ಪದ್ಯ ೩೦: ಶಕುನಿ ಸಹದೇವರ ಯುದ್ಧ ಹೇಗಿತ್ತು?

ತೇರು ಹುಡಿಹುಡಿಯಾಗೆ ಹೊಯ್ದನು
ವಾರುವನ ಮೇಲುಗಿದಡಾಯುಧ
ದಾರುಭಟೆಯಲಿ ಬಿಟ್ಟನಾ ಸಹದೇವನಭಿಮುಖಕೆ
ವೀರನಹೆಯೋ ಶಕುನಿ ಜೂಜಿನ
ಚೋರವಿದ್ಯೆಯ ಬಿಟ್ಟೆಲಾ ಜ
ಜ್ಝಾರನಹೆ ಮಝ ಪೂತೆನುತ ಖಂಡಿಸಿದನಾ ಹಯವ (ಗದಾ ಪರ್ವ, ೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ಶಕುನಿಯ ರಥವು ಪುಡಿ ಪುಡಿಯಾಗಲು, ಕುದುರೆಯನ್ನೇರಿ ಖಡ್ಗವನ್ನು ಝಳುಪಿಸುತ್ತಾ ಜೋರಿನಿಮ್ದ ಸಹದೇವನ ಇದಿರಿಗೆ ಹೋದನು. ಸಹದೇವನು ಶಕುನಿ ಭಲೇ ಮೋಸದ ಕಳ್ಳ ಜೂಜನ್ನು ಬಿಟ್ಟೆಯಲ್ಲವೇ, ಶೂರನಾಗಿದ್ದೀಯೇ? ಎನ್ನುತ್ತಾ ಕುದುರೆಯನ್ನು ಕಡಿದನು.

ಅರ್ಥ:
ತೇರು: ಬಂಡಿ; ಹುಡಿ: ಪುಡಿ; ಹೊಯ್ದು: ಹೊಡೆ; ವಾರುವ: ಕುದುರೆ; ಉಗಿ: ಹೊರಹಾಕು; ಆಯುಧ: ಶಸ್ತ್ರ; ಆರುಭಟೆ: ಆರ್ಭಟ, ಕೂಗು; ಬಿಡು: ತ್ಯಜಿಸು; ಅಭಿಮುಖ: ಎದುರು; ವೀರ: ಶೂರ; ಜೂಜು: ದ್ಯೂತ; ಚೋರ: ಕಳ್ಳತನ; ವಿದ್ಯೆ: ಜ್ಞಾನ; ಜಜ್ಝಾರ: ಶಕ್ತಿ, ಪರಾಕ್ರಮ; ಮಝ: ಭಲೇ; ಪೂತ: ಪಾವನವಾದುದು; ಖಂಡಿಸು: ತುಂಡು ಮಾಡು; ಹಯ: ಕುದುರೆ;

ಪದವಿಂಗಡಣೆ:
ತೇರು +ಹುಡಿಹುಡಿಯಾಗೆ +ಹೊಯ್ದನು
ವಾರುವನ +ಮೇಲ್+ಉಗಿದಡ್+ಆಯುಧದ್
ಆರುಭಟೆಯಲಿ +ಬಿಟ್ಟನಾ +ಸಹದೇವನ್+ಅಭಿಮುಖಕೆ
ವೀರನಹೆಯೋ +ಶಕುನಿ +ಜೂಜಿನ
ಚೋರವಿದ್ಯೆಯ +ಬಿಟ್ಟೆಲಾ +ಜ
ಜ್ಝಾರನಹೆ +ಮಝ +ಪೂತೆನುತ+ ಖಂಡಿಸಿದನಾ +ಹಯವ

ಅಚ್ಚರಿ:
(೧) ಕುದುರೆಮೇಲೆ ಕೂತನು ಎಂದು ಹೇಳಲು – ವಾರುವನ ಮೇಲುಗಿದಡಾಯುಧದಾರುಭಟೆಯಲಿ ಬಿಟ್ಟನಾ ಸಹದೇವನಭಿಮುಖಕೆ

ಪದ್ಯ ೬೩: ಶಕುನಿಯು ಎಷ್ಟು ಸೈನ್ಯದೊಡನೆ ಬಂದನು?

ನೂರು ಗಜವಕ್ಕಾಡಲವನಿಪ
ನೇರಿದನು ವಾರುವನನೆಡದಲಿ
ಜಾರಿದನು ಸೂಠಿಯಲಿ ದುವ್ವಾಳಿಸಿ ತುರಂಗಮವ
ಆರು ಸಾವಿರ ಕುದುರೆ ರಥವೈ
ನೂರು ಗಜಘಟೆ ನೂರು ಮೂವ
ತ್ತಾರು ಸಾವಿರ ಪಾಯದಳದಲಿ ಬಂದನಾ ಶಕುನಿ (ಗದಾ ಪರ್ವ, ೧ ಸಂಧಿ, ೬೩ ಪದ್ಯ)

ತಾತ್ಪರ್ಯ:
ತನ್ನ ಸುತ್ತಲ್ಲಿದ್ದ ನೂರಾನೆಗಳು, ನಷ್ಟಗೊಳ್ಳಲು, ದುರ್ಯೋಧನನು ಒಂದು ಕುದುರೆಯನ್ನೇರಿ ಅದನ್ನು ವೇಗವಾಗಿ ಓಡಿಸುತ್ತಾ ತಪ್ಪಿಸಿಕೊಂಡು ಓಡಿಹೋದನು. ಆಗ ಶಕುನಿಯು ಆರು ಸಾವಿರ ಕುದುರೆಗಳು, ಐನೂರು ರಥಗಳು, ನೂರು ಆನೆಗಳು, ಮೂವತ್ತಾರು ಸಾವಿರ ಕಾಲಾಳುಗಳೊಡನೆ ಬಂದನು.

ಅರ್ಥ:
ನೂರು: ಶತ; ಗಜ: ಆನೆ; ಅಕ್ಕಾಡು: ನಾಶವಾಗು; ಅವನಿಪ: ರಾಜ; ಏರು: ಹತ್ತು; ವಾರುವ: ಕುದುರೆ; ಎಡ: ವಾಮಭಾಗ; ಜಾರು: ಕುಗ್ಗು; ಸೂಠಿ: ವೇಗ; ದುವ್ವಾಳಿಸು: ತೀವ್ರಗತಿ, ಓಡು; ತುರಂಗ: ಕುದುರೆ; ರಥ: ಬಂಡಿ; ಘಟೆ: ಗುಂಪು; ಪಾಯದಳ: ಸೈನಿಕ; ಬಂದು: ಆಗಮಿಸು;

ಪದವಿಂಗಡಣೆ:
ನೂರು +ಗಜವ್+ಅಕ್ಕಾಡಲ್+ ಅವನಿಪನ್
ಏರಿದನು +ವಾರುವನನ್+ಎಡದಲಿ
ಜಾರಿದನು+ ಸೂಠಿಯಲಿ +ದುವ್ವಾಳಿಸಿ +ತುರಂಗಮವ
ಆರು +ಸಾವಿರ +ಕುದುರೆ +ರಥವ್+
ಐನೂರು +ಗಜಘಟೆ +ನೂರು +ಮೂವ
ತ್ತಾರು +ಸಾವಿರ +ಪಾಯದಳದಲಿ +ಬಂದನಾ +ಶಕುನಿ

ಅಚ್ಚರಿ:
(೧) ವಾರುವ, ತುರಂಗ, ಕುದುರೆ – ಸಮಾನಾರ್ಥಕ ಪದ
(೨) ಪಲಾಯನದ ಪರಿ – ಅವನಿಪನೇರಿದನು ವಾರುವನನೆಡದಲಿ ಜಾರಿದನು ಸೂಠಿಯಲಿ ದುವ್ವಾಳಿಸಿ ತುರಂಗಮವ

ಪದ್ಯ ೨೫: ವೀರರು ಯುದ್ಧಕ್ಕೆ ಹೇಗೆ ಮರುಳಿದರು?

ವಾರುವಂಗಳ ಬಿಗುಹನೇರಿಸಿ
ವಾರಣಂಗಳ ಗುಳವ ಜೋಡಿಸಿ
ತೇರುಗಳ ಕೀಲಚ್ಚು ಕೂಬರಯುಗವನಾರೈದು
ವೀರಪಟ್ಟವ ರಚಿಸಿ ಕಂಕಣ
ದಾರವನು ಕಟ್ಟಿದರು ಸಂಗರ
ವೀರಸಿರಿಯ ವಿವಾಹಸಮಯದ ಸೌಮನಸ್ಯದಲಿ (ಗದಾ ಪರ್ವ, ೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕುದುರೆಗಳ ಜೀನನ್ನು ಕಟ್ಟಿ, ಆನೆಗಳ ಗುಳಗಲನ್ನು ಜೋಡಿಸಿ, ರಥಗಳ ಕೀಲುಗಳು, ಅಚ್ಚು, ನೊಗಗಳನ್ನು ಪರೀಕ್ಷಿಸಿ, ವೀರಪಟ್ಟವನ್ನು ಧರಿಸಿ, ಕಂಕಣದಾರಗಳನ್ನು ಕಟ್ಟಿಸಿಕೊಂಡು, ಯುದ್ಧದ ವೀರಲಕ್ಷ್ಮಿಯೊಡನೆ ವಿವಾಹವಾಗುವ ಸಂತೋಷದಿಂದ ಕುರುಸೇನೆಯ ವೀರರು ಯುದ್ಧಕ್ಕೆ ಮರಳಿದರು.

ಅರ್ಥ:
ವಾರುವ: ಕುದುರೆ, ಅಶ್ವ; ಬಿಗುಹ: ಬಿಗಿ, ಗಟ್ಟಿ; ಏರು: ಹೆಚ್ಚಾಗು; ವಾರಣ: ಆನೆ; ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ಜೋಡಿಸು: ಕೂಡಿಸು; ತೇರು: ಬಂಡಿ; ಕೀಲು: ಅಗುಳಿ; ಕೂಬರ: ಬಂಡಿಯ ಈಸು, ಬಾವುಟ; ಪಟ್ಟ: ಬಟ್ಟೆ, ವಸ್ತ್ರ; ರಚಿಸು: ನಿರ್ಮಿಸು; ಕಂಕಣ: ಕಡಗ, ಬಳೆ; ದಾರ: ನೂಲು; ಕಟ್ಟು: ಧರಿಸು; ಸಂಗರ: ಯುದ್ಧ; ವೀರಸಿರಿ: ವಿಜಯಲಕ್ಷ್ಮಿ; ವಿವಾಹ: ಮದುವೆ; ಸಮಯ: ಕಾಲ; ಸೌಮನ: ಸಂತಸ; ಆರೈದು: ಉಪಚರಿಸು;

ಪದವಿಂಗಡಣೆ:
ವಾರುವಂಗಳ +ಬಿಗುಹನೇರಿಸಿ
ವಾರಣಂಗಳ +ಗುಳವ +ಜೋಡಿಸಿ
ತೇರುಗಳ +ಕೀಲಚ್ಚು +ಕೂಬರಯುಗವನ್+ಆರೈದು
ವೀರಪಟ್ಟವ +ರಚಿಸಿ +ಕಂಕಣ
ದಾರವನು +ಕಟ್ಟಿದರು +ಸಂಗರ
ವೀರಸಿರಿಯ +ವಿವಾಹಸಮಯದ +ಸೌಮನಸ್ಯದಲಿ

ಅಚ್ಚರಿ:
(೧) ವಾರುವ, ವಾರಣ – ಪದಗಳ ಬಳಕೆ

ಪದ್ಯ ೧೪: ಪರಾಕ್ರಮಿಗಳು ಹೇಗೆ ಓಡಿದರು?

ಬಿರುದ ಬಿಸುಟರು ಧ್ವಜದ ಕಂಬವ
ಹರಿಯ ಹೊಯ್ದರು ಕಾಲ ತೊಡರನು
ಧರೆಗೆ ಬಿಸುಟರು ಹಡಪ ಬಾಹಿಯ ಚಮರಧಾರಿಗರು
ದೊರೆಗಳುಳಿದರು ಬೆದರಿ ರಥದಲಿ
ಕರಿಗಳಲಿ ವಾರುವದಿನಿಳೆಗು
ಪ್ಪರಿಸಿದರು ಹರಹಿನಲಿ ಹಾಯ್ದರು ಹೊತ್ತ ದುಗುಡದಲಿ (ಗದಾ ಪರ್ವ, ೧ ಸಂಧಿ, ೧೪ ಪದ್ಯ)

ತಾತ್ಪರ್ಯ:
ಬಿರುದಿನ ಹಲಗೆಯನ್ನು ಎಸೆದರು, ಧ್ವಜದ ಕಂಬಗಳನ್ನು ಹೊಡೆದುರುಳಿಸಿದರು. ಕಾಲಿಅನ್ ಪೆಂಡೆಯವನ್ನು ಭೂಮಿಗೆಸೆದರು. ಹಡಪ ಛತ್ರಚಾಮರಧಾರಿಗಳು ಅವನ್ನು ಕೆಳಗೆಸೆದರು. ಆಗ ರಥಿಕರೇ ರಥದಲ್ಲಿ ಉಳಿದರು. ರಥ, ಆನೆ, ಕುದುರೆಗಳನ್ನು ಹತ್ತಿದ ಸುಭಟರು ಭೂಮಿಗೆ ಧುಮುಕಿ ದೂರಕ್ಕೋಡಿದರು.

ಅರ್ಥ:
ಬಿರುದು: ಗೌರವ ಸೂಚಕ ಪದ; ಬಿಸುಟು: ಹೊರಹಾಕು; ಧ್ವಜ: ಬಾವುಟ; ಕಂಬ: ಮಾಡಿನ ಆಧಾರಕ್ಕೆ ನಿಲ್ಲಿಸುವ ಮರ, ಕಲ್ಲು; ಹರಿ: ಕಡಿ, ಕತ್ತರಿಸು; ಹೊಯ್ದು: ಹೊಡೆ; ಕಾಲ: ಪಾದ; ತೊಡರು: ಸಂಬಂಧ, ಸಂಕೋಲೆ; ಧರೆ: ಭೂಮಿ; ಹಡಪ: ಕೈಚೀಲ; ಚಮರಧಾರಿ: ಚಾಮರವನ್ನು ಹಿಡಿದವ; ದೊರೆ: ರಾಜ; ಉಳಿದ: ಮಿಕ್ಕ; ಬೆದರು: ಹೆದರು, ಭಯಗೊಳ್ಳು; ರಥ: ಬಂಡಿ; ಕರಿ: ಆನೆ; ವಾರುವ: ಕುದುರೆ; ಇಳೆ: ಭೂಮಿ; ಅಪ್ಪರಿಸು: ತಟ್ಟು, ತಾಗು; ಹರಹು: ವಿಸ್ತಾರ, ವೈಶಾಲ್ಯ; ಹಾಯ್ದು: ಹೊಡೆ; ಹೊತ್ತು: ಧರಿಸು; ಧುಗುಡ: ದುಃಖ;

ಪದವಿಂಗಡಣೆ:
ಬಿರುದ+ ಬಿಸುಟರು +ಧ್ವಜದ +ಕಂಬವ
ಹರಿಯ +ಹೊಯ್ದರು +ಕಾಲ +ತೊಡರನು
ಧರೆಗೆ +ಬಿಸುಟರು +ಹಡಪ+ ಬಾಹಿಯ +ಚಮರಧಾರಿಗರು
ದೊರೆಗಳ್+ಉಳಿದರು +ಬೆದರಿ +ರಥದಲಿ
ಕರಿಗಳಲಿ +ವಾರುವದಿನ್+ಇಳೆಗ್
ಉಪ್ಪರಿಸಿದರು +ಹರಹಿನಲಿ +ಹಾಯ್ದರು +ಹೊತ್ತ +ದುಗುಡದಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹರಹಿನಲಿ ಹಾಯ್ದರು ಹೊತ್ತ
(೨) ಬಿಸುಟರು, ಉಪ್ಪರಿಸಿದರು – ಪದಗಳ ಬಳಕೆ

ಪದ್ಯ ೫೬: ಧರ್ಮಜನ ಸಾರಥಿಯು ರಥವನ್ನೆಲ್ಲಿಗೆ ಕೊಂಡೊಯ್ದನು?

ವಾರುವದ ವೈಚಿತ್ರಗತಿಯ ನಿ
ಹಾರದಲಿ ಸಾರಥಿ ನರೇಂದ್ರನ
ತೇರ ತಿರುಗಿಸಿದನು ವಿಘಾತಿಯಲೊಂದು ಬಾಹೆಯಲಿ
ಆರಿ ಹೊಯ್ದನು ಹಯವನಗ್ಗದ
ವಾರಣಾವಳಿಗಳ ಪದಾತಿಯ
ತೇರ ತೆಕ್ಕೆಯನಿಕ್ಕಿದನು ಪ್ರತ್ಯೇಕ ಸಾವಿರವ (ಶಲ್ಯ ಪರ್ವ, ೩ ಸಂಧಿ, ೫೬ ಪದ್ಯ)

ತಾತ್ಪರ್ಯ:
ಧರ್ಮಜನ ಸಾರಥಿಯು ರಥದ ಕುದುರೆಗಳನ್ನು ವಿಚಿತ್ರವಾಗಿ ನಡೆಸಿ ಒಂದು ಪಕ್ಕಕ್ಕೆ ಕೊಂಡೊಯ್ದನು. ಶಲ್ಯನು ಕೂಗುತ್ತಾ ಕುದುರೆ, ಆನೆ ಪದಾತಿ ತೇರುಗಳನ್ನು ಸಹಸ್ರ ಸಂಖ್ಯೆಯಲ್ಲಿ ಕೊಂದನು.

ಅರ್ಥ:
ವಾರುವ: ಅಶ್ವ, ಕುದುರೆ; ವೈಚಿತ್ರ: ಆಶ್ಚರ್ಯಕರವಾದುದು; ಗತಿ: ವೇಗ; ನಿಹಾರ: ಹಿಂದಕ್ಕೆ ಸರಿಯುವುದು; ಸಾರಥಿ: ಸೂತ; ನರೇಂದ್ರ: ರಾಜ; ತೇರು: ಬಂಡಿ; ತಿರುಗಿಸು: ಸುತ್ತು, ಸಂಚರಿಸು; ವಿಘಾತ: ನಾಶ, ಧ್ವಂಸ; ಬಾಹೆ: ಪಕ್ಕ, ಪಾರ್ಶ್ವ; ಹೊಯ್ದು: ಹೊಡೆ; ಹಯ: ಕುದುರೆ; ಅಗ್ಗ: ಶ್ರೇಷ್ಠ; ವಾರಣ: ಆನೆ; ಆವಳಿ: ಗುಂಪು; ಪದಾತಿ: ಸೈನಿಕ, ಕಾಲಾಳು; ತೇರು: ಬಂಡಿ; ತೆಕ್ಕೆ: ಗುಂಪು, ಸಮೂಹ; ಇಕ್ಕು: ಇರಿಸು, ಇಡು; ಪ್ರತ್ಯೇಕ: ಬೇರೆ; ಸಾವಿರ: ಸಹಸ್ರ;

ಪದವಿಂಗಡಣೆ:
ವಾರುವದ+ ವೈಚಿತ್ರ+ಗತಿಯ+ ನಿ
ಹಾರದಲಿ+ ಸಾರಥಿ+ ನರೇಂದ್ರನ
ತೇರ +ತಿರುಗಿಸಿದನು +ವಿಘಾತಿಯಲೊಂದು +ಬಾಹೆಯಲಿ
ಆರಿ+ ಹೊಯ್ದನು +ಹಯವನ್+ಅಗ್ಗದ
ವಾರಣಾವಳಿಗಳ +ಪದಾತಿಯ
ತೇರ +ತೆಕ್ಕೆಯನ್+ಇಕ್ಕಿದನು +ಪ್ರತ್ಯೇಕ +ಸಾವಿರವ

ಅಚ್ಚರಿ:
(೧) ತೇರ – ೩, ೬ ಸಾಲಿನ ಮೊದಲ ಪದ
(೨) ಧರ್ಮಜ ಎಂದು ಹೇಳಲು ನರೇಂದ್ರ ಪದದ ಬಳಕೆ

ಪದ್ಯ ೫೪: ಧರ್ಮಜನ ಕೈಚಳಕವು ಹೇಗೆ ತೋರಿತು?

ತೇರು ಹುಡಿಹುಡಿಯಾಯ್ತು ಹೂಡಿದ
ವಾರುವಂಗಳನಲ್ಲಿ ಕಾಣೆನು
ಸಾರಥಿಯ ತಲೆ ನೆಲದೊಳದ್ದುದು ಮಿದುಳ ಜೊಂಡಿನಲಿ
ಆರಿ ಬೊಬ್ಬಿರಿದರಸನೆಸಲು
ಬ್ಬಾರದಲಿ ಕಣೆಯಡಸಿದವು ಕೈ
ವಾರವೇಕೆ ಛಡಾಳಿಸಿತು ಚಪಳತೆ ಯುಧಿಷ್ಠಿರನ (ಶಲ್ಯ ಪರ್ವ, ೩ ಸಂಧಿ, ೫೪ ಪದ್ಯ)

ತಾತ್ಪರ್ಯ:
ಶಲ್ಯನ ರಥವು ಪುಡಿಪುಡಿಯಾಯಿತು. ರಥಕ್ಕೆ ಕಟ್ಟಿದ ಕುದುರೆಗಳು ಅಲ್ಲಿ ಕಾಣಿಸುತ್ತಿಲ್ಲ. ಶಲ್ಯನ ಸಾರಥಿಯ ತಲೆಯು ನೆಲದ ಮೇಲೆ ಬಿದ್ದ ಮಿದುಳಿನ ಜೋಂಡಿನಲ್ಲಿ ಕಾಣದಂತಾಯಿತು. ಧರ್ಮಜನು ಗರ್ಜಿಸಿ ಬೊಬ್ಬಿರಿದು ಬಾಣಗಳನ್ನು ಬಿಡಲು, ಶಲ್ಯನ ಮೇಲೆ ಬಾಣಗಳು ಮುತ್ತಿ ನಟ್ಟವು. ಧರ್ಮಜನ ಕೈಚಳಕ ಅಧಿಕವಾಯಿತು.

ಅರ್ಥ:
ತೇರು: ಬಂಡಿ; ಹುಡಿ: ಪುಡಿ; ಹೂಡು: ನೊಗಹೇರು; ವಾರುವ: ಕುದುರೆ; ಕಾಣು: ತೋರು; ಸಾರಥಿ: ಸೂತ; ತಲೆ: ಶಿರ; ನೆಲ: ಭೂಮಿ; ಅದ್ದು: ಮುಳುಗು; ಮಿದುಳು: ಮಸ್ತಿಷ್ಕ; ಜೋಂಡು: ಜೊತೆ; ಬೊಬ್ಬಿರಿ: ಗರ್ಜಿಸು; ಅರಸ: ರಾಜ; ಎಸಲು: ಬಾಣ ಪ್ರಯೋಗ ಮಾಡು; ಉಬ್ಬಾರ: ಅತಿಶಯ; ಕಣೆ: ಬಾಣ; ಅಡಸು: ಬಿಗಿಯಾಗಿ ಒತ್ತು, ಮುತ್ತು; ಕೈವಾರ: ಸಾಮರ್ಥ್ಯ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಚಪಳ: ಚಂಚಲ;

ಪದವಿಂಗಡಣೆ:
ತೇರು +ಹುಡಿಹುಡಿಯಾಯ್ತು +ಹೂಡಿದ
ವಾರುವಂಗಳನ್+ಅಲ್ಲಿ +ಕಾಣೆನು
ಸಾರಥಿಯ +ತಲೆ +ನೆಲದೊಳ್+ಅದ್ದುದು +ಮಿದುಳ +ಜೊಂಡಿನಲಿ
ಆರಿ +ಬೊಬ್ಬಿರಿದ್+ಅರಸನ್+ಎಸಲ್
ಉಬ್ಬಾರದಲಿ+ ಕಣೆ+ಅಡಸಿದವು +ಕೈ
ವಾರವೇಕೆ+ ಛಡಾಳಿಸಿತು+ ಚಪಳತೆ +ಯುಧಿಷ್ಠಿರನ

ಅಚ್ಚರಿ:
(೧) ಧರ್ಮಜನ ಬಾಣ ಪ್ರಯೋಗದ ರೀತಿ – ಆರಿ ಬೊಬ್ಬಿರಿದರಸನೆಸಲುಬ್ಬಾರದಲಿ ಕಣೆಯಡಸಿದವು

ಪದ್ಯ ೨೩: ಕುದುರೆಗಳ ಸ್ಥಿತಿ ಹೇಗಾಗಿತ್ತು?

ಭಾರಿಸಿತು ಮೈ ಮುಷ್ಟಿಯಲಿ ಲುಳಿ
ಸಾರತರ ಲಂಬಿಸಿತು ತಾಗಿದ
ಕೂರಲಗು ಗರಿದೋರಿದವು ನಿಜ ಹಯದ ಮೈಗಲಲಿ
ಹಾರಿದರ್ಜುನನರಿದನಾ ದೈ
ತ್ಯಾರಿಗೆಂದನು ದೇವ ಬಿನ್ನಹ
ವಾರುವಂಗಳ ವಹಿಲತೆಯ ಚಿತ್ತೈಸಿದಿರೆಯೆಂದ (ದ್ರೋಣ ಪರ್ವ, ೧೦ ಸಂಧಿ, ೨೩ ಪದ್ಯ)

ತಾತ್ಪರ್ಯ:
ಕುದುರೆಗಳ ಮೈ ಭಾರವಾಯಿತು. ಲಗಾಮನ್ನು ಹಿಡಿದೆಳೆದರೆ ಅವು ವೇಗವಾಗಿ ನಡೆಯಲೇ ಇಲ್ಲ. ನಟ್ಟಬಾಣಗಳ ಗರಿಗಳು ಅವುಗಳ ಮೈಯಲ್ಲಿ ಕಾಣಿಸಿದವು. ಇದನ್ನು ನೋಡಿದ ಅರ್ಜುನನು ದೇವಾ ಒಂದು ಕೋರಿಕೆ, ಕುದುರೆಗಳ ವೇಗವನ್ನು ಗಮನಿಸಿದಿರಾ ಎಂದು ಕೃಷ್ಣನನ್ನು ಕೇಳಿದನು.

ಅರ್ಥ:
ಭಾರ: ಹೊರೆ, ತೂಕ; ಮೈ: ತನು, ದೇಹ; ಮುಷ್ಟಿ: ಮುಚ್ಚಿದ ಅಂಗೈ; ಲುಳಿ: ರಭಸ, ವೇಗ; ಸಾರ: ಶಕ್ತಿಯುತವಾದುದು; ಲಂಬ: ಉದ್ದಳತೆ, ನೇತಾಡುವ; ತಾಗು: ಮುಟ್ಟು; ಕೂರಲಗು: ಹರಿತವಾದ ಬಾಣ; ಗರಿ: ಬಾಣದ ಹಿಂಭಾಗ; ತೋರು: ಕಾಣಿಸು; ನಿಜ: ತನ್ನ; ಹಯ: ಕುದುರೆ; ಮೈ: ತನು; ಹಾರು: ನೋಡು; ಅರಿ: ಚುಚ್ಚು; ದೈತ್ಯಾರಿ: ರಾಕ್ಷಸರ ವೈರಿ (ಕೃಷ್ಣ); ದೇವ: ಭಗವಂತ; ಬಿನ್ನಹ: ಕೋರಿಕೆ; ವಾರುವ: ಕುದುರೆ, ಅಶ್ವ; ವಹಿಲ: ಬೇಗ, ತ್ವರೆ; ಚಿತ್ತೈಸು: ಗಮನವಿಟ್ಟು ಕೇಳು;

ಪದವಿಂಗಡಣೆ:
ಭಾರಿಸಿತು +ಮೈ+ ಮುಷ್ಟಿಯಲಿ +ಲುಳಿ
ಸಾರತರ +ಲಂಬಿಸಿತು +ತಾಗಿದ
ಕೂರಲಗು +ಗರಿ+ತೋರಿದವು +ನಿಜ +ಹಯದ +ಮೈಗಳಲಿ
ಹಾರಿದ್+ಅರ್ಜುನನ್+ಅರಿದನ್+ಆ+ ದೈ
ತ್ಯಾರಿಗೆಂದನು +ದೇವ +ಬಿನ್ನಹ
ವಾರುವಂಗಳ +ವಹಿಲತೆಯ +ಚಿತ್ತೈಸಿದಿರೆ+ಎಂದ

ಅಚ್ಚರಿ:
(೧) ಹಯ, ವಾರುವ – ಸಮಾನಾರ್ಥಕ ಪದ

ಪದ್ಯ ೬೨: ಧರ್ಮಜನು ಯಾವ ರಥದಲ್ಲಿ ತೆರಳಿದನು?

ವೈರಿದೂತನ ಕಳುಹಿದನು ಕೈ
ವಾರಿಗಳು ಜಯಜಯವೆನಲು ಹೊಂ
ದೇರ ತರಸಿದನಬುಜನಾಭನ ಪದಯುಗಕೆ ನಮಿಸಿ
ವಾರುವದ ಖುರನಾಲ್ಕರಲಿ ಮಣಿ
ಚಾರು ಕನಕವ ಸುರಿದು ಧರ್ಮಜ
ತೇರನೇರಿದನೊದರಿದವು ನಿಸ್ಸಾಳ ಕೋಟಿಗಳು (ಭೀಷ್ಮ ಪರ್ವ, ೧ ಸಂಧಿ, ೬೨ ಪದ್ಯ)

ತಾತ್ಪರ್ಯ:
ಧರ್ಮಜನು ಉಳುಕನನ್ನು ಕಳಿಸಿಕೊಟ್ಟನು. ಬಂಗಾರದ ರಥವನ್ನು ತರಿಸಿ, ಕೃಷ್ಣನಿಗೆ ನಮಸ್ಕರಿಸಿ, ರಥಕ್ಕೆ ಕಟ್ಟಿದ ಕುದುರೆಗಳ ಖುರಪುಟಗಳಿಗೆ ರತ್ನಗಳನ್ನೂ, ಚಿನ್ನವನ್ನೂ ಸುರಿದು ರಥವನ್ನೇರಿದನು. ಆಗ ಜಯಕಾರಗಳು ಕೇಳಿದವು, ರಣಭೇರಿಗಳು ಮೊಳಗಿದವು.

ಅರ್ಥ:
ವೈರಿ: ಶತ್ರು; ದೂತ: ಸೇವಕ; ಕಳುಹು: ಬೀಳ್ಕೊಡು; ಕೈವಾರಿ: ಹೊಗಳು ಭಟ್ಟ, ಸ್ತುತಿಪಾಠಕ; ಜಯ: ಉಘೇ; ಹೊಂದೇರು: ಚಿನ್ನದ ತೇರು; ತರಸು: ಬರೆಮಾಡು; ಅಬುಜನಾಭ: ಕೃಷ್ಣ, ವಿಷ್ಣು; ಅಬುಜ: ತಾವರೆ; ಪದಯುಗ: ಎರಡು ಪಾದಗಳು; ನಮಿಸು: ಎರಗು; ವಾರುವ: ಕುದುರೆ; ಖುರ: ಕೊಳಗು; ಮಣಿ: ಬೆಲೆಬಾಳುವ ರತ್ನ; ಚಾರು: ಸುಂದರ; ಕನಕ: ಚಿನ್ನ; ಸುರಿ: ವರ್ಷಿಸು, ಹಾಕು; ಒದರು: ಕರೆ, ಕೂಗು; ನಿಸ್ಸಾಳ: ಚರ್ಮವಾದ್ಯ; ಕೋಟಿ: ಅಸಂಖ್ಯಾತ;

ಪದವಿಂಗಡಣೆ:
ವೈರಿ+ದೂತನ +ಕಳುಹಿದನು+ ಕೈ
ವಾರಿಗಳು +ಜಯಜಯವೆನಲು +ಹೊಂ
ದೇರ +ತರಸಿದನ್+ಅಬುಜನಾಭನ+ ಪದಯುಗಕೆ +ನಮಿಸಿ
ವಾರುವದ+ ಖುರನಾಲ್ಕರಲಿ +ಮಣಿ
ಚಾರು +ಕನಕವ+ ಸುರಿದು +ಧರ್ಮಜ
ತೇರನೇರಿದನ್+ಒದರಿದವು+ ನಿಸ್ಸಾಳ +ಕೋಟಿಗಳು

ಅಚ್ಚರಿ:
(೧) ವೈರಿ, ಕೈವಾರಿ; ವಾರು, ಚಾರು – ಪ್ರಾಸ ಪದಗಳು

ಪದ್ಯ ೫೨: ಅರ್ಜುನನು ಯುದ್ಧಕ್ಕೆ ಹೇಗೆ ಸಿದ್ಧನಾದನು?

ತೇರ ತೆಗೆದನು ತನ್ನ ಮುನ್ನಿನ
ವಾರುವಂಗಳ ಹೂಡಿದನು ಕಪಿ
ವೀರ ನೆನೆಯಲು ಬಂದು ಮಂಡಿಸಿದನು ರಥಾಗ್ರದಲಿ
ಚಾರು ಸೀಸಕ ಜೋಡು ಕುಲಿಶದ
ಸಾರ ಕವಚವ ಬಿಗಿದು ಬೊಬ್ಬೆಯ
ಭಾರವಣೆ ಮಿಗೆ ಧನುವ ಕೊಂಡನು ತಿರುವನೇರಿಸಿದ (ವಿರಾಟ ಪರ್ವ, ೭ ಸಂಧಿ, ೫೨ ಪದ್ಯ)

ತಾತ್ಪರ್ಯ:
ತನ್ನ ದಿವ್ಯ ರಥವನ್ನು ತೆಗೆದು ಅದಕ್ಕೆ ದಿವ್ಯಾಸ್ತ್ರಗಳನ್ನು ಹೂಡಿದನು. ಹನುಮಂತನನ್ನು ಸ್ಮರಿಸಲು ಅವನು ಬಂದು ಧ್ವಜಾಗ್ರದಲ್ಲಿ ನೆಲೆಸಿದನು. ಶಿರಸ್ತ್ರಾಣ, ವಜ್ರಕವಚ, ಪಾದರಕ್ಷೆಗಳನ್ನು ಧರಿಸಿ ಗಾಂಡಿವವನ್ನು ತೆಗೆದು ಅದಕ್ಕೆ ಹೆದೆಯನ್ನು ಕಟ್ಟಿದನು.

ಅರ್ಥ:
ತೇರು: ಬಂಡಿ; ತೆಗೆ: ಹೊರತರು; ಮುನ್ನಿನ: ಮುಂದಿನ; ವಾರುವ: ಕುದುರೆ; ಹೂಡು: ಕಟ್ಟು; ಕಪಿವೀರ: ಆಂಜನೇಯ; ನೆನೆ: ಜ್ಞಾಪಿಸಿಕೋ, ಪ್ರಾರ್ಥಿಸು; ಮಂಡಿಸು: ಕುಳಿತುಕೊಳ್ಳು, ಕೂಡು; ಅಗ್ರ: ತುದಿ; ಚಾರು: ಸುಂದರ; ಸೀಸಕ: ಟೊಪ್ಪಿಗೆ, ಶಿರಸ್ತ್ರಾಣ; ಜೋಡು: ಜೊತೆ; ಕುಲಿಶ: ವಜ್ರಾಯುಧ; ಸಾರ: ಸತ್ವ; ಕವಚ: ಹೊದಿಕೆ; ಬಿಗಿ: ಭದ್ರವಾಗಿ; ಬೊಬ್ಬೆ: ಕಿರುಚು; ಭಾರವಣೆ: ಗೌರವ; ಮಿಗೆ: ಅಧಿಕ; ಧನು: ಚಾಪ, ಬಿಲ್ಲು; ತಿರುವ: ಬಿಲ್ಲಿನ ಹಗ್ಗ, ಹೆದೆ;

ಪದವಿಂಗಡಣೆ:
ತೇರ +ತೆಗೆದನು +ತನ್ನ +ಮುನ್ನಿನ
ವಾರುವಂಗಳ +ಹೂಡಿದನು +ಕಪಿ
ವೀರ +ನೆನೆಯಲು +ಬಂದು +ಮಂಡಿಸಿದನು +ರಥಾಗ್ರದಲಿ
ಚಾರು +ಸೀಸಕ +ಜೋಡು +ಕುಲಿಶದ
ಸಾರ +ಕವಚವ+ ಬಿಗಿದು +ಬೊಬ್ಬೆಯ
ಭಾರವಣೆ +ಮಿಗೆ +ಧನುವ +ಕೊಂಡನು +ತಿರುವನೇರಿಸಿದ

ಅಚ್ಚರಿ:
(೧) ತ ಕಾರದ, ಬ ಕಾರದ ತ್ರಿವಳಿ ಪದ – ತೇರ ತೆಗೆದನು ತನ್ನ; ಬಿಗಿದು ಬೊಬ್ಬೆಯ ಭಾರವಣೆ

ಪದ್ಯ ೨೬: ಅರ್ಜುನನನ್ನು ಕಲ್ಲುಮನಸ್ಸಿನವನೆಂದು ಉತ್ತರನು ಏಕೆ ಹೇಳಿದ?

ವಳಿತವನು ವಾರುವವ ಮುಕ್ತಾ
ವಳಿಯಲಂಕಾರವನು ರಥವನು
ಲಲನೆಯರ ನಾನೀಸಿಕೊಡುವೆನು ರಾಜಭವನದಲಿ
ಎಲೆ ಬೃಹನ್ನಳೆ ನಮ್ಮ ಬೊಪ್ಪನು
ಸಲಹಿದಕೆ ಕೈಯೊಡನೆ ತೋರಿದೆ
ಕಲುಮನವಲಾ ನಿನ್ನದೆಂದಡೆ ಪಾರ್ಥನಿಂತೆಂದ (ವಿರಾಟ ಪರ್ವ, ೭ ಸಂಧಿ, ೨೬ ಪದ್ಯ)

ತಾತ್ಪರ್ಯ:
ನಿನಗೆ ಭೂಮಿ, ಕುದುರೆಗಳು, ಮುತ್ತಿನ ಆಭರಣಗಳು, ತರುಣಿಯರು ಏನು ಬೇಕಾದರೂ ಕೇಳು, ಅರಮನೆಗೆ ಹೋಗಿದ ತಕ್ಷಣ ನಾನು ಕೊಡಿಸುತ್ತೇನೆ, ಎಲೈ ಬೃಹನ್ನಳೆ ನಮ್ಮಪ್ಪನು ನಿನ್ನನ್ನು ಸಾಕಿ ಸಲಹಿದುದಕ್ಕೆ ಪ್ರತಿಯಾಗಿ ಒಂದು ಕೈ ತೋರಿಸಿಬಿಟ್ಟೆ, ನಿನ್ನ ಮನಸ್ಸು ಕಲ್ಲು ಎಂದು ಉತ್ತರನು ಹೇಳಲು, ಅರ್ಜುನನು ಪ್ರತಿಯಾಗಿ ಹೀಗೆ ಹೇಳಿದ.

ಅರ್ಥ:
ವಳಿತ: ಮಂಡಲ ಪ್ರದೇಶ; ವಾರುವ: ಕುದುರೆ; ಮುಕ್ತ: ಮಾಣಿಕ್ಯ, ಮಣಿ; ಆವಳಿ: ಸಾಲು; ಅಲಂಕಾರ: ಒಡವೆ, ಭೂಷಣಪ್ರಾಯ; ರಥ: ಬಂಡಿ; ಲಲನೆ: ಹೆಣ್ಣು; ಈಸು: ಕೊಡಿಸು; ರಾಜಭವನ: ಅರಮನೆ; ಬೊಪ್ಪ: ತಂದೆ; ಸಲಹು: ರಕ್ಷಿಸು; ಕೈ: ಹಸ್ತ; ತೋರು: ಪ್ರದರ್ಶಿಸು; ಕಲು: ಕಲ್ಲು, ಗಟ್ಟಿ; ಮನ: ಮನಸ್ಸು;

ಪದವಿಂಗಡಣೆ:
ವಳಿತವನು +ವಾರುವವ +ಮುಕ್ತಾ
ವಳಿ+ಅಲಂಕಾರವನು +ರಥವನು
ಲಲನೆಯರ+ ನಾನ್+ಈಸಿ+ಕೊಡುವೆನು +ರಾಜಭವನದಲಿ
ಎಲೆ+ ಬೃಹನ್ನಳೆ +ನಮ್ಮ +ಬೊಪ್ಪನು
ಸಲಹಿದಕೆ+ ಕೈಯೊಡನೆ +ತೋರಿದೆ
ಕಲುಮನವಲಾ+ ನಿನ್ನದ್+ಎಂದಡೆ +ಪಾರ್ಥನ್+ಇಂತೆಂದ

ಅಚ್ಚರಿ:
(೧) ಅರ್ಜುನನನ್ನು ಹಂಗಿಸುವ ಪರಿ – ಕೈಯೊಡನೆ ತೋರಿದೆ ಕಲುಮನವಲಾ ನಿನ್ನದೆಂದಡೆ