ಪದ್ಯ ೩೦: ಶಕುನಿ ಸಹದೇವರ ಯುದ್ಧ ಹೇಗಿತ್ತು?

ತೇರು ಹುಡಿಹುಡಿಯಾಗೆ ಹೊಯ್ದನು
ವಾರುವನ ಮೇಲುಗಿದಡಾಯುಧ
ದಾರುಭಟೆಯಲಿ ಬಿಟ್ಟನಾ ಸಹದೇವನಭಿಮುಖಕೆ
ವೀರನಹೆಯೋ ಶಕುನಿ ಜೂಜಿನ
ಚೋರವಿದ್ಯೆಯ ಬಿಟ್ಟೆಲಾ ಜ
ಜ್ಝಾರನಹೆ ಮಝ ಪೂತೆನುತ ಖಂಡಿಸಿದನಾ ಹಯವ (ಗದಾ ಪರ್ವ, ೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ಶಕುನಿಯ ರಥವು ಪುಡಿ ಪುಡಿಯಾಗಲು, ಕುದುರೆಯನ್ನೇರಿ ಖಡ್ಗವನ್ನು ಝಳುಪಿಸುತ್ತಾ ಜೋರಿನಿಮ್ದ ಸಹದೇವನ ಇದಿರಿಗೆ ಹೋದನು. ಸಹದೇವನು ಶಕುನಿ ಭಲೇ ಮೋಸದ ಕಳ್ಳ ಜೂಜನ್ನು ಬಿಟ್ಟೆಯಲ್ಲವೇ, ಶೂರನಾಗಿದ್ದೀಯೇ? ಎನ್ನುತ್ತಾ ಕುದುರೆಯನ್ನು ಕಡಿದನು.

ಅರ್ಥ:
ತೇರು: ಬಂಡಿ; ಹುಡಿ: ಪುಡಿ; ಹೊಯ್ದು: ಹೊಡೆ; ವಾರುವ: ಕುದುರೆ; ಉಗಿ: ಹೊರಹಾಕು; ಆಯುಧ: ಶಸ್ತ್ರ; ಆರುಭಟೆ: ಆರ್ಭಟ, ಕೂಗು; ಬಿಡು: ತ್ಯಜಿಸು; ಅಭಿಮುಖ: ಎದುರು; ವೀರ: ಶೂರ; ಜೂಜು: ದ್ಯೂತ; ಚೋರ: ಕಳ್ಳತನ; ವಿದ್ಯೆ: ಜ್ಞಾನ; ಜಜ್ಝಾರ: ಶಕ್ತಿ, ಪರಾಕ್ರಮ; ಮಝ: ಭಲೇ; ಪೂತ: ಪಾವನವಾದುದು; ಖಂಡಿಸು: ತುಂಡು ಮಾಡು; ಹಯ: ಕುದುರೆ;

ಪದವಿಂಗಡಣೆ:
ತೇರು +ಹುಡಿಹುಡಿಯಾಗೆ +ಹೊಯ್ದನು
ವಾರುವನ +ಮೇಲ್+ಉಗಿದಡ್+ಆಯುಧದ್
ಆರುಭಟೆಯಲಿ +ಬಿಟ್ಟನಾ +ಸಹದೇವನ್+ಅಭಿಮುಖಕೆ
ವೀರನಹೆಯೋ +ಶಕುನಿ +ಜೂಜಿನ
ಚೋರವಿದ್ಯೆಯ +ಬಿಟ್ಟೆಲಾ +ಜ
ಜ್ಝಾರನಹೆ +ಮಝ +ಪೂತೆನುತ+ ಖಂಡಿಸಿದನಾ +ಹಯವ

ಅಚ್ಚರಿ:
(೧) ಕುದುರೆಮೇಲೆ ಕೂತನು ಎಂದು ಹೇಳಲು – ವಾರುವನ ಮೇಲುಗಿದಡಾಯುಧದಾರುಭಟೆಯಲಿ ಬಿಟ್ಟನಾ ಸಹದೇವನಭಿಮುಖಕೆ

ಪದ್ಯ ೭: ಅಭಿಮನ್ಯುವಿನ ಯುದ್ಧವು ಹೇಗೆ ನಡೆಯಿತು?

ಎಡದಲೌಕುವ ರಾವುತರ ವಂ
ಗಡವನೆಚ್ಚನು ಸಮ್ಮುಖದೊಳವ
ಗಡಿಸುವಿಭ ಕೋಟಿಗಳ ಕೊಂದನು ಸರಳ ಸಾರದಲಿ
ಕಡುಗಿ ಬಲದಲಿ ಕವಿವ ರಥಿಕರ
ಕೆಡಹಿದನು ಕಾಲಾಳು ತೇರಿನ
ಗಡಣ ಹುಡಿಹುಡಿಯಾಯ್ತೆನಲು ಸವರಿದನು ಪರಬಲವ (ದ್ರೋಣ ಪರ್ವ, ೫ ಸಂಧಿ, ೭ ಪದ್ಯ)

ತಾತ್ಪರ್ಯ:
ಎಡದಲ್ಲಿ ನುಗ್ಗಿದ ರಾವುತರ ಗುಂಪನ್ನು ಹೊಡೆದನು. ಇದಿರಿಗೆ ಬರುವ ಲೆಕ್ಕವಿಲ್ಲದಷ್ಟು ಆನೆಗಳನ್ನು ಬಾಣಗಳಿಂದ ಕೊಂದನು. ರಥಿಕರನ್ನು ಕಾಲಾಳುಗಳನ್ನು ತೇರುಗಳನ್ನು ಪುಡಿಪುಡಿ ಮಾಡಿದನು.

ಅರ್ಥ:
ಎಡ: ವಾಮಭಾಗ; ಔಕು: ನೂಕು, ತಳ್ಳು; ರಾವುತ: ಕುದುರೆ ಸವಾರ, ಅಶ್ವಾರೋಹಿ; ವಂಗಡ: ಗುಂಪು, ಸಮೂಹ; ಎಚ್ಚು: ಬಾಣ ಪ್ರಯೋಗ ಮಾಡು; ಸಮ್ಮುಖ: ಎದುರು; ಅವಗಡಿಸು: ಕಡೆಗಣಿಸು; ಇಭ: ಆನೆ; ಕೋಟಿ: ಅಸಂಖ್ಯವಾದುದು; ಕೊಂದು: ಸಾಯಿಸು; ಸರಳ: ಬಾಣ; ಸಾರ: ರಥವನ್ನು ನಡೆಸುವವನು; ಕಡುಗು: ಶಕ್ತಿಗುಂದು; ಬಲ: ಶಕ್ತಿ; ಕವಿ: ಆವರಿಸು; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ಕೆಡಹು: ನಾಶಮಾಡು; ಕಾಲಾಳು: ಸೈನಿಕರು; ತೇರು: ಬಂಡಿ; ಗಡಣ: ಕೂಡಿಸುವಿಕೆ; ಹುಡಿ: ಪುಡಿ; ಸವರು: ನಾಶಮಾಡು; ಪರಬಲ: ವೈರಿಸೈನ್ಯ;

ಪದವಿಂಗಡಣೆ:
ಎಡದಲ್+ಔಕುವ +ರಾವುತರ +ವಂ
ಗಡವನ್+ಎಚ್ಚನು +ಸಮ್ಮುಖದೊಳ್+ಅವ
ಗಡಿಸುವ್+ಇಭ +ಕೋಟಿಗಳ+ ಕೊಂದನು +ಸರಳ+ ಸಾರದಲಿ
ಕಡುಗಿ +ಬಲದಲಿ+ ಕವಿವ +ರಥಿಕರ
ಕೆಡಹಿದನು +ಕಾಲಾಳು +ತೇರಿನ
ಗಡಣ+ ಹುಡಿಹುಡಿಯಾಯ್ತ್+ಎನಲು +ಸವರಿದನು +ಪರಬಲವ

ಅಚ್ಚರಿ:
(೧) ಕೊಂದನು, ಕೆಡಹು, ಅವಗಡಿಸು, ಹುಡಿ, ಸವರು – ಸಾಮ್ಯಾರ್ಥ ಪದಗಳು
(೨) ಆನೆಯನ್ನು ಕೊಂದ ಪರಿ – ಇಭ ಕೋಟಿಗಳ ಕೊಂದನು ಸರಳ ಸಾರದಲಿ

ಪದ್ಯ ೫: ಕೌರವ ಸೈನ್ಯದ ಪಾಡು ಹೇಗಾಯಿತು?

ಜೋಡೊಡೆದು ಥಟ್ಟುಗಿದು ಬೆನ್ನಲಿ
ಮೂಡಲದಟರ ಸೀಳಿದನು ಖುರ
ಜೋಡು ಹುಡಿಹುಡಿಯಾಗೆ ತೇಜಿಯ ಥಟ್ಟ ಖಂಡಿಸಿದ
ನೋಡಲಮ್ಮುವರಿಲ್ಲ ಮಿಗೆ ಕೈ
ಮಾಡಲಮ್ಮುವರಿಲ್ಲ ಬಲವ
ಲ್ಲಾಡಿತೊಬ್ಬನೆ ಹಸುಳೆ ಹೊಕ್ಕನು ವೈರಿ ಮೋಹರವ (ದ್ರೋಣ ಪರ್ವ, ೫ ಸಂಧಿ, ೫ ಪದ್ಯ)

ತಾತ್ಪರ್ಯ:
ಅವನು ಬಾಣಬಿಡಲು, ಶತ್ರುವೀರರ ಕವಚ ಮುರಿದು ಬಾಣಗಳು ಬೆನ್ನಲ್ಲಿ ಮೂಡಿದವು. ಕುದುರೆಗಳ ರಕ್ಷಾಕವಚಗಲು ಪುಡಿಯಾಗಲು, ಸಾಲು ಸಾಲು ಕುದುರೆಗಳು ಉರುಳಿದವು. ಅವನನ್ನು ತಡೆದು ಮಾತಾಡಿಸುವವರೇ ಇಲ್ಲ. ಅಭಿಮನ್ಯುವು ಶತ್ರು ಸೈನ್ಯದಲ್ಲಿ ನುಗ್ಗಲು ಶತ್ರುಬಲವು ಅಲ್ಲಾಡಿತು.

ಅರ್ಥ:
ಜೋಡು: ಸೇರಿಸು; ಜೋಡೊಡೆ: ಒಗ್ಗಟ್ಟನ್ನು ನಾಶಮಾಡು; ಥಟ್ಟು: ಗುಂಪು; ಬೆನ್ನು: ಹಿಂಭಾಗ; ಮೂಡು: ತೋರು; ಅದಟು: ಪರಾಕ್ರಮ, ಶೌರ್ಯ; ಸೀಳು: ನಾಶಮಾಡು; ಖುರ: ಕುದುರೆ ದನಕರುಗಳ ಕಾಲಿನ ಗೊರಸು, ಕೊಳಗು; ಹುಡಿ: ಪುಡಿ; ತೇಜಿ: ಕುದುರೆ; ಖಂಡಿಸು: ಕಡಿ, ಕತ್ತರಿಸು; ನೋಡು: ತೋರು; ಅಮ್ಮು: ಸಮರ್ಥವಾಗು; ಬಲ: ಶಕ್ತಿ; ಅಲ್ಲಾಡಿಸು: ತೂಗು; ಹಸುಳೆ: ಚಿಕ್ಕಹುಡುಗ; ಹೊಕ್ಕು: ಸೇರು; ವೈರಿ: ಶತ್ರು; ಮೋಹರ: ಯುದ್ಧ;

ಪದವಿಂಗಡಣೆ:
ಜೋಡೊಡೆದು+ ಥಟ್ಟುಗಿದು+ ಬೆನ್ನಲಿ
ಮೂಡಲ್+ಅದಟರ +ಸೀಳಿದನು +ಖುರ
ಜೋಡು +ಹುಡಿಹುಡಿಯಾಗೆ+ ತೇಜಿಯ +ಥಟ್ಟ +ಖಂಡಿಸಿದ
ನೋಡಲ್+ಅಮ್ಮುವರಿಲ್ಲ +ಮಿಗೆ +ಕೈ
ಮಾಡಲ್+ಅಮ್ಮುವರಿಲ್ಲ+ ಬಲವ್
ಅಲ್ಲಾಡಿತ್+ಒಬ್ಬನೆ +ಹಸುಳೆ +ಹೊಕ್ಕನು +ವೈರಿ +ಮೋಹರವ

ಅಚ್ಚರಿ:
(೧) ಅಮ್ಮುವರಿಲ್ಲ ಪದದ ಬಳಕೆ
(೨) ಕೌರವ ಸೈನ್ಯದ ಪಾಡು – ಬಲವಲ್ಲಾಡಿತೊಬ್ಬನೆ ಹಸುಳೆ ಹೊಕ್ಕನು ವೈರಿ ಮೋಹರವ

ಪದ್ಯ ೪೮: ಭೀಮನ ಬಾಣಪಂಜರವನ್ನು ಯಾರು ಮುರಿದರು?

ತೇರು ಹುಡಿಹುಡಿಯಾಗಿ ರಣದಲಿ
ಸಾರಥಿಯ ತಲೆ ಹೋಗಿ ಕಾಲಿನ
ಲಾರುಭಟೆಯಲಿ ನಿನ್ನ ಮಗನೆಸುತಿರ್ದನನಿಲಜನ
ಸಾರು ನೀ ಸಾರೆನುತ ಕರ್ಣಕು
ಮಾರನಡಹಾಯಿದನು ಭೀಮನ
ಭೂರಿ ಬಾಣದ ಪಂಜರವ ಭಂಜಿಸುತ ವಹಿಲದಲಿ (ಕರ್ಣ ಪರ್ವ, ೧೦ ಸಂಧಿ, ೪೮ ಪದ್ಯ)

ತಾತ್ಪರ್ಯ:
ದುಶ್ಯಾಸನ ತೇರು ಪುಡಿಪುಡಿಯಾಯಿತು, ಅವನ ಸಾರಥಿಯ ತಲೆ ಕೆಳಗೆ ಉರುಳಿತು. ಆರ್ಭಟಿಸುತ್ತಾ ನೆಲದ ಮೇಲೆ ನಿಂತೇ ಭೀಮನೊಡನೆ ಯುದ್ಧವನ್ನು ಮಾಡುತ್ತಿರಲು, ಕರ್ಣನ ಪುತ್ರನು ಈ ದೃಶ್ಯವನ್ನು ನೋಡಿ ಅವರಿಬ್ಬರ ನಡುವೆ ಅಡ್ಡಬಂದು ಭೀಮನಿಗೆ ಎದುರಾಗಿ, ದುಶ್ಯಾಸನನ್ನು ಆಚೆಗೆ ಕಳಿಸಿ, ಭೀಮನ ಬಾಣಪಂಜರವನ್ನು ಮುರಿದನು.

ಅರ್ಥ:
ತೇರು: ಬಂಡಿ, ರಥ; ಹುಡಿಹುಡಿ: ಪುಡಿಪುಡಿ; ರಣ: ಯುದ್ಧ; ಸಾರಥಿ: ಸೂತ, ರಥವನ್ನು ಓಡಿಸುವವ; ತಲೆ: ಶಿರ; ಹೋಗು: ನಾಶ, ಅಳಿವು; ಕಾಲು: ಪಾದ; ಆರುಭಟೆ: ಆರ್ಭಟ, ಕಿರುಚು; ಮಗ: ಸುತ; ಎಸು: ಹೊಡೆ; ಅನಿಲಜ: ವಾಯು ಪುತ್ರ (ಭೀಮ); ಸಾರು: ಹರಡು, ಈಚೆ ಬಾ, ದಾರಿ ಬಿಡು; ಕುಮಾರ: ಪುತ್ರ; ಅಡಹಾಯಿ: ಅಡ್ಡ ಬಂದು; ಭೂರಿ: ದೊಡ್ಡ, ಹೆಚ್ಚು, ಅಧಿಕ; ಬಾಣ: ಶರ; ಪಂಜರ: ಗೂಡು; ಭಂಜಿಸು: ಸೀಳು; ವಹಿಲ: ಬೇಗ, ತ್ವರೆ;

ಪದವಿಂಗಡಣೆ:
ತೇರು +ಹುಡಿಹುಡಿಯಾಗಿ +ರಣದಲಿ
ಸಾರಥಿಯ +ತಲೆ +ಹೋಗಿ +ಕಾಲಿನಲ್
ಆರುಭಟೆಯಲಿ +ನಿನ್ನ +ಮಗನ್+ಎಸುತಿರ್ದನ್+ಅನಿಲಜನ
ಸಾರು+ ನೀ +ಸಾರೆನುತ +ಕರ್ಣ+ಕು
ಮಾರನ್+ಅಡಹಾಯಿದನು+ ಭೀಮನ
ಭೂರಿ +ಬಾಣದ +ಪಂಜರವ+ ಭಂಜಿಸುತ +ವಹಿಲದಲಿ

ಅಚ್ಚರಿ:
(೧) ಆಚೆ ಹೋಗು ಎಂದು ಹೇಳಲು – ಸಾರು ನೀ ಸಾರೆನುತ
(೨) ಬ ಕಾರದ ಸಾಲು ಪದ – ಭೀಮನ ಭೂರಿ ಬಾಣದ ಪಂಜರವ ಭಂಜಿಸುತ