ಪದ್ಯ ೨೫: ವೀರರು ಯುದ್ಧಕ್ಕೆ ಹೇಗೆ ಮರುಳಿದರು?

ವಾರುವಂಗಳ ಬಿಗುಹನೇರಿಸಿ
ವಾರಣಂಗಳ ಗುಳವ ಜೋಡಿಸಿ
ತೇರುಗಳ ಕೀಲಚ್ಚು ಕೂಬರಯುಗವನಾರೈದು
ವೀರಪಟ್ಟವ ರಚಿಸಿ ಕಂಕಣ
ದಾರವನು ಕಟ್ಟಿದರು ಸಂಗರ
ವೀರಸಿರಿಯ ವಿವಾಹಸಮಯದ ಸೌಮನಸ್ಯದಲಿ (ಗದಾ ಪರ್ವ, ೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕುದುರೆಗಳ ಜೀನನ್ನು ಕಟ್ಟಿ, ಆನೆಗಳ ಗುಳಗಲನ್ನು ಜೋಡಿಸಿ, ರಥಗಳ ಕೀಲುಗಳು, ಅಚ್ಚು, ನೊಗಗಳನ್ನು ಪರೀಕ್ಷಿಸಿ, ವೀರಪಟ್ಟವನ್ನು ಧರಿಸಿ, ಕಂಕಣದಾರಗಳನ್ನು ಕಟ್ಟಿಸಿಕೊಂಡು, ಯುದ್ಧದ ವೀರಲಕ್ಷ್ಮಿಯೊಡನೆ ವಿವಾಹವಾಗುವ ಸಂತೋಷದಿಂದ ಕುರುಸೇನೆಯ ವೀರರು ಯುದ್ಧಕ್ಕೆ ಮರಳಿದರು.

ಅರ್ಥ:
ವಾರುವ: ಕುದುರೆ, ಅಶ್ವ; ಬಿಗುಹ: ಬಿಗಿ, ಗಟ್ಟಿ; ಏರು: ಹೆಚ್ಚಾಗು; ವಾರಣ: ಆನೆ; ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ಜೋಡಿಸು: ಕೂಡಿಸು; ತೇರು: ಬಂಡಿ; ಕೀಲು: ಅಗುಳಿ; ಕೂಬರ: ಬಂಡಿಯ ಈಸು, ಬಾವುಟ; ಪಟ್ಟ: ಬಟ್ಟೆ, ವಸ್ತ್ರ; ರಚಿಸು: ನಿರ್ಮಿಸು; ಕಂಕಣ: ಕಡಗ, ಬಳೆ; ದಾರ: ನೂಲು; ಕಟ್ಟು: ಧರಿಸು; ಸಂಗರ: ಯುದ್ಧ; ವೀರಸಿರಿ: ವಿಜಯಲಕ್ಷ್ಮಿ; ವಿವಾಹ: ಮದುವೆ; ಸಮಯ: ಕಾಲ; ಸೌಮನ: ಸಂತಸ; ಆರೈದು: ಉಪಚರಿಸು;

ಪದವಿಂಗಡಣೆ:
ವಾರುವಂಗಳ +ಬಿಗುಹನೇರಿಸಿ
ವಾರಣಂಗಳ +ಗುಳವ +ಜೋಡಿಸಿ
ತೇರುಗಳ +ಕೀಲಚ್ಚು +ಕೂಬರಯುಗವನ್+ಆರೈದು
ವೀರಪಟ್ಟವ +ರಚಿಸಿ +ಕಂಕಣ
ದಾರವನು +ಕಟ್ಟಿದರು +ಸಂಗರ
ವೀರಸಿರಿಯ +ವಿವಾಹಸಮಯದ +ಸೌಮನಸ್ಯದಲಿ

ಅಚ್ಚರಿ:
(೧) ವಾರುವ, ವಾರಣ – ಪದಗಳ ಬಳಕೆ