಚಯ +ಸಾವಿರದ +ನಾನೂರು
ಪತ್ತಿ +ಮರಳ್+ಐವತ್ತು +ಗಜ +ಮೂ
ವತ್ತು +ರಥವ್+ಇನ್ನೂರು +ಹಯವ್+ಅರು
ವತ್ತು +ನಾನೂರಿಂದ +ಮೇಲಾಯ್ತ್+ಉಳಿದ +ಪಾಯದಳ

ಅಚ್ಚರಿ:
(೧) ಅರುವತ್ತು, ಇಪ್ಪತ್ತು, ಮೂವತ್ತು, ಐವತ್ತು – ಸಂಖ್ಯೆಗಳ ಬಳಕೆ
(೨) ಯೂಥ, ಚಯ – ಸಮಾನಾರ್ಥಕ ಪದ

ಪದ್ಯ ೩೯: ಯಮನ ನಗರಿಗೆ ಎಷ್ಟು ಮಂದಿ ಹೋದರು?

ಕರಿಘಟೆಗಳೈನೂರು ರಥ ಸಾ
ವಿರದ ಮೂನೂರೆರಡು ಸಾವಿರ
ತುರಗದಳವೆಂಬತ್ತು ಸಾವಿರ ವಿಗಡ ಪಾಯದಳ
ತೆರಳಿತಂತಕಪುರಿಗೆ ಪುನರಪಿ
ತುರಗ ಸಾವಿರ ನೂರು ರಥ ಮದ
ಕರಿಗಳಿನ್ನೂರೆಂಟು ಸಾವಿರಗಣಿತ ಪಾಯದಳ (ಗದಾ ಪರ್ವ, ೧ ಸಂಧಿ, ೩೯ ಪದ್ಯ)

ತಾತ್ಪರ್ಯ:
ಐನೂರು ಆನೆಗಲೂ, ಸಾವಿರದ ಮುನ್ನೂರೆರಡು ರಥಗಳು, ಎಂಬತ್ತು ಸಾವಿರ ಕಾಲಾಳುಗಳು, ಯಮನಗರಿಗೆ ಹೋದರು. ಮತ್ತೆ ಸಾವಿರ ಕುದುರೆಗಳು, ನೂರು ರಥಗಳು ಇನ್ನೂರೆಂಟು ಆನೆಗಳು, ಲೆಕ್ಕವಿಲ್ಲದಷ್ಟು ಕಾಲಾಳುಗಳು ಅಲ್ಲಿಗೇ ಹೋದರು.

ಅರ್ಥ:
ಕರಿಘಟೆ: ಆನೆಗಳ ಗುಂಪು; ರಥ: ಬಂಡಿ; ಸಾವಿರ: ಸಹಸ್ರ; ತುರಗ: ಅಶ್ವ, ಕುದುರೆ; ವಿಗಡ: ಶೌರ್ಯ, ಪರಾಕ್ರಮ; ಪಾಯದಳ: ಕಾಲಾಳು; ತೆರಳು: ಗಮಿಸು; ಅಂತಕಪುರ: ಯಮನ ಊರು, ನರಕ; ಪುನರಪಿ: ಮತ್ತೆ; ಮದ: ಮತ್ತು, ಅಮಲು; ಅಗಣಿತ: ಲೆಕ್ಕವಿಲ್ಲದ; ಪಾಯದಳ: ಕಾಲಾಳು;

ಪದವಿಂಗಡಣೆ:
ಕರಿಘಟೆಗಳ್+ಐನೂರು +ರಥ+ ಸಾ
ವಿರದ +ಮೂನೂರೆರಡು +ಸಾವಿರ
ತುರಗದಳವ್+ಎಂಬತ್ತು +ಸಾವಿರ +ವಿಗಡ +ಪಾಯದಳ
ತೆರಳಿತ್+ಅಂತಕಪುರಿಗೆ +ಪುನರಪಿ
ತುರಗ +ಸಾವಿರ +ನೂರು +ರಥ +ಮದ
ಕರಿಗಳ್+ಇನ್ನೂರೆಂಟು +ಸಾವಿರ್+ಅಗಣಿತ +ಪಾಯದಳ

ಅಚ್ಚರಿ:
(೧) ಕರಿ, ತುರಗ, ಪಾಯದಳ – ೧,೬; ೩,೫ ಸಾಲಿನ ಮೊದಲ ಪದ; ೩, ೬ ಸಾಲಿನ ಕೊನೆ ಪದ

ಪದ್ಯ ೨೮: ಎಷ್ಟು ಸೈನಿಕರು ಯುದ್ಧಕ್ಕೆ ಮುನ್ನುಗ್ಗಿದರು?

ನೂಕಿತೊಂದೇ ವಾಘೆಯಲಿ ಹಯ
ನಾಕು ಸಾವಿರ ರಥದ ಜೋಡಿಯ
ಜೋಕೆ ಕವಿದುದು ಮೂರು ಸಾವಿರ ರಾಜಪುತ್ರರಲಿ
ತೋಕುವಂಬಿನ ಜೋದರೊಗ್ಗಿನೊ
ಳೌಕಿದವು ಸಾವಿರ ಮದೇಭಾ
ನೀಕ ಬೊಬ್ಬೆಯ ಲಳಿಯಲೌಕಿತು ಲಕ್ಕ ಪಾಯದಳ (ಗದಾ ಪರ್ವ, ೧ ಸಂಧಿ, ೨೮ ಪದ್ಯ)

ತಾತ್ಪರ್ಯ:
ಒಂದೇ ಬಾರಿಗೆ ನಾಲ್ಕು ಸಾವಿರ ರಥಗಳು ಮೂಮ್ದಾದವು, ಮೂರುಸಾವಿರ ರಾಜಪುತ್ರರು ಮುತ್ತಿಗೆ ಹಾಕಿದರು. ಒಂದು ಸಾವಿರ ಜೋದರು ಬಾಣಗಳನ್ನು ಬಿಡುತ್ತಾ ಮುನ್ನುಗ್ಗಿದರು. ಒಂದು ಸಾವಿರ ಮತ್ತ ಆನೆಗಳು ಬೊಬ್ಬೆಯಿಡುತ್ತಾ ರಭಸದಿಂದ ಮುನ್ನುಗ್ಗಿತು. ಒಂದು ಲಕ್ಷ ಕಾಲಾಳುಗಳು ಯುದ್ಧಕ್ಕೆ ಮುಗಿಬಿದ್ದರು.

ಅರ್ಥ:
ನೂಕು: ತಳ್ಳು; ವಾಘೆ: ಲಗಾಮು; ಹಯ: ಕುದುರೆ; ಸಾವಿರ: ಸಹಸ್ರ; ರಥ: ಬಂಡಿ; ಜೋಡಿ: ಜೊತೆ; ಜೋಕೆ: ಎಚ್ಚರಿಕೆ, ಜಾಗರೂಕತೆ; ಕವಿ: ಆವರಿಸು; ಪುತ್ರ: ಕುಮಾರ; ತೋಕು: ಎಸೆ, ಬಾಣವನ್ನು ಪ್ರಯೋಗಿಸು; ಅಂಬು: ಬಾಣ; ಜೋದರು: ಆನೆ ಮೇಲೆ ಕೂತು ಹೋರಾಟ ಮಾಡುವವ; ಒಗ್ಗು: ಗುಂಪು, ಸಮೂಹ; ಔಕು: ಒತ್ತು, ಹಿಚುಕು; ಮದ: ಮತ್ತು, ಅಮಲು; ಇಭ: ಆನೆ; ಅನೀಕ: ಗುಂಪು; ಬೊಬ್ಬೆ: ಗರ್ಜಿಸು; ಲಳಿ: ರಭಸ, ಆವೇಶ; ಲಕ್ಕ: ಲಕ್ಷ; ಪಾಯದಳ: ಸೈನಿಕ;

ಪದವಿಂಗಡಣೆ:
ನೂಕಿತ್+ಒಂದೇ +ವಾಘೆಯಲಿ +ಹಯ
ನಾಕು +ಸಾವಿರ +ರಥದ +ಜೋಡಿಯ
ಜೋಕೆ +ಕವಿದುದು +ಮೂರು+ ಸಾವಿರ+ ರಾಜ+ಪುತ್ರರಲಿ
ತೋಕುವಂಬಿನ +ಜೋದರ್+ಒಗ್ಗಿನೊಳ್
ಔಕಿದವು +ಸಾವಿರ +ಮದ+ಇಭಾ
ನೀಕ +ಬೊಬ್ಬೆಯ +ಲಳಿಯಲ್+ಔಕಿತು +ಲಕ್ಕ+ ಪಾಯದಳ

ಪದ್ಯ ೪: ಶಕುನಿಯು ಎಷ್ಟು ಸೈನ್ಯದೊಡನೆ ನಿಂತಿದ್ದನು?

ಕರಿಘಟೆಗಳೈನೂರು ಮೂವ
ತ್ತೆರಡು ಸಾವಿರ ಪಾಯದಳ ಸಾ
ವಿರದ ನೂರು ವರೂಥ ವಂಗಡದವನಿಪರು ಸಹಿತ
ತುರುಕ ಬರ್ಬರ ಪಾರಸೀಕರ
ತುರಗವೈಸಾವಿರ ಸಹಿತ ಮೋ
ಹರಿಸಿ ನಿಂದನು ಶಕುನಿ ಥಟ್ಟಿನ ಬಲದ ಬಾಹೆಯಲಿ (ಗದಾ ಪರ್ವ, ೧ ಸಂಧಿ, ೪ ಪದ್ಯ)

ತಾತ್ಪರ್ಯ:
ಐನೂರು ಆನೆಗಳು, ಮೂವತ್ತೆರಡು ಸಾವಿರ ಕಾಲಾಳುಗಳು, ಸಾವಿರದನೂರು ರಥಗಳು, ಕೆಲ ರಾಜರು, ತುರುಕ, ಬರ್ಬರ ಪಾರಸೀಕರ ಐದು ಸಾವಿರ ಕುದುರೆಗಳೊಡನೆ ಶಕುನಿಯು ಸೈನ್ಯದ ಬಲಭಾಗದಲ್ಲಿದ್ದನು.

ಅರ್ಥ:
ಕರಿಘಟೆ: ಆನೆಗಳ ಗುಂಪು; ಸಾವಿರ: ಸಹಸ್ರ; ಪಾಯದಳ: ಕಾಲಾಳು; ನೂರು: ಶತ; ವರೂಥ: ತೇರು, ರಥ; ಅವನಿಪ: ರಾಜ; ಸಹಿತ: ಜೊತೆ; ತುರಗ: ಅಶ್ವ; ಸಹಿತ: ಜೊತೆ; ಮೋಹರ: ಯುದ್ಧ; ಥಟ್ಟು: ಗುಂಪು; ಬಲ: ಸೈನ್ಯ; ಬಾಹೆ: ಪಕ್ಕ, ಪಾರ್ಶ್ವ;

ಪದವಿಂಗಡಣೆ:
ಕರಿಘಟೆಗಳ್+ಐನೂರು +ಮೂವ
ತ್ತೆರಡು +ಸಾವಿರ +ಪಾಯದಳ+ ಸಾ
ವಿರದ +ನೂರು +ವರೂಥ +ವಂಗಡದ್+ಅವನಿಪರು+ ಸಹಿತ
ತುರುಕ +ಬರ್ಬರ +ಪಾರಸೀಕರ
ತುರಗವ್+ಐಸಾವಿರ+ ಸಹಿತ+ ಮೋ
ಹರಿಸಿ +ನಿಂದನು +ಶಕುನಿ +ಥಟ್ಟಿನ +ಬಲದ +ಬಾಹೆಯಲಿ

ಅಚ್ಚರಿ:
(೧) ಐನೂರು ಐಸಾವಿರ – ಐ ಪದದ ಬಳಕೆ

ಪದ್ಯ ೭೪: ಕೌರವನೊಡನೆ ಯಾವ ಸೈನವು ಮುನ್ನುಗ್ಗಿತು?

ರಾಯನೊಡನೆ ಸಮಸ್ತ ಬಲವಡು
ಪಾಯಲೌಕಿತು ಪಾರ್ಥ ಸಾತ್ಯಕಿ
ವಾಯುಸುತರಾಚೆಯಲಿ ಮೇಳೈಸಿತ್ತು ನೃಪಸೇನೆ
ಸಾಯಕದ ಸೂಠಿಗಳ ಸಬಳದ
ಪಾಯದಳ ರಥ ವಾಜಿ ಗಜಘಟೆ
ಲಾಯಶುದ್ಧದ ತೇಜಿ ಹೊಕ್ಕವು ವಾಘೆಸರಿಸದಲಿ (ಶಲ್ಯ ಪರ್ವ, ೩ ಸಂಧಿ, ೭೪ ಪದ್ಯ)

ತಾತ್ಪರ್ಯ:
ಕೌರವನೊಡನೆ ಸಮಸ್ತ ಸೇನೆಯೂ ಮುನ್ನುಗ್ಗಿತು. ಅತ್ತ ಭೀಮ, ಅರ್ಜುನ, ಸಾತ್ಯಕಿಗಳೊಡನೆ ಪಾಂಡವ ಸೇನೆಯೂ ಸೇರಿತು. ಬಾಣ, ಈಟಿಗಳನ್ನು ಹಿಡಿದ ಪದಾತಿಗಳು ರಾವುತರು ಮದಗಜಗಳು ಸನ್ನದ್ಧರಾದವು. ಲಾಯದ ಉತ್ತಮ ಕುದುರೆಗಳು ಸಾಲಾಗಿ ಮುಂದಕ್ಕೆ ಓಡಿಬಂದವು.

ಅರ್ಥ:
ರಾಯ: ರಾಜ; ಒಡನೆ: ಜೊತೆ; ಸಮಸ್ತ: ಎಲ್ಲಾ; ಬಲ: ಸೈನ್ಯ; ಅಡುಪಾಯ: ಇನ್ನೊಂದು ಉಪಾಯ; ಔಕು: ನೂಕು; ಸುತ: ಮಗ; ಆಚೆ: ಹೊರಗೆ; ಮೇಳೈಸು: ಗುಂಪು; ನೃಪ: ರಾಜ; ಸಾಯಕ: ಬಾಣ; ಸೂಠಿ: ವೇಗ; ಸಬಳ: ಈಟಿ; ಪಾಯದಳ: ಸೈನಿಕ, ಕಾಲಾಳು; ರಥ: ಬಂಡಿ; ವಾಜಿ: ಕುದುರೆ; ಗಜಘಟೆ: ಆನೆಯ ಗುಂಪು; ಲಾಯ: ಅಶ್ವಶಾಲೆ; ಶುದ್ಧ: ನಿರ್ಮಲ; ತೇಜಿ: ಕುದುರೆ; ಹೊಕ್ಕು: ಸೇರು; ವಾಘೆ: ಲಗಾಮು; ಸರಿಸ: ನೇರವಾಗಿ, ಸರಳವಾಗಿ;

ಪದವಿಂಗಡಣೆ:
ರಾಯನೊಡನೆ +ಸಮಸ್ತ +ಬಲವ್+ಅಡು
ಪಾಯಲ್+ಔಕಿತು +ಪಾರ್ಥ +ಸಾತ್ಯಕಿ
ವಾಯುಸುತರ್+ಆಚೆಯಲಿ +ಮೇಳೈಸಿತ್ತು +ನೃಪಸೇನೆ
ಸಾಯಕದ +ಸೂಠಿಗಳ+ ಸಬಳದ
ಪಾಯದಳ +ರಥ +ವಾಜಿ +ಗಜಘಟೆ
ಲಾಯ+ಶುದ್ಧದ +ತೇಜಿ +ಹೊಕ್ಕವು +ವಾಘೆ+ಸರಿಸದಲಿ

ಅಚ್ಚರಿ:
(೧) ರಾಯ, ನೃಪ; ಮೇಳೈಸು, ಘಟೆ – ಸಮಾನರ್ಥಕ ಪದ
(೨) ಸ ಕಾರದ ತ್ರಿವಳಿ ಪದ – ಸಾಯಕದ ಸೂಠಿಗಳ ಸಬಳದ
(೩) ಶ್ರೇಷ್ಠವಾದ ಕುದುರೆ ಎಂದು ಹೇಳಲು – ಲಾಯಶುದ್ಧದ ತೇಜಿ