ಪದ್ಯ ೨೫: ವೀರರು ಯುದ್ಧಕ್ಕೆ ಹೇಗೆ ಮರುಳಿದರು?

ವಾರುವಂಗಳ ಬಿಗುಹನೇರಿಸಿ
ವಾರಣಂಗಳ ಗುಳವ ಜೋಡಿಸಿ
ತೇರುಗಳ ಕೀಲಚ್ಚು ಕೂಬರಯುಗವನಾರೈದು
ವೀರಪಟ್ಟವ ರಚಿಸಿ ಕಂಕಣ
ದಾರವನು ಕಟ್ಟಿದರು ಸಂಗರ
ವೀರಸಿರಿಯ ವಿವಾಹಸಮಯದ ಸೌಮನಸ್ಯದಲಿ (ಗದಾ ಪರ್ವ, ೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕುದುರೆಗಳ ಜೀನನ್ನು ಕಟ್ಟಿ, ಆನೆಗಳ ಗುಳಗಲನ್ನು ಜೋಡಿಸಿ, ರಥಗಳ ಕೀಲುಗಳು, ಅಚ್ಚು, ನೊಗಗಳನ್ನು ಪರೀಕ್ಷಿಸಿ, ವೀರಪಟ್ಟವನ್ನು ಧರಿಸಿ, ಕಂಕಣದಾರಗಳನ್ನು ಕಟ್ಟಿಸಿಕೊಂಡು, ಯುದ್ಧದ ವೀರಲಕ್ಷ್ಮಿಯೊಡನೆ ವಿವಾಹವಾಗುವ ಸಂತೋಷದಿಂದ ಕುರುಸೇನೆಯ ವೀರರು ಯುದ್ಧಕ್ಕೆ ಮರಳಿದರು.

ಅರ್ಥ:
ವಾರುವ: ಕುದುರೆ, ಅಶ್ವ; ಬಿಗುಹ: ಬಿಗಿ, ಗಟ್ಟಿ; ಏರು: ಹೆಚ್ಚಾಗು; ವಾರಣ: ಆನೆ; ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ಜೋಡಿಸು: ಕೂಡಿಸು; ತೇರು: ಬಂಡಿ; ಕೀಲು: ಅಗುಳಿ; ಕೂಬರ: ಬಂಡಿಯ ಈಸು, ಬಾವುಟ; ಪಟ್ಟ: ಬಟ್ಟೆ, ವಸ್ತ್ರ; ರಚಿಸು: ನಿರ್ಮಿಸು; ಕಂಕಣ: ಕಡಗ, ಬಳೆ; ದಾರ: ನೂಲು; ಕಟ್ಟು: ಧರಿಸು; ಸಂಗರ: ಯುದ್ಧ; ವೀರಸಿರಿ: ವಿಜಯಲಕ್ಷ್ಮಿ; ವಿವಾಹ: ಮದುವೆ; ಸಮಯ: ಕಾಲ; ಸೌಮನ: ಸಂತಸ; ಆರೈದು: ಉಪಚರಿಸು;

ಪದವಿಂಗಡಣೆ:
ವಾರುವಂಗಳ +ಬಿಗುಹನೇರಿಸಿ
ವಾರಣಂಗಳ +ಗುಳವ +ಜೋಡಿಸಿ
ತೇರುಗಳ +ಕೀಲಚ್ಚು +ಕೂಬರಯುಗವನ್+ಆರೈದು
ವೀರಪಟ್ಟವ +ರಚಿಸಿ +ಕಂಕಣ
ದಾರವನು +ಕಟ್ಟಿದರು +ಸಂಗರ
ವೀರಸಿರಿಯ +ವಿವಾಹಸಮಯದ +ಸೌಮನಸ್ಯದಲಿ

ಅಚ್ಚರಿ:
(೧) ವಾರುವ, ವಾರಣ – ಪದಗಳ ಬಳಕೆ

ಪದ್ಯ ೩: ದ್ರೋಣನು ಭೀಮನ ಪರಾಕ್ರಮವನ್ನು ಹೇಗೆ ಕಂಡನು?

ಕಡಿದ ಖಡೆಯದ ಕುಸುರಿಗಳ ಚಿನ
ಕಡಿಯ ಹೀರಾವಳಿಯ ಮುಕುಟದ
ಸಡಿಲದನುಪಮ ರತುನರಾಜಿಯ ಮುರಿದ ಕಂಕಣದ
ಕಡಿಕು ಪಸರಿಸೆ ಕೌರವಾನುಜ
ರಡೆಗೆಡೆದ ರಣ ಕಾಂಚನಾದ್ರಿಯ
ಸಿಡಿಲ ಕಾಳೆಗದಂತೆ ಮೆರೆದಿರೆ ಕಂಡನಾ ದ್ರೋಣ (ದ್ರೋಣ ಪರ್ವ, ೧೩ ಸಂಧಿ, ೩ ಪದ್ಯ)

ತಾತ್ಪರ್ಯ:
ಕಾಲುಗಳಿಗೆ ಹಾಕಿದ ಕಡಗಗಳು ತುಂಡಾಗಿದ್ದವು. ವಜ್ರಕಿರೀಟಗಳು ಬಿಗಿಯಿಲ್ಲದ ನೆಲಕ್ಕುರುಳಿದ್ದವು. ಕಂಕಣಗಳು ಮುರಿದು ಬಿದ್ದಿದ್ದವು. ಇದರ ನಡುವೆ ಕೌರವನ ತಮ್ಮಂದಿರು ಸತ್ತುಬಿದ್ದಿದ್ದರು. ಇದನ್ನು ನೋಡಿದರೆ ವಜ್ರಾಯುಧವು ಕಾಂಚನಗಿರಿಯೊಡನೆ ಇಲ್ಲಿ ಯುದ್ಧಮಾಡಿರಬೇಕೆನ್ನಿಸುತ್ತದೆ ಎಂದು ದ್ರೋಣನು ನೋಡುತ್ತಾ ಮುಂದುವರೆದನು.

ಅರ್ಥ:
ಕಡಿ: ಕತ್ತರಿಸು; ಖಡೆ: ಕಾಲ ಕಡಗ; ಕುಸುರಿ: ಚೂರು; ಕಡಿ: ತುಂಡು; ಹೀರಾವಳಿ: ವಜ್ರದ ಹಾರ; ಮುಕುಟ: ಕಿರೀಟ; ಸಡಿಲು: ಬಿಗಿಯಿಲ್ಲದಿರುವುದು; ಅನುಪಮ: ಉತ್ಕೃಷ್ಟವಾದುದು; ರತುನ: ರತ್ನ; ರಾಜಿ: ಸಮೂಹ; ಮುರಿ: ಸೀಳು; ಕಂಕಣ: ಬಳೆ; ಪಸರಿಸು: ಹರಡು; ಅನುಜ: ತಮ್ಮ; ರಣ: ಯುದ್ಧಭೂಮಿ; ಕಾಂಚನ: ಚಿನ್ನ; ಅದ್ರಿ: ಬೆಟ್ಟ; ಸಿಡಿಲು: ಅಶನಿ; ಕಾಳೆಗ: ಯುದ್ಧ; ಮೆರೆ: ಹೊಳೆ; ಕಂಡು: ನೋಡು;

ಪದವಿಂಗಡಣೆ:
ಕಡಿದ +ಖಡೆಯದ +ಕುಸುರಿಗಳ +ಚಿನ
ಕಡಿಯ +ಹೀರಾವಳಿಯ +ಮುಕುಟದ
ಸಡಿಲದ್+ಅನುಪಮ +ರತುನರಾಜಿಯ +ಮುರಿದ +ಕಂಕಣದ
ಕಡಿಕು +ಪಸರಿಸೆ +ಕೌರವ+ಅನುಜರ್
ಅಡೆಗೆಡೆದ +ರಣ+ ಕಾಂಚನ+ಅದ್ರಿಯ
ಸಿಡಿಲ +ಕಾಳೆಗದಂತೆ +ಮೆರೆದಿರೆ +ಕಂಡನಾ +ದ್ರೋಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೌರವಾನುಜರಡೆಗೆಡೆದ ರಣ ಕಾಂಚನಾದ್ರಿಯ ಸಿಡಿಲ ಕಾಳೆಗದಂತೆ ಮೆರೆದಿರೆ

ಪದ್ಯ ೬೮: ದುಃಖದ ಆಕ್ರಂದನ ಹೇಗಿತ್ತು?

ಮಣಿದ ತನುವಿನ ವೇಗಗತಿಯಲಿ
ಝಣಝಣಿಪ ನೂಪುರದ ರವ ಕಂ
ಕಣದ ದನಿ ಕೇವಣದ ಹೊಂಗಿರುಗೆಜ್ಜೆಗಳ ರಭಸ
ಗಣಿಕೆಯರ ಕೆಳದಿಯರ ಹಾಹಾ
ರಣಿತಕಿವು ನೆರವಾದವಾ ಪ
ಟ್ಟಣವ ತುಂಬಿತು ಶೋಕವದನೇನೆಂಬೆನದ್ಭುತವ (ಸಭಾ ಪರ್ವ, ೧೫ ಸಂಧಿ, ೬೮ ಪದ್ಯ)

ತಾತ್ಪರ್ಯ:
ದ್ರೌಪದಿಯನ್ನು ಕೂದಲಿನಿಂದ ಎಳೆಯುವ ಸಾಹಸ ಮಾಡಿದನು ದುಶ್ಯಾಸನ, ಅವನ ಎಳೆತದ ವೇಗಕ್ಕೆ ದ್ರೌಪದಿಯ ದೇಹವ ಬಾಗಿತು, ನೂಪುರಗಳ ಝಣತ್ಕಾರ, ಬಳೆಗಳ ಸದ್ದು, ಬಂಗಾರದ ಗೆಜ್ಜೆಗಳಿಗೆ ಜೋಡಿಸಿದ ಹರಳಿನ ಕಿರುಗೆಜ್ಜೆಗಳ ಸದ್ದು, ಸಖಿಯರ ಹಾಹಾಕಾರಗಳೊಡನೆ ಸೇರಿ ಹಸ್ತಿನಾಪುರದಲ್ಲಿ ಶೋಕದ ಚೀತ್ಕಾರವು ತುಂಬಿತು.

ಅರ್ಥ:
ಮಣಿ: ಬಾಗು, ಕುಸಿ; ತನು: ದೇಹ; ವೇಗ: ರಭಸ; ಗತಿ: ಗಮನ, ಸಂಚಾರ; ಝಣಝಣ: ಶಬ್ದವನ್ನು ವಿವರಿಸುವ ಪದ; ನೂಪುರ: ಕಾಲಿನ ಗೆಜ್ಜೆ; ರವ: ಶಬ್ದ; ಕಂಕಣ: ಕಡಗ, ಬಳೆ; ದನಿ: ಶಬ್ದ; ಕೇವಣ: ಕೂಡಿಸುವುದು, ಕೆಚ್ಚುವುದು; ಹೊಂಗಿರುಗೆಜ್ಜೆ: ಚಿನ್ನದ ಗೆಜ್ಜೆ; ರಭಸ: ವೇಗ; ಗಣಿಕೆ:ವೇಶ್ಯೆ; ಕೆಳದಿ: ಸ್ನೇಹಿತೆ; ಹಾಹಾ: ಹಾಹಾ ಕಾರದ ಕೂಗು; ನೆರವಾಗು: ಸಹಾಯ; ಪಟ್ಟಣ: ಊರು; ತುಂಬು: ಆವರಿಸು; ಶೋಕ: ದುಃಖ; ಅದ್ಭುತ: ಆಶ್ಚರ್ಯ;

ಪದವಿಂಗಡಣೆ:
ಮಣಿದ +ತನುವಿನ +ವೇಗಗತಿಯಲಿ
ಝಣಝಣಿಪ +ನೂಪುರದ+ ರವ +ಕಂ
ಕಣದ +ದನಿ +ಕೇವಣದ +ಹೊಂಗಿರು+ಗೆಜ್ಜೆಗಳ +ರಭಸ
ಗಣಿಕೆಯರ +ಕೆಳದಿಯರ +ಹಾಹಾ
ರಣಿತಕ್+ಇವು +ನೆರವಾದವ್+ಆ+ ಪ
ಟ್ಟಣವ +ತುಂಬಿತು +ಶೋಕವದನ್+ಏನೆಂಬೆನ್+ಅದ್ಭುತವ

ಅಚ್ಚರಿ:
(೧) ದನಿ, ರವ; ವೇಗ, ರಭಸ – ಸಮನಾರ್ಥಕ ಪದ
(೨) ಝಣಝಣ, ಹಾಹಾಕಾರ – ಶಬ್ದವನ್ನು ವಿವರಿಸುವ ಪದ
(೩) ನೂಪುರ, ಕಂಕಣ, ಗೆಜ್ಜೆ – ಆಭರಣಗಳು

ಪದ್ಯ ೨೩: ಅರ್ಜುನನು ವೈರಿಗಳ ಮೇಳೆ ಹೇಗೆ ಧಾಳಿ ನಡೆಸಿದ?

ಅವರ ಶರಸಂಘಾತವನು ಕಡಿ
ದವರ ಸಾರಥಿಗಳನು ರಥವಾ
ಹವನು ಧನುವನು ಸಿಂಧವನು ಸೀಗುರಿಯ ಝಲ್ಲರಿಯ
ಅವರ ಪದಕ ಕಿರೀಟ ಕಂಕಣ
ವಿವಿಧ ಕರ್ಣಾಭರಣ ಕೇಯೂ
ರವನು ಕಡಿಕಡಿದೊಟ್ಟಿದನು ಕಲಿಪಾರ್ಥ ನಿಮಿಷದಲಿ (ಕರ್ಣ ಪರ್ವ, ೪ ಸಂಧಿ, ೨೩ ಪದ್ಯ)

ತಾತ್ಪರ್ಯ:
ಅರ್ಜುನನು ಒಂದು ನಿಮಿಷದಲ್ಲಿ ಅವರ ಬಾಣಗಳು, ಅವರ ಸಾರಥಿ, ಕುದುರೆಗಳು, ಬಿಲ್ಲುಗಳು, ಧ್ವಜಗಳು, ಚಾಮರ, ಝಲ್ಲರಿ, ಪದಕ, ಕಿರೀಟ, ಕಂಕಣ, ಕರ್ಣಾಭರಣ, ಕೇಯೂರಗಳನ್ನು ಕಡಿದೊಟ್ಟಿಸಿದನು.

ಅರ್ಥ:
ಶರ: ಬಾಣ; ಸಂಘಾತ: ಗುಂಪು, ಸಮೂಹ; ಕಡಿ: ಸೀಳು; ಸಾರಥಿ: ಸೂತ, ರಥವನ್ನು ಓಡಿಸುವವ; ಆಹವ:ಯುದ್ಧ; ಧನು: ಧನುಸ್ಸು; ಸಿಂಧ:ಬಾವುಟ; ಸೀಗುರಿ:ಚಾಮರ; ಝಲ್ಲರಿ: ಕುಚ್ಚು, ಗೊಂಡೆ; ಪದಕ: ಬಹುಮಾನ; ಕಿರೀಟ: ತಲೆಯ ಆಭರಣ;ಕಂಕಣ:ಕಡಗ, ಬಳೆ; ವಿವಿಧ: ಹಲವಾರು; ಕರ್ಣ: ಕಿವಿ; ಆಭರಣ: ಒಡವೆ; ಕೇಯೂರ: ತೋಳುಬಳೆ, ತೋಳುಬಂದಿ; ಒಟ್ಟು: ರಾಶಿಮಾಡು; ಕಲಿ: ಶೂರ; ನಿಮಿಷ: ಸ್ವಲ್ಪ ಸಮಯ;

ಪದವಿಂಗಡಣೆ:
ಅವರ +ಶರ+ಸಂಘಾತವನು +ಕಡಿದ್
ಅವರ +ಸಾರಥಿಗಳನು+ ರಥವ್
ಆಹವನು +ಧನುವನು +ಸಿಂಧವನು +ಸೀಗುರಿಯ+ ಝಲ್ಲರಿಯ
ಅವರ+ ಪದಕ+ ಕಿರೀಟ+ ಕಂಕಣ
ವಿವಿಧ +ಕರ್ಣಾಭರಣ +ಕೇಯೂ
ರವನು +ಕಡಿಕಡಿದ್+ಒಟ್ಟಿದನು +ಕಲಿಪಾರ್ಥ +ನಿಮಿಷದಲಿ

ಅಚ್ಚರಿ:
(೧) ಅವರ – ೩ ಬಾರಿ ಪ್ರಯೋಗ
(೨) ಕಿರೀಟ, ಕರ್ಣಾಭರಣ, ಕಂಕಣ, ಕೇಯೂರ – ಕ ಕಾರದ ಆಭರಣಗಳ ವಿವರ

ಪದ್ಯ ೪೪: ವಿಭೀಷಣನು ಯಾವ ಆಭರಣಗಳನ್ನು ತರಿಸಿದನು?

ತರಿಸಿದನು ಭಂಡಾರದಲಿ ಪರಿ
ಪರಿಯ ಪೆಟ್ಟಿಗೆಗಳನು ಕಂಠಾ
ಭರಣ ಕಂಕಣ ವಜ್ರಮಾಣಿಕ ಮರಕತಾವಳಿಯ
ಚರಣ ನೂಪುರ ಝಳವಟಿಗೆಯುಂ
ಗುರ ಕಿರೀಟಾಂಗದ ಸುಕರ್ಣಾ
ಭರಣವನು ತೆಗೆಸಿದನು ಭೀಮಕುಮಾರ ನೋಡೆನುತ (ಸಭಾ ಪರ್ವ, ೫ ಸಂಧಿ, ೪೪ ಪದ್ಯ)

ತಾತ್ಪರ್ಯ:
ವಿಭೀಷಣನು ಭಂಡಾರದಿಂದ ಅನೇಕ ಪೆಟ್ಟಿಗೆಗಳನ್ನು ತರಿಸಿದನು. ಕಂಠಾಭರಣ, ಕಂಕಣ, ವಜ್ರ, ಮಾಣಿಕ್ಯ, ಪಚ್ಚೆ, ಮೊದಲಾದ ರತ್ನಗಳು, ಕಾಲಿನಲ್ಲಿ ಹೊಳೆಯುವ ಗೆಜ್ಜೆ, ಉಂಗುರ, ಕಿರೀಟ, ತೋಳು ಬಳೆ, ಕಿವಿಯ ಆಭರಣ (ಓಲೆ) ಗಳನ್ನು ಪೆಟ್ಟಿಗೆಗಳಿಂದ ತೆಗೆಸಿ, ಘಟೋತ್ಕಚನೇ ನೋಡೆಂದನು.

ಅರ್ಥ:
ತರಿಸು: ಬರೆಮಾಡು; ಭಂಡಾರ:ಬೊಕ್ಕಸ, ಖಜಾನೆ; ಪರಿಪರಿ: ಬೇರೆಬೇರೆ; ಪೆಟ್ಟಿಗೆ: ಕಪಾಟು; ಆಭರಣ: ಒಡವೆ; ಕಂಠ: ಕೊರಳು; ಕಂಕಣ: ಕಡಗ, ಬಳೆ; ವಜ್ರ: ಹೀರ; ಮಾಣಿಕ: ಮಾಣಿಕ್ಯ; ಮರಕತ:ಪಚ್ಚೆ; ಆವಳಿ: ಸಾಲು; ಚರಣ: ಪಾದ; ನೂಪುರ:ಕಾಲಿನ ಗೆಜ್ಜೆ; ಝಳ:ಹೊಳೆಯುವ; ಉಂಗುರ: ಬೆರಳುಗಳಿಗೆ ತೊಡುವ ಆಭರಣ; ಕಿರೀಟ: ತಲೆಗೆ ತೊಡುವ ಆಭರಣ; ಕರ್ಣ: ಕಿವಿ; ತೆಗೆಸು: ಹೊರ ತೆಗೆ, ತೋರು; ನೋಡು: ವೀಕ್ಷಿಸು;

ಪದವಿಂಗಡಣೆ:
ತರಿಸಿದನು +ಭಂಡಾರದಲಿ +ಪರಿ
ಪರಿಯ +ಪೆಟ್ಟಿಗೆಗಳನು +ಕಂಠಾ
ಭರಣ+ ಕಂಕಣ+ ವಜ್ರ+ಮಾಣಿಕ +ಮರಕತಾವಳಿಯ
ಚರಣ+ ನೂಪುರ +ಝಳವಟಿಗೆ
ಉಂಗುರ +ಕಿರೀಟಾಂಗದ+ ಸುಕರ್ಣಾ
ಭರಣವನು +ತೆಗೆಸಿದನು +ಭೀಮಕುಮಾರ +ನೋಡೆನುತ

ಅಚ್ಚರಿ:
(೧) ಆಭರಣಗಳ ಹೆಸರು: ಕಂಠಾಭರಣ, ಕರ್ಣಾಭರಣ, ನೂಪುರ, ಉಂಗುರ, ಕಿರೀಟ, ಕಂಕಣ,
(೨) ತರಿಸಿದನು, ತೆಗೆಸಿದನು – ಪದಗಳ ಪ್ರಯೋಗ

ಪದ್ಯ ೩೨: ದ್ರೌಪದಿಯ ಸಖಿಯರು ಯಾವ ಆಭರಣಗಳನ್ನು ಧರಿಸಿದ್ದರು?

ಕೀಲ ಕಡಗದ ವಜ್ರ ಲಹರಿಯ
ಜೋಲೆಯದ ಕಂಕಣದ ರವೆಯದ
ತೋಳಬಂದಿಯ ಕೊರಳತ್ರಿಸರದ ಬೆರಳಮುದ್ರಿಕೆಯ
ನೀಲರತುನದ ಪದಕ ಮಾಣಿಕ
ದೋಲೆಗಳ ಮೂಗುತಿಯ ಮುತ್ತಿನ
ಮೇಲು ಶೃಂಗಾರದ ಸಖೀಜನ ಸಂದಣಿಸಿತಲ್ಲಿ (ಆದಿ ಪರ್ವ, ೧೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ವಜ್ರಖಚಿತವಾದ ಕಡಗ, ಸಡಿಲವಾದ ಕಂಕಣದ ಚಿಕ್ಕ ಹರಳು, ತೋಳಬಂದಿ, ಕೊರಳಿನ ಮೂರೆಳೆಯ ಸರ, ಬೆರಳುಗಳಲ್ಲಿನ ಉಂಗುರ, ನೀಲರತ್ನದ ಪದಕ, ಮಾಣಿಕ್ಯದ ಓಲೆ, ಮುತ್ತಿನ ಮೂಗುತಿ ಇಂತಹ ಆಭರಣಗಳಿಂದ ಅಲಂಕೃತರಾದ ದ್ರೌಪದಿಯ ಸಖಿಯರು ದ್ರೌಪದಿಯ ಜೊತೆಯಲ್ಲಿದ್ದರು.

ಅರ್ಥ:
ಕೀಲ: ಹಿಡಿತ; ಕಡಗ: ಕೈಗೆ ಅಥವ ಕಾಲಿಗೆ ಹಾಕಿಕೊಳ್ಳುವ ಬಳೆ; ವಜ್ರ: ಹೀರ, ನವರತ್ನಗಳಲ್ಲಿ ಒಂದು; ಲಹರಿ: ಅಲೆ, ತರಂಗ; ಜೋಲೆ: ಗೊಡವೆ, ಹಟ; ಕಂಕಣ: ಕಡಗ; ರವೆ:ಸಣ್ಣ ಹರಳು;ತೋಳು: ಭುಜ; ಕೊರಳ: ಕತ್ತು; ಸರ: ಹಾರ; ಮುದ್ರಿಕೆ: ಉಂಗುರ; ರತುನ: ಬೆಲೆಬಾಳುವ ಆಭರಣ, ರತ್ನ; ಪದಕ: ಸರದ ನಡುವಿನ ಬಿಲ್ಲೆ; ಮಾಣಿಕ್ಯ: ಕೆಂಪು ಹರಳು; ಓಲೆ: ಕಿವಿಯ ಆಭರಣ; ಮುತ್ತು: ನವರತ್ನಗಳಲ್ಲ ಒಂದು ಆಭರಣ; ಶೃಂಗಾರ: ಅಲಂಕಾರ; ಸಖಿ: ದಾಸಿ; ಸಂದಣಿ: ಗುಂಪು;

ಪದವಿಂಗಡಣೆ:
ಕೀಲ +ಕಡಗದ+ ವಜ್ರ +ಲಹರಿಯ
ಜೋಲೆಯದ+ ಕಂಕಣದ+ ರವೆಯದ
ತೋಳಬಂದಿಯ +ಕೊರಳ+ತ್ರಿಸರದ+ ಬೆರಳ+ಮುದ್ರಿಕೆಯ
ನೀಲ+ರತುನದ+ ಪದಕ+ ಮಾಣಿಕ
ದೋಲೆಗಳ+ ಮೂಗುತಿಯ +ಮುತ್ತಿನ
ಮೇಲು +ಶೃಂಗಾರದ +ಸಖೀಜನ+ ಸಂದಣಿಸಿತಲ್ಲಿ

ಅಚ್ಚರಿ:
(೧) ಕಡಗ, ಕಂಕಣ, ತೋಳಬಂದಿ, ತ್ರಿಸರ, ಮುದ್ರಿಕೆ, ಪದಕ, ಓಲೆ, ಮೂಗುತಿ – ಆಭರಣಗಳ ಹೆಸರು
(೨) ವಜ್ರ ಕಡಗ, ರವೆಯ ಕಂಕಣ, ಬಂಗಾರದ ತೋಳಬಂದಿ, ಸರ, ಮುದ್ರಿಕೆ, ನೀಲಿರತ್ನದ ಪದಕ, ಮಾಣಿಕ್ಯದ ಓಲೆ, ಮುತ್ತಿನ ಮೂಗುತಿ – ಆಭರಣ ಮಾಡಲು ಬಳಸುವ ಪದಾರ್ಥ;
(೩) ಕೀಲ, ನೀಲ; ಜೋಲೆ, ಓಲೆ – ಪ್ರಾಸ ಪದಗಳು